ನಮ್ಮ ಮೆಟ್ರೋ: ರಾಜ್ಯ ಮಾಹಿತಿಹಕ್ಕು ಆಯೋಗದಿಂದ ವಿಚಾರಣೆ ಆರಂಭ!


ನಮ್ಮ ಮೆಟ್ರೋದಲ್ಲಿ ಬಳಕೆಯಾಗಿರುವ ಭಾಷಾನೀತಿಯನ್ನು ಕುರಿತು ಕಳೆದ ೨೦೧೧ರ ಅಕ್ಟೋಬರ್ ತಿಂಗಳಿನಲ್ಲಿ ಒಂದು ಆರ್‌ಟಿಐ ಸಲ್ಲಿಸಲಾಗಿತ್ತು. ಇದಕ್ಕೆ ಮೆಟ್ರೋ ಸಂಸ್ಥೆಯ ವತಿಯಿಂದ ಯಾವ ಪ್ರತಿಕ್ರಿಯೆಯೂ ದೊರಕಲಿಲ್ಲ! ಮೂವತ್ತು ದಿನಗಳಲ್ಲಿ ಉತ್ತರ ನೀಡಬೇಕಾದ ಕಾನೂನಾತ್ಮಕವಾದ ಬದ್ಧತೆಯಿದ್ದಾಗಲೂ ಮೆಟ್ರೋ ಸುಮ್ಮನಿದ್ದಿತು.

ಮನವಿ! ಮರು ಮನವಿ!

ಮೂವತ್ತು ದಿನಗಳ ಗಡುವು ಮುಗಿದು ನಲವತ್ತೈದು ದಿನಗಳು ಕಳೆದುಹೋದ ನಂತರವೂ ಯಾವ ಪ್ರತಿಕ್ರಿಯೆ ಬರದ ಕಾರಣದಿಂದಾಗಿ, ಮುಂದಿನಕ್ರಮವಾಗಿ ಮೊದಲ ಮೇಲ್ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೂ ಯಾವುದೇ ಪ್ರತಿಕ್ರಿಯೆಯನ್ನು ನಮ್ಮ ಮೆಟ್ರೋ ನೀಡಲಿಲ್ಲ... ನಂತರ ಮುಂದುವರೆದು ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ೨೦೧೨ರ ಫೆಬ್ರವರಿಯಲ್ಲಿ ದೂರನ್ನು ಸಲ್ಲಿಸಲಾಯಿತು. ಇದೀಗ, ಅಂದರೆ ಆರು ತಿಂಗಳುಗಳ ನಂತರ ಕರ್ನಾಟಕ ರಾಜ್ಯ ಮಾಹಿತಿಹಕ್ಕು ಆಯೋಗವು ನಮ್ಮ ಮೆಟ್ರೋ ಸಂಸ್ಥೆಯ ಸಂಬಂಧಿಸಿದ ಅಧಿಕಾರಿಗಳಿಗೆ ಒಂದು ನೋಟೀಸನ್ನು ಜಾರಿ ಮಾಡಿದೆ. ಇದರಲ್ಲಿ ದಿನಾಂಕ ೦೩.೧೦.೨೦೧೨ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ. "ಮಾಹಿತಿಹಕ್ಕು ಅರ್ಜಿಗೆ ಯಾವುದೇ ಉತ್ತರ ನೀಡದ್ದಕ್ಕಾಗಿ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು?" ಎಂದು ಕೂಡಾ ಕೇಳಲಾಗಿದೆ.

ಅಂತೂ ಅರ್ಜಿದಾರರಿಗೆ, ಮಾಹಿತಿಹಕ್ಕು ಕಾಯ್ದೆಯನ್ವಯ ಕೇಳಿದ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಈ ವಿಚಾರಣೆ ಸಹಾಯ ಮಾಡಲಿದೆ. ನಮ್ಮ ಮೆಟ್ರೋದ ಅಧಿಕಾರಿಗಳು ಈ ನೋಟೀಸಿಗೆ ಹೇಗೆ ಪ್ರತಿಕ್ರಿಯಿಸುವರೋ ಎನ್ನುವ ಕುತೂಹಲಕ್ಕೆ ಉತ್ತರ ಅಕ್ಟೋಬರ್  ಮೂರನೇ ತಾರೀಕಿನಂದು ಉತ್ತರ ದೊರೆಯಲಿದೆ. ಈ ವಿಚಾರಣೆಯು ಮಾಹಿತಿ ಹಕ್ಕು ಅರ್ಜಿದಾರರ ಎದುರಿನಲ್ಲಿಯೇ ನಡೆಯಲಿರುವುದು ವಿಶೇಷವಾಗಿದೆ.

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails