೨. ಭಾರತದ ಭಾಷಾನೀತಿ: ಹೇರಿಕೆ ಅಳೆಯಲೊಂದು ಸಮಿತಿ!

ಭಾರತದೇಶದ ಘನ ಸಂವಿಧಾನದ ಆಶಯದಂತೆ ರೂಪಿಸಲಾಗಿರುವ ಭಾಷಾನೀತಿಯ ಬಗ್ಗೆ ಈಗಾಗಲೇ ತಿಳಿಸಿದೆವು. ಈ ಭಾಷಾನೀತಿಯಂತೆ ಈ ದೇಶದಲ್ಲಿ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಹಿಂದಿ. ಹಿಂದಿ ಬರದೆ ಇರೋ ರಾಜ್ಯಗಳೂ ಕೆಲವು ಇವೆಯಲ್ಲಾ, ಹಾಗಾಗಿ ಇಷ್ಟವಿಲ್ಲದೇ ಇಂಗ್ಲೀಶು. ಆ ರಾಜ್ಯಗಳಿಗೆಲ್ಲಾ ಹಿಂದೀನ ಕಲಿಸಿ, ಗುಲಾಮಗಿರಿಯ ಸಂಕೇತವಾದ ಇಂಗ್ಲೀಶನ್ನು ನಮ್ಮ ನೆಲದಿಂದ ಬಡಿದೋಡಿಸಿ… ಆ ರತ್ನಸಿಂಹಾಸನದಲ್ಲಿ ಭಾರತದ ರಾಜ್ಯಲಕ್ಷ್ಮಿಯಾದ ಹಿಂದೀ ದೇವಿಯನ್ನು ಪ್ರತಿಷ್ಠಾಪಿಸುವುದನ್ನು “ಇದೇ ನನ್ನ ಗುರಿ, ಇದೇ ನನ್ನ ಮಂತ್ರ, ಇದೇ ನನ್ನ ಪ್ರತಿಜ್ಞೆ” ಅಂತಾ ತಿಳ್ಕೊಂಡಿರೋ ಕೇಂದ್ರಸರ್ಕಾರವು ತನ್ನ ಘನಕಾರ್ಯವು ಹೇಗೆ ಕೆಲಸ ಮಾಡ್ತಿದೆ ಅಂತಾ ನೋಡಕ್ಕೆ, ಆಗ್ಗಿಂದಾಗ್ಗೆ ಸಂಸತ್ ಸಮಿತಿಯನ್ನು ನೇಮಿಸಿ, ಸಮೀಕ್ಷೆ ಮಾಡಿಸಿ, ವರದಿ ತರಿಸಿ, ರಾಷ್ಟ್ರಪತಿಗಳಿಗೆ ಸಲ್ಲಿಸಿ… ಅಲ್ಲಿಂದಾ ಸಂಸತ್ತಿನೊಳಗೆ ಕಾಯ್ದೆ ಮಾಡಿಸಿ... ಪಾಪಾ.. ಭೋ ಕಷ್ಟಾ ಪಡ್ತಿದೆ ಬುಡಿ.

ಎಂಟನೇ ಸಂಸತ್ ಸಮಿತಿ

ಇಂಥಾ ಸಂಸತ್ ಸಮಿತಿಗಳ ಸಾಲಿನಲ್ಲಿ ೨೦೦೪ರಲ್ಲಿ ಸ್ಥಾಪಿತವಾದ ಶ್ರೀ ಶಿವರಾಜ್ ಪಾಟೀಲರ ಅಧ್ಯಕ್ಷತೆಯ (ಈ ಸಮಿತಿಗೆ ಪ್ರತೀಸಲ ಗೃಹಮಂತ್ರಿಗಳೇ ಅಧ್ಯಕ್ಷರಾಗಬೇಕಂತೆ) ಮೂವತ್ತು ಸಂಸದರ ಸಮಿತಿಯು ಎಂಟನೆಯದು. ಆ ಸಮಿತಿಯು ಕೇಂದ್ರಸರ್ಕಾರದ ಎಲ್ಲಾ ೩೯ ಮಂತ್ರಾಲಯಗಳ ಹತ್ತಾರು ಕಚೇರಿಗಳನ್ನು ಪರಿಶೀಲಿಸಿ ಒಂದು ವರದಿಯನ್ನು ಸಲ್ಲಿಸಿತು. ಆ ವರದಿಯ ಮುನ್ನುಡಿಯಲ್ಲಿ ಹೀಗಿದೆ :
ಪೀಠಿಕೆ: ಒಂದು ವ್ಯಕ್ತಿಗೆ ಭಾಷೆ ಹೇಗೆ ಒಂದು ಗುರುತೋ ಹಾಗೇ ಒಂದು ದೇಶಕ್ಕೂ ರಾಷ್ಟ್ರಧ್ವಜ, ರಾಷ್ಟ್ರಭಾಷೆಗಳೂ ಪ್ರಮುಖ. ಹಾಗಾಗಿ ಭಾರತದಲ್ಲಿ ಹಿಂದೀಭಾಷೆಯು ರಾಷ್ಟ್ರಭಾಷೆಯಾಗುವ ಬಗ್ಗೆ, ಆಡಳಿತ ಭಾಷೆಯಾಗುವ ಬಗ್ಗೆ ಜನರ ನಡುವಿನ ಸಂಪರ್ಕ ಭಾಷೆಯಾಗುವ ಬಗ್ಗೆ ಬಹು ಚರ್ಚಿತವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರೂ ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಹಿಂದೀಯನ್ನು ರಾಷ್ಟ್ರೀಯ ಅಭಿಮಾನದ ಪ್ರತೀಕವನ್ನಾಗಿ ಮಾಡಿದ್ದರು. ಭಾರತವನ್ನು ಶತಮಾನಗಳ ದಾಸ್ಯಕ್ಕೆ ಗುರಿಮಾಡಿದ ಬ್ರಿಟೀಶರ ವಿರುದ್ಧ ೧೮೫೭ರಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮ ೧೯೪೭ರಲ್ಲಿ ಕೊನೆಗೊಂಡಿತು. ಈ ಅವಧಿಯೇ ರಾಷ್ಟ್ರಭಾಷಾ ಪ್ರೇಮ ಮತ್ತು ರಾಷ್ಟ್ರಪ್ರೇಮಗಳೆರಡೂ ಒಂದೆನ್ನುವಂತಹ ವಾತಾವರಣವಿದ್ದ ಕಾಲ. ಈಗಿನ ಜಾಗತೀಕರಣದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದ್ದು ದೇಶದ ಆಡಳಿತ ಭಾಷೆಯ ಬಗೆಗಿನ ಚರ್ಚೆಯು ಸಾಂದರ್ಭಿಕವೂ ಅತ್ಯಗತ್ಯವೂ ಆದುದಾಗಿದೆ. ಭಾರತದಲ್ಲಿರುವ ಅನೇಕ ಪ್ರಾದೇಶಿಕ ನುಡಿಗಳು ತಮ್ಮವೇ ಆದ ಇತಿಹಾಸ ಮತ್ತು ಸಾಹಿತ್ಯದ ಹಿರಿಮೆಗಳನ್ನು ಹೊಂದಿವೆ. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಈ ಎಲ್ಲಾ ನುಡಿಗಳ ಹಿರಿಮೆಯನ್ನು ಕಾಯ್ದಿಟ್ಟುಕೊಳ್ಳುವ ಅಗತ್ಯವಿರುವಂತೆಯೇ ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕಾಗಿ ಒಂದು ಭಾಷೆಯನ್ನು ಹೊಂದುವುದೂ ಅಗತ್ಯವಾಗಿದೆ. ನಮ್ಮ ದೇಶದ ಪುರಾತನ ಸಂಸ್ಕೃತಿಯನ್ನು ಅಡಗಿಸಿಕೊಂಡಿರುವ ಸಂಸ್ಕೃತವು ಎಲ್ಲಾ ಭಾರತೀಯ ಭಾಷೆಗಳಿಗೆ ಮೂಲವಾಗಿದೆ ಮತ್ತು ಹಿಂದೀ ಭಾಷೆಯು ಸಂಸ್ಕೃತಕ್ಕೆ ಬಲು ಹತ್ತಿರದ ಭಾಷೆಯಾಗಿದೆ. ಇದನ್ನು ಭಾರತದ ಬಹುತೇಕ ಭಾಗಗಳಲ್ಲಿನ ಜನರು ಓದಲು, ಬರೆಯಲು, ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಬಹುಸಂಖ್ಯಾತರ ಭಾಷೆಯಾದ ಹಿಂದಿಯು ಭಾರತದ ರಾಷ್ಟ್ರಭಾಷೆಯ ಸ್ಥಾನವನ್ನು ಅತ್ಯುತ್ತಮವಾಗಿ ತುಂಬುತ್ತದೆ.
ಸುಳ್ಳುಗಳ ಸರಮಾಲೆ

ಮಹಾತ್ಮಗಾಂಧಿಯೋ.. ಮತ್ತೊಬ್ಬರೋ… ಅಂದವರು ಯಾರಾದರೇನು? ಹಿಂದಿಯನ್ನು ಭಾರತದ ಜನರೆಲ್ಲಾ ಬಳಸಬೇಕು ಎನ್ನುವ ಮಾತಿನ ಒಳಅರ್ಥವು ಹಿಂದೀ ಬರದವರು ಭಾರತೀಯರಲ್ಲ ಎನ್ನುವುದೇ ಆಗಿದೆ. ಎಲ್ಲಾ ನುಡಿಗಳನ್ನು ಉಳಿಸಬೇಕೆಂಬುದನ್ನು ಬಾಯಿಮಾತಲ್ಲಿ ಹೇಳುತ್ತಿರುವ ಈ ಪೀಠಿಕೆಯಲ್ಲಿ ಸಂಸ್ಕೃತವನ್ನು ಭಾರತದ ಬಹುತೇಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಕಾರಣ ನೀಡಿ ಸೀದಾ ರಾಷ್ಟ್ರಭಾಷೆ ಮಾಡಬೇಕೆನ್ನುವ ನಿಲುವು ತೆಗೆದುಕೊಳ್ಳುವುದು ಸರಿಯೇ? ಭಾರತದ ಭಾಷೆಗಳಿಗೆಲ್ಲಾ ಸಂಸ್ಕೃತವೇ ತಾಯಿಭಾಷೆ ಎನ್ನುವ ಮಾತನ್ನು ಭಾಷಾವಿಜ್ಞಾನದ ಅಧ್ಯಯನಗಳು ಸುಳ್ಳೆಂದು ತೋರಿಸಿಕೊಟ್ಟಿದೆಯಲ್ಲಾ? ಯಾವ ದಕ್ಷಿಣ ಭಾರತೀಯ ಭಾಷೆಗೂ ಸಂಸ್ಕೃತ ತಾಯಿಯಾಗಿಲ್ಲವಲ್ಲ? ದಕ್ಷಿಣ ಭಾರತದ ಬಹುತೇಕ ಸಾಂಸ್ಕೃತಿಕ ಸಂಪತ್ತು ಸಂಸ್ಕೃತದಲ್ಲಿದೆ ಎನ್ನಲಾಗುತ್ತದೇನು? ಬಹುಭಾಷಾ ರಾಜ್ಯಗಳ ನಾಡಲ್ಲಿ ಹೆಚ್ಚು ಜನರು ಬಳಸುವ ಭಾಷೆಯನ್ನು ರಾಷ್ಟ್ರಭಾಷೆಯಾಗಿಸುವುದು ಹೇಗೆ ಪ್ರಜಾಪ್ರಭುತ್ವವಾಗುತ್ತದೆ? ಈ ನೆಲದ ಮಕ್ಕಳಿಗೆ ಅಷ್ಟೇಕೆ ಭಾರತದ ಸರಿಸುಮಾರು ೬೦%ಕ್ಕೂ ಹೆಚ್ಚು ಜನರಿಗೆ ತಾಯ್ನುಡಿಯಾಗಿರದ ಹಿಂದಿಯನ್ನು ಚಿಕ್ಕಂದಿನಿಂದ ಕಲಿಸಿ, ಕಲಿಯದಿದ್ದರೆ ಬದುಕಿಲ್ಲವೆನ್ನುವಂತೆ ಮಾಡುವುದು ಹೇಗೆ ಪ್ರಜಾಪ್ರಭುತ್ವವಾಗುತ್ತದೆ? ಹಿಂದೊಮ್ಮೆ ಹೇಳಿದಂತೆ ಪರದೇಶದವನು ಚುಚ್ಚಿದರೆ ನೋಯುತ್ತೆ ಹಾಗಾಗಿ ಪಕ್ಕದ ಮನೆಯವನು ಚುಚ್ಚಲಿ ಎನ್ನಲಾಗುತ್ತದೆಯೇ? ಹೀಗೆ ದೇಶದ ಗುರುತು/ ಪ್ರತೀಕ ಎನ್ನುತ್ತಾ… ದೇಶದ ಒಗ್ಗಟ್ಟಿಗೆ ಕಾರಣವಾಗುವುದು ಎನ್ನುತ್ತಾ ಹಿಂದಿಯನ್ನು ಬಳಸುವಂತೆ ಮಾಡುವುದು ಹೇರಿಕೆಯೇ ಅಲ್ಲವೇನು? ಎರಡು ರಾಜ್ಯಗಳು ತಮ್ಮ ನಡುವಿನ ಸಂಪರ್ಕ ಭಾಷೆ ಯಾವುದಿರಬೇಕೆಂದು ತಾವೇ ನಿರ್ಧರಿಸಿಕೊಳ್ಳುವಂತೆ ಬಿಡುವುದು ಬಿಟ್ಟು ಇಂಥದೇ ನುಡಿಯಲ್ಲಿ ನೀವು ವ್ಯವಹರಿಸಬೇಕು ಎನ್ನುವುದು ಎಷ್ಟು ಸರಿ?
ಒಟ್ಟಾರೆ ಪೀಠಿಕೆಯಲ್ಲೇ ಹಿಂದೀ ಭಾಷೆಯ ಸಾರ್ವಭೌಮತ್ವ ಸ್ಥಾಪನೆಯೇ ತಮ್ಮ ಪರಮಗುರಿ ಎನ್ನುವ ಈ ಸಂಸತ್ ಸಮಿತಿ ಏನೇನೆಲ್ಲಾ ಮಾಡಿದೆ? ಏನೇನೆಲ್ಲಾ ಹೇಳಿದೆ ಎಂದು ಮುಂದೆ ನೋಡೋಣ.

(ಮುಂದುವರೆಯುವುದು…)

1 ಅನಿಸಿಕೆ:

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ನಾನು ಇತ್ತೀಚೆಗೆ ಗಾಂಧಿಯವರ 'Third class in Indian Railways' ಅನ್ನೋ ಪುಸ್ತಕ ಓದಿದೆ. ಅದ್ರಲ್ಲಿ ಆವ್ರು ಭಾಷೆಗಳ ಬಗ್ಗೆ ಅವ್ರ ಅಭಿಪ್ರಾಯನ 'vernaculars as media of instruction' ಅನ್ನೋ ಟಿಪ್ಪಣಿಯಲ್ಲಿ ವಿವರವಾಗಿ ಹೇಳವ್ರೆ. 'ಮದ್ರಾಸ್ ಕೇಸರಿ' ಪತ್ರಿಕೆಯ ಮೆಹ್ತ ಎನ್ನುವವರ ಇಂಗ್ಲೀಶ್ ಮದ್ಯಾಮದ ಪರ ವಾದವನ್ನು ತಳ್ಳಿಹಾಕುತ್ತಾ, ಭಾರತೀಯ ಮಕ್ಕಳು ತಮ್ಮ ತಮ್ಮ ತಾಯ್‌ನುಡಿಯಲ್ಲಿ ವಿದ್ಯೆ ಕಲಿಯದೇ ಓದಲ್ಲಿ ಅದು ರಾಷ್ಟ್ರೀಯತೆಯ ಆತ್ಮಹತ್ಯೆ ಎಂದೂ, ಸ್ವರಾಜ್ಯ ಸಾರ್ಥಕವಾಗುವುದಿಲ್ಲ ಎಂದೂ ಹೇಳುತ್ತಾರೆ. ಸ್ವಾತ್ರಂತ್ರ ಪೂರ್ವದಲ್ಲಿ ವಿದ್ಯೆ ಇಂಗ್ಲೀಶ್ ಮಾದ್ಯಮದಲ್ಲಿ ಮಾತ್ರ ಇದ್ದುದ್ದು, ಗಾಂಧಿಯವರನ್ನು ಚಿಂತೆಗೀಡುಮಾಡಿತ್ತು. ಆಗಿನ ಯುರೋಪ್ನ ಯಹೂದಿಗಳು 'ಯಡ್ಡಿಶ್' ಅನ್ನೋ ಹೊಸ ಬಾಷೇನ ಹುಟ್ಟಿಸಿದ್ದು, ದಕ್ಷಿಣ ಆಫ್ರಿಕಾದ ಮೂಲನಿವಾಸಿಗಳು 'ಟಾಲ್' ಭಾಷೆಯ ಉದ್ದಾರಕ್ಕೆ ಹೋರಾಟ ಮಾಡಿದ್ದು, ಹಾಗೂ ಆ ಎರಡೂ ಬಾಷೆಗಳು ವಿದ್ಯೆ ಹಾಗೂ ಅರಿವಿನ ಮಾದ್ಯಾಮವಾಗಿ ಯಶಸ್ವಿಯಾಗಿರುವುದನ್ನು ಉದಾಹರಣೆಯಾಗಿ ಕೊಡುತ್ತಾರೆ. ಯಹೂದಿಗಳಿಗೆ ಮತ್ತು ದಕ್ಷಿಣ ಆಫ್ರಿಕಾದ ಮೂಲ ನಿವಾಸಿಗಳಿಗೆ ಸಾದ್ಯವಾಗಿರುವುದು, ಆಳವಾಗಿ ಬೇರೂರಿರುವ ಭಾಷೆಗಳಾಡುವ ನಮಗೆ ಇನ್ನೂ ಸುಲಭ ಎನ್ನುವುದು ಗಾಂಧಿಯವರ ನಿಜವಾದ ವಾದವಾಗಿತ್ತು. ಗಾಂಧಿಯವರು ಭಾರತವನ್ನ ವಿದವಾದ ಹೂಗಳಿರುವ ಸುಂದರ ಉದ್ಯಾನವಾಗಿ ಕಂಡಿದ್ದರೆ ವರ್ತು ಕಳ್ಳೀಗಿಡ ಮಾತ್ರ ಬೆಳೆಯೊ ಮರುಭೂಮಿಯಾಗಿ ಅಲ್ಲ. ಅವರು ಟಿಪ್ಪಣಿಯ ಕೊನೆಯಲ್ಲಿ ಹೀಗೆ ಅನ್ನುತ್ತಾರೆ: if we lost faith in our vernaculars, it is a sign of want of faith in ourselves; it is the surest sign of decay. And no scheme of self-government, however benevolently of generously it may be bestowed upon us, will ever make us a self-governing nation, if we have no respect for the languages our mothers speak.
'ಈ ಅವಧಿಯೇ ರಾಷ್ಟ್ರಭಾಷಾ ಪ್ರೇಮ ಮತ್ತು ರಾಷ್ಟ್ರಪ್ರೇಮಗಳೆರಡೂ ಒಂದೆನ್ನುವಂತಹ ವಾತಾವರಣವಿದ್ದ ಕಾಲ' ಅನ್ನುವ ಮಾತು ಮಹಾಸುಳ್ಳಶ್ಟೇ ಅಲ್ಲ, ಹಿಂದಿಯೇತರಿಗೆ, ಹಾಗೂ ಭಾರತದ ಉದ್ದಗಲದಲ್ಲಿ ಹರದಿದ್ದ ಹೋರಾಟಗಾರರಿಗೆ ಮಾಡಿದ ಘೋರ ಅವಮಾನ ಕೂಡ. ನಾನೆಲ್ಲೂ ಗಾಂಧಿಯವರು ಹಿಂದಿಯಲ್ಲಿ ಭಾಷಣ ಮಾಡಿದ್ದು ಕೆಳಿಲ್ಲ. ನೆಹ್ರು ಆರ್ದ ರಾತ್ರಿಯಲ್ಲಿ ಸ್ವಾತಂತ್ರ ಘೋಷಿಸಿದ್ದೂ ಇಂಗ್ಲೀಶ್ನಲ್ಲೇ. ಗಾಂಧಿಯವರು ಇಂಗ್ಲೀಶ್ನಲ್ಲಿ ಕೊಡುತ್ತಿದ್ದ ಕರೆಗೆ ಭಾರತೀಯರು ಒಗೊಡುತ್ತಿದ್ದುದ್ದು ಅವರವರ ತಾಯ್ನುಡಿಗಳಲ್ಲಿ. ಹಿಂದಿಯನ್ನರು ಇಡೀ ಸ್ವಾತಂತ್ರ ಸಂಗ್ರಾಮವನ್ನೇ ಅಪಹರಣ ಮಾಡುತ್ತಿರುವ ಬಗ್ಗೆ ಹಿಂದಿಯೇತರರು ಎಚ್ಚರ ವಹಿಸಬೇಕು. ಗಾಂದಿಯವರು ಹೇಳಿದ್ದ ಪ್ರಕಾರ, ಕನ್ನಡಿಗರಿಗೆ ಇನ್ನೂ ಸ್ವರಾಜ್ಯ ಬಂದಿಲ್ಲ. ಸ್ವರಾಜ್ಯ ಇಲ್ಲದೇ ಸ್ವಾತಂತ್ರಕ್ಕೆ ಏನು ಬೆಲೆ. ಹಿಂದಿಯನ್ನು ಹಿಮ್ಮೆಟ್ಟಿಸಿ ಕನ್ನಡದಲ್ಲಿ ಕಲಿತ ಮೇಲಷ್ಟೇ ಕನ್ನಡಿಗರು ಸ್ವಾತಂತ್ರವನ್ನು ಸವಿಯಬಹುದು.
-ಸಿದ್ರಾಜು ಬೋರೇಗೌಡ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails