ಹಿಂದಿನ ಬರಹದಲ್ಲಿ ವಿಶ್ವಸಂಸ್ಥೆಯು ಜಗತ್ತಿನ ನಾನಾ ಭಾಷಾ ಸಮುದಾಯಗಳ ಭಾಷಿಕ ಹಕ್ಕನ್ನು ಉಳಿಸಿಕೊಳ್ಳೋದರ ಬಗ್ಗೆ ಹೊಂದಿರೋ ನಿಲುವು, ತೋರಿಸಿರೋ ಕಾಳಜಿಗಳ ಬಗ್ಗೆ ನೋಡುದ್ವಿ. ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರೋ ಭಾರತದಲ್ಲಿ ಪರಿಸ್ಥಿತಿ ಹೀಗೇ ಇದೆಯಾ ಅಂತಾ ಈ ಬಾರಿ ನೋಡೋಣ. ಭಾರತ ದೇಶ ಅನೇಕ ಭಾಷಾ ಜನಾಂಗಗಳಿರುವ ನಾನಾ ಸಂಸ್ಕೃತಿಗಳ, ಆಚರಣೆಗಳ, ನಂಬಿಕೆಗಳ ಒಂದು ದೊಡ್ಡ ದೇಶ. ರಾಜಕೀಯವಾಗಿ 1947ರಲ್ಲಿ ಸ್ವಾತಂತ್ರ್ಯ ದಕ್ಕಿಸಿಕೊಂಡ ಸಂದರ್ಭದಲ್ಲಿ ನಮ್ಮೆದುರು ಇದ್ದ ಮುಖ್ಯವಾದ ಸವಾಲುಗಳು "ಈ ವೈವಿಧ್ಯತೆಗಳ ನಾಡನ್ನು ಹೇಗೆ ಆಳಿಕೊಳ್ಳೋದು? ಹೇಗೆ ಒಗ್ಗಟ್ಟಿನಲ್ಲಿಟ್ಟುಕೊಳ್ಳೋದು?..." ಇತ್ಯಾದಿಗಳು.
ಮೊದಲ ಹೆಜ್ಜೆಯಲ್ಲೇ ಎಡವಿದ ಭಾರತ
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನಗಳಲ್ಲಿ ಸ್ವಾತಂತ್ರ್ಯದ ನಂತರದ ಭಾರತದ ಸ್ವರೂಪದ ಬಗ್ಗೆ ಚರ್ಚಿಸಿದ್ದರು. ಆಗಲೇ ಹಿಂದಿಯನ್ನು ಭಾರತದ ರಾಷ್ಟ್ರಭಾಷೆಯಾಗಿ ಹೊಂದುವ ಬಗ್ಗೆ ಚರ್ಚೆಯಾಯಿತು. ಸ್ವಾತಂತ್ರ್ಯದ ನಂತರ ಅಂತಹ ಪ್ರಯತ್ನಗಳೂ ನಡೆದವು. ಹಿಂದಿಯೇತರ ಪ್ರದೇಶಗಳ ವಿರೋಧದ ಕಾರಣದಿಂದಾಗಿ ಅದು ಫಲಿಸಲಿಲ್ಲ. ಧುಲೇಕರ್ ಎಂಬ ಒಬ್ಬ ಸಂಸದರಂತೂ “ಹಿಂದಿ ಬಾರದವರು ಭಾರತದಲ್ಲಿರಲು ನಾಲಾಯಕ್ಕು” ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಉತ್ತರವಾಗಿ ಕೃಷ್ಣಮಾಚಾರಿಯವರು “ನಿಮಗೆ ಒಡೆದಿರುವ ಹಿಂದೀ ಭಾರತ ಬೇಕೆ? ಅಥವಾ ಇಡೀ ಭಾರತ ಬೇಕೇ?” ಎಂದು ಖಾರವಾಗಿ ಪ್ರತಿಕ್ರಿಯಿಸಿ, ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸಿದರೆ ಭಾರತ ಒಡೆದು ಹೋದೀತು ಎಂಬ ಎಚ್ಚರಿಕೆ ನೀಡಿದ್ದರು. ಮೂರು ವರ್ಷಗಳ ತೀವ್ರವಾದ ಚರ್ಚೆಯ ನಂತರ ೧೯೫೦ರಲ್ಲಿ ಭಾರತದ ಸಂವಿಧಾನವು ರೂಪುಗೊಂಡು ಜಾರಿಯಾಯಿತು.
ಸಂವಿಧಾನ ನೀಡಿರುವ ಹಿಂದಿಪ್ರಚಾರದ ಪರವಾನಗಿ
ಸದರಿ ಸಂವಿಧಾನದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಲಿಲ್ಲವಾದರೂ ಭಾರತಕ್ಕೆ ರಾಜ್‌ಭಾಷಾ ಎಂಬ ಹೊಸ ಪಟ್ಟವನ್ನು ಕಟ್ಟಿ ಅದನ್ನು ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿ, ಜೊತೆಗೆ ೧೫ ವರ್ಷಗಳ ಕಾಲಕ್ಕಾಗಿ ಇಂಗ್ಲೀಷನ್ನು ಸೇರಿಸಿ ಘೋಷಿಸಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡದಂತೆ ತಡೆಯಲು ಯತ್ನಿಸಿದ ಹಿಂದಿಯೇತರ ನಾಡಿನವರಿಗೆ ಭಾರತೀಯ ಸಂವಿಧಾನದಲ್ಲಿ ರಾಷ್ಟ್ರಭಾಷೆ ಎಂಬ ಪದದ ಬಳಕೆ ಆಗಿಲ್ಲದಿರುವುದು ಸಮಾಧಾನ ತಂದಿತು. ಆದರೆ ಸಂವಿಧಾನದ 351ನೇ ಕಲಮಿನಲ್ಲಿ ಹಿಂದಿಯ ಪ್ರಸಾರವನ್ನು ಮಾಡುವುದು ಕೇಂದ್ರದ ಕರ್ತವ್ಯವೆಂದು ಬರೆಯಲಾಗಿರುವುದು, ಒಟ್ಟಾರೆ ಭಾರತದೇಶದ ಭಾಷಾನೀತಿಗೆ ಹಿಡಿದ ಕನ್ನಡಿಯಾಗಿದ್ದು, ವಾಸ್ತವವಾಗಿ ಅಂದಿನಿಂದಲೇ ಹಿಂದೀ ಭಾಷೆಯನ್ನು ಭಾರತದ ಮನೆಮನೆಗಳಲ್ಲಿ ಪ್ರತಿಷ್ಠಾಪಿಸುವ ಕ್ರಮಕ್ಕೆ ಭಾರತದ ಕೇಂದ್ರಸರ್ಕಾರವೇ ಮುನ್ನುಡಿ ಹಾಡಿತು. ಹೀಗಾಗಿ ಆ ಸಮಾಧಾನವೆಂಬುದು ಹಿಂದೀಭಾಷೆಗೆ ರಾಷ್ಟ್ರಭಾಷೆ ಎಂಬ ಹೆಸರು ದಕ್ಕಿಲ್ಲ ಎಂಬುದಕ್ಕೇ ಮಾತ್ರಾ ಸೀಮಿತವಾಯಿತು.
ಸಂವಿಧಾನದ ಪುಟಗಳಲ್ಲಿ “ಭಾರತದಲ್ಲಿ ಹಿಂದಿಯ ಬಳಕೆಯನ್ನು ಕ್ರಮೇಣ ಹೆಚ್ಚಿಸಲು ಭಾರತವು ಬದ್ಧವಾಗಿರುತ್ತದೆ” (ಆರ್ಟಿಕಲ್ 351) ಎಂದು ಬರೆಯಲಾಯಿತು. ಭಾರತದಲ್ಲಿ ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿಸುವ ಗುರಿಯಿಂದ, ಹಿಂದಿಯನ್ನು ಪಸರಿಸಲು ಐದು ವರ್ಷಗಳಲ್ಲಿ ಒಂದು ಇಲಾಖೆಯನ್ನು ತೆಗೆಯಬೇಕು ಮತ್ತು ಕ್ರಮೇಣ ಇಂಗ್ಲಿಷ್ ಬಳಕೆಗೆ ಕಡಿವಾಣ ಹಾಕಲು ಶ್ರಮಿಸಬೇಕು (ಆರ್ಟಿಕಲ್ 344) ಎನ್ನಲಾಯಿತು. ರಾಜ್ಯ ರಾಜ್ಯಗಳ ನಡುವೆ, ರಾಜ್ಯ ಕೇಂದ್ರಸರ್ಕಾರಗಳ ನಡುವಿನ ಎಲ್ಲಾ ವಹಿವಾಟುಗಳು ಹಿಂದಿ/ ಇಂಗ್ಲೀಷಿನಲ್ಲಿ ಮಾತ್ರವೇ ಇರತಕ್ಕದು (ಆರ್ಟಿಕಲ್ 345) ಎಂದೆಲ್ಲಾ ಬರೆಯಲಾಯಿತು.
ಹಿಂದಿ ಹರಡುವಿಕೆಯ ಯೋಜನೆಗಳು
ಸಾಧ್ಯವಾದಾಗಲೆಲ್ಲಾ ಹಿಂದಿಯ ಸಾರ್ವಭೌಮತ್ವ ಸ್ಥಾಪಿಸಲು ಪ್ರಯತ್ನಗಳು ನಡೆದವು. ಭಾಷಾ ಸಮಿತಿಯನ್ನು ನೇಮಿಸಿ 1963ರಲ್ಲಿ ಅಧಿಕೃತ ಭಾಷಾ ಸ್ಥಾನದಿಂದ ಇಂಗ್ಲಿಷನ್ನು ಕಿತ್ತೆಸೆದು, ಹಿಂದಿಯೊಂದನ್ನೇ ಉಳಿಸಿಕೊಳ್ಳುವ ಪ್ರಯತ್ನಗಳು ನಡೆದವು. ತಮಿಳುನಾಡಿನಲ್ಲಿ ಪ್ರತಿರೋಧ ಹುಟ್ಟಿಕೊಂಡಾಗ, 1965ರಲ್ಲಿ ಇಂಗ್ಲೀಷನ್ನೂ ಅದೇ ಸ್ಥಾನದಲ್ಲಿ ಮುಂದುವರೆಸುವ ಒಂದು ತಿದ್ದುಪಡಿಯನ್ನು ತರಲಾಯಿತು. ಆದರೇನು? ಯಾವುದೇ ಇತರ ಭಾರತೀಯ ಭಾಷೆಗಿಲ್ಲದ ಸೌಕರ್ಯ ಹಿಂದಿ ಪ್ರಚಾರಕ್ಕೆ ನೀಡಲಾಯಿತು. ಸಾರ್ವಜನಿಕರ ತೆರಿಗೆಯ ಹಣದಿಂದ ನೂರಾರು ಕೋಟಿ ರೂಪಾಯಿಗಳನ್ನು ಕೇವಲ ಹಿಂದೀ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಮತ್ತೊಂದು ಕಡೆ ಭಾರತದ ತುಂಬೆಲ್ಲಾ ಹಿಂದೀ ಪ್ರಚಾರ ಸಭೆಗಳನ್ನು ಆರಂಭಿಸಲಾಯಿತು. ವಿಶ್ವಾಸ, ಉತ್ತೇಜನ ಮತ್ತು ಒಲಿಸುವಿಕೆಯ ಮೂಲಕ ಹಿಂದಿಯನ್ನು ಹರಡಬೇಕೆಂಬುದು ಭಾರತ ದೇಶದ ನೀತಿಯಾಯಿತು.
ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್
ಇಂತಹ ಗುರಿ ಈಡೇರಿಕೆಗಾಗಿಯೇ ಡಿಪಾರ್ಟ್‌ಮೆಂಟ್ ಆಫ್ ಅಫಿಷಿಯಲ್ ಲಾಂಗ್ವೇಜ್ ಅನ್ನೋ ಇಲಾಖೆಯನ್ನು ತೆರೆಯಲಾಯಿತು. ಅದರ ಮೂಲಕ ಕೇಂದ್ರಸರ್ಕಾರಿ/ ಕೇಂದ್ರದ ಅಧೀನದ ಕಛೇರಿಗಳಲ್ಲಿ ಹಿಂದಿಯನ್ನು ಅನುಷ್ಠಾನಗೊಳಿಸಲು ರೂಪುರೇಶೆಗಳನ್ನು ರೂಪಿಸಿ ಭಾರತದ ಅಧಿಕೃತ ಸಂಪರ್ಕ ಭಾಷಾ ಕಾಯ್ದೆಯನ್ನು ರೂಪಿಸಲಾಯ್ತು. ೧೯೭೬ರಲ್ಲಿ ಜಾರಿಗೆ ತರಲಾದ ಭಾರತದ ಅಫಿಷಿಯಲ್ ಲಾಂಗ್ವೇಜ್ ರೂಲ್ಸ್‌ನ ನಿಯಮಾವಳಿಗಳಂತೂ ಹಿಂದಿಯನ್ನು ಪ್ರತಿಷ್ಠಾಪಿಸುವ ಕೆಲಸಕ್ಕೆ ಮತ್ತಷ್ಟು ವೇಗ ತಂದುಕೊಡುವಂತಿದ್ದವು. ಈ ಕಾನೂನು ಜಾರಿಯಲ್ಲಿಯೂ ತಾರತಮ್ಯ ಎದ್ದು ಕಾಣುವಂತಿತ್ತು. ಏಕೆಂದರೆ ಈ ಕಾಯ್ದೆ ತಮಿಳುನಾಡಿಗೆ ಅನ್ವಯವಾಗುವುದಿಲ್ಲ ಎಂದು ಮೊದಲ ಪ್ಯಾರಾದಲ್ಲೇ ಬರೆಯಲಾಗಿದೆ. ದೇಶದ ಯಾವುದೇ ಮೂಲೆಯ ಕೇಂದ್ರಸರ್ಕಾರಿ ಕಛೇರಿಯಲ್ಲೂ ಹಿಂದಿಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದಿಯಲ್ಲೇ ಉತ್ತರ ನೀಡಬೇಕು ಎಂದು ಇದರಲ್ಲಿರುವುದು ಹಿಂದೀ ಸಾಮ್ರಾಜ್ಯಶಾಹಿಯ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ
ಹಿಂದಿಯೊಂದಕ್ಕೆ ಮಾತ್ರಾ ಮಾನ್ಯತೆ
ಒಟ್ಟಾರೆ ಭಾರತದ ಭಾಷಾನೀತಿಯು ಸ್ಪಷ್ಟವಾಗಿ ಹಿಂದಿಯೆನ್ನುವ ಒಂದು ಭಾಷೆಗೆ ಮಾತ್ರಾ ಪ್ರೋತ್ಸಾಹ ಕೊಡುವಂತಿದೆ. ಈ ಪ್ರೋತ್ಸಾಹ, ಹಿಂದಿ ಭಾಷಿಕ ಪ್ರದೇಶಗಳಿಗೆ ಮಾತ್ರಾ ಸೀಮಿತವಾಗಿದ್ದಿದ್ದರೆ ನಮ್ಮ ನುಡಿಗೂ ಹೀಗೆ ಪ್ರೋತ್ಸಾಹ ಕೊಡಿ ಅನ್ನಬಹುದಿತ್ತು. ಆದರೆ ಭಾರತ ಸರ್ಕಾರದ ಈ ಕ್ರಮಗಳು ಹಿಂದಿಯನ್ನು ನಮ್ಮ ನಾಡೊಳಗೆ ಪ್ರತಿಷ್ಠಾಪಿಸಲು ನೀಡುತ್ತಿರುವ ಪ್ರೋತ್ಸಾಹವಾಗಿದೆ. ತಾರತಮ್ಯದ ಭಾಷಾನೀತಿ, ವಿಶ್ವಸಂಸ್ಥೆಯ ಭಾಷಾನೀತಿಗೆ ವಿರುದ್ಧವಾಗಿರುವಂತೆ ಎದ್ದು ಕಾಣುತ್ತಿದೆ. ಹಾಗಾದರೆ ಭಾರತದ ಭಾಷಾನೀತಿ ಹೇಗಿರಬೇಕು ಎಂದರೆ...
ಭಾರತಕ್ಕೊಪ್ಪೋ ಭಾಷಾನೀತಿಅನೇಕ ವೈವಿಧ್ಯತೆಗಳನ್ನು ಹೊಂದಿರುವ ಭಾರತವನ್ನು ಅವುಗಳ ವೈವಿಧ್ಯತೆ/ ಅನನ್ಯತೆಗಳನ್ನು ಉಳಿಸಿಕೊಳ್ಳಲು ಪೂರಕವಾಗುವಂತೆ ನಮ್ಮ ಭಾಷಾನೀತಿ ಇರಬೇಕಾಗಿದೆ. ವಿಶ್ವಸಂಸ್ಥೆಯು ಘೋಷಿಸಿರುವ ಭಾಷಾ ಹಕ್ಕುಗಳು ಭಾರತದ ಪ್ರತಿಯೊಂದು ಭಾಷಾ ಸಮುದಾಯಕ್ಕೆ ದೊರಕಿಸಿಕೊಡುವಂತಹ ಭಾಷಾನೀತಿ ರೂಪುಗೊಳ್ಳಬೇಕಾಗಿದೆ. ಭಾರತದ ಪ್ರತಿಯೊಂದು ಭಾಷೆಗೂ ರಾಜ್‌ಭಾಷೆಯ ಪಟ್ಟ ಸಿಗಲಿ. ರಾಜ್ಯರಾಜ್ಯಗಳ ನಡುವಿನ ವಹಿವಾಟು ಆಯಾ ರಾಜ್ಯಗಳ ನುಡಿಗಳಲ್ಲಾಗಲಿ. ಪ್ರತಿರಾಜ್ಯಕ್ಕೂ ತನ್ನ ನುಡಿಯಲ್ಲಿ ತನ್ನ ಆಡಳಿತ, ಶಿಕ್ಷಣ, ಬದುಕುಗಳನ್ನು ಕಟ್ಟಿಕೊಳ್ಳಲು ಪೂರಕವಾಗುವಂತಹ ಭಾಷಾನೀತಿ ಭಾರತದ್ದಾಗಲಿ. ಹೀಗೆ ಪ್ರತಿಯೊಂದು ಪ್ರದೇಶದಲ್ಲೂ ಆಯಾ ಪ್ರದೇಶದ ಭಾಷೆಗೆ ಸಾರ್ವಭೌಮತ್ವವನ್ನು ನಿಜವಾಗಿಯೂ ತಂದುಕೊಡಬಲ್ಲಂತೆ ಭಾರತದ ಭಾಷಾನೀತಿಯನ್ನು ಮರು ರೂಪಿಸಬೇಕಾಗಿದೆ. ಒಟ್ಟಾರೆ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕಾಗಿದೆ.
ಪ್ರಗತಿಯ ಪಯಣದಲ್ಲಿ ಪ್ರತಿಯೊಂದು ಭಾಷಾ ಸಮುದಾಯವೂ, ವ್ಯಕ್ತಿಯೂ, ಜನಗಳೂ ಪಾಲುಗೊಳ್ಳಲು ಅನುಕೂಲಕರವಾದ, ಪೂರಕವಾಗುವಂತಹ, ಭಾಷಾ ವೈವಿಧ್ಯಗೆ ಧಕ್ಕೆ ತರದಂತಹ, ಸಂಪರ್ಕ ಸಂವಹನ ಸಾಧಿಸಲು ಪೂರಕವಾಗಿರುವ, ಎಲ್ಲಾ ಭಾಷಿಕ ಸಮುದಾಯಗಳ ಸರ್ವತೋಮುಖ ಏಳಿಗೆಗೆ, ಪರಿಸರಕ್ಕೆ, ಸಂಸ್ಕೃತಿಗೆ ಪೂರಕವಾಗುವಂತೆ ಪ್ರತಿಯೊಂದು ಭಾಷಾ ಸಮೂಹವೂ ತೊಡಗಿಸಿಕೊಳ್ಳಲು ಸಾಧ್ಯವಾಗುವಂತಹ ಭಾಷನೀತಿಯನ್ನು ರೂಪಿಸಲಿ.
ಕೊನೆಹನಿ : ಇಂತಹ ಭಾಷಾನೀತಿಯನ್ನು ರೂಪಿಸಲು ಭಾರತವೆನ್ನುವ ಬಹುಭಾಷಿಕ ಪ್ರದೇಶಗಳಿಂದಾದ ದೇಶದಲ್ಲಿ ಸಂವಿಧಾನಕ್ಕೆ ಅಗತ್ಯವಿರುವ ತಿದ್ದುಪಡಿ ಮಾಡುವುದರಲ್ಲಿ ತಪ್ಪೇನೂ ಇಲ್ಲ.