ಇವು ಇಂದಿನ ದುಸ್ಥಿತಿಗೆ ಕಾರಣಗಳಂತೆ!
ಆಡಿದಂತೆ, ಬಳಸಿದಂತೆ ಭಾಷೆ ಸವೆಯುತ್ತದೆ ಎನ್ನುವುದಾದರೆ, ಬಳಸಿದರೆ ಸವೆಯುತ್ತದೆಯೆಂದು ಭಾಷೆಯ ಬಳಕೆ ಹೆಚ್ಚಬಾರದು ಎಂಬುದು ಲೇಖಕರ ನಿಲುವೇನು? ಭಾಷೆಯನ್ನು ಬಳಸಲು ವಿದ್ಯಾವಂತರೂ ಸುಶಿಕ್ಷಿತರೂ ಆಗಿರಬೇಕೇನು? ಉಳಿದವರು ಬಳಸುವುದು ಭಾಷೆಯಲ್ಲವೇನು? ಸಂಸ್ಕೃತದ ಅಧ್ಯಯನವು ಐದೂವರೆ ಕೋಟಿ ಕನ್ನಡಿಗರಿಗೆಲ್ಲಾ ಆಗಬೇಕು ಎಂಬುದು ಇವರ ನಿಲುವೇನು? ಸಂಸ್ಕೃತದ ಅಧ್ಯಯನವಾಗದೆ ಕನ್ನಡವನ್ನು ಬಳಸುವುದು ಸರಿಯಲ್ಲವೇನು? ಒಟ್ಟಾರೆ ಕನ್ನಡದ ನಾಲಗೆಯನ್ನು ಸಂಸ್ಕೃತವೆಂಬ ಬೆಣಚುಕಲ್ಲಿಂದ ಗಸಗಸ ತಿಕ್ಕಿ ಶುದ್ಧ ಶಿಷ್ಟ ಕನ್ನಡವೆಂಬ - ಎಂದಿಗೂ ಜನಬಳಕೆಯಲ್ಲಿಲ್ಲದ, ಇದ್ದರೂ ಬೆರಳೆಣಿಕೆಯ ಸಂಸ್ಕೃತ-ಕನ್ನಡ ಪಂಡಿತರ ಬರಹದಲ್ಲಿರುವ - ಭಾಷೆಯನ್ನು ಉಳಿಸಿ ಬಳಸಿ ಬೆಳೆಸಬೇಕೆಂಬ ನಿಲುವು ಕಾಣುತ್ತಿದೆ.ಬಳಕೆ ಹೆಚ್ಚಿದ ಹಾಗೇ ಭಾಷೆ ಸವೆಯುತ್ತದೆ. ಅಂದಗೆಡುತ್ತದೆ, ಶಕ್ತಿಗುಂದುತ್ತದೆ. ಏಕೆಂದರೆ ಬಳಕೆದಾರರೆಲ್ಲಾ ಒಂದೇಮಟ್ಟದಲ್ಲಿ ವಿದ್ಯಾವಂತರೂ ಸುಶಿಕ್ಷಿತರೂ ಆಗಿ ಇರುವುದಿಲ್ಲ. ಅವರು ತಮ್ಮ ಕೈಬಾಯಿಗಳಿಗೆ ಸಿಕ್ಕ ಈ ಭಾಷೆಯೆಂಬ ವಸ್ತುವನ್ನು ತೋರಿದಂತೆ ಎಳೆದಾಡುತ್ತಾರೆ, ಎಸೆದಾಡುತ್ತಾರೆ....ಇಂದು ಬಳಕೆಯಲ್ಲಿರುವ ಕನ್ನಡದ ಶಿಷ್ಟಭಾಷೆಯನ್ನು ಲಕ್ಷಿಸಿದರೆ, ಆ ಎಳೆದಾಟ, ಆ ಎಸೆದಾಟ ಯಾವ ರೀತಿಯದು ಎಂಬುದು ತಿಳಿಯುತ್ತದೆ.
ಈ ಸ್ಥಿತಿಗೆ ಕಾರಣವೇನು?
೧. ಕನ್ನಡ ಭಾಷೆಯ ಇಂದಿನ ಶಿಕ್ಷಣದಲ್ಲಿ ಕ್ರಮಬದ್ಧವಾದ ವ್ಯಾಕರಣ ಪಾಠ ಅಲಕ್ಷಿತವಾಗಿದೆ. ೨. ಸಂಸ್ಕೃತ ಭಾಷೆ ಸಾಹಿತ್ಯಗಳ ಅಧ್ಯಯನ ಅವಗಣನೆಗೆ ಗುರಿಯಾಗಿದೆ. ೩. ಭಾಷೆ ಸಾಹಿತ್ಯಗಳ ಶಿಕ್ಷಕರ ಭಾಷಾಜ್ಞಾನ ತೀರಾ ಕೆಳಮಟ್ಟದಲ್ಲಿದೆ. ೪. ಅಭ್ಯಾಸಿಗಳಿಗೂ ವಿದ್ಯಾರ್ಥಿಗಳಿಗೂ ಅನುಸರಣಯೋಗ್ಯವಾದ ಒಳ್ಳೆಯ ಮಾದರಿಗಳು ದೊರೆಯುತ್ತಿಲ್ಲ. ೫. ಕಲಿಯುವವರೂ ಕಲಿಸುವವರೂ ಸಮಾನವಾಗಿ ಶಿಷ್ಟ ಭಾಷೆಯ ಬಳಕೆಯಲ್ಲಿ ಅಸಡ್ಡೆ ತಿರಸ್ಕಾರಗಳನ್ನು ತೋರಿಸುತ್ತಿದ್ದಾರೆ. ೬. ತಾಂತ್ರಿಕ, ವೈದ್ಯಕೀಯ ಮತ್ತು ವೈಜ್ಞಾನಿಕ ಶಿಕ್ಷಣಕ್ಕೆ ಬಹುವಾಗಿ ಪ್ರಾಶಸ್ತ್ಯ ದೊರೆಯುತ್ತಿದ್ದು, ಭಾಷೆ ಸಾಹಿತ್ಯಗಳ ಅಧ್ಯಯನದಲ್ಲಿ ಉತ್ಸಾಹವೂ ಶ್ರದ್ಧೆಯೂ ಸಾಧನೆ ಪರಿಶ್ರಮಗಳೂ ಉದಾಸೀನಕ್ಕೆ ಗುರಿಯಾಗಿವೆ. ೭. ಸೃಜನಾತ್ಮಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರಾದೇಶಿಕವೂ ಸಾಮಾಜಿಕವೂ ಆದ ಉಪಭಾಷೆಗಳನ್ನೂ ಗ್ರಾಮ್ಯವನ್ನೂ ಹೆಚ್ಚುಹೆಚ್ಚಾಗಿ ಬಳಸುವ ರೂಢಿ ಬೆಳೆಯುತ್ತಿರುವುದರಿಂದ ಶಿಷ್ಟಭಾಷೆಯ ತಿಳಿವಳಿಕೆಗೆ ಬೇಕಾದ ಶಿಕ್ಷಣವೂ ಸಂಸ್ಕಾರವೂ ಈಗ ಅನಾವಶ್ಯಕವೆಂದೂ ತೋರುತ್ತಿದೆ. ೮. ತಪ್ಪುಗಳನ್ನು ತಪ್ಪೆಂದು ತಿಳಿಯದಿರುವುದೂ, ತಿಳಿದರೂ ತಿದ್ದಿಕೊಳ್ಳದಿರುವುದು ಪ್ರವೃತ್ತಿಯಾಗಿದೆ. ೯. ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ಭಾಷಾ ಶುದ್ಧತೆಯ ಬಗ್ಗೆ ನಿರ್ಲಕ್ಷ್ಯದಿಂದಿವೆ. (ಪುಟ ೭: ಕ.ಬ:ದೋ.ದೌ)
ಈ ಹಿಂದೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಮಹಾಪ್ರಾಣಘಟಿತ ಪದಗಳು ತದ್ಭವಗಳಾಗಿ ಬಂದಿರುವುದು ಸರಿಯಷ್ಟೇ. ಇವನ್ನು ಬಳಸುವುದಕ್ಕೆ ಆಕ್ಷೇಪವಿಲ್ಲ. ಆದರೆ ಹೊಸದಾಗಿ ಪದಗಳನ್ನು ಸ್ವೀಕರಿಸುವುದಾದರೆ ಹಾಗೆ ತದ್ಭವ ರೂಪಕ್ಕೆ ತರಬಾರದು. ಆಗ ಸಂಸ್ಕೃತಶಬ್ದಗಳು ಅಂದಗೆಟ್ಟು ಅಪಪ್ರಯೋಗಗಳಾಗುತ್ತವೆ. ಹೀಗೆ ಅಂದಗೆಟ್ಟ ಕೆಲವು ಪದಗಳೆಂದರೆ ಧೃಢ, ಉಚ್ಛ, ಭೀಭತ್ಸ, ಪುತ್ಥಳಿ, ಸ್ವಚ್ಚ ಇತ್ಯಾದಿಗಳು. (ಪುಟ ೯: ಕ.ಬ:ದೋ.ದೌ)
ಯಾವುದೇ ಭಾಷೆಯ ಪದಗಳನ್ನು ಕನ್ನಡಿಗರು ಬಳಸುವಾಗ ಕನ್ನಡದ ಶೈಲಿಯ ಉಚ್ಚರಣೆ ಸಹಜ. ಹಾಗಾಗಿಯೇ ಅಂದು ತತ್ಭವಗಳು ಉಂಟಾಗಿದ್ದು. ಅಂದಿಗೆ ಅದು ಸರಿ, ಇಂದಿಗೆ ಸರಿಯಿಲ್ಲ ಎಂದರೆ ಹೇಗೆ? ಬಸ್, ಕಾರ್ ಎಂಬುವು ಕನ್ನಡದಲ್ಲಿ ಬಸ್ಸು, ಕಾರು ಎಂದು ಬದಲಾಗುವುದೂ ಸಹಜವಾದ ಬದಲಾವಣೆ ತಾನೆ? ಅದು ಅಂದಗೆಡಿಸುವುದೋ? ಎಲ್ಲ ಕನ್ನಡಿಗರೂ ಕನ್ನಡ ನುಡಿಯಲ್ಲಿ ಇರುವ ಸಂಸ್ಕೃತ ಪದಗಳನ್ನು ಸಂಸ್ಕೃತದಲ್ಲಿರುವಂತೆಯೇ ಉಚ್ಚರಿಸಬೇಕೆಂಬ ನಿಲುವು/ ಬಯಕೆಯು ಎಷ್ಟರ ಮಟ್ಟಿಗೆ ಸರಿ? ಎಷ್ಟರ ಮಟ್ಟಿಗೆ ವೈಜ್ಞಾನಿಕ? ಇದು ಎಂದಿಗೂ ಆಗಲಾರದ್ದಲ್ಲವೇನು?
ಸಂಸ್ಕೃತ ವ್ಯಾಕರಣದ ಪರಿಚಯವಿಲ್ಲದೇ ಇರುವ ತಪ್ಪಿನಿಂದಾಗಿಯೂ. ಬಲ್ಲವರ ಒಡನಾಟವಿರದ ತಪ್ಪಿನಿಂದಾಗಿಯೂ ಅನೇಕ ಸಂಸ್ಕೃತ ಪದಗಳು / ಪದಕಟ್ಟುಗಳು ತಪ್ಪಾಗಿವೆ. ಕೋಟ್ಯಾಧೀಶ, ಜಾತ್ಯಾತೀತ, ತಿಂಗಳಾಂತ್ಯ, ಹಿಂದಿಯೇತರ, ಜೈ ರಾಮ, ಅರ್ಧಂಬರ್ಧ, ಕೆಂಪಾಂಬುಧಿ ಇವೆಲ್ಲಾ ತಪ್ಪು. ಕೋಟ್ಯಧೀಶ, ಜಾತ್ಯತೀತ, ತಿಂಗಳಂತ್ಯ, ಹಿಂದೀತರ, ಜಯರಾಮ, ಅರ್ಧಾರ್ಧ, ಕೆಂಪಂಬುಧಿ ಅನ್ನುವುದು ಸರಿ. ಅಂಗಾಂಗ ತಪ್ಪು, ಅಂಗೋಪಾಂಗ ಅನ್ನಬೇಕು, ನಾಯಕಿ ಅಲ್ಲ ನಾಯಿಕೆ, ಸಮಾಜಸೇವಕಿ ಅಲ್ಲಾ ಸಮಾಜಸೇವಿಕೆ, ಪಾಶ್ಚಿಮಾತ್ಯ ಅಲ್ಲ ಪಾಶ್ಚ್ಯಾತ್ಯ, ದಾಯಾದಿ, ಶೋಭಾಯಮಾನ, ಮಹದೇಷ್ವರ, ಯೌವ್ವನ, ಉಪದ್ರ, ಚಾತುರ್ಯ, ಧೂಮ್ರಪಾನ, ಐಕ್ಯತೆ, ದೈನ್ಯತೆ, ಗಾಂಭೀರ್ಯತೆ, ವೈವಿಧ್ಯತೆ, ಔದಾರ್ಯತೆ, ಮಾಲಿನ್ಯತೆ, ದೇವಾನುದೇವತೆ, ಪ್ರಸ್ತಾಪ, ಜಿಗುಪ್ಸೆ, ಮಹತ್ಕಾರ್ಯ, ಲೇಖಕಿ, ಪೌರ್ಣಿಮೆ... ಎಲ್ಲಾ ತಪ್ಪು. ಮಹತ್ವ ಅಂದರೆ ತಪ್ಪು, ಮಹತ್ತ್ವ ಅನ್ನಬೇಕು, ಬಹುತ್ತ್ವ ತಪ್ಪು ಬಹುತ್ವ ಸರಿ... (ಪುಟ ೧೪~೨೩ರ ಸಾರ: ಕ.ಬ:ದೋ.ದೌ)ಉಲಿದಂತೆ ಬರೆಯಬೇಕು ಅನ್ನುವ ವಾದಕ್ಕೆ ಮೇಲಿನ ಉದಾಹರಣೆಗಳು ಸಮರ್ಥನೆ ಕೊಡುತ್ತವೆ. ಆಡುಭಾಷೆಯಲ್ಲಿ ಇವುಗಳ ಉಚ್ಚರಣೆಯನ್ನು ತಿದ್ದಿಕೊಳ್ಳಬೇಕು ಎಂದರೆ ಎಲ್ಲ ಜನರ ನಾಲಗೆ ಬದಲಿಸಬೇಕು. ‘ಹಾಗೇನೂ ಈ ಪುಸ್ತಕ ಹೇಳುತ್ತಿಲ್ಲ. ಬರಹದಲ್ಲಿ ಹೀಗಿರಬೇಕ’ ಅನ್ನುವುದಾದರೆ ಬರಹಕ್ಕೂ ಆಡುವುದಕ್ಕೂ ನಡುವಿನ ವ್ಯತ್ಯಾಸ ಹೀಗೇ ಉಳಿಸಿಕೊಳ್ಳಬೇಕಾಗುತ್ತದೆ. ಆಗ ಬರಹಕ್ಕೆ ಅರ್ಥವೇ ಇರುವುದಿಲ್ಲ. ನಿಮಗೊಂದು ತಮಾಷೆ ಗೊತ್ತಾ? ಈ ಪಂಡಿತರ ಪ್ರಕಾರ ನಮ್ಮ ಪುರಂದರ ದಾಸರು... ‘ಆಡಿಸಿದಳೆಶೋದೆ ಜಗದೋದ್ಧಾರನಾ...’ ಅಂದಿರೋದು ತಪ್ಪು. ‘ಆಡಿಸಿದಳು ಯಶೋದೆ, ಜಗದುದ್ಧಾರನಾ...’ ಅನ್ನಬೇಕಿತ್ತು.
ಇನ್ನು ಹೆಸರುಗಳನ್ನು ಇಡುವಾಗ (ಅಂಕಿತ ನಾಮ ಬಳಸುವಾಗ) ಸದೃಶರೂಪಗಳ ಅಂಧಾನುಕರಣೆಯಿಂದಾಗಿಯೂ, ಉಚ್ಚಾರಣೆಯ ವಿಕೃತಿಯ ಫಲವಾಗಿಯೂ, ಅಸಡ್ಡೆ, ಅಶಿಕ್ಷೆಯ ಫಲವಾಗಿಯೂ ತಪ್ಪು ಹೆಸರುಗಳನ್ನು ಇಡುತ್ತಾರೆ/ ಬಳಸುತ್ತಾರೆ. ಚಾಮುಂಡಿ, ದುರ್ಗಿ, ಗಾಯಿತ್ರಿ, ರಘೋತ್ತಮ ಪಾಲಾಕ್ಷ ಇವೆಲ್ಲಾ
ಕ್ರಮವಾಗಿ ಚಾಮುಂಡಾ, ದುರ್ಗಾ, ಗಾಯತ್ರಿ, ರಘೂತ್ತಮ ಹಾಗೂ ಫಾಲಾಕ್ಷ ಎಂದಾಗಬೇಕು. ಸಂಖ್ಯಾಪದಗಳು
ಕೂಡಾ ತಪ್ಪಾಗಿವೆ. ಇಪ್ಪತ್ರೊಂಬತ್ತು, ಮೂವತ್ರೊಂಬತ್ತು ಅಂತಾ ಬಳಸುವುದು ತಪ್ಪು. (ಪುಟ ೨೫~೨೬ರ ಸಾರ: ಕ.ಬ:ದೋ.ದೌ)
ಉಚ್ಚರಣೆ ಆಯಾ ಜನರ ಭಾಷೆಯು ನೂರಾರು ವರ್ಷಗಳಿಂದ ಹೊಂದಿರುವ ಶೈಲಿಗೆ ಮಾರ್ಪಾಡಾಗುವುದು ಸಹಜ. ಮಲಯಾಳಿಗಳ ಇಂಗ್ಲೀಷಿಗೂ ಕನ್ನಡಿಗರ ಇಂಗ್ಲೀಷಿಗೂ ಇರುವ ವ್ಯತ್ಯಾಸದಂತೆ... ಇದು ತಾಯ್ನುಡಿಗೂ ಅನ್ವಯವಾಗುತ್ತದೆ. ಬೆಂಗಳೂರಿನ ಶೈಲಿ ಬೇರೆ, ಧಾರವಾಡದ್ದು ಬೇರೆ, ಮಂಗಳೂರಿನದ್ದು ಬೇರೆ. ಧೂಮಪಾನ, ಇಪ್ಪತ್ತೊಂಬತ್ತು, ಮೂವತ್ತೊಂಬತ್ತು ಅನ್ನೋದನ್ನು ಕೆಲವು ಪ್ರದೇಶಗಳ ಕನ್ನಡಿಗರು ಧೂಮ್ರಪಾನ, ಇಪ್ಪತ್ರೊಂಬತ್ತು, ಮೂವತ್ರೊಂಬತ್ತು ಎಂದು ಬಳಸೋದು ನಾಡಿನ ನಾನಾ ಪ್ರದೇಶಗಳ ವೈವಿಧ್ಯತೆ ಎಂಬಂತೆ ನೋಡೋದು ಸರಿ. ವೈವಿಧ್ಯತೆಯನ್ನು ಶಾಪ ಎಂಬಂತಲ್ಲ.
ವಿಭಕ್ತಿಗಳಲ್ಲೂ ತಪ್ಪಾಗುತ್ತಿದೆ. ಕುವೆಂಪುರವರು ತಪ್ಪು. ಕುವೆಂಪು ಅವರು ಅನ್ನಬೇಕು. ರಾಮಸ್ವಾಮಿಯವರು ಅಂದರೆ ತಪ್ಪು, ರಾಮಸ್ವಾಮಿಗಳು ಸರಿ, ಗೀತಳಿಂದ ಎನ್ನುವುದು ತಪ್ಪು ಗೀತನಿಂದ ಎನ್ನುವುದು ಸರಿ. ಅಲ್ಲಿನ, ಇಲ್ಲಿನ, ಇತ್ತೀಚಿನ ಎಂದರೆ ತಪ್ಪು. ಅಲ್ಲಿಯ, ಇಲ್ಲಿಯ, ಇತ್ತೀಚೆಯ ಮಾತ್ರಾ ಸರಿ. ನಡೆಸು, ಬೆಳೆಸು, ತೊಳೆಸು ಎಲ್ಲಾ ತಪ್ಪು. ನಡೆಯಿಸು, ಬೆಳೆಯಿಸು, ತೊಳೆಯಿಸು ಅಂತನ್ನಬೇಕು. (ಪುಟ ೩೯~೪೪ರ ಸಾರ: ಕ.ಬ:ದೋ.ದೌ)
ಆಡುನುಡಿಗೂ ಬರಹಕ್ಕೂ ವ್ಯತ್ಯಾಸ ಇದೆ. ಅಂತಹ ವ್ಯತ್ಯಾಸ ಇದ್ದಷ್ಟೂ ತೊಡಕು ಅನ್ನುವ ನಿಲುವು ಸರಿಯಾಗಿದೆ. ಆದರೆ ಅದನ್ನು ಕಡಿಮೆ ಮಾಡಲು, ಸರಿಪಡಿಸಲು ಹಿಡಿಯಬೇಕಾದ ದಾರಿ ಸರಿಯೇ ಎಂಬುದು ಪ್ರಶ್ನೆ. ಇಲ್ಲಿ ಬರೆದಂತೆ/ ಬರಹದಲ್ಲಿರುವಂತೆ ಉಚ್ಚರಿಸಬೇಕು ಎನ್ನುವುದು ಸರಿಯಲ್ಲ. ಯಾಕೆಂದರೆ ಅದು ಸಾಧಿಸಲು ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ಮಾತಾಡಿದಂತೆ ಬರೆಯುವುದು ಮಾತ್ರಾ ಈ ತೊಡಕನ್ನು ತಕ್ಕಮಟ್ಟಿಗೆ ನಿವಾರಿಸಬಹುದೇನೋ ಅಷ್ಟೆ. ಒಟ್ಟಲ್ಲಿ ಈ ಪಂಡಿತರ ಶಿಷ್ಟ ಕನ್ನಡ ಕಲ್ಪನೆ ಅಂಗಿಯ ಅಳತೆಗೆ ಮೈ ಹೊಂದಿಸಬೇಕೆನ್ನುವಂತೆ ಇದೆಯೇ ಹೊರತು ಮೈ ಅಳತೆಗೆ ಅಂಗಿ ಹೊಲಿಸಬೇಕು ಎನ್ನುವ ಹಾಗಿಲ್ಲ. ಹೌದಲ್ವಾ ಗುರೂ?