ಕಂಡ ಕಂಡಿದ್ದೆಕ್ಕೆಲ್ಲಾ ತ್ರಿಭಾಷಾ ಸೂತ್ರ ಅನ್ನೋರು ಒಸಿ ಇಲ್ನೋಡಲಿ!


ಕರ್ನಾಟಕದಲ್ಲಿ ಮೆಟ್ರೋ ಆಗಲೀ, ವಿಮಾನ ನಿಲ್ದಾಣವಾಗಲೀ, ಕೊನೆಗೆ ರಾಜ್ಯಸರ್ಕಾರದ್ದೇ ತೋಟಗಾರಿಕೆ ಇಲಾಖೆಯ ಮಳಿಗೆಯಿರಲಿ...ಎಲ್ಲೆಡೆ ನಾವು ಮೂರು ಭಾಷೆಗಳಲ್ಲಿ ಬೋರ್ಡುಗಳನ್ನು, ಘೋಷಣೆಗಳನ್ನು, ಅರ್ಜಿ ಮೊದಲಾದವುಗಳನ್ನು ಕನ್ನಡ, ಇಂಗ್ಲೀಷು ಮತ್ತು ಹಿಂದೀ ಭಾಷೆಗಳಲ್ಲಿ ಕಾಣಬಹುದು. ಇದ್ಯಾಕ್ರೀ ಎಲ್ಲಾ ಕಡೆ ಮೂರು ಭಾಷೆ ಹಾಕಿದೀರೀ? ಅಂತಂದ್ರೆ ಜನಸಾಮಾಜ್ಯರಿಂದ ಹಿಡಿದು ದೊಡ್ಡ ದೊಡ್ದ ಬುದ್ಧಿಜೀವಿಗಳು, ರಾಜಕಾರಣಿಗಳು ಹೇಳೋ ಒಂದು ಮಾತು ಅಂದ್ರೆ "ತ್ರಿಭಾಷಾ ಸೂತ್ರ" ಅನ್ನೋದು. ಈ ಮಾತುನ್ನ "ಕನ್ನಡ ಅಭಿವೃದ್ಧಿ ಪ್ರಾಧಿಕಾರ"ದ ಮುಖ್ಯಸ್ಥರಾಗಿರೋ ಶ್ರೀ ಮುಖ್ಯಮಂತ್ರಿ ಚಂದ್ರು ಅವರೂ ಹಲವಾರು ಕಡೆ ಬಳಸಿದ್ದಾರೆ ಅಂದರೆ ಜನರೆಲ್ಲಾ "ಹೌದಪ್ಪಾ! ಈ ತ್ರಿಭಾಷಾ ಸೂತ್ರ ಅನ್ನೋದೇನೋ ನಮ್ಮನ್ನು ನಿಯಂತ್ರಿಸುತ್ತಿರೋ ಸಂವಿಧಾನದಂತಹುದು" ಅಂದುಕೊಂಡು ಹಿಂದೀ ಹೇರಿಕೆಯ ವಿರೋಧಿ ದನಿಯನ್ನು ಮೆತ್ತುಗೆ ಮಾಡ್ಕೊತಾ ಇರೋದನ್ನು ನೋಡಿದ್ದೀವೆ. ವಾಸ್ತವವಾಗಿ ಈ ತ್ರಿಭಾಷಾ ಸೂತ್ರಾ ಅಂದರೇನು? ಇದು ಎಲ್ಲೆಲ್ಲಿ ಅನ್ವಯವಾಗುತ್ತೆ? ಅನ್ನೋದನ್ನು ನಾವು ಸರಿಯಾಗಿ ಗಮನಿಸಿದರೆ ಒಂದು ವಿಷಯ ಅರ್ಥವಾಗುತ್ತದೆ.

ತ್ರಿಭಾಷಾ ಸೂತ್ರ: ೧೯೬೮ರ ನಿಲುವಳಿ

ಭಾರತದ ಸಂಸತ್ತು ೧೯೬೩ರಲ್ಲಿ ಮಾಡಿದ "ಅಫಿಶಿಯಲ್ ಲಾಂಗ್ವೇಜ್ ಆಕ್ಟ್ - ೧೯೬೩"ರಲ್ಲಿ ಹಿಂದೀ ಭಾಷೆಯನ್ನು ಒಕ್ಕೂಟದ ಏಕೈಕ ಆಡಳಿತ ಭಾಷೆ ಮಾಡಿದಾಗ ಕರ್ನಾಟಕ, ತಮಿಳುನಾಡು ಮತ್ತು ಬಂಗಾಳ ಸೇರಿದಂತೆ ಅನೇಕ ಹಿಂದೀಯೇತರ ಪ್ರದೇಶಗಳಲ್ಲಿ ಇದಕ್ಕೆ ವಿರೋಧ ತೀವ್ರ ಹೋರಾಟದ ರೂಪದಲ್ಲಿ ವ್ಯಕ್ತವಾಯಿತು. ತಮಿಳುನಾಡಿನಲ್ಲಂತೂ ಈ ಹೋರಾಟದಲ್ಲಿ ನೂರಾರು ಜನ ಸಾವಿಗೀಡಾದರು. ಭಾರತದಿಂದಲೇ ಸಿಡಿದು ಹೋಗುವ ದನಿ ಹೋರಾಟದಲ್ಲಿ ಕೇಳಿ ಬಂತು. ಆಗ ಅಂದಿನ ಪ್ರಧಾನಿ ಶ್ರೀ ಜವಾಹರ್‌ಲಾಲ್ ನೆಹರೂರವರು "ನೀವೆಲ್ಲಾ ಒಪ್ಪೋ ತನಕ ಭಾರತದ ಆಡಳಿತ ಭಾಷೆಯಾಗಿ ಇಂಗ್ಲೀಷನ್ನೂ ಮುಂದುವರೆಸುತ್ತೇವೆ" ಎಂಬ ಭರವಸೆ ಕೊಟ್ಟರು. ಇದು ಸಂಸತ್ತಿನಲ್ಲಿ ಮುಂದೆ ಪ್ರಾದೇಶಿಕ ಭಾಷೆಗಳನ್ನು ಕೇಂದ್ರಸರ್ಕಾರಿ ನೌಕರಿಯ ನೇಮಕಾತಿ ಪರೀಕ್ಷೆಗಳಲ್ಲಿ ಬಳಸುವ ಅವಕಾಶ ನೀಡುವ, ಪ್ರಾದೇಶಿಕ ಭಾಷೆಗಳನ್ನೂ ಉಳಿಸಿಕೊಳ್ಳುವ ಉದ್ದೇಶದ "ತ್ರಿಭಾಷಾ ಸೂತ್ರ"ದ ರಚನೆಗೆ ಕಾರಣವಾಯಿತು. ಅಂದರೆ ಮೂಲತಃ ತ್ರಿಭಾಷಾಸೂತ್ರವನ್ನು ಬಿಂಬಿಸಿದ್ದು "ಪ್ರಾದೇಶಿಕ ಭಾಷೆಗಳಿಗೆ ಕೇಂದ್ರದ ಆಡಳಿತದಲ್ಲಿ ಅಧಿಕೃತತೆಯನ್ನು ತಂದುಕೊಡುವ ಪ್ರಯತ್ನ" ಎಂಬುದಾಗಿ. 


THE OFFICIAL LANGUAGE RESOLUTION, 1968The following Government Resolution, as adopted by both Houses of Parliament, is hereby published for general information:-
RESOLUTION“WHEREAS  under article 343 of the Constitution, Hindi shall be the official language of the Union, and under article 351 thereof it is the duty of the Union to promote the spread of the Hindi Language and to develop it so that it may serve as a medium of expression for all the elements of the composite culture of India;
This House resolves that a more intensive and comprehensive programme shall be prepared and implemented by the Government of India for accelerating the spread and development of Hindi and its progressive use for the various official purposes of the Union and an annual assessment report giving details of the measures taken and the progress achieved shall be laid on the Table of both Houses of Parliament and sent to all State Governments;
2. WHEREAS  the Eighth Schedule of the Constitution  specifies 14 major languages of India besides Hindi, and  it is necessary in the  interest of the educational and cultural advancement of the country that concerted measures should be taken for the full development of these languages;
The House resolves that a programme shall be prepared and implemented by the Government of India, in collaboration with the State Governments for the coordinated development of all these languages, alongside Hindi so that they grow rapidly in richness and become effective means of communicating modern knowledge;
3.WHEREAS it is necessary for promoting the sense of unity and facilitating communication between people  in different parts of the country that effective steps should be taken for implementing fully in all States  the three-language formula evolved by the Government of India in consultation with the State Government;
This House resolves that arrangements should be made in accordance with that formula for the study of a modern Indian language, preferably one of the Southern languages, apart from Hindi and English in the Hindi speaking areas and of Hindi along with the regional languages and English in the non-Hindi speaking areas;
4. AND WHEREAS it is necessary to ensure that the just claims and interest of people belonging to different parts of the country in regard to the public services of the Union are fully safeguarded:
This House resolves –(a) that compulsory knowledge of either Hindi or English shall be required at the stage of selection of candidates for recruitment to the Union services or posts except in respect of any special services or posts for which a high standard of knowledge of English alone or Hindi alone, or both, as the case may be, is considered essential for the satisfactory performance of the duties of any such service or post; and (b) that all the languages included in the Eighth Schedule to the Constitution and English shall be permitted as alternative media for the All India and higher Central Services examinations after ascertaining the views of the Union Public Service Commission on the future scheme of the examinations, the procedural aspects and the timing.
(ಆಧಾರ: http://rajbhasha.gov.in/GOLPContent.aspx?t=endolresolution)
ಈ ಇಡೀ ನಿಲುವಳಿಯಲ್ಲಿ ನಮಗೆ ಕಾಣೋದು, ರಾಜ್ಯಸರ್ಕಾರಗಳ ಸಹಮತಿಯೊಂದಿಗೆ ರಾಜ್ಯಗಳ ಕಲಿಕಾ ವ್ಯವಸ್ಥೆಯಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಬಹುದು ಎನ್ನುವುದು. ಅಲ್ಲೂ ಸ್ಪಷ್ಟವಾಗಿ ರಾಷ್ಟ್ರೀಯ ಏಕತೆಗಾಗಿ ಹಿಂದೀ ಭಾಷಿಕ ರಾಜ್ಯಗಳಲ್ಲಿ ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಸುವುದು ಎಂಬುದನ್ನು ಬರೆದಿದ್ದಾರೆ. ಮುಂದೆ ಹಿಂದೀಯೇತರ ರಾಜ್ಯದಲ್ಲಿ ಹಿಂದೀ ಕಲಿಸಬೇಕು ಅಂದಿದ್ದಾರೆ. ಅಂದರೆ ಇದು ಅನ್ವಯವಾಗೋದು ಶಾಲಾ ಕಲಿಕೆಗೆ ಮಾತ್ರವೇ! ಇವತ್ತು ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ, ತನ್ನ ಮೂಲ ಆಶಯಕ್ಕೂ ಮೀರಿಯೇ ಜಾರಿಯಲ್ಲಿರೋ ಈ ತ್ರಿಭಾಷಾ ಸೂತ್ರಾನಾ ನೋಡಿದಾಗ ಯಾವ ಹಿಂದೀ ಭಾಷಿಕ ರಾಜ್ಯದಲ್ಲಿ ಪಾಲಿಸುತ್ತಿದ್ದಾರೆ ಅಂತಾ ಕಣ್ಣು ಬಿಟ್ಟು ನೋಡುದ್ರೆ ನಿಜಾ ಗೊತ್ತಾಗುತ್ತೆ! ಇವೆಲ್ಲಾ ಕಂಡಾಗ ನಿಜಕ್ಕೂ ಈ ತ್ರಿಭಾಷಾಸೂತ್ರದ ಶೂಲಕ್ಕೆ ಸಿಕ್ಕಿರೋ ನತದೃಷ್ಟರು ರಾಷ್ಟ್ರೀಯವಾದಿ ರಾಜಕೀಯ ಪಕ್ಷಗಳನ್ನು ಕನ್ನಡನಾಡಲ್ಲಿ ಅರವತ್ತು ವರ್ಷಗಳಿಂದಲೂ ಅಧಿಕಾರಕ್ಕೆ ಬರಲು ಬಿಟ್ಟ ನಾವೇ ಅನ್ಸಲ್ವಾ ಗುರೂ!

ತ್ರಿಭಾಷಾಸೂತ್ರಕ್ಕೆ ತಿಲಾಂಜಲಿ ಇಡಲಿ ರಾಜ್ಯಸರ್ಕಾರ!

ನಮ್ಮ ಮಕ್ಕಳ ಕಲಿಕೆಯಲ್ಲಿ ಕಡ್ಡಾಯ ಮಾಡಿರುವ, ನಮ್ಮೂರ ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ಕನ್ನಡವನ್ನು ಮೂರನೇ ಸ್ಥಾನಕ್ಕೆ ದೂಕಿರುವ, ಕನ್ನಡ ಮಾತ್ರಾ ಬಲ್ಲವರೆಲ್ಲಾ ಇಲ್ಲೆಲ್ಲಾ ಹೋಗುವಾಗ ಜೊತೇಲಿ ದುರ್ಬೀನು ಹಿಡ್ಕೊಂಡೇ ಹೋಗಬೇಕಾದ ಸ್ಥಿತಿಗೆ ಕಾರಣವಾಗಿರುವ - ಸಂವಿಧಾನಾತ್ಮಕವಾಗಿ ಕಡ್ಡಾಯವಾಗಿರದ - ತ್ರಿಭಾಷಾ ಸೂತ್ರಕ್ಕೆ ರಾಜ್ಯಸರ್ಕಾರ ಕೊನೆ ಹಾಡಲಿ.

ಕನ್ನಡ ಟಿವಿಯಲ್ಲಿ ಪರಭಾಷಾ ಕಾರ್ಯಕ್ರಮ ಸರೀನಾ?



ಕನ್ನಡದ ಸುದ್ದಿವಾಹಿನಿ ಜನಶ್ರೀ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಪ್ರಸಾರ ಮಾಡಲು ಶುರುಮಾಡಿದೆ. ಕನ್ನಡ ಚಿತ್ರೋದ್ಯಮ ಮತ್ತು ದೂರದರ್ಶನ ರಂಗದ ಜನರು ಹೇರುತ್ತಿರುವ "ಡಬ್ಬಿಂಗ್ ನಿಶೇಧ" ಎನ್ನುವ ಅಸಂವಿಧಾನಿಕ ಕ್ರಮವು ಕನ್ನಡಿಗರ ಬದುಕಿನ ಮೇಲೆ ಎಂಥಾ ಪರಿಣಾಮ ಬೀರಬಹುದು ಎನ್ನುವುದಕ್ಕೆ ಇದು ಮುನ್ನುಡಿ ಬರೆದ ಹಾಗಿದೆ. ಸ್ವಲ್ಪವಾದರೂ ಸಾಮಾನ್ಯ ಜ್ಞಾನವಿಟ್ಟುಕೊಂಡು ಸ್ವಾರ್ಥವಿಲ್ಲದೇ ಯೋಚಿಸಿ ನೋಡಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ.

ನಾಳೆ ಹೀಗಾಗಬಹುದು!

ಇವತ್ತು ಮಾಲ್ಗುಡಿ ಡೇಸ್ ಸರಣಿಯನ್ನು ಪ್ರಸಾರ ಮಾಡುವಾಗ ಹೇಳುತ್ತಿರುವುದು ಇದು ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ಶಂಕರ್‌ನಾಗ್ ತೆಗೆದಿರೋ, ಕನ್ನಡಿಗರೇ ಸಂಪೂರ್ಣವಾಗಿ ಆವರಿಸಿಕೊಂಡಿರೋ ಧಾರಾವಾಹಿ ಎಂಬುದಾಗಿ ಬಿಂಬಿಸುತ್ತಲೇ.  ಶಂಕರ್‌ನಾಗ್‌ರವರು ಗಳಿಸಿರುವ ಜನಪ್ರಿಯತೆಯನ್ನು ಬಳಸಿಕೊಂಡು ಇವತ್ತು ಜನಶ್ರೀಯಲ್ಲಿ ಮಾಲ್ಗುಡಿ ಡೇಸ್ ಶುರುವಾಗಿದೆ. ಆದರೆ ಕನ್ನಡದ ವಾಹಿನಿಯೊಂದರಲ್ಲಿ ಪರಭಾಷೆಯ ಧಾರಾವಾಹಿಯೊಂದು ಪ್ರಸಾರವಾಗುತ್ತಾ ಕನ್ನಡಿಗರನ್ನೆಲ್ಲಾ ತನ್ನ ಮುಂದೆ ಕೂರಿಸಿಕೊಳ್ಳುತ್ತಿರುವುದು ನಾಳೆ ಏನೆಲ್ಲಾ ಆಗಲು ಕಾರಣವಾಗಬಹುದು ಎಂದು ನೋಡೋಣ.

ಇವತ್ತು ಮಾಲ್ಗುಡಿ ಡೇಸ್ ಎನ್ನುವ ಹಿಂದೀ ಧಾರಾವಾಹಿ "ನಮ್ಮ ಶಂಕರ್‌ನಾಗ್‌"ರ ಕಾರ್ಯಕ್ರಮ ಎಂದು, ಶಂಕರನ ನೆನಪು ಹಸಿರಾಗಿರಲಿ ಎಂದೂ ಪ್ರಸಾರವಾಗುತ್ತಿದೆ. ನಾಳೆ ಕನ್ನಡಿಗನದ್ದೇ ಕಥೆ, ಕನ್ನಡಿಗನೇ ತೆಗೆದಿರುವುದು ಎಂದು "ಸ್ವೋರ್ಡ್ ಆಫ಼್ ಟಿಪ್ಪೂಸುಲ್ತಾನ್" ಹಿಂದೀಲಿ ಮತ್ತೊಂದು ವಾಹಿನಿಯಲ್ಲಿ ಪ್ರಸಾರವಾಗಬಹುದು. ನಾಡಿದ್ದು ದೇಶಪ್ರೇಮಿಯ ಕಥೆ ಎಂದು "ಝಾನ್ಸಿ ಕೀ ರಾಣಿ" ಮಗದೊಂದರಲ್ಲಿ ಹಿಂದೀಲಿ ಪ್ರಸಾರವಾಗಬಹುದು. ಇನ್ನೊಂದು ದಿನ ಇನ್ನೊಂದು ವಾಹಿನಿಯಲ್ಲಿ "ನಮ್ಮ ಮಾಳವಿಕಾ ಅವಿನಾಶ್" ಮಾಡಿದ ಧಾರಾವಾಹಿ ಎಂದು "ಅರಸಿ" ತಮಿಳಿನಲ್ಲಿಯೇ ಪ್ರಸಾರವಾಗಬಹುದು. ಇನ್ಯಾವುದೋ ವಾಹಿನಿ, ನಮ್ಮ ಪ್ರಶಸ್ತಿ ವಿಜೇತ ನಾಯಕಿ "ಕಲ್ಯಾಣಿ" ಅಭಿನಯ ಮಾಡಿದ್ದಾರೆಂಬ ಕಾರಣಕ್ಕೆ ತೆಲುಗಿನ "ಮಂಥರಾ" ಧಾರಾವಾಹಿಯನ್ನು ತೆಲುಗಿನಲ್ಲೂ ಪ್ರಸಾರ ಮಾಡಬಹುದು. ಎಲ್ಲಾ ಧಾರಾವಾಹಿಗಳಿಗೂ "ಕನ್ನಡ ಸಬ್‌ಟೈಟಲ್" ಹಾಕಿ ಪ್ರಸಾರ ಮಾಡಿದರೆ ಆಯಿತಲ್ಲಾ? ಆಹಾ!! ಕನ್ನಡದ ಮುಂಡೇವಕ್ಕೆ ಸಬ್‌ಟೈಟಲ್ ಸಾಕು, ಹಿಂದೀ, ತಮಿಳು, ತೆಲುಗು ಭಾಷೆಗಳಲ್ಲಿ ಧಾರಾವಾಹಿಗಳನ್ನು ಹಾಕಿಬಿಡೋಣ ಎಂದುಕೊಳ್ಳುವ ದಿನಗಳು ಬರಬಹುದಲ್ಲಾ ಗುರೂ!!

ಕನ್ನಡ ಜನರು ಒಳ್ಳೇ ಕಾರ್ಯಕ್ರಮಾನಾ ಅವವೇ ಭಾಷೇಲಿ ನೋಡ್ಕೊಳ್ಳಲಿ ಎನ್ನೋ ನಿಲುವಿನ ಉದ್ದಿಮೆಯ ಜನರು, ಕನ್ನಡಿಗರೆಲ್ಲಾ ಹೀಗೆ ಪರಭಾಷೇಲೇ ಕಾರ್ಯಕ್ರಮಗಳನ್ನು ನೋಡೋಕೆ ಶುರು ಮಾಡುದ್ರೆ, ನಾಳೆ ಯಾವ ಭಾಷೇಲಿ ಸೀರಿಯಲ್ ತೆಗೆದಾರು? ಯಾವ ಭಾಷೇಲಿ ಸಿನಿಮಾ ತೆಗೆದಾರು? ಡಬ್ಬಿಂಗ್ ನಿಶೇಧವೆನ್ನುವುದು ಕನ್ನಡಿಗರನ್ನು ಕನ್ನಡದ ಮನರಂಜನೆಯಿಂದ ದೂರಾ ಒಯ್ಯುತ್ತೆ ಎನ್ನೋದಕ್ಕೆ ನಮ್ಮ ಜನಶ್ರೀ ವಾಹಿನಿಯನ್ನು, ಶನಿವಾರ ಮತ್ತು ಭಾನುವಾರದ ರಾತ್ರಿ ೯:೩೦ರಿಂದ ೧೦:೦೦ರವರೆಗೆ, ಕನ್ನಡದ ಕಾರ್ಯಕ್ರಮವಿಲ್ಲದೇ ಇದ್ದರೂ ಜನ ಅಂಟಿಕೊಂಡು ಕೂತು ನೋಡೋದೇ ಪುರಾವೆಯಾಗಿದೆ. ಇನ್ನಾದರೂ ನಾಡಿನೆಲ್ಲ ಜನರು ಈ ಬಗ್ಗೆ ಗಂಭೀರವಾಗಿ ಯೋಚಿಸೋದು ಒಳ್ಳೇದು!

"ಮಾಲ್ಗುಡಿ ಡೇಸ್" ಕನ್ನಡದಲ್ಲಿ ಬರಲಿ - ಮನವಿ ಸಲ್ಲಿಕೆ



ಇತ್ತೀಚಿಗೆ ಜನಶ್ರೀ ಸುದ್ದಿವಾಹಿನಿಯಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದ ಶ್ರೀ ಶಂಕರ್‌ನಾಗ್‌ರವರು ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಪ್ರಸಾರ ಮಾಡಲು ಮುಂದಾಗಿರುವ ಸುದ್ದಿಯನ್ನು ಜಾಹೀರಾತುಗಳ ಮೂಲಕ ಪ್ರಸಾರ ಮಾಡಲಾಯಿತು. ಈ ಧಾರಾವಾಹಿಯನ್ನು ಮೂಲದಲ್ಲಿ ಹಿಂದೀ/ ಇಂಗ್ಲೀಶ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿತ್ತು ಹಾಗೂ ಈಗ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕನ್ನಡದ ಅಡಿಬರಹಗಳೊಂದಿಗೆ (SubTitle) ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಬಹುತೇಕ ಕನ್ನಡದ ನಟರು, ತಾಂತ್ರಿಕ ವರ್ಗ ಹೊಂದಿರುವ, ಕರ್ನಾಟಕದಲ್ಲೇ ಚಿತ್ರೀಕರಿಸಲಾಗಿರುವ ಈ ಧಾರಾವಾಹಿಯನ್ನು ಕನ್ನಡಿಗರಿಗೆ ತಲುಪಿಸುವ ವಾಹಿನಿಯ ಪ್ರಯತ್ನವು ಅಭಿನಂದನಾರ್ಹವಾಗಿದೆ. “ಮಾಲ್ಗುಡಿ ಡೇಸ್” ಧಾರಾವಾಹಿಯನ್ನು ಅಡಿಬರಹಗಳೊಂದಿಗೆ ಹಿಂದಿಯಲ್ಲಿ ಪ್ರಸಾರ ಮಾಡುವ ಬದಲು ಕನ್ನಡದಲ್ಲಿ (ಡಬ್ ಮಾಡಿ) ಪ್ರಸಾರ ಮಾಡಬೇಕೆಂಬ ಪ್ರೇಕ್ಷಕರ ಅನಿಸಿಕೆಯನ್ನು ಜನಶ್ರೀಯವರಿಗೆ ತಲುಪಿಸಲು ಒಂದು ಮಿಂಬಲೆ ಮನವಿ (ಆನ್ಲೈನ್ ಪೆಟಿಷನ್)ಯನ್ನು ಆರಂಭಿಸಲಾಯಿತು.

ಮನವಿಯ ಸಾರ

ಶಂಕರ್‌ನಾಗ್‌ರವರ ಮಾಲ್ಗುಡಿ ಡೇಸ್ ಎನ್ನುವ ಧಾರಾವಾಹಿಯು ಕನ್ನಡದಲ್ಲಿಯೇ ಪ್ರಸಾರವಾಗಬೇಕೆಂದೂ, ಇದು ಕನ್ನಡದಲ್ಲಿಯೇ ಮನರಂಜನೆಯನ್ನು ಪಡೆದುಕೊಳ್ಳುವ ಕನ್ನಡಿಗರ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತಿರುವ ಕ್ರಮವಾಗಿದ್ದು, ಪರಭಾಷೆಯಲ್ಲಿ ತಯಾರಾಗುವ ಒಳ್ಳೆಯ ಕಾರ್ಯಕ್ರಮಗಳನ್ನು ಇತರೆ ಭಾರತೀಯ ಪ್ರಜೆಗಳಂತೆಯೇ, ನಮ್ಮ ತಾಯ್ನುಡಿಯಲ್ಲೇ ನೋಡುವ ಅವಕಾಶ ಮಾಡಿಕೊಡಬೇಕೆಂದೂ ಕೋರುತ್ತಾ ಮಾಲ್ಗುಡಿ ಡೇಸ್ ಕನ್ನಡದಲ್ಲೇ ಬರಬೇಕೆಂದು ಮನವಿ ನೀಡಲಾಯಿತು. ಡಬ್ಬಿಂಗ್ ಮೇಲೆ ಭಾರತದ, ಕರ್ನಾಟಕದ ಯಾವುದೇ ಕಾನೂನೂ ನಿಷೇಧ ಹೇರಿಲ್ಲ. ಡಬ್ಬಿಂಗ್ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧ ಇಲ್ಲ ಎಂದು ಚಿತ್ರರಂಗದ, ಕಿರುತೆರೆಯ ಹಲವಾರು ಹಿರಿಯರೂ ಕೂಡ ಇತ್ತೀಚೆಗಿನ ಡಬ್ಬಿಂಗ್ ಕುರಿತ ಚರ್ಚೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕನ್ನಡದ ಸೊಗಡಿನ ಇಂತಹ ಅಪರೂಪದ ಕಾರ್ಯಕ್ರಮವನ್ನು ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಲು ಮುಂದಾಗಬೇಕೆಂದು ಜನಶ್ರೀ ವಾಹಿನಿಯವರಿಗೆ ಮನವಿ ಮಾಡಲಾಯಿತು.

ಈ ಮನವಿಗೆ ಸಹಿ ಹಾಕುವ ಪ್ರಕ್ರಿಯೆಯನ್ನು http://www.change.org/petitions/janashree-news-telecast-kannada-version-of-malgudi-days ಮಿಂಬಲೆಯಲ್ಲಿ ಸೋಮವಾರ 11.06.2012ದಂದು ಶುರುಮಾಡಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು, ಕೇವಲ 72 ಗಂಟೆಗಳಲ್ಲೇ 830 ಜನರು ಸಹಿ ಹಾಕಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ಈಗಲೂ ನಡೆಯುತ್ತಿದ್ದು ಕನ್ನಡದಲ್ಲಿಯೇ “ಮಾಲ್ಗುಡಿ ಡೇಸ್” ಕಾರ್ಯಕ್ರಮವನ್ನು ನೋಡುವ ತೀವ್ರವಾದ ಹಂಬಲವು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಭಾರತದ ನಾನಾ ಊರುಗಳಲ್ಲಿರುವವರಷ್ಟೇ ಅಲ್ಲದೆ ವಿಶ್ವದ ಮೂಲೆಮೂಲೆಗಳ ಕನ್ನಡಿಗರು ಆನ್‌ಲೈನ್ ಪಿಟಿಷನ್ನಿಗೆ ಸಹಿ ಹಾಕುವ ಮೂಲಕ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಾಹಿನಿಯ ಮುಖ್ಯಸ್ಥರನ್ನು ಭೇಟಿ ಮಾಡಿ ಇಂದು ಅವರಿಗೆ 830 ಸಹಿಗಳ ಸದರಿ ಮನವಿಯನ್ನು ತಲುಪಿಸಿ, “ಮಾಲ್ಗುಡಿ ಡೇಸ್” ಧಾರಾವಾಹಿ ಕಾರ್ಯಕ್ರಮವನ್ನು ಕನ್ನಡದಲ್ಲಿ ಪ್ರಸಾರ ಮಾಡಬೇಕೆಂದೂ ತನ್ಮೂಲಕ ಕನ್ನಡಿಗರಿಗೆ ಕಳೆದ ನಾಲ್ಕು-ಐದು ದಶಕಗಳಿಂದ ನಿರಾಕರಿಸಲಾಗಿರುವ “ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವ ಹಕ್ಕ”ನ್ನು ದಕ್ಕಿಸಿಕೊಟ್ಟ ಐತಿಹಾಸಿಕ ಗೌರವಕ್ಕೆ ಪಾತ್ರರಾಗಬೇಕೆಂದು ಕೋರಲಾಯಿತು.

ಇಂಗ್ಲೀಶ್ ಬಲ್ಲ, ಆದರೆ ಅರೆಬರೆ ಅರಿಮೆಯ ನಾಡು ಕಟ್ಟಬೇಕೇ?



(ಇಂದಿನ ಕನ್ನಡಪ್ರಭದಲ್ಲಿ ಪ್ರಕಟವಾದ ಬರಹ)


ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯಸರ್ಕಾರವು ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ತಾನೇ ಆರಂಭಿಸಲು ಮುಂದಾಗಿದೆ. ಈ ನಡೆಯು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ನಂಬಿಕೆಯಾಗಲೀ, ಈಗಿರುವ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಯೋಚನೆಯಾಗಲೀ ಸರ್ಕಾರಕ್ಕಿಲ್ಲವೆಂಬುವಂತಿದೆ. ಸರ್ಕಾರದ ಈ ನಡೆಯು ದೀರ್ಘಾವಧಿಯಲ್ಲಿ ನಾಡಿನ ಏಳಿಗೆಯನ್ನು ಮಣ್ಣುಪಾಲುಮಾಡಬಲ್ಲುದಾಗಿದೆ.

ರಾಜ್ಯಸರ್ಕಾರದ ಕನ್ನಡಪರತೆ!


೨೦೦೮ರಲ್ಲಿ ರೂಪುಗೊಂಡ ರಾಜ್ಯಸರ್ಕಾರವು ಕಲಿಕೆಯ ವಿಷಯದಲ್ಲಿ ಮೊದಲಿನಿಂದಲೂ ಕನ್ನಡ ವಿರೋಧಿಯನ್ನು ಧೋರಣೆಯನ್ನು ತೋರಿಸುತ್ತಿರುವ ಅನುಮಾನವಿದೆ. ಎರಡುವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿಶಾಲೆಯನ್ನು ಭಾರತೀಯ ವಿದ್ಯಾಭವನ ಎನ್ನುವ ಖಾಸಗಿ ಸಂಸ್ಥೆಗೆ ಕೇಂದ್ರೀಯ ಪಠ್ಯಕ್ರಮದ ಆಂಗ್ಲಮಾಧ್ಯಮ ಶಾಲೆಯನ್ನು ನಡೆಸಲು ಒಪ್ಪಿಸಿಬಿಟ್ಟಿತು. ಆ ಮೂಲಕ ರಾಜ್ಯಸರ್ಕಾರದ ಪಠ್ಯಕ್ರಮದಲ್ಲಿ ತನಗೆ ನಂಬಿಕೆ ಇಲ್ಲವೆಂಬುದನ್ನು ತೋರಿಸಿಕೊಂಡಿತ್ತು. ಹೀಗೆ ನಡೆದುಕೊಳ್ಳಲು “ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು” ಎನ್ನುವ ಕಾರಣವನ್ನು ನೀಡಿತ್ತು. ಇದಾದ ಕೆಲದಿನಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಸುಮಾರು ಮೂರು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಮುಂದಾಯಿತು. ಈ ಬಗ್ಗೆ ಜನರಿಂದ ವಿರೋಧ ಬಂದಾಗ “ಮುಚ್ಚುವಿಕೆ ಅಲ್ಲಾ... ಹತ್ತಿರದ ಶಾಲೆಯೊಂದಿಗೆ ವಿಲೀನ” ಎಂದಿತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ? ಎನ್ನುವುದಕ್ಕೆ “ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ” ಎಂದಿತು. “ಹಾಗಾದರೆ ಹಳ್ಳಿಗಾಡಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ?” ಎನ್ನುವ ಪ್ರಶ್ನೆಗೆ ಉತ್ತರವಿಲ್ಲದಾಯ್ತು. ಸರ್ಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಐದಕ್ಕಿಂತಾ ಕಡಿಮೆಯಿದೆ ಎನ್ನುವ ಕಾರಣ ನೀಡುತ್ತಾ “ಇದು ಕೇಂದ್ರಸರ್ಕಾರದ ಆದೇಶ, ನಮ್ಮ ತಪ್ಪೇನೂ ಇಲ್ಲಾ” ಎಂದು ತಿಪ್ಪೆ ಸಾರಿಸಲಾಯಿತು. ಇಷ್ಟೇ ಅಲ್ಲದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಲು ಇರುವ ಕಟ್ಟುಪಾಡುಗಳನ್ನೆಲ್ಲಾ ಗಾಳಿಗೆ ತೂರಿ ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಮುಂದುವರೆಸಲಾಯಿತು, ಇದು ಬೀದಿಗೊಂದು ಕೇಂದ್ರಪಠ್ಯಕ್ರಮದ ಶಾಲೆ ಆರಂಭವಾಗಲು ಕಾರಣವಾಯಿತು. ಇವಿಷ್ಟೂ ಒಂದು ಹಂತದ ಕಥೆಯಾದರೆ ಈಗಿನದ್ದು ಮತ್ತೊಂದು.

ಹೊಸ ನಿರ್ಧಾರ!


ಈಗ ರಾಜ್ಯಸರ್ಕಾರದ ೩೪೧ ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಶುರುಮಾಡಲು ಮುಂದಾಗಿದೆ. “ಇದಕ್ಕೆ ಜನರಿಂದ ಬೇಡಿಕೆಯಿದೆ, ಬಡಮಕ್ಕಳು ಖಾಸಗಿ ಶಾಲೆಗಳನ್ನು ಸೇರಲಾಗದ ಕಾರಣದಿಂದ ಆಂಗ್ಲಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗಬಾರದು, ಇದು ರಾಜ್ಯಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿಲ್ಲಾ” ಇತ್ಯಾದಿ ಕಾರಣಗಳನ್ನು ಕೊಡಲಾಗುತ್ತಿದೆ. ಕರ್ನಾಟಕದ ಭಾಷಾನೀತಿ ಕನ್ನಡ ಮಾಧ್ಯಮದಲ್ಲಿನ ಕಲಿಕೆಯನ್ನು ೫ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದನ್ನು “ಕನಿಷ್ಠ ೫ನೇ ತರಗತಿಯವರೆಗೆ” ಎಂದು ಪರಿಗಣಿಸದೇ “ಗರಿಷ್ಠ ೫ನೇ ತರಗತಿಯವರೆಗೆ” ಎಂದು ಸರ್ಕಾರ ಪರಿಗಣಿಸಿದಂತಿದೆ.

ಕನ್ನಡದ ಬಗ್ಗೆ ಕನ್ನಡಸರ್ಕಾರಕ್ಕೇ ನಂಬಿಕೆಯಿಲ್ಲ!


ಇದೆಲ್ಲದರ ಅರ್ಥವು ನೇರವೂ ಸರಳವೂ ಆಗಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ ’ಕನ್ನಡಿಗರ ಕಲಿಕೆ’ಗೆ ‘ಕನ್ನಡ ನುಡಿ’ ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು “ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ”ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ. ಬದಲಾಗಿ ಕನ್ನಡಕ್ಕೆ ಕಲಿಕಾ ಮಾಧ್ಯಮವಾಗುವ ಯೋಗ್ಯತೆಯಿಲ್ಲಾ ಎಂದೂ, ಕನ್ನಡಿಗರಿಗೆ ಆಂಗ್ಲಮಾಧ್ಯಮದಲ್ಲಿನ ಕಲಿಕೆಯೇ ಒಳಿತೆಂದೂ ತಿಳಿದಿರುವಂತಿದೆ. ಪ್ರಪಂಚದಲ್ಲಿ “ತಾಯ್ನುಡಿಯಲ್ಲಿ ಕಲಿಕೆ ನೀಡುವುದೇ ಅತ್ಯುತ್ತಮ” ಎನ್ನದಿರುವ ಯಾವುದಾದರೂ ನಾಡಿದ್ದರೆ ಬಹುಶಃ ಅದು ನಮ್ಮದೇ! ವೈಜ್ಞಾನಿಕ ಅಧ್ಯಯನಗಳು, ವಿಶ್ವಸಂಸ್ಥೆಯ ಅಂಗವಾಗಿರುವ ಯುನೆಸ್ಕೋ ನಿಲುವುಗಳೆಲ್ಲವೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳುತ್ತಿವೆಯೋ ಅದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬದಲಾಗಿ ಯಾರದೋ ಮಕ್ಕಳು - ಮೊಮ್ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವುದನ್ನು ಎತ್ತಿ ತೋರಿಸುತ್ತಾ... ಕೆಲವರ ಆಯ್ಕೆಯ ಉದಾಹರಣೆಯನ್ನು ರಾಜ್ಯಸರ್ಕಾರದ ನೀತಿ-ನಿಲುವನ್ನು ರೂಪಿಸಲು, ಸಮರ್ಥಿಸಿಕೊಳ್ಳಲು ಬಳಸುತ್ತಿರುವುದು ದುರಂತ.

ಕೈಬಿಡಲಿ ಭಾಷಾನೀತಿಯನ್ನು!

ಸರ್ಕಾರ ಈಗಿನ ನಂಬಿಕೆಯನ್ನೇ ಖಚಿತವಾಗಿ ಹೊಂದಿದ್ದರೆ ತನ್ನ ಭಾಷಾನೀತಿಯನ್ನೂ, ಶಿಕ್ಷಣನೀತಿಯನ್ನು ಬದಲಾಯಿಸಲಿ. ಯಾಕಾಗಿ ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶುರುವಾಗಬೇಕು? ಅದು ಒಂದನೇ ತರಗತಿಯಿಂದಲೇ ಆಗಲಿ. ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕಲಿಕಾ ವ್ಯವಸ್ಥೆಯನ್ನು ಕಟ್ಟುತ್ತಿರುವ ಸರ್ಕಾರಕ್ಕೆ ಸುಮ್ಮನೆ ಕನ್ನಡಪರ ಸರ್ಕಾರ ಎಂದು ತೋರಿಸುವ ಹಂಬಲವೇಕೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರವೇಕೆ? ಆಡಳಿತ ಭಾಷೆಯಾಗಿ ಕನ್ನಡ ಏಕೆ? ಕನ್ನಡ ಸಂಸ್ಕೃತಿ ಇಲಾಖೆ ಏಕೆ? ವಾರ್ಷಿಕ ಪ್ರಶಸ್ತಿಗಳೇಕೆ? ಕನ್ನಡದ ಜಾತ್ರೆಗಳೇಕೇ? ಸುಮ್ಮನೇ ತೆರಿಗೆ ಹಣ ಪೋಲು ಮಾಡುವುದಾದರೂ ಏಕೆ? ಕನ್ನಡದಿಂದ ಜ್ಞಾನಾರ್ಜನೆ ಅಸಾಧ್ಯವೆನ್ನುವ, ಕನ್ನಡದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ, ಕನ್ನಡದಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ, ಉದ್ಯೋಗಾವಕಾಶ ಸಾಧ್ಯವಿಲ್ಲ ಎನ್ನುವ ನಂಬಿಕೆ ನಮ್ಮ ಸರ್ಕಾರಕ್ಕಿರುವುದಾದರೆ… ನಾಡಿನ ಜನರ ಒಳಿತು ಆಂಗ್ಲಮಾಧ್ಯಮದ ಕಲಿಕೆಯಿಂದಲೇ ಎನ್ನುವುದಾದರೆ ಅದನ್ನೇ ಮಾಡಲಿ.

ಬೇಕು ಏಳಿಗೆಗೆ ಸಾಧನ


ಈಗಿನ ಕರ್ನಾಟಕ ರಾಜ್ಯಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ ಮತ್ತು ಮುಂದೆ ಇದರಿಂದಾಗಿ ಕನ್ನಡ ಜನಾಂಗಕ್ಕಾಗುವ ಹಾನಿಗೆ ಸರ್ಕಾರವೇ ಹೊಣೆಯಾಗಿದೆ. ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸಬೇಕಾಗಿದ್ದ ಸರ್ಕಾರವು ಈ ರೀತಿ ಅರೆನುರಿತ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಬೇಕಾಗಿರುವ ಜೊತೆಯಲ್ಲೇ ಖಾಸಗಿ ಶಾಲೆಯಾದರೂ ಕನ್ನಡ ಮಾಧ್ಯಮವಾಗಿದ್ದಲ್ಲಿ ಅವುಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಬದಲಾಗಿ ನಮ್ಮ ರಾಜ್ಯಸರ್ಕಾರವು ಕನ್ನಡ ಶಾಲೆಗಳನ್ನೇ ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲೀಶ್ ಭಾಷೆಯನ್ನರಿತ ಆದರೆ ಅರಿಮೆಯ ವಿಷಯಗಳನ್ನು ಅರೆಬರೆ ತಿಳಿದ ಪೀಳಿಗೆಯಾಗಿಬಿಡುವ ಅಪಾಯವಿದೆ. ನಮ್ಮ ನಾಡಿಗೆ ಬೇಕಿರುವುದು, ಅರಿಮೆಯ ವಿಷಯಗಳನ್ನು ಚೆನ್ನಾಗಿ ತಿಳಿದ, ಕನ್ನಡದ ಜೊತೆಗೆ ಇಂಗ್ಲೀಶನ್ನೂ ಬಲ್ಲ ಜನರು. ನಮಗೆ ಬೇಕಿರುವುದು ಸಮಾನ ಶಿಕ್ಷಣದ ಕನ್ನಡ ಮಾಧ್ಯಮದ ಸಮುದಾಯ ಶಾಲೆಗಳು

ಮಾನ್ಯ ಶ್ರೀ ಕಾಗೇರಿಯವರಿಗೊಂದು ಬಹಿರಂಗ ಪತ್ರ!



(ಶ್ರೀ ಕಿರಣ್ ಬಾಟ್ನಿ ಅವರು ಬರೆದ ಅಂಕಣ ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೂಡಿ ಬಂದಿದೆ. ಅದೇ ಅಂಕಣದ ಪೂರ್ಣರೂಪವನ್ನು ಓದುಗರಿಗಾಗಿ ಇಲ್ಲಿ ಪ್ರಕಟಿಸಲಾಗಿದೆ)

ಕಾಗೇರಿಯವರೇ, ಕನ್ನಡ ಕಟ್ಟೆಗೆ ಇಂಗ್ಲೀಶ್ ನೀರೇಕೆ?

ನಲ್ಮೆಯ ಶಿಕ್ಶಣ ಮಂತ್ರಿಗಳೇ,

‘ಬೇಡಿಕೆ ಇದೆ, ಆದ್ದರಿಂದ ಈ ವರ‍್ಶ ೩೫೦ ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ೬ನೇ ತರಗತಿಯಿಂದ ತೆಗೆಯುತ್ತೇವೆ’ ಎಂದು ಕರ‍್ನಾಟಕದ ಶಿಕ್ಶಣ ಮಂತ್ರಿಗಳಾದ ನೀವು ಮುಂದಾಗಿದ್ದೀರಿ. ಕನ್ನಡಿಗರ ಬವಿಶ್ಯದ ಕಾಳಜಿಯಿಂದಲೇ ನೀವು ಈ ಹೆಜ್ಜೆಂiiನ್ನು ಇಟ್ಟಿದ್ದೀರಿ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ ಆ ಕಾಳಜಿಗೆ ನೀವಿಟ್ಟಿರುವ ಹೆಜ್ಜೆಯೇ ಸರಿ ಎಂದು ನನಗೆ ಅನ್ನಿಸುತ್ತಿಲ್ಲ. ಮೇಲ್ನೋಟಕ್ಕೆ ನಿಮ್ಮ ನಿಲುವಿನಲ್ಲಿ ಏನೂ ತಪ್ಪಿಲ್ಲ ಎಂದು ಹಲವರಿಗೆ ಅನಿಸಬಹುದು: ಜನರ ಬೇಡಿಕೆಯನ್ನು ಈಡೇರಿಸಲಿಕ್ಕೇ ಅಲ್ಲವೆ ಸರ‍್ಕಾರ ಇರುವುದು? ಆದರೆ ಹಾಗಲ್ಲ.

ಕಾಸಗಿ ಸಂಸ್ತೆಗಳಿಗಿಂತ ಸರ‍್ಕಾರಕ್ಕೆ ತೀರಾ ಹೆಚ್ಚಿನ ದೂರಾಲೋಚನೆ ಇರಬೇಕು. ಹಾಗಿರದಿದ್ದರೆ ಇವೆರಡರ ನಡುವಿನ ವ್ಯತ್ಯಾಸ ಹೆಚ್ಚು-ಕಡಿಮೆ ಇಲ್ಲದಂತೆಯೇ ಆಗುತ್ತದೆ. ಕಾಸಗಿ ಸಂಸ್ತೆಯೊಂದರಂತೆ ಸರ‍್ಕಾರವೂ ಕೆಲವರ ಮತ್ತು ಇಂದಿನ ಲಾಬಕ್ಕಾಗಿ ಮಾತ್ರ ಕೆಲಸ ಮಾಡಲು ಶುರು ಮಾಡಿಬಿಟ್ಟರೆ ಎಂದೆಂದಿಗೂ ನೆಲೆನಿಲ್ಲುವಂತಹ ಕೆಲಸಗಳು ಯಾರಿಂದ ಆಗುವವು? ನೀರಿಗೆ ಬೇಡಿಕೆ ಇದೆ ಎಂದು ಸರ‍್ಕಾರ ಕಾಸಗಿ ಸಂಸ್ತೆಯೊಂದರಂತೆ ಬಾಟಲಿಗಳಲ್ಲಿ ಆಗುವಶ್ಟು ಜನರಿಗೆ ನೀರನ್ನು ಒದಗಿಸುವ ಕೆಲಸಕ್ಕೆ ಕೈ ಹಾಕಿಬಿಟ್ಟರೆ ಎಂದೆಂದಿಗೂ ನೆಲೆನಿಲ್ಲುವಂತಹ, ಎಲ್ಲರಿಗೂ ನೀರು ಪೂರೈಸುವಂತಹ ಅಣೆಕಟ್ಟನ್ನು ಯಾರು ಕಟ್ಟುವರು ಕಾಗೇರಿಯವರೇ? ಆದುದರಿಂದ ಸರ‍್ಕಾರ ಎಲ್ಲರಿಗೂ ಲಾಬವಾಗುವಂತಹ ಮತ್ತು ಎಂದೆಂದಿಗೂ ನೆಲೆನಿಲ್ಲುವಂತಹ ಕೆಲಸಗಳಿಗೆ ಕೈ ಹಾಕಬೇಕೇ ಹೊರತು ಕಾಸಗಿ ಸಂಸ್ತೆಗಳಂತೆ ಕೆಲವರ ಮತ್ತು ಇಂದಿನ ಲಾಬವನ್ನು ಎಣಿಸಿಕೊಳ್ಳುವ ಕಣ್ಣಯ್ಬಿಗೆ ಬಲಿಯಾಗಬಾರದು. ಇದನ್ನು ನಿಮಗೆ ಹೇಳಲೇ ಬೇಕಿರಲಿಲ್ಲ, ಆದರೂ ಈ ಸಂದರ‍್ಬದಲ್ಲಿ ನೀವಿದನ್ನು ಮರೆತಂತೆ ಕಾಣುತ್ತಿರುವುದರಿಂದ ಹೇಳುತ್ತಿದ್ದೇನೆ.

ಈ ತತ್ವವನ್ನು ಅರಿತ ದೇಶಗಳಲ್ಲೆಲ್ಲ ಕಾಸಗಿ ಸಂಸ್ತೆಗಳ ಕೈಯಲ್ಲಿ ಆಗದ ಕೆಲಸಗಳನ್ನು ಸರ‍್ಕಾರ ಕೈಗೊಳ್ಳುವುದನ್ನು ಕಾಣಬಹುದು. ಆದರೆ ಇಲ್ಲಿ ನಮ್ಮ ಕರ‍್ನಾಟಕ ಸರ‍್ಕಾರವು ಕಾಸಗಿ ಶಾಲೆಗಳೊಡನೆ ಪೈಪೋಟಿಗೆ ನಿಂತು ಅವರು ಮಾಡುವುದನ್ನೇ ತಾನೂ ಮಾಡಲು ಹೊರಟಿರುವುದು ಅದರ ಹಿರಿಮೆಯನ್ನು ತೋರಿಸುವುದಿಲ್ಲ, ದೂರಾಲೋಚನೆಯ ಮತ್ತು ದುಡಿಮೆಯೊಲವಿನ ಕೊರತೆಯನ್ನು ತೋರಿಸುತ್ತದೆ. ಎಂದೆಂದಿಗೂ ನೆಲೆನಿಲ್ಲುವ, ಎಲ್ಲರಿಗೂ ಒಪ್ಪುವ ಜಾಗತಿಕ ಗುಣಮಟ್ಟದ ಕನ್ನಡ ಮಾದ್ಯಮದ ಕಲಿಕೆಯೇರ್ಪಾಡೆಂಬ ಅಣೆಕಟ್ಟನ್ನು ಕಟ್ಟುವ ಬದಲು, ಇಂದಿನ ಲಾಬಕ್ಕಾಗಿ ಕಾಸಗಿ ಸಂಸ್ತೆಗಳು ಮಾಡಿದಂತೆ ಬೆರಳೆಣಿಕೆಯ ಇಂಗ್ಲೀಶ್ ಶಾಲೆಗಳೆಂಬ ನೀರಿನ ಬಾಟಲಿಗಳನ್ನು ಹಂಚುವ ಕೆಲಸಕ್ಕೆ ಕೈ ಹಾಕಿರುವುದು ಕರ‍್ನಾಟಕ ಸರ‍್ಕಾರದ ಹಿರಿಮೆಯನ್ನು ತೋರಿಸುವುದಿಲ್ಲ ಕಾಗೇರಿಯವರೇ, ಎಂದೆಂದಿಗೂ ಜನರಿಗೆ ನೆರವಾಗುವ ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವ ಎದೆಗಾರಿಕೆಯ ಕೊರತೆಯನ್ನು ತೋರಿಸುತ್ತದೆ, ಅಳವಿನ ಕೊರತೆಯನ್ನು ತೋರಿಸುತ್ತದೆ, ಪುಕ್ಕಲುತನವನ್ನು ತೋರಿಸುತ್ತದೆ ಎಂದೇ ಹೇಳಬೇಕಾಗುತ್ತದೆ. ಈ ದೂರಾಲೋಚನೆಯ ಕೊರತೆ, ಈ ದುಡಿಮೆಯೊಲವಿನ ಕೊರತೆ, ಈ ಎದೆಗಾರಿಕೆಯ ಕೊರತೆ, ಈ ಆಳವಿನ ಕೊರತೆ, ಈ ಪುಕ್ಕಲುತನ - ಇವುಗಳಿಂದ ನಾವು ಎಂದಿಗೂ ಏಳಿಗೆ ಹೊಂದಲಾರೆವು. ಅಲ್ಲವೇ ಕಾಗೇರಿಯವರೆ?

ಇವತ್ತಿನ ದಿನ ಮಕ್ಕಳು ಮತ್ತು ಹೆತ್ತವರು ಇಂಗ್ಲೀಶ್ ಮಾದ್ಯಮದ ಕಡೆಗೆ ವಾಲಿರುವುದು, ಮತ್ತು ಕೈಲಾದವರು ಅದನ್ನು ಕೊಳ್ಳುತ್ತಿರುವುದು, ನಿಜವಾದ ಮಾತೇ. ಆದರೆ ಅದಕ್ಕೆ ಕಾರಣ ಕನ್ನಡ ಮಾದ್ಯಮವನ್ನು ನಾವು ಇನ್ನೂ ಗಟ್ಟಿಯಾಗಿಸದೆ ಇರುವುದು, ಕನ್ನಡ ಮಾದ್ಯಮವೆಂದರೆ ಆಟಕ್ಕೆ ಮಾತ್ರ, ಲೆಕ್ಕಕ್ಕಲ್ಲ ಎಂಬಂತೆ ಅದನ್ನು ನಡೆಸಿಕೊಂಡು ಬಂದಿರುವುದು. ಸರಿಯಾದ ಅಣೆಕಟ್ಟೊಂದನ್ನು ಕಟ್ಟಿ ಅದರಿಂದ ನೇರವಾಗಿ ಮನೆಗೆ ಒಳ್ಳೆಯ ನೀರನ್ನು ಒದಗಿಸುವ ಏರ‍್ಪಾಡಿದ್ದಿದ್ದರೆ ಜನರು ಕಾಸಗಿ ಸಂಸ್ತೆಗಳಿಂದ ನೀರಿನ ಬಾಟಲಿಗಳನ್ನೇಕೆ ಕೊಳ್ಳುತ್ತಿದ್ದರು ಕಾಗೇರಿಯವರೇ? ಹಾಗೆಯೇ, ಮನೆಮನೆಯಲ್ಲಿ ಕೇಳಿಸುವ ಕನ್ನಡದಲ್ಲಿ ಸರಿಯಾದ ಕಲಿಕೆಯೇರ‍್ಪಾಡನ್ನು ಕಟ್ಟಿದ್ದರೆ ಕಾಸಗಿ ಶಾಲೆಗಳು ಮಾರುವ ಇಂಗ್ಲೀಶ್ ಮಾದ್ಯಮದ ಕಡೆಗೇಕೆ ಜನರು ವಾಲುತ್ತಿದ್ದರು? ಜಗತ್ತಿನ ಮುಂದುವರೆದ ದೇಶಗಳಲ್ಲಿ ಎಲ್ಲೂ ತಾಯ್ನುಡಿಯನ್ನು ಬಿಟ್ಟು ಬೇರೊಂದು ನುಡಿಯನ್ನು ಕಲಿಕೆಯೇರ‍್ಪಾಡಿನಲ್ಲಿ ಅಳವಡಿಸಲು ಕಾಸಗಿ ಸಂಸ್ತೆಗಳೇ ಹೆಚ್ಚಾಗಿ ಮುಂದಾಗಿಲ್ಲ ಎಂದು ನಿಮಗೆ ನಾನು ತಿಳಿಸಬೇಕಿಲ್ಲ; ಸರ‍್ಕಾರಗಳು ಮುಂದಾಗಿರುವ ಉದಾಹರಣೆಗಳಂತೂ ಇಲ್ಲವೇ ಇಲ್ಲ. ಈ ವಿಚಿತ್ರ ಕಾಣಿಸುವುದು ಮುಂದುವರೆಯಲು ಬಯಸುತ್ತಿರುವ ದೇಶಗಳಲ್ಲಿ ಮಾತ್ರ. ಮುಂದುವರೆಯಲು ಬಯಸುವ ಬಾರತದಂತಹ ದೇಶಗಳಲ್ಲಿ, ಇಂದಿನ ವಿಶಯವನ್ನು ಕಾಸಗಿ ಸಂಸ್ತೆಗಳಿಗೆ ಮತ್ತು ಶಾಲೆಗಳಿಗೆ ಬಿಟ್ಟು, ಅವುಗಳಿಗಿಲ್ಲದ ದೂರಾಲೋಚನೆಯನ್ನು ಸರ‍್ಕಾರಗಳು ತಾವಿಟ್ಟುಕೊಳ್ಳಬೇಕು. ಕಾಸಗಿ ಸಂಸ್ತೆಗಳು ಇಂಗ್ಲೀಶ್ ಶಾಲೆಗಳನ್ನು ಕಟ್ಟಿದರೆ ಕಟ್ಟಲಿ, ಒಳ್ಳೆಯ ತಾಯ್ನುಡಿಯ ಕಲಿಕೆಯೇರ‍್ಪಾಡುಗಳನ್ನು ಬಾರತದ ರಾಜ್ಯಸರ‍್ಕಾರಗಳು ಕಟ್ಟಬೇಕು. ಹಾಗೆ ಮಾಡಿದರೇನೇ ಸರ‍್ಕಾರಗಳು ಸರ‍್ಕಾರಗಳೆನಿಸಿಕೊಳ್ಳುವುದು. ಅಂತಹ ಸರ‍್ಕಾರವೊಂದನ್ನು ನಿಮ್ಮ ಪಕ್ಶ ಕಟ್ಟಿ ಇಡೀ ಬಾರತಕ್ಕೇ ಮಾದರಿ ಸರ‍್ಕಾರವಾಗಲಿ ಎಂದು ನನ್ನ ಆಸೆ.

ತಮಾಶೆಯೇನೆಂದರೆ ಬಾರತವನ್ನು ಬಾರತೀಯರ ಸರ‍್ಕಾರ ಆಳುವುದಕ್ಕಿಂತ ಮುಂಚೆ ಕಾಸಗಿ ಸಂಸ್ತೆಯೊಂದು ಆಳುತ್ತಿತ್ತು - ಅದರ ಹೆಸರು ಈಸ್ಟ್ ಇಂಡಿಯಾ ಕಂಪನಿ. ಈ ಕಂಪನಿಯವರೇ ಬಾರತದಲ್ಲಿ ಇಂಗ್ಲೀಶಿನ ಕಲಿಕೆಯೇರ‍್ಪಾಡನ್ನು ಕಟ್ಟಿದ್ದು. ೧೮೩೫ರಲ್ಲಿ ತಾಮಸ್ ಬ್ಯಾಬಿಂಗ್‌ಟನ್ ಮೆಕಾ ಎಂಬುವನು ಮಾಡಿದ ಪ್ರಯತ್ನದಿಂದಲೇ ಇಂದು ಬಾರತದಲ್ಲಿ ಇಂಗ್ಲೀಶಿನ ಕಲಿಕೆಯೇರ‍್ಪಾಡೆಂಬುದು ಇರುವುದು. ಈತ ಸಂಸ್ಕ್ರುತ ಮತ್ತು ಅರೇಬಿಕ್ ನುಡಿಗಳನ್ನು ಮತ್ತು ಬಾರತೀಯ ಅರಿಮೆಗಳನ್ನು ಹೀಗಳೆದ ಎಂದು ಮಾತ್ರ ನೆನಪಿಟ್ಟುಕೊಂಡಿರುವ ಬಾರತೀಯರು ಒಂದು ಮುಕ್ಯವಾದ ವಿಶಯವನ್ನು ಮರೆತಿದ್ದಾರೆ. ಅದೇನೆಂದರೆ ಮೆಕಾಲೆ ಇಂಗ್ಲೀಶ್ ಮಾದ್ಯಮದ ಕಲಿಕೆಯೇರ‍್ಪಾಡನ್ನು ಬಾರತೀಯರಿಗೆಲ್ಲ ಕೊಡಮಾಡಿಸಲು ಹೊರಡಲಿಲ್ಲ. ಅವನು ಎಣಿಸಿದ್ದು ಏನೆಂದರೆ, ಯೂರೋಪಿನ ಅರಿಮೆಗಳನ್ನು (ವಿಗ್ನಾನಗಳನ್ನು) ಬಾರತೀಯರೆಲ್ಲರಿಗೆ ಕೊಡಮಾಡಿಸಲು ಬಾರತದ ಹಲವಾರು ನುಡಿಗಳಲ್ಲಿ ಕಲಿಕೆಯೇರ‍್ಪಾಡುಗಳನ್ನು ಕಟ್ಟಬೇಕಾಗುತ್ತದೆ; ಹಾಗೆ ಕಟ್ಟಲು ಈಸ್ಟ್ ಇಂಡಿಯಾ ಕಂಪನಿಯ ಕೈಯಲ್ಲಿ ಆಗುವುದಿಲ್ಲ; ಅದಕ್ಕೆ ಬೇಕಾದ ಹಣವಾಗಲಿ ಬಾರತದ ಎಲ್ಲ ನುಡಿಗಳ ಅರಿವಾಗಲಿ ಬ್ರಿಟಿಶರಿಗೆ ಇಲ್ಲ; ಆದುದರಿಂದ ಇಂಗ್ಲೀಶ್ ಮಾದ್ಯಮದ ಏರ‍್ಪಾಡನ್ನು ಕಂಪನಿ ಕಟ್ಟುವುದು; ಮತ್ತು ಆ ಏರ‍್ಪಾಡಿನಲ್ಲಿ ತಯಾರಾದ ಬೇರೆಬೇರೆ ನುಡಿಜನಾಂಗಗಳ ಬಾರತೀಯರು ಅವರವರ ನುಡಿಗಳಲ್ಲಿ ಕಲಿಕೆಯೇರ‍್ಪಾಡನ್ನು ಮುಂದೆ ಕಟ್ಟಲಿ ಎಂಬುದು.

ಎಂದರೆ, ಬಾರತೀಯರನ್ನು ಗುಲಾಮರಂತೆ ನಡೆಸಿಕೊಂಡ ಈಸ್ಟ್ ಇಂಡಿಯಾ ಕಂಪನಿಗೇ ತಾಯ್ನುಡಿಯ ಕಲಿಕೆಯ ಪ್ರಾಮುಕ್ಯತೆ ಗೊತ್ತಿತ್ತು; ಅಶ್ಟೇ ಅಲ್ಲ, ಇಂಗ್ಲೀಶಿನಲ್ಲಿ ಕಲಿತ ಬೆರಳೆಣಿಕೆಯ ಬಾರತೀಯರು ಮುಂದೆ ಬಾರತೀಯ ನುಡಿಗಳಲ್ಲಿ ಒಳ್ಳೆಯ ಕಲಿಕೆಯೇರ‍್ಪಾಡುಗಳನ್ನು ಕಟ್ಟಬೇಕು ಎಂಬ ದೂರಾಲೋಚನೆಯಿತ್ತು. ಈ ದೂರಾಲೋಚನೆ ನಮ್ಮ ಕರ‍್ನಾಟಕ ಸರ‍್ಕಾರಕ್ಕೆ ಇರಬಾರದೇ? ಮೆಕಾಲೆಗಿದ್ದ ದೂರಾಲೋಚನೆ ನಮ್ಮ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಇರಬಾರದೇ? ಇಂಗ್ಲೀಶ್ ಮಾದ್ಯಮದ ಕಾಸಗಿ ಶಾಲೆಗಳು ಇವತ್ತಿಗೆ ಮೆಕಾಲೆಯ ಕಲಿಕೆಯೇರ‍್ಪಾಡನ್ನೇ ಮುಂದುವರೆಸಿಕೊಂಡು ಹೋಗುವುದಾದರೆ ಹೋಗಲಿ, ಆದರೆ ಅವರು ಮೊಗೆದು ತಂದಿರುವ ಅರಿಮೆಗಳನ್ನು ಕನ್ನಡಕ್ಕೆ ತರುವವರೂ ಅವರಲ್ಲಿ ಇದ್ದಾರೆ, ತರಲು ತಮ್ಮ ಜೀವನವನ್ನೇ ಮುಡಿಪಾಗಿಸುವ ಕನ್ನಡಿಗರಿದ್ದಾರೆ. ಅವರನ್ನು ಒಡಗೂಡಿಸಿಕೊಂಡು, ಅವರ ಸೇವೆಗಳನ್ನು ಬಳಸಿಕೊಂಡು ಕರ‍್ನಾಟಕ ಸರ‍್ಕಾರವು ಮೆಕಾಲೆಯ ದೂರಾಲೋಚನೆಯನ್ನು ಮೀರಿದ ದೂರಾಲೋಚನೆಯನ್ನು ಇಟ್ಟುಕೊಳ್ಳಲಿ, ಇಂಗ್ಲೀಶಿನ ಕಲಿಕೆಯೇರ‍್ಪಾಡನ್ನೇ ಮೀರಿಸುವ ಕನ್ನಡದ ಕಲಿಕೆಯೇರ‍್ಪಾಡನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಲಿ ಎಂದು ಕೇಳಿಕೊಳ್ಳುತ್ತೇನೆ. ಇಂತಹ ಸಂದರ‍್ಬದಲ್ಲಿ ‘ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ’ ನೀವು ಕೂಡುವುದಿಲ್ಲ, ಇಂಗ್ಲೀಶ್ ಶಾಲೆಗಳನ್ನು ಕಟ್ಟುವ ಬದಲು ಜಾಗತಿಕ ಮಟ್ಟದ ಕನ್ನಡದ ಕಲಿಕೆಯೇರ‍್ಪಾಡನ್ನು ಕಟ್ಟಿ ಮುಂದುವರೆದ ದೇಶಗಳೊಡನೆ ಕರ‍್ನಾಟಕವು ಪೈಪೋಟಿಗೆ ನಿಲ್ಲುವಂತೆ ಮಾಡುತ್ತೀರಿ ಎಂದು ನಂಬಿದ್ದೇನೆ. ಈ ನಂಬಿಕೆ ಸುಳ್ಳಾಗುವಂತೆ ನಡೆದುಕೊಳ್ಳಬೇಡಿ. ಇದು ನನ್ನ ನಂಬಿಕೆಯಶ್ಟೇ ಅಲ್ಲ ಕಾಗೇರಿಯವರೇ, ಎಲ್ಲರಿಗೂ ಬೇಕಾಗಿರುವುದು ಅಣೆಕಟ್ಟೇ, ಬಾಟಲಿಗಳಲ್ಲ.

ಏಳಿ! ಎದ್ದೇಳಿ... ಕಾಗೇರಿಯವರೇ!

ಇಂತು, ನಿಮ್ಮ ವಿಶ್ವಾಸಿ,
ಕಿರಣ್ ಬಾಟ್ನಿ

ಡಬ್ಬಿಂಗ್ ಬೇಡ ಎಂಬ ವಾದ ಹೀಗೆ ಹರಿದು ಬಂತು!

(ಫೋಟೋ ಕೃಪೆ: ಸುವರ್ಣ ಟಿವಿ)

ಡಬ್ಬಿಂಗ್ ಪರ ಮತ್ತು ವಿರೋಧವಾಗಿ ಇದುವರೆಗೆ ಬೇರೆ ಬೇರೆ ಸ್ತರಗಳಲ್ಲಿ ವಾದಗಳು ನಡೆದಿವೆ. ಒಂದೆಡೆ ತರ್ಕಬದ್ಧವಾಗಿ ವಾದ ನಡೆಯುತ್ತಿದ್ದರೆ ಇಂತಹ ವಾದಕ್ಕೆ ತಕ್ಕ ಉತ್ತರಗಳನ್ನು ಕೂಡಾ ನೀಡಲಾಯಿತು. ಈ ವಾದಸರಣಿ ಹರಿದು ಬಂದ ಬಗೆಯನ್ನು    ನೋಡಲು ಕುತೂಹಲಕಾರಿಯಾಗಿದೆ.

ಆರಂಭ!

ಈ ಬಗ್ಗೆ ಬಳಗದ ಮೊದಲ ಬರಹ ಪ್ರಕಟವಾಗಿದ್ದು ೨೦೦೭ರ ಆಗಸ್ಟ್ ೪ನೇ ತಾರೀಕಿನಂದು. ಇದಕ್ಕೂ ಮೊದಲೂ ಕೂಡಾ ಕೆಲವರು ತಮ್ಮ ಬ್ಲಾಗುಗಳಲ್ಲೂ ಬರೆದುಕೊಂಡಿದ್ದರು. ಹೀಗೆ ಬರೆದುಕೊಳ್ಳಲು ಸಾಧ್ಯವಾಗಿದ್ದು ಕೂಡಾ ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಿಕ್ಕ ತಂತ್ರಜ್ಞಾನದ ಸಹಕಾರದಿಂದಲೇ... ಹೀಗೆ ಸಣ್ಣದನಿಯಾಗಿ ಶುರುವಾದ ಅನಿಸಿಕೆಗಳು ಮುಂದೆ ಹಲವಾರು ಬಾರಿ ಆಗಾಗ ಪ್ರಕಟವಾಗುತ್ತಲೇ ಬಂದಿವೆ. ಇದನ್ನು ಮೊದಲು ಡಬ್ಬಿಂಗ್ ವಿರೋಧಿಗಳು ಗುರುತಿಸಿ ಪ್ರತಿಕ್ರಿಯೆ ನೀಡುವ ಹಂತಕ್ಕೆ ಬಂದದ್ದು ಇತ್ತೀಚಿಗೇನೇ... ಡಬ್ಬಿಂಗ್ ಪರವಾಗಿ ಮಾತಾಡಿದವರೆಲ್ಲಾ ಮೂಲತಃ ಪ್ರಸ್ತಾಪಿಸಿದ್ದು ಮೂರು ವಿಷಯಗಳನ್ನು.

ಡಬ್ಬಿಂಗ್ ಬೇಕೆನ್ನಲು ಮೂರು ಕಾರಣಗಳು

ಮೊದಲಿಗೆ ಕನ್ನಡಿಗರಿಗೆ ತಾಯ್ನುಡಿಯಲ್ಲೇ ಮನರಂಜನೆ, ಜ್ಞಾನ ವಿಜ್ಞಾನದ ಕಲಿಕೆಗೆ ಅವಕಾಶ ಇರಬೇಕು ಮತ್ತು ನಾಡಿನ ಮೂಲೆಮೂಲೆಗಳಲ್ಲಿರುವ ಬರೀ ಕನ್ನಡವನ್ನಷ್ಟೇ ಬಲ್ಲ ದೊಡ್ಡ ಸಂಖ್ಯೆಯ ಜನರಿಗೆ ಇವೆಲ್ಲವೂ ಕನ್ನಡದಲ್ಲೇ ಪಡೆದುಕೊಳ್ಳುವ ಅವಕಾಶ ಇರಬೇಕೆನ್ನುವುದು. ಎರಡನೆಯದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಶೇಧವೆನ್ನುವ ಅಸಂವಿಧಾನಿಕ ಮತ್ತು ದಬ್ಬಾಳಿಕೆಯ ನಡೆಯ ಮೂಲಕ ಜನರ  ಆಯ್ಕೆಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ ಎನ್ನುವುದು ಮತ್ತು ಮೂರನೆಯದಾಗಿ ಕನ್ನಡನಾಡಿನಲ್ಲಿ ಕನ್ನಡಿಗರು ಕನ್ನಡದಿಂದ ದೂರ ಸರಿಯುವ ವ್ಯವಸ್ಥೆ ಇಂದು ಡಬ್ಬಿಂಗ್ ಇಲ್ಲದಿರುವ ಕಾರಣದಿಂದಾಗಿ ಉಂಟಾಗಿದ್ದು ಇದು ನಿವಾರಣೆಯಾಗಿ ಕನ್ನಡಿಗರು ಕನ್ನಡವನ್ನು ಉಳಿಸಿಕೊಳ್ಳಲು ಇದು ಸಹಕಾರಿ ಎನ್ನುವುದು. ಈ ಅನಿಸಿಕೆಗಳಿಗೆ ಪೂರಕವಾಗಿ ಹತ್ತಾರು ಉದಾಹರಣೆಗಳನ್ನು ನೀಡಲಾಯಿತು, ಹತ್ತಾರು ಗಣ್ಯರ ಜೊತೆ ಚರ್ಚೆ ನಡೆಸಬೇಕಾಯ್ತು. ಈ ಚರ್ಚೆಯ ದಾರಿ ಬಲು ಸೋಜಿಗದ್ದು. ಡಬ್ಬಿಂಗ್ ನಿಶೇಧದ ಪರವಾದವರ ವಾದ ಸರಣಿಯು ಕಾಲದಿಂದ ಕಾಲಕ್ಕೆ ಹೊಸ ಹೊಸ ಅಸ್ತ್ರಗಳನ್ನೆತ್ತಿಕೊಂಡು ಪ್ರಯೋಗಿಸುವುದೂ, ಅದಕ್ಕೆ ತಕ್ಕ ಉತ್ತರ ಇತ್ತ ಕಡೆಯಿಂದ ಹೋಗುವುದೂ ನಡೆದಿತ್ತು.

ಡಬ್ಬಿಂಗ್ ಬೇಡೆಂಬ ಶಸ್ತ್ರಾಸ್ತ್ರ ಪ್ರಯೋಗ!

"ಡಬ್ಬಿಂಗ್ ತರಬೇಕು ಎನ್ನುವುದು ಹಿರಿಯರ ಆಶಯಕ್ಕೆ ವಿರುದ್ಧವಾದದ್ದು! ಅರವತ್ತರ ದಶಕದಲ್ಲೇ ಡಾ. ರಾಜ್, ಅನಕೃ ಮೊದಲಾದವರು ಡಬ್ಬಿಂಗ್ ಬೇಡ ಎಂದಿದ್ರು... ಅವರ ಮಾತನ್ನು ಧಿಕ್ಕರಿಸಬಾರದು" ಎನ್ನುವ ಮಾತುಗಳಿಗೆ ಅರವತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಎಳವೆಯ ದಿನಗಳಲ್ಲಿದ್ದ ಪರಿಸ್ಥಿತಿಗೂ ಇಂದು ವರ್ಷಕ್ಕೆ ನೂರಕ್ಕೂ ಹೆಚ್ಚು ಸಿನಿಮಾ ಮಾಡೋ, ತನ್ನದೇ ನಾಡಿನಲ್ಲೇ ಉದ್ದಿಮೆ ಕಟ್ಟಿಕೊಂಡಿರೋ ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿಗೂ ಇರುವ ವ್ಯತ್ಯಾಸಗಳ ಬಗ್ಗೆ ತಿಳಿಸಿಕೊಡಬೇಕಾಯ್ತು. ಅಂದು ಅಸ್ತಿತ್ವದಲ್ಲೇ ಇರದಿದ್ದ ಟಿವಿ ಉದ್ಯಮ, ಜಾಹೀರಾತು ಉದ್ಯಮ, ಅನಿಮೇಶನ್ ಮತ್ತು ಜ್ಞಾನ ವಿಜ್ಞಾನದ ವಾಹಿನಿಗಳ ಬಗ್ಗೆ ತಿಳಿಸಬೇಕಾಯ್ತು.

ಕನ್ನಡ ಚಿತ್ರೋದ್ಯಮ ಇಲ್ಲವಾಗುತ್ತದೆ ಎಂಬ ಭೀತಿ ಹರಡುವಿಕೆ!

ಚಿತ್ರೋದ್ಯಮ ನಂಬಿಕೊಂಡ ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತವೆ, ಕನ್ನಡ ಚಿತ್ರರಂಗವೇ ಇಲ್ಲವಾಗುತ್ತದೆ ಎನ್ನುವ ವಾದ ನಂತರದ್ದು... ಸ್ಪರ್ಧೆಯ ಭಯದಿಂದ ಇಂತಹ ಮಾತುಗಳು ಹುಟ್ಟುತ್ತವೆಂದೂ, ಡಬ್ಬಿಂಗ್ ಬಂದೊಡನೇ ಚಿತ್ರ ತಯಾರಿಕೆ ನಿಂತುಹೋಗುತ್ತದೆ ಎನ್ನುವುದನ್ನು ನಂಬಲಾಗದೆಂದೂ, ಹಿಂದೆ ಕಾಯಿನ್ ಬೂತ್ ಫೋನುಗಳನ್ನು ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಮೊಬೈಲ್ ಫೋನ್ ಬಂದಾಗ ಹೇಗೆ ಸ್ಪರ್ಧೆಯನ್ನು ಎದುರಿಸಬೇಕಾಯ್ತು ಎನ್ನುವುದನ್ನೂ ತಿಳಿಸಬೇಕಾಯ್ತು. ಕೊನೆಗೆ ಇದು ಹೊಟ್ಟೆಪಾಡಿನ ಸಮಸ್ಯೆಯಲ್ಲಾ... ಕನ್ನಡ ಭಾಷೆಯ ಉಳಿವಿನ ಪ್ರಶ್ನೆ, ಸೃಜನಶೀಲತೆಯು ಅಳಿಯುವ ಪ್ರಶ್ನೆ ಎನ್ನುವ ಅಸ್ತ್ರ ಬತ್ತಳಿಕೆಯಿಂದ ಹೊರಬಂತು.

ಸೃಜನಶೀಲತೆ, ಭಾಷೆ ಮತ್ತು ಸಂಸ್ಕೃತಿ ರಕ್ಷಣೆ

ಚಿತ್ರೋದ್ಯಮದ ಗಣ್ಯ ನಿರ್ದೇಶಕರುಗಳಲ್ಲಿ ಕೆಲವರು, ಡಬ್ಬಿಂಗ್ ಬಂದರೆ ಸೃಜನಶೀಲತೆ ಅಳಿದುಹೋಗುತ್ತದೆಯೆಂದೂ, ಭಾಷೆ ಕಳೆದುಹೋಗುತ್ತದೆಯೆಂದೂ, ಸಂಸ್ಕೃತಿ ಪಲ್ಲಟವಾಗುತ್ತದೆಯೆಂದೂ ವಾದ ಮುಂದಿಟ್ಟರು. ಜನರಿಗೆ ಒಳಿತನ್ನು ಒಪ್ಪುವ ತಿರಸ್ಕರಿಸುವ ಅವಕಾಶವನ್ನೇ ನಿರಾಕರಿಸಿ, ನಾವ್ಯಾರೋ ಬುದ್ಧಿವಂತರು ನಿಮ್ಮ ಪರವಾಗಿ ತೀರ್ಮಾನಿಸುತ್ತೇವೆ ಎನ್ನುವ ಬೌದ್ಧಿಕ ಅಹಂಕಾರ ಸರಿಯಲ್ಲವೆಂದೂ, ಪ್ರಪಂಚದಲ್ಲಿ ಡಬ್ಬಿಂಗ್‌ನಿಂದಾಗಿ ಹಾಳಾಗಿ ಹೋದ ಭಾಷೆ, ಜನಾಂಗದ ಉದಾಹರಣೆ ತೋರಿಸಿ ಎಂದೂ ಕೇಳಲಾಯ್ತು. ಇದಕ್ಕೆ ತಮಿಳುನಾಡಿನಲ್ಲಿ ಇಂದು ಸೆಂದಮಿಳ್ ಓದುವವರಿಲ್ಲ ಎಂದರು. "ಸರಿ, ಕನ್ನಡದಲ್ಲಿ ಡಬ್ಬಿಂಗ್ ಇಲ್ಲಾ... ಇಲ್ಲೆಷ್ಟು ಜನರಿಗೆ ಹಳೆಗನ್ನಡ ಓದಲು ಬರುತ್ತದೆ" ಎಂದರೆ ಉತ್ತರವಿರದಾಯ್ತು. ಸೃಜನಶೀಲತೆ ಅಳಿದುಹೋಗುತ್ತದೆ ಎನ್ನುವ ಮಾತಿಗೆ ಕನ್ನಡದ ಇಂದಿನ ಸೃಜನಶೀಲ ನಿರ್ದೇಶಕರು, ನಿರ್ಮಾಪಕರು ಡಬ್ಬಿಂಗ್ ಬಂದೊಡನೆ ಚಿತ್ರ ತಯಾರಿಸಲು ಆಗುವುದಿಲ್ಲ ಮತ್ತು ಕನ್ನಡ ಜನತೆ ಅಂಥಾ ಒಳ್ಳೆ ಯತ್ನಗಳನ್ನು ಬೆಂಬಲಿಸುವುದಿಲ್ಲಾ ಎನ್ನಲಾಗದು ಎಂದು ಹೇಳಬೇಕಾಯ್ತು.

ಜನಾಭಿಪ್ರಾಯಗಳು!

ಇವೆಲ್ಲಾ ನಡೆಯುತ್ತಿರುವಾಗಲೇ ದಟ್ಸ್ ಕನ್ನಡ, ಸಂಪಾದಕೀಯ ಮೊದಲಾದ ಮಿಂಬಲೆತಾಣಗಳಲ್ಲಿ "ಡಬ್ಬಿಂಗ್ ಬೇಕೆ? ಬೇಡವೇ?" ಚರ್ಚೆ ಆರಂಭವಾಗಿ, ಮತದಾನಗಳು ನಡೆದು ಡಬ್ಬಿಂಗ್ ಬೇಕೆನ್ನುವವರ ಸಂಖ್ಯೆ ಬೇಡೆಂದವರಿಗಿಂತಾ ಹೆಚ್ಚಾಗಿ... ಮೊದಲು "ಡಬ್ಬಿಂಗ್  ವಿರುದ್ಧ ಈ ತಾಣಕ್ಕೆ ಹೋಗಿ ಮತ ಹಾಕಿ" ಅಂದವರೇ "ಇದು ಮತದಾನದ ಮೂಲಕ  ತೀರ್ಮಾನವಾಗುವ ಮಾತಲ್ಲಾ" ಎನ್ನುವವರೆಗೆ ಬೆಳೆದವು. ಇದೇ ಸಂದರ್ಭದಲ್ಲಿ "ಸತ್ಯಮೇವ ಜಯತೇ" ಕನ್ನಡದಲ್ಲಿ ಡಬ್ ಆಗುವುದೆಂಬ ಸುದ್ದಿ! ಸುವರ್ಣ ವಾಹಿನಿಯ ಈ ಪ್ರಯತ್ನವನ್ನು ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ತಡೆದೆವು ಎಂಬ ಬೆಳವಣಿಗೆಗಳು... ತಾಯ್ನುಡಿಯಲ್ಲಿ ಜ್ಞಾನ ವಿಜ್ಞಾನ ಮನರಂಜನೆಗಳನ್ನು ಪಡೆದುಕೊಳ್ಳಬಯಸಿದ ಸಾವಿರಾರು ಕನ್ನಡಿಗರಿಂದ "ಮಿಂಬಲೆ ಮನವಿ" ಸಲ್ಲಿಕೆ... ಅಂತರ್ಜಾಲದಲ್ಲಿ ಡಬ್ ಆದ ಅವತರಣಿಕೆ ಪ್ರಸಾರ, ಮೂರೇ ದಿನದಲ್ಲಿ ೩೦,೦೦೦ಕ್ಕೂ ಹೆಚ್ಚು ಜನರಿಂದ ವೀಕ್ಷಣೆ, ಟಿವಿಗಳಲ್ಲಿ ಡಬ್ಬಿಂಗ್ ಚರ್ಚೆಗಳು ಆರಂಭವಾದವು. ಇದೇ ಸಂದರ್ಭದಲ್ಲಿ ಅಂತರ್ಜಾಲ ತಾಣದಿಂದ ಕನ್ನಡದ ಅವತರಣಿಕೆಯನ್ನು ತೆಗೆದುಹಾಕಿದ ಘಟನೆಗಳೂ ನಡೆದವು. ಬಾಯಲ್ಲಿ ಮಾತ್ರಾ "ಇಲ್ಲಿ ಡಬ್ಬಿಂಗ್ ನಿಶೇಧವಿಲ್ಲಾ... ಇದು ಸಾಮಾಜಿಕ ಕಟ್ಟುಪಾಡು" ಎನ್ನುತ್ತಲೇ ಡಬ್ ಆದ ಕಾರ್ಯಕ್ರಮಗಳನ್ನು ತಡೆಯುವ, ತೆಗೆದುಹಾಕಿಸುವ ಜನರ ಸೋಗಲಾಡಿತನಗಳು ಬಯಲಾದವು.

ಹತಾಶೆಯ ಹೀನಾಸ್ತ್ರಗಳು

ಚರ್ಚೆಗಳಲ್ಲಿ ನಂತರ ಶುರುವಾದದ್ದೊಂಥರಾ ಹೀನಾಸ್ತ್ರ ಪ್ರಯೋಗಗಳು! ಡಬ್ಬಿಂಗ್ ಬೇಕೆನ್ನುತ್ತಿರುವವರು ಕೇವಲ ಐಟಿ ಬಿಟಿ ಮಂದಿ, ಇವರು ನೂರಕ್ಕಿಂತಾ ಕಮ್ಮಿ ಜನಾ, ಡಬ್ಬಿಂಗ್ ಬೇಕೆನ್ನುವವರು ನಾಡಿನ ದಲಿತರ ವಿರೋಧಿಗಳು, ಪುರೋಹಿತಶಾಹಿ ಮನಸ್ಸಿನವರು, ರೈತರ ವಿರೋಧಿಗಳು...ಹೀಗೆ ನಾನಾ ಪಟ್ಟಕಟ್ಟುವ ಪ್ರಯತ್ನಗಳಾದವು. ಈ ಸಂದರ್ಭದಲ್ಲೇ ನಡೆದ "ವಿಚಾರ ಸಂಕಿರಣ"ದಲ್ಲಿ ದಲಿತ ಮುಖಂಡರೂ, ರೈತ ಮುಖಂಡರೂ, ಕನ್ನಡಪರ ಸಂಘಟನೆಗಳ ಮುಖಂಡರೂ, ಪತ್ರಕರ್ತರೂ, ಅಲ್ಪಸಂಖ್ಯಾತ ಮುಖಂಡರೂ ಪಾಲ್ಗೊಂಡು "ಇದು ಕೆಲವರ ಕೂಗಲ್ಲಾ, ನಾಡಿನ ಜನರ ಕೂಗು" ಎಂದು ಸಾರಬೇಕಾಯ್ತು. ಇದೇ ವೇಳೆಗೆ ಚಿತ್ರರಂಗದ, ಸಾಹಿತ್ಯ ವಲಯದ, ಚಿಂತಕರ ವಲಯದ ಕೆಲಜನರು ಡಬ್ಬಿಂಗ್ ಬರುವುದು ತಪ್ಪಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆಗಳನ್ನು ನೀಡಿದರು. ಇದಕ್ಕೆ ಪ್ರತಿಯಾಗಿ ಕೇಳಿ ಬಂದದ್ದೇ ಚಿತ್ರೋದ್ಯಮದ ಗೌರವಾನ್ವಿತ ಗಣ್ಯರ ಅಪ್ಪಟ ಬೆದರಿಕೆಯ ಮಾತುಗಳು!! ಡಬ್ಬಿಂಗ್ ಬೇಕೆನ್ನೋರು ಉಳಿಯೋದಿಲ್ಲಾ, ಡಬ್ಬಿಂಗ್ ತಡೀದೆ ಬಿಡಲ್ಲಾ, ಡಬ್ಬಿಂಗ್ ಬೇಕೆನ್ನೋರುನ್ನಾ ಜನರು ಉಳಿಸೋದಿಲ್ಲಾ ಅನ್ನೋ ಮಾತುಗಳು... ಡಬ್ಬಿಂಗ್ ಬೇಕೆನ್ನೋರು ನಾಡದ್ರೋಹಿಗಳು, ಇವರಿಗೆ ಹೊಡಿಮಗಾ ಹೊಡಿಮಗಾ ಅನ್ನಬೇಕಾಗುತ್ತೆ ಅನ್ನೋ ಥರದ ಮಾತುಗಳು ಕೇಳಿಬಂದವು. ಡಬ್ಬಿಂಗ್ ಬೇಕೆನ್ನೋರು ಕನ್ನಡ ಸಿನಿಮಾನೇ ನೋಡಲ್ಲಾ ಎನ್ನುವ ಆರೋಪಗಳು, ಇವರು ಅಮೇರಿಕಾ ಏಜೆಂಟರು, ಡಬ್ಬಿಂಗ್ ಪರ ವಾಹಿನಿಗಳ, ಡಬ್ಬಿಂಗ್ ಪರ ನಿರ್ಮಾಪಕರ ಏಜೆಂಟರು, ಅಮೀರ್‌ಖಾನ್‌ರ ಏಜೆಂಟರು... ಎಂಬ ಆರೋಪಗಳು ಶುರುವಾದವು.

ಮತ್ತಷ್ಟು ಸೋಜಿಗದ ಮಾತುಗಳು!

ಮತ್ತೊಂದೆಡೆ ಸತ್ಯಮೇವ ಜಯತೇ ಕಾರ್ಯಕ್ರಮ ಕಳಪೆಯೆನ್ನುವ, ಅದು ಸೋಗಿನದ್ದು ಎನ್ನುವ, ಅಮೀರ್‌ಖಾನ್ ಬರೆದ ಪತ್ರದ ಸಹಿಯೇ ಬೋಗಸ್ ಎನ್ನುವ ಅಸಂಬದ್ಧವಾದ ಹತಾಶೆಯ ಮಾತುಗಳು ಮೂಡಿ ಬಂದದ್ದು ಸೋಜಿಗದ ವಿಷಯ! ಕನ್ನಡದ ಕಾರ್ಯಕ್ರಮಗಳೇ ಇಲ್ಲವಾ, ಅವುನ್ನೇ ನೋಡಿ.. ಬದುಕು ಜಟಕಾ ಬಂಡಿ ನೋಡಿ... ಕಥೆಯಲ್ಲಾ ಇದು ಜೀವನಾ ನೋಡಿ... ನಮ್ಮವರ ಕಾರ್ಯಕ್ರಮಗಳು ಪ್ರಾಮಾಣಿಕವಾದವು, ಅವರದ್ದು ಕೀಳು ಎಂಬಂತಹ ಮಾತುಗಳ ಮೂಲಕ "ನಾವು ಕೊಡೋದನ್ನು ನೋಡಿಕೊಂಡು ತೆಪ್ಪಗಿರಿ" ಎನ್ನುವ ದನಿಯ ಮಾತುಗಳು ಕೇಳಿಬಂದವು.

ಇವಕ್ಕೆ ವ್ಯತಿರಿಕ್ತವಾಗಿ ಇಲ್ಲೂ ನಡುನಡುವೆ ರವಿಚಂದ್ರನ್‌ರವರ ಸವಾಲು/ ಸ್ಪರ್ಧೆ ಎದುರಿಸುವ ಮಾತುಗಳು, ಅಂಬರೀಶ್‌ರವರ ಎದುರಾಳಿಗಳನ್ನು ಗೌರವದಿಂದಲೇ ನೋಡುವ ಮಾತುಗಳೂ ಕತ್ತಲೆಯಲ್ಲಿನ ಮಿಂಚುಗಳಂತೆ ಬೆಳಗಿದ್ದು ನಿಜಾ! ಕೆಲ ಪತ್ರಿಕೆಗಳ ಸಂಪಾದಕರುಗಳು ಮಿಂಬಲೆಯಲ್ಲಿ ಆರೋಗ್ಯಕರವಾದ ಚರ್ಚೆಗಳನ್ನು ನಡೆಸಿದ್ದು ಕೂಡಾ ಮೆಚ್ಚುವಂತಹುದ್ದೇ! ಹೀಗೆ ಇಂದು ದಿನಪತ್ರಿಕೆಗಳಲ್ಲಿ, ಸಿನಿಮಾ ಸಂಚಿಕೆಗಳಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವ ವಿಷಯ ಡಬ್ಬಿಂಗ್ ಆಗಿದ್ದು... ಮುಂದಿನ ದಿನಗಳಲ್ಲಿ ಸಾರಾಸಗಟು ನಿಶೇಧವೆನ್ನುವುದನ್ನು ಅಪ್ರಜಾಸತ್ತಾತ್ಮಕವೆಂದು ಪರಿಗಣಿಸುವ ಎಲ್ಲಾ ನಾಡಪರರೂ ಈ ಬಗ್ಗೆ ದನಿಯೆತ್ತಬೇಕಾಗಿದೆ. ಇಷ್ಟಕ್ಕೂ ಯಾರಿಗಾದರೂ ಕೂಡಾ... ಇನ್ನೆಷ್ಟು ದಿನಗಳ ಕಾಲ ಕನ್ನಡದ ಜನರನ್ನು ಬೆದರಿಕೆ ಮತ್ತು ಹುಸಿವಾದಗಳನ್ನು ಬಳಸಿ, ಅಸಂವಿಧಾನಾತ್ಮಕವಾದ ನಿಶೇಧ ಹೇರಿ, ಭಾಷೆ ಸಂಸ್ಕೃತಿ ಅಳಿದುಹೋಗುತ್ತದೆ ಎನ್ನುವ ಗುಮ್ಮ ತೋರಿಸಿ... ವಂಚಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಾಧ್ಯಾ?!
Related Posts with Thumbnails