ಇಂಗ್ಲೀಶ್ ಬಲ್ಲ, ಆದರೆ ಅರೆಬರೆ ಅರಿಮೆಯ ನಾಡು ಕಟ್ಟಬೇಕೇ?



(ಇಂದಿನ ಕನ್ನಡಪ್ರಭದಲ್ಲಿ ಪ್ರಕಟವಾದ ಬರಹ)


ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯಸರ್ಕಾರವು ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ತಾನೇ ಆರಂಭಿಸಲು ಮುಂದಾಗಿದೆ. ಈ ನಡೆಯು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ನಂಬಿಕೆಯಾಗಲೀ, ಈಗಿರುವ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಯೋಚನೆಯಾಗಲೀ ಸರ್ಕಾರಕ್ಕಿಲ್ಲವೆಂಬುವಂತಿದೆ. ಸರ್ಕಾರದ ಈ ನಡೆಯು ದೀರ್ಘಾವಧಿಯಲ್ಲಿ ನಾಡಿನ ಏಳಿಗೆಯನ್ನು ಮಣ್ಣುಪಾಲುಮಾಡಬಲ್ಲುದಾಗಿದೆ.

ರಾಜ್ಯಸರ್ಕಾರದ ಕನ್ನಡಪರತೆ!


೨೦೦೮ರಲ್ಲಿ ರೂಪುಗೊಂಡ ರಾಜ್ಯಸರ್ಕಾರವು ಕಲಿಕೆಯ ವಿಷಯದಲ್ಲಿ ಮೊದಲಿನಿಂದಲೂ ಕನ್ನಡ ವಿರೋಧಿಯನ್ನು ಧೋರಣೆಯನ್ನು ತೋರಿಸುತ್ತಿರುವ ಅನುಮಾನವಿದೆ. ಎರಡುವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿಶಾಲೆಯನ್ನು ಭಾರತೀಯ ವಿದ್ಯಾಭವನ ಎನ್ನುವ ಖಾಸಗಿ ಸಂಸ್ಥೆಗೆ ಕೇಂದ್ರೀಯ ಪಠ್ಯಕ್ರಮದ ಆಂಗ್ಲಮಾಧ್ಯಮ ಶಾಲೆಯನ್ನು ನಡೆಸಲು ಒಪ್ಪಿಸಿಬಿಟ್ಟಿತು. ಆ ಮೂಲಕ ರಾಜ್ಯಸರ್ಕಾರದ ಪಠ್ಯಕ್ರಮದಲ್ಲಿ ತನಗೆ ನಂಬಿಕೆ ಇಲ್ಲವೆಂಬುದನ್ನು ತೋರಿಸಿಕೊಂಡಿತ್ತು. ಹೀಗೆ ನಡೆದುಕೊಳ್ಳಲು “ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು” ಎನ್ನುವ ಕಾರಣವನ್ನು ನೀಡಿತ್ತು. ಇದಾದ ಕೆಲದಿನಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಸುಮಾರು ಮೂರು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಮುಂದಾಯಿತು. ಈ ಬಗ್ಗೆ ಜನರಿಂದ ವಿರೋಧ ಬಂದಾಗ “ಮುಚ್ಚುವಿಕೆ ಅಲ್ಲಾ... ಹತ್ತಿರದ ಶಾಲೆಯೊಂದಿಗೆ ವಿಲೀನ” ಎಂದಿತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ? ಎನ್ನುವುದಕ್ಕೆ “ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ” ಎಂದಿತು. “ಹಾಗಾದರೆ ಹಳ್ಳಿಗಾಡಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ?” ಎನ್ನುವ ಪ್ರಶ್ನೆಗೆ ಉತ್ತರವಿಲ್ಲದಾಯ್ತು. ಸರ್ಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಐದಕ್ಕಿಂತಾ ಕಡಿಮೆಯಿದೆ ಎನ್ನುವ ಕಾರಣ ನೀಡುತ್ತಾ “ಇದು ಕೇಂದ್ರಸರ್ಕಾರದ ಆದೇಶ, ನಮ್ಮ ತಪ್ಪೇನೂ ಇಲ್ಲಾ” ಎಂದು ತಿಪ್ಪೆ ಸಾರಿಸಲಾಯಿತು. ಇಷ್ಟೇ ಅಲ್ಲದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಲು ಇರುವ ಕಟ್ಟುಪಾಡುಗಳನ್ನೆಲ್ಲಾ ಗಾಳಿಗೆ ತೂರಿ ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಮುಂದುವರೆಸಲಾಯಿತು, ಇದು ಬೀದಿಗೊಂದು ಕೇಂದ್ರಪಠ್ಯಕ್ರಮದ ಶಾಲೆ ಆರಂಭವಾಗಲು ಕಾರಣವಾಯಿತು. ಇವಿಷ್ಟೂ ಒಂದು ಹಂತದ ಕಥೆಯಾದರೆ ಈಗಿನದ್ದು ಮತ್ತೊಂದು.

ಹೊಸ ನಿರ್ಧಾರ!


ಈಗ ರಾಜ್ಯಸರ್ಕಾರದ ೩೪೧ ಶಾಲೆಗಳಲ್ಲಿ ಆಂಗ್ಲಮಾಧ್ಯಮವನ್ನು ಶುರುಮಾಡಲು ಮುಂದಾಗಿದೆ. “ಇದಕ್ಕೆ ಜನರಿಂದ ಬೇಡಿಕೆಯಿದೆ, ಬಡಮಕ್ಕಳು ಖಾಸಗಿ ಶಾಲೆಗಳನ್ನು ಸೇರಲಾಗದ ಕಾರಣದಿಂದ ಆಂಗ್ಲಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗಬಾರದು, ಇದು ರಾಜ್ಯಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿಲ್ಲಾ” ಇತ್ಯಾದಿ ಕಾರಣಗಳನ್ನು ಕೊಡಲಾಗುತ್ತಿದೆ. ಕರ್ನಾಟಕದ ಭಾಷಾನೀತಿ ಕನ್ನಡ ಮಾಧ್ಯಮದಲ್ಲಿನ ಕಲಿಕೆಯನ್ನು ೫ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದನ್ನು “ಕನಿಷ್ಠ ೫ನೇ ತರಗತಿಯವರೆಗೆ” ಎಂದು ಪರಿಗಣಿಸದೇ “ಗರಿಷ್ಠ ೫ನೇ ತರಗತಿಯವರೆಗೆ” ಎಂದು ಸರ್ಕಾರ ಪರಿಗಣಿಸಿದಂತಿದೆ.

ಕನ್ನಡದ ಬಗ್ಗೆ ಕನ್ನಡಸರ್ಕಾರಕ್ಕೇ ನಂಬಿಕೆಯಿಲ್ಲ!


ಇದೆಲ್ಲದರ ಅರ್ಥವು ನೇರವೂ ಸರಳವೂ ಆಗಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ ’ಕನ್ನಡಿಗರ ಕಲಿಕೆ’ಗೆ ‘ಕನ್ನಡ ನುಡಿ’ ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು “ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ”ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ. ಬದಲಾಗಿ ಕನ್ನಡಕ್ಕೆ ಕಲಿಕಾ ಮಾಧ್ಯಮವಾಗುವ ಯೋಗ್ಯತೆಯಿಲ್ಲಾ ಎಂದೂ, ಕನ್ನಡಿಗರಿಗೆ ಆಂಗ್ಲಮಾಧ್ಯಮದಲ್ಲಿನ ಕಲಿಕೆಯೇ ಒಳಿತೆಂದೂ ತಿಳಿದಿರುವಂತಿದೆ. ಪ್ರಪಂಚದಲ್ಲಿ “ತಾಯ್ನುಡಿಯಲ್ಲಿ ಕಲಿಕೆ ನೀಡುವುದೇ ಅತ್ಯುತ್ತಮ” ಎನ್ನದಿರುವ ಯಾವುದಾದರೂ ನಾಡಿದ್ದರೆ ಬಹುಶಃ ಅದು ನಮ್ಮದೇ! ವೈಜ್ಞಾನಿಕ ಅಧ್ಯಯನಗಳು, ವಿಶ್ವಸಂಸ್ಥೆಯ ಅಂಗವಾಗಿರುವ ಯುನೆಸ್ಕೋ ನಿಲುವುಗಳೆಲ್ಲವೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನು ಹೇಳುತ್ತಿವೆಯೋ ಅದು ನಮ್ಮ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ಬದಲಾಗಿ ಯಾರದೋ ಮಕ್ಕಳು - ಮೊಮ್ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿರುವುದನ್ನು ಎತ್ತಿ ತೋರಿಸುತ್ತಾ... ಕೆಲವರ ಆಯ್ಕೆಯ ಉದಾಹರಣೆಯನ್ನು ರಾಜ್ಯಸರ್ಕಾರದ ನೀತಿ-ನಿಲುವನ್ನು ರೂಪಿಸಲು, ಸಮರ್ಥಿಸಿಕೊಳ್ಳಲು ಬಳಸುತ್ತಿರುವುದು ದುರಂತ.

ಕೈಬಿಡಲಿ ಭಾಷಾನೀತಿಯನ್ನು!

ಸರ್ಕಾರ ಈಗಿನ ನಂಬಿಕೆಯನ್ನೇ ಖಚಿತವಾಗಿ ಹೊಂದಿದ್ದರೆ ತನ್ನ ಭಾಷಾನೀತಿಯನ್ನೂ, ಶಿಕ್ಷಣನೀತಿಯನ್ನು ಬದಲಾಯಿಸಲಿ. ಯಾಕಾಗಿ ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶುರುವಾಗಬೇಕು? ಅದು ಒಂದನೇ ತರಗತಿಯಿಂದಲೇ ಆಗಲಿ. ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರ ಮಾಡುವ ಕಲಿಕಾ ವ್ಯವಸ್ಥೆಯನ್ನು ಕಟ್ಟುತ್ತಿರುವ ಸರ್ಕಾರಕ್ಕೆ ಸುಮ್ಮನೆ ಕನ್ನಡಪರ ಸರ್ಕಾರ ಎಂದು ತೋರಿಸುವ ಹಂಬಲವೇಕೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರವೇಕೆ? ಆಡಳಿತ ಭಾಷೆಯಾಗಿ ಕನ್ನಡ ಏಕೆ? ಕನ್ನಡ ಸಂಸ್ಕೃತಿ ಇಲಾಖೆ ಏಕೆ? ವಾರ್ಷಿಕ ಪ್ರಶಸ್ತಿಗಳೇಕೆ? ಕನ್ನಡದ ಜಾತ್ರೆಗಳೇಕೇ? ಸುಮ್ಮನೇ ತೆರಿಗೆ ಹಣ ಪೋಲು ಮಾಡುವುದಾದರೂ ಏಕೆ? ಕನ್ನಡದಿಂದ ಜ್ಞಾನಾರ್ಜನೆ ಅಸಾಧ್ಯವೆನ್ನುವ, ಕನ್ನಡದಿಂದ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ, ಕನ್ನಡದಲ್ಲಿ ಉನ್ನತ ಕಲಿಕೆ ಸಾಧ್ಯವಿಲ್ಲ, ಉದ್ಯೋಗಾವಕಾಶ ಸಾಧ್ಯವಿಲ್ಲ ಎನ್ನುವ ನಂಬಿಕೆ ನಮ್ಮ ಸರ್ಕಾರಕ್ಕಿರುವುದಾದರೆ… ನಾಡಿನ ಜನರ ಒಳಿತು ಆಂಗ್ಲಮಾಧ್ಯಮದ ಕಲಿಕೆಯಿಂದಲೇ ಎನ್ನುವುದಾದರೆ ಅದನ್ನೇ ಮಾಡಲಿ.

ಬೇಕು ಏಳಿಗೆಗೆ ಸಾಧನ


ಈಗಿನ ಕರ್ನಾಟಕ ರಾಜ್ಯಸರ್ಕಾರ ಮುಂದಿನ ಗೊತ್ತುಗುರಿಯಿಲ್ಲದೆ ತೀರಾ ಹತ್ತಿರದ ನೋಟ ಹೊಂದಿದ್ದು ನಾಡಿನ ಕಲಿಕಾ ವ್ಯವಸ್ಥೆಯನ್ನು ಶಾಶ್ವತವಾಗಿ ಹಾಳುಗೆಡವುವ ಕ್ರಮಕ್ಕೆ ಮುಂದಾಗಿದೆ ಮತ್ತು ಮುಂದೆ ಇದರಿಂದಾಗಿ ಕನ್ನಡ ಜನಾಂಗಕ್ಕಾಗುವ ಹಾನಿಗೆ ಸರ್ಕಾರವೇ ಹೊಣೆಯಾಗಿದೆ. ಒಂದು ಒಳ್ಳೆಯ ಕಲಿಕಾ ವ್ಯವಸ್ಥೆಯನ್ನು ಕಟ್ಟಲು ಶ್ರಮಿಸಬೇಕಾಗಿದ್ದ ಸರ್ಕಾರವು ಈ ರೀತಿ ಅರೆನುರಿತ ಕ್ರಮಗಳನ್ನು ತೆಗೆದುಕೊಳ್ಳುವುದು ನಾಡಿಗೆ ಒಳಿತಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವತ್ತ ಗಮನಹರಿಸಬೇಕಾಗಿರುವ ಜೊತೆಯಲ್ಲೇ ಖಾಸಗಿ ಶಾಲೆಯಾದರೂ ಕನ್ನಡ ಮಾಧ್ಯಮವಾಗಿದ್ದಲ್ಲಿ ಅವುಗಳಿಗೆ ವಿಶೇಷ ಪ್ರೋತ್ಸಾಹ ನೀಡಬೇಕಾಗಿದೆ. ಬದಲಾಗಿ ನಮ್ಮ ರಾಜ್ಯಸರ್ಕಾರವು ಕನ್ನಡ ಶಾಲೆಗಳನ್ನೇ ಮುಚ್ಚುವುದರಿಂದಾಗಲೀ, ಕಲಿಕಾ ಮಾಧ್ಯಮವನ್ನೇ ಬದಲಾಯಿಸುವುದರಿಂದಾಗಲೀ ಯಾವುದೇ ಉಪಯೋಗವಿಲ್ಲ. ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲೀಶ್ ಭಾಷೆಯನ್ನರಿತ ಆದರೆ ಅರಿಮೆಯ ವಿಷಯಗಳನ್ನು ಅರೆಬರೆ ತಿಳಿದ ಪೀಳಿಗೆಯಾಗಿಬಿಡುವ ಅಪಾಯವಿದೆ. ನಮ್ಮ ನಾಡಿಗೆ ಬೇಕಿರುವುದು, ಅರಿಮೆಯ ವಿಷಯಗಳನ್ನು ಚೆನ್ನಾಗಿ ತಿಳಿದ, ಕನ್ನಡದ ಜೊತೆಗೆ ಇಂಗ್ಲೀಶನ್ನೂ ಬಲ್ಲ ಜನರು. ನಮಗೆ ಬೇಕಿರುವುದು ಸಮಾನ ಶಿಕ್ಷಣದ ಕನ್ನಡ ಮಾಧ್ಯಮದ ಸಮುದಾಯ ಶಾಲೆಗಳು

1 ಅನಿಸಿಕೆ:

ಪ್ರಶಾಂತ ಸೊರಟೂರ ಅಂತಾರೆ...

"ಸ್ವದೇಶಿ/ಭಾರತೀಯತೇ" ಎಂದು ಮತ ಗಿಟ್ಟಿಸಿದ ಈ (E) ಪಕ್ಷದವರು ಮತ್ತು ಇದರ ಹಿಂದಿರುವ ಗುಂಪುಗಳು, ಇಂದು English ನ್ನು ಹೇರುತ್ತಿರುವುದನ್ನು ನೋಡಿದರೆ, ಅವರ ಮಾತು/ನಿಲುವುಗಳ "ಪೊಳ್ಳುತನ" ಯಾರಿಗಾದರೂ ತಿಳಿಯುತ್ತದೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails