ರಾಜ್ಯದಲ್ಲಿ CBSE ಶಾಲೆಗಳಿಗೆ ಅನುಮತಿ: ಹೇಗೆಂದು ಬಲ್ಲಿರಾ?


ಬೆಂಗಳೂರೂ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ, ಸಿ.ಬಿ.ಎಸ್.ಇ ಪದ್ದತಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಳವಡಿಸಲು ಕರ್ನಾಟಕ ರಾಜ್ಯಸರ್ಕಾರವು ಗಟ್ಟಿ ಮನಸ್ಸು ಮಾಡಿದ ಹಾಗಿದೆ. ಆದರೆ ಹೀಗೆ ಪಾಲಿಕೆಯ ಶಾಲೆಯನ್ನು ಭಾರತೀಯ ವಿದ್ಯಾಭವನಕ್ಕೆ ಕೇಂದ್ರೀಯ ಪಠ್ಯಕ್ರಮದಲ್ಲಿ ಕಲಿಸಲು ಒಪ್ಪಿಸಲು ಸರ್ಕಾರದ ನೀತಿನಿಯಮಗಳ ರೀತ್ಯಾ ಅವಕಾಶ ಇದೆಯೇ? ಅಂತಾ ನೋಡಿದರೆ ಕುತೂಹಲಕಾರಿ ವಿಷಯಗಳು ಕಾಣುತ್ತಿವೆ ಗುರೂ!

ಮಾನ್ಯತೆ ನೀಡಲು ಸಿ.ಬಿ.ಎಸ್.ಇ ಬೋರ್ಡು ವಿಧಿಸಿರೋ ಕರಾರು...

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಇ) ತನ್ನ ಪಠ್ಯಕ್ರಮವನ್ನು ಅನುಸರಿಸಲು ಸಿದ್ಧವಾಗಿರೋ ವಿದ್ಯಾಸಂಸ್ಥೆಗಳಿಗೆ ಆಯಾ ರಾಜ್ಯಸರ್ಕಾರದಿಂದ ನಿರಪೇಕ್ಷಣಾ ಪತ್ರ (N.O.C) ಸಲ್ಲಿಸಬೇಕು ಅನ್ನೋ ನಿಯಮಾನ ಹೊಂದಿದೆ. ಖಾಸಗಿ, ಅನುದಾನಿತ, ಸರ್ಕಾರಿ ಯಾವುದೇ ಶಾಲೆಯಿದ್ದರೂ ಸರ್ಕಾರದ ಅನುಮತಿಯಿಲ್ಲದೆಯೇ ಮಾನ್ಯತೆಯನ್ನು ನೀಡುವಂತೆ ಇಲ್ಲ.

ನಿರಪೇಕ್ಷಣಾ ಪತ್ರ ಕೊಡಲು ಇರೋ ನಿಯಮಾ...

ಕರ್ನಾಟಕ ಸರ್ಕಾರವೂ ಕೂಡಾ ಸಿ.ಬಿ.ಎಸ್.ಇ ಶಾಲೆಗಳಿಗೆ ನಿರಪೇಕ್ಷಣಾ ಪತ್ರ ಕೊಡಕ್ಕೆ ಅಂತಾನೆ ಒಂದು ನಿಯಮಾನಾ 1989ರಲ್ಲೇ ಮಾಡಿದೆ. ಅದುಕ್ಕೆ ಆಗಿಂದಾಗ್ಗೆ ತಿದ್ದುಡಿಗಳನ್ನೂ ಮಾಡಿಕೊಂಡು ಬಂದಿದೆ. ಈ ನಿಯಮದಲ್ಲಿರೋ ಪ್ರಮುಖವಾದ ಅಂಶಗಳು ಹೀಗಿವೆ.

- ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮವನ್ನು ಹೊಂದಿರತಕ್ಕದ್ದು.
- ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ, ಕೇಂದ್ರ ಸರ್ಕಾರದ ಸೇವೆ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾಂಕ್‍ಗಳು, ಸಂಸ್ಥೆಗಳು (ಫರ್ಮುಗಳು) ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಬ್ಯಾಂಕ್/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಸೂಚನೆಗಳನ್ನು ಪಾಲಿಸಿರಬೇಕು/ ಪಾಲಿಸಬೇಕು.

ಇದಕ್ಕೆ 2002ರಲ್ಲಿ ಒಂದು ತಿದ್ದುಪಡಿ ಮಾಡಿ, ‘ಕರ್ನಾಟಕ ರಾಜ್ಯಸರ್ಕಾರದ ಭಾಷಾನೀತಿಯನ್ನು ಕಾಲಕಾಲಕ್ಕೆ ನಿಗದಿಪಡಿಸಿದಂತೆ ಪಾಲಿಸತಕ್ಕದ್ದು’ ಎಂದು ಸೇರಿಸಿದ್ದಾರೆ.

ಸರ್ಕಾರದ ನಿಲುವು ಸರಿಯೇ?

ಮುಂದಿನ ಹೆಜ್ಜೆ ಇಡುವ ಮೊದಲು ಘನ ಕರ್ನಾಟಕ ಸರ್ಕಾರ ಒಂದು ಸಲ ತಾನೇ ವಿಧಿಸಿರೋ ಈ ಎಲ್ಲಾ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ನೋಡಲಿ. ಈಗ ನಗರಪಾಲಿಕೆಯೋರು ಭಾರತೀಯ ವಿದ್ಯಾಭವನಕ್ಕೆ ಒಪ್ಪಿಸಲು ಮುಂದಾಗಿರೋ ಶಾಲೆಯಲ್ಲಿ ಕೇಂದ್ರಸರ್ಕಾರಿ ನೌಕರರ ಮಕ್ಕಳು, ವರ್ಗಾವಣೆಗೆ ಈಡಾಗಬಲ್ಲ ಮಕ್ಕಳು ಇರುವುದರ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆಯೇ? ರಾಜ್ಯ ಸರ್ಕಾರ, ತಾನೇ ವಿಧಿಸಿರುವ ಭಾಷಾನೀತಿ ಬಗೆಗಿನ ನಿಯಮಾನ ಉಲ್ಲಂಘನೆ ಮಾಡ್ತಾ ಇದೆಯೇ? ಅಷ್ಟೇ ಯಾಕೆ? ಇದುವರೆಗೂ ನಮ್ಮ ರಾಜ್ಯದಲ್ಲಿ ಗಲ್ಲಿಗೊಂದರಂತೆ ನಡೀತಾ ಇರೋ ಸಿ.ಬಿ.ಎಸ್.ಇ ಶಾಲೆಗಳಲ್ಲೆಲ್ಲಾ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆಯಲ್ಲಿ/ ಕನ್ನಡದಲ್ಲಿ ಕಲಿಸುತ್ತಾ ಇದ್ದಾರೆಯೇ? ಅನ್ನೋದನ್ನೆಲ್ಲಾ ನೋಡಲಿ. ಇಲ್ಲದಿದ್ದಲ್ಲಿ ಜನರಿಗೆ ಹುಟ್ಟೋ ಅನುಮಾನವೇ ಬೇರೆ. ಸರ್ಕಾರಕ್ಕೇ ತನ್ನ ನೀತಿಗಳ ಬಗ್ಗೆ ಬೆಲೆಯಿಲ್ಲ, ಬರೀ ಕಣ್ಣೊರೆಸೋ ನಾಟಕ ಆಡ್ತಿದೆ ಅಂತಾ ಜನಾ ಅಂದುಕೊಳ್ಳಲ್ವಾ... ಗುರೂ?

1 ಅನಿಸಿಕೆ:

Anonymous ಅಂತಾರೆ...

ಬಳಗ ಅಥವಾ ವೈಯಕ್ತಿಕವಾಗಿ ಮೇಲೆ ಹೇಳಿರುವ ಅಂಶಗಳನ್ನು ಆದರಿಸಿ ಯಾಕೆ ಒಂದು ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ನಮ್ಮ ಕನ್ನಡ ವಿರೋಧಿ ಸರ್ಕಾರದ ವಿರುದ್ಧ ಹೂಡಬಾರದು?

-ಹರಿಹರ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails