೧೯೭೧ರ ವೇಳೆಗೆ ಕರ್ನಾಟಕದ ನೀರಾವರಿ ಪ್ರದೇಶ ೬.೭೪ ಲಕ್ಷ ಎಕರೆಯಷ್ಟಾದರೆ ತಮಿಳುನಾಡಿನದು ೨೩.೬೦ ಲಕ್ಷ ಎಕರೆಯಷ್ಟು ಆಗಿತ್ತು. ಇಂದು ಕರ್ನಾಟಕದ ನೀರಾವರಿ ಪ್ರದೇಶ ೧೧.೨ ಲಕ್ಷ ಎಕರೆಯಷ್ಟಾದರೆ ತಮಿಳುನಾಡಿನದು ೨೯.೪ ಲಕ್ಷ ಎಕರೆಯಾಗಿದೆ. ೧೯೬೮ರಲ್ಲಿ ಅನುಮತಿ ಪಡೆದೇ ಕರ್ನಾಟಕವು ಹಾರಂಗಿ, ಕಬಿನಿ ಯೋಜನೆಗಳನ್ನು ಕೈಗೆತ್ತಿಕೊಂಡಾಗ ಅಡ್ಡಿಪಡಿಸಿದ ತಮಿಳುನಾಡು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು. ಮತ್ತೆ ಅಲ್ಲಿನ ತೀರ್ಪು ಬರುವವರೆಗೆ ಕಾಲ ಕಳೆದು ಹೋಗುವುದೆಂದು ಕರ್ನಾಟಕ ‘ಅಣೆಕಟ್ಟೆಯಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ನೀರು ಇಟ್ಟುಕೊಳ್ಳುವುದಿಲ್ಲ ಮತ್ತು ಅಂತಹ ನೀರನ್ನು ಬಳಸುವುದಿಲ್ಲ’ ಎನ್ನುವ ಅನ್ಯಾಯದ ಮುಚ್ಚಳಿಕೆ ಬರೆದುಕೊಟ್ಟು ರಾಜಿಯಾಯಿತು. ಮುಂದೆ ಈ ವಿವಾದ ನ್ಯಾಯಾಧಿಕರಣದ ಮುಂದೆ ಬಂದಾಗ ತಮಿಳುನಾಡು "ಕಾವೇರಿ ನದಿನೀರನ್ನು ನಾವು ಸಾವಿರಾರು ವರ್ಷಗಳಿಂದ ಬಳಸುತ್ತಿದ್ದೇವೆ. ಆದರೆ ಕರ್ನಾಟಕವು ೧೯೨೪ರ ಒಪ್ಪಂದ ಉಲ್ಲಂಘಿಸಿ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಮೂಲಕ ನೀರನ್ನು ನಮಗೆ ಬಿಡುತ್ತಲೇ ಇಲ್ಲಾ! ಇದರಿಂದಾಗಿ ತಮಿಳುನಾಡಿನ ರೈತರು, ಕೃಷಿ, ರಾಜ್ಯದ ಆರ್ಥಿಕತೆ ನೆಲಕಚ್ಚಿ ಹೋಗುತ್ತಿದೆ...ಈಗಂತೂ ನಮ್ಮ ಅನುಮತಿ ಪಡೆಯದೇ ನಾಲ್ಕು ಅಣೇಕಟ್ಟೆ ಕಟ್ಟಿಬಿಟ್ಟಿದೆ. ಇದರಿಂದಾಗಿ ನೀರಿನ ಹರಿವು ನಿಂತೇ ಹೋಗಿದೆ. ಅಯ್ಯಯ್ಯೋ ಅನ್ಯಾಯ... ತಮಿಳುನಾಡಿಗೆ ಮೋಸವಾಗುತ್ತಿದೆ... ನೀರು ಬಿಡಿಸಿ! ನೀರು ಬಿಡಿಸಿ!" ಎಂದು ದೂರಿತು. ಈ ಕೂಗು ತಮಿಳುನಾಡಿನಿಂದ ಹೊರಟು ಕಾವೇರಿ ನ್ಯಾಯಾಧಿಕರಣದ ಮನಮುಟ್ಟುವಲ್ಲಿ ಯಶಕಂಡಿತು! ಕರ್ನಾಟಕವು ತನಗೆ ಆಂಗ್ಲರ ಕಾಲದಿಂದಲೂ ಆದ ತಾರತಮ್ಯದ ಬಗ್ಗೆ ಬಾಯಿ ಬಡಕೊಂಡರೂ ಕೇಳದೆ ಹೋಯಿತು ನ್ಯಾಯಾಧಿಕರಣ. ತಮಿಳುನಾಡು ವರ್ಷಕ್ಕೆ ಮೂರು ಬೆಳೆ ಬೆಳೆಯುತ್ತಿದೆ, ಕರ್ನಾಟಕ ಎರಡೇನದ್ದನ್ನು ಬೆಳೆಯೋಕೂ ಆಗ್ತಿಲ್ಲಾ ಎಂದರೆ "ಅದು ಅದರ ಪಾರಂಪರಿಕ ಹಕ್ಕು" ಎಂದಿತು! ಒಟ್ಟಾರೆ ನ್ಯಾಯಾಧಿಕರಣವಾಗಲೀ ಮತ್ತೊಂದಾಗಲೀ ಪರಿಗಣಿಸಿದ್ದು "ತಮಿಳುನಾಡು ನೂರಾರು ವರ್ಷಗಳಿಂದ ಕಾವೇರಿ ನೀರನ್ನು ಚೆನ್ನಾಗಿ ಬಳಸಿಕೊಳ್ಳುತ್ತಾ ಬಂದಿರುವುದು ಅದರ ಪಾರಂಪರಿಕ ಹಕ್ಕು ಮತ್ತು ಕರ್ನಾಟಕ ಆಗೆಲ್ಲಾ ಯಾವುದೇ ಕಾರಣಕ್ಕಾಗಿದ್ದರೂ ಸರಿ, ನೀರು ಬಳಸದೆ ಈಗ ಬಳಸಲು ಯೋಜನೆ ಮಾಡುವುದು ಸರಿಯಲ್ಲಾ, ಇಲ್ಲಿ ನೀರಾವರಿ ಮಾಡುವ ಪ್ರಯತ್ನ, ಅಣೆಕಟ್ಟೆ ಕಟ್ಟುವ ಪ್ರಯತ್ನಗಳೆಲ್ಲಾ ಅಕ್ರಮ" ಎಂದು!!
ಕಾವೇರಿ ಮಧ್ಯಂತರ ತೀರ್ಪು!
ತಮಿಳುನಾಡಿನ ಪರ ವಾದ ಮಾಡಲು ಶ್ರೀ ಪರಾಶರನ್ ಎನ್ನುವ ವಕೀಲರು ಮುಂದಾದರು. (ಶ್ರೀ ಪರಾಶರನ್ ಅವರ ವಿಶೇಷತೆ ಏನೆಂದರೆ ಕೃಷ್ಣಾ ನದಿ ನೀರಿನ ಹಂಚಿಕೆ, ಕಾವೇರಿ ವಿವಾದ, ಕಳಸಾ ಭಂಡೂರಾ ವಿವಾದ... ಹೀಗೆ ಕರ್ನಾಟಕಕ್ಕೆ ಸಂಬಂಧಿಸಿದ ಜಲವಿವಾದದ ಎಲ್ಲಾ ಹೋರಾಟಗಳಲ್ಲಿ ಕರ್ನಾಟಕದ ಎದುರಾಳಿ ರಾಜ್ಯದ ಪರವಾಗಿ ಇವರೇ ವಕೀಲರು). ಕರ್ನಾಟಕವು ಶ್ರೀ ಎಫ಼್.ಎಸ್. ನಾರಿಮನ್ ಅವರನ್ನು ನೇಮಕ ಮಾಡಿತು! ವಾದ ಮಾಡುವಲ್ಲಿ ಕರ್ನಾಟಕ ಸಾಕಷ್ಟು ಹೋರಾಡಿದರೂ ಹಲವಾರು ವಿಷಯಗಳಲ್ಲಿ ವಾಸ್ತವ ಕರ್ನಾಟಕಕ್ಕೆ ವಿರುದ್ಧವಾಗೇ ಇದ್ದಿತು. ತಮಿಳುನಾಡು ನ್ಯಾಯಾಧಿಕರಣದ ಅಂತಿಮತೀರ್ಪು ಬರುವವರೆಗೆ ಮಧ್ಯಂತರ ತೀರ್ಪು ನೀಡಬೇಕೆಂದೂ ಕೋರಿತು. ನ್ಯಾಯಾಧಿಕರಣ ಕರ್ನಾಟಕದಿಂದ ಪ್ರತಿವರ್ಷ ತಮಿಳುನಾಡಿಗೆ ಹರಿದ ನೀರಿನ ಪ್ರಮಾಣದ ಆಧಾರದ ಮೇಲೆ ಪ್ರತಿವರ್ಷ ೨೦೫ ಟಿಎಂಸಿಯಷ್ಟು ನೀರು ಬಿಡಬೇಕೆಂದು ಆದೇಶಿಸಿತು.
