ಹಿಂದುಳಿದ ಉತ್ತರ ಕರ್ನಾಟಕ ಮತ್ತು ಮುಂದುವರೆದ ಮೈಸೂರು!
ಭೌಗೋಳಿಕವಾಗಿ ದಕ್ಷಿಣ ಕರ್ನಾಟಕ ಮಳೆ ಚೆನ್ನಾಗಿ ಬೀಳುವ ಗುಡ್ಡಗಾಡು ಪ್ರದೇಶವಾದರೆ ಉತ್ತರ ಕರ್ನಾಟಕ ಹೆಚ್ಚಾಗಿ ಬಯಲುಸೀಮೆ. ಒಳ್ಳೆಯ ಬಯಲಿನ ಕರಿಮಣ್ಣಿನ ಉತ್ತರದ ನಾಡಲ್ಲಿ ನೀರಾವರಿ ಸಿಕ್ಕಿದ್ದೇ ಆದರೆ ಅದ್ಭುತವಾಗಿ ವ್ಯವಸಾಯ ಮಾಡಬಹುದಿತ್ತಾದರೂ ಅಣೆಕಟ್ಟೆ ಕಟ್ಟಿ, ಕಾಲುವೆಯಲ್ಲಿ ನೀರು ಹರಿಸಿ ಜನರಿಗೆ ತಲುಪಿಸಬೇಕೆಂಬ ಮನಸ್ಥಿತಿ ಆಳುಗರಲ್ಲಿ ಇರಲಿಲ್ಲವೇನೋ ಎನ್ನಿಸುತ್ತದೆ. ಏಳಿಗೆಗೆ ಬೇಕಾದ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಆಳುವವರಲ್ಲಿ ಅಸಡ್ಡೆಯಿದ್ದುದನ್ನು ನಾವು ಕಾಣಬಹುದಾಗಿತ್ತು. ಇದಕ್ಕೆ ರಾಜಕೀಯ ಕಾರಣವೆಂದರೆ ಐತಿಹಾಸಿಕವಾಗಿ ಮೈಸೂರು ಒಡೆಯರ್ ಮನೆತನದ ರಾಜರುಗಳ ಆಳ್ವಿಕೆಯಲ್ಲಿದ್ದುದು ಮತ್ತು ಉತ್ತರ ಕರ್ನಾಟಕದ ಬಹುಭಾಗ ಮುಂಬೈ ಮತ್ತು ಹೈದರಾಬಾದ್ ನಡುವೆ ಹಂಚಿಹೋಗಿದ್ದುದು! ದಕ್ಷಿಣ ಕನ್ನಡ ಮದ್ರಾಸ್ ಕೈಲಿತ್ತು. ಬ್ರಿಟೀಶರ ಕೈಲಿದ್ದ ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕಗಳು ಶಿಕ್ಷಣದಲ್ಲಿ ಅದ್ಭುತ ಎನ್ನಿಸುವಂತೆ ಮೈಸೂರಿಗೆ ಸಮಸಮನಾಗೇ ಪ್ರಗತಿಯನ್ನು ಸಾಧಿಸಿದ್ದನ್ನೂ ನಾವು ನೋಡಬಹುದು! ನಿಜಾಮರ ಕರ್ನಾಟಕ ಮಾತ್ರಾ ತೀರಾ ಹಿಂದುಳಿದದ್ದಕ್ಕೆ ಭೌಗೋಳಿಕ, ಐತಿಹಾಸಿಕ ಪರಿಸ್ಥಿತಿಗಳೂ ಪ್ರಮುಖ ಕಾರಣವಾಗಿದ್ದವೆಂದರೆ ತಪ್ಪಾಗಲಾರದು. ಇದೆಲ್ಲಾ ಸ್ವಾತಂತ್ರ್ಯ ಬರುವ ಮೊದಲಿನ ಕತೆ.
ಸ್ವಾತಂತ್ರ್ಯ ಬಂದದ್ದಾಯ್ತು. ಏಕೀಕರಣದ ಹೋರಾಟವೂ ತೀವ್ರವಾಯಿತು. ಭಾಷಾವಾರು
ಪ್ರಾಂತ್ಯಗಳ ಅಗತ್ಯ ಮತ್ತು ಪರಿಣಾಮಕಾರಿ ಆಡಳಿತಕ್ಕೆ ದಾರಿ ಅದೇ ಎನ್ನುವ ಕಾರಣಕ್ಕೆ
ರಾಜ್ಯಗಳ ಮರುರಚನೆಗೆ ಕೇಂದ್ರ ಸಿದ್ಧವಾಯ್ತು. ಅನೇಕಾನೇಕ ಸಂಸ್ಥೆಗಳು ಏಕೀಕರಣದ
ಉದ್ದೇಶಕ್ಕಾಗೆ ಹುಟ್ಟಿದವು. ಉತ್ತರ ಕರ್ನಾಟಕದಲ್ಲೇ ಈ ಚಳವಳಿ ಬಲವಾಯ್ತು. ಆಗಲೂ ಇದ್ದ
ಅಪಸ್ವರ "ಮುಂದುವರೆದ ಮೈಸೂರಿನ ಜೊತೆ ಹಿಂದುಳಿದ ಉತ್ತರ ಕರ್ನಾಟಕ ಬೇಕಿಲ್ಲಾ"
ಎನ್ನುವುದೇ! ಅಂತೂ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆ, ಕರ್ನಾಟಕದ ರಚನೆಯೂ
ಆಯ್ತು. ಗಮನಿಸಿ, ಆಗ ಬೆರೆತದ್ದು ಎರಡು ಸಮಾನ ಏಳಿಗೆ ಹೊಂದಿದ ಪ್ರದೇಶಗಳಲ್ಲಾ! ಬದಲಿಗೆ
ಮುಂದುವರೆದ ಒಂದು ಮತ್ತು ಅದಕ್ಕಿಂತಾ ಹಿಂದುಳಿದ ಐತಿಹಾಸಿಕವಾಗಿ ತಾತ್ಸಾರಕ್ಕೀಡಾದ
ಮತ್ತೊಂದು ನಾಡು.
ಹಿಂದುಳಿದ ಪ್ರದೇಶಗಳು ಎರಡೂ ಕಡೆ ಇವೆ!
ಸ್ವಾತಂತ್ರ ಬಂದು ಬಹುವರ್ಷಗಳ ನಂತರವೂ ಉತ್ತರ ಕರ್ನಾಟಕದ ಹಿಂದುಳಿದಿರುವ ಬಗ್ಗೆ ಕೂಗು ಕೇಳಿದಾಗ, ಅಸಮಾನತೆಯ ಆರೋಪ ಕೇಳಿದಾಗ ಡಾ. ಡಿ ಎಂ ನಂಜುಂಡಪ್ಪನವರ ಮುಂದಾಳ್ತನದಲ್ಲಿ ಸಮಿತಿ ರಚಿಸಿ ವರದಿ ಪಡೆದುಕೊಳ್ಳಲಾಯಿತು. ಕರ್ನಾಟಕದ ಅಷ್ಟೂ ತಾಲ್ಲೂಗಳ ಸ್ಥಿತಿಗತಿ ಅಧ್ಯಯನ ಮಾಡಿ ನೀಡಲಾದ ಆ ವರದಿಯ ಸಾರ ಹಿಂದುಳಿದ ಪ್ರದೇಶಗಳು ಎರಡೂ ಭಾಗದಲ್ಲಿ ಸಮಾನವಾಗೇ ಹರಡಿಕೊಂಡಿವೆ ಎನ್ನುವುದು! ಉತ್ತರ ಕರ್ನಾಟಕದಲ್ಲಿ ೫೯ ತಾಲ್ಲೂಕುಗಳು ಹಿಂದುಳಿದಿದ್ದರೆ ದಕ್ಷಿಣದಲ್ಲಿ ೫೫ ತಾಲ್ಲೂಕುಗಳು. ಇದರರ್ಥ ನಮ್ಮನ್ನು ಪ್ರಜಾಪ್ರಭುತ್ವದ ಹೆಸರಲ್ಲಿ ಇಷ್ಟು ವರ್ಷ ಆಳಿದ ನಾಯಕರುಗಳು ಯಾವುದೇ ಪ್ರದೇಶದವರೇ ಆಗಿದ್ದರೂ ಹಿಂದೆ ಉಳಿಸುವುದರಲ್ಲಿ ಎಲ್ಲರನ್ನೂ ಸಮಾನವಾಗೇ ಕಂಡು ಯಾವುದನ್ನೂ ಏಳಿಗೆ ಮಾಡಿಲ್ಲಾ ಎಂದು! ಇದ್ದುದ್ದರಲ್ಲಿ ಆಗಿರುವ ಶಿಕ್ಷಣ/ ನೀರಾವರಿ/ ಕಾರ್ಖಾನೆಯಂತಹವುಗಳ ನಿರ್ಮಾಣ ಮೊದಲಾದವನ್ನು ನೋಡಿದರೆ ರಾಜಧಾನಿಯ ಸುತ್ತಮುತ್ತ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಇಷ್ಟು ವರ್ಷಗಳಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ನೀರಾವರಿ ಕಾಮಗಾರಿಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಕಟ್ಟಲ್ಪಟ್ಟಿವೆ. ಹಾಗಾಗಿ ಆಗಬೇಕಾದ್ದು ಎಲ್ಲಾ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯೇ ಹೊರತು ಬೇರೆ ರಾಜ್ಯವಲ್ಲಾ ಎನ್ನಬಹುದು!
ಬೇರೆ ರಾಜ್ಯವಾದರೆ ಮಾತ್ರಾ ಏಳಿಗೆ ಎನ್ನೋದು ಪೊಳ್ಳು!
ಚಿಕ್ಕರಾಜ್ಯಗಳು "ಯುಎಸ್ಐ"ನಲ್ಲಿ ಮಾತ್ರಾ ಸುರಕ್ಷಿತ!
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಉತ್ತರ ಮತ್ತು ದಕ್ಷಿಣ ಭಾರತಗಳೇ ಎದುರಾಳಿಗಳಾಗಬಹುದೆಂಬ ಆತಂಕ ವ್ಯಕ್ತಪಡಿಸಿ ಇದನ್ನು ಸರಿದೂಗಿಸಲು ಎಲ್ಲಾ ರಾಜ್ಯಗಳ ಜನಸಂಖ್ಯೆಯೂ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿರಲಿ, ಇದಕ್ಕಾಗಿ ಉತ್ತರದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳನ್ನು ಚಿಕ್ಕರಾಜ್ಯಗಳನ್ನಾಗಿಸುವುದು ಒಳ್ಳೆಯದು ಎಂದಿದ್ದರು. ಹಾಗೆ ಮಾಡುವುದರಿಂದ ಕೇಂದ್ರಸರ್ಕಾರದ ಮೇಲೆ ದೊಡ್ಡ ರಾಜ್ಯದ ಹಿಡಿತ ತಪ್ಪಿಸಲು ಸಾಧ್ಯವೆಂದಿದ್ದರು. ದಕ್ಷಿಣ ಭಾರತದ ಹೈದರಾಬಾದ್ ಭಾರತದ ಎರಡನೇ ರಾಜಧಾನಿಯಾಗಲೀ ಎನ್ನುವವರೆಗೂ ಅವರು ಹೇಳಿದ್ದರು. ಎಂದರೆ ಕೇಂದ್ರದ ಮೇಲೆ ಯಾವ ರಾಜ್ಯವು ದೊಡ್ಡದೋ ಅದರ ಪ್ರಭಾವ, ಹಿಡಿತ ಇರುತ್ತದೆ ಮತ್ತು ಅದು ಸರಿಯಲ್ಲಾ ಎನ್ನುವ ಕಾಳಜಿಯಿಂದಲೇ ಹೇಳಿದ್ದರು.
ಇಂದು ಭಾರತದ ರಾಜಕಾರಣದಲ್ಲಿ ಯಾವ ಪಕ್ಷಗಳು ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾವೋ ಆ ಪಕ್ಷಗಳು ದೇಶದ ಒಪ್ಪುಕೂಟ ಸ್ವರೂಪದ ಬಗ್ಗೆ ನಂಬಿಕೆಯನ್ನು ಹೊಂದಿರುವಂತೆ ತೋರುತ್ತಿಲ್ಲ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆನ್ನುವ ಮನಸ್ಥಿತಿಯಿಲ್ಲದೆ, ಚಿಕ್ಕರಾಜ್ಯ ಮಾಡಬೇಕೆನ್ನುವುದು "ಬಲಿಷ್ಟ ಕೇಂದ್ರ ಮತ್ತು ಬಲಹೀನ ರಾಜ್ಯ"ದ ನಿರ್ಮಾಣದ ಪ್ರಯತ್ನವಾಗುತ್ತದೆ. ಇಂದು ಇಪ್ಪತ್ತೆಂಟು ಸಂಸದರ ಕರ್ನಾಟಕವು ಹೇಗೆ ಹೆಚ್ಚಿನ ಸಂಸದರ ಮಹಾರಾಷ್ಟ್ರ, ತಮಿಳುನಾಡು ಹಾಗೂ ಆಂಧ್ರಗಳ ದೆಹಲಿ ಲಾಬಿಯ ಎದುರು ಕೈಚೆಲ್ಲುತ್ತದೆ ಎನ್ನುವುದು ಒಂದು ಕಡೆ, ಹಾಗೇ ಕಡಿಮೆ ಸಂಸದರನ್ನು ಹೊಂದಿರುವ ಹೆಚ್ಚು ರಾಜ್ಯಗಳಿರುವ ಈಶಾನ್ಯ ಭಾರತದ ಸಮಸ್ಯೆಗಳಿಗೆ ಭಾರತದ ಸಂಸತ್ತಿನಲ್ಲಿ ಸಿಗುವ ಆದ್ಯತೆಗಳ ಬಗ್ಗೆ ಕಣ್ಣು ಹಾಯಿಸಿದರೆ ಚಿಕ್ಕ ರಾಜ್ಯಗಳು ಭಾರತದಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದು ಕಷ್ಟವೇನೋ ಎನ್ನುವ ಅನುಮಾನ ಮೂಡುತ್ತದೆ.
ಭಾರತವು ಸರಿಯಾದ ಸಂಯುಕ್ತ ಸಂಸ್ಥಾನವಾದಲ್ಲಿ ಇಂತಹ ತೊಡಕುಗಳನ್ನು ನಿವಾರಿಸಬಹುದಾಗಿದೆ. ‘ದೊಡ್ಡದಕ್ಕೆ ಬಲ/ ಪ್ರಭಾವ ಹೆಚ್ಚು’ ಎನ್ನುವ ಪರಿಸ್ಥಿತಿ ಇಂದಿನ ಭಾರತದಲ್ಲಿರುವುದು ನಮ್ಮ ಅನೇಕ ಸಮಸ್ಯೆಗಳು ಬಗೆಹರಿಯದಿರಲು, ಬಗೆಹರಿದರೂ ಪರಿಹಾರಗಳು ಪಕ್ಷಪಾತತನದಿಂದ ಕೂಡಿವೆ ಎನ್ನಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೇಗೆ ಇದನ್ನು ಬಗೆಹರಿಸುವುದು ಎಂಬುದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ!
ಭಾರತ ಒಪ್ಪುಕೂಟದಲ್ಲಿ...
ರಾಜ್ಯಸಭೆಗೆ ಇಂದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ ಎನ್ನುವ ಅರ್ಥವಿದ್ದರೂ ಸದಸ್ಯ ಬಲ, ಆರ್ಥಿಕ ವಿಷಯಗಳಲ್ಲಿನ ಮಿತಿಯಂತಹ ಹಲವಾರು ವಿಷಯಗಳಲ್ಲಿ ಲೋಕಸಭೆಗಿಂತಲೂ ಕಡಿಮೆ ಅಧಿಕಾರಗಳಿವೆ. ಎರಡೂ ಸದನಗಳ ಸದಸ್ಯ ಬಲವನ್ನು ಸಮಾನವಾಗಿಸುವ ಮೂಲಕ ಈ ಕೊರತೆಯನ್ನು ನೀಗಿಸಬಹುದಾಗಿದೆ. ರಾಜ್ಯಸಭೆಯಲ್ಲಿ ಪ್ರತಿರಾಜ್ಯದಿಂದ ಸಮಾನ ಪ್ರಾತಿನಿಧ್ಯವಿರುವುದೂ ಕೂಡಾ ಅಗತ್ಯವಾಗಿದೆ. ಅಮೇರಿಕಾದ ಸೆನೆಟ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಮರುರೂಪಿಸಬಹುದಾಗಿದೆ.
ಎಷ್ಟೇ ಚಿಕ್ಕ ರಾಜ್ಯವಿರಲಿ ಅದಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು, ಅದರ ಸಹಮತಿಯಿಲ್ಲದೆ ಜಾರಿಮಾಡುವಂತಿಲ್ಲ ಎನ್ನುವ ವ್ಯವಸ್ಥೆ ಇರಬೇಕಾಗಿದೆ. ಇದು ಬಹುಮತದ ಕಾರಣದಿಂದಲೇ ರಾಜ್ಯವೊಂದರ ಮೇಲೆ ಕೇಂದ್ರ ಅಧಿಕಾರ ಚಲಾಯಿಸುವುದನ್ನು ತಪ್ಪಿಸುತ್ತದೆ. ಇಡೀ ಭಾರತದ ಸಂಸತ್ತು ಒಮ್ಮತದಿಂದ ತನ್ನೆಲ್ಲಾ ಸದಸ್ಯ ಬಲ ಬಳಸಿ ರಾಜ್ಯವೊಂದರ ಹಕ್ಕುಗಳನ್ನು ಮೊಟಕುಗೊಳಿಸಿಬಿಡಬಹುದಾದ ಅಪಾಯ ಇದರಿಂದ ದೂರವಾಗಬಹುದಾಗಿದೆ.
ಚಿಕ್ಕರಾಜ್ಯಗಳು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವೆನ್ನುವ ಮಾತಿಗೆ ಅರ್ಥ ಸಿಗಬೇಕೆಂದರೆ ರಾಜ್ಯಗಳಿಗೆ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವಾದರೂ ಇರಬೇಕಲ್ಲವೇ? ಹಾಗಾಗಿ ಕೇಂದ್ರವು ಕೇಂದ್ರಪಟ್ಟಿ ಮತ್ತು ಜಂಟಿ ಪಟ್ಟಿಯಲ್ಲಿರುವ ಆಡಳಿತಾತ್ಮಕ ವಿಷಯಗಳಲ್ಲಿನ ತನ್ನ ಹಕ್ಕನ್ನು ರಾಜ್ಯಗಳಿಗೆ ಬಿಟ್ಟು ಕೊಡಬೇಕು. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮೊದಲಾದ ಕೆಲವೇ ಕೆಲವು ವಿಷಯಗಳನ್ನು ಮಾತ್ರಾ ತಾನುಳಿಸಿಕೊಳ್ಳಬೇಕು. ಇನ್ನು ಕೆಲವರು ಪ್ರತಿಪಾದಿಸಿದಂತೆ ದ್ವಿಪೌರತ್ವವನ್ನೂ ಪರಿಗಣಿಸಬಹುದಾಗಿದೆ.
ಇಂಥಾ ವಿಷಯಗಳೆಲ್ಲಾ ಜಾರಿಯಾದಾಗ ರಾಜ್ಯಗಳ ಸ್ವಾಯತ್ತತೆಗೆ ಭದ್ರತೆ ಸಿಗುತ್ತವೆ. ಇಂದಿನ ಭಾರತದಲ್ಲಿ ಔಟ್ಲುಕ್ನಲ್ಲಿನ ಬರಹದಂತೆ ಆಡಳಿತದ ಕಾರಣಕ್ಕಾಗಿ ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಾಗುವುದಾದಲ್ಲಿ ರಾಜ್ಯಗಳು ಮತ್ತಷ್ಟು ಅತಂತ್ರವಾಗುವುದು ಖಚಿತ. ಬಲಿಷ್ಠವಾದ ಕೇಂದ್ರವು ಸಾಧ್ಯವಾಗುವುದು ಬಲಶಾಲಿಯಾದ ರಾಜ್ಯಗಳಿಂದಲೇ ಹೊರತು ರಾಜ್ಯಗಳನ್ನು ಚಿಕ್ಕದಾಗಿಸಿ, ಕೇಂದ್ರದಲ್ಲಿ ಅವುಗಳ ಪ್ರಾತಿನಿಧ್ಯ ಕಡಿಮೆ ಮಾಡಿಸಿ, ಅವುಗಳ ಬಲಕುಂದಿಸುವುದರಿಂದಲ್ಲಾ!!
ರಾಜ್ಯಸರ್ಕಾರವೇ ನಂಜುಂಡಪ್ಪ ವರದಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು ಸರಿಯಾದ ದಾರಿ. ಉತ್ತರ ಕರ್ನಾಟಕದವರೂ ಕೂಡಾ ಕರ್ನಾಟಕದ ಭಾಗವಾಗಿರುವುದು ತಮ್ಮಿಚ್ಚೆಯಿಂದಲೇ ಹೊರತು ಯಾರ ಬಲವಂತಕ್ಕಾಗಲೀ, ಯಾರ ಉಪಕಾರಕ್ಕಾಗಲೀ ಅಲ್ಲಾ ಎನ್ನುವುದು ಕಟು ದಿಟ! ಇಷ್ಟಕ್ಕೂ ಮೀರಿ ನಿಜಕ್ಕೂ ಜನಪರ ಕಾಳಜಿಯಿರದ, ಇನ್ನೊಂದು ರಾಜ್ಯವಾದರೆ ತಾವಲ್ಲಿ ಅಧಿಕಾರ ಹಿಡಿಯಬಹುದೆನ್ನುವ ರಾಜಕಾರಣಿಗಳ ಕೀಳು ಆಶಯಗಳನ್ನು ಮೀರಿ ನಾಡು ಈ ಬಗ್ಗೆ ಚಿಂತಿಸಬೇಕಾಗಿದೆ!
2 ಅನಿಸಿಕೆಗಳು:
ಕೇವಲ ಕೆಲವು ದುರಾಸೆ ರಾಜಕಾರಣಿಗಳ ಕುರ್ಚಿ ಆಸೆಗೆ ಇಡೀ ಕರ್ನಾಟಕವನ್ನೇ ಕತ್ತರಿಸುವ ಹುನ್ನಾರವಿದು ಕನ್ನಡಿಗರೇ.. ದಯವಿಟ್ಟು ಇದನ್ನು ವಿರೋಧಿಸಿ..
its not small state or big main problem is with how we are distrubuting our lokasabha and vindanasabha constituency, you can see small districts like udapi and bidar have more constitunecy than chickmagalur or uttarakannda district. same in loksabha tamil nadu is smaller in size of karnataka but have more loksabha members. the distribution should be revoked
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!