ನಮ್ಮ ಮೆಟ್ರೋದಲ್ಲಿ ಹಿಂದೀಗೆ ಸ್ಥಾನ ಕೊಟ್ಟಿರೋದ್ರು ಬಗ್ಗೆ ಕಳವಳ ವ್ಯಕ್ತಪಡಿಸಿ ಸಂಬಂಧಿಸಿದ "ನಮ್ಮ ಮೆಟ್ರೋ" ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದ ಕೆಲ ಓದುಗರು ಮೆಟ್ರೋದಿಂದ ಬಂದಿರೋ ಉತ್ತರಗಳನ್ನು ನೋಡಿ ದಂಗಾಗಿದ್ದಾರೆ ಗುರೂ! ಬಳಗದ ಜೊತೆ ನಮ್ಮ ಮೆಟ್ರೋ ಮೇಲಧಿಕಾರಿಗಳ ಮಿಂಚೆಯನ್ನು ಹಂಚಿಕೊಂಡಿರುವ ಈ ಗೆಳೆಯರ ಅನುಭವ ನಿಜಕ್ಕೂ ಸಾರ್ವಜನಿಕ ಸೇವೆಯಲ್ಲಿರುವವರ ಮನಸ್ಥಿತಿ ಹೀಗೂ ಇರಬಹುದಾ? ಎನ್ನುವ ಅನುಮಾನ ಹುಟ್ಟಿಸುವಂತಿದೆ.
ಉದ್ಧಟತನದ ಉತ್ತರಗಳು!
"ಕನ್ನಡದಲ್ಲಿ ನಿಮಗೆ ಸೇವೆ ಸಿಗುತ್ತಿರುವ ತನಕ ನಿಮಗೆ ಅತೃಪ್ತಿ ಇರಬಾರದು!
ಇನ್ಮುಂದೆ ನನಗೆ ನೀವು ಪತ್ರ ಬರೆಯೋ ಅಗತ್ಯವಿಲ್ಲ!
ಬೇಕಾದ್ರೆ ನ್ಯಾಯಾಲಯಕ್ಕೆ ಹೋಗಿ!
ಸಂವಿಧಾನದಲ್ಲಿ ಬರೆದಿರೋದ್ರು ಬಗ್ಗೆ ನಿಮ್ಮ ಕಾನೂನು ಸಲಹೆಗಾರರಿಂದ ಸಲಹೆ ಪಡ್ಕೊಂಡು ಸರಿಯಾಗಿ ತಿಳ್ಕೊಳ್ಳಿ !
ನಿಮ್ಮ ಹಿಂದೀ ದ್ವೇಷವನ್ನು ಬಿಡಿ!
ಹಿಂದೀ ದ್ವೇಷದ ಚಳವಳಿಯನ್ನು ಬಿಡಿ!
ಸ್ವಲ್ಪ ಸಹನಶೀಲತೆಯನ್ನು ಮೈಗೂಡಿಸಿಕೊಳ್ಳಿ!
ನಾವು ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ಸಾಧನಗಳಲ್ಲಿ ಒಂದಾದ ತ್ರಿಭಾಷಾಸೂತ್ರದ ನೀತಿಯನ್ನು ಅಳವಡಿಸಿಕೊಂಡಿದ್ದೇವೆ.
