೧. ಕಾವೇರಮ್ಮಾ ಕಾಪಾಡಮ್ಮಾ! ಈ ದೋಣಿಯಾ ತೇಲಿಸು...


ಕಾವೇರಿ ನದಿನೀರು ಹಂಚಿಕೆಯ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ. ಪ್ರತಿ ಮೂರುನಾಲ್ಕು ವರ್ಷಕ್ಕೊಮ್ಮೆ ಸಣ್ಣ ಕಿರಿಕ್ಕು, ದಶಕದಲ್ಲೊಮ್ಮೆ ದೊಡ್ಡ ಕಿರಿಕ್ಕು ಮಾಮೂಲಿಯಾಗಿರುವ ಈ ವಿವಾದದ ಬಗ್ಗೆ ಒಂದಷ್ಟು ವಿಚಾರಗಳನ್ನು ಸರಣಿ ಬರಹದ ಮೂಲಕ ಹಂಚಿಕೊಳ್ಳುತ್ತೇವೆ.

ಕಾವೇರಿ, ಕರ್ನಾಟಕ ಮತ್ತು ತಮಿಳುನಾಡಿನ ಜೀವನದಿ!

ಹರಿಯುವ ನದಿಯ ನೀರು ಸಹಜವಾಗಿ ದಡದ ಜನರ ಹಕ್ಕು ಎನ್ನುವುದು ಒಪ್ಪಿತವಾಗಿದೆ. ಹಾಗಾದರೆ ಹರಿವ ನೀರಿಗೆ ಅಣೆಕಟ್ಟೆ ಕಟ್ಟುವುದು ಸರಿಯೇ? ಇದು ನೀರಿನ ಸಹಜವಾದ ಹರಿವಿಗೆ ಅಡ್ಡಿ ಮಾಡುವ ಯತ್ನವಲ್ಲವೇ? ಎಂಬೆಲ್ಲಾ ಮೂಲಭೂತವಾದಗಳ ಬೆನ್ನತ್ತಿ ತಮಿಳುನಾಡು ನದಿ ಪಾತ್ರದ ಮೇಲಿನ ಭಾಗದ ಪ್ರದೇಶಗಳಿಗೆ ನೀರನ್ನು ಹಿಡಿದು ನಿಲ್ಲಿಸುವ ಹಕ್ಕೇ ಇಲ್ಲವೆನ್ನುವಂತೆ ವರ್ತಿಸುತ್ತಾ ವಾದಿಸುತ್ತಾ ಬಂದಿದೆ. ಅತ್ಯಂತ ಸಮರ್ಥವಾದ ವಾದದಂತೆ ಕಾಣುವ ಈ ವಾದದ ಬೆನ್ನು ಹಿಡಿದು ಹೋದರೆ ಯಾವ ನದಿಗೂ ಅಣೇಕಟ್ಟು ಕಟ್ಟುವಂತಿಲ್ಲ! ಇದು ಕೆಳಗಿನ ರಾಜ್ಯಗಳಿಗೂ ಅನ್ವಯವಾಗಬೇಕಾದ್ದು ನ್ಯಾಯ. ಹಾಗಾಗಿ ಬಿಟ್ಟರೆ ನದಿನೀರಲ್ಲಿ ಬಹುಪಾಲು ವ್ಯರ್ಥವಾಗಿ ಕಡಲು ಸೇರುತ್ತದೆ. ಮಾನವನ ಬದುಕು ಪ್ರಗತಿ ಹೊಂದುವಲ್ಲಿ ನದಿ ನೀರನ್ನು ಹಿಡಿದಿಟ್ಟುಕೊಳ್ಳುವುದೂ ಕೂಡಾ ಮಹತ್ವದ್ದಾದ್ದರಿಂದ ನದಿಯ ಮೇಲಿನ ನಾಡುಗಳು, ಕೆಳಭಾಗದ ನಾಡುಗಳೂ ಎಲ್ಲವಕ್ಕೂ ನೀರು ಹಿಡಿದಿಟ್ಟುಕೊಳ್ಳುವ ಹಕ್ಕೂ ಸಹಜವಾಗಿ ಸಿಗಬೇಕಾಗುತ್ತದೆ. ಹೀಗಾದಾಗ ಯಾವ ನಾಡು ಎಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬೇಕು? ಎಷ್ಟು ನೀರನ್ನು ಕೆಳ ನಾಡುಗಳಿಗಾಗಿ ಬಿಟ್ಟುಕೊಡಬೇಕು ಎನ್ನುವುದು ತೀರ್ಮಾನವಾಗಬೇಕಾಗುತ್ತದೆ. ಈ ಹಂತದಲ್ಲಿ ನ್ಯಾಯಯುತವಾದ ಮಾನದಂಡಗಳು ಇದ್ದಲ್ಲಿ... ಬಹುಷಃ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ! ಆದರೆ ನಾಡುಗಳ ರಾಜಕೀಯ ಬಲಾಬಲಗಳು, ಐತಿಹಾಸಿಕ ಮೇಲುಗೈಗಳು ಇದನ್ನು ನಿಶ್ಚಯಿಸುವುದಾದಲ್ಲಿ ತಾರತಮ್ಯ ಕಟ್ಟಿಟ್ಟ ಬುತ್ತಿ! ಕರ್ನಾಟಕವು ಇಂತಹುದೇ ತಾರತಮ್ಯದ ಕಾರಣದಿಂದಾಗಿ ಸದಾಕಾಲ ಅನ್ಯಾಯಕ್ಕೆ ಒಳಗಾಗುತ್ತಿದೆ ಎನ್ನುವ ಕೂಗನ್ನು ನಾವು ಕೇಳುತ್ತಲೇ ಇದ್ದೇವೆ. ಹೇಗೆ ಈ ಸಿಕ್ಕನ್ನು ಬಿಡಿಸಬಹುದು? ನಿಜಕ್ಕೂ ಏನಿದರ ಒಳಸುಳಿ?

ಎರಡೂ ರಾಜ್ಯಗಳ ಲಕ್ಷಾಂತರ ಎಕರೆ ನೆಲದಲ್ಲಿ ಲಕ್ಷಾಂತರ ರೈತರು ಉಳುಮೆ ಮಾಡುತ್ತಿದ್ದಾರೆ. ಹತ್ತಾರು ಜಿಲ್ಲೆಗಳಲ್ಲಿ ಹಾದು ಹೋಗುವ ಕಾವೇರಿ ನದಿ ನೀರಿನ ಕುರಿತಾದ ಹಕ್ಕು ಸ್ಥಾಪನೆಯ ವಿವಾದ ಸಾವಿರಾರು ವರ್ಷ ಹಳೆಯದ್ದು! ಕರಿಕಾಲ ಚೋಳರಾಜ ೧೬೦೦ ವರ್ಷಗಳ ಹಿಂದೆಯೇ ಅಣೆಕಟ್ಟೆ ಕಟ್ಟಿದ್ದ ಇತಿಹಾಸವಿದೆ. ಈ ಎರಡೂ ರಾಜ್ಯಗಳಲ್ಲಿರುವ ಕಾವೇರಿ ನದೀಪಾತ್ರದ ಜನತೆ ಬೇರೆ ಬೇರೆ ಕಾಲಾವಧಿಯಲ್ಲಿ ಬೇರೆ ಬೇರೆ ಆಡಳಿತಗಳಡಿ ಬದುಕಿವೆ. ಹೀಗಾಗಿ ನೀರು ಬಳಕೆಯ ಮೇಲಿನ ಹಕ್ಕುಗಳು ಬದಲಾಗುತ್ತಲೇ ಸಾಗಿವೆ.

ಎರಡು ಪ್ರಮುಖವಾದ ಬೆಳವಣಿಗೆಗಳನ್ನು ನಾವು ಇಲ್ಲಿ ಗಮನಿಸಬಹುದಾಗಿದೆ. ಮೊದಲನೆಯದು ಆಂಗ್ಲರ ಕಡುವೈರತ್ವ ಸಾಧಿಸಿದ ಹೈದರಾಲಿ ಹಾಗೂ ಟಿಪ್ಪೂಸುಲ್ತಾನರ ರಾಜತ್ವದ ಮೈಸೂರು ಪ್ರಾಂತ್ಯವು ೧೮೭೦ರ ನಂತರ ಮೈಸೂರು ಅರಸರ ಕೈಗೆ ಬಂದರೂ, ಬ್ರಿಟೀಷರ ನೇರ ಆಳ್ವಿಕೆಯಲ್ಲಿದ್ದ ಮದ್ರಾಸ್ ಪ್ರಾಂತ್ಯ.. ಆ ಕಾರಣದಿಂದಲೇ ಹೊಂದಿದ್ದ ರಾಜಕೀಯ ಮೇಲುಗೈ. ಎರಡನೆಯದು ಮನುಕುಲ ಸಾಧಿಸಿದ ವೈಜ್ಞಾನಿಕ/ ತಾಂತ್ರಿಕ ಕ್ರಾಂತಿಯಿಂದಾಗಿ ಅಣೆಕಟ್ಟು ನಿರ್ಮಿಸಿ ಕಾಲುವೆಗಳನ್ನು ಮಾಡಿಕೊಂಡು ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಂಡು ಬೆಳೆ ಬೆಳೆಯುವ ಕ್ರಿಯೆ ಹೆಚ್ಚು ವ್ಯವಸ್ಥಿತವಾಗಿ ಹರವು ಕಂಡುಕೊಂಡದ್ದು! ಮೈಸೂರಿನ ಮೇಲೆ ಹೇರಲಾದ ೧೮೯೨ ಮತ್ತು ೧೯೨೪ರ ಒಪ್ಪಂದಗಳು ರಾಜರ ಕಾಲದ/ ಆಂಗ್ಲರ ಕಾಲದ ಒಪ್ಪಂದಗಳಾದರೆ ಭಾರತದ ಸ್ವಾತಂತ್ರ್ಯದ ನಂತರ ಆದ ಬೆಳವಣಿಗೆಗಳು (ಇಲ್ಲಿ ಆದ ಬೆಳವಣಿಗೆಗಳು ಅನ್ನುವುದಕ್ಕಿಂತ ಆಗದ ಬೆಳವಣಿಗೆಗಳು ಎನ್ನುವುದು ಹೆಚ್ಚು ಸೂಕ್ತ) ಬಿಕ್ಕಟ್ಟಿನ ತೀವ್ರತೆಗೆ ಕಾರಣವಾದವು. ೧೯೪೭ರ ಸ್ವಾತಂತ್ರ್ಯದ ನಂತರ ಮೈಸೂರು ಹಾಗೂ ಮದ್ರಾಸುಗಳು ಕರ್ನಾಟಕ ತಮಿಳುನಾಡುಗಳಾದ ನಂತರ, ರಾಜರ/ ಆಂಗ್ಲರ ಆಳ್ವಿಕೆ ಅಳಿದು ಪ್ರಜಾಪ್ರಭುತ್ವ ಜಾರಿಯಾದಾಗ, ಸಮಾನತೆಯೇ ಜೀವಾಳವಾದ ಒಕ್ಕೂಟವೊಂದರ ಭಾಗವಾಗಿ ಈ ಪ್ರದೇಶಗಳು ಬಂದನಂತರ ಹಳೆಯದ್ದನ್ನೆಲ್ಲಾ ಅಳಿಸಿ ಹೊಸತನ್ನು ಬರೆದಿಡುವ ಸಮಯವಾಗಿತ್ತು! ಆದರೆ ಕರ್ನಾಟಕಕ್ಕೆ ಅನ್ಯಾಯಗಳ ಅಪಚಾರ ಎಸಗುವ ಪರಂಪರೆ ಮಾತ್ರಾ ಮುಂದುವರೆದು ೧೯೯೦ರಿಂದೀಚೆಗೆ ಕಾವೇರಿ ನ್ಯಾಯಾಧಿಕರಣ, ಸುಪ್ರಿಂಕೋರ್ಟ್ ಆದೇಶಗಳು, ಪ್ರಧಾನಮಂತ್ರಿಗಳ ಮಧ್ಯಸ್ಥಿಕೆ, ಕಾವೇರಿ ನದಿ ಪ್ರಾಧಿಕಾರದ ನ್ಯಾಯನಿರ್ಣಯಗಳು ಇತ್ಯಾದಿಗಳೆಲ್ಲಾ ನಡೆದು ನ್ಯಾಯದ ಹೆಸರಿನಲ್ಲೇ ಕರ್ನಾಟಕಕ್ಕೆ ತೀವ್ರವಾದ ಮೋಸ ಆಗಿರುವುದು ಕಾಣಬರುತ್ತಿದೆ.

ಈ ಸಮಸ್ಯೆಗೆ ಪರಿಹಾರವನ್ನು ದೇಶದ ಯಾವುದೇ ನ್ಯಾಯಾಲಯ ನೀಡಲು ಸಾಧ್ಯವೇ? ನದಿನೀರು ಹಂಚಿಕೆಯ ಬಿಕ್ಕಟ್ಟುಗಳ ಬಗೆಹರಿಸುವಿಕೆ ಸುಪ್ರಿಂಕೋರ್ಟ್ ವ್ಯಾಪ್ತಿಗೆ ಬರುತ್ತದೆಯೇ? ಬರಬೇಕೇ? ಸ್ವಾತಂತ್ರ್ಯ ಪೂರ್ವದ ಹೇರಲಾದ ಒಪ್ಪಂದಗಳು, ಶತಮಾನಗಳಿಂದ ಬಳಸುತ್ತಿದ್ದೇವೆ ಎನ್ನುವ ಹಕ್ಕು ಸಾಧಿಸುವಿಕೆಗಳು ನದಿ ನೀರು ಹಂಚಿಕೆಯ ಮಾನದಂಡವಾಗಬಲ್ಲವೇ? ನ್ಯಾಯಾಧಿಕರಣಗಳು ಯಾವ ಆಧಾರದ ಮೇರೆ ಯಾವ ಮಾನದಂಡದ ಮೇಲೆ ನದಿನೀರು ಹಂಚಿಕೆಯ ತೀರ್ಪು ನೀಡಿವೆ? ಯಾವ ಆಧಾರದ ಮೇರೆ ಪ್ರಧಾನಮಂತ್ರಿಗಳು ನೀರು ಬಿಡಲು ಆದೇಶ ನೀಡುತ್ತಾರೆ? ಯಾವ ಆಧಾರದ ಮೇರೆ ಸುಪ್ರಿಂಕೋರ್ಟ್ ನೀರು ಬಿಡಲು ಆದೇಶಿಸುತ್ತದೆ ಎನ್ನುವುದನ್ನೆಲ್ಲಾ ಮುಂದಿನ ಸಂಚಿಕೆಗಳಲ್ಲಿ ಚರ್ಚಿಸೋಣ.

(...ಮುಂದುವರೆಯುವುದು)

ನಮ್ಮ ಮೆಟ್ರೋ: ರಾಜ್ಯ ಮಾಹಿತಿಹಕ್ಕು ಆಯೋಗದಿಂದ ವಿಚಾರಣೆ ಆರಂಭ!


ನಮ್ಮ ಮೆಟ್ರೋದಲ್ಲಿ ಬಳಕೆಯಾಗಿರುವ ಭಾಷಾನೀತಿಯನ್ನು ಕುರಿತು ಕಳೆದ ೨೦೧೧ರ ಅಕ್ಟೋಬರ್ ತಿಂಗಳಿನಲ್ಲಿ ಒಂದು ಆರ್‌ಟಿಐ ಸಲ್ಲಿಸಲಾಗಿತ್ತು. ಇದಕ್ಕೆ ಮೆಟ್ರೋ ಸಂಸ್ಥೆಯ ವತಿಯಿಂದ ಯಾವ ಪ್ರತಿಕ್ರಿಯೆಯೂ ದೊರಕಲಿಲ್ಲ! ಮೂವತ್ತು ದಿನಗಳಲ್ಲಿ ಉತ್ತರ ನೀಡಬೇಕಾದ ಕಾನೂನಾತ್ಮಕವಾದ ಬದ್ಧತೆಯಿದ್ದಾಗಲೂ ಮೆಟ್ರೋ ಸುಮ್ಮನಿದ್ದಿತು.

ಮನವಿ! ಮರು ಮನವಿ!

ಮೂವತ್ತು ದಿನಗಳ ಗಡುವು ಮುಗಿದು ನಲವತ್ತೈದು ದಿನಗಳು ಕಳೆದುಹೋದ ನಂತರವೂ ಯಾವ ಪ್ರತಿಕ್ರಿಯೆ ಬರದ ಕಾರಣದಿಂದಾಗಿ, ಮುಂದಿನಕ್ರಮವಾಗಿ ಮೊದಲ ಮೇಲ್ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೂ ಯಾವುದೇ ಪ್ರತಿಕ್ರಿಯೆಯನ್ನು ನಮ್ಮ ಮೆಟ್ರೋ ನೀಡಲಿಲ್ಲ... ನಂತರ ಮುಂದುವರೆದು ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ೨೦೧೨ರ ಫೆಬ್ರವರಿಯಲ್ಲಿ ದೂರನ್ನು ಸಲ್ಲಿಸಲಾಯಿತು. ಇದೀಗ, ಅಂದರೆ ಆರು ತಿಂಗಳುಗಳ ನಂತರ ಕರ್ನಾಟಕ ರಾಜ್ಯ ಮಾಹಿತಿಹಕ್ಕು ಆಯೋಗವು ನಮ್ಮ ಮೆಟ್ರೋ ಸಂಸ್ಥೆಯ ಸಂಬಂಧಿಸಿದ ಅಧಿಕಾರಿಗಳಿಗೆ ಒಂದು ನೋಟೀಸನ್ನು ಜಾರಿ ಮಾಡಿದೆ. ಇದರಲ್ಲಿ ದಿನಾಂಕ ೦೩.೧೦.೨೦೧೨ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ. "ಮಾಹಿತಿಹಕ್ಕು ಅರ್ಜಿಗೆ ಯಾವುದೇ ಉತ್ತರ ನೀಡದ್ದಕ್ಕಾಗಿ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು?" ಎಂದು ಕೂಡಾ ಕೇಳಲಾಗಿದೆ.

ಅಂತೂ ಅರ್ಜಿದಾರರಿಗೆ, ಮಾಹಿತಿಹಕ್ಕು ಕಾಯ್ದೆಯನ್ವಯ ಕೇಳಿದ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಈ ವಿಚಾರಣೆ ಸಹಾಯ ಮಾಡಲಿದೆ. ನಮ್ಮ ಮೆಟ್ರೋದ ಅಧಿಕಾರಿಗಳು ಈ ನೋಟೀಸಿಗೆ ಹೇಗೆ ಪ್ರತಿಕ್ರಿಯಿಸುವರೋ ಎನ್ನುವ ಕುತೂಹಲಕ್ಕೆ ಉತ್ತರ ಅಕ್ಟೋಬರ್  ಮೂರನೇ ತಾರೀಕಿನಂದು ಉತ್ತರ ದೊರೆಯಲಿದೆ. ಈ ವಿಚಾರಣೆಯು ಮಾಹಿತಿ ಹಕ್ಕು ಅರ್ಜಿದಾರರ ಎದುರಿನಲ್ಲಿಯೇ ನಡೆಯಲಿರುವುದು ವಿಶೇಷವಾಗಿದೆ.

ಧಾರವಾಡದಲ್ಲಿನ ಕಲಿಕೆ ಹೊತ್ತಗೆ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ


ಬನವಾಸಿ ಬಳಗವು ಇತ್ತೀಚಿಗೆ ಬಿಡುಗಡೆ ಮಾಡಿದ "ಬೆಳಗಲಿ ನಾಡ ನಾಳೆಗಳು: ಕಲಿಕಾ ವ್ಯವಸ್ಥೆಗೊಂದು ಕೈಮರ" ಹೊತ್ತಗೆಯು ಬರುವ ಭಾನುವಾರದಂದು ಧಾರವಾಡದಲ್ಲಿಯೂ ಬಿಡುಗಡೆಗೊಳ್ಳಲಿದೆ. ಈ ಮರುಬಿಡುಗಡೆ ಕಾರ್ಯಕ್ರಮವು, ನಾಡಿನಲ್ಲಿ ಹೆಸರಾದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಯಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತೊಡಗಿಕೊಂಡಿರುವ ಅನೇಕ ಸಂಘ ಸಂಸ್ಥೆಗಳು/ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲಬಾರಿಗೆ ಕರ್ನಾಟಕದ ಈ ಭಾಗದಲ್ಲಿ ಬಳಗದ ಕಾರ್ಯಕ್ರಮವು ನಡೆಯಲಿದ್ದು ತಮ್ಮನ್ನು ಈ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ. ಬನ್ನಿ, ಭಾಗವಹಿಸಿ.

ಕಾರ್ಯಕ್ರಮ ನಡೆಯುವ ಸ್ಥಳ: 
ಶ್ರೀ ನಲವಡಿ ಸಭಾಭವನ
ಮೊದಲನೇ ಮಹಡಿ
ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಕಾರ್ಯಕ್ರಮ ನಡೆಯುವ ದಿನ

23 ಸೆಪ್ಟೆಂಬರ್, 2012, ರವಿವಾರಸಮಯ: ಸಂಜೆ 5:00 ಗಂಟೆಗೆ

ಕಾರ್ಯಕ್ರಮ ನಡೆಸಿಕೊಡುತ್ತಿರುವವರುಶಿಕ್ಷಣ ಮಂಟಪ,
ಕರ್ನಾಟಕ ವಿದ್ಯಾವರ್ಧಕ ಸಂಘ,
ಧಾರವಾಡ

ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊತ್ತಗೆ ಬಿಡುಗಡೆ ಮಾಡುವವರು೧. ಶ್ರೀ ನಿರಂಜನಾರಾಧ್ಯ ವಿ. ಪಿ. - ಮುಖ್ಯ ಅತಿಥಿಗಳು
೨. ಶ್ರೀ ಆನಂದ್, ಬನವಾಸಿ ಬಳಗ - ಅಧ್ಯಕ್ಷತೆ
೩. ಶ್ರೀ ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ವಿದ್ಯಾವರ್ಧಕ ಸಂಘ
೪.  ಶ್ರೀ ಸಂಜೀವ ಕುಲಕರ್ಣಿ, ಕಾರ್ಯದರ್ಶಿ, ಶಿಕ್ಷಣ ಮಂಟಪ, ವಿದ್ಯಾವರ್ಧಕ ಸಂಘ
೫. ಪ್ರಿಯಾಂಕ್ ಕತ್ತಲಗಿರಿ

ಶ್ರೀ ನಿರಂಜನಾರಾಧ್ಯ ಅವರು "ಕನ್ನಡ ಮಾಧ್ಯಮ ಶಿಕ್ಷಣ: ಇಂದು ಮತ್ತು ನಾಳೆ" ಎಂಬ ವಿಚಾರವಾಗಿ ಮಾತನಾಡಲಿದ್ದಾರೆ.

ನೀತಿಯೇ ಇರದ ನಾಡಲ್ಲಿ ರಾಜಕೀಯ ಲಾಬಿಯ ಹೊಲಸಾಟವೇ ಪ್ರಭಾವಿ!


ಇದೀಗ ತಾನೆ ನವದೆಹಲಿಯಲ್ಲಿ ನಡೆಯುತ್ತಿದ್ದ ಕಾವೇರಿ ನೀರು ಹಂಚಿಕೆಯ ಕುರಿತು ಮಾನ್ಯ ಪ್ರಧಾನಮಂತ್ರಿಗಳ ಜೊತೆ ನಡೆಯುತ್ತಿದ್ದ ಸಭೆ ವಿಫಲವಾದ ಸುದ್ದಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸಭೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳು ತಮಿಳುನಾಡಿಗೆ ಪ್ರತಿದಿನ ೯೦೦೦ ಕ್ಯುಸೆಕ್ ನೀರು ಬಿಡಬೇಕೆಂದು ಹೇಳಿದರಂತೆ.. ಅದಕ್ಕೆ ರಾಜ್ಯ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ತಂಡ ವಿರೋಧ ಸೂಚಿಸಿ, ಸಭೆಯನ್ನು ಬಹಿಷ್ಕರಿಸಿ ಹೊರಬಂದರಂತೆ! ಇನ್ನು "ಕರ್ನಾಟಕ ಮೊಂಡು ರಾಜ್ಯ, ಇವರಿಗೆ ಸೌಹಾರ್ದತೆ ಬೇಕಿಲ್ಲಾ, ಇವರು ಭಾರತದ ಒಗ್ಗಟ್ಟಿಗೆ ಮಾರಕ" ಇತ್ಯಾದಿ ಅಪಪ್ರಚಾರಗಳು ಶುರುವಾಗುವ ಸಾಧ್ಯತೆಗಳಿವೆ. ಜೊತೆಗೆ ನ್ಯಾಯಾಲಯವೂ ಕೂಡಾ, ರಾಜ್ಯ ಹೀಗೆ ತಿರಸ್ಕರಿಸಿದ್ದನ್ನು ತನ್ನ ತೀರ್ಪುಗಳನ್ನು ನೀಡುವಾಗ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯೂ ಇದೆ. ಇರಲಿ... ಮೊದಲಿಗೆ ಹೇಳಬೇಕಾದ್ದು ಈ ನಡೆ ನಾಳೆ ಏನೇ ಪರಿಣಾಮ ಬೀರಿದರೂ ಸರಿ, ಕನ್ನಡನಾಡಿನ ಒಳಿತಿನ ದೃಷ್ಟಿಯಿಂದ ಖಂಡಿತಾ ದಿಟ್ಟವಾದದ್ದಾಗಿದೆ. ಕರ್ನಾಟಕ ಸರ್ಕಾರ ಗಟ್ಟಿಯಾದ ರೈತಪರ, ನಾಡಪರ ನಿಲುವನ್ನು ತೆಗೆದುಕೊಂಡಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆಗಳು. ಈ ಸಂದರ್ಭದಲ್ಲಿ ನಾವು ಮತ್ತೊಂದಷ್ಟು ವಿಷಯಗಳತ್ತ ಕಣ್ಣು ಹಾಯಿಸಬೇಕಾಗಿದೆ.

ನೀತಿಯಲ್ಲಾ! ರಾಜಕಾರಣ

ಈ ಬಾರಿ ಮಳೆ ಸರಿಯಾಗಿ ಆಗದೆ ಕರ್ನಾಟಕದ ಅಣೆಕಟ್ಟೆಗಳಲ್ಲಿ ಕಡಿಮೆ ನೀರಿದೆ. ಆದರೆ ತಮಿಳುನಾಡು ಕಾವೇರಿ ನೀರು ಬಿಡಲು ಕರ್ನಾಟಕದ ಮೇಲೆ ಒತ್ತಡ ಹಾಕಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೂ ಹತ್ತಿದೆ. ನ್ಯಾಯಾಲಯ ಕರ್ನಾಟಕವು ಪ್ರತಿನಿತ್ಯ ಹತ್ತುಸಾವಿರ ಕ್ಯುಸೆಕ್ ನೀರನ್ನು, ಪ್ರಾಧಿಕಾರದ ಸಭೆ ನಡೆಯುವ ಸೆಪ್ಟೆಂಬರ್ ಹತ್ತೊಂಬತ್ತರವರೆಗೆ ಬಿಡಲು ಸೂಚಿಸಿತ್ತು! ಇಂದು ನಡೆದ ಸಭೆಯಲ್ಲಿ ಮನಮೋಹನ್ ಸಿಂಗ್‌ರವರು ಕರ್ನಾಟಕದ ಮೇಲೆ ಭಾರೀ ದಯೆ ತೋರಿಸಿ ಒಂದು ಸಾವಿರ ಕ್ಯುಸೆಕ್ ಕಮ್ಮಿ ಬಿಡಲು ಸೂಚಿಸಿದ್ದಾರೆ. ಕರ್ನಾಟಕವು "ನಮ್ಮ ನಾಡಲ್ಲಿ ಮುಂಗಾರು ಮುಗಿದು ಹೋಗಿದೆ, ಇನ್ನು ನಮ್ಮ ಅಣೆಕಟ್ಟುಗಳು ತುಂಬುವ ಸಾಧ್ಯತೆಯಿಲ್ಲ. ಇರುವಷ್ಟು ನೀರಲ್ಲಿ ಇಡೀ ವರ್ಷ ಬದುಕಬೇಕು. ಆದರೆ ತಮಿಳುನಾಡಿಗೆ ಅಕ್ಟೋಬರ್ ೧೫ರ ಹೊತ್ತಿಗೆ ಹಿಂಗಾರು ಆರಂಭವಾಗಲಿದೆ. ಅಲ್ಲಿನ ಮೆಟ್ಟೂರು ಅಣೆಕಟ್ಟೆಯಲ್ಲಿ ನಮ್ಮ ಕೆಆರ್‌ಎಸ್ಸಿನಲ್ಲಿರುವುದಕ್ಕಿಂತಾ ಹೆಚ್ಚು ನೀರು ಈಗಲೇ ಇದೆ. ದಯಮಾಡಿ ಅಕ್ಟೋಬರ್ ೧೫ರವರೆಗೆ ಕಾಯೋಣ. ಆಗ ತಮಿಳುನಾಡಿನಲ್ಲಿಯೂ ಮಳೆ ಕೊರತೆಯಾದರೆ ಸಂಕಷ್ಟವನ್ನು ಸಮಾನವಾಗಿ ಹಂಚಿಕೊಳ್ಳೋಣ..." ಎಂದು ಗೋಗರೆದರೂ ಪ್ರಧಾನಮಂತ್ರಿಗಳಿಗೆ ಅದು ಮನವರಿಕೆಯಾಗಲಿಲ್ಲ. ಒಟ್ಟು ಒಂದು ಚಪ್ಪಡಿಯನ್ನು ಕರ್ನಾಟಕದ ತಲೆಯ ಮೇಲೆ ಎಳೆದೇ ಬಿಡಲು ಮುಂದಾದರು!

ಸರಿ. ಏನಪ್ಪಾ ಇದಕ್ಕೆ ಏನಾದರೂ ಮಾನದಂಡವಿದೆಯೇ ಎಂದು ನೋಡಿದರೆ ಅಚ್ಚರಿಯಾಗುತ್ತದೆ. ಸ್ವಾತಂತ್ರ್ಯ ಬಂದು ಅರವತ್ತೈದು ವರ್ಷಗಳ ನಂತರವೂ ಈ ದೇಶದಲ್ಲಿ ಒಂದು ವೈಜ್ಞಾನಿಕವಾದ ರಾಷ್ಟ್ರೀಯ ಜಲನೀತಿ ಇಲ್ಲ... ಸಂಕಷ್ಟದಲ್ಲಿ ನೀರುಹಂಚಿಕೆ ಹೇಗೆ ಎಂಬ ಮಾನದಂಡವಿಲ್ಲ... ಹಾಗಾದರೆ ಪ್ರಧಾನಿ ಯಾವ ಆಧಾರದ ಮೇಲೆ ತೀರ್ಮಾನ ನೀಡಿದರು? ಯಾವುದಾದರೂ ಅಂಕಿ ಅಂಶ, ಹಿಂದಿನ ವರ್ಷಗಳ ಲೆಕ್ಕಾಚಾರಗಳನ್ನೇನಾದರೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆಯೇ ಎಂದು ನೋಡಿದರೆ ಅಂಥಾ ಯಾವ ಬದನೆಕಾಯೂ ಇಲ್ಲಾ... ‘ಎರಡು ರಾಜ್ಯಗಳು ಕಚ್ಚಾಡಬಾರದು, ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು, ನಾವೆಲ್ಲಾ ಭಾರತೀಯರು’ ಎನ್ನೋ ಅದೇ ಹಳೇ ಪುಂಗೀನಾ ಕನ್ನಡದೋರ ಮುಂದೆ ಊದಿ ತೀರ್ಮಾನ ಕೊಡಕ್ಕೆ ಮುಂದಾಗಿದ್ದಂಗಿದೆ. ಇದು ಪಕ್ಕಾ ರಾಜಕೀಯ ಲೆಕ್ಕಾಚಾರದ ತೀರ್ಮಾನವಾಗಿದೆ ಎಂದು ಅನುಮಾನ ಪಡಲು ಬೇಕಾದಷ್ಟು ಕಾರಣಗಳಿವೆ.

ತಮಿಳುನಾಡಿನ ರಾಜಕೀಯ ಲಾಬಿ!

ಇದುವರೆಗೂ ಡಿಎಂಕೆ ಪಕ್ಷ ಕಾಂಗ್ರೆಸ್ ಜೊತೆಯಲ್ಲಿ ಯುಪಿಏ ಅಂಗವಾಗಿದೆ. ಕೇಂದ್ರ ಸಂಪುಟದಲ್ಲಿ ಎಷ್ಟೊಂದು ಪ್ರಭಾವಿ ಸಚಿವರಾಗಿದ್ದಾರೆ. ತಮ್ಮ ರಾಜ್ಯಕ್ಕೆ ಬೇಕಿದ್ದನ್ನೆಲ್ಲಾ ಲಾಬಿ ಮಾಡಿ ದಕ್ಕಿಸಿಕೊಳ್ಳೋದ್ರಲ್ಲಿ ಎತ್ತಿದ ಕೈ ಅವರದ್ದು! ಇದೀಗ ಅಲ್ಲಿನ ಜಯಾಲಲಿತಾ ಮೇಡಂ ಕೂಡಾ ಇಂಥದೇ ಚೌಕಾಸಿಗೆ ಇಳಿದಿದ್ದಾರೆ ಅಷ್ಟೇ. ಇನ್ನೊಂದೆರಡು ವರ್ಷದಲ್ಲಿ ಚುನಾವಣೆ ಬಂದರೆ ಮೈತ್ರಿ ಬೇಕಾಗುತ್ತೆ! ಈಗ ಡಿಎಂಕೆ ಕೈ ಕೊಟ್ಟರೆ ಬೆಂಬಲಕ್ಕೆ ಜಯಲಲಿತಾ ಅವರ ಪಕ್ಷದ ಐವರು ಸಂಸದರು ಲೋಕಸಭೆಯಲ್ಲೂ, ಐವರು ರಾಜ್ಯಸಭೆಯಲ್ಲೂ ಇದ್ದಾರೆ. ಇನ್ನೂ ಬೇಕೆಂದರೆ ಈ ತೀರ್ಪು ತಮಿಳುನಾಡಿನ ಪರವಾಗಿದ್ದರೆ ಬೆಂಬಲ ಹಿಂತೆಗೆಯುವುದಿಲ್ಲಾ ಎಂದು ಸ್ವತಃ ಡಿಎಂಕೆ ಹೇಳಿದರೂ ತೀರ್ಪು ಆ ಕಡೆ ವಾಲುವ ಸಾಧ್ಯತೆಯಿದೆ. ಇಷ್ಟಕ್ಕೂ ಕರ್ನಾಟಕ ರಾಜ್ಯದಲ್ಲಿ ಇಂಥಾ ಲಾಬಿ ಮಾಡೋ ತಾಕತ್ತು ಈಗಿನ ಯಾವ ಪಕ್ಷಕ್ಕಿದೆ?

ಬಿಜೆಪಿ ಸದಾ ರಾಜ್ಯದ ಪರವಾಗಿರಲು ಸಾಧ್ಯವೇ?

ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ಈ ಬಾರಿ ರಾಜ್ಯದ ಪರ ನಿಲುವು ತೆಗೆದುಕೊಂಡಿದೆ ಎಂದುಕೊಂಡರೂ... ಇದೇನು ಶಾಶ್ವತವಾದ ರಾಜ್ಯ್ಜಪರವಾದ ಗಟ್ಟಿ ನಿಲುವು ಅನ್ನುವಂತಿಲ್ಲಾ. ಹಿಂದೆ ಕಳಸಾ ಭಂಡೂರ ಯೋಜನೆಯ ಕಾಲದಲ್ಲಿ ರಾಜ್ಯದ ಯೋಜನೆಗ ಕೊಟ್ಟಿದ್ದ ಅನುಮತಿಯನ್ನು ಹಿಂತೆಗೆದದ್ದು ಇದೇ ಬಿಜೆಪಿಯ ಕೈಲಿದ್ದ ಕೇಂದ್ರಸರ್ಕಾರವೇ! ಹಾಗಾದರೆ ನಾವು ರಾಷ್ಟ್ರೀಯ ಪಕ್ಷಗಳನ್ನು ಆಧರಿಸಬಾರದೇ? ಯಾವ ದೇಶದಲ್ಲಿ ಒಂದು ವೈಜ್ಞಾನಿಕ ರಾಷ್ಟ್ರೀಯ ಜಲನೀತಿಯೇ ಇರದೆ ಬರೀ ರಾಜಕೀಯ ಲಾಬಿಗಳು ಪ್ರಭಾವಶಾಲಿಯಾಗಿವೆಯೋ ಅಂಥಾ ದೇಶದಲ್ಲಿ ನಾವು ಇಂಥದ್ದೇ ಲಾಬಿಯನ್ನು ಇನ್ನೂ ಚೆನ್ನಾಗಿ ಮಾಡಿದರೆ ಮಾತ್ರಾ ಉಳಿಯಲು ಸಾಧ್ಯ ಎನ್ನಿಸುವುದಿಲ್ಲವೇ? ಇಂಥಾ ಲಾಬಿ ಮಾಡುವುದಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಎಂದೆಂದಿಗೂ ಅಸಾಧ್ಯ. ಹಾಗೆ ಅವು ಮಾಡಿದರೂ ಕರ್ನಾಟಕದಂತಹ ೨೮ ಸಂಸದರ ನಾಡಿನ ಪರವಾಗಿ ಮಾಡದೆ ೩೯ರ ತಮಿಳುನಾಡು, ೪೮ರ ಮಹಾರಾಷ್ಟ್ರ, ೪೨ರ ಆಂಧ್ರಪ್ರದೇಶದ ಪರ ಲಾಬಿ ಮಾಡೋದು ರಾಜಕೀಯವಾಗಿ ಲಾಭಕಾರಿಯಲ್ಲವೇ? ಇಂಥಾ ಕಹಿವಾಸ್ತವದಲ್ಲಿ ಕರ್ನಾಟಕದಲ್ಲಿ ಬಲಿಷ್ಠವಾಗಿರುವ ಪ್ರಾದೇಶಿಕ ಪಕ್ಷವೇ ಪರಿಹಾರ ಅನ್ನಿಸಲ್ವಾ ಗುರೂ? ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೂ ಬೆಂಬಲಕ್ಕಾಗಿ ಡಿಎಂಕೆ/ ಎಐಡಿಎಂಕೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಕಾಂಗ್ರೆಸ್ಸಿಗೆ ಇದ್ದರೆ ಖಂಡಿತಾ ಈ ಸಭೆಯ ನಿಲುವು ಕರ್ನಾಟಕಕ್ಕೆ ವಿರುದ್ಧವಾಗಿಯೇ ಇರುತ್ತಿತ್ತು ಅನ್ನಿಸದೇ? ಅಕಸ್ಮಾತ್ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಿದ್ದರೆ ರಾಜ್ಯದಲ್ಲಿ ಈಗಿನದೇ ಸರ್ಕಾರವಿದ್ದಿದ್ದರೂ ಇದೇ ಗೋಳು ತಾನೇ ಇರುತ್ತಿತ್ತು? ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರುಗಳಿಗೆ ರಾಜ್ಯದ ಪರವಾಗಿ ನಿಜವಾಗ್ಲೂ ಬದ್ಧತೆ/ ಪ್ರೀತಿ/ ಕಾಳಜಿ ಇದ್ದಾಗಲೂ ಕೂಡಾ ಅವರ ಅಸಹಾಯಕತೆಯನ್ನು ನಾವು ಊಹಿಸಬಹುದು!
ಇದಕ್ಕೆ ಇರೋದು ಒಂದೇ ಪರಿಹಾರ!

ಹೌದು! ರಾಜ್ಯದ ಹಿತ ಕಾಯೋಕೆ ಬೇಕಿರೋದು ಹೈಕಮಾಂಡ್ ಎಂಬ ದೆಹಲಿ ದೊರೆಗಳ ದಾಸ್ಯಕ್ಕೊಳಗಾಗಿರದ, ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷ. ಯೋಗ್ಯವಾದ ನೀತಿನಿಯಮಗಳೇ ಇರದ ಲಾಬಿಯಿಂದಲೇ ನಡೆಯುವ ವ್ಯವಸ್ಥೆಯಲ್ಲಿ ಸರಿಯಾದ ಲಾಬಿ ಮಾಡುವುದಾಗಲೀ... ಕೇಂದ್ರದಲ್ಲಿ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ನ್ಯಾಯದಾನದ ನೀತಿಗಳು ರೂಪುಗೊಳ್ಳುವುದೂ ಕೂಡಾ ಇಂತಹ ಒಂದು ಪ್ರಾದೇಶಿಕ ಪಕ್ಷದಿಂದ ಮಾತ್ರವೇ ಸಾಧ್ಯ! ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷದಿಂದ ಈ ಎರಡೂ ಕಾರ್ಯಸಾಧನೆಯಾಗಬಲ್ಲದು..ಗುರೂ!

ಮೈಸೂರು ದಸರಾ! ಈ ತಾಣ ಎಷ್ಟೊಂದು ಸುಂದರಾ!

(ಫೋಟೋ ಕೃಪೆ: www.mysoredasara.gov.in)

ಮೈಸೂರು ದಸರಾ ನಮ್ಮದಾಗುವತ್ತಾ ಸಾಗುತ್ತಿರುವುದನ್ನು ನೋಡಿದರೆ ಮನಸ್ಸು ತುಂಬಿ ಬರುತ್ತಿದೆ ಗುರೂ! ಈ ಬಾರಿ ತನ್ನ ಹಿಂದಿನ ಎಲ್ಲಾ ಕೊರತೆಗಳನ್ನು ನೀಗಿಕೊಂಡು ಕಂಗೊಳಿಸುತ್ತಿದೆ... ಮೈಸೂರು ದಸರಾ ಹಬ್ಬದ ಮಿಂಬಲೆ ತಾಣ. ಈ ಬದಲಾವಣೆಯೇನೂ ತಂತಾನೆ ಆಗಿಲ್ಲಾ... ೨೦೦೭ರಲ್ಲಿ ಇದ್ದ ಪರಿಸ್ಥಿತಿ ಗಮನಿಸಿದ್ದವರಿಗೆ ಈ ಬದಲಾವಣೆ ಅದ್ಭುತ ಎನ್ನಿಸುತ್ತದೆ. ಈ ತಾಣದಲ್ಲಿ ಆಗ ಕನ್ನಡದ ಕಡೆಗಣನೆ ಆಗಿದ್ದನ್ನು ಕಂಡು ಹೊಟ್ಟೆ ಉರಿದುಕೊಂಡು ಅನೇಕ ಜನರು ಸಂಬಂಧಿಸಿದ ಅಧಿಕಾರಿಗಳಿಗೆ ವರ್ಷ ವರ್ಷ ಬಿಡದೇ ಮನವಿ/ ದೂರು ಸಲ್ಲಿಸಿ ಈ ಬದಲಾವಣೆಗೆ ಕಾರಣರಾಗಿದ್ದಾರೆ. ಕನ್ನಡ ಗ್ರಾಹಕರ ದನಿ ಗೆದ್ದ ಮತ್ತೊಂದು ಉದಾಹರಣೆ... ಈ ಮೈಸೂರು ದಸರಾ ಅಂತರ್ಜಾಲ ತಾಣ. ಇಷ್ಟಕ್ಕೂ ಈ ಬಾರಿಯ ತಾಣದಲ್ಲಿ ಏನಪ್ಪಾ ಅಂಥಾ ವಿಶೇಷ ಅಂತೀರಾ? ಬನ್ನಿ ಒಮ್ಮೆ ಇಣುಕಿ ನೋಡಿ...

ಸರಿಯಾದ ತಾಣ!

ಈ ತಾಣದಲ್ಲಿ ಮೊದಲನುಡಿ ಇಂಗ್ಲೀಶ್ ಆಗಿತ್ತು. ಕನ್ನಡದಲ್ಲಿ ಇದ್ದದ್ದು ಕಾಟಾಚಾರಕ್ಕಾಗಿ ಅನ್ನುವಂತಿತ್ತು! ಈಗ ಸಂಪೂರ್ಣ ಬದಲಾಗಿದೆ ಈ ತಾಣ. ಇದು ಈಗ ನಮ್ಮ ಮೈಸೂರು ದಸರಾ ಅಂತರ್ಜಾಲ ತಾಣ ಎಂದು ಹೆಮ್ಮೆ ಪಡುವಂತೆ ಇದೆ. ಈ ತಾಣಕ್ಕೆ ಬಂದೊಡನೆ ಕಾಣುವುದು ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳ ಪುಟ. ಇಲ್ಲಿ ಮೇಲೆ ಒಂದು ಕನ್ನಡದ ಟ್ಯಾಬ್‌ಗಳಿದ್ದು ಇವು ಸದಾ ಇದ್ದೇ ಇರುವಂತೆ ರೂಪಿಸಿದ್ದಾರೆ. ಈ ತಾಣದಲ್ಲಿನ ಕನ್ನಡದ ಎಲ್ಲಾ ಕೊಂಡಿಗಳೂ ಶ್ರದ್ಧೆಯಿಂದ ರೂಪಿತವಾಗಿದ್ದು ಬಹುತೇಕ ಎಲ್ಲಾ ಪುಟಗಳು ಕೆಲಸ ಮಾಡುತ್ತಿವೆ. ನಮ್ಮ ಮೈಸೂರಿನ ಸೊಗಡಿನ, ನಮ್ಮತನ ಸೂಸುವ ಅನೇಕ ಚಿತ್ರಗಳನ್ನು ನಾವಿಲ್ಲಿ ನೋಡಬಹುದು. ಮೈಸೂರು ವಿಳ್ಯೆದೆಲೆ, ಮೈಸೂರು ರೇಶಿಮೆ ಸೀರೆ, ಚಿತ್ರಕಲೆ, ಅಗರಬತ್ತಿ, ಮೈಸೂರು ಬಾಳೆ ಎಲ್ಲವನ್ನೂ ಪರಿಚಯಿಸಿದ್ದಾರೆ.
(ಫೋಟೋ ಕೃಪೆ: www.mysoredasara.gov.in)

ಈ ತಾಣದಲ್ಲಿ ಒಟ್ಟು ಅರವತ್ತು ಭಾಷೆಗಳಲ್ಲಿ ಮಾಹಿತಿ ಇದೆ. ಯಾವುದೇ ಭಾಷೆಯನ್ನು ಆರಿಸಿಕೊಂಡರೂ ಆ ಭಾಷೆಯಲ್ಲಿ ಮಾಹಿತಿ ಸಿಗುವುದರ ಜೊತೆಯಲ್ಲಿ ಕನ್ನಡದ ಟ್ಯಾಬುಗಳು ಎಲ್ಲಾ ಹೊತ್ತಲ್ಲೂ ಕಾಣುತ್ತಿರುವಂತೆ ರೂಪಿಸಿದ್ದಾರೆ. ಈ ಭಾಷೆಗಳಲ್ಲಿ ಒಂದು ಆಯ್ಕೆ ಕಳೆದ ದಸರೆಯ ಅನುಭವದ ಬಗ್ಗೆ ಅನಿಸಿಕೆ ಕೇಳಲಾಗಿದೆ... ಆ ಅಭಿಮತವು ಆರಿಸಿಕೊಂಡ ಭಾಷೆಯ ಜೊತೆಯಲ್ಲಿ ಕನ್ನಡವೂ ಕಾಣುತ್ತಲೇ ಇರುತ್ತದೆ. ನೋಡಿ... ಹೀಗೆ ಒಂದಾರು ಭಾಷೆಗಳನ್ನು ಬೇರೆಬೇರೆಯಾಗಿ ಆಯ್ಕೆ ಮಾಡಿ  ಕೆಳಗಿನ ಚಿತ್ರವನ್ನು ಜೋಡಿಸಿ ಕೊಡಲಾಗಿದೆ.

(ಫೋಟೋ ಕೃಪೆ: www.mysoredasara.gov.in)

ಇನ್ನೇನು ಹೇಳುವುದು.. ಮೈಸೂರು ದಸರೆಯ ಅಂತರ್ಜಾಲ ತಾಣವಂತೂ ಈಗ ನಮ್ಮದು ಎನ್ನಿಸುತ್ತಿದೆ. ಇನ್ನು ದಸರೆಯ ಕಾರ್ಯಕ್ರಮಗಳಲ್ಲಿ ನಮ್ಮೂರಿನ, ನಮ್ಮವರ ಪ್ರತಿಭೆಗಳ ನಮ್ಮೂರ ಕಲೆಗಳ ಜಗತ್ ಪ್ರದರ್ಶನಕ್ಕೆ ಅವಕಾಶ ಸಿಗುವುದು ಮೊದಲ ಆದ್ಯತೆಯಾಗಿಬಿಟ್ಟರೆ ಸಾಕು! ಇನ್ನೇನು ತಾನೇ ಬೇಕೂ ಗುರೂ!! ಈ ಬದಲಾವಣೆಗೆ ಕಾರಣವಾಗಿರೋ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು!!

ಕೊನೆಹನಿ: ಅಲ್ಲಾ... ಮೈಸೂರಿನಂತಹ ಪುಟ್ಟ ಊರಿನ ಕಾರ್ಯಕ್ರಮದ... ಕರ್ನಾಟಕ ಸರ್ಕಾರದ ಅಧೀನದ ಈ ಅಂತರ್ಜಾಲ ತಾಣದಲ್ಲಿ ಜಗತ್ತಿನ ೬೦ ಭಾಷೆಗಳಲ್ಲಿ ಮಾಹಿತಿ/ ಸೇವೆ ನೀಡುವುದು ಸಾಧ್ಯವಾಗುತ್ತಿದೆ ಎನ್ನುವುದಾದರೆ... ಭಾರತದೇಶದ ಆಡಳಿತ ವ್ಯವಸ್ಥೆಯಲ್ಲಿ ಬ್ಯಾಂಕು, ರೈಲು ಟಿಕೆಟ್, ಪಾಸ್‌ಪೋರ್ಟ್, ವಿಮೆ, ಆದಾಯಕರ ಇಲಾಖೆಯಂತಹ ತಾಣಗಳಲ್ಲಿ ಭಾರತದ ೨೩ ಭಾಷೆಗಳಲ್ಲಿ ಸೇವೆ ಕೊಡುವಂತೆ ವ್ಯವಸ್ಥೆ ರೂಪಿಸುವುದು ಕಷ್ಟಾ ಅನ್ನೋದನ್ನು ನಂಬಕ್ಕಾಗುತ್ತಾ ಗುರೂ? ಸಮಾನ ಗೌರವದ ಭಾಷಾನೀತಿ ಜಾರಿ ಮಾಡೋಕೆ ತಂತ್ರಜ್ಞಾನದ್ದಂತೂ ಸಹಕಾರವಿದೆ! ದೆಹಲಿಯ ಜನಕ್ಕೆ ಇದನ್ನು ಮನವರಿಕೆ ಮಾಡಿಕೊಡೋ ಹೊಣೆ ನಮ್ಮ ನಿಮ್ಮದು ಅಷ್ಟೇ!

ಭಾರತ ಒಕ್ಕೂಟದ ರಾಷ್ಟ್ರಪತಿಗಳಿಂದ ಹಿಂದೀ ದಿವಸದ ಸಂದೇಶ!

ಹಿಂದೀ ದಿವಸದ ಸಂದರ್ಭದಲ್ಲಿ ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿಯವರು ಮಾಡಿದ ಭಾಷಣದ ಕನ್ನಡದ ಅನುವಾದ ಇಲ್ಲಿದೆ ನೋಡಿ:


ಗೃಹಮಂತ್ರಿ ಶ್ರೀ ಸುಶೀಲ್ ಕುಮಾರ್ ಶಿಂಧೆಯವರೇ, 
ಗೃಹ ರಾಜ್ಯಮಂತ್ರಿ ಶ್ರೀ ಜಿತೇಂದ್ರ ಸಿಂಹರವರೇ,
ಆಡಳಿತ ಭಾಷಾ ವಿಭಾಗದ ಸಚಿವರಾದ ಶ್ರೀ ಶರದ್ ಗುಪ್ತಾರವರೇ, 
ಗಡಿ ಭದ್ರತಾ ಸಚಿವರಾದ ಶ್ರೀ ಏ ಕೆ ಮಂಗೋತ್ರಾರವರೇ,

ಅಕ್ಕತಂಗಿಯರೇ, ಅಣ್ಣ ತಮ್ಮಂದಿರೇ...

ಹಿಂದೀ ದಿವಸದ ಈ ಶುಭಸಂದರ್ಭದಲ್ಲಿ ತಮಗೆಲ್ಲಾ ನನ್ನ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.

ಭಾರತದ ಇತಿಹಾಸದಲ್ಲಿ ಇಂದಿನ ದಿವಸ ಅತ್ಯಂತ ಹೆಮ್ಮೆಯದ್ದಾಗಿದೆ. ನಮ್ಮ ಸಂವಿಧಾನದಲ್ಲಿ ಹಿಂದೀ ಭಾಷೆಗೆ ೧೯೪೯ರ ಇದೇ ದಿನ ಆಡಳಿತ ಭಾಷೆಯ ಸ್ಥಾನಮಾನ ಸಿಕ್ಕಿತು. ಭಾರತದಲ್ಲಿ ಅನೇಕ ಭಾಷೆಗಳನ್ನು ಮಾತನ್ನಾಡಲಾಗುತ್ತದೆ. ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ವೈಶಿಷ್ಟ್ಯವಾಗಿದೆ ಮತ್ತು ಹಿಂದೀ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಏಕತೆಯ ಪ್ರತೀಕವಾಗಿದೆ. ಗುರುದೇವ ರವೀಂದ್ರನಾಥ ಟ್ಯಾಗೂರರು ಹೀಗೆ ಹೇಳಿದ್ದಾರೆ: "ಭಾರತೀಯ ಭಾಷೆಗಳು ನದಿಗಳು ಮತ್ತು ಹಿಂದೀ ಮಹಾನದಿ".

ಪ್ರಜಾಪ್ರಭುತ್ವದಲ್ಲಿ ಭಾಷೆಗಳಿಗೆ ಮಹತ್ವದ ಪಾತ್ರವಿದೆ, ಏಕೆಂದರೆ ಇದು ಜನರು ಮತ್ತು ಸರ್ಕಾರದ ನಡುವಿನ ಸಂಪರ್ಕದ ಕೊಂಡಿಯಾಗಿದೆ. ಹಾಗಾಗಿ ನಮ್ಮ ಸಂವಿಧಾನದಲ್ಲಿ ಕೇಂದ್ರಸರ್ಕಾರದ ಕೆಲಸಕಾರ್ಯಗಳಿಗೆ ಹಿಂದೀಯನ್ನು ಆಡಳಿತ ಭಾಷೆಯಾಗಿ ಮಾಡಲಾಗಿದೆ ಮತ್ತು ಪ್ರಾದೇಶಿಕ ಭಾಷೆಗಳನ್ನು ರಾಜ್ಯಗಳಿಗಾಗಿ ಸ್ವೀಕರಿಸಲಾಗಿದೆ. ಭಾಷೆಯಿಂದ ಜನಸಾಮಾನ್ಯರು ಮತ್ತು ಶಾಸನದ ನಡುವೆ ಸಹಯೋಗ ಮತ್ತು ಹೊಣೆಗಾರಿಕೆಯ ಸಂಬಂಧ ಸ್ಥಾಪನೆಯಾಗುತ್ತದೆ. ನಮ್ಮ ಪ್ರಜಾಪ್ರಭುತ್ವವನ್ನು ಶಕ್ತಿಯುತ ಮತ್ತು ಪ್ರಗತಿಶೀಲವಾಗಿಸಲು ನಾವು ಬಯಸುವುದೇ ಆದಲ್ಲಿ ನಾವು ಕೇಂದ್ರದ ಆಡಳಿತದಲ್ಲಿ ಹಿಂದೀಯನ್ನೂ ರಾಜ್ಯಗಳ ಆಡಳಿತದಲ್ಲಿ ರಾಜ್ಯಗಳ ಭಾಷೆಯನ್ನೂ ಬಳಸತಕ್ಕದ್ದು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹೀಗೆ ಹೇಳಿದ್ದರು: "ನಾವೇನಾದರೂ ಹಿಂದೂಸ್ತಾನವನ್ನು ಒಂದು ರಾಷ್ಟ್ರ ಮಾಡುವುದೇ ಆದಲ್ಲಿ ರಾಷ್ಟ್ರಭಾಷೆ ಹಿಂದೀಯೇ ಆಗಬಲ್ಲದು". ಸ್ವಾತಂತ್ರ ಬಂದು ಅರವತ್ತೈದು ವರ್ಷಗಳಾದ ಈ ಸಂದರ್ಭದಲ್ಲಿ ಮಹಾತ್ಮಗಾಂಧಿಯವರ ಈ ಮಾತುಗಳು ಸತ್ಯವೆಂದು ಸಾಬೀತಾಗುತ್ತಿದೆ. ಇಡೀ ಭಾರತದಲ್ಲಿ ಸಂಪರ್ಕಭಾಷೆಯಾಗಿ ಹಿಂದೀ ಭಾಷೆಯ ಬಳಕೆಯು ಯಶಸ್ವಿಯಾಗಿ ನಡೆದಿದೆ. ಹಾಗಾಗಿ ಸರ್ಕಾರದ ಕೆಲಸ ಕಾರ್ಯಗಳಲ್ಲಿಯೂ ಆಡಳಿತ ಭಾಷೆಯಾದ ಹಿಂದೀ ಭಾಷೆಗೆ ಮಹತ್ವ ನೀಡಬೇಕಾದ್ದು ಅತ್ಯಂತ ಅಗತ್ಯದ್ದಾಗಿದೆ. ಆಡಳಿತ ಭಾಷೆಯಾದ ಹಿಂದೀ ಮತ್ತು ಪ್ರಾದೇಶಿಕ ಭಾಷೆಗಳ ಪಾತ್ರ ಬಹಳ ಮುಖ್ಯವಾಗಿದ್ದು ಸರ್ಕಾರಗಳ ಜನಪರ ಯೋಜನೆಗಳನ್ನು ಹಳ್ಳಿ ಹಳ್ಳಿಗಳ ರೈತಾಪಿ ಜನರಿಗೂ ಯಶಸ್ವಿಯಾಗಿ ತಲುಪಿಸಲು ಸಾಧ್ಯ.

ಭಾರತ ಸರ್ಕಾರದ ಮೂಲಕ ಸರ್ವಶಿಕ್ಷಾ ಅಭಿಯಾನ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ, ರಾಷ್ಟ್ರೀಯ ಸ್ವಾಸ್ಥ್ಯ ಮಿಷನ್‌ನಂತಹ ನಾನಾ ಅಗ್ರ ಯೋಜನೆಗಳನ್ನು ನಡೆಸಲಾಗುತ್ತಿದೆ. ಇವೆಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಭಾಷೆಯ ಮಹತ್ವ ದೊಡ್ಡದಿದೆ.

ಹಿಂದೀ ಈಗ ಒಂದು ಅಂತರರಾಷ್ಟ್ರೀಯ ಭಾಷೆಯಾಗಿಯೂ ಹೊಮ್ಮಿ ಬಂದಿದೆ. ಈ ಹೊತ್ತಿನಲ್ಲಿ ವಿಶ್ವದ ನೂರೈವತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ಹಿಂದೀಯನ್ನು ಕಲಿಸಲಾಗುತ್ತಿದೆ. ವಿಶ್ವಸಂಸ್ಥೆಯ ಯುನೆಸ್ಕೋದ ಏಳು ಭಾಷೆಗಳಲ್ಲಿ ಹಿಂದೀಯನ್ನೂ ಒಂದೆಂದು ಗುರುತಿಸಲಾಗಿದೆ. (ಸಾತ್ ಅಂತಾ ಇದೆ). ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ದೂರದರ್ಶನ ವಾಹಿನಿಗಳಲ್ಲಿ ಹಿಂದೀ ಮತ್ತಿತರ ಭಾರತೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನೂ ನೀಡುವುದು ಶುರುವಾಗಿದೆ. 

ಇದೀಗ ವ್ಯಾಪರ ಕ್ಷೇತ್ರದಲ್ಲೂ ಹಿಂದೀ ಮಹತ್ವವಾದ ಕಾಣಿಕೆಯನ್ನು ಸಲ್ಲಿಸುತ್ತಿದೆ. ವಿದೇಶಿ ಸಂಸ್ಥೆಗಳು ಭಾರತದಲ್ಲಿ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಹಿಂದೀಯ ಜೊತೆಯಲ್ಲಿ ಅನೇಕ ಪ್ರಾದೇಶಿಕ ಭಾಷೆಗಳನ್ನೂ ಬಳಸಲು ಶುರು ಮಾಡಿವೆ.

ಹಿಂದೀ ಬಳಕೆಯನ್ನು ಹೆಚ್ಚಿಸಲು ಸರ್ಕಾರವೂ ಕೂಡಾ ಬಹಳಷ್ತು ಪ್ರೋತ್ಸಾಹವನ್ನು ನೀಡುತ್ತಿದೆ. ಈ ಪ್ರಯತ್ನಗಳೀಂದಾಗಿ ಹಿಂದೀಯ ಬಳಕೆ ಹೆಚ್ಚುತ್ತಿದೆ. ನಮ್ಮ ಸಂಕಲ್ಪವೇನೆಂದರೆ ಹಿಂದೀಯ ಜೊತೆಜೊತೆಯಲ್ಲೇ ಎಲ್ಲಾ ಪ್ರಾದೇಶಿಕ ಭಾಷೆಗಳೂ ಬೆಳಯುವಂತಾಗಬೇಕು ಮತ್ತು ನಾವು ಇದಕ್ಕಾಗಿ ಪ್ರಯತ್ನಪಡುತ್ತೇವೆ.

ಬರುವ ಸೆಪ್ಟೆಂಬರ್ ೨೨~೨೪ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿರುವ ವಿಶ್ವ ಹಿಂದೀ ಸಮ್ಮೇಳನವು ಹಿಂದೀ ಭಾಷೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆ ಮಾಡಲು ಸಹಕಾರಿಯಾಗಲಿದೆ. ಈ ವಿಶ್ವ ಹಿಂದೀ ಸಮ್ಮೇಳನದಲ್ಲಿ ಪಾಲ್ಗೊಳ್ಲಲಿರುವ ಎಲ್ಲಾ ವಿದ್ವಾಂಸರು ಮತ್ತು ಹಿಂದೀ ವಿಶ್ವಾಸಿಗಳಲ್ಲಿ ನಿಷ್ಟೆ ಮತ್ತು ಸಮರ್ಪಣಾ ಭಾವನೆಯಿಂದ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಆಗ್ರಹಪೂರ್ವಕವಾಗಿ ಮನವಿಮಾಡುತ್ತೇನೆ.

ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಹಿಂದೀ ಬಳಸುತ್ತಿರುವುದಕ್ಕಾಗಿ ಪುರಸ್ಕೃತರಾದ ಎಲ್ಲಾ ವ್ಯಕ್ತಿಗಳಿಗೂ ಮತ್ತು ಸಂಸ್ಥೆಗಳಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ಲ್ರಮದಲ್ಲಿ ನೀಡಲಾಗುತ್ತಿರುವ ಇಂದಿರಾಗಾಂಧಿ ರಾಜ್‌ಭಾಷಾ ಶೀಲ್ಡ್ ಮತ್ತು ಶ್ರೇಷ್ಟ್ ಕಾರ್ಯ ಪುರಸ್ಕಾರಗಳು ಎಲ್ಲರಿಗೂ ಪ್ರೇರಣೇ ನೀಡಲಿ.

ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ನಾನು ಆಡಳಿತ ಭಾಷಾ ವಿಭಾಗ(ರಾಜ್‌ಭಾಷಾ ವಿಭಾಗ್)ಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಆಡಳಿತ ಭಾಷೆಯಾದ ಹಿಂದೀಯ ಪ್ರಸಾರ್ ಅಮ್ತ್ತು ಪ್ರಚಾರಕ್ಕಾಗಿ ಶ್ರಮಿಸಿದವರ ಕೊಡುಗೆಯನ್ನು ಪ್ರಶಂಸಿಸುತ್ತೇನೆ.

ಜಯ್ ಹಿಂದ್

ಬದಲಾಗಬೇಕಾದ್ದು ಭಾರತದ ಸಂವಿಧಾನವೇ ಹೊರತು... ನ್ಯಾಯದ ಬೇಡಿಕೆಯಲ್ಲಾ!


ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕಾರಣ ಕನ್ನಡವನ್ನು ಕನ್ನಡನಾಡಿನ ಹೈಕೋರ್ಟಿನ ಆಡಳಿತ ಭಾಷೆ ಮಾಡಲು ಆಗುವುದಿಲ್ಲ ಎನ್ನುವ ತೀರ್ಪನ್ನು ರಾಜ್ಯ ಉಚ್ಚನ್ಯಾಯಾಲಯ ನೀಡಿದೆಯೆನ್ನುವ ಸುದ್ದಿ ಬಂದಿದೆ. ಸಂವಿಧಾನದ ೩೪೮ನೇ ವಿಧಿಯ ಅನ್ವಯ ಈ ತೀರ್ಪು ಕೊಟ್ಟಿರುವುದಾಗಿ ನ್ಯಾಯಾಲಯ ಹೇಳಿದೆ. ತಮಾಶೆಯೆಂದರೆ "ನ್ಯಾಯವಾದಿಗಳು ಬೇರೆಬೇರೆ ರಾಜ್ಯಗಳ ನ್ಯಾಯಾಲಯದಲ್ಲಿ ವಾದ ಮಾಡಲು ಹೀಗಿರುವುದು ಅನುಕೂಲ" ಎನ್ನುವ ಮೂಲಕ ವೈವಿಧ್ಯತೆಯನ್ನು ನ್ಯಾಯಾಲಯವೂ ಶಾಪವೆಂದು ಪರಿಗಣಿಸಿರುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಏನಿದು ೩೪೮ನೇ ಕಾಲಂ? ಅದರಲ್ಲಿ ಏನು ಹೇಳಿದೆ?

ಭಾರತದ ಸಂವಿಧಾನ: ೩೪೮ನೇ ವಿಧಿ

ಸಂವಿಧಾನದ XVIIನೇ ಭಾಗವು ಭಾರತದ ಆಡಳಿತ ಭಾಷೆಯ ಬಗ್ಗೆ ಮಾತಾಡುತ್ತದೆ. ಇದರ ಅಡಿಯಲ್ಲಿ ೩೪೩ರಿಂದ ೩೫೧ನೇ ವಿಧಿಯವರೆಗಿನ ಕಾಲಮುಗಳಲ್ಲಿ ಈ ಬಗ್ಗೆ ಬರೆಯಲಾಗಿದೆ. ಸಮಾನತೆಯೇ ಜೀವಾಳ ಎಂದು ಹೇಳುವ ಭಾರತ ಸಂವಿಧಾನದಲ್ಲಿನ ಹಸಿ ತಾರತಮ್ಯ ಈ ಕಾಲಂಗಳಲ್ಲಿ ಬರೆದಿರುವುದು ಎದ್ದು ಕಾಣುತ್ತದೆ. ಹಿಂದೀಯನ್ನು ಭಾರತದ ಆಡಳಿತ ಭಾಷೆಯೆಂದು ಘೋಷಿಸಿರುವುದರ ಜೊತೆಯಲ್ಲಿ ಹಿಂದೀಯ ಪ್ರಚಾರಕ್ಕಾಗಿ ದುಡಿಯಬೇಕಾದ್ದು ಭಾರತ ಸರ್ಕಾರದ ಕರ್ತವ್ಯ ಎಂದು ಹೇಳಿದೆ. ಆದರೆ ೩೪೮ರಲ್ಲಿ ಮಾತ್ರಾ ನ್ಯಾಯಾಲಯದ ಭಾಷೆ ಇಂಗ್ಲೀಶ್ ಮಾತ್ರಾ ಆಗಿರಬೇಕೆಂದು ಹೇಳಲಾಗಿದೆ. ಈ ವಿಧಿಯಲ್ಲಿ ರಾಜ್ಯಗಳ ಆದೇಶ, ಕಾನೂನು ಕಾಯ್ದೆಗಳೆಲ್ಲಾ ಇಂಗ್ಲೀಶಿನಲ್ಲಿಯೇ ಇರಬೇಕೆಂದೂ ಹೇಳುತ್ತಿದೆ. ಭಾರತದ ರಾಷ್ಟ್ರಪತಿಗಳು ಅನುಮತಿ ನೀಡಿದರೆ ಹಿಂದೀ ಅಥವಾ ಇತರೆ ಭಾಷೆಗಳನ್ನು ಬಳಸಬಹುದೆಂದು ಹೇಳಲಾಗಿದೆ.


348. Language to be used in the Supreme Court and in the High Courts and for Acts, Bills, etc.—
(1) Notwithstanding anything in the foregoing provisions of this Part, until Parliament by law otherwise provides—

(a) all proceedings in the Supreme Court and in every High Court,
(b) the authoritative texts—
(i) of all Bills to be introduced or amendments thereto to be moved in either House of Parliament or in the House or either House of the Legislature of a State,
(ii) of all Acts passed by Parliament or the Legislature of a State and of all Ordinances promulgated by the president or the Governor of a State, and
(iii) of all orders, rules, regulations and bye-laws issued under this Constitution or under any law made by Parliament or the Legislature of a State, shall be in the English language.
(2) Notwithstanding anything in sub-clause (a) of clause (1), the Governor of a State may, with the previous consent of the President, authorise the use of the Hindi language, or any other language used for any official purposes of the State, in proceedings in the High Court having its principal seat in that State: Provided that nothing in this clause shall apply to any judgment, decree or order passed or made by such High Court.
ಈ ವಿಧಿಯ ಎರಡನೇ ಭಾಗದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪೂರ್ವಾನುಮತಿಯೊಡನೆ ಇಂಗ್ಲೀಶ್ ಅಲ್ಲದ ಬೇರೆ ನುಡಿಯನ್ನು ಬಳಸಲು ಅನುಮತಿ ನೀಡಬಹುದು ಎಂದಿದೆ. ತಮಾಶೆಯೆಂದರೆ ಹೀಗೆ ಬರೆಯುವಾಗ ಹಿಂದೀ ಅಥವಾ ಬೇರಾವುದೇ ಭಾಷೆಯನ್ನು ಎಂದು ಬರೆಯಲಾಗಿದೆ. ಯಾಕೆ ಹೀಗೆ ಹಿಂದೀಯೊಂದನ್ನೇ ಹೆಸರಿಸಿದ್ದಾರೆ ಎಂದರೆ ೩೪೩ನೇ ವಿಧಿಯಲ್ಲಿ ಹಿಂದೀ ಭಾರತದ ಆಡಳಿತ ಭಾಷೆ ಎನ್ನುವುದೇ ಕಾರಣವಾಗಿದೆ.

ಬದಲಾಗಲಿ ಹುಳುಕಿನ ಭಾಶಾ ನೀತಿ! ಬದಲಾಗಲಿ ಸಂವಿಧಾನ!!

ಹೌದೂ! ಕನ್ನಡನಾಡಿನ ನ್ಯಾಯಾಲಯದ ಆಡಳಿತದಲ್ಲಿ ಕನ್ನಡ ಭಾಷೆಯನ್ನೇ ಬಳಸಬಾರದು ಎನ್ನುವ, ಕನ್ನಡನಾಡಿನ ವಾಹನಗಳ ನಂಬರ್ ಪ್ಲೇಟ್ ಕನ್ನಡದಲ್ಲಿರುವುದೇ ಅಪರಾಧ ಎನ್ನುವ, ಕನ್ನಡ ನಾಡಿನ ಬ್ಯಾಂಕುಗಳಲ್ಲಿ ಕನ್ನಡವಿಲ್ಲದಿದ್ದರೂ ಸರಿ ಹಿಂದೀ ಇಂಗ್ಲೀಶ್ ಇರಬೇಕೆನ್ನುವ, ಕನ್ನಡನಾಡಿನ ಮೆಟ್ರೋದಲ್ಲಿ ಹಿಂದೀ ಇರಬೇಕೆನ್ನುವ, ಕನ್ನಡನಾಡಿನ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಇರುವೆ ಗಾತ್ರದ ಅಕ್ಷರಗಳ ಮೂರನೇ ಸ್ಥಾನಕ್ಕೆ ದೂಡಿರುವ... ಭಾಷಾನೀತಿ ಹುಳುಕಿನದ್ದು ಎನ್ನದೇ ಬೇರೆ ದಾರಿಯಿಲ್ಲ. ಈ ಭಾಷಾನೀತಿ ಬದಲಾಗದಿದ್ದರೆ ಹಿಂದೀಯೇತರರು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿಯೇ ಬದುಕಬೇಕಾಗುತ್ತದೆ. ಸಂವಿಧಾನದ ೮ನೇ ಕಲಮ್ಮಿನಲ್ಲಿ ಸೂಚಿತವಾಗಿರುವ ಎಲ್ಲಾ ೨೨ ಭಾಷೆಗಳೂ ಭಾರತದ ಆಡಳಿತ ಭಾಷೆಗಳು ಎನ್ನುವ ಬದಲಾವಣೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಎನ್ನುವ ಬದಲಾವಣೆ ಭಾರತದ ಸಂವಿಧಾನಕ್ಕೆ ತುರ್ತಾಗಿ ಆಗಬೇಕಾಗಿದೆ! ಹೌದಲ್ವ ಗುರೂ!?

ಇಡೀ ಭಾರತ ನಮ್ಮದು ಅನ್ನೋರು ಯಾರು ಗೊತ್ತಾ?


ಇತ್ತೀಚಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆಯವರು ವಲಸಿಗರ ಬಗ್ಗೆ ಆಡಿದ ಕಟುಮಾತುಗಳ ಬೆನ್ನ ಹಿಂದೇ ಉದ್ಧವ ಠಾಕ್ರೆ "ಮಹಾರಾಷ್ಟ್ರಕ್ಕೆ ವಲಸೆ ಬರೋರಿಗೆ ಪರ್ಮಿಟ್ ವ್ಯವಸ್ಥೆ ಬೇಕು" ಎಂದಿದ್ದಾರೆ. ಈ ಮಾತಿನ ಹಿನ್ನೆಲೆಯೇನಪ್ಪಾ ಅಂದರೆ ಮೊನ್ನೆ ಮುಂಬೈಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಒಬ್ಬ ಬಿಹಾರಿಯನ್ನು ಬಿಹಾರದಿಂದ ಬಂಧಿಸಿ ಒಯ್ದಿದ್ದಕ್ಕೆ ಬಿಹಾರದ ಮುಖ್ಯಮಂತ್ರಿ "ಯಾವುದೇ ಬಿಹಾರಿಯನ್ನು ಬಂಧಿಸುವ ಮುನ್ನ ಬಿಹಾರ ಸರ್ಕಾರದ ಅನುಮತಿ ಪಡೆಯಬೇಕು" ಎನ್ನುವ ಹೇಳಿಕೆ ನೀಡಿದರಂತೆ. ಈ ಮಾತೇನೋ ಸರಿಯಾಗೇ ಇದೆ. ಆದರೆ ಅದಕ್ಕೆ ಉದ್ಧವ್ ಠಾಕ್ರೆಯವರು "ಹಾಗಾದರೆ ಮಹಾರಾಷ್ಟ್ರಕ್ಕೆ ಬರುವ ಬಿಹಾರಿಗಳಿಗೆ ಪರ್ಮಿಟ್ ವ್ಯವಸ್ಥೆ ಮಾಡಿ" ಎಂದಿದ್ದಾರೆ. ಇಲ್ಲಿ ಈ ಮಾತುಗಳು ಒಂದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದು ಹುಟ್ಟಿದಂತಿದ್ದರೂ ವಾಸ್ತವವಾಗಿ ಉದ್ಧವ್ ಮಾತುಗಳಲ್ಲಿ ಹುರುಳಿದೆ.

ಭಾರತೀಯರು ಎಲ್ಲಿ ಬೇಕಾದರೂ ಹೋಗಬಹುದು ಅನ್ನೋರು!

ಇದಕ್ಕೆ ಪ್ರತಿಕ್ರಿಯೆಯಾಗಿ ಬಿಹಾರದ ರಾಜಕಾರಣಿಗಳು ಮಹಾನ್ ದೇಶಭಕ್ತರಂತೆ.. "ಇಡೀ ಭಾರತ ಒಂದು, ಸಂವಿಧಾನವೇ ಯಾರು ಎಲ್ಲಿಗೆ ಬೇಕಾದರೂ ವಲಸೆ ಹೋಗಬಹುದು ಎನ್ನುವ ಅವಕಾಶ ಕೊಟ್ಟಿದೆ, ನಾವು ಎಲ್ಲಾದರೂ ಹೋಗ್ತೀವಿ, ನಮ್ಮನ್ನು ಪ್ರಶ್ನಿಸೋರ ಮೇಲೆ ಕ್ರಮ ಕೈಗೊಳ್ಳಿ" ಎಂದುಬಿಟ್ಟರು. ಇದು, ಯಾಕೆ ಇದೇ ರಾಜ್ಯಗಳ ರಾಜಕಾರಣಿಗಳ ಬಾಯಲ್ಲಿ ಸದಾ ಉದುರುವ ಆಣಿಮುತ್ತಾಗಿದೆ ಎಂದುಕೊಳ್ಳುವಿರಾದರೆ ಈ ಪಟ್ಟಿಯನ್ನು ನೋಡಿ:


ಈಗ ಶ್ರೀಮಂತ/ ಸಂಪದ್ಭರಿತ ನಾಡುಗಳು ಯಾವುವು?
 - ಮಹಾರಾಷ್ಟ್ರ, ಕರ್ನಾಟಕಗಳು... 

ಎಲ್ಲಿ ಜನಸಂಖ್ಯೆ ದಟ್ಟವಾಗಿದೆ?
 - ಬಿಹಾರ, ಉತ್ತರ ಪ್ರದೇಶದಲ್ಲಿ

ಎಲ್ಲಿ ಕಡಿಮೆಯಿದೆ?
 - ಕರ್ನಾಟಕ, ಮಹಾರಾಷ್ಟ್ರಗಳಲ್ಲಿ...

ಜನಸಂಖ್ಯಾ ನಿಯಂತ್ರಣದ ಯೋಜನೆಯಂತೆ ಯಾರ ಟಿಎಫ್‌ಆರ್ ಹೆಚ್ಚಿದೆ?
 - ಉತ್ತರಪ್ರದೇಶ, ಬಿಹಾರ...

ಯಾರದು ಕಡಿಮೆಯಿದೆ?
- ಕರ್ನಾಟಕ ಮಹಾರಾಷ್ಟ್ರದ್ದು...

ಹೋಗಲಿ.. ೨೦೨೦ಕ್ಕೆ ಯಾರಿಗೆ ಯಾವ ಟಿಎಫ್‌ಆರ್ ಗುರಿಯಿದೆ?
 - ಮಹಾರಾಷ್ತ್ರ, ಕರ್ನಾಟಕಕ್ಕೆ ೧.೯ ಮತ್ತು ೧.೮. ಉತ್ತರಪ್ರದೇಶ, ಬಿಹಾರಕ್ಕೆ ೩.೦.

ಅಂದರೇನು ಅರ್ಥ?
 - ಉತ್ತರಪ್ರದೇಶ ಮತ್ತು ಬಿಹಾರಗಳು ಜನಸಂಖ್ಯಾ ಸ್ಫೋಟದಿಂದ ನರಳುತ್ತಿವೆ ಮತ್ತು ಆರ್ಥಿಕವಾಗಿ ಹಿಂದುಳಿದಿವೆ ಮತ್ತು ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನಸಂಖ್ಯೆ ಅಂದರೆ ಅಲ್ಲಿನ ಜನದಟ್ಟಣೆ ನಮ್ಮ ನಾಡಿನ ಮೂರುಪಟ್ಟು ಹೆಚ್ಚಾಗಿದೆ. ಇಷ್ಟಿದ್ದರೂ ಅಲ್ಲಿ ಪ್ರತಿ ದಂಪತಿಗೆ ಮೂರು ಮಕ್ಕಳು ಹುಟ್ಟಬಹುದು! ಅದೇ ಕರ್ನಾಟಕ, ಮಹಾರಾಷ್ಟ್ರಗಳು ಶ್ರೀಮಂತವಾಗಿವೆ, ಇಲ್ಲಿ ಜನದಟ್ಟಣೆ ಕಡಿಮೆಯಿದೆ... ಆದರೂ ಇಲ್ಲಿ ಪ್ರತಿ ದಂಪತಿಗೆ ೧.೮ ಮಕ್ಕಳನ್ನು ಹೆರಬೇಕೆನ್ನುವ ಯೋಜನೆ ನೀಡಲಾಗಿದೆ. ಅಂದರೆ ಇದರ ಅರ್ಥ, ಬರ್ತಾ ಬರ್ತಾ ಕನ್ನಡ ಕುಲ ಅಳಿಯಲಿ... ಉತ್ತರದ ವಲಸಿಗರಿಂದ ಕರ್ನಾಟಕ ಮಹಾರಾಷ್ಟ್ರದಂತಹ ನಾಡುಗಳು ನಳನಳಿಸಲಿ ಎಂದಲ್ಲವೇ? ಬಿಹಾರದ ರಾಜಕಾರಣಿಗಳು ಬಾಯಲ್ಲಿ ರಾಷ್ಟ್ರೀಯ ಏಕತೆಯ ಮಾತಾಡುತ್ತಿದ್ದರೂ ನಿಜವಾಗಿ ಮಾಡುತ್ತಿರುವ ಹುನ್ನಾರ ಚೆನ್ನಾಗಿ ಬೆಳೆದಿರುವ ನಾಡುಗಳಿಗೆ ತಮ್ಮ ಜನರನ್ನು ನುಗ್ಗಿಸುವಿಕೆಗೆ ಬೆಂಬಲ!

ಈಗ ಹೇಳಿ, ನಮ್ಮೂರಿಗೆ ವಲಸೆ ಬರೋರ ಮೇಲೆ ನಮಗೆ ನಿಯಂತ್ರಣ ಬೇಡವೇ? ಇಂಥಾ ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕೋ ಒಂದು "ವಲಸೆ ನೀತಿ" ಭಾರತಕ್ಕೆ ಬೇಡ್ವಾ ಗುರೂ!?

ಹುಳುಕಿನ ಭಾಷಾನೀತಿ ಬದಲಾಗಲಿ: ರಾಜ್ಯಪಾಲರಿಗೊಂದು ಪಿಟಿಷನ್‌



ಗೌರವಾನ್ವಿತ ರಾಜ್ಯಪಾಲರು,
ಕರ್ನಾಟಕ ರಾಜ್ಯ
ರಾಜಭವನ, ಬೆಂಗಳೂರು

ಮಾನ್ಯರೇ,

ವಿಷಯ: ಇಂದಿನ ಭಾರತದ ತೊಡಕಿನ ಭಾಷಾನೀತಿಯನ್ನು ಕೈಬಿಡಬೇಕು. ಸಂವಿಧಾನಾತ್ಮಕವಾಗಿ ಹಿಂದೀ ಹೇರಿಕೆಯನ್ನು ಮಾಡುವುದನ್ನು ನಿಲ್ಲಿಸಬೇಕು. ಎಲ್ಲಾ ಭಾಷಾ ವೈವಿಧ್ಯತೆಗಳಿಗೆ ಸಮಾನ ಗೌರವ ತರುವ ಭಾಷಾನೀತಿಯನ್ನು ಭಾರತದ ಸಂಸತ್ತು ರೂಪಿಸಬೇಕೆಂಬ ಆಗ್ರಹ.

೧೯೫೦ರ ಸಂವಿಧಾನದಲ್ಲಿ ಹಿಂದೀ ಭಾಷೆಗೆ ಉಳಿದೆಲ್ಲಾ ಭಾಷೆಗಳಿಗಿಂತಲೂ ಮೇಲಿನ ಸ್ಥಾನ ನೀಡಲಾಗಿದೆ. ಈ ಮೂಲಕ ಹಿಂದೀಯೇತರ ಭಾಷೆಗಳ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ. ಭಾರತದ ಅಧಿಕೃತ ಆಡಳಿತ ಭಾಷೆಯ ಪಟ್ಟವನ್ನು ಹಿಂದೀ/ ಇಂಗ್ಲೀಶ್ ಭಾಷೆಗಳಿಗೆ ಮಾತ್ರಾ ನೀಡಲಾಗಿದೆ. ಈ ಮೂಲಕ ಭಾರತದ ಇತರೆ ಭಾಷಿಕರನ್ನು ಹಿಂದೀ ಇಂಗ್ಲೀಷ್ ಭಾಷೆಗಳು ಬಾರದ ಕಾರಣಕ್ಕಾಗಿ ಎರಡನೆ ದರ್ಜೆಯ ಪ್ರಜೆಗಳನ್ನಾಗಿಸಲಾಗಿದೆ. ಶಾಲಾ ಹಂತದಿಂದಲೇ, ಹಿಂದೀ ಭಾಷಿಕ ಪ್ರದೇಶಗಳಿಗೆ ಅನ್ವಯವಾಗದ ತ್ರಿಭಾಷಾಸೂತ್ರವನ್ನು ಬಳಸಿ, ನಮ್ಮ ಮಕ್ಕಳ ಮೇಲೆ ಹಿಂದೀಯನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ. ಭಾರತದಂತಹ ವೈವಿಧ್ಯತೆಯ ನಾಡಿನಲ್ಲಿ ಇಂತಹ ತಾರತಮ್ಯವು ಒಗ್ಗಟ್ಟನ್ನು ಹುಟ್ಟುಹಾಕುವ ಬದಲಿಗೆ ಒಡಕಿಗೆ ಕಾರಣವಾಗಲಿದೆ ಎನ್ನುವ ಆತಂಕದಿಂದ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಭಾರತದ ಸಂವಿಧಾನದ ೩೪೩ನೇ ವಿಧಿಯಿಂದ ೩೫೧ನೇ ವಿಧಿಯವರೆಗೆ ಬರೆಯಲಾಗಿರುವ ಭಾಷಾನೀತಿಯನ್ನು ಕೂಡಲೇ ಬದಲಿಸಲು ಕ್ರಮ ಕೈಗೊಳ್ಳಬೇಕೆಂದು ನಾವುಗಳು ಆಗ್ರಹಿಸುತ್ತೇವೆ.

ನಮ್ಮ ಹಕ್ಕೊತ್ತಾಯಗಳು ಇಂತಿವೆ:

೧. ಭಾರತವು ಇದೀಗ ಅನುಸರಿಸುತ್ತಿರುವ ಭಾಷಾನೀತಿಗೆ ತಿದ್ದುಪಡಿ ತಂದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನೂ ಕೇಂದ್ರಸರ್ಕಾರದ ಅಧಿಕೃತ ಆಡಳಿತ ಭಾಷೆಗಳೆಂದು ಘೋಷಿಸಬೇಕು.
೨. ವಿಶ್ವಸಂಸ್ಥೆಯ (UNESCO) ಬಾರ್ಸಿಲೋನಾ ಭಾಷಾಹಕ್ಕು ಘೋಷಣೆಯಲ್ಲಿನ ಪ್ರತಿಯೊಂದು ಹಕ್ಕೂ ಭಾರತದ ಪ್ರತಿಯೊಂದು ಭಾಷಾ ಸಮುದಾಯಕ್ಕೂ ದೊರೆಯಬೇಕು.

ಈ ಪಿಟಿಶನ್‌ಗೆ ಸಹಿ ಮಾಡಲು ಈ ಕೊಂಡಿಯನ್ನು ಕ್ಲಿಕ್ಕಿಸಿ:http://chn.ge/PPYM80
Related Posts with Thumbnails