ತಮಿಳುನಾಡು ದೂರಿನಲ್ಲಿ ಕರ್ನಾಟಕವು ನಮಗೆ ನೀರು ಬಿಡದೆ ಹಿಡಿದಿಟ್ಟುಕೊಳ್ಳುತ್ತಿದೆ ಎಂದು ವಾದಿಸಿತ್ತು. ಅದಕ್ಕೆ ಕರ್ನಾಟಕ ಪ್ರತಿವರ್ಷ ಬಿಳಿಗೊಂಡ್ಲುವಿನ ಮಾಪಕದಲ್ಲಿ ಹರಿದ ನೀರಿನ ಪ್ರಮಾಣ ತೋರಿಸಿ, ನೋಡಿ ಕಡಿಮೆಯೆಂದರೆ ೨೫೨ ಟಿಎಂಸಿಯಷ್ಟನ್ನು ನೀರನ್ನು ಬಿಟ್ಟಿದ್ದೇವೆ ಎಂದಿತ್ತು. ಹಾಗಂದಿದ್ದ ಕಾರಣದಿಂದಲೇ ನ್ಯಾಯಾಧಿಕರಣ ಮಧ್ಯಂತರ ಆದೇಶದಲ್ಲಿ ೨೦೫ ಟಿಎಂಸಿ ಬಿಡಿ ಎಂದಿತ್ತು! ಕರ್ನಾಟಕ ಮರುಪರಿಶೀಲನೆಗೆ ಮನವಿ ಸಲ್ಲಿಸಿದಾಗ ಇದನ್ನೇ ಮುಖಕ್ಕೆ ಹಿಡಿದು ಕರ್ನಾಟಕದ ಮನವಿಯನ್ನು ತಿರಸ್ಕರಿಸಿಬಿಟ್ಟಿತು ನ್ಯಾಯಾಧಿಕರಣ!!
ಮುಂದೆ ಕರ್ನಾಟಕಕ್ಕೆ ಮಾರಣಾಂತಿಕವಾದ ಐತೀರ್ಪು ೨೦೦೭ರ ಫೆಬ್ರವರಿ ಐದರಂದು ಪ್ರಕಟವಾಯಿತು!
ಕಾವೇರಿ ನ್ಯಾಯಾಧಿಕರಣದ ಐತೀರ್ಪು!
ಈ ತೀರ್ಪಿನಲ್ಲಿ ಹೇಳಲಾಗಿರುವ ಪ್ರಮುಖವಾದ ಅಂಶ, ೧೮೯೨ರ ಮತ್ತು ೧೯೨೪ರ ಒಪ್ಪಂದಗಳು ಕ್ರಮವಾಗಿ ೧೧೦ ಮತ್ತು ೮೦ ವರ್ಷಗಳಷ್ಟು ಹಳೆಯವಾದ್ದರಿಂದ ಈಗ ಅನೂರ್ಜಿತವೆನ್ನಲಾಗದು! ಈ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಎರಡೂ ಪ್ರಾಂತ್ಯಗಳು ಸಂಪೂರ್ಣ ಸಮಾಲೋಚನೆಯನ್ನು ಮಾಡಿಯೇ ಒಪ್ಪಂದಕ್ಕೆ ಬಂದಿದ್ದವು! ೧೯೨೪ರ ಒಪ್ಪಂದದಲ್ಲಿ ಕೆಲಅಂಶಗಳನ್ನು ೧೯೭೪ರ ನಂತರ ಪರಾಮರ್ಶಿಸಬಹುದು ಎಂದು ಹೇಳಲಾಗಿದೆ. ಅದರಂತೆ ನಾವೀಗ ಪರಾಮರ್ಶಿಸಿದ್ದೇವೆ.
ಈ ನ್ಯಾಯಾಧಿಕರಣ ೧೮೯೨ ಮತ್ತು ೧೯೨೪ರ ಒಪ್ಪಂದಗಳನ್ನು ರದ್ದು ಮಾಡುತ್ತದೆ.
ನದಿ ತೀರದ ಯಾವುದೇ ರಾಜ್ಯದ ಅಂತರ್ಜಲ ಬಳಕೆಯನ್ನು ಕಾವೇರಿ ನದಿನೀರಿನ ಬಳಕೆಯೆಂದು ಪರಿಗಣಿಸಲಾಗದು. (ಅಂದರೆ ಅಂತರ್ಜಲ ಮಟ್ಟ ಅಲ್ಲಿ ಹೆಚ್ಚಿದ್ದು ಇಲ್ಲಿ ಕಡಿಮೆ ಇದ್ದರೆ ನದಿ ನೀರು ಹಂಚಿಕೆ ಸೂತ್ರದಲ್ಲಿ ಇದಕ್ಕೆ ಯಾವ ಕಿಮ್ಮತ್ತಿಲ್ಲ)
ಈ ತೀರ್ಪಿನಲ್ಲಿ ಸಂಕಷ್ಟ ಸೂತ್ರವನ್ನು ಸಮಗ್ರವಾಗಿ ತಿಳಿಸಿಲ್ಲ! ಮಳೆ ಪ್ರಮಾಣ ಕಡಿಮೆಯಾದಲ್ಲಿ ನದಿನೀರಿನ ಪಾಲಿನಲ್ಲೂ ಅದೇ ಪ್ರಮಾಣದಲ್ಲಿ ಕಡ್ಮೆಯಾಗಬೇಕು ಎಂದಷ್ಟೇ ಹೇಳಿದೆ. ಇದರರ್ಥ ಮುಂಗಾರು ವಿಫಲವಾದ ಕೂಡಲೇ ತಮಿಳುನಾಡು ತನ್ನ ಪಾಲನ್ನು ಕೇಳಿದರೆ ಸಂಕಷ್ಟದ ಹಂಚಿಕೆಯೂ ಅಷ್ಟಕ್ಕೆ ಮಾತ್ರಾ ಸೀಮಿತವಾಗುತ್ತದೆ. ಒಂದುವೇಳೆ ಈ ಕೊರತೆ ಹಿಂಗಾರಿನಲ್ಲಿ ತುಂಬಿದರೆ ಅದು ತಮಿಳುನಾಡಿಗೆ ಬೋನಸ್. ಯಾಕೆಂದರೆ ಹಿಂಗಾರಿನ ಲಾಭ ಇರುವುದು ತಮಿಳುನಾಡಿಗೆ ಮಾತ್ರವೇ. ಹೀಗಾಗಿ ಕರ್ನಾಟಕ ಸಂಕಷ್ಟವೆಂದರೆ ಹಿಂಗಾರು ಮುಂಗಾರು ಎರಡರಲ್ಲೂ ಬರುವ ನೀರನ್ನು ಪರಿಗಣಿಸಿ ಎನ್ನುವ ವಾದ ಮಾಡುತ್ತಿದೆ. ಆದರೆ ತಮಿಳುನಾಡು ಹಿಂಗಾರು ಶುರುವಾಗುವ ಮುನ್ನವೇ ದನಿ ಎತ್ತಿ ಸಿಕ್ಕಷ್ಟನ್ನು ಗೋರಿಕೊಳ್ಳುವ ಉದ್ದೇಶಹೊಂದಿದೆ. ಬರ ಬಂದಾಗಲೆಲ್ಲಾ ತಮಿಳುನಾಡು ಐತೀರ್ಪಿನಲ್ಲಿ ತಿಳಿಸಿರುವಷ್ಟು ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶಿಸಿ ಎನ್ನಲು ಇದೇ ಕಾರಣವಾಗಿದೆ.
ಮುಂದುವರೆದ ತಾರತಮ್ಯ!!
ಕಾವೇರಿ ಕಣಿವೆಯ ಶೇಕಡಾ ೪೨ ಪ್ರದೇಶ ಕರ್ನಾಟಕದಲ್ಲಿದೆ. ನಮ್ಮ ನೀರಾವರಿ ಪ್ರದೇಶವನ್ನೂ ಅದೇ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಬಹುದಾಗಿದೆ. ಆದರೆ ಕಾವೇರಿಗೆ ಕರ್ನಾಟಕದಿಂದ ಸೇರುವ ನೀರಿನ ಪ್ರಮಾಣದ ಲೆಕ್ಕದಂತೆ ನಮಗೆ ೨೩ ಲಕ್ಷ ಎಕರೆಗೆ ಅನುಮತಿ ನೀಡಬೇಕಿತ್ತು. ಮತ್ತು ತಮಿಳುನಾಡಿಗೆ ೧೩.೬ ಲಕ್ಷ ಎಕರೆಗೆ ಮಾತ್ರ ಕಾವೇರಿ ನೀರು ಕೊಡಬೇಕಿತ್ತು. ಹಿಂದಿನಿಂದ ನಮ್ಮ ಕೈಕಟ್ಟಿಹಾಕಿ ಅನ್ಯಾಯವಾಗಿ ತಮ್ಮ ನೀರಾವರಿ ಪ್ರದೇಶ ಬೆಳೆಸಿಕೊಂಡು ಬಂದು ಈಗ ಅದಕ್ಕೆ ಪಾರಂಪರಿಕ ಹಕ್ಕಿನ ಬಣ್ಣ ಕೊಟ್ಟು, ನೀರನ್ನು ತಮ್ಮ ಹಕ್ಕಂತೆ ಕೇಳುವ ತಮಿಳುನಾಡಿನ ನಿಲುವಿಗೆ ಮಣೆಹಾಕಿದ್ದು ಮೊದಲನೆಯ ಅನ್ಯಾಯ.
ಬಿಳಿಗುಂಡ್ಲುವಿನಲ್ಲಿ ೧೯೨ ಟಿ.ಎಂ.ಸಿ ನೀರು ಬಿಡಬೇಕೆನ್ನುವ ಆದೇಶದ ಭಾಗ ಕನ್ನಡಿಗರಿಗೆ ೧೯೨ ಎನ್ನುವುದು ಮಧ್ಯಂತರ ಆದೇಶದ ೨೦೫ಕ್ಕಿಂತ ಕಡಿಮೆ ಎನ್ನಿಸಲಿ ಎಂಬ ಕಣ್ಣು ಒರೆಸುವ ತಂತ್ರವಾಗಿದೆ. ಆದರೆ ನಿಜವಾಗಿ ನಾವು ಬಿಡಬೇಕಾದ ನೀರಿನ ಪ್ರಮಾಣ ಇದಕ್ಕಿಂತ ಬಹಳ ಹೆಚ್ಚೇ ಆಗಿದೆ. ಬಿಳಿಗುಂಡ್ಲುವಿನಿಂದ ಮೆಟ್ಟೂರುವರೆಗೆ ನದಿಗೆ ಸೇರುವ ೨೫ ಟಿ.ಎಂ.ಸಿ ನೀರು ಕಳೆದು ನಾವು ಇದುವರೆಗೆ ೧೮೦ ಟಿ.ಎಂಸಿ ನೀರು ಬಿಡುತ್ತಿದ್ದೆವು. ಈಗ ಅದು ೧೯೨ ಆಗುವುದೆಂದರೆ ನಾವು ಬಿಡುವ ನೀರಿನ ಪ್ರಮಾಣ ೨೧೭ ಟಿ.ಎಂ.ಸಿಯಷ್ಟು (ಮೆಟ್ಟೂರಿನಲ್ಲಿ ಅಳೆದಂತೆ). ಇದು ಎರಡನೆಯ ಅನ್ಯಾಯ.
ಕೇರಳಕ್ಕೆ ೩೦ ಟಿ.ಎಂ.ಸಿ ಹಂಚಿರುವ ನ್ಯಾಯಾಧಿಕರಣ ಅದರಲ್ಲಿ ೯ ಟಿ.ಎಂ.ಸಿ ನೀರನ್ನು ತಮಿಳುನಾಡು ಕೊಡುವಂತೆಯೂ ೨೧ ಟಿ.ಎಂ.ಸಿಯಷ್ಟು ನೀರನ್ನು ಕರ್ನಾಟಕ ಬಿಡುವಂತೆಯೂ ಹೇಳಿದೆ. ಕೇರಳದಲ್ಲಿ ಸದ್ಯಕ್ಕೆ ಆ ನೀರನ್ನು ಬಳಸುವ ಶಕ್ತಿಯಿಲ್ಲದ ಕಾರಣ ತಮಿಳುನಾಡು ತಾನು ಬಿಡಬೇಕಾದ ೯ ಟಿ.ಎಂ.ಸಿ ನೀರನ್ನು ತಾನೇ ಬಳಸಿಕೊಳ್ಳಬಹುದು. ಆದರೆ ಕರ್ನಾಟಕ ಮಾತ್ರ ತಾನು ಬಿಡಬೇಕಾದ ೨೧ ಟಿ.ಎಂ.ಸಿ ನೀರನ್ನು ತಾನು ಬಳಸುವಂತಿಲ್ಲ. ಆ ನೀರನ್ನು ತಮಿಳುನಾಡಿಗೆ ಬಿಡಬೇಕು ಮತ್ತು ತಮಿಳುನಾಡು ಅದನ್ನು ಬಳಸಬಹುದು. ಇದು ಮೂರನೆಯ ಅನ್ಯಾಯ.
ಪರಿಸರ ರಕ್ಷಣೆಗಾಗಿ ೧೦ ಟಿ.ಎಂ.ಸಿ ನೀರನ್ನು ಕರ್ನಾಟಕ ಬಿಡಬೇಕು. ಆದರೆ ತಮಿಳುನಾಡು ಯಾವ ಪ್ರಮಾಣದ ನೀರನ್ನೂ ಪರಿಸರ ರಕ್ಷಣೆಗೆಂದು ಬಿಡುವ ಅಗತ್ಯವಿಲ್ಲ. ಪರಿಸರ ರಕ್ಷಣೆ ಬರಿಯ ನಮ್ಮ ಹೊಣೆಯೇ? ಇದು ನಾಲ್ಕನೆಯ ಅನ್ಯಾಯ.
ಕರ್ನಾಟಕವು ಬೆಂಗಳೂರಿಗೆ ಸರಬರಾಜು ಮಾಡುವ ಕುಡಿಯುವ ನೀರಿನ ಪ್ರಮಾಣ ಈಗ ಸುಮಾರು ೧೫ ಟಿ.ಎಂ.ಸಿ. ಬೃಹತ್ ಬೆಂಗಳೂರು ಯೋಜನೆಯಂತೆ ಅದು ೩೦ ಟಿ.ಎಂ.ಸಿಯಷ್ಟು ಆಗುತ್ತದೆ. ಉಳಿದ ನಗರಗಳಾದ ಚಾಮರಾಜನಗರ, ಮಂಡ್ಯ, ಮೈಸೂರು, ಚನ್ನಪಟ್ಟಣ, ರಾಮನಗರಗಳಿಗೆಲ್ಲ ಸೇರಿ ಬೇಕಾಗುವ ಒಟ್ಟು ಕುಡಿವ ನೀರಿನ ಪ್ರಮಾಣ ೬೦ ಟಿ.ಎಂ.ಸಿ.ಯಷ್ಟು. ಆದರೆ ನ್ಯಾಯಾಧಿಕರಣವು ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ನಿಗದಿ ಮಾಡಿರುವ ಪ್ರಮಾಣ ೧.೮೫ ಟಿ.ಎಂ.ಸಿ ಮಾತ್ರ. ಅಚ್ಚರಿಯೆಂದರೆ ಬೆಂಗಳೂರಿನಲ್ಲಿ ಕಾವೇರಿ ಅಚ್ಚುಕಟ್ಟಿಗೆ ಒಳಪಡುವುದು ಬರೀ ೧/೩ನೇ ಜನಸಂಖ್ಯೆ ಮಾತ್ರಾ! ಹಾಗಾಗಿ ಅಷ್ಟನ್ನು ಮಾತ್ರಾ ಪರಿಗನಿಸಿದ್ದೇವೆ ಎನ್ನುತ್ತದೆ ತೀರ್ಪು! ನದಿ ನೀರು ಹಂಚಿಕೆಯಲ್ಲಿ ಮೊದಲ ಆದ್ಯತೆ ಕುಡಿಯುವ ನೀರಿಗೆ. ನಂತರ ಕೃಷಿಗೆ, ಆ ನಂತರ ಕೈಗಾರಿಕೆಗಳಿಗೆ. ಆದರೆ ತಮಿಳುನಾಡಿನ ಕೃಷಿಭೂಮಿಗೆ ಸರಬರಾಜು ಮಾಡುವ ಸಲುವಾಗಿ ಕರ್ನಾಟಕದ ಕುಡಿಯುವ ನೀರಿನ ಪೂರೈಕೆಗೇ ಕತ್ತರಿ ಹಾಕುವುದು ಎಷ್ಟು ಸರಿ. ಇದು ಈ ಅನ್ಯಾಯ ಸರಣಿಯಲ್ಲಿ ಐದನೆಯದು.
ಒಟ್ಟು ತೀರ್ಪು ನೀಡುವಾಗ ತಮಿಳುನಾಡಿನಲ್ಲಿ ಲಭ್ಯವಿರುವ ೧೫೦ ಟಿ.ಎಂ.ಸಿ ಅಂತರ್ಜಲವನ್ನು ಪರಿಗಣಿಸಿಯೇ ಇಲ್ಲ. ಸ್ವತಹ ತಮಿಳುನಾಡೇ ತಾನು ೨೦ ಟಿ.ಎಂ.ಸಿಯಷ್ಟು ಅಂತರ್ಜಲ ಬಳಸುತ್ತಿರುವುದಾಗಿ ಹೇಳಿಕೊಂಡಿದ್ದರೂ ಕೂಡಾ ಇಂತಹ ತೀರ್ಪು ಬಂದಿದೆ. ನ್ಯಾಯಾಧಿಕರಣದ ತಜ್ಞರ ತಂಡ ತಮಿಳುನಾಡಿಗೆ ೩೯೫ ಟಿ.ಎಂ.ಸಿ ನೀರು ಅಗತ್ಯವಿದೆಯೆಂದು ವರದಿ ಮಾಡಿದೆ. ಆದರೆ ನ್ಯಾಯಾಧಿಕರಣ ಮಾತ್ರ ೪೧೯ ಟಿ.ಎಂ.ಸಿ ನೀರಿನ ವರದಾನ ನೀಡಿದೆ.
ಇಂತಹ ಹಲವಾರು ಅನ್ಯಾಯಗಳ ಚಪ್ಪಡಿಗಳನ್ನು ಕನ್ನಡಿಗರ ತಲೆಯ ಮೇಲೆ ಎಳೆಯಲಾಗಿದೆ. ಕೇಂದ್ರ ಸರ್ಕಾರದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಾಲುದಾರನಾಗಿರುವಾಗ, ಕೇಂದ್ರ ಸರ್ಕಾರದಲ್ಲಿ ನಾಲ್ವರು ಮಂತ್ರಿಗಳನ್ನು ತಮಿಳುನಾಡು ಹೊಂದಿರುವಾಗ, ಕನ್ನಡ ನಾಡು ತನ್ನ ನೆಲದಿಂದ ರಾಜ್ಯಸಭೆಗೆ ಪರರಾಜ್ಯದವರನ್ನು ಆರಿಸಿ ಕಳಿಸುತ್ತಿರುವಾಗ, ನಾಡಿನ ಎಲ್ಲ ರಾಜಕೀಯ ಪಕ್ಷಗಳೂ ರಾಷ್ಟ್ರೀಯ ಪಕ್ಷಗಳ ತೆಕ್ಕೆಯಲ್ಲಿ ಇರುವಾಗ . . . ಕನ್ನಡಿಗನಿಗೆ ನ್ಯಾಯ ದೊರಕೀತೆ? ಎಂಬ ಪ್ರಶ್ನೆ ಎಲ್ಲಕ್ಕಿಂತ ದೊಡ್ಡದಾಗಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡಿಗ ತನ್ನ ಮೈಮರೆವು ತೊರೆದು, ಮೈಕೊಡವಿ ಏಳದಿದ್ದರೆ ನಾಳೆ ಈ ಅನ್ಯಾಯಗಳು ಮುಂದುವರೆಯುತ್ತಲೇ ಇರುತ್ತವೆ.
ಇಷ್ಟಕ್ಕೂ ನದಿನೀರು ಹಂಚಿಕೆಯು ನ್ಯಾಯಯುತವಾಗಿ ನಡೆಯಲು ಭಾರತದಲ್ಲಿರುವ ನೀತಿ ನಿಯಮಗಳೇನು? ಕರ್ನಾಟಕದ ದೃಷ್ಟಿಯಲ್ಲಿ ನಿಜವಾಗಿ ನ್ಯಾಯವೆಂದರೆ ಏನು? ಕರ್ನಾಟಕಕ್ಕೆ ಮುಂದಾದರೂ ನ್ಯಾಯ ಸಿಗುವ ಸಾಧ್ಯತೆಯಿದೆಯೇ? ನಾಳೆ ಕಾವೇರಿ ಐತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸಿದರೆ ನಮ್ಮ ಪಾಡೇನಾದೀತು? ಕರ್ನಾಟಕ ಯಾವ ದಾರಿ ಹಿಡಿದೀತು? ನಮ್ಮ ರಾಜಕೀಯ ಪಕ್ಷಗಳು ಏನು ಪಾತ್ರ ವಹಿಸಿವೆ? ವಹಿಸಬಲ್ಲವು? ಎಂಬುದನ್ನು ನಾಳೆ ನೋಡೋಣ.
(....ಮುಂದುವರೆಯುವುದು)
4 ಅನಿಸಿಕೆಗಳು:
ನಮ್ಮ ರಾಜ್ಯದಲ್ಲಿ ಬೀಳುವ ಮಳೆಯ ನೀರನ್ನು ನಾವು ಸಂಗ್ರಹಿಸಿ ಇಟ್ಟುಕೊಂಡು ಬಳಸುವ ಹಕ್ಕು ನಮಗೆ ಇಲ್ಲ ಎಂದರೆ ಸ್ವಾತಂತ್ರ್ಯಕ್ಕೆ ಏನು ಅರ್ಥ? ಕರ್ನಾಟಕಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲವೆ? ನೀರಾವರಿ ರಾಜ್ಯಗಳ ಹಕ್ಕಾಗಿದ್ದು ಇದರಲ್ಲಿ ಕೇಂದ್ರ ಸರ್ಕಾರ ಮೂಗು ತೋರಿಸುವುದು ರಾಜ್ಯಗಳ ಹಕ್ಕಿನ ಉಲ್ಲಂಘನೆ ಆಗುತ್ತದೆ. ರಾಜ್ಯಗಳ ಹಕ್ಕನ್ನು ಹೀಗೆ ಉಲ್ಲಂಘಿಸಿದರೆ ರಾಜ್ಯಗಳು ಒಕ್ಕೂಟ ವ್ಯವಸ್ಥೆಯಲ್ಲಿ ಉಳಿಯುವುದು ಹೇಗೆ? ತೀವ್ರತರ ಅನ್ಯಾಯ ನಡೆಯುತ್ತಾ ಇದ್ದರೆ ಇದು ಒಕ್ಕೂಟದಿಂದ ಹೊರಗೆ ಹೋಗಿ ಪ್ರತ್ಯೇಕ ದೇಶದ ಚಳುವಳಿ ನಡೆಸಬೇಕಾದ ಅನಿವಾರ್ಯತೆಗೆ ರಾಜ್ಯವನ್ನು ದೂಡಿದಂತೆ ಆಗುವುದಿಲ್ಲವೇ? ತಮಿಳುನಾಡು ಇನ್ನೊಂದು ರಾಜ್ಯದ ಮೇಲೆ ಬೀಳುವ ಮಳೆಯ ನೀರಿನ ಮೇಲೆ ಹಕ್ಕು ಸಾಧಿಸಲು ಹೋಗುವುದು ಆ ರಾಜ್ಯದ ಜನರ ಸ್ವಾಭಿಮಾನಕ್ಕೆ ಧಕ್ಕೆ ಆಗುವುದಿಲ್ಲವೇ? ತಮಿಳುನಾಡಿನ ಜನ ಸ್ವಾಭಿಮಾನ ಇಲ್ಲದ ಪರಾವಲಂಬಿಗಳಂತೆ ವರ್ತಿಸುವುದು ನಾಚಿಕೆಗೇಡು. ಆಯಾ ರಾಜ್ಯದಲ್ಲಿ ಬೀಳುವ ಮಳೆಯ ನೀರಿನ ಹಕ್ಕು ಆಯಾ ರಾಜ್ಯದ್ದಾಗಬೇಕಾಗಿರುವುದು ವೈಜ್ಞಾನಿಕ ಹಾಗೂ ಸಹಜ ನ್ಯಾಯವೂ ಹೌದು. ಪೂರ್ತಿ ನೀರು ಬೇಡ, ಕನಿಷ್ಠ ನ್ಯಾಯೋಚಿತ ಪಾಲೂ ಸಿಗುವುದಿಲ್ಲ ಎಂದರೆ ನ್ಯಾಯಾಲಯಗಳು ಇದ್ದು ಏನು ಪ್ರಯೋಜನ? ಕೋರ್ಟುಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡು ನ್ಯಾಯ ನೀಡುವುದು ಸಮಂಜಸವಲ್ಲ.-ಆನಂದ ಪ್ರಸಾದ್
"ಕಾವೇರಿ ನಮ್ಮದು"ಎನ್ನುವ ಕೂಗನ್ನು ನಾವು ಯಾವಾಗಲೂ ಮಾಡುತ್ತಲೆ ಬಂದಿದ್ದೇವೆ ಆದರೆ ಈ ಕೂಗನ್ನು ಕೇಳುವಷ್ಟು ಸಮಯ ನಮ್ಮ ರಾಜಕೀಯ ನಾಯಕರಿಗೆ ಇದ್ದಂತೆ ಕಾಣುತ್ತಿಲ್ಲ, ನಮ್ಮ ರಾಜ್ಯದ ನೀರನ್ನು ಕೇಳುವ ತಮಿಳು ನಾಡಿಗೆ ಸ್ವಾಭಿಮಾನವೆ ಇಲ್ಲ, ಪರಾವಲಂಬನೆಯಲ್ಲೆ ಸುಖವನ್ನು ಕಾಣುವ ತಮಿಳುನಾಡು ಎಲ್ಲಾ ವಿಚರದಲ್ಲೂ ಕ್ಯಾತೆ ತೆಗಯುತ್ತಲೆ ಬಂದಿದೆ, ನಮಗೆ ಕುಡಿಯೋಕೆ ನೀರು ಇಲ್ಲದಂತ ಸಮಯದಲ್ಲಿ ಮುಂದಿನ ಬೆಳೆಗೆ ನೀರು ಕೇಳುವಂತ ರೀತಿ ನಿಜಕ್ಕೂ ಹೇಯವಾದಂತದ್ದು. ನೀರಿನ ವ್ಯಾಜ್ಯದಲ್ಲೂ ರಾಜ್ಯದ ಒಳಿತನ್ನು ಮರೆತು ರಾಜಕೀಯ ಮಾಡುವ ರಾಜಕಾರಣಿಗಳಿಗೆ ಮಾನವೀಯತೆ ಇದೆಯೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡದೆ ಇರುವುದಿಲ್ಲ, ಕಾವೇರಿ ವಿಷಯ ಬಂದಾಗ ಮಾತ್ರ ಒಟ್ಟಾಗಿ ಕೂಗೆಬ್ಬಿಸುವ ನಾವು ಬೇರೆ ಭಾಷೆಯವರಿಗೆ ಮಣೆ ಹಾಕುವ ಸಂಸ್ಕ್ರುತಿಯನ್ನು ಬಿಟ್ಟು ಸ್ವಾಭಿಮಾನ, ಭಾಷ ಪ್ರೇಮ ಬೆಳಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಕರ್ನಾಟಕದಲ್ಲಿ ಭಾಷೆ, ನೆಲ, ಜಲ ಉಳಿಯಲು ಸಾಧ್ಯ. ಇಲ್ಲವಾದರೆ ನಮ್ಮ ನೆಲದಲ್ಲಿ ನಾವು ಪರಕೀಯರಾಗುವ ದಿನ ದೂರ ಉಳಿದಿಲ್ಲ ಈಗಲಾದರೂ ಎಚ್ಚೆತ್ತುಕೊಳ್ಳಿ ಕನ್ನಡಿಗರೆ!!!!ಶೃತಿಗೋಪಿ
ಕರ್ನಾಟಕದ ನರಸತ್ತ ಕಾಂಗ್ರೆಸ್, ಜೆ,ಡಿ.ಎಸ್,ಬಿಜೇಪಿ ಎಂಪಿಗಳು ಸಂಸತ್ತಿನಲ್ಲಿ ಹೋರಾಟ ಮಾಡೋ ಬದಲು. ಬೆಂಗಳೂರಿನಲ್ಲಿ ತಮ್ಮ ಪ್ರತಾಪದ ನುಡಿಗಳನ್ನು ಕನ್ನಡಿಗರಿಗೆ ಕೇಳಿಸ್ತಾಯಿದ್ದಾರೆ. ಮೊದಲು ಇವಕ್ಕೆ ಚೆನ್ನಾಗಿ ಇಕ್ಕಿ. ಬಡ್ಡಿ ಹೈಕಳು, ನಾಲಾಯಕ್ಕು ಖರ್ಗೆ,ಮೊಯ್ಲಿ,ಮುನಿಯಪ್ಪ,ಆಸ್ಕರ್,ಕೃಷ್ಣ,ಪರಮೇಸ್ವರ,ಸಿದ್ದ,ಧರ್ಮಸಿಂಗ್,ಕುಡುಕ ಅಂಬಣ್ಣ,ಅನಂತ, ನಾಲಾಯಕ್ಕ್ ಬುದ್ದಿಜೀವಿಗಳು ಎಲ್ಲರನ್ನೂ ಸಿಗಿದುಹಾಕಿ ಮುಂಡೆಮಕ್ಕಳ್ನ.
Nimma laykhanagalannu ode nanagay bahala santosha vaeetu e
laykhanagalannu bedugaday madalu prayatnesutenay
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!