ಬ್ಯಾಂಗಲೋರ್ ಬೆಂಗಳೂರು ಆಗಲು ಇಷ್ಟು ವರ್ಷಾ ಯಾಕೆ ಬೇಕಾಯ್ತು ಗೊತ್ತಾ?


ಸುಮಾರು ೨೦೦೬ರಲ್ಲಿ ಡಾ. ಯು.ಆರ್. ಅನಂತಮೂರ್ತಿಯವರು ಒಂದು ಹಕ್ಕೊತ್ತಾಯವನ್ನು ಮಂಡಿಸಿ, ಇಂಗ್ಲೀಶಿನಲ್ಲಿ ತಪ್ಪಾಗಿ ಬರೆಯಲಾಗುತ್ತಿರುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮೊದಲಾದ ನಮ್ಮೂರ ಹೆಸರುಗಳನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗಬೇಕೆಂಬ ಸಲಹೆಯನ್ನು ರಾಜ್ಯಸರ್ಕಾರದ ಮುಂದಿಟ್ಟಿದ್ದರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂಸಿಂಗ್‍ರವರು ಇದಕ್ಕೆ ಶಾಸನಾತ್ಮಕವಾಗಿ ತಿದ್ದುಪಡಿಯುಂಟು ಮಾಡಲು ಮುಂದಾಗಿದ್ದರು. ಇದೀಗ ಅಂದಿಟ್ಟಿದ್ದ ಆ ಹೆಜ್ಜೆ ಮುಂದಿನ ತಿಂಗಳಿಂದ ಜಾರಿಯಾಗಲಿದೆ ಮತ್ತು ಇದುವರೆಗೂ ಅದಕ್ಕಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಮ್ಮಲ್ಲೂ ಇಲ್ಲಾ! ಆಳುವವರಲ್ಲೂ ಇಲ್ಲಾ!!

ನೀವು ಸುಮ್ಮನೆ ಗಮನಿಸಿ ನೋಡಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ತಮ್ಮ ಊರುಗಳ ಹೆಸರುಗಳನ್ನು ಬದಲಿಸಿದ್ದಾರೆ. ಕೊಲ್ಕೋತ್ತಾ, ಚೆನ್ನೈ, ತಿರುವನಂತಪುರಂ, ಮುಂಬೈ, ವಡೋದರ, ಇಂದೋರ್... ಹೀಗೆ ತಮ್ಮ ಊರಿನ ಹೆಸರುಗಳನ್ನು ಬದಲಿಸಿಕೊಂಡ ಅನೇಕ ಉದಾಹರಣೆಗಳಿವೆ.ಇತ್ತೀಚಿನ ಈ ಬದಲಾವಣೆಗಳಲ್ಲೆಲ್ಲಾ ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಮಾತ್ರಾ... ನಮ್ಮ ರಾಜ್ಯವೇ.  ಈ ವಿಳಂಬದ ಸಮಸ್ಯೆ ನಮ್ಮಲ್ಲಿರಲು ಕಾರಣವೇನು ಎಂದರೆ ಕಣ್ಣಿಗೆ ರಾಚುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆ. ರಾಜ್ಯ ರಾಜಕಾರಣದ ಯಾವ ಪಕ್ಷಕ್ಕೂ ಕನ್ನಡ, ಕನ್ನಡಿಗ, ಕನ್ನಡನಾಡಿನ ಏಳಿಗೆಯ ಪರಮಗುರಿಯೇ ಸಿದ್ಧಾಂತವಾಗಿಲ್ಲದಿರುವುದು ಮತ್ತು ಅಂತಹ ರಾಜಕೀಯ ಶಕ್ತಿಯ ಅಗತ್ಯವನ್ನು ಕನ್ನಡಿಗರು ಇನ್ನೂ ಕಂಡುಕೊಂಡಿಲ್ಲದಿರುವುದು ಇಂಥವಕ್ಕೆಲ್ಲಾ ಪ್ರಮುಖ ಕಾರಣಗಳೆಂದರೆ ತಪ್ಪಾಗಲಾರದು. ನಮ್ಮ ರಾಜಕಾರಣಿಗಳಲ್ಲೂ, ಜನರಲ್ಲೂ "ಕನ್ನಡತನವೇ ನಮ್ಮ ಮೂಲಗುರುತು" ಎನ್ನುವ ಅರಿವು ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ವಾಸ್ತವವಾಗಿ ರಾಜ್ಯಸರ್ಕಾರ ನಮ್ಮೂರ ಹೆಸರುಗಳನ್ನು ಬದಲಿಸಲು ೨೦೦೬ರಲ್ಲೇ ಪ್ರಯತ್ನ ಪಟ್ಟರೂ ಇದು ಜಾರಿಯಾಗಲು ವಿಳಂಬವಾಗುತ್ತಿದೆ. ಹೀಗೆ ಆರು ವರ್ಷ ವಿಳಂಬವಾಗಲು ಇದ್ದ ಕಾರಣ, ರಾಜ್ಯಸರ್ಕಾರದ ಈ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಒಂದೆರಡು ಅರ್ಜಿಗಳು. ಕೇವಲ ಒಬ್ಬಿಬ್ಬರು, ಒಂದೊಂದು ಕೇಸುಗಳ ಮೂಲಕ ಆರುಕೋಟಿ ಜನರ ರಾಜ್ಯಸರ್ಕಾರವನ್ನೇ ತಡೆಹಿಡಿಯಬಲ್ಲರು ಎನ್ನುವುದನ್ನು ಗಮನಿಸಬೇಕಾಗಿದೆ.

ಇದು ಬರೀ ಊರುಗಳ ಹೆಸರು ಬದಲಿಸುವಲ್ಲಿ ಎದುರಾದ ತೊಡರುಗಳಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸಿಗಬೇಕೆಂದಾಗಲೂ ವಿಳಂಬವಾಗಿತ್ತು. ಅದಕ್ಕೂ ನಾವು ಹೋರಾಡಬೇಕಾಯ್ತು. ಕೊನೆಯಲ್ಲಿ ಗಾಂಧಿ ಎನ್ನುವ ಒಬ್ಬರು ದೂರದ ಚೆನ್ನೈನ ಹೈಕೋರ್ಟಿನಲ್ಲಿ ಹಾಕಿ ಕೂತ ಒಂದು ಕೇಸಿನ ಪರಿಣಾಮವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಸಿಗದಂತಾಯ್ತು! ಈ ಕೇಸಿನ ವಿಷಯದಲ್ಲೂ ರಾಜ್ಯಸರ್ಕಾರ ಹೇಗೆ ನಡೆದುಕೊಂಡಿತೆಂಬುದನ್ನು ಮೈಸೂರಿನ ಪತ್ರಕರ್ತರೊಬ್ಬರು ಬರೆದುಕೊಂಡಿದ್ದಾರೆ

ಅಂದರೆ ನಮ್ಮಲ್ಲಿ ತುರ್ತಾಗಿ ಆಗಬೇಕಾದ್ದು ಕನ್ನಡತನದ ಜಾಗೃತಿಯೇ ಆಗಿದೆ. ಕನ್ನಡತನವನ್ನು ಕಡೆಗಣಿಸಿ ರಾಷ್ಟ್ರೀಯತೆಯೆನ್ನುವುದು ಹುಸಿತನವೇ ಆಗಿದೆ. ಕನ್ನಡತನದಿಂದಲೇ ಕನ್ನಡಿಗರ ಭಾರತೀಯತೆ, ನಮ್ಮತನದ ಉಳಿವಿನಲ್ಲೇ ರಾಷ್ಟ್ರದ ಹಿತವಿರುವುದು ಎನ್ನುವುದನ್ನು ಅರಿಯದಿದ್ದಲ್ಲಿ ನಾವು ಹೀಗೇ ಅನುಭವಿಸುತ್ತಲೇ ಇರಬೇಕಾಗುತ್ತದೆ... ನಾಡೂ ಹೀಗೇ ಇರುತ್ತದೆ! ಅಲ್ವಾ ಗುರೂ?

3 ಅನಿಸಿಕೆಗಳು:

ಗಿರೀಶ ಕೆ ಎಸ್ ಅಂತಾರೆ...

ನೀ ಹೇಳದು ಸರಿಯಾಗೆ ಇದೆ ಸಿವಾ. ನಮ್ಮ ರಾಜಕಾರಣಿಗಳು ನನ್ನ ಹಕ್ಕಿಗಾಗಿ ಹೋರಾಡ್ಬೇಕು.

lakshmisha ಅಂತಾರೆ...

ಕನ್ನಡತನವೆ ನಶಿಸಿಹೋಗುತ್ತಿರುವಾ ಈ ದಿನಗಳಲ್ಲಿ, ಕನ್ನಡತನವನ್ನ ಎತ್ತಿ ಹಿಡಿಯುವ ಕೆಲಸ ನಡೆಯಬೇಕಾಗಿದೆ. ಕರ್ನಾಟಕದ ಊರುಗಳಿಗೆ ಕನ್ನಡ ಹೆಸರು ಇಡುವುದು ಒಳ್ಳೆಯ ವಿಶಯ. ಇದೆ ರೀತಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಬೇಕು. ಬೆಂಗಳೂರಿಗೆ ವಲಸೆ ಬರುವ ಎಲ್ಲರಿಗೂ ಇದು ಕನ್ನಡಿಗರ ಊರು, ಇದು ಕನ್ನಡಿಗ ಕಟ್ಟಿದ ಊರು ಎನ್ನುವುದು ಅರಿವಾಗುತ್ತದೆ. ಹಾಗೆಯೆ ಬೆಂಗಳೂರಿನ ಪ್ರಥಿಶ್ಟಿತ ಬಡಾವಣೆಗಳಿಗೆ ಕನ್ನಡಿಗರ ಹೆಸರು ಇಡಬೇಕು. ಇಂದಿರಾನಗರ, ಶಿವಾಜಿನಗರ, ರವೀಂದ್ರನಾಥ್ ಟಗೋರ್ ನಗರ ಎಂದು ಹೆಸರುಗಳು ಇವೆ. ಆದರೆ ಕನ್ನಡಕ್ಕಾಗಿ ದುಡಿದ ಮಹನೀಯರ ಹೆಸರುಗಳ ಬಡಾವಣೆಗಳು ಇಲ್ಲ. ಎಲ್ಲಾ ಬಿ.ಡಿ.ಯೆ ಬಡಾವಣೆಗಳಿಗೆ ಜ್ನಾನಪೀಟ ಪ್ರಶಸ್ತಿ ಗಳಿಸಿರುವ ಮಹಾನ್ ದಿಗ್ಗಜರ ಹೆಸರು ಇಡಬೇಕು. ಅಥವಾ ಮೆಟ್ರೊ ನಿಲ್ದಾಣಗಳಿಗೆ ಅವರ ಹೆಸರನ್ನು ಇಡಬಹುದು. ಇದಕ್ಕೆ ಕನ್ನಡಿಗರು ಒಟ್ಟಾಗಿ ದುಡಿಯಬೇಕು. ಬೆಂಗಳೂರಲ್ಲಿ ಕನ್ನಡತನ ಉಳಿಯಬೇಕಾದರೆ ಇದು ಕನಿಶ್ಟ ಮಾಡಲೇಬೇಕು.

ಸೀನ ಅಂತಾರೆ...

ಲಕ್ಷ್ಮೀಶಅವರು ಹೇಳಿದ್ದು ಸರಿಯಾಗಿ ಇದೆ. ಉದಾಹರಣೆಗೆ ಬೆಂಗಳೂರಿನ ಎಷ್ಟೋ ಏರಿಯ ಹೆಸರಾಗಲು 'ನಗರ್' ಅಥವ 'ಲೇಔಟ್' ಅಗಿವೇ. BTM layout, HSR layout, JP nagar, etc. ಹೊರಗಿನಿಂದ ಬಂದವರಿಗೆ ನಮ್ಮತನದ ಏನನ್ನೂ ಇವು ಸೂಚಿಸುವಿದಿಲ್ಲ. ಅದೇ 'ಬನಶಂಕರಿ', 'ಬಸವನಗುಡಿ', ಇಂಥ ಹೆಸರಾಗಲು ಪಕ್ಕ ಲೋಕಲ್ ಹಾಗು ನಮ್ಮ ಸ್ವಂತದ್ದು. ಇನ್ನಾದರೂ ಹೊಸ ಬಡಾವಣೆಗಳಿಗೆ ಹೆಸರು ಇಡುವಾಗ ನಮ್ಮ ಅಧಿಕಾರಿಗಳು ಅರ್ಥಗಮ್ಭಿತ ಹೆಸರು ಇಟ್ಟರೆ ಒಳ್ಳೆಯದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails