ಬದಲಾಗಬೇಕಾದ್ದು ಭಾರತದ ಸಂವಿಧಾನವೇ ಹೊರತು... ನ್ಯಾಯದ ಬೇಡಿಕೆಯಲ್ಲಾ!


ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕಾರಣ ಕನ್ನಡವನ್ನು ಕನ್ನಡನಾಡಿನ ಹೈಕೋರ್ಟಿನ ಆಡಳಿತ ಭಾಷೆ ಮಾಡಲು ಆಗುವುದಿಲ್ಲ ಎನ್ನುವ ತೀರ್ಪನ್ನು ರಾಜ್ಯ ಉಚ್ಚನ್ಯಾಯಾಲಯ ನೀಡಿದೆಯೆನ್ನುವ ಸುದ್ದಿ ಬಂದಿದೆ. ಸಂವಿಧಾನದ ೩೪೮ನೇ ವಿಧಿಯ ಅನ್ವಯ ಈ ತೀರ್ಪು ಕೊಟ್ಟಿರುವುದಾಗಿ ನ್ಯಾಯಾಲಯ ಹೇಳಿದೆ. ತಮಾಶೆಯೆಂದರೆ "ನ್ಯಾಯವಾದಿಗಳು ಬೇರೆಬೇರೆ ರಾಜ್ಯಗಳ ನ್ಯಾಯಾಲಯದಲ್ಲಿ ವಾದ ಮಾಡಲು ಹೀಗಿರುವುದು ಅನುಕೂಲ" ಎನ್ನುವ ಮೂಲಕ ವೈವಿಧ್ಯತೆಯನ್ನು ನ್ಯಾಯಾಲಯವೂ ಶಾಪವೆಂದು ಪರಿಗಣಿಸಿರುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಏನಿದು ೩೪೮ನೇ ಕಾಲಂ? ಅದರಲ್ಲಿ ಏನು ಹೇಳಿದೆ?

ಭಾರತದ ಸಂವಿಧಾನ: ೩೪೮ನೇ ವಿಧಿ

ಸಂವಿಧಾನದ XVIIನೇ ಭಾಗವು ಭಾರತದ ಆಡಳಿತ ಭಾಷೆಯ ಬಗ್ಗೆ ಮಾತಾಡುತ್ತದೆ. ಇದರ ಅಡಿಯಲ್ಲಿ ೩೪೩ರಿಂದ ೩೫೧ನೇ ವಿಧಿಯವರೆಗಿನ ಕಾಲಮುಗಳಲ್ಲಿ ಈ ಬಗ್ಗೆ ಬರೆಯಲಾಗಿದೆ. ಸಮಾನತೆಯೇ ಜೀವಾಳ ಎಂದು ಹೇಳುವ ಭಾರತ ಸಂವಿಧಾನದಲ್ಲಿನ ಹಸಿ ತಾರತಮ್ಯ ಈ ಕಾಲಂಗಳಲ್ಲಿ ಬರೆದಿರುವುದು ಎದ್ದು ಕಾಣುತ್ತದೆ. ಹಿಂದೀಯನ್ನು ಭಾರತದ ಆಡಳಿತ ಭಾಷೆಯೆಂದು ಘೋಷಿಸಿರುವುದರ ಜೊತೆಯಲ್ಲಿ ಹಿಂದೀಯ ಪ್ರಚಾರಕ್ಕಾಗಿ ದುಡಿಯಬೇಕಾದ್ದು ಭಾರತ ಸರ್ಕಾರದ ಕರ್ತವ್ಯ ಎಂದು ಹೇಳಿದೆ. ಆದರೆ ೩೪೮ರಲ್ಲಿ ಮಾತ್ರಾ ನ್ಯಾಯಾಲಯದ ಭಾಷೆ ಇಂಗ್ಲೀಶ್ ಮಾತ್ರಾ ಆಗಿರಬೇಕೆಂದು ಹೇಳಲಾಗಿದೆ. ಈ ವಿಧಿಯಲ್ಲಿ ರಾಜ್ಯಗಳ ಆದೇಶ, ಕಾನೂನು ಕಾಯ್ದೆಗಳೆಲ್ಲಾ ಇಂಗ್ಲೀಶಿನಲ್ಲಿಯೇ ಇರಬೇಕೆಂದೂ ಹೇಳುತ್ತಿದೆ. ಭಾರತದ ರಾಷ್ಟ್ರಪತಿಗಳು ಅನುಮತಿ ನೀಡಿದರೆ ಹಿಂದೀ ಅಥವಾ ಇತರೆ ಭಾಷೆಗಳನ್ನು ಬಳಸಬಹುದೆಂದು ಹೇಳಲಾಗಿದೆ.