ಇಲ್ಲಿನ ಸೆಕ್ಯೂರಿಟಿ ಗಾರ್ಡ್ ಕನ್ನಡದಲ್ಲಿ ತರಬೇತಿ ಪಡೆದಿಲ್ಲ. ಅವನನ್ನು ಮಾತಾಡಿಸಿ ಅವನ ಕರ್ತವ್ಯಕ್ಕೆ ತೊಂದರೆ ಮಾಡಿದ್ದೀರಿ, ನಿಮ್ಮ ದೂರೇನಿದ್ದರೂ ಸಂಬಂಧಿಸಿದ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಹತ್ತಿರ ಮಾತಾಡಿಕೊಳ್ಳಿ"
ದೇಶದ ಏಕತೆಗಾಗಿ ಹಿಂದೀನಾ ಹಾಕಿದೀವಿ... ತೆಪ್ಪಗಿರಿ ಎನ್ನುವ ಧ್ವನಿಯಲ್ಲಿ ಹೀಗೆಲ್ಲಾ ಉತ್ತರ ಬರೆದಿರೋದು ಮೆಟ್ರೋ ಸಂಸ್ಥೆಯ ಯಾವುದೋ ಸಣ್ಣ ಸ್ತರದ ಅಧಿಕಾರಿಯಲ್ಲ... ಅದು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀ ಸಿವಸೈಲಂ ಅವರದ್ದು! ಅಬ್ಬಾ ಎಂತಹ ಸೌಜನ್ಯಾ ಅಲ್ವಾ? ಸಾಹೇಬರ ಉತ್ತರದ ಧಾಟಿಯನ್ನು ಬದಿಗಿಟ್ಟು ಅವರು ನೀಡಿರುವ ಕಾರಣಗಳತ್ತ ಕಣ್ಣು ಹಾಯಿಸಿದರೆ ಮುಖ್ಯವಾಗಿ ಹಿಂದೀ ಬಳಸಲು ಅವರು ನೀಡಿರುವ ಸಮರ್ಥನೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಬಗ್ಗೆ, ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರ ಹಣ ಹೂಡಿರುವ ಕಾರಣದಿಂದಾಗಿಯೂ, ದೇಶದ ಒಗ್ಗಟ್ಟಿಗಾಗಿಯೂ ಹಿಂದೀಯನ್ನು ಬಳಸಿದ್ದೇವೆ ಎಂದಿದ್ದಾರೆ. ನಮ್ಮ ನಾಡಿನಲ್ಲಿ ನಮ್ಮದಲ್ಲದ ಭಾಷೆ ಯಾಕೆ ಬಳಸಿದ್ದೀರಿ ಎಂದರೆ ಅದಕ್ಕೆ ಹಿಂದೀ ದ್ವೇಷ ಚಳವಳಿ ಎನ್ನುವ ಹೆಸರಿಡುವ ಅಧಿಕಾರವನ್ನು ಇವರಿಗ್ಯಾರು ಕೊಟ್ಟರೋ ಕಾಣೆವು! ಸುರಕ್ಷತಾ ಸಿಬ್ಬಂದಿಗೆ ಕನ್ನಡ ಬಾರದಿರುವುದನ್ನು ಸಮರ್ಥಿಸುತ್ತಾ ಅವರನ್ನು ಮಾತಾಡಿಸಿ ಕರ್ತವ್ಯಕ್ಕೆ ತೊಂದರೆ ಕೊಟ್ಟಿದ್ದೀರಿ ಎಂದು ಪ್ರತಿ ದೂರುವುದರ ಹಿಂದೆ ಹೇಗಾದರೂ ಸರಿ, ಬಾಯಿ ಮುಚ್ಚಿಸುವ ಮನಸ್ಥಿತಿಯಲ್ಲದೆ ಬೇರೇನೂ ಇದ್ದಂತಿಲ್ಲ... ನಾಳೆ ಯಾವುದಾದರೂ ಅಪಾಯಕಾರಿ ಸನ್ನಿವೇಶವುಂಟಾದರೆ ನಾವು ಸೆಕ್ಯುರಿಟಿಗೆ ತಿಳಿಸಬೇಕೋ ಬೇಡವೋ? ಕನ್ನಡ ಬಾರದವರಿಗೆ ಹೇಗೆ ತಿಳಿಸಬೇಕು? ಎನ್ನುವ ಬಗ್ಗೆ ಕಾಳಜಿಯಾಗಲೀ ಆಲೋಚನೆಯಾಗಲೀ ಇವರುಗಳಿಗೆ ಇದ್ದಂತಿಲ್ಲ!
ತ್ರಿಭಾಷಾ ಸೂತ್ರ ರಾಷ್ಟ್ರೀಯ ನೀತಿಯೇ? ಮೆಟ್ರೋಗೆ ಅನ್ವಯಿಸುವುದೇ?
ಭಾರತದ ಸಂವಿಧಾನದ ಭಾಗ XVIIರಲ್ಲಿ ಭಾಷಾನೀತಿಯ ಬಗ್ಗೆ ಹೇಳಲಾಗಿದೆ. ಇದರಂತೆ ಹಿಂದೀ ಮತ್ತು ಇಂಗ್ಲೀಷುಗಳನ್ನು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳನ್ನಾಗಿ ಘೋಷಿಸಲಾಗಿದೆ. (ಇಂಗ್ಲೀಷು ಸೇರಿಕೊಂಡ/ ಇಂದಿಗೂ ಉಳಿದುಕೊಂಡ ಕಥನ ಬೇರೆಯದೇ ಇದೆ). ಇದರ ಅಂಗವಾಗೇ ೧೯೬೭ರಲ್ಲಿ ರೂಪುಗೊಂಡು ೧೯೬೮ರಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರವಾದದ್ದೇ "ಆಡಳಿತ ಭಾಷಾ ನಿರ್ಣಯ, ೧೯೬೮". ಇದರ ಅಂಗವಾಗಿಯೇ "ತ್ರಿಭಾಷಾ ಸೂತ್ರ" ರೂಪುಗೊಂಡಿತು. ಮೂಲತಃ ಕೇಂದ್ರಸರ್ಕಾರಿ ನೌಕರಿಯ ಪ್ರವೇಶ ಪರೀಕ್ಷೆಗಳನ್ನು ಹಿಂದೀ/ ಇಂಗ್ಲೀಷುಗಳಲ್ಲಿ ಮಾತ್ರಾ ನಡೆಸುವುದಕ್ಕೆ ಅನೇಕ ಹಿಂದೀಯೇತರ ರಾಜ್ಯಗಳು ವಿರೋಧ ಸೂಚಿಸಿ, ಹೋರಾಟ ನಡೆಸಿದ್ದರಿಂದ ಹುಟ್ಟಿಕೊಂಡ ರಾಜೀಸೂತ್ರ "ತ್ರಿಭಾಷಾ ಸೂತ್ರ" ಎಂದರೆ ತಪ್ಪಾಗಲಾರದು. ಕೇಂದ್ರಸರ್ಕಾರಿ ನೌಕರಿಗಳ ಪರೀಕ್ಷೆಗಳನ್ನು ಎಂಟನೇ ಪರಿಚ್ಛೇಧದಲ್ಲಿ ಪಟ್ಟಿ ಮಾಡಿರುವ ಭಾಷೆಗಳಲ್ಲೂ ನಡೆಸಲು ಅವಕಾಶ ನೀಡುವ ಈ ನಿರ್ಣಯವು "ರಾಜ್ಯಸರ್ಕಾರಗಳ ಜೊತೆ ಸಮಾಲೋಚಿಸಿ" ರಾಷ್ಟ್ರೀಯ ಏಕತೆಯನ್ನು ಮೂಡಿಸಲು ತ್ರಿಭಾಷಾ ಸೂತ್ರವನ್ನು ಜಾರಿಮಾಡಬೇಕು ಎಂದು ಹೇಳಿದೆ. ತ್ರಿಭಾಷಾ ಸೂತ್ರದ ಅನ್ವಯವಾಗಿ ಹಿಂದೀ ಭಾಷಿಕ ಪ್ರದೇಶಗಳ ಮಕ್ಕಳು ಹಿಂದೀ - ಇಂಗ್ಲೀಷ್ ಜೊತೆಯಲ್ಲಿ ಇನ್ನೊಂದು ಭಾರತೀಯ ಭಾಷೆಯನ್ನು (ವಿಶೇಷವಾಗಿ ದಕ್ಷಿಣ ಭಾರತೀಯ ಭಾಷೆಯನ್ನು) ಕಲಿಯತಕ್ಕದ್ದು ಮತ್ತು ಅಂತೆಯೇ ಹಿಂದೀಯೇತರ ರಾಜ್ಯಗಳ ಮಕ್ಕಳು ರಾಜ್ಯಭಾಷೆ - ಇಂಗ್ಲೀಷ್ - ಹಿಂದೀಯನ್ನು ಕಲಿಯತಕ್ಕದ್ದು ಎನ್ನಲಾಗಿದೆ. ಈ ನಿರ್ಣಯದಲ್ಲಿ ಕೇಂದ್ರಸರ್ಕಾರ ಹಣ ಹೂಡುವ ಸಾರ್ವಜನಿಕ ಯೋಜನೆಗಳಲ್ಲಿ ತ್ರಿಭಾಷಾ ಸೂತ್ರ ಇರಬೇಕು ಎಂದು ಎಲ್ಲಿದೆಯೋ ಹುಡುಕಿದರೂ ಸಿಗುತ್ತಿಲ್ಲಾ ಗುರೂ!
ಕೇಂದ್ರದ ಒಂದು ೨,೦೦೦ ಕೋಟಿಗೆ ಹಿಂದೀ, ರಾಜ್ಯದ ವಾರ್ಷಿಕ ೮೦,೦೦೦ ಕೋಟಿಗೆ?
ಕೇಂದ್ರಸರ್ಕಾರ ಇಂಥದ್ದೊಂದು ಸೂಚನೆಯನ್ನು ಮೆಟ್ರೋಗೆ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೆಟ್ರೋದ ಶ್ರೀ ಸಿವಸೈಲಂ ಅವರು ಮಾತ್ರಾ, ತಾವು ಭಾರತದ ಏಕತೆಯ ಹರಿಕಾರರೆನ್ನುವಂತೆ ಮಾತಾಡುತ್ತಾ ಕನ್ನಡಿಗರಿಗೆ ಸಹಿಷ್ಣುತೆಯನ್ನು ಬೋಧಿಸುತ್ತಿರುವುದನ್ನು ಕಂಡಾಗ ವಿಪರ್ಯಾಸವೆನ್ನಿಸುತ್ತದೆ. ಆದರೂ ಮೆಟ್ರೋ ಯೋಜನೆಯಲ್ಲಿ ಸುಮಾರು ೩೦% ಹೂಡಿಕೆ ಹೊಂದಿರುವ ಕಾರಣದಿಂದಲೇ ಇಲ್ಲಿ ಹಿಂದೀ ಇರಬೇಕು ಎನ್ನುವುದಾದರೆ ಪ್ರತಿವರ್ಷ ಸುಮಾರು ೮೦,೦೦೦ ಕೋಟಿ ತೆರಿಗೆಯನ್ನು ಕರ್ನಾಟಕದಿಂದ ಸಂಗ್ರಹಿಸುವ ಕೇಂದ್ರಕ್ಕೆ ಕೇಂದ್ರದ ಆಡಳಿತದಲ್ಲಿ ಕನ್ನಡ ಇರಬೇಕೆಂಬುದು ಅರಿವಾಗದೇ? ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ "ವಿಶ್ವಸಂಸ್ಥೆಯ ಭಾಷಾನೀತಿ"ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ? ಇಷ್ಟಕ್ಕೂ ಕೇಂದ್ರಸರ್ಕಾರಿ ಕಛೇರಿಗಳಾದ ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತ್ರಿಭಾಷಾ ಸೂತ್ರ ಎಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆ? ಪಾಸ್‍ಪೋರ್ಟ್ ಅರ್ಜಿ, ಜೀವವಿಮೆ, ಬ್ಯಾಂಕ್ ಚೆಕ್ಕುಗಳಲ್ಲಿ ತ್ರಿಭಾಷೆ ಯಾಕಿಲ್ಲಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವವರಾದರೂ ಯಾರು ಗುರೂ?!
ಕೊನೆಹನಿ: ಇರುವ ಗ್ರಾಹಕ ಒಬ್ಬನಾದರೂ ಕೂಡಾ, ಆ ದೂರಿನ ದನಿ ಒಂಟಿಯಾಗಿದ್ದರೂ ಕೂಡಾ ಸೌಜನ್ಯದಿಂದ ಉತ್ತರಿಸುವುದನ್ನು, ದೂರು ಕೊಟ್ಟವರನ್ನೇ ದೂರುವುದನ್ನು ಬಿಡುವುದನ್ನೂ ಮೆಟ್ರೋ ಅಧಿಕಾರಿಗಳಿಗೆ ಸರ್ಕಾರ ಕಲಿಸಿಕೊಟ್ಟೀತೆ? ಕರ್ನಾಟಕ ರಾಜ್ಯಸರ್ಕಾರದ ಕಚ್ಚದ, ಭುಸುಗುಟ್ಟದ "ಕನ್ನಡ ಅಭಿವೃದ್ಧಿ ಪ್ರಾಧಿಕಾರ"ವೆಂಬ ಕನ್ನಡ ಕಾವಲು ಸರ್ಪ ಈಗಾದರೂ ಭುಸುಗುಟ್ಟೀತೇ?