ರಾಷ್ಟ್ರೀಯ ಜಲನೀತಿಗೆ ಆಗ್ರಹಿಸಲಿ ರಾಜ್ಯಸರ್ಕಾರ!


(ಫೋಟೊ: http://www.mapsofindia.com/maps/india/drainage-river-basins.html)
ಕಾವೇರಿ ನೀರು ಬೇಕು ಎಂದು ತಮಿಳುನಾಡು ಮತ್ತೊಮ್ಮೆ ಸುಪ್ರಿಂಕೋರ್ಟಿಗೆ ದೂರಲು ಮುಂದಾಗಿದೆ. ಕರ್ನಾಟಕ ನ್ಯಾಯಾಧಿಕರಣದ ತೀರ್ಪಿನಂತೆ, ಮೇ ಮತ್ತು ಜೂನ್ ತಿಂಗಳುಗಳಲ್ಲಿ ತಮಿಳುನಾಡಿಗೆ ಒಂದಿಷ್ಟು ನೀರು ಬಿಡಬೇಕಾಗಿದೆ. "ಈಗಲೇ ಅವರು ನೀರು ಖರ್ಚು ಮಾಡ್ತಿದಾರೆ, ಹಾಗಾಗಿ ನಾಲ್ಕು ಜಲಾಶಯಗಳ ನೀರನ್ನು ನಮಗೆ ಬಿಡಲು ಕಾಯ್ದಿರಿಸಿಕೊಳ್ಳಲು ಸೂಚಿಸಿ" ಎಂಬುದು ದೂರಿನ ಸಾರಾಂಶ ಎನ್ನುತ್ತಿದೆ, ವಿಜಯಕರ್ನಾಟಕದಲ್ಲಿ ದಿ.೨೫.೦೩.೨೦೧೨ರಲ್ಲಿ  ಪ್ರಕಟವಾಗಿರುವ ವರದಿ. ಇದಕ್ಕೆ ಕರ್ನಾಟಕವೂ ಸರಿಯಾದ ಉತ್ತರ ನೀಡಲಿದೆಯಂತೆ. ಗಮನಿಸಿ ನೋಡಿದರೆ ನದಿನೀರು ಹಂಚಿಕೆ ಸಮಸ್ಯೆ ತೀವ್ರವಾಗಿರುವುದು ಒಂದೇ ರಾಜ್ಯದ ಒಳಗಿನ ಪ್ರದೇಶಗಳ ನಡುವೆಯಲ್ಲ! ಅದು ನದಿಯೊಂದು ಒಂದಕ್ಕಿಂತ ಹೆಚ್ಚು ರಾಜ್ಯಗಳ ನಡುವೆ ಹರಿಯುವಾಗ ಮಾತ್ರಾ! ಏನಿದಕ್ಕೆ ಪರಿಹಾರ? 

ಪರಿಹಾರವೇನು?

ಭಾರತ ಅನ್ನೋದು ನಿಜವಾಗಲೂ ಒಂದು ಭಾರತವಲ್ಲ! ಇಲ್ಲಿ ವೈವಿಧ್ಯತೆಯೇ ಒಂದು ಸೊಬಗಾಗಿದೆ. ಪ್ರಾಂತ್ಯಗಳು  ಭೌಗಳಿಕವಾಗಿ ಭಿನ್ನ ಭಿನ್ನವಾಗಿರುವಂತೆ, ರಾಜ್ಯಗಳ ಗಡಿಗಳು ಭಾಷಾ ಆಧಾರಿತವಾಗಿವೆ. ಹೀಗೆ ಭಿನ್ನತೆ ಇರುವುದನ್ನು ಶಾಪ ಎಂದೆಣಿಸುವ ಜನರಿಗೆ ನದಿನೀರು ಹಂಚಿಕೆಯ ವಿವಾದಗಳನ್ನು ಕಂಡಾಗ ಮೇಲಿನ ನಕ್ಷೆಯಂತೆ ರಾಜ್ಯ ವಿಂಗಡನೆಯಾಗಬೇಕಿತ್ತು ಅನ್ನಿಸಿದರೆ ಅಚ್ಚರಿಯಿಲ್ಲ! ವಾಸ್ತವವಾಗಿ ಈಗ ನದಿನೀರು ಹಂಚಿಕೆಯ ಸಮಸ್ಯೆಯಿದೆ ಅಂತಾ ನಡಿಪಾತ್ರದಂತೆ ಗಡಿ ಮಾಡಬೇಕೆಂದುಕೊಂಡರೆ, ನಾಳೆ ಭಾಷೆಯ ಸಮಸ್ಯೆ, ಗಡಿ ಸಮಸ್ಯೆ ಆಡಳಿತದ ಸಮಸ್ಯೆ ಎಂದೆಲ್ಲಾ ಬಂದಾಗ ಅವುಗಳಂತೆ ರಾಜ್ಯರಚನೆ ಆಗಬೇಕು ಎನ್ನಿಸೀತು! ಮತ್ತೇನು ಇದಕ್ಕೆ ಪರಿಹಾರ? ರಾಜ್ಯಗಳು ಪರಸ್ಪರ ಕಿತ್ತಾಡಬಾರದು ಎನ್ನುವ ಆಶಯ ಸರಿಯಾದದ್ದೇ. ಆದರೆ ತಮ್ಮ ನಾಡಿನ ಪ್ರಜೆಗಳ ಹಿತಕಾಪಾಡಲು ಒಂದೊಂದು ರಾಜ್ಯ ಮುಂದಾಗುವಾಗಲೂ ನೆರೆಯವರೊಡನೆ ಇಂತಹ ತಿಕ್ಕಾಟ ಸಹಜವೇ ಆಗಿದೆ. ರಾಜ್ಯಗಳು ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವುದು ಭಯಂಕರ ಆಶಾವಾದ ಅಷ್ಟೇ. ತಮಿಳುನಾಡು ತನ್ನ ಜನರ ಅನುಕೂಲಕ್ಕೆ ಬೇಕಿರುವಂತೆ ದನಿ ಎತ್ತುವುದು ಸಹಜವೂ ಸರಿಯೂ ಆದುದಾಗಿದೆ. ಅಂತೆಯೇ, ಕರ್ನಾಟಕವೂ ಕನ್ನಡಿಗರ ಹಿತ ಕಾಪಾಡಲು  ದನಿ ಎತ್ತಬೇಕಿರುವುದು ಕೂಡಾ ಸರಿಯಾಗಿದೆ. ಹೀಗೆಂದ ಮಾತ್ರಕ್ಕೆ ರಾಜ್ಯಗಳು ಯುದ್ಧ ಮಾಡಿಬಿಡಬೇಕಾಗಿಲ್ಲ! ಮತ್ತು ಇದರಿಂದಾಗಿ ದೇಶದ ಒಗ್ಗಟ್ಟು ಅಳಿಸಿಹೋಗಬೇಕು ಎನ್ನುವುದೂ ಅಲ್ಲ!

ಬೇಕು ರಾಷ್ಟ್ರೀಯ ಜಲನೀತಿ

ಸರಿಯಾದ ವೈಜ್ಞಾನಿಕವಾದ ಸೂತ್ರಗಳನ್ನು ಬಳಸಿ ರೂಪಿಸುವ ನೀತಿಗಳು ಮಾತ್ರವೇ ಅಂತರರಾಜ್ಯ ಸಮಸ್ಯೆಗಳನ್ನು  ನ್ಯಾಯಯುತವಾಗಿ ಬಗೆಹರಿಸಬಲ್ಲವಾಗಿವೆ. ಅಂತರರಾಜ್ಯ ನದಿ ನೀರು ಹಂಚಿಕೆಯನ್ನು ಹೀಗೆ ರೂಪುಗೊಳ್ಳುವ ರಾಷ್ಟ್ರೀಯ ಜಲನೀತಿಯ ಆಧಾರದ ಮೇರೆಗೆ ರೂಪಿಸಬೇಕಾಗಿದೆ. ದುರಂತವೆಂದರೆ ಭಾರತದಲ್ಲಿ ಇಂತಹ ಒಂದು ಸರಿಯಾದ ಜಲನೀತಿಯೇ ಇಲ್ಲದಿರುವುದು. ಕಾವೇರಿ ನ್ಯಾಯಾಧಿಕರಣವಿರಲಿ, ಕೃಷ್ಣಾ ನದಿ ನೀರು ಹಂಚಿಕೆಯ ನ್ಯಾಯಧಿಕರಣವಿರಲಿ, ಕಳಸ ಬಂಡೂರ ನಾಲೆಗಳ ಮಹದಾಯಿ ನದಿನೀರು ಹಂಚಿಕೆಯಿರಲಿ...  ಕರ್ನಾಟಕಕ್ಕೇ ಸದಾ ಅನ್ಯಾಯವೇ ಆಗುತ್ತಿದೆ  ಎನ್ನುವ ಭಾವನೆ ನಮ್ಮಲ್ಲಿ ಮೂಡದೆ ಇರಬೇಕಾದರೆ ಪಾರದರ್ಶಕವೂ ನ್ಯಾಯಯುತವಾಗಿಯೂ ಇರುವ ರಾಷ್ಟ್ರೀಯ ಜಲನೀತಿಯೊಂದು ರೂಪುಗೊಳ್ಳಬೇಕು. "ಇಂತಹ ರಾಷ್ಟ್ರೀಯ ಜಲನೀತಿಯನ್ನು ಮೊದಲು ರೂಪಿಸೋಣ, ಆಮೇಲೆ ನದಿ ಹಂಚಿಕೆಯ ನ್ಯಾಯ ವಿತರಣೆಯಾಗಲಿ... ಅಲ್ಲಿಯತನಕ ಈ ನ್ಯಾಯಾಧಿಕರಣದ ತೀರ್ಪುಗಳನ್ನು ಒಪ್ಪಲಾಗದು" ಎನ್ನುವ ನಿಲುವನ್ನು ರಾಜ್ಯಸರ್ಕಾರ ಗಟ್ಟಿಯಾಗಿ ಹೇಳಬೇಕಾಗಿದೆ... ಇಲ್ಲದಿದ್ದರೆ ಪ್ರತಿವರ್ಷ ತಮಿಳುನಾಡಿನ ಕಣ್ಣೀರು, ಮಹಾರಾಷ್ಟ್ರದ ನೆರೆನೀರೂ ಕನ್ನಡನಾಡಿಗೆ ಮುಳುಗುನೀರು ತರುವುದನ್ನು ತಪ್ಪಿಸಲಾಗದು ಗುರೂ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails