(ಶ್ರೀ ಕಿರಣ್ ಬಾಟ್ನಿ ಅವರು ಬರೆದ ಅಂಕಣ ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮೂಡಿ ಬಂದಿದೆ. ಅದೇ ಅಂಕಣದ ಪೂರ್ಣರೂಪವನ್ನು ಓದುಗರಿಗಾಗಿ ಇಲ್ಲಿ ಪ್ರಕಟಿಸಲಾಗಿದೆ)
ಕಾಗೇರಿಯವರೇ, ಕನ್ನಡ ಕಟ್ಟೆಗೆ ಇಂಗ್ಲೀಶ್ ನೀರೇಕೆ?
ನಲ್ಮೆಯ ಶಿಕ್ಶಣ ಮಂತ್ರಿಗಳೇ,
‘ಬೇಡಿಕೆ ಇದೆ, ಆದ್ದರಿಂದ ಈ ವರ‍್ಶ ೩೫೦ ಇಂಗ್ಲೀಶ್ ಮಾದ್ಯಮ ಶಾಲೆಗಳನ್ನು ೬ನೇ ತರಗತಿಯಿಂದ ತೆಗೆಯುತ್ತೇವೆ’ ಎಂದು ಕರ‍್ನಾಟಕದ ಶಿಕ್ಶಣ ಮಂತ್ರಿಗಳಾದ ನೀವು ಮುಂದಾಗಿದ್ದೀರಿ. ಕನ್ನಡಿಗರ ಬವಿಶ್ಯದ ಕಾಳಜಿಯಿಂದಲೇ ನೀವು ಈ ಹೆಜ್ಜೆಂiiನ್ನು ಇಟ್ಟಿದ್ದೀರಿ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ ಆ ಕಾಳಜಿಗೆ ನೀವಿಟ್ಟಿರುವ ಹೆಜ್ಜೆಯೇ ಸರಿ ಎಂದು ನನಗೆ ಅನ್ನಿಸುತ್ತಿಲ್ಲ. ಮೇಲ್ನೋಟಕ್ಕೆ ನಿಮ್ಮ ನಿಲುವಿನಲ್ಲಿ ಏನೂ ತಪ್ಪಿಲ್ಲ ಎಂದು ಹಲವರಿಗೆ ಅನಿಸಬಹುದು: ಜನರ ಬೇಡಿಕೆಯನ್ನು ಈಡೇರಿಸಲಿಕ್ಕೇ ಅಲ್ಲವೆ ಸರ‍್ಕಾರ ಇರುವುದು? ಆದರೆ ಹಾಗಲ್ಲ.
ಕಾಸಗಿ ಸಂಸ್ತೆಗಳಿಗಿಂತ ಸರ‍್ಕಾರಕ್ಕೆ ತೀರಾ ಹೆಚ್ಚಿನ ದೂರಾಲೋಚನೆ ಇರಬೇಕು. ಹಾಗಿರದಿದ್ದರೆ ಇವೆರಡರ ನಡುವಿನ ವ್ಯತ್ಯಾಸ ಹೆಚ್ಚು-ಕಡಿಮೆ ಇಲ್ಲದಂತೆಯೇ ಆಗುತ್ತದೆ. ಕಾಸಗಿ ಸಂಸ್ತೆಯೊಂದರಂತೆ ಸರ‍್ಕಾರವೂ ಕೆಲವರ ಮತ್ತು ಇಂದಿನ ಲಾಬಕ್ಕಾಗಿ ಮಾತ್ರ ಕೆಲಸ ಮಾಡಲು ಶುರು ಮಾಡಿಬಿಟ್ಟರೆ ಎಂದೆಂದಿಗೂ ನೆಲೆನಿಲ್ಲುವಂತಹ ಕೆಲಸಗಳು ಯಾರಿಂದ ಆಗುವವು? ನೀರಿಗೆ ಬೇಡಿಕೆ ಇದೆ ಎಂದು ಸರ‍್ಕಾರ ಕಾಸಗಿ ಸಂಸ್ತೆಯೊಂದರಂತೆ ಬಾಟಲಿಗಳಲ್ಲಿ ಆಗುವಶ್ಟು ಜನರಿಗೆ ನೀರನ್ನು ಒದಗಿಸುವ ಕೆಲಸಕ್ಕೆ ಕೈ ಹಾಕಿಬಿಟ್ಟರೆ ಎಂದೆಂದಿಗೂ ನೆಲೆನಿಲ್ಲುವಂತಹ, ಎಲ್ಲರಿಗೂ ನೀರು ಪೂರೈಸುವಂತಹ ಅಣೆಕಟ್ಟನ್ನು ಯಾರು ಕಟ್ಟುವರು ಕಾಗೇರಿಯವರೇ? ಆದುದರಿಂದ ಸರ‍್ಕಾರ ಎಲ್ಲರಿಗೂ ಲಾಬವಾಗುವಂತಹ ಮತ್ತು ಎಂದೆಂದಿಗೂ ನೆಲೆನಿಲ್ಲುವಂತಹ ಕೆಲಸಗಳಿಗೆ ಕೈ ಹಾಕಬೇಕೇ ಹೊರತು ಕಾಸಗಿ ಸಂಸ್ತೆಗಳಂತೆ ಕೆಲವರ ಮತ್ತು ಇಂದಿನ ಲಾಬವನ್ನು ಎಣಿಸಿಕೊಳ್ಳುವ ಕಣ್ಣಯ್ಬಿಗೆ ಬಲಿಯಾಗಬಾರದು. ಇದನ್ನು ನಿಮಗೆ ಹೇಳಲೇ ಬೇಕಿರಲಿಲ್ಲ, ಆದರೂ ಈ ಸಂದರ‍್ಬದಲ್ಲಿ ನೀವಿದನ್ನು ಮರೆತಂತೆ ಕಾಣುತ್ತಿರುವುದರಿಂದ ಹೇಳುತ್ತಿದ್ದೇನೆ.
ಈ ತತ್ವವನ್ನು ಅರಿತ ದೇಶಗಳಲ್ಲೆಲ್ಲ ಕಾಸಗಿ ಸಂಸ್ತೆಗಳ ಕೈಯಲ್ಲಿ ಆಗದ ಕೆಲಸಗಳನ್ನು ಸರ‍್ಕಾರ ಕೈಗೊಳ್ಳುವುದನ್ನು ಕಾಣಬಹುದು. ಆದರೆ ಇಲ್ಲಿ ನಮ್ಮ ಕರ‍್ನಾಟಕ ಸರ‍್ಕಾರವು ಕಾಸಗಿ ಶಾಲೆಗಳೊಡನೆ ಪೈಪೋಟಿಗೆ ನಿಂತು ಅವರು ಮಾಡುವುದನ್ನೇ ತಾನೂ ಮಾಡಲು ಹೊರಟಿರುವುದು ಅದರ ಹಿರಿಮೆಯನ್ನು ತೋರಿಸುವುದಿಲ್ಲ, ದೂರಾಲೋಚನೆಯ ಮತ್ತು ದುಡಿಮೆಯೊಲವಿನ ಕೊರತೆಯನ್ನು ತೋರಿಸುತ್ತದೆ. ಎಂದೆಂದಿಗೂ ನೆಲೆನಿಲ್ಲುವ, ಎಲ್ಲರಿಗೂ ಒಪ್ಪುವ ಜಾಗತಿಕ ಗುಣಮಟ್ಟದ ಕನ್ನಡ ಮಾದ್ಯಮದ ಕಲಿಕೆಯೇರ್ಪಾಡೆಂಬ ಅಣೆಕಟ್ಟನ್ನು ಕಟ್ಟುವ ಬದಲು, ಇಂದಿನ ಲಾಬಕ್ಕಾಗಿ ಕಾಸಗಿ ಸಂಸ್ತೆಗಳು ಮಾಡಿದಂತೆ ಬೆರಳೆಣಿಕೆಯ ಇಂಗ್ಲೀಶ್ ಶಾಲೆಗಳೆಂಬ ನೀರಿನ ಬಾಟಲಿಗಳನ್ನು ಹಂಚುವ ಕೆಲಸಕ್ಕೆ ಕೈ ಹಾಕಿರುವುದು ಕರ‍್ನಾಟಕ ಸರ‍್ಕಾರದ ಹಿರಿಮೆಯನ್ನು ತೋರಿಸುವುದಿಲ್ಲ ಕಾಗೇರಿಯವರೇ, ಎಂದೆಂದಿಗೂ ಜನರಿಗೆ ನೆರವಾಗುವ ದೊಡ್ಡ ದೊಡ್ಡ ಕೆಲಸಗಳನ್ನು ಮಾಡುವ ಎದೆಗಾರಿಕೆಯ ಕೊರತೆಯನ್ನು ತೋರಿಸುತ್ತದೆ, ಅಳವಿನ ಕೊರತೆಯನ್ನು ತೋರಿಸುತ್ತದೆ, ಪುಕ್ಕಲುತನವನ್ನು ತೋರಿಸುತ್ತದೆ ಎಂದೇ ಹೇಳಬೇಕಾಗುತ್ತದೆ. ಈ ದೂರಾಲೋಚನೆಯ ಕೊರತೆ, ಈ ದುಡಿಮೆಯೊಲವಿನ ಕೊರತೆ, ಈ ಎದೆಗಾರಿಕೆಯ ಕೊರತೆ, ಈ ಆಳವಿನ ಕೊರತೆ, ಈ ಪುಕ್ಕಲುತನ - ಇವುಗಳಿಂದ ನಾವು ಎಂದಿಗೂ ಏಳಿಗೆ ಹೊಂದಲಾರೆವು. ಅಲ್ಲವೇ ಕಾಗೇರಿಯವರೆ?
ಇವತ್ತಿನ ದಿನ ಮಕ್ಕಳು ಮತ್ತು ಹೆತ್ತವರು ಇಂಗ್ಲೀಶ್ ಮಾದ್ಯಮದ ಕಡೆಗೆ ವಾಲಿರುವುದು, ಮತ್ತು ಕೈಲಾದವರು ಅದನ್ನು ಕೊಳ್ಳುತ್ತಿರುವುದು, ನಿಜವಾದ ಮಾತೇ. ಆದರೆ ಅದಕ್ಕೆ ಕಾರಣ ಕನ್ನಡ ಮಾದ್ಯಮವನ್ನು ನಾವು ಇನ್ನೂ ಗಟ್ಟಿಯಾಗಿಸದೆ ಇರುವುದು, ಕನ್ನಡ ಮಾದ್ಯಮವೆಂದರೆ ಆಟಕ್ಕೆ ಮಾತ್ರ, ಲೆಕ್ಕಕ್ಕಲ್ಲ ಎಂಬಂತೆ ಅದನ್ನು ನಡೆಸಿಕೊಂಡು ಬಂದಿರುವುದು. ಸರಿಯಾದ ಅಣೆಕಟ್ಟೊಂದನ್ನು ಕಟ್ಟಿ ಅದರಿಂದ ನೇರವಾಗಿ ಮನೆಗೆ ಒಳ್ಳೆಯ ನೀರನ್ನು ಒದಗಿಸುವ ಏರ‍್ಪಾಡಿದ್ದಿದ್ದರೆ ಜನರು ಕಾಸಗಿ ಸಂಸ್ತೆಗಳಿಂದ ನೀರಿನ ಬಾಟಲಿಗಳನ್ನೇಕೆ ಕೊಳ್ಳುತ್ತಿದ್ದರು ಕಾಗೇರಿಯವರೇ? ಹಾಗೆಯೇ, ಮನೆಮನೆಯಲ್ಲಿ ಕೇಳಿಸುವ ಕನ್ನಡದಲ್ಲಿ ಸರಿಯಾದ ಕಲಿಕೆಯೇರ‍್ಪಾಡನ್ನು ಕಟ್ಟಿದ್ದರೆ ಕಾಸಗಿ ಶಾಲೆಗಳು ಮಾರುವ ಇಂಗ್ಲೀಶ್ ಮಾದ್ಯಮದ ಕಡೆಗೇಕೆ ಜನರು ವಾಲುತ್ತಿದ್ದರು? ಜಗತ್ತಿನ ಮುಂದುವರೆದ ದೇಶಗಳಲ್ಲಿ ಎಲ್ಲೂ ತಾಯ್ನುಡಿಯನ್ನು ಬಿಟ್ಟು ಬೇರೊಂದು ನುಡಿಯನ್ನು ಕಲಿಕೆಯೇರ‍್ಪಾಡಿನಲ್ಲಿ ಅಳವಡಿಸಲು ಕಾಸಗಿ ಸಂಸ್ತೆಗಳೇ ಹೆಚ್ಚಾಗಿ ಮುಂದಾಗಿಲ್ಲ ಎಂದು ನಿಮಗೆ ನಾನು ತಿಳಿಸಬೇಕಿಲ್ಲ; ಸರ‍್ಕಾರಗಳು ಮುಂದಾಗಿರುವ ಉದಾಹರಣೆಗಳಂತೂ ಇಲ್ಲವೇ ಇಲ್ಲ. ಈ ವಿಚಿತ್ರ ಕಾಣಿಸುವುದು ಮುಂದುವರೆಯಲು ಬಯಸುತ್ತಿರುವ ದೇಶಗಳಲ್ಲಿ ಮಾತ್ರ. ಮುಂದುವರೆಯಲು ಬಯಸುವ ಬಾರತದಂತಹ ದೇಶಗಳಲ್ಲಿ, ಇಂದಿನ ವಿಶಯವನ್ನು ಕಾಸಗಿ ಸಂಸ್ತೆಗಳಿಗೆ ಮತ್ತು ಶಾಲೆಗಳಿಗೆ ಬಿಟ್ಟು, ಅವುಗಳಿಗಿಲ್ಲದ ದೂರಾಲೋಚನೆಯನ್ನು ಸರ‍್ಕಾರಗಳು ತಾವಿಟ್ಟುಕೊಳ್ಳಬೇಕು. ಕಾಸಗಿ ಸಂಸ್ತೆಗಳು ಇಂಗ್ಲೀಶ್ ಶಾಲೆಗಳನ್ನು ಕಟ್ಟಿದರೆ ಕಟ್ಟಲಿ, ಒಳ್ಳೆಯ ತಾಯ್ನುಡಿಯ ಕಲಿಕೆಯೇರ‍್ಪಾಡುಗಳನ್ನು ಬಾರತದ ರಾಜ್ಯಸರ‍್ಕಾರಗಳು ಕಟ್ಟಬೇಕು. ಹಾಗೆ ಮಾಡಿದರೇನೇ ಸರ‍್ಕಾರಗಳು ಸರ‍್ಕಾರಗಳೆನಿಸಿಕೊಳ್ಳುವುದು. ಅಂತಹ ಸರ‍್ಕಾರವೊಂದನ್ನು ನಿಮ್ಮ ಪಕ್ಶ ಕಟ್ಟಿ ಇಡೀ ಬಾರತಕ್ಕೇ ಮಾದರಿ ಸರ‍್ಕಾರವಾಗಲಿ ಎಂದು ನನ್ನ ಆಸೆ.
ತಮಾಶೆಯೇನೆಂದರೆ ಬಾರತವನ್ನು ಬಾರತೀಯರ ಸರ‍್ಕಾರ ಆಳುವುದಕ್ಕಿಂತ ಮುಂಚೆ ಕಾಸಗಿ ಸಂಸ್ತೆಯೊಂದು ಆಳುತ್ತಿತ್ತು - ಅದರ ಹೆಸರು ಈಸ್ಟ್ ಇಂಡಿಯಾ ಕಂಪನಿ. ಈ ಕಂಪನಿಯವರೇ ಬಾರತದಲ್ಲಿ ಇಂಗ್ಲೀಶಿನ ಕಲಿಕೆಯೇರ‍್ಪಾಡನ್ನು ಕಟ್ಟಿದ್ದು. ೧೮೩೫ರಲ್ಲಿ ತಾಮಸ್ ಬ್ಯಾಬಿಂಗ್‌ಟನ್ ಮೆಕಾ ಎಂಬುವನು ಮಾಡಿದ ಪ್ರಯತ್ನದಿಂದಲೇ ಇಂದು ಬಾರತದಲ್ಲಿ ಇಂಗ್ಲೀಶಿನ ಕಲಿಕೆಯೇರ‍್ಪಾಡೆಂಬುದು ಇರುವುದು. ಈತ ಸಂಸ್ಕ್ರುತ ಮತ್ತು ಅರೇಬಿಕ್ ನುಡಿಗಳನ್ನು ಮತ್ತು ಬಾರತೀಯ ಅರಿಮೆಗಳನ್ನು ಹೀಗಳೆದ ಎಂದು ಮಾತ್ರ ನೆನಪಿಟ್ಟುಕೊಂಡಿರುವ ಬಾರತೀಯರು ಒಂದು ಮುಕ್ಯವಾದ ವಿಶಯವನ್ನು ಮರೆತಿದ್ದಾರೆ. ಅದೇನೆಂದರೆ ಮೆಕಾಲೆ ಇಂಗ್ಲೀಶ್ ಮಾದ್ಯಮದ ಕಲಿಕೆಯೇರ‍್ಪಾಡನ್ನು ಬಾರತೀಯರಿಗೆಲ್ಲ ಕೊಡಮಾಡಿಸಲು ಹೊರಡಲಿಲ್ಲ. ಅವನು ಎಣಿಸಿದ್ದು ಏನೆಂದರೆ, ಯೂರೋಪಿನ ಅರಿಮೆಗಳನ್ನು (ವಿಗ್ನಾನಗಳನ್ನು) ಬಾರತೀಯರೆಲ್ಲರಿಗೆ ಕೊಡಮಾಡಿಸಲು ಬಾರತದ ಹಲವಾರು ನುಡಿಗಳಲ್ಲಿ ಕಲಿಕೆಯೇರ‍್ಪಾಡುಗಳನ್ನು ಕಟ್ಟಬೇಕಾಗುತ್ತದೆ; ಹಾಗೆ ಕಟ್ಟಲು ಈಸ್ಟ್ ಇಂಡಿಯಾ ಕಂಪನಿಯ ಕೈಯಲ್ಲಿ ಆಗುವುದಿಲ್ಲ; ಅದಕ್ಕೆ ಬೇಕಾದ ಹಣವಾಗಲಿ ಬಾರತದ ಎಲ್ಲ ನುಡಿಗಳ ಅರಿವಾಗಲಿ ಬ್ರಿಟಿಶರಿಗೆ ಇಲ್ಲ; ಆದುದರಿಂದ ಇಂಗ್ಲೀಶ್ ಮಾದ್ಯಮದ ಏರ‍್ಪಾಡನ್ನು ಕಂಪನಿ ಕಟ್ಟುವುದು; ಮತ್ತು ಆ ಏರ‍್ಪಾಡಿನಲ್ಲಿ ತಯಾರಾದ ಬೇರೆಬೇರೆ ನುಡಿಜನಾಂಗಗಳ ಬಾರತೀಯರು ಅವರವರ ನುಡಿಗಳಲ್ಲಿ ಕಲಿಕೆಯೇರ‍್ಪಾಡನ್ನು ಮುಂದೆ ಕಟ್ಟಲಿ ಎಂಬುದು.
ಎಂದರೆ, ಬಾರತೀಯರನ್ನು ಗುಲಾಮರಂತೆ ನಡೆಸಿಕೊಂಡ ಈಸ್ಟ್ ಇಂಡಿಯಾ ಕಂಪನಿಗೇ ತಾಯ್ನುಡಿಯ ಕಲಿಕೆಯ ಪ್ರಾಮುಕ್ಯತೆ ಗೊತ್ತಿತ್ತು; ಅಶ್ಟೇ ಅಲ್ಲ, ಇಂಗ್ಲೀಶಿನಲ್ಲಿ ಕಲಿತ ಬೆರಳೆಣಿಕೆಯ ಬಾರತೀಯರು ಮುಂದೆ ಬಾರತೀಯ ನುಡಿಗಳಲ್ಲಿ ಒಳ್ಳೆಯ ಕಲಿಕೆಯೇರ‍್ಪಾಡುಗಳನ್ನು ಕಟ್ಟಬೇಕು ಎಂಬ ದೂರಾಲೋಚನೆಯಿತ್ತು. ಈ ದೂರಾಲೋಚನೆ ನಮ್ಮ ಕರ‍್ನಾಟಕ ಸರ‍್ಕಾರಕ್ಕೆ ಇರಬಾರದೇ? ಮೆಕಾಲೆಗಿದ್ದ ದೂರಾಲೋಚನೆ ನಮ್ಮ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಇರಬಾರದೇ? ಇಂಗ್ಲೀಶ್ ಮಾದ್ಯಮದ ಕಾಸಗಿ ಶಾಲೆಗಳು ಇವತ್ತಿಗೆ ಮೆಕಾಲೆಯ ಕಲಿಕೆಯೇರ‍್ಪಾಡನ್ನೇ ಮುಂದುವರೆಸಿಕೊಂಡು ಹೋಗುವುದಾದರೆ ಹೋಗಲಿ, ಆದರೆ ಅವರು ಮೊಗೆದು ತಂದಿರುವ ಅರಿಮೆಗಳನ್ನು ಕನ್ನಡಕ್ಕೆ ತರುವವರೂ ಅವರಲ್ಲಿ ಇದ್ದಾರೆ, ತರಲು ತಮ್ಮ ಜೀವನವನ್ನೇ ಮುಡಿಪಾಗಿಸುವ ಕನ್ನಡಿಗರಿದ್ದಾರೆ. ಅವರನ್ನು ಒಡಗೂಡಿಸಿಕೊಂಡು, ಅವರ ಸೇವೆಗಳನ್ನು ಬಳಸಿಕೊಂಡು ಕರ‍್ನಾಟಕ ಸರ‍್ಕಾರವು ಮೆಕಾಲೆಯ ದೂರಾಲೋಚನೆಯನ್ನು ಮೀರಿದ ದೂರಾಲೋಚನೆಯನ್ನು ಇಟ್ಟುಕೊಳ್ಳಲಿ, ಇಂಗ್ಲೀಶಿನ ಕಲಿಕೆಯೇರ‍್ಪಾಡನ್ನೇ ಮೀರಿಸುವ ಕನ್ನಡದ ಕಲಿಕೆಯೇರ‍್ಪಾಡನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಲಿ ಎಂದು ಕೇಳಿಕೊಳ್ಳುತ್ತೇನೆ. ಇಂತಹ ಸಂದರ‍್ಬದಲ್ಲಿ ‘ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ’ ನೀವು ಕೂಡುವುದಿಲ್ಲ, ಇಂಗ್ಲೀಶ್ ಶಾಲೆಗಳನ್ನು ಕಟ್ಟುವ ಬದಲು ಜಾಗತಿಕ ಮಟ್ಟದ ಕನ್ನಡದ ಕಲಿಕೆಯೇರ‍್ಪಾಡನ್ನು ಕಟ್ಟಿ ಮುಂದುವರೆದ ದೇಶಗಳೊಡನೆ ಕರ‍್ನಾಟಕವು ಪೈಪೋಟಿಗೆ ನಿಲ್ಲುವಂತೆ ಮಾಡುತ್ತೀರಿ ಎಂದು ನಂಬಿದ್ದೇನೆ. ಈ ನಂಬಿಕೆ ಸುಳ್ಳಾಗುವಂತೆ ನಡೆದುಕೊಳ್ಳಬೇಡಿ. ಇದು ನನ್ನ ನಂಬಿಕೆಯಶ್ಟೇ ಅಲ್ಲ ಕಾಗೇರಿಯವರೇ, ಎಲ್ಲರಿಗೂ ಬೇಕಾಗಿರುವುದು ಅಣೆಕಟ್ಟೇ, ಬಾಟಲಿಗಳಲ್ಲ.
ಏಳಿ! ಎದ್ದೇಳಿ... ಕಾಗೇರಿಯವರೇ!
ಇಂತು, ನಿಮ್ಮ ವಿಶ್ವಾಸಿ,
ಕಿರಣ್ ಬಾಟ್ನಿ
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!