ಕನ್ನಡ ಟಿವಿಯಲ್ಲಿ ಪರಭಾಷಾ ಕಾರ್ಯಕ್ರಮ ಸರೀನಾ?ಕನ್ನಡದ ಸುದ್ದಿವಾಹಿನಿ ಜನಶ್ರೀ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ಪ್ರಸಾರ ಮಾಡಲು ಶುರುಮಾಡಿದೆ. ಕನ್ನಡ ಚಿತ್ರೋದ್ಯಮ ಮತ್ತು ದೂರದರ್ಶನ ರಂಗದ ಜನರು ಹೇರುತ್ತಿರುವ "ಡಬ್ಬಿಂಗ್ ನಿಶೇಧ" ಎನ್ನುವ ಅಸಂವಿಧಾನಿಕ ಕ್ರಮವು ಕನ್ನಡಿಗರ ಬದುಕಿನ ಮೇಲೆ ಎಂಥಾ ಪರಿಣಾಮ ಬೀರಬಹುದು ಎನ್ನುವುದಕ್ಕೆ ಇದು ಮುನ್ನುಡಿ ಬರೆದ ಹಾಗಿದೆ. ಸ್ವಲ್ಪವಾದರೂ ಸಾಮಾನ್ಯ ಜ್ಞಾನವಿಟ್ಟುಕೊಂಡು ಸ್ವಾರ್ಥವಿಲ್ಲದೇ ಯೋಚಿಸಿ ನೋಡಿದರೆ ಇದು ಸ್ಪಷ್ಟವಾಗಿ ಕಾಣುತ್ತದೆ.

ನಾಳೆ ಹೀಗಾಗಬಹುದು!

ಇವತ್ತು ಮಾಲ್ಗುಡಿ ಡೇಸ್ ಸರಣಿಯನ್ನು ಪ್ರಸಾರ ಮಾಡುವಾಗ ಹೇಳುತ್ತಿರುವುದು ಇದು ಕನ್ನಡದ ಹೆಮ್ಮೆಯ ನಟ, ನಿರ್ದೇಶಕ ಶಂಕರ್‌ನಾಗ್ ತೆಗೆದಿರೋ, ಕನ್ನಡಿಗರೇ ಸಂಪೂರ್ಣವಾಗಿ ಆವರಿಸಿಕೊಂಡಿರೋ ಧಾರಾವಾಹಿ ಎಂಬುದಾಗಿ ಬಿಂಬಿಸುತ್ತಲೇ.  ಶಂಕರ್‌ನಾಗ್‌ರವರು ಗಳಿಸಿರುವ ಜನಪ್ರಿಯತೆಯನ್ನು ಬಳಸಿಕೊಂಡು ಇವತ್ತು ಜನಶ್ರೀಯಲ್ಲಿ ಮಾಲ್ಗುಡಿ ಡೇಸ್ ಶುರುವಾಗಿದೆ. ಆದರೆ ಕನ್ನಡದ ವಾಹಿನಿಯೊಂದರಲ್ಲಿ ಪರಭಾಷೆಯ ಧಾರಾವಾಹಿಯೊಂದು ಪ್ರಸಾರವಾಗುತ್ತಾ ಕನ್ನಡಿಗರನ್ನೆಲ್ಲಾ ತನ್ನ ಮುಂದೆ ಕೂರಿಸಿಕೊಳ್ಳುತ್ತಿರುವುದು ನಾಳೆ ಏನೆಲ್ಲಾ ಆಗಲು ಕಾರಣವಾಗಬಹುದು ಎಂದು ನೋಡೋಣ.

ಇವತ್ತು ಮಾಲ್ಗುಡಿ ಡೇಸ್ ಎನ್ನುವ ಹಿಂದೀ ಧಾರಾವಾಹಿ "ನಮ್ಮ ಶಂಕರ್‌ನಾಗ್‌"ರ ಕಾರ್ಯಕ್ರಮ ಎಂದು, ಶಂಕರನ ನೆನಪು ಹಸಿರಾಗಿರಲಿ ಎಂದೂ ಪ್ರಸಾರವಾಗುತ್ತಿದೆ. ನಾಳೆ ಕನ್ನಡಿಗನದ್ದೇ ಕಥೆ, ಕನ್ನಡಿಗನೇ ತೆಗೆದಿರುವುದು ಎಂದು "ಸ್ವೋರ್ಡ್ ಆಫ಼್ ಟಿಪ್ಪೂಸುಲ್ತಾನ್" ಹಿಂದೀಲಿ ಮತ್ತೊಂದು ವಾಹಿನಿಯಲ್ಲಿ ಪ್ರಸಾರವಾಗಬಹುದು. ನಾಡಿದ್ದು ದೇಶಪ್ರೇಮಿಯ ಕಥೆ ಎಂದು "ಝಾನ್ಸಿ ಕೀ ರಾಣಿ" ಮಗದೊಂದರಲ್ಲಿ ಹಿಂದೀಲಿ ಪ್ರಸಾರವಾಗಬಹುದು. ಇನ್ನೊಂದು ದಿನ ಇನ್ನೊಂದು ವಾಹಿನಿಯಲ್ಲಿ "ನಮ್ಮ ಮಾಳವಿಕಾ ಅವಿನಾಶ್" ಮಾಡಿದ ಧಾರಾವಾಹಿ ಎಂದು "ಅರಸಿ" ತಮಿಳಿನಲ್ಲಿಯೇ ಪ್ರಸಾರವಾಗಬಹುದು. ಇನ್ಯಾವುದೋ ವಾಹಿನಿ, ನಮ್ಮ ಪ್ರಶಸ್ತಿ ವಿಜೇತ ನಾಯಕಿ "ಕಲ್ಯಾಣಿ" ಅಭಿನಯ ಮಾಡಿದ್ದಾರೆಂಬ ಕಾರಣಕ್ಕೆ ತೆಲುಗಿನ "ಮಂಥರಾ" ಧಾರಾವಾಹಿಯನ್ನು ತೆಲುಗಿನಲ್ಲೂ ಪ್ರಸಾರ ಮಾಡಬಹುದು. ಎಲ್ಲಾ ಧಾರಾವಾಹಿಗಳಿಗೂ "ಕನ್ನಡ ಸಬ್‌ಟೈಟಲ್" ಹಾಕಿ ಪ್ರಸಾರ ಮಾಡಿದರೆ ಆಯಿತಲ್ಲಾ? ಆಹಾ!! ಕನ್ನಡದ ಮುಂಡೇವಕ್ಕೆ ಸಬ್‌ಟೈಟಲ್ ಸಾಕು, ಹಿಂದೀ, ತಮಿಳು, ತೆಲುಗು ಭಾಷೆಗಳಲ್ಲಿ ಧಾರಾವಾಹಿಗಳನ್ನು ಹಾಕಿಬಿಡೋಣ ಎಂದುಕೊಳ್ಳುವ ದಿನಗಳು ಬರಬಹುದಲ್ಲಾ ಗುರೂ!!

ಕನ್ನಡ ಜನರು ಒಳ್ಳೇ ಕಾರ್ಯಕ್ರಮಾನಾ ಅವವೇ ಭಾಷೇಲಿ ನೋಡ್ಕೊಳ್ಳಲಿ ಎನ್ನೋ ನಿಲುವಿನ ಉದ್ದಿಮೆಯ ಜನರು, ಕನ್ನಡಿಗರೆಲ್ಲಾ ಹೀಗೆ ಪರಭಾಷೇಲೇ ಕಾರ್ಯಕ್ರಮಗಳನ್ನು ನೋಡೋಕೆ ಶುರು ಮಾಡುದ್ರೆ, ನಾಳೆ ಯಾವ ಭಾಷೇಲಿ ಸೀರಿಯಲ್ ತೆಗೆದಾರು? ಯಾವ ಭಾಷೇಲಿ ಸಿನಿಮಾ ತೆಗೆದಾರು? ಡಬ್ಬಿಂಗ್ ನಿಶೇಧವೆನ್ನುವುದು ಕನ್ನಡಿಗರನ್ನು ಕನ್ನಡದ ಮನರಂಜನೆಯಿಂದ ದೂರಾ ಒಯ್ಯುತ್ತೆ ಎನ್ನೋದಕ್ಕೆ ನಮ್ಮ ಜನಶ್ರೀ ವಾಹಿನಿಯನ್ನು, ಶನಿವಾರ ಮತ್ತು ಭಾನುವಾರದ ರಾತ್ರಿ ೯:೩೦ರಿಂದ ೧೦:೦೦ರವರೆಗೆ, ಕನ್ನಡದ ಕಾರ್ಯಕ್ರಮವಿಲ್ಲದೇ ಇದ್ದರೂ ಜನ ಅಂಟಿಕೊಂಡು ಕೂತು ನೋಡೋದೇ ಪುರಾವೆಯಾಗಿದೆ. ಇನ್ನಾದರೂ ನಾಡಿನೆಲ್ಲ ಜನರು ಈ ಬಗ್ಗೆ ಗಂಭೀರವಾಗಿ ಯೋಚಿಸೋದು ಒಳ್ಳೇದು!

3 ಅನಿಸಿಕೆಗಳು:

Ravi Kulkarni ಅಂತಾರೆ...

ಅದೇನೋ ಸರಿ ಸರ್, ಆದ್ರೆ ಈಗ ಬರುತ್ತಿರೋ ಕಳಪೆ ಸೀರೀಅಲ್ ಗಳನ್ನು ನೋಡಿದ್ರೆ subtitle ಗಳಿರೋ ಹಿಂದಿ ಸೀರೀಅಲ್ಲೇ ಒಳ್ಳೆಯದು ಅನ್ಸುತ್ತೆ. ನೀವೇನಂತಿರಿ?

ರವಿ

Style On Streets ಅಂತಾರೆ...

but i think Jnashree didi a good job

Mamata ಅಂತಾರೆ...

I appreciate Janashree news channels view. But YOUR POINT OF VIEW is also correct..you never know when people start dubbing after this show...thanks for your view..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails