ಹಿಂದೀ ಬಳಸ್ದಿದ್ರೆ ಪ್ರತಿಭಟನೆ! ಕನ್ನಡ ಬಳಸ್ದಿದ್ರೆ?


ತಕ್ಕಳಪ್ಪಾ! ನಿನ್ನೆಯ (೨೮.೦೩.೨೦೧೨) ಉದಯವಾಣಿಯ ಮುಂಪುಟದಲ್ಲಿ ಈ ಸಕತ್ ಸುದ್ದಿ ಬಂದಿದೆ! ರಾಜ್ಯದ ಮೇಲುಸ್ತುವಾರಿಕೆ ನಡೆಸೋಕೆ ಅಂತಾನೆ ಕೇಂದ್ರಸರ್ಕಾರದಿಂದ ನೇಮಕವಾಗೋ "ರಾಜ್ಯಪಾಲ"ರೆನ್ನುವ ಹುದ್ದೆಯೇ ಬೇಕೋ ಬೇಡವೋ ಅನ್ನೋ ಚರ್ಚೇನ ಬದಿಗಿಟ್ಟು, ಸದ್ಯಕ್ಕೆ ಮೊನ್ನೆಮೊನ್ನೆ ಉತ್ತರಾಖಂಡದ ಶಾಸನಸಭೆಯಲ್ಲಿ ನಡೆದ ಒಂದು ಘಟನೆ ಸುತ್ತಾ ಮಾತಾಡೋಣ, ಗುರೂ!

ಹಿಂದೀ ಮಾತಾಡದೆ ಹೋದ್ರೆ ಅಲ್ಲಿ ತಪ್ಪಂತೆ! ಆದರೆ ಇಲ್ಲಿ?

ರಾಜ್ಯಪಾಲರಾಗಿ ಉತ್ತರಾಖಂಡ ರಾಜ್ಯಕ್ಕೆ ಹೋಗಿರುವ ಕರ್ನಾಟಕದ ಶ್ರೀಮತಿ ಮಾರ್ಗರೆಟ್ ಆಳ್ವಾ ಅವರು ಇಂಗ್ಲೀಷಿನಲ್ಲಿ  ಭಾಷಣ ಮಾಡಿದಾಗ, ಅವರನ್ನು ಹಿಂದೀಲೆ ಮಾತಾಡಬೇಕೆಂದು ಒತ್ತಾಯಿಸಿದ ಶಾಸಕರಿಗೆ ಇವರು `ನನಗೆ ಹಿಂದೀ ಬರಲ್ಲ, ನಾನು ದಕ್ಷಿಣ ಭಾರತದಿಂದ ಬಂದಿದ್ದು...' ಅಂದಿರೋದು ದೊಡ್ಡ ರಾಷ್ಟ್ರೀಯ ಅಪಮಾನದ ಹಾಗೆ ಕಂಡು "ಗೋ ಬ್ಯಾಕ್" ಅಂತಾ ಕೂಗುದ್ರಂತೆ. ಉತ್ತರಖಂಡದಲ್ಲಿ ಹೀಗೆ ಪ್ರತಿಭಟನೆ ಮಾಡಿದೋರು ಭಾರತ ಜನತಾ ಪಕ್ಷದ ಶಾಸಕರು ಅನ್ನೋ ಸುದ್ದಿ ನೋಡಿದಾಗ ನೆನೆಪಾಗಿದ್ದು... ೨೦೦೮ರಲ್ಲಿ ಕರ್ನಾಟಕದ ಸದನದಲ್ಲಿ ಇದೇ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದ ಶ್ರೀ ಡೆರಿಕ್ ಪ್ಹುಲಿನ್ ಫಾ ಅವರು 'ನನಗೆ ಕನ್ನಡ ಬರುತ್ತೆ, ಆದರೂ ಮಾತಾಡಲ್ಲಾ" ಅಂದಿದ್ದ ಘಟನೆ. ಆವತ್ತು ಇಲ್ಲಿನ ಬಿಜೆಪಿ ಜನಕ್ಕೆ ಅವಮಾನ ಆಗಿರಲಿಲ್ವಾ? ಅನ್ಸಲ್ವಾ ಗುರೂ! ಹಿಂದೆ ಮಹಾರಾಷ್ಟ್ರದಲ್ಲಿ ಕೆಲಶಾಸಕರು ಅಬುಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು, ಹಿಂದೀಲಿ ಪ್ರಮಾಣವಚನ ತೊಗೊಂಡಾಗ ಯಾಕೋ ಬಿಜೆಪಿಯವರು ಅಬುಅಜ್ಮಿನ ಖಂಡಿಸದೆ ಸುಮ್ಕಿದ್ರಲ್ಲಾ? ಹಿಂದೀ ಬಳಸದಿದ್ರೆ ಮಾತ್ರಾ ಅಪಮಾನ, ಆದ್ರೆ ಮಹಾರಾಷ್ಟ್ರದಲ್ಲಿ ಮರಾಟಿ, ಕರ್ನಾಟಕದಲ್ಲಿ ಕನ್ನಡ ಬಳಸದಿದ್ರೂ ಓಕೆ ಅಂತಿರಬಹುದು!

ನಮ್ಮ ಕರ್ನಾಟಕದಲ್ಲಿ ಘನತೆವೆತ್ತ ರಾಜ್ಯಪಾಲರು ಇಂಗ್ಲೀಷಲ್ಲಿ ಭಾಷಣ ಮಾಡಿದಾಗ ಆಡಳಿತ ನಡುಸ್ತಿರೋ ಬಿಜೆಪಿಯವರು ‘ಕನ್ನಡದಲ್ಲಿ ಮಾತಾಡಿ’ ಅಂತ ಯಾಕೆ ಪ್ರತಿಭಟಿಸಲ್ಲ? ಅವರು ಇಲ್ಲಿ ಕನ್ನಡದಲ್ಲಿ ಭಾಷಣ ಮಾಡ್ತಿಲ್ಲಾ.. ಗೋ ಬ್ಯಾಕ್ ಅಂತಾ ನಮ್ಮೂರಿನ ರಾಷ್ಟ್ರೀಯ ಪಕ್ಷಗಳು ಎಂದಾದರೂ ದನಿ ಎತ್ತಿದ್ದು ಇದೆಯಾ ಗುರೂ!! ಹೋಗ್ಲೀ... ಇದೇ ಉತ್ತರದ ದೊಡ್ಡಜನರು ನಮ್ಮೂರಿಗೆ ಬಂದು  "ಭಾರತದ ಏಕತೆಗಾಗಿ ಹಿಂದೀ ಕಲೀರಿ, ಉರ್ದು ಕಲೀರಿ, ಸಂಸ್ಕೃತ ಕಲೀರಿ... ಕಲೀರಿ" ಅಂತಾ ಪುಗಸಟ್ಟೆ ಉಪದೇಶ ಕೊಡ್ತಾರಲ್ಲಾ? ಆಗೆಲ್ಲಾ ರಾಷ್ಟ್ರೀಯ ಪಕ್ಷದ ಶಾಸಕರು ಸುಮ್ಮನೆ ಯಾಕಿರ್ತಾರೆ? ಓ... "ಹಿಂದೀ ನಾಡಿಗೆ ಹೋದಾಗ ಹಿಂದೀಯವರಲ್ಲದೆ ಇದ್ದೋರೂ ಹಿಂದೀ ಮಾತಾಡಬೇಕು, ಆದರೆ ಕನ್ನಡನಾಡಿಗೆ ಬಂದವರು ಕನ್ನಡದಲ್ಲೇ ಮಾತಾಡಬೇಕು ಅನ್ನೋ ಕಟ್ಟಳೆ ಇರಬಾರದು" ಅನ್ನೋದು ರಾಷ್ಟ್ರೀಯ ಪಕ್ಷದ ನಿಲುವಿರಬಹುದು.

ಕೊನೆಹನಿ: ಬಹುಶಃ ಉತ್ತರಾಖಂಡದವರಿಂದ ಸ್ಫೂರ್ತಿ ಪಡೆದು ನಮ್ಮ ರಾಜ್ಯದ ಬಿಜೆಪಿಯೋರೂ, ನಾಳೆ ಇಲ್ಲಿನ ರಾಜ್ಯಪಾಲರು ಇಂಗ್ಲೀಷಿನಲ್ಲಿ ಭಾಷಣ ಮಾಡಿದರೆ, "ಹಿಂದೀಲೆ ಭಾಷಣ ಮಾಡಿ, ಇಲ್ದಿದ್ರೆ ಅದು ರಾಷ್ಟ್ರೀಯ ಅವಮಾನ" ಅಂದ್ರೂ ಅನ್ನಬಹುದೇನೋ!

ರಾಷ್ಟ್ರೀಯ ಜಲನೀತಿಗೆ ಆಗ್ರಹಿಸಲಿ ರಾಜ್ಯಸರ್ಕಾರ!


(ಫೋಟೊ: http://www.mapsofindia.com/maps/india/drainage-river-basins.html)
ಕಾವೇರಿ ನೀರು ಬೇಕು ಎಂದು ತಮಿಳುನಾಡು ಮತ್ತೊಮ್ಮೆ ಸುಪ್ರಿಂಕೋರ್ಟಿಗೆ ದೂರಲು ಮುಂದಾಗಿದೆ. ಕರ್ನಾಟಕ ನ್ಯಾಯಾಧಿಕರಣದ ತೀರ್ಪಿನಂತೆ, ಮೇ ಮತ್ತು ಜೂನ್ ತಿಂಗಳುಗಳಲ್ಲಿ ತಮಿಳುನಾಡಿಗೆ ಒಂದಿಷ್ಟು ನೀರು ಬಿಡಬೇಕಾಗಿದೆ. "ಈಗಲೇ ಅವರು ನೀರು ಖರ್ಚು ಮಾಡ್ತಿದಾರೆ, ಹಾಗಾಗಿ ನಾಲ್ಕು ಜಲಾಶಯಗಳ ನೀರನ್ನು ನಮಗೆ ಬಿಡಲು ಕಾಯ್ದಿರಿಸಿಕೊಳ್ಳಲು ಸೂಚಿಸಿ" ಎಂಬುದು ದೂರಿನ ಸಾರಾಂಶ ಎನ್ನುತ್ತಿದೆ, ವಿಜಯಕರ್ನಾಟಕದಲ್ಲಿ ದಿ.೨೫.೦೩.೨೦೧೨ರಲ್ಲಿ  ಪ್ರಕಟವಾಗಿರುವ ವರದಿ. ಇದಕ್ಕೆ ಕರ್ನಾಟಕವೂ ಸರಿಯಾದ ಉತ್ತರ ನೀಡಲಿದೆಯಂತೆ. ಗಮನಿಸಿ ನೋಡಿದರೆ ನದಿನೀರು ಹಂಚಿಕೆ ಸಮಸ್ಯೆ ತೀವ್ರವಾಗಿರುವುದು ಒಂದೇ ರಾಜ್ಯದ ಒಳಗಿನ ಪ್ರದೇಶಗಳ ನಡುವೆಯಲ್ಲ! ಅದು ನದಿಯೊಂದು ಒಂದಕ್ಕಿಂತ ಹೆಚ್ಚು ರಾಜ್ಯಗಳ ನಡುವೆ ಹರಿಯುವಾಗ ಮಾತ್ರಾ! ಏನಿದಕ್ಕೆ ಪರಿಹಾರ? 

ಪರಿಹಾರವೇನು?

ಭಾರತ ಅನ್ನೋದು ನಿಜವಾಗಲೂ ಒಂದು ಭಾರತವಲ್ಲ! ಇಲ್ಲಿ ವೈವಿಧ್ಯತೆಯೇ ಒಂದು ಸೊಬಗಾಗಿದೆ. ಪ್ರಾಂತ್ಯಗಳು  ಭೌಗಳಿಕವಾಗಿ ಭಿನ್ನ ಭಿನ್ನವಾಗಿರುವಂತೆ, ರಾಜ್ಯಗಳ ಗಡಿಗಳು ಭಾಷಾ ಆಧಾರಿತವಾಗಿವೆ. ಹೀಗೆ ಭಿನ್ನತೆ ಇರುವುದನ್ನು ಶಾಪ ಎಂದೆಣಿಸುವ ಜನರಿಗೆ ನದಿನೀರು ಹಂಚಿಕೆಯ ವಿವಾದಗಳನ್ನು ಕಂಡಾಗ ಮೇಲಿನ ನಕ್ಷೆಯಂತೆ ರಾಜ್ಯ ವಿಂಗಡನೆಯಾಗಬೇಕಿತ್ತು ಅನ್ನಿಸಿದರೆ ಅಚ್ಚರಿಯಿಲ್ಲ! ವಾಸ್ತವವಾಗಿ ಈಗ ನದಿನೀರು ಹಂಚಿಕೆಯ ಸಮಸ್ಯೆಯಿದೆ ಅಂತಾ ನಡಿಪಾತ್ರದಂತೆ ಗಡಿ ಮಾಡಬೇಕೆಂದುಕೊಂಡರೆ, ನಾಳೆ ಭಾಷೆಯ ಸಮಸ್ಯೆ, ಗಡಿ ಸಮಸ್ಯೆ ಆಡಳಿತದ ಸಮಸ್ಯೆ ಎಂದೆಲ್ಲಾ ಬಂದಾಗ ಅವುಗಳಂತೆ ರಾಜ್ಯರಚನೆ ಆಗಬೇಕು ಎನ್ನಿಸೀತು! ಮತ್ತೇನು ಇದಕ್ಕೆ ಪರಿಹಾರ? ರಾಜ್ಯಗಳು ಪರಸ್ಪರ ಕಿತ್ತಾಡಬಾರದು ಎನ್ನುವ ಆಶಯ ಸರಿಯಾದದ್ದೇ. ಆದರೆ ತಮ್ಮ ನಾಡಿನ ಪ್ರಜೆಗಳ ಹಿತಕಾಪಾಡಲು ಒಂದೊಂದು ರಾಜ್ಯ ಮುಂದಾಗುವಾಗಲೂ ನೆರೆಯವರೊಡನೆ ಇಂತಹ ತಿಕ್ಕಾಟ ಸಹಜವೇ ಆಗಿದೆ. ರಾಜ್ಯಗಳು ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವುದು ಭಯಂಕರ ಆಶಾವಾದ ಅಷ್ಟೇ. ತಮಿಳುನಾಡು ತನ್ನ ಜನರ ಅನುಕೂಲಕ್ಕೆ ಬೇಕಿರುವಂತೆ ದನಿ ಎತ್ತುವುದು ಸಹಜವೂ ಸರಿಯೂ ಆದುದಾಗಿದೆ. ಅಂತೆಯೇ, ಕರ್ನಾಟಕವೂ ಕನ್ನಡಿಗರ ಹಿತ ಕಾಪಾಡಲು  ದನಿ ಎತ್ತಬೇಕಿರುವುದು ಕೂಡಾ ಸರಿಯಾಗಿದೆ. ಹೀಗೆಂದ ಮಾತ್ರಕ್ಕೆ ರಾಜ್ಯಗಳು ಯುದ್ಧ ಮಾಡಿಬಿಡಬೇಕಾಗಿಲ್ಲ! ಮತ್ತು ಇದರಿಂದಾಗಿ ದೇಶದ ಒಗ್ಗಟ್ಟು ಅಳಿಸಿಹೋಗಬೇಕು ಎನ್ನುವುದೂ ಅಲ್ಲ!

ಬೇಕು ರಾಷ್ಟ್ರೀಯ ಜಲನೀತಿ

ಸರಿಯಾದ ವೈಜ್ಞಾನಿಕವಾದ ಸೂತ್ರಗಳನ್ನು ಬಳಸಿ ರೂಪಿಸುವ ನೀತಿಗಳು ಮಾತ್ರವೇ ಅಂತರರಾಜ್ಯ ಸಮಸ್ಯೆಗಳನ್ನು  ನ್ಯಾಯಯುತವಾಗಿ ಬಗೆಹರಿಸಬಲ್ಲವಾಗಿವೆ. ಅಂತರರಾಜ್ಯ ನದಿ ನೀರು ಹಂಚಿಕೆಯನ್ನು ಹೀಗೆ ರೂಪುಗೊಳ್ಳುವ ರಾಷ್ಟ್ರೀಯ ಜಲನೀತಿಯ ಆಧಾರದ ಮೇರೆಗೆ ರೂಪಿಸಬೇಕಾಗಿದೆ. ದುರಂತವೆಂದರೆ ಭಾರತದಲ್ಲಿ ಇಂತಹ ಒಂದು ಸರಿಯಾದ ಜಲನೀತಿಯೇ ಇಲ್ಲದಿರುವುದು. ಕಾವೇರಿ ನ್ಯಾಯಾಧಿಕರಣವಿರಲಿ, ಕೃಷ್ಣಾ ನದಿ ನೀರು ಹಂಚಿಕೆಯ ನ್ಯಾಯಧಿಕರಣವಿರಲಿ, ಕಳಸ ಬಂಡೂರ ನಾಲೆಗಳ ಮಹದಾಯಿ ನದಿನೀರು ಹಂಚಿಕೆಯಿರಲಿ...  ಕರ್ನಾಟಕಕ್ಕೇ ಸದಾ ಅನ್ಯಾಯವೇ ಆಗುತ್ತಿದೆ  ಎನ್ನುವ ಭಾವನೆ ನಮ್ಮಲ್ಲಿ ಮೂಡದೆ ಇರಬೇಕಾದರೆ ಪಾರದರ್ಶಕವೂ ನ್ಯಾಯಯುತವಾಗಿಯೂ ಇರುವ ರಾಷ್ಟ್ರೀಯ ಜಲನೀತಿಯೊಂದು ರೂಪುಗೊಳ್ಳಬೇಕು. "ಇಂತಹ ರಾಷ್ಟ್ರೀಯ ಜಲನೀತಿಯನ್ನು ಮೊದಲು ರೂಪಿಸೋಣ, ಆಮೇಲೆ ನದಿ ಹಂಚಿಕೆಯ ನ್ಯಾಯ ವಿತರಣೆಯಾಗಲಿ... ಅಲ್ಲಿಯತನಕ ಈ ನ್ಯಾಯಾಧಿಕರಣದ ತೀರ್ಪುಗಳನ್ನು ಒಪ್ಪಲಾಗದು" ಎನ್ನುವ ನಿಲುವನ್ನು ರಾಜ್ಯಸರ್ಕಾರ ಗಟ್ಟಿಯಾಗಿ ಹೇಳಬೇಕಾಗಿದೆ... ಇಲ್ಲದಿದ್ದರೆ ಪ್ರತಿವರ್ಷ ತಮಿಳುನಾಡಿನ ಕಣ್ಣೀರು, ಮಹಾರಾಷ್ಟ್ರದ ನೆರೆನೀರೂ ಕನ್ನಡನಾಡಿಗೆ ಮುಳುಗುನೀರು ತರುವುದನ್ನು ತಪ್ಪಿಸಲಾಗದು ಗುರೂ!

ರಾಷ್ಟ್ರರಾಜಕಾರಣ, ಪ್ರಾದೇಶಿಕ ಪಕ್ಷ & RSSನ ಆತಂಕ!


ಭಾರತದ ಅತಿದೊಡ್ಡ ಸಾಮಾಜಿಕ ಸಂಘಟನೆಗಳಲ್ಲೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದರ ಮುಖಂಡರಲ್ಲಿ ಒಬ್ಬರಾದ ಶ್ರೀ ಸುರೇಶ್ ಜೋಷಿಯವರು ಸಂಘದ ಕೇಂದ್ರಸ್ಥಾನವಾದ ನಾಗ್ಪುರದಲ್ಲಿ ಕುಳಿತು ಒಂದು ಹೇಳಿಕೆ ನೀಡಿ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವ ಬಗ್ಗೆ ಆತಂಕ' ತೋರಿಸಿದ್ದಾರೆ ಎನ್ನುವ ಸುದ್ದಿ ಮಾರ್ಚ್ ೧೯ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದಿದೆ. ಈ ಸುದ್ದಿ ನಿಜವೇ ಆಗಿದ್ದರೆ ಸಂಘ ಸಿದ್ಧಾಂತವು ಭಾರತದ ಸ್ವರೂಪದ ಬಗ್ಗೆ ಹೊಂದಿರುವ ತಿಳುವಳಿಕೆ ಸರಿಯಾಗಿಲ್ಲವೇನೋ ಎನ್ನುವ ಅನುಮಾನ ಹುಟ್ಟಿಸುತ್ತದೆ. ರಾಷ್ಟ್ರ ರಾಜಕಾರಣಕ್ಕೆ ಪ್ರಾದೇಶಿಕ ಪಕ್ಷಗಳು ಬಂದರೆ ಆತಂಕ ಪಟ್ಟುಕೊಳ್ಳುವ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗುತ್ತದೆ. ಇರಲಿ, ಚುನಾವಣಾ ಆಯೋಗದ ಲೆಕ್ಕದಲ್ಲಿ  ಭಾರತದಲ್ಲಿ ಇವತ್ತು ಇರುವ ರಾಷ್ಟ್ರೀಯಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ, ಸಮಾಜವಾದಿ ಪಾರ್ಟಿ, ಬಹುಜನ್ ಸಮಾಜ್ ಪಾರ್ಟಿ, ಸಿಪಿಎಂ, ಸಿಪಿಐ ಮತ್ತು ಎನ್.ಸಿ.ಪಿಗಳು. ಆದರೆ ದೇಶ ಆಳಿದ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಾತ್ರಾ ಎರಡೇ..

ಕೇಂದ್ರಸರ್ಕಾರ ಎನ್ನುವುದು ಮೇಲಿನದ್ದು ಮತ್ತು ರಾಜ್ಯಸರ್ಕಾರಗಳು ಕೆಳಗಿನದ್ದು, ಕೇಂದ್ರಸರ್ಕಾರ ರೂಪಿಸೋ ನಿಯಮಾನಾ, ತೆಗೆದುಕೊಳ್ಳೋ ನಿರ್ಣಯಾನ ಕೆಳಗಿರೋ ರಾಜ್ಯಗಳು ಸಾಮಂತರಂತೆ ಒಪ್ಪಿಕೋಬೇಕು ಅನ್ನೋ ಮನಸ್ಥಿತಿ ಸುರೇಶ್ ಜೋಷಿಯವರ ಮಾತುಗಳ ಆಳದಲ್ಲಿ ಇರುವಂತೆ ತೋರುತ್ತಿದೆ. ವಾಸ್ತವವಾಗಿ ರಾಜ್ಯಗಳ ಪ್ರತಿನಿಧಿಗಳಿಗಾಗೆ ರಾಜ್ಯಸಭೆ ಇದೆ.  ಸಂಸತ್ತಿನ ಯಾವುದೇ ನಿಯಮ, ಬಿಲ್ಲು, ಕಾಯ್ದೆ, ಕಾನೂನು ಈ ರಾಜ್ಯಸಭೆಯಲ್ಲೂ ಒಪ್ಪಿತವಾಗಬೇಕು. ಅಂದರೆ ರಾಜ್ಯಗಳು ಒಗ್ಗೂಡಿ ಕಟ್ಟಿಕೊಂಡಿರುವ ವ್ಯವಸ್ಥೆ ಭಾರತದ್ದು! ಅಧಿಕಾರ ಮೇಲಿನವರು ಕೆಳಗಿನವರಿಗೆ ಕೊಡಲ್ಪಟ್ಟಿಲ್ಲ ಮತ್ತು ಅದು ರಾಜ್ಯಗಳು ಕೇಂದ್ರಕ್ಕೆ ಬಿಟ್ಟುಕೊಟ್ಟದ್ದಾಗಿರಬೇಕೆನ್ನುವುದು ಸರಿಯಾದ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಪ್ರಾದೇಶಿಕ ಪಕ್ಷಗಳು    ರಾಷ್ಟ್ರ ರಾಜಕಾರಣಕ್ಕೆ ಬರುವುದು/ ಬಂದಿರುವುದು ಪ್ರಜಾಪ್ರಭುತ್ವದ ನಿಜ ಅರ್ಥವೆನಿಸುತ್ತದೆ.

ರಾಷ್ಟ್ರರಾಜಕಾರಣದ ಅರ್ಹತೆ!

ಆದರೂ ಒಮ್ಮೆ, 'ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣಕ್ಕೆ ಬರುವುದು ಆತಂಕಕಾರಿ' ಎನ್ನುವ ಈ ನಿಲುವಿನ ದನಿ ನಿಜಕ್ಕೂ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ನೋಡಬೇಕಾಗಿದೆ. ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಭಾರತದ ಸಂಸತ್ತಿನಲ್ಲಿ ಯಾವುದಾದರೂ ನಿರ್ಣಯ ತೆಗೆದುಕೊಳ್ಳುವುದಿದ್ದಲ್ಲಿ, ಅಲ್ಲಿನ ಪ್ರಾದೇಶಿಕ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ದನಿ ಇರಬೇಡವೇ? ಹಾಗೇ ಈಶಾನ್ಯ ರಾಜ್ಯಗಳ ಜನರ ದನಿಯನ್ನು ಸಂಸತ್ತಿನಲ್ಲಿ ಸಮರ್ಥವಾಗಿ/ ಪರಿಣಾಮಕಾರಿಯಾಗಿ ತೆರೆದಿಡಲು ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೇ ಹೆಚ್ಚು ಸಮರ್ಥವಲ್ಲವೇ? ರಾಷ್ಟ್ರ ರಾಜಕಾರಣವೆಂದರೆ 'ದೆಹಲಿ ಗದ್ದುಗೆ' ಎಂದುಕೊಳ್ಳುವುದಾದರೆ, 'ಭಾರತದ ಸಂಸತ್ತು' ಎಂದುಕೊಳ್ಳುವುದಾದರೆ, ಅದಕ್ಕೆ 'ಇಡೀ ಭಾರತಕ್ಕೆ ಅನ್ವಯವಾಗುವಂತೆ ನೀತಿಗಳನ್ನು ರೂಪಿಸುವ ಹೊಣೆಗಾರಿಕೆಯಿದೆ' ಎನ್ನುವುದನ್ನು ಒಪ್ಪುವುದಾದರೆ... ಇಂಥಾ ಸಂಸತ್ತಿನಲ್ಲಿ ಎಲ್ಲಾ ಭಾರತೀಯರನ್ನು ಪ್ರತಿನಿಧಿಸೋ ಪಕ್ಷಗಳಿಗೆ ಇರಬೇಕಾದ ಮೂಲ ಕಾಳಜಿ ಯಾವುದಾಗಿರಬೇಕು? ತನ್ನ ಜನರು, ತನ್ನ ರಾಜ್ಯದ ಜನರ ಹಿತ ಉಳಿಸಿಕೊಳ್ಳುವ ಬದ್ಧತೆಯೂ? ರಾಜ್ಯಗಳೆಲ್ಲಾ ಕಡಿಮೆ ಪ್ರಾಮುಖ್ಯತೆ ಹೊಂದಿವೆ, ರಾಷ್ಟ್ರೀಯ ಹಿತದ ಬಗ್ಗೆ ಮಾತ್ರಾ ಸಂಸತ್ತಿನಲ್ಲಿ ಪ್ರಾಮುಖ್ಯತೆ ಇರಬೇಕು ಎನ್ನುವಿಕೆಯೋ? ರಾಜ್ಯಗಳ ಹಿತವನ್ನು ಕೇಂದ್ರವಾಗಿಸಿಕೊಂಡು ಇಡೀ ದೇಶಕ್ಕೆ ರೀತಿ ರೂಪಿಸಲು ಮುಂದಾಗುವಿಕೆಯೋ? ಇಂತಹ ಒಂದು ಬದ್ಧತೆ ರಾಷ್ಟ್ರೀಯಪಕ್ಷಗಳಿಗೆ ಇದೆಯೋ ಇಲ್ಲವೋ? ನಿಜಕ್ಕೂ ರಾಷ್ಟ್ರ ರಾಜಕಾರಣದ ಅರ್ಹತೆ ಯಾರಿಗಿದೆ? ಎನ್ನುವಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಇಂಥಾ ಉತ್ತರ ಕಂಡುಕೊಳ್ಳಬೇಕೆಂದರೆ ಇದುವರೆಗೂ ಪ್ರಾದೇಶಿಕ ಪಕ್ಷಗಳಾಗಲೀ, ರಾಷ್ಟ್ರೀಯ ಪಕ್ಷಗಳಾಗಲೀ ಹೇಗೆ ನಡೆದುಕೊಂಡಿವೆ ಎನ್ನುವುದನ್ನು ನೋಡಿದರೆ ತಕ್ಕಮಟ್ಟಿಗೆ ಅರ್ಥವಾಗುತ್ತದೆ. 

ಕಣ್ಣೆದುರಿನ ದಿಟಗಳು!

ಆಗಲೇ ಹೇಳಿದಂತೆ ಇಂದಿನ ಭಾರತದಲ್ಲಿ ಇದುವರೆಗೂ ಆಳಿದ ದೊಡ್ಡ ರಾಷ್ಟ್ರೀಯ ಪಕ್ಷಗಳೆಂದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷಗಳೇ. ಅರವತ್ನಾಲ್ಕು ವರ್ಷಗಳ ಸ್ವತಂತ್ರ ಭಾರತದಲ್ಲಿ ಈ ದೇಶವು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಗಳಿಗೆ ಎದುರಾದ ಸವಾಲುಗಳನ್ನು ಇವು ಹೇಗೆ ನಿಭಾಯಿಸಿವೆ  ಎನ್ನುವುದನ್ನು ನೋಡಿದರೆ ರಾಷ್ಟ್ರೀಯ ಪಕ್ಷಗಳಿಂದ ಈ ಸವಾಲುಗಳು ಎದುರಿಸಲ್ಪಟ್ಟ ಬಗೆ ನಿರಾಸೆ ಹುಟ್ಟಿಸುವಂತಿದೆ. ಹೋಗಲೀ ರಾಜ್ಯಗಳ ಸಮಸ್ಯೆಗಳಿಗೆ ಇವು ಸ್ಪಂದಿಸಿರುವ ಬಗೆ ನೋಡಿದರೆ ಇನ್ನೂ ಬಗೆಹರಿಯದ ಅಂತರರಾಜ್ಯ ನದಿನೀರು ಹಂಚಿಕೆ, ಅಂತರರಾಜ್ಯ ಗಡಿ ಸಮಸ್ಯೆಗಳೇ ಮೊದಲಾದ ಇನ್ನೂ ಜೀವಂತವಿರುವ ಸಮಸ್ಯೆಗಳೇ ಉತ್ತರ ಹೇಳುತ್ತವೆ... ಈ ಮಾತುಗಳನ್ನು ಅರಿಯಲು ಸ್ವಲ್ಪ ಸಾವಧಾನದಿಂದ ಇತಿಹಾಸದ ಪುಟ ತಿರುಗಿಸಿ, ಸುದ್ದಿಹಾಳೆಗಳನ್ನು ತಿರುವಿದರೆ ಸಾಕು... ತಿಳಿಯುತ್ತದೆ. ಹಾಗೇ ಈ ದೇಶದ ಪ್ರಾದೇಶಿಕ ಪಕ್ಷಗಳು ನಡೆದುಕೊಂಡಿರುವ ಬಗೆಯನ್ನೂ ನೋಡಿದರೆ ತಮಿಳುನಾಡಿಗೆ ಅಲ್ಲಿನ ಡಿಎಂಕೆ - ಅಣ್ಣಾ ಡಿಎಂಕೆಗಳು, ಆಂಧ್ರದಲ್ಲಿ ತೆಲುಗುದೇಶಂ, ಒರಿಸ್ಸಾದಲ್ಲಿ ಬಿಜು ಜನತಾದಳ ಮೊದಲಾದ ಪಕ್ಷಗಳು ಅವುಗಳ ರಾಜ್ಯಗಳಿಗೆ ಮಾಡಿರುವ ಒಳಿತುಗಳನ್ನು ನೋಡಿದರೆ ಅರ್ಥವಾಗುತ್ತದೆ. ಇನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯಿಂದಲೇ ರೈಲ್ವೆ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ಬರೆಯಬಹುದು ಎಂದಾಗಿರುವುದು... ರೈಲ್ವೆ ಲಾಭದತ್ತ ಕಾಲಿಟ್ಟಿದ್ದೆ ರಾಷ್ಟ್ರೀಯ ಜನತಾದಳವೆನ್ನುವ ಬಿಹಾರದ ಪ್ರಾದೇಶಿಕ ಪಕ್ಷದ ನಾಯಕರಾದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿದ್ದಾಗ ಅಲ್ಲವೇ? ಭಾರತದ ಅತ್ಯುತ್ತಮ ರಕ್ಷಣಾ ಸಚಿವರು ಎನ್ನಿಸಿದ್ದ ಜಾರ್ಜ್ ಫರ್ನಾಂಡಿಸ್ ಕೂಡಾ ಸಮತಾಪಕ್ಷದವರಾಗಿದ್ದಾರೆ ಎನ್ನುವುದನ್ನು ಮರೆಯಲಾಗುವುದೇ?

ಬಹುಭಾಷಾ ಬಹುಸಂಸ್ಕೃತಿಗಳ ರಾಜ್ಯಗಳಿಂದಾದ ಭಾರತದಂತಹ ದೇಶದ ವೈವಿಧ್ಯತೆಗಳನ್ನು, ಪ್ರಾದೇಶಿಕ ಆಶೋತ್ತರಗಳನ್ನು ಅರ್ಥ ಮಾಡಿಕೊಂಡರೆ ಈ ವೈವಿಧ್ಯತೆಗಳನ್ನು ನಿಜಕ್ಕೂ ಪ್ರತಿನಿಧಿಸುವ, ಈ ಪ್ರದೇಶಗಳ ಹಿತಕ್ಕಾಗಿ ತುಡಿಯುವ ಪ್ರಾದೇಶಿಕ ಪಕ್ಷಗಳಿಂದಲೇ ಸರಿಯಾದ ವ್ಯವಸ್ಥೆಗಳು ರೂಪುಗೊಳ್ಳಲು ಸಾಧ್ಯ ಎನ್ನುವುದು ಮನವರಿಕೆಯಾಗುತ್ತದೆ. ಮಹಾರಾಷ್ಟ್ರದ ಹಿತಕ್ಕಾಗಿ ಕಟಿಬದ್ಧವಾದ ಅಲ್ಲಿನ ಪ್ರಾದೇಶಿಕ ಪಕ್ಷ ಮತ್ತು ಕನ್ನಡಿಗರ ಹಿತಕ್ಕಾಗಿ ಬಡಿದಾಡುವ ಕರ್ನಾಟಕದ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದಾಗಲೇ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ಎಲ್ಲರೂ ಒಪ್ಪಬಹುದಾದ ಪರಿಹಾರ ಸೂತ್ರ ರೂಪಿಸಲು ಸಾಧ್ಯವಾಗಬಹುದಾಗಿದೆ. ಇಷ್ಟು ವರ್ಷ ಈ ಸಮಸ್ಯೆಗಳಿಂದ ಪಲಾಯನ ಮಾಡಿ ಚಾಪೆಯಡಿ ಹಾಕಿಕೊಂಡು ಕೂತ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಸಮಸ್ಯೆಗಳಾಗಲೀ, ರಾಷ್ಟ್ರೀಯ ಸಮಸ್ಯೆಗಳಾಗಲೀ ಪರಿಹಾರ ಕಾಣುವುದು ಅಸಾಧ್ಯವೇ ಅನ್ನಿಸುತ್ತದೆ. ಲಕ್ಷಾಂತರ ಭಾರತೀಯರು ಸಂಘ  ಹೇಳಿದ್ದನ್ನು ವೇದವಾಕ್ಯವೆಂದು ಪರಿಗಣಿಸಿ, ಮಾರ್ಗದರ್ಶನ ಪಡೆದುಕೊಳ್ಳುತ್ತಿರುವಾಗ... ಸಂಘದೋರು ಇಂಥಾ ನಿಲುವುಗಳ ಬಗ್ಗೆ ಮತ್ತೊಮ್ಮೆ ಚಿಂತನೆ ಮಾಡೋದು ಒಳ್ಳೇದು! ಆಲ್ವಾ ಗುರೂ?

ಕನ್ನಡದೋರಿಗೆ ಉರ್ದು ಕಡ್ಡಾಯ ಒಂದು ಬಾಕಿ ಇತ್ತು!


ನಮ್ಮ ಕರ್ನಾಟಕದ ಘನ ರಾಜ್ಯಪಾಲರಾದ ಶ್ರೀ ಎಚ್. ಆರ್. ಭಾರಧ್ವಾಜ್ ಅವರು ಉರ್ದು ಅಕಾಡಮಿಯ ಒಂದು ಕಾರ್ಯಕ್ರಮದಲ್ಲಿ "ಇನ್ಮುಂದೆ ಕನ್ನಡದವರಿಗೆ ಉರ್ದುವನ್ನು ಕಡ್ಡಾಯ ಮಾಡಬೇಕು" ಎಂದಿದ್ದಾರೆ ಅನ್ನೋ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಶ್ರೀಯುತರು ಮಾತಾಡ್ತಾ ಉರ್ದು ಒಂದು ಅದ್ಭುತವಾದ ಭಾಷೆ, ಇದರಲ್ಲಿ ಅದ್ಭುತ ಸಾಹಿತ್ಯವಿದೆ.. ಇದನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಬಾರದು ಎಂದೆಲ್ಲಾ ಹೇಳುತ್ತಿದ್ದಾಗ ಹೌದಲ್ವಾ ಅಂದ್ಕೊತಾ ಇರೋವಾಗಲೇ ವರಸೆ ಬದಲಾಯಿಸಿ "...ಹಾಗಾಗಿ ಎಲ್ಲಾ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉರ್ದು ಕಲಿಕೆ ಕಡ್ಡಾಯವಾಗಿ ಕಲಿಸುವಂತಾಗಬೇಕು" ಎಂದರಂತೆ. ಈ ದೊಡ್ಡಜನರಿಗೆ ಯಾಕಪ್ಪಾ "ಕನ್ನಡದೋರಿಗೆ ಅವರಿಗೆ ಸಂಬಂಧ ಇಲ್ದಿರೋ  ಭಾಷೆಗಳನ್ನೂ ಕಡ್ಡಾಯವಾಗಿ ಕಲಿಸಿ" ಅಂತ ಹೇಳೋ ತೆವಲು ಅಂತಾ ಅಚ್ಚರಿಯಾಗುತ್ತೆ ಗುರೂ! ಇದೇ ರಾಜ್ಯಪಾಲರು ಕೆಲಕಾಲದ ಹಿಂದೆ ಕನ್ನಡಿಗರೆಲ್ಲಾ ದೇಶದ ಬಗ್ಗೆ ಗೌರವಾ ಇದ್ರೆ ಹಿಂದೀ ಕಲೀಬೇಕು, ಜೊತೇಲಿ ಉರ್ದು ಸಂಸ್ಕೃತಗಳನ್ನು  ಕಲೀಬೇಕು ಅಂತಾನೂ ಅಂದಿದ್ರು! ಕೇಂದ್ರಸರ್ಕಾರದೋರು ರಾಜ್ಯಪಾಲರನ್ನು ನೇಮಿಸೋದು ಹಿಂದೀ, ಉರ್ದು, ಸಂಸ್ಕೃತಗಳ ಪ್ರಚಾರಕ್ಕಾ ಅನ್ನೋ ಅನುಮಾನ ನಿಮಗೇನಾರಾ ಬಂದ್ರೆ ಅದುಕ್ ನಾವು ಹೊಣೆಯಲ್ಲಾ ಗುರೂ!

ಕನ್ನಡವೇ ಸತ್ಯಾ! ಅನ್ಯವೆನಲದೇ ಮಿಥ್ಯಾ!!

ಇದು ಕನ್ನಡದವರ ಮೇಲೆ ಪರಭಾಷೆ ಹೇರೋ ಮೊದಲನೇ ಪ್ರಯತ್ನವೇನಲ್ಲ! `ದೇಶದ ಒಗ್ಗಟ್ಟಿನ ನೆಪ ಹೇಳ್ತಾ ತ್ರಿಭಾಷಾ ಸೂತ್ರದ ನೆಪ'ದಲ್ಲಿ ಹಿಂದೀನಾ ಕಡ್ಡಾಯ ಮಾಡಿದ್ದಾಯ್ತು. `ಕನ್ನಡ ನುಡಿಯ ಸೌಂದರ್ಯ ಹೆಚ್ಚಿಸೋ ಸೌಂದರ್ಯ ವರ್ಧಕ ಸಂಸ್ಕೃತ' ಎನ್ನುತ್ತಾ ಶ್ರೀ ಎಸ್ ಎಲ್ ಭೈರಪ್ಪನವರು ಸಂಸ್ಕೃತ ಕಡ್ಡಾಯ ಮಾಡಿ ಎಂಬ ಹೇಳಿಕೆ ಕೊಟ್ಟರು. ಈಗ `ಮುಸ್ಲಿಮರಿಗೆ ಮಾತ್ರಾ ಮೀಸಲು ಮಾಡಬಾರದು, ಸುಂದರ ಭಾಷೆ' ಎನ್ನುತ್ತಾ ಉರ್ದು ಕಡ್ಡಾಯ ಮಾಡಿ ಅಂತಿದ್ದಾರೆ ನಮ್ಮ ರಾಜ್ಯಪಾಲರು. ಇವರೆಲ್ಲರ ಕಣ್ಣಿಗೆ ಕನ್ನಡದೋರು ಹೇರಿಸಿಕೊಳ್ಳಲಿಕ್ಕೆಂದೇ ಇರೋ ಎತ್ತುಗಳ ಹಾಗೇ ಕತ್ತೆಗಳ ಹಾಗೆ ಕಾಣ್ತಿದಾರೋ ಏನೋ! ಕನ್ನಡದವರು ಕನ್ನಡವನ್ನು ಕಲಿತರೆ ಸಾಕಾಗಿದೆ... ಅಂಥಾದ್ರಲ್ಲಿ ಹಿಂದಿ, ಸಂಸ್ಕೃತ, ಉರ್ದುಗಳ ಕಡ್ಡಾಯಗಳು ಯಾಕೋ? ಈ ಪುಣ್ಯಾತ್ಮರಿಗೆಲ್ಲಾ ಕುವೆಂಪು ಹೇಳಿದ "ಕನ್ನಡವೇ ಸತ್ಯಾ!ಅನ್ಯವೆನಲದೇ ಮಿಥ್ಯಾ!!" ಎನ್ನೋದು ಅರ್ಥವಾಗೋದು ಯಾವಾಗಲೋ?

ಕನ್ನಡದೋರು ಬೇರೆ ಭಾಷೆ ಕಲಿಬಾರ್ದಾ?

ಕನ್ನಡದ ಮಕ್ಕಳು ಹಾಗಾದ್ರೆ ಹಿಂದೀ, ಸಂಸ್ಕೃತ, ಉರ್ದು ಭಾಷೆಗಳನ್ನು ಕಲಿಯಬಾರದೆನ್ನುವುದು ನಮ್ಮ ನಿಲುವಲ್ಲ. ತಮಗೆ ಯಾವ ಭಾಷೆ ಬೇಕೋ ಅದನ್ನು ಕಲಿಯೋ ಹಕ್ಕು ಎಲ್ಲರಿಗೂ ಇದೆ. ಆದರೆ ಕಡ್ಡಾಯ ಮಾಡಬೇಕು ಎನ್ನೋ ಮನಸ್ಥಿತಿಯ ಬಗ್ಗೆ ನಮ್ಮ ಆಕ್ಷೇಪ ಅಷ್ಟೇ. ಕೆಲವರು "ಹಾಗಾದ್ರೆ ಕನ್ನಡವನ್ನೂ ಕಡ್ಡಾಯ ಮಾಡಬಾರದು" ಎನ್ನುವ ವಾದವನ್ನು ಮುಂದಿಡುತ್ತಾರೆ. ಈ ನೆಲದ ಪರಿಸರದ ನುಡಿಯನ್ನು ಕಡ್ಡಾಯ ಮಾಡೋದು ಇಲ್ಲಿ ಬದುಕಲು ಅನುಕೂಲವಾಗಲೀ ಎನ್ನುವ ಕಾರಣದಿಂದಲೇ ಆಗಿದೆ. ಈ ನಾಡು ಕನ್ನಡನಾಡು ಮತ್ತು ಇಲ್ಲಿನ ಪರಿಸರದ ನುಡಿ ಅಂದ್ರೆ ಇಲ್ಲಿನ ಜನರಾಡೋ ಮಾತು ಕನ್ನಡ, ಆದ್ದರಿಂದ ಇಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡೋದು ಸಹಜವಾಗಿದೆ. ಹಾಗಾಗಿ ನಮ್ಮದಲ್ಲದ ನುಡಿಯನ್ನು ಕಡ್ಡಾಯ ಮಾಡೋದನ್ನು ಒಪ್ಪೋ ಮಾತೇ ಇಲ್ಲ! ಇನ್ನು ಇಂಗ್ಲೀಶ್ ಕಡ್ಡಾಯ ಮಾಡೋ ವಿಷಯಕ್ಕೂ ಇದೇ ನಿಲುವು ಹೊಂದುತ್ತೆ ಗುರೂ!

ಗ್ರಾಹಕಸೇವೆ ದಕ್ಕಿಸಿಕೊಳ್ಳಲು "ಮಾಹಿತಿ ಹಕ್ಕು" ಎಂಬ ಮಹತ್ವದ ಅಸ್ತ್ರ!

ಪ್ರತಿವರ್ಷ ಮಾರ್ಚ್ ೧೫ನ್ನು ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬ ಗ್ರಾಹಕನಿಗೂ ಇರುವ ಹಕ್ಕುಗಳನ್ನು ಒದಗಿಸಿಕೊಡಬೇಕು ಎಂದು ವಿಶ್ವಸಂಸ್ಥೆ, ಸದಸ್ಯ ದೇಶಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಕೊಟ್ಟಿದೆ. ಅವುಗಳಲ್ಲಿ ಪ್ರಮುಖವಾದ ಕೆಲವು ವಿಷಯಗಳು ಗ್ರಾಹಕರ ಸುರಕ್ಷತೆ, ಆರ್ಥಿಕ ಹಕ್ಕುಗಳ ರಕ್ಷಣೆ, ಗ್ರಾಹಕರಿಗೆ ಮಾಹಿತಿ, ಪರಿಣಾಮಕಾರಿಯಾದ ದೂರು ನಿರ್ವಹಣಾ ವ್ಯವಸ್ಥೆಯೇ ಮೊದಲಾದವುಗಳನ್ನು ಒಳಗೊಂಡಿದೆ..

ನಮ್ಮ ಪರಿಸ್ಥಿತಿ ಹೀಗಿದೆ...

ಈ ಎಲ್ಲಾ ಹಕ್ಕುಗಳ ಬಗ್ಗೆ ಅವರೇನೋ ಸೂಚನೆ ಕೊಟ್ಟಿದಾರೆ, ಆದರೆ ಭಾರತದಲ್ಲಿ ಈ ಹಕ್ಕುಗಳು ಯಾವ ರೂಪದಲ್ಲಿ ನಮಗೆ ದಕ್ಕಿವೆ ಅಂತನ್ನೋಕೆ ಈ ಕೆಳಗಿನ ಚಿತ್ರಗಳನ್ನು ನೋಡಿದರೆ ಅರ್ಥವಾಗುತ್ತದೆ...

 ಗ್ರಾಹಕ ಸುರಕ್ಷತೆ ಅಂದರೆ ಬಳಸುವ ವಸ್ತುಗಳ ಸುರಕ್ಷತಾ ಮಾಹಿತಿಯನ್ನು ಗ್ರಾಹಕರಿಗೆ ಕೊಡಬೇಕೆನ್ನೋ ನಿಯಮಾನ ಕಟ್ಟುನಿಟ್ಟಾಗಿ ಪಾಲಿಸಿರೋ ಈ ಫೋಟೋ ನೋಡಿ. 
ಜನರು ಔಷಧಿಗಳನ್ನು ಕೊಳ್ಳುವಾಗ ಅದನ್ನು ಹೇಗೆ ಬಳಸಬೇಕು? ಅದರಲ್ಲಿ ಏನಿದೆ? ಏನು ಎಚ್ಚರ ವಹಿಸಬೇಕು? ಅದರ ಬದಲಿ ಪರಿಣಾಮವೇನು? ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳೋ ಹಕ್ಕನ್ನು ಹೊಂದಿದ್ದಾರೆ, ಹಾಗಾಗಿ ಈ ಮಾಹಿತಿಯನ್ನು ಕೊಡಲೇಬೇಕು ಎನ್ನೋ ಗ್ರಾಹಕ ನಿಯಮವನ್ನು ಹೀಗೆ ಪೂರೈಸಿದ್ದಾರೆ... ನೋಡಿ.


ಇನ್ನು ನಮ್ಮದೇ ಘನ ಭಾರತ ಸರ್ಕಾರವು ಪರದೇಶಿ ಭಾಷೇಲಿ ಹ್ಯಾಗೆ ತಾನೇ ಜನರಿಗೆ ಸುರಕ್ಷತೆ ಬಗ್ಗೆ ಹೇಳೀತು? ಅದಕ್ಕೆ ಭಾರತೀಯ ಭಾಷೇಲೇ ಹೇಳ್ತಿದಾರೆ ನೋಡ್ಕೊಳ್ಳಿ... ಆದ್ರೆ ಇದು ನಮ್ಮ ಕರ್ನಾಟಕದ ಕನ್ನಡದ ಜನಪ್ರಿಯ ದಿನಪತ್ರಿಕೆಯಲ್ಲಿ ಬಂದಿರೋ ಜಾಹೀರಾತು... 

‘ನಮ್ಮೂರ ಮೆಟ್ರೋ ರೈಲಲ್ಲಿ ಹಿಂದೀ ಯಾಕ್ರೀ ಬಳುಸ್ತೀರಾ’ ಅಂತಂದೋರಿಗೆಲ್ಲಾ ನಿಮ್ಮ ಹಿಂದೀ ದ್ವೇಶ ನಿಲ್ಲಿಸಿ ಅನ್ನೋ ಉತ್ತರ ಮುಖಕ್ಕೆಸೆದಿದ್ದ ನಮ್ಮ ಮೆಟ್ರೋ ಈಗ ಬಳಸುತ್ತಿರೋ ವಾರ್ಷಿಕ ಪಾಸ್ ಹೀಗಿದೆ ನೋಡಿ...


ಬರೀ ಕನ್ನಡವೊಂದನ್ನೇ ಕಲಿತಿರೋ ಕರ್ನಾಟಕದ ಸಾಮಾನ್ಯ ಕನ್ನಡಿಗನಿಗೆ ತನ್ನದೇ ನಾಡಿನಲ್ಲಿ ದಕ್ಕಿರೋ ಗ್ರಾಹಕ ಸೇವೆಯ ಈ ಹಕ್ಕುಗಳ ಪರಿಯನ್ನು ನೋಡಿರಿ! ಇಂಥಾ ಗ್ರಾಹಕ ಸೇವೆ ಪಡೆದುಕೊಳ್ತಿರೋ ಕನ್ನಡಿಗನ ಹಣೇಬರಹಕ್ಕೆ ಏನು ಹೇಳಬೇಕೂ ಗುರೂ?

ಹಾಗಾದ್ರೆ ಏನು ಮಾಡಬಹುದು?

ನಾವೇ ಎಚ್ಚರಾಗಬೇಕು. ಸಾಧ್ಯವಾದಲ್ಲೆಲ್ಲಾ ಸಂಬಂಧಿಸಿದವರಿಗೆ ನಮ್ಮ ಹಕ್ಕೊತ್ತಾಯದ ಕೂಗನ್ನು ಮುಟ್ಟಿಸಬೇಕು. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜನದನಿಯ ಮೂಲಕ ಬದಲಾವಣೆ ತರುವುದು ಒಂದು ಬಗೆಯಾದರೆ ಮತ್ತೊಂದು ಬಗೆ ಕಾನೂನು ಹೋರಾಟ... ಹೌದೂ! ಇಂಥಾ ಹೋರಾಟಗಳು ಬೇರೆ ಬೇರೆ ಕಡೆ ನಡೆದಿವೆ. ಆಯಾ ಜನರ ನುಡಿಯಲ್ಲಿಯೇ ಸೇವೆ ಸಿಗುವಂತೆ ನ್ಯಾಯಾಲಯಗಳು ತೀರ್ಪನ್ನೂ ನೀಡಿವೆ. ಹೀಗೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿರೋ ಅಸ್ತ್ರವೆಂದರೆ ಮಾಹಿತಿ ಹಕ್ಕು ಕಾಯ್ದೆ ೨೦೦೫

ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿ:

ಇದರಡಿಗೆ ಕೇಂದ್ರಸರ್ಕಾರದ ಮತ್ತು ರಾಜ್ಯಸರ್ಕಾರದ ಎಲ್ಲಾ ಸಂಸ್ಥೆ-ಇಲಾಖೆಗಳುಸರ್ಕಾರದ ಮೂಲಕ ಸವಲತ್ತು ಪಡೆದಿರುವ ಯಾವುದೇ ಸರಕಾರೇತರ ಸಂಸ್ಥೆ ಅಥವಾ ಖಾಸಗಿ ಆಸ್ಪತ್ರೆಶಾಲೆಕಾಲೇಜು ದೇವಸ್ಥಾನದತ್ತಿ ಸಂಘಗಳೇ ಮುಂತಾದವುಗಳಿಂದಲೂ ಮಾಹಿತಿಯನ್ನು ಪಡೆದುಕೊಳ್ಳಬಹುದು.


ಮಾಹಿತಿ ಹಕ್ಕು ಕಾಯ್ದೆ ೨೦೦೫

ಮಾಹಿತಿ ಹಕ್ಕು ಕಾಯಿದೆಯನ್ನು ೨೦೦೫ರಿಂದ ಜಾರಿಗೆ ತರಲಾಗಿದೆಈ ಕಾಯಿದೆಯಡಿಗೆ ರಾಜ್ಯಸರ್ಕಾರಿಕೇಂದ್ರಸರ್ಕಾರಿ ಸಂಸ್ಥೆಗಳೂ ಸೇರಿದಂತೆ ಸರ್ಕಾರಿ ಸಹಯೋಗದ ಸಂಸ್ಥೆಗಳು ಒಳಪಡುತ್ತವೆ ಕಾಯಿದೆಯ ಅನ್ವಯ ನಾಗರಿಕರು ಕೇಳುವ ಪ್ರಶ್ನೆಗಳಿಗೆ ಸಂಸ್ಥೆಗಳು ಸರಿಯಾದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ನೀಡಲೇಬೇಕಾಗಿದೆಇದಕ್ಕೆಂದೇ ಪ್ರತಿಇಲಾಖೆಗಳಲ್ಲೂ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆಮಾಹಿತಿಯನ್ನು ನೀಡಲು ವಿಫಲರಾದ ಸಂಸ್ಥೆಗಳ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಅರ್ಜಿಯನ್ನು ವ್ಯಕ್ತಿಯೊಬ್ಬ ಸಲ್ಲಿಸಬಹುದು. ಯಾವ ಅಧಿಕಾರಿಯೂ ಯಾವ ಕಾರಣಕ್ಕಾಗಿ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ ಎಂದು ಕೇಳುವ ಅಧಿಕಾರವನ್ನು ಹೊಂದಿರುವುದಿಲ್ಲ.

ಮಾಹಿತಿ ಹಕ್ಕು ಅರ್ಜಿಯನ್ನು ಹೇಗೆ ಸಲ್ಲಿಸುವುದು?

ಅರ್ಜಿಯನ್ನು ಒಂದು ಖಾಲಿ ಹಾಳೆಯ ಮೇಲೆ ಬರೆದು ಸಿದ್ಧಪಡಿಸಬಹುದು ಅಥವಾ ಕೆಲವು ಇಲಾಖೆಗಳ ಕಚೇರಿಗಳಲ್ಲಿ ಮಾದರಿ ಅರ್ಜಿಗಳೂ ಸಿಗಲಿದ್ದು ಅವನ್ನು ಬಳಸಿಯೂ ಅರ್ಜಿಯನ್ನು ಸಿದ್ಧಪಡಿಸಬಹುದು. ಅರ್ಜಿಯನ್ನು ಒಂದು ನಿರ್ದಿಷ್ಟ ಮಾದರಿಯಲ್ಲೇ  ಸಲ್ಲಿಸಬೇಕು ಎಂದು ಹೇಳುವ ಅಧಿಕಾರವನ್ನು ಸಂಸ್ಥೆಗಳು ಹೊಂದಿಲ್ಲಆದರೆ ಒಂದು ಮಾದರಿಯನ್ನು ಸಲಹೆ ಮಾಡಲು ಸಂಸ್ಥೆಗಳಿಗೆ ಸ್ವತಂತ್ರವಿದೆ. ಆದರೆ ಮಾದರಿಯನ್ನು ಬಳಸುವುದು ಬಿಡುವುದು ಅರ್ಜಿದಾರರ ಇಚ್ಛೆಗೆ ಬಿಟ್ಟಿದ್ದು.  ಅರ್ಜಿಯನ್ನು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಪ್ರಶ್ನೆಗಳನ್ನು ಕೇಳಲು ಬಳಸಬಹುದುಬೇರೆ ಬೇರೆ ವಿಶಯಕ್ಕೆ ಸಂಬಂದಿಸಿದ ಮಾಹಿತಿ ಬೇಕಾದಲ್ಲಿ ಬೇರೆ ಬೇರೆ ಅರ್ಜಿಯನ್ನು ಸಲ್ಲಿಸಬೇಕು.  ಅರ್ಜಿಯನ್ನು ಖುದ್ದಾಗಿ ಇಲಾಖೆಯ ಕಚೇರಿಗೆ ಹೋಗಿ ಅಥವಾ ರಿಜಿಸ್ಟರ್ಡ್ ಅಂಚೆಯ ಮೂಲಕ ತಲುಪಿಸಬಹುದುಖುದ್ದಾಗಿ ಸಲ್ಲಿಸಿದ ಪ್ರತಿ ಅರ್ಜಿಗೆ ೧೦ ರೂಪಾಯಿ ಶುಲ್ಕವನ್ನು ಕೊಡಬೇಕು ಮತ್ತು ಮುಖ್ಯವಾಗಿ ಕೊಟ್ಟ ಹಣಕ್ಕೆ ರಶೀತಿಯನ್ನು ಪಡೆಯಬೇಕು. ರಶೀತಿಯೇ ಅರ್ಜಿ ಸಲ್ಲಿಸಿದ್ದಕ್ಕೆ ಸಾಕ್ಷಿಅಥವಾ ತಾವೇನಾದರೂ ರಿಜೆಸ್ಟರ್ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಲ್ಲಿ ೧೦ ರೂಪಾಯಿಯ ಪೋಸ್ಟಲ್ ಆರ್ಡರ್ ಅನ್ನು ಅರ್ಜಿಯ ಜೊತೆಗೆ ಕಳುಹಿಸಬೇಕುಮುಖ್ಯವಾಗಿ ರಿಜಿಸ್ಟರ್ ಪೋಸ್ಟ್ ಮಾಡಿದ ರಶೀತಿಯೇ ತಾವು ಅರ್ಜಿ ಸಲ್ಲಿಸಿದ್ದಕ್ಕೆ ಸಾಕ್ಷಿತಾವೇನಾದರೂ ಯಾವುದಾರರು ಮಾಹಿತಿಯ ಜೆರಾಕ್ಸ್ ಪ್ರತಿಯನ್ನು ಕೇಳಿದ್ದರೆ ಪುಟ ಒಂದಕ್ಕೆ ರೂಗಳನ್ನು ನೀಡಬೇಕುಅದೂ ಕೂಡಾ ಸಂಬಂಧಪಟ್ಟ ಇಲಾಖೆಗಳು ಸೂಚಿಸಿದ ನಂತರಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದಲ್ಲಿ ಮಾಹಿತಿ ಹಕ್ಕು ಪ್ರಾಧಿಕಾರಕ್ಕೆ ದೂರು ನೀಡಬಹುದು

ಮಾಹಿತಿ ಹಕ್ಕು ಅರ್ಜಿಯನ್ನು ಯಾರಿಗೆ ಸಲ್ಲಿಸಬೇಕು?

ಪ್ರತಿಯೊಂದು ಸಂಸ್ಥೆಯಲ್ಲೂ ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರಿಸಲೆಂದು ಸಾರ್ವಜನಿಕ ಮಾಹಿತಿಸಂಪರ್ಕ ಅಧಿಕಾರಿಗಳನ್ನು ನೇಮಿಸಿರುತ್ತಾರೆಹಾಗೇನಾದರೂ ಅಧಿಕಾರಿಯ ನೇಮಕ ಆಗಿಲ್ಲದಿದ್ದಲ್ಲಿ ಅಥವಾ ಅಧಿಕಾರಿಯ ವಿಳಾಸ ತಿಳಿಯದಿದ್ದಲ್ಲಿ ನೇರವಾಗಿ ಸಂಸ್ಥೆಯ ಅಥವಾ ಇಲಾಖೆಯ  ಮುಖ್ಯಸ್ಥರಿಗೆ ಸಲ್ಲಿಸಬಹುದುಇಲಾಖೆಯ ಮಿಂಬಲೆಗಳಲ್ಲಿ ಸಾರ್ವಜನಿಕ ಮಾಹಿತಿಸಂಪರ್ಕ ಅಧಿಕಾರಿ ಅಥವಾ ಮುಖ್ಯಸ್ಥರ ವಿಳಾಸವನ್ನು ಪಡೆದುಕೊಳ್ಳಬಹುದುಸಾರ್ವಜನಿಕ ಮಾಹಿತಿ/ ಸಂಪರ್ಕ ಅಧಿಕಾರಿಗಳುಅರ್ಜಿ ಸಲ್ಲಿಸಿದ ದಿನದಿಂದ ೩೦ ದಿನದ ಒಳಗೆ ಉತ್ತರಿಸಬೇಕು

ಮಾಹಿತಿ ತಲುಪದಿದ್ದಲ್ಲಿ ಏನು ಮಾಡಬಹುದು?

ಮಾಹಿತಿ ತಲುಪದಿದ್ದಲ್ಲಿ ಅಥವಾ ತಲುಪಿದ ಮಾಹಿತಿ ತೃಪ್ತಿದಾಯಕವಾಗಿಲ್ಲದಿದ್ದಲ್ಲಿ ಮೊದಲ ಮೇಲ್ಮನವಿಯನ್ನು  ಅವಧಿ ಮುಗಿದ ೩೦ ದಿನದ ಒಳಗೆ ಅಥವಾ ಮಾಹಿತಿ ತೃಪ್ತಿದಾಯಕವಾಗಿಲ್ಲದಿದ್ದಲ್ಲಿ ಮಾಹಿತಿ ಸಿಕ್ಕಿದ ೩೦ ದಿನದ ಒಳಗೆ ಸಲ್ಲಿಸಬಹುದುಪ್ರತಿಯೊಂದು ಸಂಸ್ಥೆಗಳಲ್ಲಿ ಮೊದಲ ಮೇಲ್ಮನವಿ ಅಧಿಕಾರಿಯನ್ನು ನೇಮಿಸಿರುತ್ತಾರೆ ಅಧಿಕಾರಿಯು ಸಾರ್ವಜನಿಕ ಮಾಹಿತಿಸಂಪರ್ಕ ಅಧಿಕಾರಿಗಳಿಗಿಂತ ಹಿರಿಯ ಸ್ಥಾನದಲ್ಲಿರುತ್ತಾರೆಕರ್ನಾಟಕ ಸರ್ಕಾರದ ನಿಯಮದಂತೆ ಮೊದಲ ಮೇಲ್ಮನವಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲಮೊದಲ ಮೇಲ್ಮನವಿ ಪ್ರಾದಿಕಾರಕ್ಕೆ  ೪೫ ದಿನಗಳಲ್ಲಿ ಮಾಹಿತಿ ನೀಡಬೇಕಾದ ಸಮಯದ ಮಿತಿಯಿದೆಮೇಲ್ಮನವಿ ಪ್ರಾಧಿಕಾರವು ಮೊದಲ ಮೇಲ್ಮನವಿ ವಿಚಾರಣೆಗೆ ಅಗತ್ಯವಿಲ್ಲದೇ ಅರ್ಜಿದಾರರನ್ನು ಕರೆಯುವಂತಿಲ್ಲ.

ಮೊದಲ ಮೇಲ್ಮನವಿಗೆ ಕೂಡ ಉತ್ತರ ಬರದಿದ್ದಲ್ಲಿ ಏನು ಮಾಡಬೇಕು?

ಮೊದಲ ಮೇಲ್ಮನವಿಗೂ ಕೂಡ ಯಾವುದೇ ಉತ್ತರ ಬರದಿದ್ದಲ್ಲಿ ಮೊದಲನೇ ಮೇಲ್ಮನವಿಯ ಅವಧಿ ಮುಗಿದ ೯೦ ದಿನಗಳ ಒಳಗೆ ಕೇಂದ್ರಸರ್ಕಾರ ಅಥವಾ ರಾಜ್ಯಸರ್ಕಾರದ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಬೇಕುಇದನ್ನು ಮೇಲ್ಮನವಿಯ ರೂಪದಲ್ಲಾಗಲೀ ದೂರಿನ ರೂಪದಲ್ಲಾಗಲೀ ಅಥವಾ ಎರಡನ್ನೂ ಸಲ್ಲಿಸಬಹುದಾಗಿದೆಎರಡನೇ ಮೇಲ್ಮನವಿಯನ್ನು ತೀರ್ಮಾನ ಮಾಡಲು ಯಾವುದೇ ಕಾಲಮಿತಿಯಿಲ್ಲಆದ್ದರಿಂದ ನೀವು ಮಾಹಿತಿ ಆಯೋಗವನ್ನು ಸಂಪರ್ಕಿಸಿ ನಿಮ್ಮ ಮೇಲ್ಮನವಿಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು.  ವಿಪರೀತ ವಿಳಂಬವಾದಲ್ಲಿ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಆಯೋಗವನ್ನು ಕೇಳಿಕೊಳ್ಳಬಹುದು ಅಥವಾ ಹೈಕೋರ್ಟ್ ಅಥವಾ ಸುಪ್ರೀಮ್ಕೋರ್ಟ್ಗೆ ಕೂಡ ಮೊರೆ ಹೋಗುವ ಆಯ್ಕೆ ನಿಮಗೆ ಇದೆ.  ಎರಡನೇ ಮೇಲ್ಮನವಿಯ ವಿಚಾರಣೆಯ ವೇಳೆ ಇಚ್ಛೆಪಟ್ಟಲ್ಲಿ ಅರ್ಜಿದಾರರೂ ಸಹ ಭಾಗವಹಿಸಬಹುದುಎರಡನೇ ಮೇಲ್ಮನವಿಯ ಫಲಶ್ರುತಿಯ ಬಗ್ಗೆ ತಮಗೆ ತೃಪ್ತಿಯಿಲ್ಲದಿದ್ದರೆ ವಿವರವಾದ ಕಾರಣ ನೀಡಿ ಪುನರ್ವಿಮರ್ಶೆಗೆ ಮತ್ತೆ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಹೈಕೋರ್ಟ್ ಅಥವಾ ಸುಪ್ರೀಮ್ ಕೋರ್ಟ್ಗೆ ಮೇಲ್ಮನವಿ ಮಾಡಿ ರಿಟ್ ಅರ್ಜಿ ಸಲ್ಲಿಸಬಹುದುರಾಜ್ಯಸರ್ಕಾರಕ್ಕೆ ಸಂಬಂಧಿಸಿದ ಮನವಿಯನ್ನು ರಾಜ್ಯ ಆಯೋಗಕ್ಕೂ ಕೇಂದ್ರಕ್ಕೆ ಸಂಬಂಧಿಸಿದ್ದನ್ನು ಕೇಂದ್ರ ಆಯೋಗಕ್ಕೂ ಸಲ್ಲಿಸಬಹುದೇ ಹೊರತು ಒಂದು ಇನ್ನೊಂದರ ಅಧೀನವಲ್ಲ.

ಉತ್ತರ ನೀಡದ ಅಧಿಕಾರಿಗಳಿಗೆ ದಂಡವಿದೆಯೇ?

ಹೌದುಕಾರಣವಿಲ್ಲದೆ ಮಾಹಿತಿಯನ್ನು ನೀಡದೆ ಇರುವುದು ಮಾಹಿತಿ ನಿರಾಕರಣೆಗೆ ಸಮವೆಂದು ಪರಿಗಣಿಸಲಾಗಿದೆಇದರಿಂದಾಗಿ ಹೀಗೆ ಮಾಹಿತಿ ನೀಡಲು ವಿಫಲನಾಗುವ ಅಧಿಕಾರಿಯು ದಂಡನೆಗೆ ಅರ್ಹನಾಗಿದ್ದಾನೆಎರಡನೇ ಮೇಲ್ಮನವಿಯನ್ನು ಸಲ್ಲಿಸುವಾಗಲೇ ಪರಿಹಾರಕ್ಕಾಗಿಯೂ ಬೇಡಿಕೆ ಇಡಬಹುದಾಗಿದೆದಿನವೊಂದಕ್ಕೆ ೨೫೦/- ರೂಪಾಯಿ ದಂಡ (ಹೆಚ್ಚೆಂದರೆ ೨೫,೦೦೦/-) ತೆರಲು ಅಧಿಕಾರಿ ಬಾಧ್ಯನಾಗಿರುತ್ತಾನೆ.

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ವಿಳಾಸ ನೇ ಮಹಡಿ ನೇ ಸ್ಟೇಜ್ , ಬಹುಮಹಡಿ ಕಟ್ಟಡ(MS Building) ಡಾಅಂಬೇಡ್ಕರ್ ರಸ್ತೆಬೆಂಗಳೂರು-೫೬೦೦೦೧

ಕೇಂದ್ರ ಮುಖ್ಯಮಾಹಿತಿ ಆಯೋಗ ವಿಳಾಸಮುಖ್ಯ ಮಾಹಿತಿ ಆಯುಕ್ತರುಕೇಂದ್ರ ಮಾಹಿತಿ ಆಯೋಗ ನೇಬ್ಲಾಕ್ ನೇಮಹಡಿಹಳೇ ಜೆ.ಎನ್.ಯುಆವರಣದೆಹಲಿ.

ಕನ್ನಡಿಗರು ಮಾಹಿತಿ ಹಕ್ಕು ಕಾಯ್ದೆಯನ್ನು ಹೆಚ್ಚು ಹೆಚ್ಚು ಬಳಸಿ ಗ್ರಾಹಕಸೇವೆಯಲ್ಲಿ ಕನ್ನಡದ ಬಳಕೆ ಹೆಚ್ಚಾಗುವಂತೆ ಮಾಡಬೇಕಾಗಿದೆ. ಇನ್ನೇಕೆ ತಡಾ... ಮಾಹಿತಿ ಹಕ್ಕು ಸಹಾಯ ಸಂಸ್ಥೆಗಳ/ ಕಾನೂನು ತಜ್ಞರ ಸಹಾಯದೊಂದಿಗೆ ಇವತ್ತೇ ಶುರು ಮಾಡ್ಕೊಳೋಣ್ವಾ... ಗುರೂ!




ಭಾರತೀಯ ಸ್ಪರ್ಧಾ ಆಯೋಗ (CCI)ದ ತೀರ್ಪು: ಮುಂದೇನು?

"ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗಿರೋದು ಕನ್ನಡ ಚಿತ್ರರಂಗವೇ! ತನ್ನ ಸ್ವಾರ್ಥದಿಂದಾಗಿ, ತನ್ನ ಸದ್ಯದ ಲಾಭಕ್ಕಾಗಿ ಇಡೀ ಚಿತ್ರರಂಗದ ಜೊತೆಜೊತೆಗೆ ಕನ್ನಡನಾಡನ್ನೇ ಬಲಿಕೊಡಲು ಮುಂದಾಗಿರೋ ಚಿತ್ರರಂಗದ ಕೆಲವು ಜನರಿಂದಾಗಿಯೇ ಈ ದುಃಸ್ಥಿತಿ ಬಂದಿದೆ!!"

CCI ಅಂದರೆ, ಭಾರತೀಯ ಸ್ಪರ್ಧಾ ಆಯೋಗವು ಮೊನ್ನೆ ಮೊನ್ನೆ "ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಬಿಡುಗಡೆಗೆ ಏಳು ವಾರಗಳ ಅಂತರ, ಇಂತಿಷ್ಟೇ ಪ್ರತಿಗಳ ಮಿತಿ ಹೇರಿರುವುದು ತಪ್ಪು, ಇನ್ಮುಂದೆ ಇವೆಲ್ಲಾ ನಡೆಯಲ್ಲಾ, ಈಗ ನೀವು ದಂಡ ಕಟ್ಟಿ" ಎಂದು ನೀಡಿದ ತೀರ್ಪನ್ನು ನೋಡಿದಾಗ ಇಂಥದ್ದೊಂದು ಭಾವನೆ ನಿಮ್ಮಲ್ಲೂ ಮೂಡಿದ್ದರೆ ಆಶ್ಚರ್ಯವಿಲ್ಲ. ಆದರೆ ಇಂಥಾ ತೀರ್ಪಿಗೆ ಕನ್ನಡ ಚಿತ್ರರಂಗದ ಹುಂಬತನದ, ಅವೈಜ್ಞಾನಿಕವಾದ, ಅಸಂವಿಧಾನಿಕವಾದ ನಿಲುವುಗಳು ಹೇಗೆ ಕಾರಣವೋ, ಹಾಗೇ ಭಾರತದ ಹುಳುಕಿನ ಭಾಷಾನೀತಿಯೂ, ಈ ನೀತಿಯ ಹುನ್ನಾರವನ್ನು ಅರಿತೋ ಅರಿಯದೆಯೋ ತೆಪ್ಪಗಿರುವ ಕರ್ನಾಟಕ ರಾಜ್ಯಸರ್ಕಾರವೂ ಕಾರಣ ಎಂದರೆ ತಪ್ಪಾಗಲಾರದು. ಹೇಗೆ ಅಂತಾ ಸ್ವಲ್ಪ ನೋಡೋಣ ಬನ್ನಿ!
ಸಮಸ್ಯೆ ಏನು?


ಕರ್ನಾಟಕದಲ್ಲಿ ಸುಮಾರು ೬೦೦ ಚಿತ್ರಮಂದಿರಗಳಿವೆ. ಈಚಿನ ದಿನಗಳಲ್ಲಿ ಯಾವುದೇ ಚಿತ್ರ ಬಿಡುಗಡೆಯಾದರೆ ಒಟ್ಟೊಟ್ಟಿಗೆ ಹೆಚ್ಚೆಚ್ಚು ತೆರೆಗಳಲ್ಲಿ ಬಿಡುಗಡೆ ಮಾಡುವ ಪದ್ದತಿ ಶುರುವಾಗಿದೆ. ಪರಭಾಷಾ ಚಿತ್ರಗಳು ಬಿಡುಗಡೆಯಾಗಬೇಕಾದರೆ ಒಟ್ಟಿಗೆ ಇನ್ನೂರು ಮುನ್ನೂರು ತೆರೆಗಳನ್ನು ಬಳಸಲು ಶುರುಮಾಡಿದರೆ ಆಗ ಕನ್ನಡ ಚಿತ್ರಗಳಿಗೆ ತೆರೆಗಳೇ ಸಿಗುವುದಿಲ್ಲ ಎನ್ನುವುದು ಸಮಸ್ಯೆ. ಹಬ್ಬಗಳ ಸಮಯದಲ್ಲಂತೂ ಹೆಚ್ಚು ಜನ ಸಿನಿಮಾ ನೋಡ್ತಾರೆ ಎಂದು ಎಲ್ಲರೂ ಒಟ್ಟೊಟ್ಟಿಗೆ ಬಿಡುಗಡೆ ಮಾಡಲು ಮುಂದಾಗುತ್ತಾರೆ. ಹಾಗೆ ಕನ್ನಡ ಸಿನಿಮಾಗಳೇ ಸಾಲುಸಾಲಾಗಿ ನಿಂತಿರುವಾಗ ಹಿಂದೀದೋ, ಮತ್ತೊಂದು ಭಾಷೇದೋ ಚಿತ್ರಗಳು ಮುನ್ನೂರು ನಾನ್ನೂರು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡರೆ ಏನು ಮಾಡೋದು? ಹೌದು! ಬಿಡುಗಡೆ ಎಷ್ಟ್ರಲ್ಲೇ ಆಗಲಿ, ಚೆನ್ನಾಗಿಲ್ಲದಿದ್ದರೆ ಒಂದೇ ವಾರಕ್ಕೆ ಎತ್ತಂಗಡಿಯೂ ಆಗಲಿ.. ಆದರೆ ಹಬ್ಬದಂಥಾ ಪ್ರಮುಖ ಸಂದರ್ಭದಲ್ಲಿ ನಮ್ಮ ಚಿತ್ರಗಳಿಗೆ ಟಾಕೀಸು ಸಿಗದೆ ಹೋಗುತ್ತದಲ್ಲಾ ಇದಕ್ಕೇನು ಮಾಡೋದು? ಇಂತಹ ಕಾರಣದಿಂದಲೇ ಪರಭಾಷೆಯ ಚಿತ್ರಗಳಿಗೆ ಚಿತ್ರಮಂದಿರಗಳ ಸಂಖ್ಯೇನ ಮಿತಿಗೊಳಿಸೋ ಪ್ರಯತ್ನಾನ ಚಿತ್ರರಂಗದವರು ಮಾಡಿದ್ದು ಅನ್ನಿಸುತ್ತದೆ. ಇದೇ ಕೆಲಸಾನ ರಾಜ್ಯಸರ್ಕಾರವೇ ಮಾಡಿದ್ದಲ್ಲಿ ಸಮಸ್ಯೇನೇ ಇರ್ತಿರಲಿಲ್ಲವೇನೋ? ಆಗ ಕೇಸು ಸರ್ಕಾರದ ಮೇಲೆ ಬೀಳ್ತಿತ್ತು ಅನ್ನೋದಾದರೆ ಸರ್ಕಾರ ತನ್ನ ಬತ್ತಳಿಕೆಯಲ್ಲಿ ಇರೋ ನೂರಾರು ಅಸ್ತ್ರಗಳನ್ನು ಬಳಸಿ ಪರಭಾಷಾ ಚಿತ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಿತ್ತು!

ಸ್ಪರ್ಧಾ ಆಯೋಗದ ತೀರ್ಪು

ಕೆಲವರ್ಷಗಳ ಹಿಂದೆ ಕರ್ನಾಟಕದಲ್ಲಿ ರಿಲೆಯನ್ಸ್ ಸಂಸ್ಥೆಯವರು ಕೈಟ್ ಎನ್ನುವ ಹಿಂದೀ ಸಿನಿಮಾ ಬಿಡುಗಡೆಗೆ ಮುಂದಾಗಿದ್ದರು. ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಹಾಕಿರುವ ನಿಯಮಗಳನ್ನು ಲೆಕ್ಕಕ್ಕಿಡದೆ ತಮಗೆಷ್ಟು ಕಡೆ ಆಗುತ್ತೋ ಅಷ್ಟೂ ಕಡೆ ಸಿನಿಮಾ ಬಿಡುಗಡೆಗೆ ಮುಂದಾಗಿದ್ದರು. ಆಗ ಕನ್ನಡ ಚಿತ್ರರಂಗದೋರು ಭಾರೀ ಪ್ರತಿಭಟನೆ ಮಾಡಿದ್ದರಿಂದಾಗಿ ಅದಕ್ಕೆ ಮಣಿದವರಂತೆ ಮಾಡಿ ಹಿಂದಡಿಯಿಟ್ಟರು. ನಂತರ ಭಾರತೀಯ ಸ್ಪರ್ಧಾ ಆಯೋಗ (CCI)ದ ಮುಂದೆ ಒಂದು ದೂರು ಕೊಟ್ಟು ‘ಹೀಗೆ ಕರ್ನಾಟಕದ ಚಿತ್ರರಂಗದವರು ಸಂಘ ಮಾಡಿಕೊಂಡು ಅಸಂವಿಧಾನಿಕ ನಿಯಮಗಳನ್ನು ಹೇರಿ ನಮ್ಮನ್ನು ಸ್ಪರ್ಧೆ ಮಾಡದಂತೆ ತಡೆದು ನಷ್ಟಕ್ಕೆ ಕಾರಣರಾಗಿದ್ದಾರೆ’ ಎಂದರು. ಈ ದೂರನ್ನು ಸಲ್ಲಿಸಿದವರು ಬರೀ ರಿಲಯನ್ಸ್‍ನವರು ಮಾತ್ರವಲ್ಲ. ಇವರೊಟ್ಟಿಗೆ ನಂತರದಲ್ಲಿ ಯುಟಿವಿ  ಸಾಫ಼್ಟ್‌ವೇರ್ ಕಮ್ಯುನಿಕೇಶನ್ಸ್, ಎರೋಸ್ ಇಂಟರ್ ನ್ಯಾಶನಲ್ ಮತ್ತು ಫಿಕ್ಕಿ ಮಲ್ಟಿಫ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾದವರು ಸೇರಿಕೊಂಡರು. ದೂರಿನ ಮುಖ್ಯ ಅಂಶ ಏನೆಂದರೆ ಕೆಲವು ಸಂಘ ಸಂಸ್ಥೆಗಳು ಸೇರಿಕೊಂಡು ನ್ಯಾಯವಾಗಿ ತಾವು ವ್ಯಾಪಾರ ಮಾಡಲು ಬಿಡುತ್ತಿಲ್ಲ, ಸದಸ್ಯತ್ವ ತೆಗೆದುಕೊಳ್ಳದೆ ವ್ಯವಹರಿಸುವಂತಿಲ್ಲ ಎಂಬ ಕಟ್ಟಳೆ ಮಾಡುತ್ತಿವೆ ಎಂಬುದಾಗಿದೆ. ಇದಕ್ಕೆ ಸ್ಪಂದಿಸಿರುವ ಸಿಸಿಐ, ಪ್ರಾದೇಶಿಕ ಚಿತ್ರರಂಗಗಳ ಮೇಲೆ ಗದೆ ಬೀಸಿದೆ. ತೀರ್ಪಿನ ಅನ್ವಯ ಇನ್ಮುಂದೆ ಹೀಗೆಲ್ಲ ಮಾಡುವಂತಿಲ್ಲ. "ಇದುವರೆಗೆ ನಡೆದುಕೊಂಡ ರೀತಿ ತಪ್ಪು. ಪರಭಾಷಾ ಚಿತ್ರಗಳನ್ನು ಯಾವುದೇ ಪ್ರಮಾಣದಲ್ಲಿ ಬಿಡುಗಡೆ ಮಾಡುವ ಹಕ್ಕು, ಯಾವುದೇ ಸಂಘ ಸಂಸ್ಥೆಯ ಸದಸ್ಯರಾಗದೆಯೂ ವ್ಯಾಪಾರ ಮಾಡುವ ಹಕ್ಕು ಇದೆ. ಯಾವುದೇ ಭಾಷೆಯ ಚಿತ್ರಗಳನ್ನು ಎಷ್ಟಾದರೂ ಕೇಂದ್ರಗಳಲ್ಲಿ ಬಿಡುಗಡೆ ಮಾಡಬಹುದು" ಎಂದಿದೆ ಈ ತೀರ್ಪು.

ತೀರ್ಪಿನ ತೊಡಕು

ಈ ತೀರ್ಪನ್ನು ನೋಡಿದಾಗ ಚಿತ್ರರಂಗದವರ ನಡವಳಿಕೆ ಸರಿಯಿಲ್ಲವೆಂದೂ, ಸ್ಪರ್ಧೆಗೆ ತೆರೆದುಕೊಳ್ಳುವುದು ಸರಿಯಾದುದೆಂದೂ ಅನ್ನಿಸಬಹುದು. ಆದರೆ ವಾಸ್ತವವಾಗಿ ಇದು ಒಂದು ಭಾಷಾ ಜನಾಂಗದ ಮೇಲೆ ಎಸಗಲಾಗುತ್ತಿರುವ ಅನ್ಯಾಯದ ಕ್ರಮ ಎನ್ನುವುದನ್ನು ನಾವು ಅರಿಯಬಹುದಾಗಿದೆ. ಈ ತೀರ್ಪಿನಿಂದಾಗಿ ನಾಳೆ ಕನ್ನಡನಾಡಿನಲ್ಲಿ ಕನ್ನಡ ಚಿತ್ರಗಳು  ಮೊದಲು ಚಿತ್ರಮಂದಿರಗಳಿಲ್ಲದೆ ಸೊರಗಬೇಕಾಗುತ್ತದೆ, ನಂತರ ಚಿತ್ರ ತಯಾರಿಸುವರೂ, ನೋಡುವವರೂ ಇಲ್ಲದೆ ಶಾಶ್ವತವಾಗಿ ಕಣ್ಮುಚ್ಚಬೇಕಾಗುತ್ತದೆ. ಹಿಂದೀ, ತೆಲುಗು, ತಮಿಳು ಮೊದಲಾದ ಪರಭಾಷಾ ಚಿತ್ರಗಳಿಗೆ ಕರ್ನಾಟಕದ ಮಾರುಕಟ್ಟೆ ಮೊದಲ ಮಾರುಕಟ್ಟೆಯಲ್ಲ. ಅವುಗಳಿಗೆ ಇದು ಹೆಚ್ಚುವರಿ ಮಾರುಕಟ್ಟೆ ಮಾತ್ರಾ. ದಾರ ಕಟ್ಟಿ ಬೆಟ್ಟ ಎಳೆದು ಬಂದರೆ ಬೆಟ್ಟ ಹೋದರೆ ದಾರ ಎನ್ನುವಂತೆ ಇಲ್ಲಿನ ಚಿತ್ರಮಂದಿರಗಳಲ್ಲಿ ತಮ್ಮ ಚಿತ್ರಗಳು ಬಿಡುಗಡೆಯಾಗಲು ಅತಿ ಕಡಿಮೆ ದುಡ್ಡಿಗೆ ವಿತರಣೆಯ ಹಕ್ಕುಗಳನ್ನು ಇವರು ನೀಡಬಲ್ಲವರಾಗುತ್ತಾರೆ. ಅದೇ ಹೊತ್ತಲ್ಲಿ ಖಾಲಿ ಚಿತ್ರಮಂದಿರಗಳನ್ನೂ ದುಬಾರಿ ಬಾಡಿಗೆ ಕೊಟ್ಟು ಉಳಿಸಿಕೊಳ್ಳಬಲ್ಲವರಾಗಿರುತ್ತಾರೆ. ಹಾಗಾಗಿ ಇಲ್ಲೊಂದು ನ್ಯಾಯಯುತ ಸ್ಪರ್ಧೆಯೇ ಇಲ್ಲವಾಗುತ್ತದೆ. ಇದೇ ಕಾರಣಕ್ಕಾಗಿ ಕರ್ನಾಟಕದಲ್ಲಿ ಕನ್ನಡ ಚಿತ್ರರಂಗ ಕಣ್ಣು ಮುಚ್ಚಬಹುದಾಗಿದೆ. (ತಮಾಶೆಯೆಂದರೆ ಸಿಸಿಐ ನೇರವಾಗಿ ಇಲ್ಲಿ  ಎದುರಾಳಿಗಳನ್ನಾಗಿಸಿರುವುದು ಪ್ರಾದೇಶಿಕ ಚಿತ್ರಗಳು ಮತ್ತು ರಾಷ್ಟ್ರೀಯ ಚಿತ್ರಗಳನ್ನಂತೆ! ವರದಿಯಲ್ಲಿ ಹೀಗೆ ಬರೆಯುವ ಮೂಲಕ ಪತ್ರಿಕೆ, ಹಿಂದೀಯೊಂದೇ ರಾಷ್ಟ್ರೀಯ ಎನ್ನುವ ತೀರ್ಪನ್ನು ನೀಡಿದೆ!) ಮೂಲತಃ ಸಿಸಿಐ ನೀಡಿರುವ ತೀರ್ಪಿನಿಂದ ಎಲ್ಲಾ ರಾಜ್ಯಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಕಡೆಗೆ ಲಾಭವಾಗುವುದು ಹಿಂದೀ ಚಿತ್ರಗಳಿಗೇ ಆಗಿದೆ. ಇದಕ್ಕೆ ಹೊಣೆ ಮೊದಲೇ ಹೇಳಿದ ಹಾಗೆ ಚಿತ್ರರಂಗ, ಕೇಂದ್ರ ಮತ್ತು ರಾಜ್ಯಸರ್ಕಾರಗಳೇ ಆಗಿವೆ.

ಕೇಂದ್ರಸರ್ಕಾರ ಮತ್ತು ಸ್ಪರ್ಧೆ!

ಭಾರತದ ಕೇಂದ್ರಸರ್ಕಾರಕ್ಕೆ ಭಾರತೀಯರೆಲ್ಲಾ ಒಂದೇ. ಹಾಗಾಗಿ ಹಿಂದೀ ಸಿನಿಮಾ ಕನ್ನಡ ಚಿತ್ರರಂಗವನ್ನು ಕೊಂದು ಹಾಕಿದರೂ ಅದಕ್ಕೆ ಪರವಾಗಿಲ್ಲ.. ಏಕೆಂದರೆ ಹಿಂದೀ ಈ ದೇಶದ ಬಹುಜನರ ಭಾಷೆ ಎನ್ನುವುದು ಅದರ ಲೆಕ್ಕಾಚಾರವಿರಬಹುದು. ನೀವೇ ಗಮನಿಸಿ ನೋಡಿ... ಈ ದೇಶದಲ್ಲಿ ಗ್ರಾಹಕ ಸೇವೆ ಕಾಯ್ದೆಗಳಲ್ಲಿ ಭಾಷಾ ಆಯಾಮವೇ ಇಲ್ಲ! ಕನ್ನಡನಾಡಿನಲ್ಲಿ ಕನ್ನಡದಲ್ಲಿ ಎಲ್ಲಾ ಸೇವೆಗಳೂ ಸಿಗಬೇಕೆನ್ನುವ ಒತ್ತಾಸೆಯೇ ಕೇಂದ್ರಕ್ಕಿಲ್ಲ. ಅದೇನಿದ್ದರೂ ‘ಭಾರತದಲ್ಲಿ ಬಹುಜನರಾಡುವ ಭಾಷೆಯಾದ ಹಿಂದೀಯಲ್ಲಿ ಎಲ್ಲಾ ಸೂಚನೆಗಳು ಇರತಕ್ಕದ್ದು’ ಎಂದು ಕಾನೂನು ಮಾಡಬಲ್ಲದು ಅಷ್ಟೇ. ಹಿಂದೀಯೇತರ ಭಾಷೆಗಳ ಬಗ್ಗೆ ಇಂತಹ ಕಿಂಚಿತ್ತು ಸಂವೇದನೆಯನ್ನೂ ಹೊಂದಿರದ ಕೇಂದ್ರಸರ್ಕಾರ, ಅರವತ್ತು ವರ್ಷಗಳಿಂದ ಮಾಡಿಕೊಂಡು ಬಂದಿರುವುದು ಮಾತ್ರಾ ಹಿಂದಿಯನ್ನು ಭಾರತೀಯರಿಗೆಲ್ಲಾ ಒಪ್ಪಿಸುವ ಕೆಲಸವನ್ನು ಮಾತ್ರವೇ. ಸಮಾಜವಾದದ ಹೆಸರಲ್ಲಿ ಸಮೂಹ ಮಾಧ್ಯಮಗಳನ್ನು ತಾನೇ ನಡೆಸುತ್ತಾ ದೂರದರ್ಶನ, ಆಕಾಶವಾಣಿಗಳ ಮೂಲಕ ಮಾಡಿದ್ದು ಹಿಂದೀ ಪ್ರಚಾರವನ್ನೇ. ಇಂತಹ ನಿಲುವಿನ ಕೇಂದ್ರಸರ್ಕಾರಕ್ಕೆ ಇನ್ನೆಂಥಾ ಮನಸ್ಥಿತಿ ಇದ್ದೀತು? ಫೇರ್ ಕಾಂಪಿಟೇಶನ್ ಪರವಾಗಿ ತೀರ್ಪು ನೀಡುವೆ ಎನ್ನುವ ಸಂಸ್ಥೆಗೆ ಮೊದಲ ಮಾರುಕಟ್ಟೆ ಮತ್ತು ಹೆಚ್ಚುವರಿ ಮಾರುಕಟ್ಟೆಗಳ ವ್ಯತ್ಯಾಸವನ್ನೇ ಗುರುತಿಸಲಾಗದ ಕುರುಡುತನ ಇದೆಯೇನೋ ಎಂಬ ಅನುಮಾನ ಕನ್ನಡಿಗರದ್ದು.

ಕನ್ನಡ ಚಿತ್ರರಂಗದ ತಪ್ಪುಹೆಜ್ಜೆಗಳು

ತಾವೆಲ್ಲಾ ಸೇರಿಕೊಂಡು ಒಂದು ಸಂಘ ಮಾಡಿಕೊಂಡು ಬಿಟ್ಟರೆ ಇಡೀ ವ್ಯವಸ್ಥೆ ತಾನು ಹೇಳಿದಂತೆ ನಡೆಯುತ್ತದೆ ಎನ್ನುವ ಭ್ರಮೆ ನಮ್ಮ ಚಿತ್ರ ಜಗತ್ತಿಗಿದ್ದಂತಿದೆ. ಇಂಥಾ ಭ್ರಮೆಯನ್ನೇ ಈಗಿನ ಈ ತೀರ್ಪು ಒಡೆದು ಹಾಕಿರುವುದು. ಈ ಭ್ರಮೆಯ ಇನ್ನೊಂದು ರೂಪ ಡಬ್ಬಿಂಗ್ ನಿಷೇಧ ಎನ್ನುವ ನಿಲುವಿನದೂ ಆಗಿದೆ. ತಾವು ಹೇಳಿದ್ದೆ ಆಟ ಎನ್ನುವಂತೆ ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿಯೇ ಇಂದು ಚಿತ್ರರಂಗಕ್ಕೆ ಈ ಸ್ಥಿತಿ ಬಂದಿರುವುದು ಎಂದರೆ ತಪ್ಪಿಲ್ಲ, ಅರೆರೆ... ಡಬ್ಬಿಂಗ್ ಮಾತ್ಯಾಕೆ ಇಲ್ಲಿ ಬಂತು ಎಂದುಕೊಳ್ಳುವಿರಾದರೆ ಸ್ವಲ್ಪ ತಾಳಿ, ನಿಧಾನಕ್ಕೆ ಆ ವಿಷಯಕ್ಕೂ ಹೋಗೋಣ. ಸದ್ಯದ ಮಾತೆಂದರೆ ತಮ್ಮ ಉದ್ಯಮದ ಉಳಿವಿಗಾಗಿ ಕನ್ನಡ ಚಿತ್ರರಂಗವು ತೆಗೆದುಕೊಂಡಿರುವ 'ಏಳು ವಾರ ತಡೆದು ಬಿಡುಗಡೆ ಮಾಡಬೇಕು, ನಾಲ್ಕೇ ಪ್ರಿಂಟ್ ಇರಬೇಕು, ಡಬ್ಬಿಂಗ್ ನಿಷೇಧ...' ಇತ್ಯಾದಿ ಕ್ರಮಗಳು ಸಂವಿಧಾನಬಾಹಿರವಾಗಿವೆ. ಹಾಗಾಗೆ ಈಗ ಸಿಸಿಐನ ತೀರ್ಪಿನಿಂದ ಕಂಗೆಟ್ಟಿರುವ ಚಿತ್ರರಂಗವು ದೇಶದ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗುವ ಮಾತಾಡುತ್ತಿದೆ. ಅಲ್ಲೂ ಕೂಡಾ ಇದಕ್ಕಿಂತ ಭಿನ್ನವಾದ ತೀರ್ಪಿನ ಸಾಧ್ಯತೆ ಕಮ್ಮಿಯೇ. ಹಾಗೆ ಅಲ್ಲೂ ಇದೇ ತೀರ್ಪು ಬಂದಲ್ಲಿ ಮುಂದಿನ ದಾರಿಯೇನು? ಬೀದಿಗಿಳಿದು ಹೋರಾಟವೇ? ಉಪವಾಸ ಸತ್ಯಾಗ್ರಹವೇ? ಮತ್ತೊಂದು ಸುತ್ತಿನ ಹೋರಾಟವೇ?

ಚಿತ್ರರಂಗದ ಗೆಳೆಯರು ಅರಿಯಬೇಕಾದ ಒಂದು ಮಾತೆಂದರೆ ಸ್ಪರ್ಧೆಯನ್ನು ಎದುರಿಸಲು ಇಂಥಹ ಅಸಂವಿಧಾನಿಕ ಕ್ರಮಗಳು ಶಕ್ತವಾಗಿಲ್ಲ. ಸ್ಪರ್ಧೆ ಇದ್ದಲ್ಲಿ ಗುಣಮಟ್ಟ, ಸ್ಪರ್ಧೆಯಿದ್ದಲ್ಲಿ ಗ್ರಾಹಕನಿಗೆ ಅತ್ಯುತ್ತಮ ಸೇವೆ. ಹಾಗಾಗಿ ಸ್ಪರ್ಧೆ ಸಹಜ ಮತ್ತು ಅನಿವಾರ್ಯವೇ ಆಗಿದೆ! ಹಾಗಾದರೆ ಸ್ಪರ್ಧೆಯನ್ನೂ ಎದುರಿಸಿ, ಎದುರಾಳಿಗೂ ಸಮಾನ ಅವಕಾಶ ನೀಡಿ, ಕನ್ನಡ ಚಿತ್ರರಂಗವನ್ನೂ ಕಾಪಾಡಿಕೊಳ್ಳುವುದು ಯಾರ ಹೊಣೆ? ಇಷ್ಟಕ್ಕೂ ಸಮಾನ ಅವಕಾಶದ ಸ್ಪರ್ಧೆ ಎಂದರೇನು? ಹೇಗೆ ಕರ್ನಾಟಕದ ಒಳಗೆ ಕನ್ನಡ ಮತ್ತು ಕನ್ನಡೇತರ ಚಿತ್ರಗಳು ಸಮಾನ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಕನ್ನಡ ಕನ್ನಡತನ ಕನ್ನಡಿಗರ ಉಳಿವಿಗೆ ಬೇಕಿರುವುದು ಏನು? ಯಾರು ಈ ಹೊಣೆ ಹೊಂದಿದ್ದಾರೆ? ಎಂದರೆ ಇದಕ್ಕುತ್ತರ ಕರ್ನಾಟಕ ರಾಜ್ಯಸರ್ಕಾರ ಎನ್ನುವುದಾಗಿದೆ.

ರಾಜ್ಯಸರ್ಕಾರ ಮರೆತ ಹೊಣೆಗಾರಿಕೆ!

ಭಾರತ ಸರ್ಕಾರಕ್ಕೆನೋ ಕನ್ನಡನಾಡು ನುಡಿ ಉಳಿಸಬೇಕೆಂಬ ದರ್ದು ಇಲ್ಲದಿರಬಹುದು, ಸಹಿಸೋಣ. ಆದರೆ ನಮ್ಮದೇ ನಾಡಿನ ಸರ್ಕಾರಗಳಿಗೆ ಏನು ಧಾಡಿ ಬಂದಿದೆಯೋ ಗೊತ್ತಿಲ್ಲ. ನ್ಯಾಯಯುತ ಸ್ಪರ್ಧೆಯ ಸರಿಯಾದ ಅರ್ಥವಾದರೂ ರಾಜ್ಯಸರ್ಕಾರ ತಿಳಿದಿರಬೇಕು. ನ್ಯಾಯಯುತ ಸ್ಪರ್ಧಾತ್ಮಕೆಯ ಹೆಸರಲ್ಲಿ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಎಗ್ಗುಸಿಗ್ಗಿಲ್ಲದೆ ಬಿಡುಗಡೆಯಾಗುವುದು ಕನ್ನಡಿಗರ ಮೇಲೆ ಕೇಂದ್ರ ನಡೆಸುವ ದೌರ್ಜನ್ಯ ಎನ್ನುವುದನ್ನಾದರೂ ಅರಿಯಬೇಕು. ಇದರಿಂದಾಗುವ ಕೆಡುಕನ್ನು ತಪ್ಪಿಸಬಲ್ಲ ಮನಸ್ಸು ನಮ್ಮ ಸರ್ಕಾರಕ್ಕಿರಬೇಕು. ವಿಶ್ವಸಂಸ್ಥೆಯ ಭಾಷಾ ನೀತಿಯಲ್ಲಿ ಏನು ಹೇಳಿದೆ ಎನ್ನುವ ಅರಿವು ಸರ್ಕಾರಕ್ಕೆ ಇರಬೇಕು. ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾಹಕ್ಕು ಘೋಷಣೆಯ ಈ ಎರಡು ಅಂಶಗಳೇ ಸಾಕು...

Article 44
All language communities are entitled to access to intercultural programmes, through the dissemination of adequate information, and to support for activities such as teaching the language to foreigners, translation, dubbing, post-synchronization and subtitling.
Article 45
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life).
ಆದರೆ ಇಂದು ಕನ್ನಡ ಚಿತ್ರರಂಗವನ್ನು ಅದರ ಸಂಘ ಸಂಸ್ಥೆಗಳಿಗೆ ಆಳಿಕೊಳ್ಳಲು ಬಿಟ್ಟಂತೆ ಸರ್ಕಾರ ಸುಮ್ಮನಿದೆ. ನಾಳೆ ಪರಭಾಷಾ ಚಿತ್ರವೊಂದು ಬಿಡುಗಡೆಯಾಗಿ ಏನಾದರೋ ಪ್ರತಿಭಟನೆ ಗಿತಿಭಟನೆ ಅಂತಾ ಗಲಾಟೆಯಾದರೆ ಮಾತ್ರಾ ಕಾನೂನು ಸುವ್ಯವಸ್ಥೆ ಎಂದು ಲಾಟಿ ಹಿಡಿದು ಮೈಮೇಲೆ ಬಿದ್ದೀತು ಅಷ್ಟೇ! ಇಂಥದಕ್ಕೆ ಆಸ್ಪದ ನೀಡದೆ, ಈಗಲೇ ಎಚ್ಚೆತ್ತು  ಸೂಕ್ತಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಆಗ್ರಹ! ಪ್ರೊಟೆಕ್ಷನಿಸಂ ಅನ್ನೋದು ಇರಬಾರದು, ಅದು ಸ್ಪರ್ಧಾ ಮನೋಭಾವಕ್ಕೆ ವಿರುದ್ಧವಾಗಿದೆ ಎನ್ನುವ ಮಾತು ಒಪ್ಪತಕ್ಕದ್ದಾದರೂ ಕೆಲವಷ್ಟು ವಿಷಯಗಳಿಗೆ ಈ ರೀತಿಯ ರಕ್ಷಣೆ ಬೇಕಾಗಿಯೇ ಇರುತ್ತದೆ ಮತ್ತು ಜಗತ್ತಿನ ಯಾವ ದೇಶದಲ್ಲೂ ಇಂತಹ ರಕ್ಷಣೆ ಇಲ್ಲದೆ ಇಲ್ಲ. ಹಾಗಾಗಿ ಈ ಹೊಣೆ ರಾಜ್ಯಸರ್ಕಾರದ್ದೇ ಆಗಿದೆ.

ಕನ್ನಡ ಚಿತ್ರರಂಗಕ್ಕಿಂತಾ ಕನ್ನಡ ಸಮಾಜ ಪ್ರಮುಖವಾದುದು!

ಹೌದೂ! ಇಂಥದ್ದೊಂದು ಮಾತು ಹೇಳಲೇಬೇಕಾಗಿದೆ. ಇಡೀ ಕನ್ನಡ ಸಮಾಜದ ಒಂದು ಅಂಗ ಮಾತ್ರವೇ ಕನ್ನಡ ಚಿತ್ರರಂಗ. ಅದು ತನ್ನ ಉಳಿವಿನ ಹೆಸರಿನಲ್ಲಿ ಅಸಂವಿಧಾನಿಕವಾಗಿ ನಡೆದುಕೊಂಡು ಇಡೀ ಕನ್ನಡಕುಲಕ್ಕೇ ಮಾರಕವಾಗುವಂತೆ ನಡೆದುಕೊಳ್ಳುವುದನ್ನು ಸಹಿಸಲಾಗುವುದಿಲ್ಲ. ಹಾಗಾಗಿ ರಾಜ್ಯಸರ್ಕಾರವೇ ಈಗ ಕೇಂದ್ರಸರ್ಕಾರದ ಜೊತೆ ಮಾತಾಡಬೇಕಾಗಿದೆ. ಆಯೋಗ ನೀಡಿದ ತೀರ್ಪು ಹೇಗೆ ವಿಶ್ವಸಂಸ್ಥೆಯ ಆಶಯಕ್ಕೆ ವಿರುದ್ಧವಾಗಿದೆ, ಹೇಗೆ ಕನ್ನಡ ಜನಾಂಗವನ್ನೇ ಕಂಟಕಕ್ಕೆ ತಳ್ಳಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಹಾಗಾದರೆ ನ್ಯಾಯಯುತ ಸ್ಪರ್ಧೆಯಲ್ಲಿ ಪರಭಾಷಿಕರು ಭಾಗವಹಿಸಬಾರದೆ? ಅವರೂ ಭಾರತೀಯರಲ್ಲವೇ? ಎನ್ನುವ ಪ್ರಶ್ನೆಗೆ ಉತ್ತರವನ್ನೂ ಕಂಡುಕೊಳ್ಳಬೇಕಾಗಿದೆ.

ಬ್ಯಾಂಗಲೋರ್ ಬೆಂಗಳೂರು ಆಗಲು ಇಷ್ಟು ವರ್ಷಾ ಯಾಕೆ ಬೇಕಾಯ್ತು ಗೊತ್ತಾ?


ಸುಮಾರು ೨೦೦೬ರಲ್ಲಿ ಡಾ. ಯು.ಆರ್. ಅನಂತಮೂರ್ತಿಯವರು ಒಂದು ಹಕ್ಕೊತ್ತಾಯವನ್ನು ಮಂಡಿಸಿ, ಇಂಗ್ಲೀಶಿನಲ್ಲಿ ತಪ್ಪಾಗಿ ಬರೆಯಲಾಗುತ್ತಿರುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮೊದಲಾದ ನಮ್ಮೂರ ಹೆಸರುಗಳನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗಬೇಕೆಂಬ ಸಲಹೆಯನ್ನು ರಾಜ್ಯಸರ್ಕಾರದ ಮುಂದಿಟ್ಟಿದ್ದರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂಸಿಂಗ್‍ರವರು ಇದಕ್ಕೆ ಶಾಸನಾತ್ಮಕವಾಗಿ ತಿದ್ದುಪಡಿಯುಂಟು ಮಾಡಲು ಮುಂದಾಗಿದ್ದರು. ಇದೀಗ ಅಂದಿಟ್ಟಿದ್ದ ಆ ಹೆಜ್ಜೆ ಮುಂದಿನ ತಿಂಗಳಿಂದ ಜಾರಿಯಾಗಲಿದೆ ಮತ್ತು ಇದುವರೆಗೂ ಅದಕ್ಕಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಮ್ಮಲ್ಲೂ ಇಲ್ಲಾ! ಆಳುವವರಲ್ಲೂ ಇಲ್ಲಾ!!

ನೀವು ಸುಮ್ಮನೆ ಗಮನಿಸಿ ನೋಡಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ತಮ್ಮ ಊರುಗಳ ಹೆಸರುಗಳನ್ನು ಬದಲಿಸಿದ್ದಾರೆ. ಕೊಲ್ಕೋತ್ತಾ, ಚೆನ್ನೈ, ತಿರುವನಂತಪುರಂ, ಮುಂಬೈ, ವಡೋದರ, ಇಂದೋರ್... ಹೀಗೆ ತಮ್ಮ ಊರಿನ ಹೆಸರುಗಳನ್ನು ಬದಲಿಸಿಕೊಂಡ ಅನೇಕ ಉದಾಹರಣೆಗಳಿವೆ.ಇತ್ತೀಚಿನ ಈ ಬದಲಾವಣೆಗಳಲ್ಲೆಲ್ಲಾ ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಮಾತ್ರಾ... ನಮ್ಮ ರಾಜ್ಯವೇ.  ಈ ವಿಳಂಬದ ಸಮಸ್ಯೆ ನಮ್ಮಲ್ಲಿರಲು ಕಾರಣವೇನು ಎಂದರೆ ಕಣ್ಣಿಗೆ ರಾಚುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆ. ರಾಜ್ಯ ರಾಜಕಾರಣದ ಯಾವ ಪಕ್ಷಕ್ಕೂ ಕನ್ನಡ, ಕನ್ನಡಿಗ, ಕನ್ನಡನಾಡಿನ ಏಳಿಗೆಯ ಪರಮಗುರಿಯೇ ಸಿದ್ಧಾಂತವಾಗಿಲ್ಲದಿರುವುದು ಮತ್ತು ಅಂತಹ ರಾಜಕೀಯ ಶಕ್ತಿಯ ಅಗತ್ಯವನ್ನು ಕನ್ನಡಿಗರು ಇನ್ನೂ ಕಂಡುಕೊಂಡಿಲ್ಲದಿರುವುದು ಇಂಥವಕ್ಕೆಲ್ಲಾ ಪ್ರಮುಖ ಕಾರಣಗಳೆಂದರೆ ತಪ್ಪಾಗಲಾರದು. ನಮ್ಮ ರಾಜಕಾರಣಿಗಳಲ್ಲೂ, ಜನರಲ್ಲೂ "ಕನ್ನಡತನವೇ ನಮ್ಮ ಮೂಲಗುರುತು" ಎನ್ನುವ ಅರಿವು ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ವಾಸ್ತವವಾಗಿ ರಾಜ್ಯಸರ್ಕಾರ ನಮ್ಮೂರ ಹೆಸರುಗಳನ್ನು ಬದಲಿಸಲು ೨೦೦೬ರಲ್ಲೇ ಪ್ರಯತ್ನ ಪಟ್ಟರೂ ಇದು ಜಾರಿಯಾಗಲು ವಿಳಂಬವಾಗುತ್ತಿದೆ. ಹೀಗೆ ಆರು ವರ್ಷ ವಿಳಂಬವಾಗಲು ಇದ್ದ ಕಾರಣ, ರಾಜ್ಯಸರ್ಕಾರದ ಈ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಒಂದೆರಡು ಅರ್ಜಿಗಳು. ಕೇವಲ ಒಬ್ಬಿಬ್ಬರು, ಒಂದೊಂದು ಕೇಸುಗಳ ಮೂಲಕ ಆರುಕೋಟಿ ಜನರ ರಾಜ್ಯಸರ್ಕಾರವನ್ನೇ ತಡೆಹಿಡಿಯಬಲ್ಲರು ಎನ್ನುವುದನ್ನು ಗಮನಿಸಬೇಕಾಗಿದೆ.

ಇದು ಬರೀ ಊರುಗಳ ಹೆಸರು ಬದಲಿಸುವಲ್ಲಿ ಎದುರಾದ ತೊಡರುಗಳಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸಿಗಬೇಕೆಂದಾಗಲೂ ವಿಳಂಬವಾಗಿತ್ತು. ಅದಕ್ಕೂ ನಾವು ಹೋರಾಡಬೇಕಾಯ್ತು. ಕೊನೆಯಲ್ಲಿ ಗಾಂಧಿ ಎನ್ನುವ ಒಬ್ಬರು ದೂರದ ಚೆನ್ನೈನ ಹೈಕೋರ್ಟಿನಲ್ಲಿ ಹಾಕಿ ಕೂತ ಒಂದು ಕೇಸಿನ ಪರಿಣಾಮವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಸಿಗದಂತಾಯ್ತು! ಈ ಕೇಸಿನ ವಿಷಯದಲ್ಲೂ ರಾಜ್ಯಸರ್ಕಾರ ಹೇಗೆ ನಡೆದುಕೊಂಡಿತೆಂಬುದನ್ನು ಮೈಸೂರಿನ ಪತ್ರಕರ್ತರೊಬ್ಬರು ಬರೆದುಕೊಂಡಿದ್ದಾರೆ

ಅಂದರೆ ನಮ್ಮಲ್ಲಿ ತುರ್ತಾಗಿ ಆಗಬೇಕಾದ್ದು ಕನ್ನಡತನದ ಜಾಗೃತಿಯೇ ಆಗಿದೆ. ಕನ್ನಡತನವನ್ನು ಕಡೆಗಣಿಸಿ ರಾಷ್ಟ್ರೀಯತೆಯೆನ್ನುವುದು ಹುಸಿತನವೇ ಆಗಿದೆ. ಕನ್ನಡತನದಿಂದಲೇ ಕನ್ನಡಿಗರ ಭಾರತೀಯತೆ, ನಮ್ಮತನದ ಉಳಿವಿನಲ್ಲೇ ರಾಷ್ಟ್ರದ ಹಿತವಿರುವುದು ಎನ್ನುವುದನ್ನು ಅರಿಯದಿದ್ದಲ್ಲಿ ನಾವು ಹೀಗೇ ಅನುಭವಿಸುತ್ತಲೇ ಇರಬೇಕಾಗುತ್ತದೆ... ನಾಡೂ ಹೀಗೇ ಇರುತ್ತದೆ! ಅಲ್ವಾ ಗುರೂ?

ಕುವೆಂಪು ಮಾತನ್ನೇ ಮರೆತ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ!


ಈ ದಾರಿತೋರುಗ ಕೈಮರ ಇರುವುದು ರಾಷ್ಟ್ರಕವಿ ಕುವೆಂಪು ಅವರ ಊರಾದ ಕುಪ್ಪಳಿಯ ಹತ್ತಿರದಲ್ಲಿ. ಕುವೆಂಪು ಅವರ ಮನೆ ಕವಿಶೈಲಕ್ಕೆ ಒಂದು ಕಿಲೋಮೀಟರ್ ದೂರವಿದೆ ಎನ್ನುವುದನ್ನೂ, ಯಾವ ಕಡೆ ಸಾಗಬೇಕೆನ್ನುವುದನ್ನೂ ತೋರಿಸುತ್ತಿರುವ ಇದನ್ನು ಒಮ್ಮೆ ಗಮನಿಸಿ ನೋಡಿದಾಗ "ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ"ದವರು ಕುವೆಂಪುರವರ ಮಾತುಗಳನ್ನು ಅರ್ಥ ಮಾಡಿಕೊಂಡಿಲ್ಲವೇನೋ ಎನ್ನುವ ರೀತಿಯಲ್ಲಿ ಈ ಫಲಕ ಹಾಕಿ ರಾಷ್ಟ್ರಕವಿಗಳ ನಿಲುವಿಗೇ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನಿಸುತ್ತಿದೆ. ಏನದು ರಾಷ್ಟ್ರಕವಿಗಳ ನಿಲುವು? ಯಾವುದರ ಬಗೆಗಿನ ನಿಲುವು? ಎನ್ನುತ್ತಿದ್ದೀರಾ? ಹಾಗಾದರೆ ಕುವೆಂಪು ಅವರ ಈ ಕವನದ ಸಾಲುಗಳನ್ನೊಮ್ಮೆ ಓದಿ ನೋಡಿ:
ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿಣೇತ್ರ I
ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ
ನುಂಗದಿದ್ದರೆ ಹಸಿವೆ, ನುಂಗಿದರೆ ಪ್ರಾಣಶೂಲ II

ತ್ರಿಭಾಷಾ ಸೂತ್ರದ ಬಗ್ಗೆ ಕುವೆಂಪು ಅವರ ವಿಚಾರಕ್ರಾಂತಿಯ ಬರಹ:
ಭಾರತದಲ್ಲಿ ಭಾಷಾಭಿಮಾನದ ಅತೀರೇಕದಿಂದ ಉಂಟಾಗಬಹುದಾದ ಗೊಂದಲವನ್ನು ಪರಿಹರಿಸಲು ಜನರು ಮೂರು ಭಾಷೆಗಳನ್ನು ಕಲಿಯಬೇಕು ಎಂದು ತ್ರಿಭಾಷಾ ಸೂತ್ರವನ್ನು ಘೋಷಿಸಲಾಗಿದೆ. ಇಂಗ್ಲಿಷನ್ನು ಅಂತರ್ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ ಹಿಂದಿಯನ್ನು ಭಾರತ ರಾಷ್ಟ್ರೀಯ ಮಾಧ್ಯಮಕ್ಕಾಗಿಯೂ ಕನ್ನಡವನ್ನು (ಇತರ ದೇಶಭಾಷೆಗಳಲ್ಲಿ ಒಂದನ್ನು) ಕರ್ನಾಟಕ ರಾಜ್ಯದ ಮಾಧ್ಯಮಕ್ಕಾಗಿಯೂ ಎಂಬರ್ಥದಲ್ಲಿ. ಮೇಲು ನೋಟಕ್ಕೆ ಇದು ಸಾಧುವಾಗಿ ತೋರುತ್ತಿದೆಯಾದರೂ ಸ್ವಲ್ಪ ವಿಚಾರಿಸಿದರೆ ಗೊತ್ತಾಗುತ್ತದೆ ಮಹಾ ಅಪಾಯಕಾರಿ ಎಂದು.
ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದೂ ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಆವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ ಕಲಿಯಬೇಕು.

ತ್ರಿಭಾಷಾ ಸೂತ್ರದ ಅಪಾಯ ಇಷ್ಟಕ್ಕೇ ಸೀಮಿತವಾಗಿಲ್ಲ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಾಜಕೀಯ ಕಾರಣಗಳಿಗಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ವೈಭವವನ್ನು ಏನೂ ಅರಿಯದ ನಮ್ಮ ಹಸುಳೆಗಳ ಮುಂದೆ ವರ್ಣಿಸಿ ಅವರ ಮನಸ್ಸನ್ನು ಅವುಗಳ ಕಡೆಗೇ ಎಳೆದು ದೇಶಭಾಷೆಗಳ ಅಧ್ಯಯನವನ್ನು ಹಿಂದಕ್ಕೊತ್ತರಿಸುವ ಪ್ರಯತ್ನವನ್ನೂ ಮಾಡುತ್ತಿರುವವರು ಅನೇಕರಿದ್ದಾರೆ.

ಆದ್ದರಿಂದ ನನ್ನ ವಾದ ಇಷ್ಟು: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ: ಅಂದರೆ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು. ಭರತಖಂಡದ ಯಾವ ವಿದ್ಯಾರ್ಥಿಯ ಮೇಲೂ ಯಾವ ಭಾಷೆಯನ್ನೂ ಬಲಾತ್ಕಾರವಾಗಿ ಹೇರಬಾರದು. ತಮ್ಮ ಆವಶ್ಯಕತೆಗೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಅವರೇ ನಿರ್ಧರಿಸಿಕೊಳ್ಳಲಿ. ಇದರಿಂದ ಬಲಾತ್ಕಾರದ ಅಂಶ ತೊಲಗುತ್ತದೆ; ಆರಿಸಿಕೊಳ್ಳುವ ಸ್ವಾತಂತ್ರ್ಯ ಪ್ರಜಾಸತ್ತಾತ್ಮಕವಾಗುತ್ತದೆ.

ಶೈಕ್ಷಣಿಕ ದೃಷ್ಟಿಯಿಂದ ಮಾತ್ರವಲ್ಲದೆ ರಾಜಕೀಯ ದೃಷ್ಟಿಯಿಂದಲೂ ಈ ಬಹುಭಾಷೆಗಳಲ್ಲಿ ದ್ವಿಭಾಷಾಸೂತ್ರ ತ್ರಿಭಾಷಾಸೂತ್ರಕ್ಕಿಂತ ಪರಿಣಾಮಕಾರಿಯಾಗಿ, ಎಲ್ಲ ಪ್ರದೇಶಗಳಿಗೂ ಸಮಾಧಾನವೊದಗಿಸಿ, ಸ್ವಭಾಷಾಭಿಮಾನ ಜನ್ಯವಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ.

ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳಬಹುದು ಎನ್ನುವುದರಿಂದ ಹಿಂದಿ ಬೇಡ ಎನ್ನುವವರಿಗೆ, ಇಂಗ್ಲಿಷ್ ಬೇಡ ಎನ್ನುವವರಿಗೆ, ಅವುಗಳನ್ನು ಬಲಾತ್ಕಾರವಾಗಿ ಹೇರಿದಂತಾಗುವುದಿಲ್ಲ; ನಿಷೇಧಿಸಿದಂತೆಯೂ ಆಗುವುದಿಲ್ಲ. ಮಹಾಜನರೇ ಕಾಲಕ್ರಮೇಣ, ತಮ್ಮ ತಮ್ಮ ಅಭಿರುಚಿ ಆವಶ್ಯಕತೆಗಳಿಗೆ ತಕ್ಕಂತೆ ಹಿಂದಿ, ಇಂಗ್ಲಿಷ್, ರಷ್ಯನ್, ಸಂಸ್ಕೃತ ಮೊದಲಾದ ಭಾಷೆಗಳನ್ನು ಯಾವ ಶೇಕಡಾವಾರು ಪ್ರಮಾಣದಲ್ಲಿ ಕಲಿಯಬೇಕೆಂಬುದನ್ನು ತಮಗೆ ತಾವೇ ಗೊತ್ತುಮಾಡಿಕೊಳ್ಳುತ್ತಾರೆ.


ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಅರ್ಥವೂ ಇಲ್ಲ. ಶೇಕಡ ಒಂದರಷ್ಟು ಜನಕ್ಕೆ ಅರ್ಧಮರ್ಧ ಇಂಗ್ಲಿಷ್ ಕಲಿಸಿ ಬ್ರಿಟೀಷರು ಇನ್ನೂರು ವರ್ಷಕ್ಕೂ ಮೇಲೆ ಸಮರ್ಥವಾಗಿ ರಾಜ್ಯಭಾರ ನಡೆಸಲಿಲ್ಲವೆ?


ತ್ರಿಭಾಷಾ ಸೂತ್ರ ಎಂಬುದು, ನಾನು ಹಿಂದೆಯೆ ಅನೇಕ ಕಡೆ ಹೇಳಿರುವಂತೆ, ಭಾರತೀಯರಿಗೊ ತ್ರಿಶೂಲಪ್ರಾಯವಾಗುತ್ತದೆ. ಎಲ್ಲರಿಗೂ ಎಲ್ಲ ಭಾಷೆಗಳೂ ಬೇಕಾಗಿಲ್ಲ ಎಂದರೆ, ಎಲ್ಲರೂ ಇಂಗ್ಲಿಷನ್ನಾಗಲಿ ಹಿಂದಿಯನ್ನಾಗಲಿ ಕಲಿಯಬೇಕಾದದ್ದು ಏಕೆ? ಯಾರಿಗೆ ಅಗತ್ಯವಿದೆಯೋ ಅಂಥವರು ಅವರಿಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಇಂತಹ ಭಾಷೆಗಳನ್ನು ಶೀಘ್ರವಾಗಿ ಸಾಹಿತ್ಯದೃಷ್ಟಿಯಿಂದಲ್ಲದೆ ಭಾಷಾದೃಷ್ಟಿಯಿಂದ ಬೋಧಿಸುವ ಕಾರ್ಯಕ್ಕಾಗಿ ಭಾಷಾ ಸಂಸ್ಥೆಗಳ ಸ್ಥಾಪನೆಯಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಲಿದೆ, ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ?


ಆದ್ದರಿಂದ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬುದೇ ನಮಗಿಂದು ಕ್ಷೇಮಕರ ಸೂತ್ರವಾಗಿದೆ. ಒಂದುವೇಳೆ ಮೂರು ಭಾಷೆಗಳನ್ನೂ ಕಲಿಯಬೇಕು ಎಂದು ಹಠ ಹಿಡಿದರೂ ಬಹುಭಾಷೆಗಳಲ್ಲಿ ಮೂರು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ವಿದ್ಯಾರ್ಥಿಗಿರಬೇಕು. ಬಹುಭಾಷೆಗಳಲ್ಲಿ ತ್ರಿಭಾಷೆಆಗಬೇಕೇ ಹೊರತೂ ಬರಿಯ ತ್ರಿಭಾಷೆಯಾಗಬಾರದು. ಬರಿಯ ತ್ರಿಭಾಷೆಯಾದರೆ ಇಂಗ್ಲಿಷ್ ಮತ್ತು ಹಿಂದಿ ಬಲಾತ್ಕಾರದ ಭಾಷೆಗಳಾಗುತ್ತವೆ. ಕನ್ನಡ ತೆಲುಗು ತಮಿಳು ಮಲೆಯಾಳ ಭಾಷೆಗಳು ತಮ್ಮ ರಾಜ್ಯಗಳಲ್ಲಿಯೆ ಐಚ್ಛಿಕ ಭಾಷೆಗಳಾಗಿ ತೃತೀಯ ಸ್ಥಾನಕ್ಕಿಳಿದು ಹಿಂದಿಯನ್ನು ಓಲೈಸುವ ಅಡಿಯಾಳುಗಳಂತಾಗಿ ತೊತ್ತುಗಳಾಗುತ್ತವೆ.


(ಹೊತ್ತಗೆ: ವಿಚಾರ ಕ್ರಾಂತಿಗೆ ಆಹ್ವಾನ, ಬರಹಗಾರರು: ಕುವೆಂಪು, ಪ್ರಕಾಶನ: ಉದಯರವಿ ಪ್ರಕಾಶನ, ಮೈಸೂರು) 

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದವರೋ, ಸರ್ಕಾರದವರೋ.. ಒಟ್ಟಲ್ಲಿ ಸಂಬಂಧಪಟ್ಟವರು ರಾಷ್ಟ್ರಕವಿಗಳ ಆಶಯಕ್ಕೆ ಪೂರಕವಾಗಿ ಸ್ಪಂದಿಸಿ ಈ ಕೈಮರವನ್ನು ತಿದ್ದಬಹುದಾ ಗುರೂ!
Related Posts with Thumbnails