ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರರು ಕಲಿಕಾ ಮಾಧ್ಯಮದ ಬಗ್ಗೆ ಒಂದೊಳ್ಳೇ ಹೇಳಿಕೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆಯಾಗಬೇಕು ಎನ್ನುವ ಅವರ ಹೇಳಿಕೆ ಸರಿಯಾಗೇ ಇದೆ. ಕರ್ನಾಟಕ ಸರ್ಕಾರವು ನಾಡಿನ ಕಲಿಕಾ ವ್ಯವಸ್ಥೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿ, ಸರಿಯಾದ ವ್ಯವಸ್ಥೆ ರೂಪಿಸುವಲ್ಲಿ ತನ್ನ ಬದ್ಧತೆಯನ್ನು ತೋರ್ಪಡಿಸಬೇಕಾಗಿದೆ.
ಕಲಿಕಾ ಮಾಧ್ಯಮ ಮತ್ತು ನುಡಿ
‘ಕಲಿಕಾ ಮಾಧ್ಯಮ ತಾಯ್ನುಡಿಯಲ್ಲಿರಬೇಕಾದ್ದು ಸರಿಯಾದ್ದು ಮತ್ತು ಒಳ್ಳೆಯದು’ ಎನ್ನುವುದು ಸಹಜವೂ ಸತ್ಯವೂ ಆದದ್ದಾಗಿದ್ದರೂ ಕೂಡಾ... ಈ ನಮ್ಮ ನಾಡಿನಲ್ಲಿ ಆ ಮಾತು ಹೇಳುವುದೂ, ಕೇಳುವುದೂ ಆದಾಗ ಅದು ಒಂದು ರೀತಿಯಲ್ಲಿ ಅವಾಸ್ತವಿಕ ಮತ್ತು ಕಾರ್ಯಸಾಧುವಲ್ಲದ್ದು ಎನ್ನುವ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ವಾಸ್ತವವೆಂದರೆ ಇಂದಿಗೂ ನಮ್ಮ ನಾಡಿನಲ್ಲಿ ನೂರಕ್ಕೆ ಎಂಬತ್ತೈದರಷ್ಟು ಮಕ್ಕಳಿಗೆ ಶಿಕ್ಷಣವು ಕನ್ನಡ ಮಾಧ್ಯಮದಲ್ಲೇ ಸಿಗುತ್ತಿದೆ. ಹೀಗಿರುವಾಗ ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲಾ ಹಂತದ ಕಲಿಕೆಯನ್ನು ಸರ್ಕಾರವು ಕನ್ನಡದಲ್ಲೇ ದೊರಕಿಸಿಕೊಡಬೇಕಾದ್ದು ಸರ್ಕಾರದ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಖಚಿತವಾದ ಕ್ರಮಕ್ಕೆ ಮುಂದಾಗಲಿ.
ಕಿಂದರಿ ಊದಿದ ಕಂಬಾರರು...
ಹೀಗಿರುವಾಗ ಸರ್ಕಾರವು ಇತ್ತೀಚಿಗೆ ನಿಧಾನವಾಗಿ ಕನ್ನಡ ಮಾಧ್ಯಮದಿಂದ ದೂರ ಸರಿಯುತ್ತಿರುವ ನಾಡಜನರನ್ನು ಮತ್ತೆ ತಾಯ್ನುಡಿ ಕಲಿಕೆಯತ್ತ ಸೆಳೆಯುವ ಕೆಲಸ ಮಾಡಬೇಕಾಗಿದೆ. ಸಮಾನ ಶಿಕ್ಷಣ ಮತ್ತು ತಾಯ್ನುಡಿ ಶಿಕ್ಷಣ ಎನ್ನುವುದನ್ನು ಸಾಕಾರಗೊಳಿಸುವತ್ತ ಸರ್ಕಾರ ಯೋಜಿಸಿ ಕಾರ್ಯೋನ್ಮುಖವಾಗಬೇಕಾಗಿದೆ. ಆದರೆ ಅಕ್ರಮ ಇಂಗ್ಲೀಶ್ ಶಾಲೆಗಳ ಬಗ್ಗೆ ಕಠಿಣ ಕ್ರಮಕ್ಕೆ ಇಂದಿನವರೆಗೂ ಮುಂದಾಗಿಲ್ಲ ಎನ್ನುವ, ಭಾಷಾ ಮಾಧ್ಯಮದ ವಿಷಯವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಮೊಕದ್ದಮೆಯ ವಿಷಯವಾಗಿ ರಾಜ್ಯಸರ್ಕಾರವು ಅಸಡ್ಡೆ ತೋರುತ್ತಿದೆಯೆನ್ನುವ ಪತ್ರಿಕಾ ವರದಿಗಳನ್ನು ಗಮನಿಸಿದಾಗ ಕಂಬಾರರ ಹೇಳಿಕೆಗಳು ಸರ್ಕಾರವೆನ್ನುವ ಕೋಣನ ಮುಂದೆ ಊದುತ್ತಿರುವ ಕಿಂದರಿಯೇನೋ ಎನ್ನಿಸುತ್ತಿದೆ ಗುರೂ!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!