೧. ಭಾರತದ ಭಾಷಾನೀತಿ

ಒಂದು ದೊಡ್ಡ ಕಾಡು. ಅದರಲ್ಲಿ ಆನೆ, ಹುಲಿ, ಸಿಂಹ, ಮಂಗ, ಚಿರತೆ, ಜಿಂಕೆ, ಕರಡಿ, ನರಿ, ತೋಳ, ಹಾವು, ಚೇಳು, ಜೇಡ, ಕೋಗಿಲೆ, ನವಿಲು, ಗುಬ್ಬಿ, ಗೊರವಂಕ, ಅಳಿಲು, ಚಿಟ್ಟೆ, ಹುಳು, ಹುಪ್ಪಟೆ, ಮೀನು, ಮೊಸಳೆ, ಬಾತುಕೋಳಿ, ಏಡಿ ಮುಂತಾಗಿ ಸಾವಿರಾರು ಬಗೆಯ ಜೀವಿಗಳು. ಒಮ್ಮೆ ಕಾಡಿನಲ್ಲಿ ಎಲ್ಲವಕ್ಕಿಂತಾ ಹೆಚ್ಚು ಸಂಖ್ಯೆಯಲ್ಲಿರುವ ಆನೆಗಳು - “ಛೇ! ನಮ್ಮ ಕಾಡಿನಲ್ಲಿ ಬೇರೆ ಬೇರೆ ಥರದ ಜೀವಿಗಳಿದ್ದು, ಅವುಗಳೆಲ್ಲಾ ಬೇರೆ ಬೇರೆ ಥರದ ಕೂಗುಗಳನ್ನು ಹೊರಡಿಸಿ, ಬೇರೆ ಬೇರೆ ಥರದ ಆಹಾರಗಳನ್ನು ತಿನ್ನುತ್ತಿರುವುದರಿಂದ ಕಾಡಿನ ಒಗ್ಗಟ್ಟು ಹಾಳಾಗಿದೆ. ಕಾಡು ಬಲಹೀನವಾಗಿದೆ. ಹಾಗಾಗಿ ಇನ್ನುಮುಂದೆ ಇಲ್ಲಿ ಬರೀ ಆನೆಗಳು ಮಾತ್ರವೇ ಇರಬೇಕು. ಅಥವಾ ಆನೆಗಳಂತೆಯೇ ಎಲ್ಲಾ ಪ್ರಾಣಿಗಳು ಬರೀ ನಡೆದಾಡಬೇಕು, ಹುಲ್ಲು ತಿನ್ನಬೇಕು, ಘೀಳಿಡಬೇಕು” ಎಂದು ತೀರ್ಮಾನ ಮಾಡಿದವಂತೆ. ಪರಿಣಾಮವಾಗಿ ಸಿಂಹದ ಗುಹೆಯಿಂದ ಹಿಡಿದು ಕೋಗಿಲೆಯ ಗೂಡಿನವರೆಗೂ ಎಲ್ಲೆಲ್ಲೂ ಘೀಳಿಡುವ ಪಾಠವಂತೆ. ಹುಲಿ ಸಿಂಹಗಳೆಲ್ಲಾ ಬೇಟೆ ಬಿಟ್ಟು, ಮೀನು ಮೊಸಳೆಗಳೆಲ್ಲಾ ಈಜಲು ಬಿಟ್ಟು, ಕೊಕ್ಕರೆ ಹಂಸಗಳೆಲ್ಲಾ ಹಾರಲು ಬಿಟ್ಟು… ಆನೆಗಳಂತೆ ಬದುಕುವುದು ಹೇಗೆಂದು ಕಲಿಯುವ ಶಾಲೆ ಸೇರಬೇಕಾಯ್ತಂತೆ…ಹಾಗೆ ಅಂತಹ ಶಾಲೆಗಳನ್ನು ಸೇರಿದರೆ ಮಾತ್ರವೇ ಆಹಾರವಂತೆ, ರಕ್ಷಣೆಯಂತೆ…” ಏನಪ್ಪಾ ಇದು ಇದೆಂಥಾ ತಲೆಕೆಟ್ಟ ಆನೆಗಳ ಕಥೆ ಅನ್ನಬೇಡಿ. ಇದೇ ನಮ್ಮ ಭವ್ಯ ಭಾರತವೆಂಬ ದೇಶದ ಕಥೆ.
ಹೌದು… ಹತ್ತಾರು ಭಾಷೆಗಳನ್ನಾಡುವ ಭಾರತದಲ್ಲಿ ಒಗ್ಗಟ್ಟಿನ ಕಥೆ ಹೇಳಿ ಇಡೀ ದೇಶದ ಜನಕ್ಕೆಲ್ಲಾ ಹಿಂದೀ ಕಲಿಸುವ, ಕಲಿಯದಿದ್ದರೆ ಕೆಲಸವಿಲ್ಲ ಎಂಬ ನಿಬಂಧನೆ ಹೇರುವ, ಕಲಿತರೆ ಬಹುಮಾನ ನೀಡುವ ವ್ಯವಸ್ಥೆ ಇರುವ ಭಾರತದ ಕಥೆ. ದೇಶದ ಉದ್ದಗಲಕ್ಕಿರುವ ಭಾಷಿಕ ವೈವಿಧ್ಯತೆಗಳನ್ನು ಅಳಿಸುವಂತೆ ಭಾರತ ಸರ್ಕಾರ ನಡೆದುಕೊಳ್ಳುತ್ತಿರುವುದು ಆನೆಗಳ ಹುಚ್ಚುತನದಂತೆಯೇ ಇದೆ. (ಇಲ್ಲಿ ಆನೆಗಳನ್ನು ಹಿಂದೀಯೆಂದು, ಉಳಿದವನ್ನು ಉಳಿದ ನುಡಿಯಾಡುಗರೆಂದೂ ಬರೆದಿರುವುದಕ್ಕೆ ಅಷ್ಟು ಮಾತ್ರವೇ ಅರ್ಥ. ಒಂದು ಬಲಶಾಲಿ, ಇನ್ನೊಂದು ವೀಕು ಅಂತ ಅಲ್ಲಾ!)

ವೈವಿದ್ಯತೆಯಲ್ಲಿ ಏಕತೆ ಎಂಬ ಭಗವದ್ ಗೀತೆ

ಭಾರತದಲ್ಲಿ ಪದೇ ಪದೇ ಕೇಳಿ ಬರೋ ಮಾತು “ಈ ನಮ್ಮ ದೇಶ ನಾನಾ ಭಾಷೆ, ಸಂಸ್ಕೃತಿಗಳನ್ನು ಹೊಂದಿದೆ, ಅವುಗಳನ್ನೆಲ್ಲಾ ಹೊಂದಿದ್ದೂ ನಾವೊಂದು ದೇಶವಾಗಿರೋದು ಎಂಥಾ ಸೊಗಸು. ಇದನ್ನೇ ನಾವು ಹೆಮ್ಮೆಯಿಂದ “ವೈವಿಧ್ಯತೆಯಲ್ಲಿ ಏಕತೆ” ಅನ್ನೋದು…” ಹೀಗೆ. ಆದರೆ ಭಾರತ ಸರ್ಕಾರಕ್ಕಿರೋ ಉದ್ದೇಶಗಳು ಮಾತ್ರಾ ಇದಕ್ಕಿಂತ ಭಿನ್ನವಾಗಿದೆ. ಅದು ಈ “ವೈವಿಧ್ಯತೆಯಲ್ಲಿ ಏಕತೆ” ಎಂಬ ಭಗವದ್ಗೀತೇನಾ ಬಾಯಲ್ಲಿ ಹಾಡ್ ಹಾಡ್ತಾನೆ, ವೈವಿಧ್ಯತೆಯನ್ನು ಒಂದು ಶಾಪ ಅಂದ್ಕೊಂಡು ವಿವಿಧತೆಯನ್ನು ಅಳಿಸಿಹಾಕೋ ಬಗಲಲ್ಲಿನ ಚೂರಿಗಳಂಥಾ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಮಾಡ್ತಾನೆ ಇದೆ.

ಇಂದಿನ ಭಾರತದ ಭಾಷಾನೀತಿ

ಭಾರತ ಸರಕಾರ ಒಪ್ಪಿರೋ ಭಾಷಾನೀತಿಯಲ್ಲಿ ಹಿಂದೀ ಮತ್ತು ಇಂಗ್ಲೀಶುಗಳಿಗೆ ಜಾಗ ಮಾಡಿಕೊಡಲಾಗಿದೆ. ಅಂದರೆ ಭಾರತ ಸರ್ಕಾರದ ಅಧಿಕೃತ ಸಂಪರ್ಕ ಭಾಷೆ, ಆಡಳಿತಭಾಷೆ ಹಿಂದೀ & ಇಂಗ್ಲೀಶು. ೧೯೫೦ರಿಂದ ಈ ಎರಡನ್ನು ಅಧಿಕೃತ ಸಂಪರ್ಕ ಭಾಷೆಯನ್ನಾಗಿಸಿ, ೧೫ ವರ್ಷದ ನಂತರ ಹಿಂದಿಯೊಂದನ್ನೇ ಉಳಿಸಿಕೊಳ್ಳುವ ಯೋಚನೆ ಕೇಂದ್ರಸರ್ಕಾರಕ್ಕಿತ್ತು. ಹೀಗೆಂದೇ ಸಂವಿಧಾನದಲ್ಲೂ ಬರೆಯಲಾಯಿತು. ಆದರೆ ೧೯೬೫ರ ಸುಮಾರಿನ ತಮಿಳುನಾಡಿನ ಹಿಂದೀಹೇರಿಕೆ ವಿರೋಧಿ ಹೋರಾಟದಿಂದಾಗಿ ಹಾಗಾಗದೆ ಸದ್ಯಕ್ಕೆ ಎರಡೂ ನುಡಿಗಳನ್ನು ಉಳಿಸಿಕೊಳ್ಳಲಾಗಿದೆ. ಪ್ರತಿಯೊಂದು ರಾಜ್ಯವೂ ಹಿಂದಿಯನ್ನು ತಾನಾಗೇ ಏಕೈಕ ಸಂಪರ್ಕಭಾಷೆ ಎಂದು ಒಪ್ಪುವ ತನಕ ಮುಂದುವರೆಸುತ್ತೇವೆ ಎನ್ನಲಾಗಿದೆ. ಇಂಥಾ ಯೋಜನೆಗೆ ಬೆನ್ನೆಲುಬು “Indian official languages act”. ಇದರ ಹೆಸರು ಹೇಳ್ತಾ ಹೇಳ್ತಾನೇ "ನಮ್ಮ ಘನ ಸಂವಿಧಾನದ ಆಶಯದಂತೆ..." ಎಂದು ಪ್ರತಿಯೊಂದರ ಮೊದಲಲ್ಲೂ ಪೀಠಿಕೆ ಹಾಕಿ ಈ ವಿವಿಧತೆ ಅಳಿಸುವ ಕೆಲಸಕ್ಕೆ ಭಾರತ ಸರ್ಕಾರ ಮುಂದಾಗಿದೆ. ಹಿಂದಿಯನ್ನು ಭಾರತದ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಒತ್ತಾಯ, ಆಮಿಶ ಮತ್ತು ಮನವರಿಕೆಗಳ ಮೂಲಕ ಜಾರಿಮಾಡುವ ಯೋಜನೆ ಇದೆ.

ಹಿಂದೀ ಹರಡಲೊಂದು ನುಡಿ ಹಮ್ಮುಗೆ!

ಹಾಗಾದರೆ ರಾಜ್ಯಗಳನ್ನು ಒಪ್ಪಿಸುವುದು ಹೇಗೆ? ಅದಕ್ಕೆಂದೇ ಒಂದು ನುಡಿಹಮ್ಮುಗೆಯನ್ನು (language planning) ಭಾರತ ಸರ್ಕಾರ ರೂಪಿಸಿಕೊಂಡಿದೆ. ಅದಕ್ಕಾಗೆ ಒಂದು ಇಲಾಖೆಯನ್ನೂ ತೆರೆದಿದೆ. ಜೊತೆಯಲ್ಲೇ, ಆಗಿಂದಾಗ್ಗೆ ಸಂಸತ್ತಿನ ಇಪ್ಪತ್ತು ಸದಸ್ಯರ ಸಮಿತಿಯೊಂದನ್ನು ರಚಿಸಿ ಅದರ ಮೂಲಕ - ಹೇಗೆ ಹಿಂದಿಯನ್ನು ಆಡಳಿತದಲ್ಲಿ ಜಾರಿ ಮಾಡಲಾಗಿದೆ ಎನ್ನುವುದನ್ನು ಕಾಲದಿಂದ ಕಾಲಕ್ಕೆ ಸಮೀಕ್ಷೆ, ಅಧ್ಯಯನ ಮಾಡಿಸಿ, ಶಿಫಾರಸ್ಸುಗಳನ್ನು ರಾಷ್ತ್ರಪತಿಗಳಿಗೆ ಸಲ್ಲಿಸಿ, ಆ ಶಿಫಾರಸ್ಸುಗಳನ್ನು ಕಾಯ್ದೆ ಕಾನೂನುಗಳ ಮೂಲಕ ಜಾರಿ ಮಾಡುತ್ತಿದೆ. ಅಂದರೆ ಭಾರತ ಸರ್ಕಾರಕ್ಕೆ ಹಿಂದಿಯೊಂದನ್ನೇ ಭಾರತದ ಮೂಲೆಮೂಲೆಗಳಲ್ಲಿ ಜಾರಿ ಮಾಡುವ ಗುರಿಯಿರುವುದು ಅದರ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದೆ. ಮೇಲುನೋಟಕ್ಕೆ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ರಾಜ್ಯ ರಾಜ್ಯಗಳ ನಡುವಿನ ಸಂವಹನಕ್ಕಾಗಿ ಹಿಂದಿಯನ್ನು ಉತ್ತೇಜಿಸುವಂತೆ ತೋರುವ ಈ ಬೆಳವಣಿಗೆಗಳು ನಿಜಕ್ಕೂ ಭಾರತದ ವೈವಿಧ್ಯತೆಯನ್ನು ಅಳಿಸಿಹಾಕಲು ಮುಂದಾಗಿವೆ. ನಿಮ್ಮೊಡನೆ ಭಾರತ ಸರ್ಕಾರದ ಸಂಸತ್ ಸಮಿತಿ ನಡೆಸಿರುವ ಅಧ್ಯಯನ, ಅದರ ಶಿಫಾರಸ್ಸು ಮತ್ತು ಸರ್ಕಾರದ ಉದ್ದೇಶಗಳ ಬಗ್ಗೆ “Department of Official languages”ನ ಮಿಂಬಲೆಯಿಂದ ಹೆಕ್ಕಿ ತೆಗೆದ ದಾಖಲೆಗಳನ್ನು ಆಧರಿಸಿದ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ.

(ಮುಂದುವರೆಯುತ್ತದೆ…)

3 ಅನಿಸಿಕೆಗಳು:

ರಾಜು ಅಂತಾರೆ...

The great masses of the people... will more easily fall victims to a big lie than to a small one. - Adolf Hitler.