348. Language to be used in the Supreme Court and in the High Courts and for Acts, Bills, etc.—
(1) Notwithstanding anything in the foregoing provisions of this Part, until Parliament by law otherwise provides—

(a) all proceedings in the Supreme Court and in every High Court,
(b) the authoritative texts—
(i) of all Bills to be introduced or amendments thereto to be moved in either House of Parliament or in the House or either House of the Legislature of a State,
(ii) of all Acts passed by Parliament or the Legislature of a State and of all Ordinances promulgated by the president or the Governor of a State, and
(iii) of all orders, rules, regulations and bye-laws issued under this Constitution or under any law made by Parliament or the Legislature of a State, shall be in the English language.
(2) Notwithstanding anything in sub-clause (a) of clause (1), the Governor of a State may, with the previous consent of the President, authorise the use of the Hindi language, or any other language used for any official purposes of the State, in proceedings in the High Court having its principal seat in that State: Provided that nothing in this clause shall apply to any judgment, decree or order passed or made by such High Court.
ಈ ವಿಧಿಯ ಎರಡನೇ ಭಾಗದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪೂರ್ವಾನುಮತಿಯೊಡನೆ ಇಂಗ್ಲೀಶ್ ಅಲ್ಲದ ಬೇರೆ ನುಡಿಯನ್ನು ಬಳಸಲು ಅನುಮತಿ ನೀಡಬಹುದು ಎಂದಿದೆ. ತಮಾಶೆಯೆಂದರೆ ಹೀಗೆ ಬರೆಯುವಾಗ ಹಿಂದೀ ಅಥವಾ ಬೇರಾವುದೇ ಭಾಷೆಯನ್ನು ಎಂದು ಬರೆಯಲಾಗಿದೆ. ಯಾಕೆ ಹೀಗೆ ಹಿಂದೀಯೊಂದನ್ನೇ ಹೆಸರಿಸಿದ್ದಾರೆ ಎಂದರೆ ೩೪೩ನೇ ವಿಧಿಯಲ್ಲಿ ಹಿಂದೀ ಭಾರತದ ಆಡಳಿತ ಭಾಷೆ ಎನ್ನುವುದೇ ಕಾರಣವಾಗಿದೆ.

ಬದಲಾಗಲಿ ಹುಳುಕಿನ ಭಾಶಾ ನೀತಿ! ಬದಲಾಗಲಿ ಸಂವಿಧಾನ!!

ಹೌದೂ! ಕನ್ನಡನಾಡಿನ ನ್ಯಾಯಾಲಯದ ಆಡಳಿತದಲ್ಲಿ ಕನ್ನಡ ಭಾಷೆಯನ್ನೇ ಬಳಸಬಾರದು ಎನ್ನುವ, ಕನ್ನಡನಾಡಿನ ವಾಹನಗಳ ನಂಬರ್ ಪ್ಲೇಟ್ ಕನ್ನಡದಲ್ಲಿರುವುದೇ ಅಪರಾಧ ಎನ್ನುವ, ಕನ್ನಡ ನಾಡಿನ ಬ್ಯಾಂಕುಗಳಲ್ಲಿ ಕನ್ನಡವಿಲ್ಲದಿದ್ದರೂ ಸರಿ ಹಿಂದೀ ಇಂಗ್ಲೀಶ್ ಇರಬೇಕೆನ್ನುವ, ಕನ್ನಡನಾಡಿನ ಮೆಟ್ರೋದಲ್ಲಿ ಹಿಂದೀ ಇರಬೇಕೆನ್ನುವ, ಕನ್ನಡನಾಡಿನ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಇರುವೆ ಗಾತ್ರದ ಅಕ್ಷರಗಳ ಮೂರನೇ ಸ್ಥಾನಕ್ಕೆ ದೂಡಿರುವ... ಭಾಷಾನೀತಿ ಹುಳುಕಿನದ್ದು ಎನ್ನದೇ ಬೇರೆ ದಾರಿಯಿಲ್ಲ. ಈ ಭಾಷಾನೀತಿ ಬದಲಾಗದಿದ್ದರೆ ಹಿಂದೀಯೇತರರು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿಯೇ ಬದುಕಬೇಕಾಗುತ್ತದೆ. ಸಂವಿಧಾನದ ೮ನೇ ಕಲಮ್ಮಿನಲ್ಲಿ ಸೂಚಿತವಾಗಿರುವ ಎಲ್ಲಾ ೨೨ ಭಾಷೆಗಳೂ ಭಾರತದ ಆಡಳಿತ ಭಾಷೆಗಳು ಎನ್ನುವ ಬದಲಾವಣೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಎನ್ನುವ ಬದಲಾವಣೆ ಭಾರತದ ಸಂವಿಧಾನಕ್ಕೆ ತುರ್ತಾಗಿ ಆಗಬೇಕಾಗಿದೆ! ಹೌದಲ್ವ ಗುರೂ!?

1 ಅನಿಸಿಕೆ:

ಪ್ರಶಾಂತ ಸೊರಟೂರ ಅಂತಾರೆ...

ಬ್ರಿಟೀಶರು ಇಂಗ್ಲಿಶ ಹೇರಿದರು, ಭಾರತೀಯರನ್ನು ಗೋಳು ಹೊಯ್ದುಕೊಂಡರು ಅಂತೆಲ್ಲಾ ಇತಿಹಾಸ ವಿಶಯದಲ್ಲಿ ಕಲಿಸುತ್ತಾರೆ! ಸ್ವದೇಶಿ ಚಳುವಳಿಯಿಂದ ಇಂಗ್ಲಿಶರನ್ನು ಹೊಡೆದೋಡಿಸಿ ಭಾರತವನ್ನು ಸ್ವತಂತ್ರಗೊಳಿಸಲಾಯಿತು ಅನ್ನುವಂತ ಸಾಲುಗಳು ಇರುತ್ತೆ.
ಆದರೆ ಮೇಲಿನ ವಿಶಯ ನೋಡಿದರೆ ಕನ್ನಡಿಗರಿಗೆ ನಿಜವಾಗಲೂ (ಇಂದಿಗೂ) ಸ್ವತಂತ್ರ ಸಿಕ್ಕಿತೆ ಅನ್ನುವ ಸಂಶಯ ಮೂಡುತ್ತೆ.ನ್ಯಾಯಲಯದಲ್ಲಿ ಕನ್ನಡ ಬಳಕೆ ಮಾಡಲಾಗದು ಅಂದರೆ ಏನರ್ಥ ? ನಿಜವಾಗಿ ಎಲ್ಲಕ್ಕಿಂತ ಮೊದಲು ಕನ್ನಡ ಬಳಕೆಯಾಗಬೇಕಿರುವುದು ನ್ಯಾಯಾಲಯದಲ್ಲಿಯೇ, ಯಾಕಂದ್ರೆ ನ್ಯಾಯಲಯದ ತೀರ್ಪಿನ ಹಿನ್ನೆಲೆ, ಅದರ ನಡೆ-ನುಡಿ ಎಲ್ಲವೂ ನ್ಯಾಯ ಕೇಳಲು ಬಂದ ಜನಸಾಮಾನ್ಯರಿಗೆ ತಿಳಿಯಬೇಕು, ಅದು ಬಿಟ್ಟು ನ್ಯಾಯವಾದಿಗಳಿಗೆ ರಾಜ್ಯದಿಂದ ರಾಜ್ಯಕ್ಕೆ ಓಡಾಡಲು, ವಾದ ಮಾಡಲು ನೆರವಾಗುತ್ತೆ ಅದಕ್ಕೆ ಇಂಗ್ಲಿಶ ಇರಲಿ ಅಂದರೆ ಏನನ್ನುವುದು ?
’ಏನಗುರು" ಬರೆದಂತೆ, ಬದಲಾಗಬೇಕಿರುವುದು ಭಾರತದ ಸಂವಿಧಾನ ಹೊರತು ಕನ್ನಡವನ್ನು ಅಳವಡಿಸಿಕೊಳ್ಳಿ ಅನ್ನುವ ನ್ಯಾಯವಾದ ಬೇಡಿಕೆಯಲ್ಲಾ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails