
ತಮಿಳುನಾಡು ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಂಡಿರೋದ್ರು ಬಗ್ಗೆ ಘನ ಕರ್ನಾಟಕ ರಾಜ್ಯ ಸರ್ಕಾರದೋರು ಕೇಂದ್ರಸರ್ಕಾರಕ್ಕೆ ದೂರು ಒಯ್ದು, ನ್ಯಾಯ ಕೇಳಿದ್ದಕ್ಕೆ ಕೇಂದ್ರಸರ್ಕಾರದೋರು ಸಕ್ಕತ್ತಾಗಿ ಮಂಗಳಾರತಿ ಎತ್ತಿ ಕಳಿಸಿರೋ ಸುದ್ದಿ ದಿನಾಂಕ 22.06.2010ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ರಾರಾಜುಸ್ತಿದೆ ಗುರೂ! ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕರ್ನಾಟಕ ಎತ್ತಿರೋ ತಕರಾರಿನ ಬಗ್ಗೆ ಅಸಮಾಧಾನ ತೋರಿಸಿದೆ.
ತಕರಾರಿನ ಬಗ್ಗೆ ಕೇಂದ್ರಕ್ಕೆ ಗೊತ್ತಾ?
ಈ ವರದಿ ಓದಿದಾಗ, ಇಡೀ ಹೊಗೇನಕಲ್ ಯೋಜನೇನಾ ಕರ್ನಾಟಕ ಯಾಕೆ ವಿರೋಧುಸ್ತಾಯಿದೆ ಅನ್ನೋದ್ರು ಬಗ್ಗೆಯೇ ಕೇಂದ್ರಕ್ಕೆ ಸ್ಪಷ್ಟತೆ ಇದ್ದಂಗಿಲ್ಲ ಅನ್ಸುತ್ತೆ. ತಮಿಳುನಾಡಿನೋರು ಯೋಜನೆಯ ಆರಂಭದಲ್ಲಿ 1.4 ಟಿ.ಎಂ.ಸಿ ಅಂದು, 2.1 ಟಿ.ಎಂ.ಸಿ ಬಳುಸ್ತಾರೆ ಅನ್ನೋದು ಕರ್ನಾಟಕದ ಪ್ರಮುಖ ಆರೋಪ ಆಗಿತ್ತೇನೋ ಅಂತಾ ವರದಿ ನೋಡಿದಾಗ ಅನ್ನಿಸುತ್ತೆ. ನಮ್ಮ ನೆಲದಲ್ಲಿ ಅಕ್ರಮವಾಗಿ ಯೋಜನೆ ಮಾಡ್ತಾ ಇದಾರೆ ಅನ್ನೋ ಕಾರಣಕ್ಕೆ ಇದುನ್ನ ತಡೀಬೇಕು. ಜಂಟಿ ಸರ್ವೇ ಆದಮೇಲೆ ಮುಂದುವರುಸ್ಲಿ ಅನ್ನೋ ವಿಷಯದ ಮೇಲೆ ಯಾಕೋ ಒತ್ತು ಕೊಟ್ಟಿರೋ ಹಾಗೇ ಕಾಣ್ತಿಲ್ಲ. ಯಾಕಂದ್ರೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ, ನಿಮ್ಮ ತಕರಾರು ಗಡಿ ಬಗ್ಗೆ ಇದ್ದಲ್ಲಿ ಗೃಹ ಖಾತೆ ಹತ್ರ ದೂರು ಒಯ್ಯಿರಿ ಅಂತಾ ಅಂದಿದೆ.
ಗಡಿ ಅತಿಕ್ರಮಣವೇ ಮುಖ್ಯ ವಿಷಯ.
ನಿಜವಾಗಲೂ ಕರ್ನಾಟಕದ ತಕರಾರು ಇರೋದು ಗಡಿ ಅತಿಕ್ರಮಣದ ಬಗ್ಗೆ. ಯಾಕೆ ತಮಿಳುನಾಡು ಹೊಗೇನಕಲ್ ಗಡಿಯ ಜಂಟಿ ಸಮೀಕ್ಷೆಯನ್ನು ಅರ್ಧದಲ್ಲೇ ನಿಲ್ಲಿಸಿ ಮುಂದುವರಿಸಲು ಒಪ್ಪದೆಯೇ ಯೋಜನೆ ಆರಂಭಿಸುತ್ತಿದೆ ಅನ್ನೋದರ ಬಗ್ಗೆ. ಕೇಂದ್ರಸರ್ಕಾರ ಮಧ್ಯಸ್ಥಿಕೆ ವಹಿಸಿ ಗಡಿ ಸಮೀಕ್ಷೆ ಮಾಡಿಸಿ, ಅವರ ನೆಲದಲ್ಲಿ ಅವರು ಕುಡಿಯುವ ನೀರಿನ ಯೋಜನೆಯನ್ನು ಒಪ್ಪಂದದಂತೆ ಮಾಡಲು ನಮ್ಮ ಅಭ್ಯಂತರವೇನಿಲ್ಲಾ. ಈ ನಮ್ಮ ನಿಲುವಿನ ಬಗ್ಗೆ ಚಕಾರವನ್ನೇ ಎತ್ತದೆ ಕೇಂದ್ರ ಸಚಿವಾಲಯ ಕಳಸಾ ಭಂಡೂರಾ ತಕರಾರನ್ನು ಇದರೊಟ್ಟಿಗೆ ತಳುಕು ಹಾಕಿದ ಹಾಗಿದೆ. ಇಷ್ಟಕ್ಕೂ ಕರ್ನಾಟಕ ಈ ಹಿಂದೆ ಚೆನ್ನೈನ ಕುಡಿಯುವ ನೀರಿನ ಯೋಜನೆಗಾಗಿ ಕೃಷ್ಣಾ ನದಿಯ ನಮ್ಮ ಪಾಲಿನ ಐದು ಟಿ.ಎಂ.ಸಿಯಷ್ಟು ನೀರನ್ನು ಬಿಟ್ಟು ಕೊಟ್ಟಿರೋದನ್ನು ನಾವಾದ್ರೂ ನೆನಪು ಮಾಡಬೇಕಿತ್ತು. ಇಲ್ಲಾಂದ್ರೆ ಹೀಗೆ ‘ಕರ್ನಾಟಕ ಕುಡಿಯೋ ನೀರಿನ ಯೋಜನೆಗೆ ತೊಡರುಗಾಲಿಕ್ಕುವ ಅಮಾನವೀಯ ರಾಜಕೀಯ ಮಾಡ್ತಾಯಿದೆ’ ಅನ್ನೋ ಥರದಾ ಆರೋಪಕ್ಕೆ ಗುರಿಯಾಗಬೇಕಿತ್ತಾ? ಇದುಕ್ಕೆಲ್ಲಾ ನಮ್ಮ ರಾಜ್ಯ ಸರಿಯಾದ ಉತ್ತರ ಕೊಡಬೇಕಿದೆ. ನಿಜಕ್ಕೂ ರಾಜ್ಯದ ಹಕ್ಕುಗಳಿಗಾಗಿ ಬಡಿದಾಡಬೇಕು ಅನ್ನೋ ರಾಜಕೀಯ ಇಚ್ಛಾಶಕ್ತಿ ತನಗಿದೆ ಅನ್ನೋದನ್ನು ನಮ್ಮ ರಾಜ್ಯಸರ್ಕಾರ ತೋರಿಸಿಕೊಡಬೇಕಾಗಿದೆ. ಅಲ್ವಾ ಗುರೂ!
4 ಅನಿಸಿಕೆಗಳು:
ನಿಜಕ್ಕೂ ನಮ್ಮ ಸರ್ಕಾರಕ್ಕೆ ಹೊಗೇನಕಲ್ ವಿಚಾರದ ಬಗ್ಗೆ ಕಾಳಜಿ ಯಾಗಲಿ ಕಳ ಕಳಿ ಯಾಗಲಿ ಇಲ್ಲ. ಸರ್ಕಾರ ಮುಖ್ಯವಾಗಿ ನಮ್ಮ ವಿರೋಧ ಕುಡಿಯುವ ನೀರಿಗಾಗಿ ಅಲ್ಲ, ಗಡಿ ವಿಷಯವಾಗಿ ಅಂತ ಗಟ್ಟಿಯಾಗಿ ಒಂದು ಸಾರಿಯೂ ಬಾಯಿ ಬಿಟ್ಟು ಹೇಳಿಲ್ಲ. ಹೋರಾಟಗಾರರ, ನಾಡಿನ ಚಿಂತಕರ ಜೊತೆ ಮಾತುಕತೆ ನಡೆಸಿಲ್ಲ. ಏತಕ್ಕಾಗಿ ಹೋರಾಡಬೇಕು ಅಂತಾನೆ ತಿಳಿದಿಲ್ಲ. ಈ ವಿಷಯವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿಭಟನೆ, ಬಂದ್ ಗಳೂ ನಡೆದಿವೆ, ನಡೀತಾ ಇದೆ. ಈಗಲೇ ಹೋರಾಟ ನಡೆಸದೆ ಇದ್ದರೆ ಇದಕ್ಕೆ ಪಶ್ಚಾತ್ತಾಪ ಪಡೋದು ಖಂಡಿತ. ಅಭಿಜಾತ ಭಾಷೆ ಸ್ಥಾನಮಾನ ಇನ್ನೂ ಗಗನ ಕುಸುಮವಾಗಿ ಉಳಿದಿದೆ. ಈ ಸರಕಾರ ಖಂಡಿತ ಕನ್ನಡ ಪರ ಸರ್ಕಾರ ಅಲ್ಲ ಅಂತ ಚೆನ್ನಾಗಿ ಗೊತಾಗ್ತಾ ಇದೆ.
ಸಂತೋಷ್ ರವರೆ, ನಮ್ಮನ್ನು ಈಗ ಆಳ್ತಾ ಇರೋದು ಕನ್ನಡಿಗರೇ ಅಲ್ಲ. ತೆಲುಗರು ನಮ್ಮನ್ನು ಆಳುತ್ತಿರುವುದು ಜಗಜ್ಜಹಿರಾದ ವಿಷ್ಯ. ೫ ಪ್ರಭಾವಿ ಖಾತೆಗಳು ತೆಲುಗರ ಕೈಲಿದ್ದಾಗ ಕನ್ನಡ ಪರ ಕಾಳಜಿ ಸರ್ಕಾರಕ್ಕೆ ಬರುವುದಾದರೂ ಹೇಗೆ? ಅವರು ಮನ ಬಂದಂತೆ ಅಧಿಕಾರ ದುರ್ಬಳಕೆ ಮಾಡಿ ಕೊಳ್ಳುತಿದ್ದಾರೆ ಶೋಭಾ, ಮನು ಬಳಿಗಾರ್, ಲೋಕಾಯುಕ್ತರ ರಾಜೀನಾಮೆ ಇದಕ್ಕೆ ಸ್ಪಷ್ಟ ಉದಾಹರಣೆ. ಕರ್ನಾಟಕವನ್ನು ಒಂದು ಕಡೆಯಿಂದ ಆಂಧ್ರದ fraud ಗಳು, ಮತ್ತೊಂದೆಡೆಯಿಂದ ತಮಿಳರು ಕಿತ್ತು ತಿನ್ನುತ್ತಿದ್ದಾರೆ. ಇದೆಲ್ಲವನ್ನು ನೋಡಿಕೊಂಡು ಕನ್ನಡಿಗ ಮೈ ಪರಚಿ ಕೊಳ್ಳುವಂತಾಗಿದೆ.
'ಏನ್ಗುರು' ಯಾವಾಗಲೂ ಕನ್ನಡ ಭಾಷೆ ಉಳಿಸುವ ಬಗ್ಗೆ ಬರೆಯುತ್ತಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗ ಉಳಿದರೆ ತಾನೇ ಕನ್ನಡ ಭಾಷೆ ಉಳಿಯೋದು? ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಮೊದಲು ಕರ್ನಾಟಕದ ಮೂಲೆ ಮೂಲೆಗಳಲ್ಲಿ ತಿನ್ನಲನ್ನವಿಲ್ಲದೆ ಬಿದ್ದಿರೋ ಕನ್ನಡಿಗರನ್ನು ಬಡಿದೆಬ್ಬಿಸಿ ಬೆಂಗಳೂರಲ್ಲಿ ಬಂದು ನೆಲೆಸುವಂತೆ ಮಾಡಲು ಪ್ರೇರೇಪಿಸುವ ಲೇಖನಗಳು ಬರಲಿ. ಆಗ ನಮ್ಮ ಭಾಷೆ ತಾನೇ ತಾನಾಗಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ. Let them beg borrow or steal to make a living.
ಅಮೇರಿಕಾದಲ್ಲಿ ನಾವಿಕ ಮತ್ತು ಅಕ್ಕ ಸಮ್ಮೇಳನಗಳು ಸದ್ಯದಲ್ಲಿ ನಡೆಯಲಿವೆ. ಆ ಸಮ್ಮೇಳನಗಳಲ್ಲಿ ಸಾಹಿತಿಗಳು, ಸಿನಿಮಾ ತಾರೆಯರು, ಮಂತ್ರಿಗಳನ್ನು ಕರ್ನಾಟಕದಿಂದ ಕರೆಸಿ ಸಂತೋಷಪಟ್ಟರಷ್ಟೇ ಸಾಲದು. ಇಂತಹ ವಿಷಯಗಳು ಚರ್ಚೆಯಾಗಲು ಕನ್ನಡ ಸಮ್ಮೇಳನಗಳು ವೇದಿಕೆಯಾಗಬೇಕು. ಇತ್ತೀಚೆಗೆ ಚೆನ್ನೈ ನಲ್ಲಿ ನಡೆದ ತಮಿಳು ಸಮ್ಮೇಳನದಲ್ಲಿ ಸಿಂಗಪುರದಿಂದ ಜನರನ್ನು ಕರೆಸಿ ಅಲ್ಲಿ ವಾಸಿಸುವ ತಮಿಳರಿಗೆ ಅನುಕೂಲವಾಗುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತಂತೆ. ಕನ್ನಡಿಗನೂ ಈ ರೀತಿ ಜಾಣತನವನ್ನು ತೋರುವುದು ಯಾವಾಗ? ಏನ್ ಗುರು. ನಿಮ್ಮ ಲೇಖನಗಳು ಹೀಗೇ ಬರುತ್ತಿರಲಿ. ಒಂದಲ್ಲಾ ಒಂದು ದಿನ ಕನ್ನಡಿಗ ಎಚ್ಚೆತ್ತುಕೊಳ್ಳಲಿ.
-ಗೌತಮ್ ವೆಂಕಟೇಶನ್
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!