ಇದೆ ತತ್ವವನೆ ಇಂದು ಭಾರತ ಸರ್ಕಾರ ಅಳವಡಿಸಿಕೊಂಡಿದೆ. ಹಿಂದಿ ರಾಷ್ಟ್ರ ಬಾಷೆ, ಆ ಬಾಷೆಯೊಂದರಿಂದ ಮಾತ್ರ ರಾಷ್ಟ್ರೀಯತೆ ಸಾದ್ಯ ಎಂಬ ದೊಡ್ಡ ಸುಳ್ಳನು ಇಡೀ ದೇಶಕೆ ಸಾರುತಿದೆ. ಹಿಂದಿ ಬಲ್ಲವನು ರಾಷ್ಟ್ರಮಟ್ಟದ ವ್ಯಕ್ತಿ, ಅದನು ಕಲಿಯದವನು ಎಂತಹ ಬುದ್ದಿವಂತನಾದರು ಸ್ಥಳಿಯ ವ್ಯಕ್ತಿ ಎಂಬ ಅಬಿಪ್ರಾಯವನ್ನು ಮುಗ್ಧ ಜನರಲ್ಲಿ ಮೂಡಿಸಿದೆ.

ಬ್ಯಾಂಕ್, ಆದಾಯತೆರಿಗೆ ಇಲಾಖೆ, ಜೀವವಿಮಾ ನಿಗಮ ಮುಂತಾದ ಕೇಂದ್ರ ಸರ್ಕಾರಗಳ ಕಛೇರಿಗಳಲ್ಲಿ ಅಥವಾ ಟಿವಿ, ರೇಡಿಯೋದಿಂದ ಆಗುವ ಹಿಂದಿ ಹೆರಿಕಯಿಂದ ನಾವೇನು ಹಿಂದಿ ದಾಸರಗಿಲ್ಲ. ನಾವೆಲ್ಲರೂ ಆ ಭಾಷೆ ದಾಸರಾಗಿರುವುದು ಶಿಕ್ಷಣ ಕ್ಷೆತ್ರದಲಿರುವ ಹೇರಿಕೆದಿಂದ ಮಾತ್ರ. ಇವತ್ತು, ನಾವೆಲ್ಲರೂ ಶಾಲೆಗಳಲ್ಲಿ ಹಿಂದಿಯನ್ನು ಒಂದು ಬಾಷೆಯಾಗಿ ಕಲಿಯದೇ ಹೋದರೆ, ಬೇರಾವ ದಾರಿಯಲ್ಲಿ ಹೇರಿದರು ನಾವುಗಳು ಕಲಿಯುವುದಿಲ್ಲ ಅಥವಾ ಹೇರಿಕೊಳುವುದಿಲ್ಲ. ನಾವೆಲ್ಲ ಹಿಂದಿ ಬಾಷೆ ಹೇರಿಕೆಹಿಂದ ದೂರವಿರಬೇಕಾದರೆ, ಮತೊಮೆ ಗೋಕಾಕ್ ಚಳುವಳಿ ಎಂತಹ ಚಳುವಳಿ ಮಾಡಿ ಶಾಲೆಗಳಲ್ಲಿ ಬರೇ ಎರಡು ಬಾಷೆ (ಸ್ತಳಿಯ ಮತು ಇಂಗ್ಲಿಷ್) ಮಾತ್ರ ಇರುವಂತೆ ಮಾಡಬೇಕು. ಮೂರನೇ ಬಾಷೆ ಕಲಿಯಲೇಬೇಕು ಎಂದಿದರೆ, ಅದನು ತುಳು, ಕೊಂಕಣಿ, ಕೊಡವ, ತಮಿಳು, ತೆಲುಗು, ಮಲಯಾಳಂ ಈಗೆ ಅವರವರ ಇಷ್ತಾನಸೂರವಾಗಿ ಕಲಿಯುವುದು.

ಹಿಂದಿ ಆಳುವ ಬಾಷೆ, ಕನ್ನಡದಂತಹ ಉಳಿದವು ಆಲಿಕೊಳುವ ಬಾಷೆಗಲಾಗಬಾರದು.

Rajesh ಅಂತಾರೆ...

Anna hazare thara ondu upavasa satyagraha madidre hege??? should we let the imposition anymore??

Its seems that it is easy to motivate people to participate against corruption, but not against the much more important issue of language slavery issue. or may be my presumption.

Anonymous ಅಂತಾರೆ...

ನಿಜವಾಗಿಯೂ ಕನ್ನಡಿಗರಿಗೆ ಇದೊಂದು ಜಾಗೃತಿ ಹುಟ್ಟಿಸುವ ಲೇಖನ. ಇದಕ್ಕೆ ಅಪಾರ ಪ್ರಮಾಣದಲ್ಲಿ ಬೆಂಗಳೂರಿಗೆ ಹರಿದು ಬರುತ್ತಿರುವ ಹಿಂದೀ ಭಾಷಿಗರ ವಲಸೆಯೂ ಒಂದು ಮುಖ್ಯ ಕಾರಣ. ಕನ್ನಡ ಕಲಿಯುವ ಅವಶ್ಯಕತೆ ನಮಗಿಲ್ಲ ಹಿಂದಿ ನಮ್ಮ ರಾಷ್ಟ್ರಭಾಷೆ(?) ಬೇಕಾದರೆ ಅದನ್ನೇ ನೀವು ಕಲಿಯಿರಿ ಎಂದು ನಮಗೆ ಸವಾಲೊಡ್ಡುತ್ತಾರೆ. ಆಟೋ ಹತ್ತಿದರೆ ’ಕಿದರ್ ಜಾನಾ’ ಎನ್ನುವ ನಮ್ಮ ಬೆಂಗಳೂರಿನ ಆಟೋ ಚಾಲಕರು, ಬಸ್ ನಿರ್ವಾಹಕರು, ’ಶಾರ್ಟ್ ಕರ್ನಾ ಕ್ಯಾ?’ ಅನ್ನುವ ಕೇಶವಿನ್ಯಾಸಗಾರರೂ ಕೂಡಾ ಇದನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಮುದ್ರಿತವಾಗುತ್ತಿದ್ದ ಬ್ಯಾಂಕ್ ಚಲನ್ ಗಳು, ಅಂಚೆ ಕಛೇರಿಯ ದಾಖಲೆಗಳೂ ಕೂಡಾ ಮಾಯವಾಗುತ್ತಿವೆ. ಕೇಂದ್ರ ಸರಕಾರದ ಕಛೇರಿಗಳಲ್ಲಿ ಹಿಂದಿ ’ರಾಜಭಾಷೆ’ ಅನ್ನುವ ಅಭಿಯಾನವೊಂದು ನಡೆಯುತ್ತಿದೆ. ಒಟ್ಟಿನಲ್ಲಿ ನಮ್ಮ ಕನ್ನಡಕ್ಕೆ ತೀರ ಅಪಾಯಕಾರಿ ಆಗುವ ಎಲ್ಲಾ ಮುನ್ಸೂಚನೆಗಳೂ ಕಾಣುತ್ತಿವೆ. ನಮ್ಮ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಪರಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಂಡಲ್ಲಿ ಮಾತ್ರ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು.
ಬೊಂಬಾಯಿ, ಕಲಕತ್ತ, ಮದರಾಸು, ಡೆಲ್ಲಿ.. ಎಲ್ಲೆಂದರಲ್ಲಿ.. ಕನ್ನಡದ ಉಸಿರಾಡುವೆದೆಗಳಿರುವಲ್ಲಿ.. ಕನ್ನಡದ ಸತ್ವಗಳ ಬೀಜಗಳ ಚೆಲ್ಲಿ.. ತೇರ ಮಿಣಿ ಹರಿದಿರಲು ಹಿಡಿದುಕೊಳ್ಳಿರೋ ಅದನು ..ಎಂಬ ಕವಿವಾಣಿಯಂತೆ ನಾವಿಂದು ಕಾರ್ಯೋನ್ಮುಖರಾಗಬೇಕಿದೆ!!!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails