ವಿಕ್ಷನರಿಯಲ್ಲಿ ನೂರು ಸಾವಿರ ದಾಟಿದ ಕನ್ನಡ


ಈ ಸುದ್ದಿ ಕನ್ನಡಿಗರಿಗೆ ಸಕ್ಕತ್ ಸಂತಸದ ವಿಷಯ. ವಿಕ್ಷನರಿಯಲ್ಲಿ ಕನ್ನಡ ಒಂದು ಲಕ್ಷದ ಗಡಿ ದಾಟಿದೆ. ಹೀಗೆ ದಾಟಿರುವ ಜಗತ್ತಿನ ಕೆಲವೇ ನುಡಿಗಳ ಸಾಲನ್ನು ಸೇರಿಕೊಂಡಿದೆ. ವಿಕ್ಷನರಿಯೆಂಬ ಈ ನುಡಿಕಡಲ ಬಗ್ಗೆ ಈ ಹಿಂದೆ ಬರೆದಿದ್ದೆವು. ಅದು ಜುಲೈ ೧೯, ೨೦೧0ರಂದು ಹಾಕಿದ ಸುದ್ದಿ. ವಿಕ್ಷನರಿಯೆನ್ನುವ ಅಂತರ್ಜಾಲ ನಿಘಂಟಿನಲ್ಲಿ ಕನ್ನಡ ತನ್ನ ಹೆಜ್ಜೆಯೂರಿ ಮೈಲಿಗಲ್ಲೊಂದನ್ನು ಮುಟ್ಟಿದ ಬಗ್ಗೆ ಆ ಸುದ್ದಿಯಿತ್ತು.

ಅಂದಿನ ಮಾತು...

ಅಂತರ್ಜಾಲ ಲೋಕದಲ್ಲಿ ವಿಕಿಪೀಡಿಯಾದೋರು ಕೊಡಮಾಡಿರೋ ಒಂದು ಮಾಯಾದಂಡ ಅಂದ್ರೆ ವಿಕ್ಷನರಿ. ಇದು ವಿಕಿ+ಡಿಕ್ಷನರಿ ಎಂಬ ಎರಡು ಪದಗಳ್ನ ಬೆರೆಸಿ ಮಾಡಿರೋ ಹೆಸರು. ಅಂತರ್ಜಾಲದಲ್ಲಿ ತನ್ನ ಇರುವಿಕೆಯನ್ನು ನೆಲೆ ನಿಲ್ಲಿಸಿ ತನ್ನ ಹರವನ್ನು ಹೆಚ್ಚಿಸಿಕೊಳ್ಳಬಯಸೋ ಪ್ರತಿಯೊಂದು ಭಾಷೆಗೂ ಈ ತಾಣ ಅಮೃತ ಪಾನ.

ವಿಕ್ಷನರಿಯ ಮಹತ್ವ

ಇದು ಅಂತರ್ಜಾಲ ನಿಘಂಟು ಎನ್ನುವಂತೆ ಮೇಲುನೋಟಕ್ಕೆ ತೋರಿದರೂ ಬುಡಮಟ್ಟದಲ್ಲೇ ನಿಘಂಟಿಗೂ ಕೆಲವು ವ್ಯತ್ಯಾಸಗಳಿವೆ. ಇಲ್ಲಿನ ನುಡಿಕಡಲಿಗೆ ಯಾರು ಬೇಕಾದರೂ ಪದ ಸೇರಿಸಬಹುದು. ಪ್ರತಿಯೊಂದು ಪದಕ್ಕೂ ಒಂದೊಂದು ಪುಟ ಹುಟ್ಟುಹಾಕಿ ಪದದ ಬಗ್ಗೆ ಅನೇಕ ಮಾಹಿತಿ ನೀಡಬಹುದು. ಪ್ರತಿ ಪದಕ್ಕೂ ಯಾವ ಭಾಷೆಯಲ್ಲಿ ಬೇಕಾದರೂ ಅರ್ಥ ನೀಡಬಹುದು. ಅಂದರೆ ಒಂದು ಕನ್ನಡ ಪದಕ್ಕೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ ಅಂತ ಬರೀಬಹುದು. ಮುಂದಿನ ದಿನಗಳಲ್ಲಿ ನಮ್ಮ ಅಂತರ್ಜಾಲದ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಗಳೇ ಇದ್ದು ಇಂತಹ ಅಂತರ್ಜಾಲ ನಿಘಂಟಿನ/ ನುಡಿಕಡಲಿನ ಪಾತ್ರ ಮಹತ್ವದ್ದೂ ಹೆಚ್ಚಿನದ್ದೂ ಆಗಲಿದೆ. ಆ ದೃಷ್ಟಿಯಿಂದ ನೋಡಿದಾಗ ವಿಕ್ಷನರಿಯಲ್ಲಿ ಕನ್ನಡ ಪದಗಳು ಹೆಚ್ಚು ಹೆಚ್ಚು ಇರಬೇಕಾದ ಅಗತ್ಯ ಮತ್ತು ಇದ್ದರೆ ಆಗುವ ಉಪಯೋಗಗಳು ಮನದಟ್ಟಾಗುತ್ತವೆ

ಇಂದಿನ ಮಾತು

ವಿಕ್ಷನರಿಯಲ್ಲಿ ಜಗತ್ತಿನ ೧೭೦ ಭಾಷೆಗಳ ಪದಕೋಶವಿದೆ. ಅದರಲ್ಲಿ ಅತಿಹೆಚ್ಚು ಪದಗಳನ್ನು ಹೊಂದಿರುವ ಲೆಕ್ಕದಲ್ಲಿ ಕನ್ನಡದ ಸ್ಥಾನ ಇವತ್ತು ೨೨ನೆಯದು. ಭಾರತದ ಭಾಷೆಗಳಲ್ಲಿ ಮೊದಲನೆಯದು ತಮಿಳು ಆಗಿದ್ದು ಇಲ್ಲಿ ಒಟ್ಟು ೧,೯೬,೧೨೭ ತಮಿಳು ಪದಗಳಿವೆ. ಎರಡನೆಯದು ಕನ್ನಡ. ಇದರಲ್ಲಿ ಒಟ್ಟು ೧,೦೧,೯೫೩ ಕನ್ನಡದ ಪದಗಳಿವೆ. ನಂತರದ ಭಾರತೀಯ ಭಾಷೆ ಮಲಯಾಳಂ ಆಗಿದ್ದು ಇದರ ೬೦,೭೩೮ ಪದಗಳಿವೆ.
ಲಕ್ಷಕ್ಕಿಂತ ಹೆಚ್ಚಿನ ಪದಗಳಿರುವ ಭಾಷೆಗಳಿಗೆ ವಿಕ್ಷನರಿಯ ಮುಂಪುಟದಲ್ಲೇ "ಹುಡುಕು" ಆಯ್ಕೆಯನ್ನು ನೀಡಲಾಗಿದೆ. ಈ ಸವಲತ್ತು ಕನ್ನಡಕ್ಕೂ ಸಿಕ್ಕಿರುವುದು ಹೆಮ್ಮೆಯ ಮಾತಷ್ಟೇ ಅಲ್ಲದೆ ಬಳಕೆಯ ದೃಷ್ಟಿಯಿಂದ ಅತ್ಯಂತ ಅನುಕೂಲಕರವಾಗಿರುವುದೂ ಆಗಿದೆ.
ಇನ್ನು ವಿಕ್ಷನರಿಗೆ ಪದಗಳನ್ನು ಸೇರಿಸುವಲ್ಲಿ ಗುಣಮಟ್ಟದ ಸೇರಿಕೆಗಾಗಿ ಒಂದು ಸೂಚಿಸಂಖ್ಯೆ (ಇಂಡೆಕ್ಸ್) ನೀಡಲಾಗುತ್ತದೆ. ಇದರಲ್ಲಿ ಕನ್ನಡ ಎರಡನೇ ಸ್ಥಾನದಲ್ಲಿರುವುದೂ ಕೂಡಾ ಹೆಮ್ಮೆಯ ವಿಷಯವೇ ಆಗಿದೆ. ಇದರಲ್ಲಿ ಸೇರಿಸಿರುವ ಪದಗಳಲ್ಲಿ ಗುಣಮಟ್ಟದ ಸೂಚಿಸಂಖ್ಯೆ ೦.೯೮೨೭ ಆಗಿದೆ. ಇಷ್ಟೆಲ್ಲಾ ಹಿರಿಮೆಗೆ ಕಾರಣರಾದವರನ್ನು ನೆನೆಯೋಣ.

ಇಲ್ಲಿ ಕನ್ನಡವನ್ನು ಕಟ್ಟಿದವರು

ಬನವಾಸಿ ಬಳಗದ ಹೆಮ್ಮೆಯ ಈ ಯೋಜನೆಗೆ ನೀರೆರೆದು ಕೈ ಜೋಡಿಸಿದವರೆಲ್ಲರನ್ನೂ ನೆನೆಯಬೇಕಾಗಿದೆ. ಶ್ರೀಯುತರಾದ ವಿವೇಕ್ ಶಂಕರ್, ರಾ ಸು ಮೇಟಿಕುರ್ಕೆ, ಪ್ರಶಾಂತ್ ಸೊರಟೂರು, ಬರತ್, ಸಂದೀಪ್ ಇವರುಗಳ ಪಾತ್ರ ಹಿರಿದು. ಅದರಲ್ಲೂ ವಿವೇಕ್ ಶಂಕರ್ ಮತ್ತು ಮೇಟಿಕುರ್ಕೆಯವರ ಕೊಡುಗೆ ಬಹಳ ದೊಡ್ಡದು. ಜುಲೈ ೨೦೧೦ರಿಂದ ಮಾರ್ಚ್ ೨೦೧೧ರ ಒಳಗೆ ವಿಕ್ಷನರಿಗೆ ಸೇರ್ಪಡೆಯಾದ ಪದಗಳ ಸಂಖ್ಯೆ ೩೬,೦೦೦ಕ್ಕೂ ಹೆಚ್ಚು. ಸಂದೀಪ್ ಅವರು ಪದ ಸೇರಿಸಲು ಅನುಕೂಲವಂತಹ ಆಟೋಮೇಶನ್ ಏರ್ಪಾಡು ಮಾಡಲು ಮುಂದಾಗಿದ್ದಾರೆ. ಇದರಿಂದ ಪದಗಳನ್ನು ಸೇರಿಸುವ ವೇಗ ಹೆಚ್ಚುವ ಭರವಸೆ ನಮ್ಮದು. ಮೇಟಿಕುರ್ಕೆಯವರಂತೂ ವಿಕ್ಷನರಿಯಲ್ಲಿ ಕನ್ನಡ ಪದಗಳನ್ನು ಸೇರಿಸುವ ಕೆಲಸಕ್ಕಾಗೇ ಜನರನ್ನು ನೇಮಕ ಮಾಡಿಕೊಳ್ಳುವ ಆಶಯ ಹೊಂದಿದ್ದಾರೆ. ಈ ಎಲ್ಲರ ಕೊಡುಗೆಗೆ ಬೆಲೆ ಬರುವುದು... ಮಿಂಬಲೆಯಲ್ಲಿರುವ ಕನ್ನಡಿಗರೆಲ್ಲಾ ಈ ಪದನೆರಿಕೆಯನ್ನು ಹೆಚ್ಚು ಹೆಚ್ಚು ಬಳಸುವುದೇ ಆಗಿದೆ. ಮುಂದಿನ ದಿನಗಳಲ್ಲಿ ವಿಕ್ಷನರಿಯನ್ನು ಬಳಸಿ ಬೇರೆ ಬೇರೆ ನುಡಿಗಳೊಂದಿಗೆ ಹೆಚ್ಚು ಹೆಚ್ಚು ಒಡನಾಟ ಬೆಳೆಸಲು ಅನುಕೂಲಕಾರಿಯಾಗಲಿದೆ. ನುಡಿಗಳ ನಡುವಿನ ಈ ಅರಿಮೆಯ, ಕಲಿಕೆಯ ಕೊಡುಕೊಳ್ಳುವಿಕೆಯ ದೊಡ್ದಾಟಕ್ಕೆ ವಿಕ್ಷನರಿ ನೆರವಾಗಲಿದೆ ಎಂಬ ಭರವಸೆ ನಮ್ಮದು. ಹೌದಲ್ವಾ ಗುರೂ!

ಬನ್ನಿ, ನೀವೂ ಕೈ ಜೋಡಿಸಿ...

ಬಹಳ ಚುರುಕಾಗಿ, ವೇಗವಾಗಿ ನಾವು ಮುಂದುವರೀತಾ ಇದೀವಿ ಗುರೂ! ಆದರೆ ಅಂತರ್ಜಾಲ ತಾಣದಲ್ಲಿ ಕನ್ನಡದ ನುಡಿಗುಡಿಯ ಈ ತೇರು ಎಳೆಯೋಕೆ ನಿಮ್ಮದೂ ಎರಡು ಕೈ ಸೇರಿದರೆ ಬೊಂಬಾಟಾಗಿರುತ್ತೆ. ನಿಮಗೂ ವಿಕ್ಷನರಿಗೆ ಕನ್ನಡ ಪದಗಳನ್ನು ಸೇರಿಸೋ ಮನಸ್ಸಿದ್ದಲ್ಲಿ ವಿಕ್ಷನರಿಯ ತಾಣಕ್ಕೆ ಭೇಟಿ ಕೊಡಿ. ಅಲ್ಲಿರೋ ಸಮುದಾಯ ಪುಟದಲ್ಲಿ ಹೇಗೆ ಪದ ಸೇರಿಸಬೇಕು ಅಂತಾ ಇದೆ. ಅದರಲ್ಲಿ ಬರೆದಿರೋ ರೀತೀಲಿ ಪದ ಸೇರಿಸಿದರೆ ಆಯ್ತು. ನಿಮಗೆ ನಮ್ಮೊಂದಿಗೆ ಕೈಜೋಡಿಸೋಕೆ ಆಸಕ್ತಿ ಇದ್ದಲ್ಲಿ sanjeeva@banavasibalaga.org ಗೆ ಒಂದು ಮಿಂಚೆ ಹಾಕಿ...ಗುರೂ!!

5 ಅನಿಸಿಕೆಗಳು:

Unknown ಅಂತಾರೆ...

ಸಕ್ಕತ್ ಒಳ್ಳೆ ಸುದ್ದಿ....ಸವಿಯೊದಗು.

ಬರತ್

Anonymous ಅಂತಾರೆ...

ಒಳ್ಳೆ ಸುದ್ದಿ ಗುರು.ಇದೆ ರೀತಿ ಮುಂದುವರೆಸಿ... ನಾನು ಕೂಡ ಸೇರಿಸ್ತಿನಿ ಕನ್ನಡ ಪದಗಳನ್ನು.

shivu ಅಂತಾರೆ...

nanna sahakara yavagalu ide..

ಪ್ರಶಾಂತ ಸೊರಟೂರ ಅಂತಾರೆ...

ವಿಕ್ೞನರಿಯಲ್ಲಿ ಕನ್ನಡ ಪದಗಳು ಲಕ್ೞದ ಅಂಕಿದಾಟಲು ಮುಖ್ಯ ಕಾರಣಕರ್ತರಾದ ಶ್ರೀ ರಾ.ಸು.ಮೇಟಿಕುರ್ಕಿ, ವಿವೇಕ ಶಂಕರ ಅವರಿಗೆ ವಿಶೇಷ ಧನ್ಯವಾದಗಳು.
ವಿಕ್ೞನರಿಯಲ್ಲಿ ಕನ್ನಡ ಪದಗಳನ್ನು ಸೇರಿಸುವಾಗ ಕಾಯ್ದುಕೊಂಡಿರುವ ಗುಣಮಟ್ಟ ನೋಡಿ ಸಂತೋಷವಾಯಿತು (ಶ್ರೀ ಆನಂದ ಅವರು ತಿಳಿಸಿದ ಹಾಗೆ ವಿಕ್ೞನರಿ "ಸೂಚಕ"ವು ಇದನ್ನು ಸಮರ್ಥಿಸುತ್ತದೆ)
ಹೆಚ್ಚಿನ ಪದಕೋಶಗಳಲ್ಲಿ ಕನ್ನಡ ಪದವೆಂದು ತಿಳಿಸಿ ಇತರ ನುಡಿಗಳ (ಹೆಚ್ಚಾಗಿ ಸಂಸ್ಕೃತದ) ಪದಗಳೇ ಕಾಣಿಸುತ್ತವೆ ಆದರೆ ವಿಕ್ೞನರಿಯಲ್ಲಿ ನಿಜ ಅರ್ಥದಲ್ಲಿ ಕನ್ನಡದ್ದೇ ಪದಗಳ ಕುರಿತಾದ ಹೊಸ ಹುಡುಕು ಮೊದಲ್ಗೊಂಡಿರುವುದು ಸಂತಸದ ವಿಷಯ.

ಕನ್ನಡ ವಿಕ್ೞನರಿಯಲ್ಲಿ ಈಗಿರುವ ಕ್ರಮದಲ್ಲಿ "ಇಂಗ್ಲೀಷ" ಇಲ್ಲವೇ "ಕನ್ನಡ" ಪದ ಸೇರಿಸಬೇಕೆಂದರೆ "ಹುಡುಕು (search)" ಗುಂಡಿಯನ್ನು ಬಳಸಿಯೇ ಪದ ಸೇರಿಸಬೇಕು ಇದರ ಹೊರತಾಗಿ "ಇಂಗ್ಲೀಷ"ನ ಯಾವ ಪದಕ್ಕೇ ಇನ್ನೂ "ಕನ್ನಡ" ಪದ ಸೇರಿಸಲಾಗಿಲ್ಲ ಅನ್ನುವ ಪಟ್ಟಿ ಇದ್ದರೆ, ಪದ ಸೇರಿಸುವಲ್ಲಿ ವೇಗ ಕಾಯ್ದುಕೊಳ್ಳಬಹುದು.ಈ ಕುರಿತು "ಒಳನುಡಿ" (software) ಅರಿತವರು ತಕ್ಕುದಾದ ಮಾರ್ಪಾಡು ಮಾಡಿದರೆ ಒಳಿತು.
ವಿಕ್ೞನರಿಯಲ್ಲಿ ಪದ ಸೇರಿಸುವುದರ ಜೊತೆಗೆ ಅಲ್ಲಿರುವ ಕನ್ನಡ ಪದಗಳ ಬಳಕೆ ಕೂಡ ಆಗಬೇಕು. ಹೆಚ್ಚು ಹೆಚ್ಚು ಕನ್ನಡಿಗರಿಗೆ ಸರಳವಾಗಿ ಈ ನುಡಿಕಟ್ಟುಗಳು, ತಿರುಳುಗಳು ಸಿಗುವಂತಾಗಬೇಕು.
ಇಂಗ್ಲೀಷನಲ್ಲಿ ಇರುವ "pocket oxford dictionary (digital version)" ಹಾಗೆ ಕನ್ನಡದಲ್ಲಿಯು ವಿಕ್ೞನರಿ ಪದಕೋಶ ತುದಿ ಬೆರಳಿನಲ್ಲಿ ಸಿಗುವಂತಾಗಬೇಕು.

ಕನ್ನಡದಲ್ಲಿ "ನಿಜಅರಿಮೆ (ವಿಜ್ಞಾನ)", ತಂತ್ರಜ್ಞಾನದ ಪದಗಳ ಕೊರತೆ ನೀಗಿಸಲು ಹೊಸ ಪದಗಳ ಹುಟ್ಟು ಬೇಗನೇ ಆಗಬೇಕಾಗಿದೆ.
ನಮ್ಮ-ನಮ್ಮ ಕೆಲಸದಲ್ಲಿ, ಕಾರ್ಯ ಕ್ೞೇತ್ರದಲ್ಲಿ ಇಂಗ್ಲೀಷನ ಪದಗಳಿಗೇ ಕನ್ನಡದ್ದೇ ಪದಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡವಂತಾಗಬೇಕು.

ವಿಕ್ೞನರಿಯಲ್ಲಿ ಈಗಿರುವ ಎರಡನೇ ಸ್ಥಾನದಿಂದ (ಭಾರತೀಯ ನುಡಿಗಳಲ್ಲಿ) ಮೊದಲ ಸ್ಥಾನಕ್ಕೆ ಕನ್ನಡವನ್ನು ತಲುಪಿಸಬೇಕಾಗಿದೆ, ಇದಕ್ಕೆ ಎಲ್ಲರೂ ಕೈ ಜೋಡಿಸಬೇಕಾಗೆದೆ.

ವಂದನೆಗಳು.
ಪ್ರಶಾಂತ ಸೊರಟೂರ

Ramesh ಅಂತಾರೆ...

Good

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails