ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮ ಮೀರಿ ರಾವಣ್ ಅನ್ನೋ ಹಿಂದಿ ಚಿತ್ರವನ್ನು ಕರ್ನಾಟಕದಾದ್ಯಂತ ಪ್ರದರ್ಶಿಸಲು ಮುಂದಾದ ಬಿಗ್ ಪಿಕ್ಚರ್ಸ್ ಅವರ ಕ್ರಮವನ್ನು ವಾಣಿಜ್ಯ ಮಂಡಳಿ ವಿರೋಧುಸ್ತು. ಮಂಡಳಿ ವಿರುದ್ಧ ಬಿಗ್ ಸಂಸ್ಥೆ ಕೋರ್ಟಿಗ್ ಹೋಯ್ತು. ಕೋರ್ಟು ಈ ಪ್ರಕರಣಾನಾ ಮಾರಕಟ್ಟೆಯಲ್ಲಿ ನ್ಯಾಯಯುತವಾದ ಸ್ಪರ್ಧೆಗೆ ಅನುವು ಮಾಡಿಕೊಡಲು ಇರುವ ಕಾಂಪಿಟೇಶನ್ ಕಮಿಶನ್ ಆಫ್ ಇಂಡಿಯಾ(ಸಿ.ಸಿ.ಐ) ಅನ್ನೋ ಸಂಸ್ಥೆಗೆ ವಹಿಸಿತ್ತು. ಸಿ.ಸಿ.ಐನವರು ಬಿಗ್ ಪಿಕ್ಚರ್ಸ್ ಪರವಾಗಿ ತೀರ್ಪು ಕೊಟ್ಟು, ಅವರು ಕರ್ನಾಟಕದಲ್ಲಿ ಎಷ್ಟು ಪ್ರತಿಗಳನ್ನು ಬೇಕಾದರೂ ಹಾಕಬಹುದು ಎಂಬ ತೀರ್ಪು ಕೊಟ್ಟಿದ್ದಾರೆ ಅನ್ನುತ್ತೆ ಜೂನ್ 22ನೇ ತಾರೀಖಿನ ಡಿ.ಎನ್.ಎ ಪತ್ರಿಕೆಯ ಒಂದು ವರದಿ. ಇದನ್ನು ನೋಡಿದ ಮೇಲೆ ನ್ಯಾಯಯುತವಾದ ಸ್ಪರ್ಧೆ ಅಂದ್ರೆ ಏನು ಅನ್ನೋ ಬಗ್ಗೆನೇ ಪ್ರಶ್ನೆಗಳು ಹುಟ್ತಾ ಇವೆ ಗುರು!
ಇವರು ಹೇಳಿದ್ದೇನು?
ಪತ್ರಿಕೆ ವರದಿ ಹೇಳೊದು ಹೀಗಿದೆ:
According to the CCI's order, the KFCC need not interfere with the screening of the film and it was entirely up to Big Pictures to release it in as many theatres as needed as it is an independent body and therefore has the right to do so.ಏನಿದರ ಅರ್ಥ? ಬಿಗ್ ಸಂಸ್ಥೆಯವರು ಎಷ್ಟು ಚಿತ್ರಮಂದಿರದಲ್ಲಿ ಬೇಕಾದ್ರೂ ರಾವಣ್ ಬಿಡುಗಡೆ ಮಾಡಬಹುದು. ಅದುನ್ನ ಕೆ.ಎಫ್.ಸಿ.ಸಿ ಪ್ರಶ್ನಿಸೋ ಹಾಗಿಲ್ಲ ಅಂತಾ ತಾನೆ?. ಸ್ಪರ್ಧಾ ಆಯೋಗವು ಸಿನಿಮಾ ಅನ್ನೋದನ್ನು ಬರೀ ಒಂದು ಉದ್ದಿಮೆಯಾಗಿ, ಒಂದು ಉತ್ಪನ್ನವಾಗಿ ನೋಡಿ ಈ ರೀತಿಯ ಅನಿಸಿಕೆ ವ್ಯಕ್ತಪಡಿಸಿರಬಹುದು. ಆದರೆ ಮನರಂಜನಾ ಕ್ಷೇತ್ರ ಅನ್ನೋದು ಬರೀ ಮಾರುಕಟ್ಟೆಯ ಲಾಭನಷ್ಟಗಳ ಆಡುಂಬಲ ಮಾತ್ರಾ ಅಲ್ಲಾ. ಒಂದು ನಾಡಿನ ಅನನ್ಯತೆ, ನುಡಿ, ಸಂಸ್ಕೃತಿಗಳ ಮೇಲೆ ಈ ಕ್ಷೇತ್ರ ಬೀರೋ ಪ್ರಭಾವಾ ಮಹತ್ವದ್ದು. ಒಟ್ಟಲ್ಲಿ ಆಯೋಗದ ಈ ತೀರ್ಪು, ನಮ್ಮ ನಾಡಿನ ಸ್ಥಳೀಯವಾದ ಉದ್ದಿಮೆಯೊಂದು ಸಾಯೋಕೇ ಕಾರಣವಾದೀತು ಅನ್ನೋದನ್ನು ಗಮನಕ್ಕೆ ತೊಗೊಂಡು ಕೊಟ್ಟಹಾಗಿಲ್ಲ. ಹಿಂದಿ, ತೆಲುಗು, ತಮಿಳು ಚಿತ್ರಗಳಿಗೆ ಕರ್ನಾಟಕ ಅನ್ನುವುದು ಮೂಲ ಮಾರುಕಟ್ಟೆಯಲ್ಲ, ಆದರೆ ಕನ್ನಡ ಚಿತ್ರಗಳಿಗೆ ಅದೇ ಪ್ರಾಥಮಿಕ ಮತ್ತು ಸದ್ಯದ ಏಕೈಕ ಮಾರುಕಟ್ಟೆ. ಇರೋ 600 ಚಿತ್ರಮಂದಿರಗಳಲ್ಲಿ ಒಂದೊಂದು ಪರಭಾಷಾ ಚಿತ್ರಕ್ಕೇ ನೂರಾರು ಚಿತ್ರಮಂದಿರಗಳನ್ನು ಕೊಟ್ಟರೆ ಕನ್ನಡ ಚಿತ್ರಗಳೇನು ಮಾಡಬೇಕು ಅನ್ನೋದನ್ನೆಲ್ಲಾ ಆಯೋಗ ಗಮನಿಸಿದಂತಿಲ್ಲ.
ಅವರು ಬೆಳೆಯೋದು, ನಾವು ಅಳಿಯೋದೇ ನ್ಯಾಯವಾದ ಸ್ಪರ್ಧೆನಾ?
ಪ್ರತಿಯೊಂದು ದೇಶವೂ, ಪ್ರದೇಶವೂ ತನ್ನ ಮಾರುಕಟ್ಟೆಯನ್ನು ಸ್ಪರ್ಧೆಯಿಂದ ಕಾಪಾಡಿಕೊಳ್ಳುವ ಕ್ರಮವನ್ನು ಸದಾ ಕೈಗೊಂಡಿರುತ್ತೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಮುಕ್ತ ಮಾರುಕಟ್ಟೆಯನ್ನು ಒಪ್ಪಿರುವ ಜಗತ್ತಿನ ಎಲ್ಲ ದೇಶಗಳಲ್ಲೂ ಕೂಡಾ ತಮ್ಮ ಮಾರುಕಟ್ಟೆ, ತಮ್ಮ ಹಿತ ಕಾಯ್ದುಕೊಳ್ಳಲು ತನ್ನದೇ ನೀತಿ ನಿಯಮಗಳು ಇರುತ್ತವೆ. "ಮಾರುಕಟ್ಟೆಯೇ ಎಲ್ಲವನ್ನೂ ನಿರ್ಧರಿಸುತ್ತೆ, ಅಲ್ಲಿ ಯಾವುದೇ ರೀತಿಯ ಅಡೆತಡೆಗಳಿರಬಾರದು" ಅನ್ನೋದೊಂದೇ ದಿಟವಾಗುವುದಾದರೆ ಯಾಕೆ ಭಾರತ ಸರ್ಕಾರ, ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರತಿಯೊಂದು ವಸ್ತುವಿನ ಮೇಲೂ ಆಮದು ಸುಂಕ ಹಾಕುತ್ತೆ? ಅದೂ ಎಲೆಕ್ಟ್ರಾನಿಕ್, ಕಾರು ಮುಂದಾದವುಗಳ ಮೇಲೆ ಯದ್ವಾತದ್ವಾ ಸುಂಕ ಯಾಕೆ ಹಾಕುತ್ತೆ? ಇಲ್ಲಿರುವ ಉದ್ಯಮದ ಹಿತ ಕಾಯುವ ಸಲುವಾಗಿ ತಾನೇ? ಹಾಗೆಯೇ ಕರ್ನಾಟಕದಲ್ಲಿ ಕನ್ನಡ ಚಿತ್ರೋದ್ಯಮದ ರಕ್ಷಣೆಗಾಗಿ ನಾವು ನಿಯಮ ಮಾಡಿಕೊಂಡಿರುವುದರಲ್ಲಿ ತಪ್ಪೇನಿದೆ? ನಮ್ಮ ನಾಡಿನ ಉದ್ಯಮದ ರಕ್ಷಣೆಗೆ ಇರುವ ನಿಯಮಾನ ಮುರಿಯಲು ನಿಂತಿರುವ ಸಂಸ್ಥೆಗೆ "ನ್ಯಾಯವಾದ ಸ್ಪರ್ಧೆ"ಯ ಹೆಸರಿನಲ್ಲಿ ‘ನೀ ಮಾಡಿದ್ದು ಸರಿ’ ಅಂತನ್ನೋದು ಸರಿಯೇ? ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಓಡ್ತಾ ಇರೋ ಚಿತ್ರಮಂದಿರಗಳಿಂದ ಆ ಚಿತ್ರಗಳನ್ನು ಕಿತ್ತೆಸೆದು ಹಿಂದಿ ಚಿತ್ರಗಳಿಗೆ ಕೊಡುವುದು ನ್ಯಾಯವಾದ ಸ್ಪರ್ಧೆನಾ? ಹಾಗೇ ಅವರು ಬೆಳೆದು, ನಾವು ಅಳಿಯೋದೇ ನ್ಯಾಯಯುತವಾದ ಸ್ಪರ್ಧೆನಾ?
ನಮ್ಮ ಉದ್ಯಮ ಉಳಿಸಿಕೊಳ್ಳುವುದು ನಮ್ಮ ಹಕ್ಕು
ಜಗತ್ತಿನಾದ್ಯಂತ ಯಾವುದೇ ಭಾಷಾ ಜನಾಂಗಕ್ಕೆ ತನ್ನ ಮಾರುಕಟ್ಟೆ, ತನ್ನತನವನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕಿದೆ. ಯುನೆಸ್ಕೊ ಪಟ್ಟಿ ಮಾಡಿರುವ ಭಾಷಾ ಹಕ್ಕುಗಳಲ್ಲಿಯೂ ಇದನ್ನು ಎತ್ತಿ ಹಿಡಿಯಲಾಗಿದೆ. ಆರ್ಟಿಕಲ್ 45 ಹೇಳುತ್ತೆ:
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life).
ಇದರಂತೆ ಕರ್ನಾಟಕದ ಜನತೆಗೆ ಕನ್ನಡ ಹಾಗೂ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳುವ ಎಲ್ಲ ಅಧಿಕಾರವನ್ನು ಮಾನ್ಯಮಾಡಬೇಕಲ್ವಾ? ಈ ಹಕ್ಕು ಕನ್ನಡಿಗರಿಗೆ ಇರಬೇಕಲ್ವಾ? ಯಾವುದು ಏನೇ ಹೇಳಲಿ, ನಮ್ಮ ನಾಡಿನ ಜನರು ಈ ಎಲ್ಲಾ ಬೆಳವಣಿಗೆಗಳನ್ನು ಅರ್ಥಮಾಡ್ಕೊಂಡು ಪರಭಾಷಾ ಮನರಂಜನೆಯ ವ್ಯಾಮೋಹದಿಂದ ಹೊರಬರಬೇಕಾಗಿದೆ. ಇಂಥಾ ಜಾಗೃತಿಯನ್ನು ಮೂಡಿಸೋ ಹೊಣೆ ನಮ್ಮ ಕನ್ನಡ ಚಲನಚಿತ್ರರಂಗಕ್ಕಿದೆ ಅಲ್ವಾ ಗುರೂ!