ಹಿಂದೀ ಬಳಸ್ದಿದ್ರೆ ಪ್ರತಿಭಟನೆ! ಕನ್ನಡ ಬಳಸ್ದಿದ್ರೆ?


ತಕ್ಕಳಪ್ಪಾ! ನಿನ್ನೆಯ (೨೮.೦೩.೨೦೧೨) ಉದಯವಾಣಿಯ ಮುಂಪುಟದಲ್ಲಿ ಈ ಸಕತ್ ಸುದ್ದಿ ಬಂದಿದೆ! ರಾಜ್ಯದ ಮೇಲುಸ್ತುವಾರಿಕೆ ನಡೆಸೋಕೆ ಅಂತಾನೆ ಕೇಂದ್ರಸರ್ಕಾರದಿಂದ ನೇಮಕವಾಗೋ "ರಾಜ್ಯಪಾಲ"ರೆನ್ನುವ ಹುದ್ದೆಯೇ ಬೇಕೋ ಬೇಡವೋ ಅನ್ನೋ ಚರ್ಚೇನ ಬದಿಗಿಟ್ಟು, ಸದ್ಯಕ್ಕೆ ಮೊನ್ನೆಮೊನ್ನೆ ಉತ್ತರಾಖಂಡದ ಶಾಸನಸಭೆಯಲ್ಲಿ ನಡೆದ ಒಂದು ಘಟನೆ ಸುತ್ತಾ ಮಾತಾಡೋಣ, ಗುರೂ!

ಹಿಂದೀ ಮಾತಾಡದೆ ಹೋದ್ರೆ ಅಲ್ಲಿ ತಪ್ಪಂತೆ! ಆದರೆ ಇಲ್ಲಿ?

ರಾಜ್ಯಪಾಲರಾಗಿ ಉತ್ತರಾಖಂಡ ರಾಜ್ಯಕ್ಕೆ ಹೋಗಿರುವ ಕರ್ನಾಟಕದ ಶ್ರೀಮತಿ ಮಾರ್ಗರೆಟ್ ಆಳ್ವಾ ಅವರು ಇಂಗ್ಲೀಷಿನಲ್ಲಿ  ಭಾಷಣ ಮಾಡಿದಾಗ, ಅವರನ್ನು ಹಿಂದೀಲೆ ಮಾತಾಡಬೇಕೆಂದು ಒತ್ತಾಯಿಸಿದ ಶಾಸಕರಿಗೆ ಇವರು `ನನಗೆ ಹಿಂದೀ ಬರಲ್ಲ, ನಾನು ದಕ್ಷಿಣ ಭಾರತದಿಂದ ಬಂದಿದ್ದು...' ಅಂದಿರೋದು ದೊಡ್ಡ ರಾಷ್ಟ್ರೀಯ ಅಪಮಾನದ ಹಾಗೆ ಕಂಡು "ಗೋ ಬ್ಯಾಕ್" ಅಂತಾ ಕೂಗುದ್ರಂತೆ. ಉತ್ತರಖಂಡದಲ್ಲಿ ಹೀಗೆ ಪ್ರತಿಭಟನೆ ಮಾಡಿದೋರು ಭಾರತ ಜನತಾ ಪಕ್ಷದ ಶಾಸಕರು ಅನ್ನೋ ಸುದ್ದಿ ನೋಡಿದಾಗ ನೆನೆಪಾಗಿದ್ದು... ೨೦೦೮ರಲ್ಲಿ ಕರ್ನಾಟಕದ ಸದನದಲ್ಲಿ ಇದೇ ಭಾರತೀಯ ಜನತಾ ಪಕ್ಷದ ಶಾಸಕರಾಗಿದ್ದ ಶ್ರೀ ಡೆರಿಕ್ ಪ್ಹುಲಿನ್ ಫಾ ಅವರು 'ನನಗೆ ಕನ್ನಡ ಬರುತ್ತೆ, ಆದರೂ ಮಾತಾಡಲ್ಲಾ" ಅಂದಿದ್ದ ಘಟನೆ. ಆವತ್ತು ಇಲ್ಲಿನ ಬಿಜೆಪಿ ಜನಕ್ಕೆ ಅವಮಾನ ಆಗಿರಲಿಲ್ವಾ? ಅನ್ಸಲ್ವಾ ಗುರೂ! ಹಿಂದೆ ಮಹಾರಾಷ್ಟ್ರದಲ್ಲಿ ಕೆಲಶಾಸಕರು ಅಬುಅಜ್ಮಿ ಅನ್ನೋ ಸಮಾಜವಾದಿ ಪಕ್ಷದ ಶಾಸಕರು, ಹಿಂದೀಲಿ ಪ್ರಮಾಣವಚನ ತೊಗೊಂಡಾಗ ಯಾಕೋ ಬಿಜೆಪಿಯವರು ಅಬುಅಜ್ಮಿನ ಖಂಡಿಸದೆ ಸುಮ್ಕಿದ್ರಲ್ಲಾ? ಹಿಂದೀ ಬಳಸದಿದ್ರೆ ಮಾತ್ರಾ ಅಪಮಾನ, ಆದ್ರೆ ಮಹಾರಾಷ್ಟ್ರದಲ್ಲಿ ಮರಾಟಿ, ಕರ್ನಾಟಕದಲ್ಲಿ ಕನ್ನಡ ಬಳಸದಿದ್ರೂ ಓಕೆ ಅಂತಿರಬಹುದು!

ನಮ್ಮ ಕರ್ನಾಟಕದಲ್ಲಿ ಘನತೆವೆತ್ತ ರಾಜ್ಯಪಾಲರು ಇಂಗ್ಲೀಷಲ್ಲಿ ಭಾಷಣ ಮಾಡಿದಾಗ ಆಡಳಿತ ನಡುಸ್ತಿರೋ ಬಿಜೆಪಿಯವರು ‘ಕನ್ನಡದಲ್ಲಿ ಮಾತಾಡಿ’ ಅಂತ ಯಾಕೆ ಪ್ರತಿಭಟಿಸಲ್ಲ? ಅವರು ಇಲ್ಲಿ ಕನ್ನಡದಲ್ಲಿ ಭಾಷಣ ಮಾಡ್ತಿಲ್ಲಾ.. ಗೋ ಬ್ಯಾಕ್ ಅಂತಾ ನಮ್ಮೂರಿನ ರಾಷ್ಟ್ರೀಯ ಪಕ್ಷಗಳು ಎಂದಾದರೂ ದನಿ ಎತ್ತಿದ್ದು ಇದೆಯಾ ಗುರೂ!! ಹೋಗ್ಲೀ... ಇದೇ ಉತ್ತರದ ದೊಡ್ಡಜನರು ನಮ್ಮೂರಿಗೆ ಬಂದು  "ಭಾರತದ ಏಕತೆಗಾಗಿ ಹಿಂದೀ ಕಲೀರಿ, ಉರ್ದು ಕಲೀರಿ, ಸಂಸ್ಕೃತ ಕಲೀರಿ... ಕಲೀರಿ" ಅಂತಾ ಪುಗಸಟ್ಟೆ ಉಪದೇಶ ಕೊಡ್ತಾರಲ್ಲಾ? ಆಗೆಲ್ಲಾ ರಾಷ್ಟ್ರೀಯ ಪಕ್ಷದ ಶಾಸಕರು ಸುಮ್ಮನೆ ಯಾಕಿರ್ತಾರೆ? ಓ... "ಹಿಂದೀ ನಾಡಿಗೆ ಹೋದಾಗ ಹಿಂದೀಯವರಲ್ಲದೆ ಇದ್ದೋರೂ ಹಿಂದೀ ಮಾತಾಡಬೇಕು, ಆದರೆ ಕನ್ನಡನಾಡಿಗೆ ಬಂದವರು ಕನ್ನಡದಲ್ಲೇ ಮಾತಾಡಬೇಕು ಅನ್ನೋ ಕಟ್ಟಳೆ ಇರಬಾರದು" ಅನ್ನೋದು ರಾಷ್ಟ್ರೀಯ ಪಕ್ಷದ ನಿಲುವಿರಬಹುದು.

ಕೊನೆಹನಿ: ಬಹುಶಃ ಉತ್ತರಾಖಂಡದವರಿಂದ ಸ್ಫೂರ್ತಿ ಪಡೆದು ನಮ್ಮ ರಾಜ್ಯದ ಬಿಜೆಪಿಯೋರೂ, ನಾಳೆ ಇಲ್ಲಿನ ರಾಜ್ಯಪಾಲರು ಇಂಗ್ಲೀಷಿನಲ್ಲಿ ಭಾಷಣ ಮಾಡಿದರೆ, "ಹಿಂದೀಲೆ ಭಾಷಣ ಮಾಡಿ, ಇಲ್ದಿದ್ರೆ ಅದು ರಾಷ್ಟ್ರೀಯ ಅವಮಾನ" ಅಂದ್ರೂ ಅನ್ನಬಹುದೇನೋ!

3 ಅನಿಸಿಕೆಗಳು:

ವಿಪರೀತನ್ ಅಂತಾರೆ...

ಐಪಿಎಸ್ , ಐಎಸ್ ಅದಿಕಾರಿಗಳು ತಾವು ಕೆಲ್ಸ ಮಾಡೋ ರಾಜ್ಯದ್ ಬಾಶೆ ಕಲೀತಾರೆ , ಯಾಕೆಂದ್ರೆ ಅವರ್ಗೆ ಜವಾಬ್ದಾರಿ ಅನ್ನೋದು ಇರುತ್ತೆ.ರಾಜ್ಯಪಾಲ್ರು ಕರ್ನಾಟಕಕ್ಕೆ ಬಂದು ಐದು ವರ್ಶ ಆದ್ರೂ ಕನ್ನಡ ಕಲಿಯೋದು ಬಿಡಿ ತಿಳ್ಕೊಳೋದಕ್ಕೂ ಇಶ್ಟ ಪಡೋದಿಲ್ಲ.ಯಾಕೆ ? ಇವ್ರಿಗೆ ಜವಾಬ್ದಾರಿ ಇಲ್ವಾ ? ನನ್ ತೆರಿಗೆ ಹಣಾನ ಇವ್ರಿಗೊಸ್ಕರ ಯಾಕೆ ಪೋಲು ಮಾಡ್ಬೇಕು ?

Anonymous ಅಂತಾರೆ...

ನಾನು ಹಿಂದಿ ಭಾಷೆಯನ್ನು' ೯ ವರ್ಷ ಕಲಿತರೂ ನನಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಏಕೆಂದರೆ ಅದು ನಮ್ಮ ಭಾಷೆ ಅಲ್ಲ. ಪಾಪ ಮಾರ್ಗರೆಟ್ ಆಳ್ವ.

ಗುಡುಗು ಮಿಂಚು ಅಂತಾರೆ...

ಮಾರ್ಗರೇಟ್‌ ಆಳ್ವಾ ಅಲ್ಲಿನ ಭಾಷೆಯನ್ನು ಕಲಿಯಬೇಕಾಗಿತ್ತು. ಅದು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕಿತ್ತು. ಇದು ಇಲ್ಲಿಗೆ ಬರುವ ಪರ ಭಾಷಿಕ ರಾಜ್ಯಪಾಲರಿಗೂ ಅನ್ವಯವಾಗುತ್ತೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails