ನೀತಿಯೇ ಇರದ ನಾಡಲ್ಲಿ ರಾಜಕೀಯ ಲಾಬಿಯ ಹೊಲಸಾಟವೇ ಪ್ರಭಾವಿ!


ಇದೀಗ ತಾನೆ ನವದೆಹಲಿಯಲ್ಲಿ ನಡೆಯುತ್ತಿದ್ದ ಕಾವೇರಿ ನೀರು ಹಂಚಿಕೆಯ ಕುರಿತು ಮಾನ್ಯ ಪ್ರಧಾನಮಂತ್ರಿಗಳ ಜೊತೆ ನಡೆಯುತ್ತಿದ್ದ ಸಭೆ ವಿಫಲವಾದ ಸುದ್ದಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸಭೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳು ತಮಿಳುನಾಡಿಗೆ ಪ್ರತಿದಿನ ೯೦೦೦ ಕ್ಯುಸೆಕ್ ನೀರು ಬಿಡಬೇಕೆಂದು ಹೇಳಿದರಂತೆ.. ಅದಕ್ಕೆ ರಾಜ್ಯ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ತಂಡ ವಿರೋಧ ಸೂಚಿಸಿ, ಸಭೆಯನ್ನು ಬಹಿಷ್ಕರಿಸಿ ಹೊರಬಂದರಂತೆ! ಇನ್ನು "ಕರ್ನಾಟಕ ಮೊಂಡು ರಾಜ್ಯ, ಇವರಿಗೆ ಸೌಹಾರ್ದತೆ ಬೇಕಿಲ್ಲಾ, ಇವರು ಭಾರತದ ಒಗ್ಗಟ್ಟಿಗೆ ಮಾರಕ" ಇತ್ಯಾದಿ ಅಪಪ್ರಚಾರಗಳು ಶುರುವಾಗುವ ಸಾಧ್ಯತೆಗಳಿವೆ. ಜೊತೆಗೆ ನ್ಯಾಯಾಲಯವೂ ಕೂಡಾ, ರಾಜ್ಯ ಹೀಗೆ ತಿರಸ್ಕರಿಸಿದ್ದನ್ನು ತನ್ನ ತೀರ್ಪುಗಳನ್ನು ನೀಡುವಾಗ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯೂ ಇದೆ. ಇರಲಿ... ಮೊದಲಿಗೆ ಹೇಳಬೇಕಾದ್ದು ಈ ನಡೆ ನಾಳೆ ಏನೇ ಪರಿಣಾಮ ಬೀರಿದರೂ ಸರಿ, ಕನ್ನಡನಾಡಿನ ಒಳಿತಿನ ದೃಷ್ಟಿಯಿಂದ ಖಂಡಿತಾ ದಿಟ್ಟವಾದದ್ದಾಗಿದೆ. ಕರ್ನಾಟಕ ಸರ್ಕಾರ ಗಟ್ಟಿಯಾದ ರೈತಪರ, ನಾಡಪರ ನಿಲುವನ್ನು ತೆಗೆದುಕೊಂಡಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆಗಳು. ಈ ಸಂದರ್ಭದಲ್ಲಿ ನಾವು ಮತ್ತೊಂದಷ್ಟು ವಿಷಯಗಳತ್ತ ಕಣ್ಣು ಹಾಯಿಸಬೇಕಾಗಿದೆ.

ನೀತಿಯಲ್ಲಾ! ರಾಜಕಾರಣ

ಈ ಬಾರಿ ಮಳೆ ಸರಿಯಾಗಿ ಆಗದೆ ಕರ್ನಾಟಕದ ಅಣೆಕಟ್ಟೆಗಳಲ್ಲಿ ಕಡಿಮೆ ನೀರಿದೆ. ಆದರೆ ತಮಿಳುನಾಡು ಕಾವೇರಿ ನೀರು ಬಿಡಲು ಕರ್ನಾಟಕದ ಮೇಲೆ ಒತ್ತಡ ಹಾಕಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೂ ಹತ್ತಿದೆ. ನ್ಯಾಯಾಲಯ ಕರ್ನಾಟಕವು ಪ್ರತಿನಿತ್ಯ ಹತ್ತುಸಾವಿರ ಕ್ಯುಸೆಕ್ ನೀರನ್ನು, ಪ್ರಾಧಿಕಾರದ ಸಭೆ ನಡೆಯುವ ಸೆಪ್ಟೆಂಬರ್ ಹತ್ತೊಂಬತ್ತರವರೆಗೆ ಬಿಡಲು ಸೂಚಿಸಿತ್ತು! ಇಂದು ನಡೆದ ಸಭೆಯಲ್ಲಿ ಮನಮೋಹನ್ ಸಿಂಗ್‌ರವರು ಕರ್ನಾಟಕದ ಮೇಲೆ ಭಾರೀ ದಯೆ ತೋರಿಸಿ ಒಂದು ಸಾವಿರ ಕ್ಯುಸೆಕ್ ಕಮ್ಮಿ ಬಿಡಲು ಸೂಚಿಸಿದ್ದಾರೆ. ಕರ್ನಾಟಕವು "ನಮ್ಮ ನಾಡಲ್ಲಿ ಮುಂಗಾರು ಮುಗಿದು ಹೋಗಿದೆ, ಇನ್ನು ನಮ್ಮ ಅಣೆಕಟ್ಟುಗಳು ತುಂಬುವ ಸಾಧ್ಯತೆಯಿಲ್ಲ. ಇರುವಷ್ಟು ನೀರಲ್ಲಿ ಇಡೀ ವರ್ಷ ಬದುಕಬೇಕು. ಆದರೆ ತಮಿಳುನಾಡಿಗೆ ಅಕ್ಟೋಬರ್ ೧೫ರ ಹೊತ್ತಿಗೆ ಹಿಂಗಾರು ಆರಂಭವಾಗಲಿದೆ. ಅಲ್ಲಿನ ಮೆಟ್ಟೂರು ಅಣೆಕಟ್ಟೆಯಲ್ಲಿ ನಮ್ಮ ಕೆಆರ್‌ಎಸ್ಸಿನಲ್ಲಿರುವುದಕ್ಕಿಂತಾ ಹೆಚ್ಚು ನೀರು ಈಗಲೇ ಇದೆ. ದಯಮಾಡಿ ಅಕ್ಟೋಬರ್ ೧೫ರವರೆಗೆ ಕಾಯೋಣ. ಆಗ ತಮಿಳುನಾಡಿನಲ್ಲಿಯೂ ಮಳೆ ಕೊರತೆಯಾದರೆ ಸಂಕಷ್ಟವನ್ನು ಸಮಾನವಾಗಿ ಹಂಚಿಕೊಳ್ಳೋಣ..." ಎಂದು ಗೋಗರೆದರೂ ಪ್ರಧಾನಮಂತ್ರಿಗಳಿಗೆ ಅದು ಮನವರಿಕೆಯಾಗಲಿಲ್ಲ. ಒಟ್ಟು ಒಂದು ಚಪ್ಪಡಿಯನ್ನು ಕರ್ನಾಟಕದ ತಲೆಯ ಮೇಲೆ ಎಳೆದೇ ಬಿಡಲು ಮುಂದಾದರು!

ಸರಿ. ಏನಪ್ಪಾ ಇದಕ್ಕೆ ಏನಾದರೂ ಮಾನದಂಡವಿದೆಯೇ ಎಂದು ನೋಡಿದರೆ ಅಚ್ಚರಿಯಾಗುತ್ತದೆ. ಸ್ವಾತಂತ್ರ್ಯ ಬಂದು ಅರವತ್ತೈದು ವರ್ಷಗಳ ನಂತರವೂ ಈ ದೇಶದಲ್ಲಿ ಒಂದು ವೈಜ್ಞಾನಿಕವಾದ ರಾಷ್ಟ್ರೀಯ ಜಲನೀತಿ ಇಲ್ಲ... ಸಂಕಷ್ಟದಲ್ಲಿ ನೀರುಹಂಚಿಕೆ ಹೇಗೆ ಎಂಬ ಮಾನದಂಡವಿಲ್ಲ... ಹಾಗಾದರೆ ಪ್ರಧಾನಿ ಯಾವ ಆಧಾರದ ಮೇಲೆ ತೀರ್ಮಾನ ನೀಡಿದರು? ಯಾವುದಾದರೂ ಅಂಕಿ ಅಂಶ, ಹಿಂದಿನ ವರ್ಷಗಳ ಲೆಕ್ಕಾಚಾರಗಳನ್ನೇನಾದರೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆಯೇ ಎಂದು ನೋಡಿದರೆ ಅಂಥಾ ಯಾವ ಬದನೆಕಾಯೂ ಇಲ್ಲಾ... ‘ಎರಡು ರಾಜ್ಯಗಳು ಕಚ್ಚಾಡಬಾರದು, ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು, ನಾವೆಲ್ಲಾ ಭಾರತೀಯರು’ ಎನ್ನೋ ಅದೇ ಹಳೇ ಪುಂಗೀನಾ ಕನ್ನಡದೋರ ಮುಂದೆ ಊದಿ ತೀರ್ಮಾನ ಕೊಡಕ್ಕೆ ಮುಂದಾಗಿದ್ದಂಗಿದೆ. ಇದು ಪಕ್ಕಾ ರಾಜಕೀಯ ಲೆಕ್ಕಾಚಾರದ ತೀರ್ಮಾನವಾಗಿದೆ ಎಂದು ಅನುಮಾನ ಪಡಲು ಬೇಕಾದಷ್ಟು ಕಾರಣಗಳಿವೆ.

ತಮಿಳುನಾಡಿನ ರಾಜಕೀಯ ಲಾಬಿ!

ಇದುವರೆಗೂ ಡಿಎಂಕೆ ಪಕ್ಷ ಕಾಂಗ್ರೆಸ್ ಜೊತೆಯಲ್ಲಿ ಯುಪಿಏ ಅಂಗವಾಗಿದೆ. ಕೇಂದ್ರ ಸಂಪುಟದಲ್ಲಿ ಎಷ್ಟೊಂದು ಪ್ರಭಾವಿ ಸಚಿವರಾಗಿದ್ದಾರೆ. ತಮ್ಮ ರಾಜ್ಯಕ್ಕೆ ಬೇಕಿದ್ದನ್ನೆಲ್ಲಾ ಲಾಬಿ ಮಾಡಿ ದಕ್ಕಿಸಿಕೊಳ್ಳೋದ್ರಲ್ಲಿ ಎತ್ತಿದ ಕೈ ಅವರದ್ದು! ಇದೀಗ ಅಲ್ಲಿನ ಜಯಾಲಲಿತಾ ಮೇಡಂ ಕೂಡಾ ಇಂಥದೇ ಚೌಕಾಸಿಗೆ ಇಳಿದಿದ್ದಾರೆ ಅಷ್ಟೇ. ಇನ್ನೊಂದೆರಡು ವರ್ಷದಲ್ಲಿ ಚುನಾವಣೆ ಬಂದರೆ ಮೈತ್ರಿ ಬೇಕಾಗುತ್ತೆ! ಈಗ ಡಿಎಂಕೆ ಕೈ ಕೊಟ್ಟರೆ ಬೆಂಬಲಕ್ಕೆ ಜಯಲಲಿತಾ ಅವರ ಪಕ್ಷದ ಐವರು ಸಂಸದರು ಲೋಕಸಭೆಯಲ್ಲೂ, ಐವರು ರಾಜ್ಯಸಭೆಯಲ್ಲೂ ಇದ್ದಾರೆ. ಇನ್ನೂ ಬೇಕೆಂದರೆ ಈ ತೀರ್ಪು ತಮಿಳುನಾಡಿನ ಪರವಾಗಿದ್ದರೆ ಬೆಂಬಲ ಹಿಂತೆಗೆಯುವುದಿಲ್ಲಾ ಎಂದು ಸ್ವತಃ ಡಿಎಂಕೆ ಹೇಳಿದರೂ ತೀರ್ಪು ಆ ಕಡೆ ವಾಲುವ ಸಾಧ್ಯತೆಯಿದೆ. ಇಷ್ಟಕ್ಕೂ ಕರ್ನಾಟಕ ರಾಜ್ಯದಲ್ಲಿ ಇಂಥಾ ಲಾಬಿ ಮಾಡೋ ತಾಕತ್ತು ಈಗಿನ ಯಾವ ಪಕ್ಷಕ್ಕಿದೆ?

ಬಿಜೆಪಿ ಸದಾ ರಾಜ್ಯದ ಪರವಾಗಿರಲು ಸಾಧ್ಯವೇ?

ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರ ಈ ಬಾರಿ ರಾಜ್ಯದ ಪರ ನಿಲುವು ತೆಗೆದುಕೊಂಡಿದೆ ಎಂದುಕೊಂಡರೂ... ಇದೇನು ಶಾಶ್ವತವಾದ ರಾಜ್ಯ್ಜಪರವಾದ ಗಟ್ಟಿ ನಿಲುವು ಅನ್ನುವಂತಿಲ್ಲಾ. ಹಿಂದೆ ಕಳಸಾ ಭಂಡೂರ ಯೋಜನೆಯ ಕಾಲದಲ್ಲಿ ರಾಜ್ಯದ ಯೋಜನೆಗ ಕೊಟ್ಟಿದ್ದ ಅನುಮತಿಯನ್ನು ಹಿಂತೆಗೆದದ್ದು ಇದೇ ಬಿಜೆಪಿಯ ಕೈಲಿದ್ದ ಕೇಂದ್ರಸರ್ಕಾರವೇ! ಹಾಗಾದರೆ ನಾವು ರಾಷ್ಟ್ರೀಯ ಪಕ್ಷಗಳನ್ನು ಆಧರಿಸಬಾರದೇ? ಯಾವ ದೇಶದಲ್ಲಿ ಒಂದು ವೈಜ್ಞಾನಿಕ ರಾಷ್ಟ್ರೀಯ ಜಲನೀತಿಯೇ ಇರದೆ ಬರೀ ರಾಜಕೀಯ ಲಾಬಿಗಳು ಪ್ರಭಾವಶಾಲಿಯಾಗಿವೆಯೋ ಅಂಥಾ ದೇಶದಲ್ಲಿ ನಾವು ಇಂಥದ್ದೇ ಲಾಬಿಯನ್ನು ಇನ್ನೂ ಚೆನ್ನಾಗಿ ಮಾಡಿದರೆ ಮಾತ್ರಾ ಉಳಿಯಲು ಸಾಧ್ಯ ಎನ್ನಿಸುವುದಿಲ್ಲವೇ? ಇಂಥಾ ಲಾಬಿ ಮಾಡುವುದಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಎಂದೆಂದಿಗೂ ಅಸಾಧ್ಯ. ಹಾಗೆ ಅವು ಮಾಡಿದರೂ ಕರ್ನಾಟಕದಂತಹ ೨೮ ಸಂಸದರ ನಾಡಿನ ಪರವಾಗಿ ಮಾಡದೆ ೩೯ರ ತಮಿಳುನಾಡು, ೪೮ರ ಮಹಾರಾಷ್ಟ್ರ, ೪೨ರ ಆಂಧ್ರಪ್ರದೇಶದ ಪರ ಲಾಬಿ ಮಾಡೋದು ರಾಜಕೀಯವಾಗಿ ಲಾಭಕಾರಿಯಲ್ಲವೇ? ಇಂಥಾ ಕಹಿವಾಸ್ತವದಲ್ಲಿ ಕರ್ನಾಟಕದಲ್ಲಿ ಬಲಿಷ್ಠವಾಗಿರುವ ಪ್ರಾದೇಶಿಕ ಪಕ್ಷವೇ ಪರಿಹಾರ ಅನ್ನಿಸಲ್ವಾ ಗುರೂ? ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೂ ಬೆಂಬಲಕ್ಕಾಗಿ ಡಿಎಂಕೆ/ ಎಐಡಿಎಂಕೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಕಾಂಗ್ರೆಸ್ಸಿಗೆ ಇದ್ದರೆ ಖಂಡಿತಾ ಈ ಸಭೆಯ ನಿಲುವು ಕರ್ನಾಟಕಕ್ಕೆ ವಿರುದ್ಧವಾಗಿಯೇ ಇರುತ್ತಿತ್ತು ಅನ್ನಿಸದೇ? ಅಕಸ್ಮಾತ್ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದಿದ್ದರೆ ರಾಜ್ಯದಲ್ಲಿ ಈಗಿನದೇ ಸರ್ಕಾರವಿದ್ದಿದ್ದರೂ ಇದೇ ಗೋಳು ತಾನೇ ಇರುತ್ತಿತ್ತು? ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರುಗಳಿಗೆ ರಾಜ್ಯದ ಪರವಾಗಿ ನಿಜವಾಗ್ಲೂ ಬದ್ಧತೆ/ ಪ್ರೀತಿ/ ಕಾಳಜಿ ಇದ್ದಾಗಲೂ ಕೂಡಾ ಅವರ ಅಸಹಾಯಕತೆಯನ್ನು ನಾವು ಊಹಿಸಬಹುದು!
ಇದಕ್ಕೆ ಇರೋದು ಒಂದೇ ಪರಿಹಾರ!

ಹೌದು! ರಾಜ್ಯದ ಹಿತ ಕಾಯೋಕೆ ಬೇಕಿರೋದು ಹೈಕಮಾಂಡ್ ಎಂಬ ದೆಹಲಿ ದೊರೆಗಳ ದಾಸ್ಯಕ್ಕೊಳಗಾಗಿರದ, ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷ. ಯೋಗ್ಯವಾದ ನೀತಿನಿಯಮಗಳೇ ಇರದ ಲಾಬಿಯಿಂದಲೇ ನಡೆಯುವ ವ್ಯವಸ್ಥೆಯಲ್ಲಿ ಸರಿಯಾದ ಲಾಬಿ ಮಾಡುವುದಾಗಲೀ... ಕೇಂದ್ರದಲ್ಲಿ ಸರಿಯಾದ ರಾಷ್ಟ್ರೀಯ ಜಲನೀತಿಯಂತಹ ನ್ಯಾಯದಾನದ ನೀತಿಗಳು ರೂಪುಗೊಳ್ಳುವುದೂ ಕೂಡಾ ಇಂತಹ ಒಂದು ಪ್ರಾದೇಶಿಕ ಪಕ್ಷದಿಂದ ಮಾತ್ರವೇ ಸಾಧ್ಯ! ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷದಿಂದ ಈ ಎರಡೂ ಕಾರ್ಯಸಾಧನೆಯಾಗಬಲ್ಲದು..ಗುರೂ!

13 ಅನಿಸಿಕೆಗಳು:

A Ferengi ಅಂತಾರೆ...

"ಹೌದು! ರಾಜ್ಯದ ಹಿತ ಕಾಯೋಕೆ ಬೇಕಿರೋದು ಹೈಕಮಾಂಡ್ ಎಂಬ ದೆಹಲಿ ದೊರೆಗಳ ದಾಸ್ಯಕ್ಕೊಳಗಾಗಿರದ, ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷ. ಯೋಗ್ಯವಾದ ನೀತಿನಿಯಮಗಳೇ ಇರದ ಲಾಬಿಯಿಂದಲೇ ನಡೆಯುವ ವ್ಯವಸ್ಥೆಯಲ್ಲಿ ಸರಿಯಾದ ಲಾಬಿ ಮಾಡುವುದಾಗಲೀ..."

Yes. All the regional parties like Mayavathi's, Jayalalitha's, Karunanidhi's, Devegowda's, etc etc have proven this.

Mr. Nitish kumar of Bihar has just set an example.!

Anonymous ಅಂತಾರೆ...

Dear Ferengi,

You have forgotten AGP, DMK, AIDMK, TDS, TMC, BJD, NC.. etc in your list. These parties have done much better work in their states than any of the national parties.

A Ferengi ಅಂತಾರೆ...

@Anonymous

Progressive states ( good GDP etc)
1. Gujarat - Always ruled by BJP or Congress
2. Maharashtra -Always Congress or BJP
3. New Delhi - ditto
4. Kerla - CPM or Congress
5. Karnataka - Congress
6. Tamil Nadu - Regional parties
7. Andra - Congress Regional
8. Punjab - Congress, regional

Backward states
1. UP - SP, BSP etc
2. Orissa - BJP
3. Bihar - Regional
4. Assam - Congress regional
5. J&K - Regional and congress

etc etc.. There is no proof that regional parties arties are the reason for progress of a state.

Anonymous ಅಂತಾರೆ...

Dear Mr. Ferengi,

As you rightly pointed out parties ruling in the state and the economic progress are not correlative. So, whether it is a regional party or a national party, it has no difference wrt economic development.
Now look at the subjects discussed in the above blog. In case of River Water sharing disputes (cauvery/ Krishna), border disputes (Belagavi/ hogenakal)are always in favour of states with regional parties, which were in power at that point of time, in general.
Now having regional party in our state is surely better than having a national party, as atleast we can get justice in certain issues.

ಪ್ರಶಾಂತ ಸೊರಟೂರ ಅಂತಾರೆ...

Mr.Ferrengi,
your database needs corretions,
Parties in Power_Backword state: (as per your list)
1) Uttarpradesh :
Congress - 46 years,
BJP - 6 years
BSP - 6.5 years
SP - 6.5 years
refer: http://en.wikipedia.org/wiki/List_of_Chief_Ministers_of_Uttar_Pradesh
2) Bihar :
Congress - 38 years
Janatha party - 3 years
Janatha Dal - 14 years (incl.JD-United)
RJD - 8 years
i.e. Janath dal combined (just for statistics) - 25 years
info.: http://en.wikipedia.org/wiki/Chief_Ministers_of_Bihar
one can easily say if CPM is considered as National party then why not Janatha Dal ?
3) Orissa :
Congress - 44 years
Janatha Dal - 20 years (including current Biju Janath dal+BJP allienace)
info.: http://en.wikipedia.org/wiki/Chief_Minister_of_Orissa
....
Most of the states which got regional parties always has/will have a "say" in the central government.
- Eventhough UP is under developed, SP/BSP can always get more funds/support to their state (it is secondary whether they will use it appropriately or not)
- TMC can ask more railway fecility/track for Bengal. Karnataka is one of the most under developed states for railway transport, Our Mr.Muniappa is in railway ministery for several years now!
- AIDMK/DMK can demand central aids for their state without any hesitation or permission from "Hi-command"
- TDP can argue for the benifit of AP
...But our Political parties in Karnataka,they can only "request" "support" for Karnataka.
YES it makes difference if the party is National or Regional.
This is high time that Kannadiga realize this and form/elect regional party. (For god sake dont say who will look in to national interest!! Karnataka/Maharashtra/Orissa/AP interest are also national interests)

ಒಬ್ಬ ಫೆರೆಂಗಿ ಅಂತಾರೆ...

ನೋಡಿ. ಈ ಪ್ರಾಂತೀಯತೆಯ ಅತಿರೇಕ ಕರ್ನಾಟಕದಲ್ಲಿ ತೀರಾ ಆದರೆ, ಮುಂದೆ ನಮ್ಮ ನಮ್ಮಲ್ಲೇ ಸಂಕುಚಿತತೆಯನ್ನು ಹೆಚ್ಚಿಸುತ್ತದೆ.

ಪ್ರಾಂತೀಯ ಪಕ್ಷ ಅಂದರೆ, ಆ ಪ್ರಾಂತ್ಯದ ಬಲಾಡ್ಯ ಜಾತಿಯ/ಗಳ ಪಕ್ಷ. ಇಂತಹ ಸ್ಥಿತಿ ಎರಗಿಸಿಕೊಳ್ಳಲು ನಾನಂತೂ ಸಿದ್ಧನಿಲ್ಲ.

ಶ್ರೀರಾಮುಲು ಅವರ ಪಕ್ಷ, ದೇವೇಗೌಡರ ಪಕ್ಷ, ಮುಂದೆ ಯಡಿಯೂರಪ್ಪರ ಪಕ್ಷ, ಹೀಗೆ ಪಕ್ಷಗಳು ಎದ್ದು, ಅವರವರ ಸ್ವಹಿತಾಸಕ್ತಿಗಳೇ ಪ್ರಣಾಳಿಕೆಗಲಾಗುವುವು.

೩೭ ಲೋಕಸಭಾಸದಸ್ಯತ್ವಲಬ್ಧ ತಮಿಳುನಾಡಿನ ಸಂಖ್ಯಾಬಲದ ಮುಂದೆ ಕರ್ನಾಟಕದಲ್ಲಿ ಒಂದೇ ಪ್ರಾಂತೀಯ ಪಕ್ಷದಿಂದಲೇ ಅಷ್ಟೂ ೨೮ ಲೋಕಸಭಾಸದಸ್ಯರು ಬಂದರೂ ಅದು ಸಾಲದು.

ಒಂದು ವೇಳೆ ಪ್ರತಿಯೊಂದು ರಾಜ್ಯದಲ್ಲೂ ಕೇವಲ ಪ್ರಾಂತೀಯ ಪಕ್ಷಗಳೇ ಅಧಿಕಾರಶಾಲಿಗಲಾದರೆ, ಕೇವಲ ಚಿಕ್ಕ ಚಿಕ್ಕ ರಾಜ್ಯಗಳ ಪಕ್ಷಗಳೇ 'ಕಿಂಗ್ ಮೇಕರ್'ಗಳಾಗಿ ದೊಡ್ಡ ವಿಷಯಗಳಲ್ಲಿ ತರಲೆ ಮಾಡುವುವು.

ಏನ್ಗುರು ಆಶಿಸುವ 'ಪ್ರಾಮಾಣಿಕ ಕನ್ನಡ ಬಗ್ಗೆಯ ಕಾಳಜಿಯುಳ್ಳ' ಪ್ರಾಂತೀಯ ಪಕ್ಷ ನಿರೀಕ್ಷೆ, ಅಪೇಕ್ಷೆ ಇದ್ದರೂ ನನಗೆ ಇಲ್ಲ. ಅಪ್ರಾಮಾಣಿಕ, ಭ್ರಷ್ಟರೇ ತಮ್ಮ ತಮ್ಮ ಸ್ವಂತಲಾಭ ಹಿತಾಸಕ್ತಿ 'ಪ್ರಾಂತೀಯತೆ' 'ಜಾತಿಗಳ' ಹೆಸರಲ್ಲಿ ಪಕ್ಷಗಳನ್ನೂ ತೆಗೆದು ಈಗಿರುವ ಚಿಲ್ಲರೆ ರಾಜಕೀಯ ಅಗಾಧತೆಯನ್ನು ಹೆಚ್ಚಿಸುವರು.

Priyank ಅಂತಾರೆ...

@ಒಬ್ಬ ಫೆರೆಂಗಿ:
ನೀವು ಹೇಳಿದಂತಹ ತೊಂದರೆಗಳು, ನನಗೆ ಇವತ್ತಿನ ದಿನ ರಾಷ್ಟ್ರೀಯ ಪಕ್ಷಗಳು ಮಾಡುತ್ತಿರುವುದು ಕಾಣುತ್ತಿದೆ. ಸ್ವಂತಲಾಭ ನೋಡುವ, ಜಾತಿವಾದ ಮಾಡುವ, ಭ್ರಷ್ಟಾಚಾರ ಇರುವ ರಾಷ್ಟ್ರೀಯ ಪಕ್ಷಗಳೇ ನಮ್ಮನ್ನಾಳುತ್ತಿರುವುದು.
ಈ ಎಲ್ಲಾ ರಾಜಕೀಯ ಆಟಗಳ ನಡುವೆಯೂ, ಕನ್ನಡಿಗರಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ದನಿ ಎತ್ತಲಾರದ ಪಕ್ಷಗಳಿಂದ ಏನು ಒಳಿತಿದೆಯೋ, ನನಗಂತೂ ಕಾಣುತ್ತಿಲ್ಲ.

Aravind M.S ಅಂತಾರೆ...

ಪ್ರಾಂತೀಯ ಪಕ್ಷಗಳಾಗಲೀ ರಾಷ್ಟ್ರೀಯವಾಗಲೀ ಸಾಕಷ್ಟು ಎಂ.ಪಿ ಗಳ ಸಂಖ್ಯಾ ಬಲ ಇಲ್ಲದೆ ಯಾವ ಬದಲಾವಣೆಗಳೂ ಮಾಡಲಾರವು. ಇವತ್ತು ತಮಿಳರು, ಆಂಧ್ರದವರ ಎಂ.ಪಿ ಗಳ ಸಂಖ್ಯಾಬಲ ನಮ್ಮಕ್ಕಿಂತ ಜಾಸ್ತಿ. ಇದರಿಂದ ಈ ಸಮಸ್ಯೆಗೆ ಪ್ರಾಂತೀಯ ಪಕ್ಷಗಳು ಪರಿಹಾರ ಅಲ್ಲ. ಬದಲಾಗಿ ರಾಷ್ಟ್ರೀಯ ಪಕ್ಷವಾಗಿದ್ದೂ ನಮ್ಮ ಸಂಖ್ಯಾ ಬಲದ ಮೇಲೆ ಅವಲಂಬಿಸಿದೆ.

- ಅರವಿಂದ

A Ferengi ಅಂತಾರೆ...

Aravind M.S has just what I wanted to say.

For Kannadigas it is good to lobby being within a national party. Just like we did with the special status for Hyderabad-Karnataka etc.

This is what Kerala is doing from ages.!

ಪ್ರಶಾಂತ ಸೊರಟೂರ ಅಂತಾರೆ...

ಅರವಿಂದ ಅವರೇ,
10-15 ಎಂ.ಪಿ. ಸೀಟುಗಳೇ ತುಂಬಾ ಆಗಿ ಹೋಯ್ತು ಅಂತದರಲ್ಲಿ 28 ರಿಂದ ಏನೂ ಆಗೋಲ್ಲಾ ಅಂತಿರಲ್ಲಾ. ಸ್ಥಳೀಯ ಪಕ್ಷಕ್ಕೆ ಇಷ್ಟು ಸೀಟುಗಳು ಬಂದರೆ, ಹಲವಾರು ಕೆಲಸಗಳಿಗೆ ಒತ್ತಡ ತರಬಹುದು ಆದರೆ ಅದೇ ರಾಷ್ಟ್ರೀಯ ಪಕ್ಷಗಳಿಗೆ ಇಡೀ 28 ಬಂದರೂ ಕರ್ನಾಟಕಕ್ಕೇ ಕುತ್ತು ಬಂದಾಗ ಏನೂ ಮಾಡಲಾಗದು, ಅವರ ಕೈಯನ್ನು ಹೈಕಮಾಂಡು ಕಟ್ಟಿಹಾಕಿರುತ್ತೆ. ಮೇಲಾಗಿ, ಈ ಎಂ.ಪಿ. (ಲೋಕಸಭೆ) ಸೀಟುಗಳು ಬರೀ ಜನರ ಎಣಿಕೆ ಮೇಲೆ ಹಂಚಿದ್ದು ದೊಡ್ಡ ತಪ್ಪು. ಕರ್ನಾಟಕಕ್ಕೆ 28 ಸಿಕ್ಕರೇ ನಮಗಿಂತ 75% ಅಶ್ಟೇ ವಿಸ್ತಾರ ಹೊಂದಿರುವ ತಮಿಳುನಾಡಿಗೆ 39 ಸೀಟುಗಳು.! ಅಂದರೇ ಇಲ್ಲಿಯೂ ರಾಷ್ಟ್ರ‍ೀಯ ನೀತಿಗಳು ಎಶ್ಟು ಪೊಳ್ಳಾಗಿವೆ ಅಂದರೆ ಒಂದು ರಾಜ್ಯದ ಜನಸಂಖ್ಯೆ (ದಟ್ಟಣೆ) ಕಡಿಮೆ ಇದ್ದರೆ ಅದಕ್ಕೇ ತೊಡಕು.

ಒಬ್ಬ ಫೆರೆಂಗಿ ಅಂತಾರೆ...

"ಈ ಎಂ.ಪಿ. (ಲೋಕಸಭೆ) ಸೀಟುಗಳು ಬರೀ ಜನರ ಎಣಿಕೆ ಮೇಲೆ ಹಂಚಿದ್ದು ದೊಡ್ಡ ತಪ್ಪು. ಕರ್ನಾಟಕಕ್ಕೆ 28 ಸಿಕ್ಕರೇ ನಮಗಿಂತ 75% ಅಶ್ಟೇ ವಿಸ್ತಾರ ಹೊಂದಿರುವ ತಮಿಳುನಾಡಿಗೆ 39 ಸೀಟುಗಳು.! ಅಂದರೇ ಇಲ್ಲಿಯೂ ರಾಷ್ಟ್ರ‍ೀಯ ನೀತಿಗಳು ಎಶ್ಟು ಪೊಳ್ಳಾಗಿವೆ ಅಂದರೆ ಒಂದು ರಾಜ್ಯದ ಜನಸಂಖ್ಯೆ (ದಟ್ಟಣೆ) ಕಡಿಮೆ ಇದ್ದರೆ ಅದಕ್ಕೇ ತೊಡಕು."

ಇದು ತಪ್ಪು ತಿಳುವಳಿಕೆ. ಇಂದೇನಾದರೂ ಜನಸಂಖ್ಯಾಧಾರಿತವಾಗಿ ಲೋಕಸಭಾಸದಸ್ಯತ್ವಗಳನ್ನು ಹಂಚಿದರೆ ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಹಾಗು ಪಶ್ಚಿಮ ಬಂಗಾಳಗಳಿಗೆ ಸಿಕ್ಕಾಬಟ್ಟೆ ಸೀಟುಗಳು ಸಿಗುವುವು. ಹೀಗೆ ಆಗುವುದನ್ನು ತಮಿಳು ನಾಡು ಹಾಗು ಕೇರಳ ಸತತವಾಗಿ ತಡೆಯುತ್ತಿದೆ.

ಈ ಕೆಳಗಿನ ಬರಹ ಓದಿ. ಈಗಾಗಲೇ ನಾವು ದಕ್ಷಿಣಭಾರತೀಯರು ನಮ್ಮ ಜನಸಂಖ್ಯೆಗಿಂತ ಹೆಚ್ಚು ಲೋಕಸಭಾಸದಸ್ಯತ್ವವನ್ನು ಲಭಿಸಿಕೊಂಡಿದ್ದೇವೆ.
http://www.nuffield.ox.ac.uk/users/Mcmillan/delim/delim6.htm

ಆದರೆ ೨೦೨೬ ರಲ್ಲಿ ಮರುಹಂಚಿಕೆಯಾದಾಗ ಇದೆ ನಾವು ದಕ್ಷಿಣ ಭಾರತೀಯರಿಗೆ ಹಬ್ಬ.!


ಬನವಾಸಿ ಬಳಗ ಅಂತಾರೆ...

http://enguru.blogspot.in/2009/03/namma-samsadara-samkhye-eshtirabeittu.html

ಒಬ್ಬ ಫೆರೆಂಗಿ ಅಂತಾರೆ...

@ಬನವಾಸಿ ಬಳಗ

ಆ ಲೇಖನದದಂತೆ ಜನಸಂಖ್ಯಾಧಾರಿತವಾಗಿ ಪುನಃ ಲೋಕಸಭಾಸದಸ್ಯತ್ವಗಳನ್ನು ನಿಗದಿಪಡಿಸುವುದು ಕನ್ನಡಿಗರಿಗೆ ಲಾಭದಾಯಕವಾಗಿದ್ದರೆ, ಆ ಕ್ರಮಕ್ಕೆ ನಾವು ನಮ್ಮ ಸಂಸದರ ಮುಖೇನ ಒಡನೆಯೇ ಒತ್ತಾಯಿಸಬೇಕಲ್ಲವೇ!

ನಮ್ಮ ಹೆಚ್ಚು-ಹಲವು ಸಮಸ್ಯೆಗಳು ಇದರಿಂದ ಸುಲಭವಾಗಿ ನೀಗುವುದು.

ಆ ಅಂಕಿ-ಅಂಶಕ್ಕೆ ಧನ್ಯಭಾವಗಳು !

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails