ಪ್ರಮಾಣವಚನದ ಭಾಷೆ ನಿಜಕ್ಕೂ ಸಮಸ್ಯೇನಾ?


ಕರ್ನಾಟಕದ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದವರು ಶಾಸಕರುಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊನ್ನೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಇಬ್ಬರು ಸಚಿವರು ಮರಾಟಿಯಲ್ಲೂ, ಖಮರುಲ್ ಇಸ್ಲಾಂ, ಅಶೋಕ್ ಖೇಣಿ,  ಸಂಜಯಪಾಟೀಲ್ ಮತ್ತು  ಉಮೇಶ್ ಜಾಧವ್‌ ಅವರುಗಳು ಇಂಗ್ಲೀಶ್ ಭಾಷೆಯಲ್ಲೂ, ಉಳಿದವರು ಕನ್ನಡದಲ್ಲೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೊಂದು ರೀತಿಯಲ್ಲಿ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದ್ದು ಇದಕ್ಕೆ ಕೆಲವು ಜನರ ಕಿತಾಪತಿಯೂ, ಮತ್ತೆ ಕೆಲವರ "ಸ್ಪಂದನೆಯನ್ನೇ ಮರೆತ ಜಡತ್ವವೂ" ಜೊತೆಗೆ ಭಾರತದ ಭಾಷಾನೀತಿಯೂ ಕಾರಣವಾಗಿದೆ!!

ಬೇರೆ ಭಾಷೆಯಲ್ಲಿ ಪ್ರಮಾಣವಚನ ತಪ್ಪಾ?!

ಇಷ್ಟಕ್ಕೂ ಕರ್ನಾಟಕದ ವಿಧಾನಸಭೆಗೆ ಆಯ್ಕೆಯಾಗುವ ಸ್ಪರ್ಧಾಳುಗಳು ನಾನಾ ತಾಯ್ನುಡಿಯವರಾಗಿರುತ್ತಾರೆ. ಅವರವರ ತಾಯ್ನುಡಿಯಲ್ಲಿ ಪ್ರಮಾಣ ವಚನ ತೆಗೆದುಕೊಂಡರೆ ತಪ್ಪೇನು ಎನ್ನಿಸಬಹುದು. ಸಮಸ್ಯೆ ಇರುವುದು ಯಾವುದೋ ಭಾಷೆಯಲ್ಲಿ ಪ್ರಮಾಣವಚನ ತೆಗೆದುಕೊಳ್ಳುವುದರಲ್ಲ.. ಬದಲಾಗಿ ಕರ್ನಾಟಕದ ಸಾರ್ವಭೌಮತ್ವವನ್ನು ಅಳಿಸಿಹಾಕಿ ಕನ್ನಡಿಗರಿಗೆ ಸವಾಲೆಸೆಯುವ ಉದ್ದೇಶವನ್ನು, ಈ ಜನರು ಹೊಂದಿರುವುದಾದಲ್ಲಿ ಅದು ಸಮಸ್ಯೆಯಾಗಿ ಕಾಡುತ್ತದೆ. ಇದನ್ನು ಸ್ವಲ್ಪ ವಿಸ್ತರಿಸಿ ನೋಡೋಣ.

ಮರಾಟಿಯಲ್ಲಿ ಪ್ರಮಾಣವಚನ ಸ್ವೀಕರಿಸಿದವರು, ಕರ್ನಾಟಕವನ್ನು ಒಡೆದು ಮಹಾರಾಷ್ಟ್ರಕ್ಕೆ ಬೆಳಗಾವಿಯನ್ನು ಸೇರಿಸಲು ತುದಿಗಾಲಲ್ಲಿ ನಿಂತಿರುವ... ಅವಕಾಶ ಸಿಕ್ಕಾಗಲೆಲ್ಲಾ ಭಾಷೆಯ ಹೆಸರಲ್ಲಿ ಕನ್ನಡನಾಡನ್ನು ಕನ್ನಡಿಗರನ್ನು ದೂಷಿಸುವ ಎಂಇಎಸ್ ಪಕ್ಷದ ಮಂದಿ. ಬಹುವರ್ಷಗಳಿಂದ ನಮ್ಮ ನಾಡಲ್ಲಿ ನೆಲೆಸಿ ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆತಿರುವ ಮರಾಟಿಗರ ಮನಸ್ಸಲ್ಲಿ ಪ್ರತ್ಯೇಕತೆಯ ವಿಷಬೀಜ ಬಿತ್ತುತ್ತಿರುವ ಮಂದಿ. ಕನ್ನಡ ಧ್ವಜವನ್ನು ಸುಟ್ಟು, ಕರ್ನಾಟಕ ರಾಜ್ಯೋತ್ಸವಗಳಂದು ಕಪ್ಪುಬಾವುಟ ಹಾರಿಸುವ ಮಂದಿ. ಚುನಾವಣೆಯ ಪ್ರಚಾರಕ್ಕೆ ಬಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳು ಯಾರನ್ನು ಕುರಿತು, ‘ಇವರನ್ನು ಗೆಲ್ಲಿಸಿ, ಕರ್ನಾಟಕವನ್ನು ಬೆರಳತುದಿಯಲ್ಲಿ ಕುಣಿಸುತ್ತೇವೆ’ ಎಂದು ಸಾರಿದ್ದರೋ ಆ ಮಂದಿ. ಹಾಗಾಗಿ ಇವರ ಮರಾಟಿ ಭಾಷೆಯಲ್ಲಿನ ಪ್ರಮಾಣವಚನ ಸ್ವೀಕಾರ ಬರಿಯ ಭಾಷೆಗೆ ಸಂಬಂಧಿಸಿದ್ದಲ್ಲಾ! ಅದು ಕನ್ನಡಿಗರ ಸ್ವಾಭಿಮಾನಕ್ಕೆಸೆದ ಸವಾಲು! ಬೆಳಗಾವಿಯ ಅಭಿಮಾನಶೂನ್ಯ ಕನ್ನಡಿಗರ ಮುಖಕ್ಕೆತ್ತಿದ ಮಂಗಳಾರತಿ!

ಇನ್ನು ಖಮರುಲ್ ಇಸ್ಲಾಂ ಅವರು ನಡೆದುಕೊಂಡ ಬಗೆಯೂ ಖಂಡನೆಗೆ ಅರ್ಹವಾದುದೇ. ಧಾರ್ಮಿಕ ಅಲ್ಪಸಂಖ್ಯಾತರು ಎಂದಾಕ್ಷಣ ಅವರಿಗೇನೂ ಕೋಡಿಲ್ಲಾ! ಹಾಗೆಂದು ಅವರೂ ಭಾವಿಸಿರಲಿಕ್ಕಿಲ್ಲಾ!! ಆದರೆ ತಮ್ಮದು ಬೇರೆಯೇ ಐಡೆಂಟಿಟಿ, ನಾವು ಅಲ್ಪಸಂಖ್ಯಾತರು ಎಂದು ಸಾರುವ ಹುನ್ನಾರದ ನಡೆಯಾಗಿ ಇದು ಜನತೆಯ ಕಣ್ಣಿಗೆ ಕಾಣುತ್ತಿರುವುದರಲ್ಲಿ ಸುಳ್ಳಿಲ್ಲಾ! ನಾಡಿನ ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಬೇರೆಯಾಗಿಸುವ, ಆ ಮೂಲಕ ತಮ್ಮದೇನೋ ಬೇಳೆ ಬೇಯಿಸಿಕೊಳ್ಳುವ ಕುತಂತ್ರವೊಂದಲ್ಲದೆ ಇನ್ಯಾವ ಕಾರಣವನ್ನೂ ಖಮರುಲ್ ಇಸ್ಲಾಂ ಅವರ ಈ ನಡವಳಿಕೆಯಲ್ಲಿ ಕಾಣಲಾಗುತ್ತಿಲ್ಲಾ!!

ಬೀದರಿನ ಶಾಸಕರಾದ ಅಶೋಕ್ ಖೇಣಿಯವರು ಯಾಕೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲಾ ಎನ್ನುವುದು ಮಾತ್ರಾ ವಿಚಿತ್ರವಾದ ಸಂಗತಿಯಾಗಿದೆ. ಕನ್ನಡ ಮಕ್ಕಳ ಪಕ್ಷವೆನ್ನುವ ಹೆಸರಿಗೇ ಇವರ ನಡೆ ಕಳಂಕವೆನ್ನಿಸಿದರೆ ಆಶ್ಚರ್ಯವಿಲ್ಲಾ.. ಬಹುಶಃ ಇವರು ಇಂಗ್ಲೀಶನ್ನೇ "ಉದ್ದಿಮೆಗಳ ಭಾಷೆ" ಎಂದೋ, ಕನ್ನಡನಾಡಿನ ಏಕೈಕ ಗೌರವಾನ್ವಿತ ಭಾಷೆಯೆಂದೋ ತಿಳಿದಿರಬೇಕು.

ವ್ಯವಸ್ಥೆಯ ತಿಕ್ಕಲುತನ!

ಇನ್ನು ತಮಾಶೆಯೆಂದರೆ ಕನ್ನಡನಾಡಿನ ವಿಧಾನಸಭೆಯಲ್ಲಿ ಇವರೆಲ್ಲಾ ತಮಗೆ ಬೇಕಾದ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಅಧಿಕಾರವನ್ನು ಭಾರತೀಯ ಸಂವಿಧಾನವೇ ನೀಡಿದೆ ಎನ್ನುವುದು! ಭಾರತದ ಸಂಸತ್ತಿನಲ್ಲಿ ಇರಾನಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವುದು ಹೇಗೆ ಅಸಂಬದ್ಧವೋ ಹಾಗೇ ನಮ್ಮ ನಾಡಿನಲ್ಲಿ ಮರಾಟಿ, ತೆಲುಗು, ತಮಿಳು, ಹಿಂದೀ, ಇಂಗ್ಲೀಶ್ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸುವುದೂ ಅಸಂಬದ್ಧ ಎನ್ನುವುದು ನಮ್ಮ ಸಂವಿಧಾನ ರಕ್ಷಕರ ಕಣ್ಣಿಗೆ ಕಾಣುವುದಿಲ್ಲಾ. ಇದು ಯಾವ ಮಟ್ಟಕ್ಕೆ ಕುರುಡೆಂದರೆ ಇದೇ ನೆಲದ ತುಳುವಿನಲ್ಲಿ ಪ್ರಮಾಣವಚನವನ್ನು ಸ್ವೀಕರಿಸುವುದನ್ನು     "ಇದು ಸಂವಿಧಾನಬಾಹಿರ.. ಹಾಗಾಗಿ ಅಕ್ರಮ" ಎನ್ನಲಾಗಿದೆ.  ನಿನ್ನೆ ವಸಂತ್ ಬಂಗೇರಾರವರು ತುಳುಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದನ್ನು ತಡೆಯಲಾಯಿತು. ನಂಬಿ... ಕರ್ನಾಟಕದ ವಿಧಾನಸಭೆಯಲ್ಲಿ ಅಸ್ಸಾಮಿ, ಮಣಿಪುರಿ ಭಾಷೆಗಳಲ್ಲಿ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು.. ಹುಟ್ಟಿದಾಗಿನಿಂದ ಹೆಸರೇ ಕೇಳಿರದ ಮೈಥಿಲಿ,  ಡೋಗ್ರಿ, ಬೋಡೋ ಮೊದಲಾದ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಬಹುದು. ಆದರೆ ತುಳು, ಕೊಡವ ತೆಕ್ಕುಗಳಲ್ಲಿ ಸ್ವೀಕರಿಸುವಂತಿಲ್ಲಾ! ಇದನ್ನು ನಿಜವಾಗಿ ವ್ಯವಸ್ಥೆಯ ತಿಕ್ಕಲುತನ ಎನ್ನದೇ ಬೇರೇನೂ ಅನ್ನಲು ಸಾಧ್ಯವಿಲ್ಲಾ!

ಸರಿಯಾದ ವ್ಯವಸ್ಥೆಯಲ್ಲಿ...

ಹಾಗಾದರೆ ಕರ್ನಾಟಕದ ವಿಧಾನಸಭೆಯಲ್ಲಿನ ಶಾಸಕರಾಗುವವರು ಯಾವ ನುಡಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಭಾರತದ ಸಂಸತ್ತಿನಲ್ಲಿ ಹೇಗೆ ಎಂಟನೇ ಶೆಡ್ಯೂಲಿನಲ್ಲಿರುವ ಯಾವುದೇ ಭಾಷೆಯಲ್ಲಿ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದಿರುವುದನ್ನು ಹಾಗೇ ಕರ್ನಾಟಕದ ವಿಧಾನಸಭೆಗೆ ನೇರವಾಗಿ ಅನ್ವಯಿಸಲಾಗದು. ಕನ್ನಡನೆಲದ ಯಾವುದೇ ಭಾಷೆಯಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ ಅವಕಾಶ ಇಲ್ಲಿನ ಶಾಸಕರಾಗುವವರಿಗೆ ಇರಬೇಕು. ಈ ನೆಲದ ನುಡಿಯೆಂದರೆ ಇಲ್ಲಿಗೆ ವಲಸೆ ಬಂದು ನೆಲೆಸಿದವರ ನುಡಿಗಳಲ್ಲಾ! ಅದು ಈ ನೆಲದ ನುಡಿಗಳಾದ ಕನ್ನಡ, ತುಳು, ಕೊಡವ ಮುಂತಾದವು ಮಾತ್ರಾ! ಹಾಗಾದರೆ ವಿಧಾನಸಭೆಯ ಕಲಾಪ ನಡೆಯಬೇಕಾದ ಭಾಷೆ? ನಿಸ್ಸಂದೇಹವಾಗಿ ಕನ್ನಡವೇ!! ಉಳಿದ ಭಾಷಿಕರು ನಿಜಕ್ಕೂ ಕನ್ನಡದಲ್ಲಿ ವ್ಯವಹರಿಸಲು ಅಶಕ್ತರಾಗಿದ್ದಲ್ಲಿ ನುಡಿಮಾರುಗರನ್ನು ಬಳಸಿಕೊಳ್ಳುವ ಅವಕಾಶವಂತೂ ಇದ್ದೇ ಇದೆಯಲ್ಲಾ!!

ಕನ್ನಡಿಗರ ವಿರೋಧ ಭಾಷೆಯ ಕುರಿತಲ್ಲಾ!

ನಿಜಕ್ಕೂ ಬೇರೆ ಬೇರೆ ಭಾಷೆಯ ಜನರೊಂದಿಗೆ ಸೌಹಾರ್ದಯುತವಾಗಿ ಬದುಕುವ ಜೀವನಶೈಲಿಯ ಕನ್ನಡಿಗರಿಗೆ ಸಹೃದಯತೆಯ ಪಾಠವನ್ನು ಯಾರೂ ಹೇಳಿಕೊಡಬೇಕಾದ ಅಗತ್ಯವಿಲ್ಲಾ. ಇಷ್ಟಕ್ಕೂ ಮರಾಟಿ, ಇಂಗ್ಲೀಶ್ ಭಾಷೆಗಳನ್ನು ಬಳಸಿ ಯಾರಾದರೋ ಪ್ರಮಾಣವಚನ ಸ್ವೀಕರಿಸಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲಾ. ಇದನ್ನು ಒಪ್ಪಲಾರದಷ್ಟು ಸಣ್ಣತನವೂ ಕನ್ನಡಿಗರಲ್ಲಿಲ್ಲಾ. ಇಲ್ಲಿ ವಿರೋಧವಿರುವುದು ನಮ್ಮ ನಾಡನ್ನು ಒಡೆಯುವ ಸಲುವಾಗೇ ತೊಡೆತಟ್ಟಿ ಸೆಣೆಸಲು ಸಜ್ಜಾಗಿರುವವರ ಸವಾಲಿಗೆ. ಕನ್ನಡ ಬಂದರೂ ಬೇಕೆಂದೇ ಅದನ್ನು ತಿರಸ್ಕರಿಸುವ, ಧಿಕ್ಕರಿಸುವ ಮನಸ್ಥಿತಿಯ ಬಗ್ಗೆ! ನಾಡಿನ ಜನರ ಒಗ್ಗಟ್ಟನ್ನು ಮುರಿದು ಲಾಭ ಮಾಡಿಕೊಳ್ಳಬಲ್ಲೇ ಎಂಬ ಹವಣಿಕೆಯ ಬಗ್ಗೆ! ಕನ್ನಡ ಬಳಸುವುದು ಕೀಳು ಎಂಬ ಕೀಳರಿಮೆಯನ್ನು ಜಗತ್ತಿಗೆ ಸಾರಲು ನಿಂತವರ ಬಗ್ಗೆ! ಕನ್ನಡ ನೆಲದಲ್ಲೇ ದಶಕಗಳಿಂದ ಬದುಕುತ್ತಿದ್ದರೂ ಕನ್ನಡ ಕಲಿಯುವುದಿಲ್ಲಾ ಎನ್ನುವ ಉದ್ಧಟತನದ ಬಗ್ಗೆ!

ಕೊನೆಹನಿ: ನೆಲಕಚ್ಚಿದ್ದ ಎಂಇಎಸ್ ಪಕ್ಷಕ್ಕೆ ಮತ್ತೆ ಜೀವ ತಂದುಕೊಡುತ್ತಿರುವುದು ಎಷ್ಟು ಬಾರಿಸಿದರೂ ಸತ್ತಂತೆಯೇ ಮಲಗಿ ಮೈಮರೆತು ಕರ ಕಮಲ ಸಂಜಾತರಾಗೇ ತಲೆಮೇಲೆ ಹೊರೆ ಹೊತ್ತಂತಿದ್ದು ಅದರಲ್ಲೇ ಧನ್ಯರಾಗುತ್ತಿದ್ದೇವೆನ್ನುವ ಭ್ರಮೆಯಲ್ಲಿರುವ ಬೆಳಗಾವಿಯ ಕನ್ನಡಿಗರೇ!

ಅನಿಯಂತ್ರಿತ ವಲಸೆ ಮತ್ತು ಕಾನೂನು ಅವ್ಯವಸ್ಥೆ!

(ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್ ಇ ಪೇಪರ್)
೨೬.೦೫.೨೦೧೩ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಒಂದು ಬರಹ ಅಚ್ಚಾಗಿದೆ. ಇದು "ROUTES OF LABOUR" ಎನ್ನುವ ಹೆಸರಲ್ಲಿ ಬಂದಿದ್ದು ಇದರಲ್ಲಿ ಅತಿಯಾಗಿ ಗಮನ ಸೆಳೆಯುವ ಸುದ್ದಿಯೇನೆಂದರೆ ಬೆಂಗಳೂರಿನ ಪೊಲೀಸರು ಎದುರಿಸುತ್ತಿರುವ ಸವಾಲಿನದ್ದು! ಬೆಂಗಳೂರಿನ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರೆಂದು ಹೆಸರಾಗಿದ್ದ ಶ್ರೀ ಬಿ ಬಿ ಅಶೋಕ್ ಕುಮಾರ್‌ರವರು ಹೇಳಿದ್ದಾರೆಂದು ಪ್ರಕಟವಾಗಿರುವ ಈ ಅನಿಸಿಕೆ ನಿಜಕ್ಕೂ ಮಹತ್ವದ್ದಾಗಿದದ್ದು ನಾಡಿನಲ್ಲಿ ಬದಲಾಗಬೇಕಾದ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತಿದೆ.

ಅನಿಯಂತ್ರಿತ ವಲಸೆ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲು!

ನಗರದಲ್ಲಿ ನಡೆಯುವ ನೂರು ಅಪರಾಧ ಪ್ರಕರಣಗಳಲ್ಲಿ ನಲವತ್ತರಷ್ಟು ನಡೆಯುತ್ತಿರುವುದು ವಲಸಿಗರಿಂದ. ಕೊಲೆ, ಕೊಲೆಯತ್ನ, ದರೋಡೆ, ಕಳ್ಳತನವೇ ಮೊದಲಾದ ಅಪರಾಧಗಳನ್ನು ಎಸಗುವವರಲ್ಲಿ ವಲಸಿಗರದ್ದು ಮೇಲುಗೈ. ಪೊಲೀಸರು ಎದುರಿಸುತ್ತಿರುವ ಪ್ರಮುಖವಾದ ಸಮಸ್ಯೆಯೆಂದರೆ ಈ ಅಪರಾಧಿಗಳನ್ನು ಪತ್ತೆಹಚ್ಚುವುದರಲ್ಲಿ ಇರುವ ತೊಡಕು. ಹೊರರಾಜ್ಯಗಳಿಂದ ಬಂದ ವಲಸಿಗರೇನಾದರೂ ಅಪರಾಧವೆಸಗಿ ತಮ್ಮ ತವರುರಾಜ್ಯಕ್ಕೆ ಓಡಿಹೋಗಿ ತಲೆಮರೆಸಿಕೊಂಡರೆಂದರೆ ಮುಗಿಯಿತು. ಆ ಅಪರಾಧಿಯ ಸುಳಿವು ಸಿಗುವುದೇ ಕಷ್ಟ, ಸಿಕ್ಕರೂ ಹಿಡಿದು ತರುವುದು ಸುಲಭವಲ್ಲಾ! ಹೀಗಾಗಿ ಕೊನೆಗಾಣದ ನೂರಾರು ಅಪರಾಧ ಪ್ರಕರಣಗಳು ನಮ್ಮಲ್ಲಿವೆ. ಈ ವರದಿಯಲ್ಲಿ ಬರೆಯಲಾಗಿರುವ ಮತ್ತೊಂದು ಕುತೂಹಲದ ವಿಷಯವೆಂದರೆ ನೇಪಾಳದ ವಲಸಿಗರದ್ದು! ದೇಶಭಕ್ತಿಗೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾದ ನೇಪಾಳ ಮತ್ತು ಈಶಾನ್ಯರಾಜ್ಯದ ಜನರು ೧೯೭೦ರಿಂದೀಚಿಗೆ ದಕ್ಷಿಣ ಭಾರತಕ್ಕೆ ವಲಸೆ ಬರುತ್ತಿದ್ದು, ಅವರಲ್ಲಿ ಕೆಲವರು ಇಲ್ಲಿ ಅಪರಾಧ ಮಾಡಿ ತವರಿಗೆ ಮರಳಿ ಸಾಹುಕಾರರಾಗಿರುವುದು ಒಂದು ಟ್ರೆಂಡ್ ಆಗಿದೆಯಂತೆ. ಹಾಗಾಗಿ ಆ ನಾಡಿನ ಕ್ರಿಮಿನಲ್ಲುಗಳಿಗೆ ಬೆಂಗಳೂರು ಒಂದು ಅವಕಾಶಭರಿತ ನಗರವಾಗಿದೆಯಂತೆ! ಪೊಲೀಸರು ಹೇಳುವುದೇನೆಂದರೆ ಕೆಲವು ಕಿಡಿಗೇಡಿಗಳ ತಂಡಗಳು ಈ ತೆರನಾಗಿ ಅಪರಾಧವೆಸಗುತ್ತಿದ್ದು ಅಮಾಯಕ ವಲಸಿಗರನ್ನು ದಾಳವಾಗಿ ಬಳಸಿಕೊಳ್ಳುತ್ತಿವೆಯಂತೆ. ಈ ವಲಸಿಗ ಅಮಾಯಕರು ತಮಗೆ ಬೆಂಗಳೂರಿನಲ್ಲಿ ಸಿಗುವ ಕಡಿಮೆ ಸಂಬಳದಿಂದ (ತಿಂಗಳಿಗೆ ಸುಮಾರು ರೂ. ೩೦೦೦/-) ನೊಂದುಕೊಂಡು ಇಂಥಾ ಅಪರಾಧಗಳನ್ನು ಎಸಗುತ್ತಿದ್ದಾರಂತೆ!!

ಇದೆಂಥಾ ಸಮರ್ಥನೆ?

ಪಾಪಾ! ಪೊಲೀಸರು ನಮ್ಮ ನಾಡಿಗೆ ಬರುವ ವಲಸಿಗರನ್ನು ಸಮರ್ಥಿಸುವಂತೆ ನೀಡಿರುವ ಕೆಲವು ಹೇಳಿಕೆಗಳು ಈ ವರದಿಯಲ್ಲಿದೆ. ೪೦%ರಷ್ಟು ಅಪರಾಧಗಳನ್ನು ಎಸಗುವ ಲೆಕ್ಕ ನೀಡುತ್ತಲೇ ಹೀಗೆ ಮಾಡಲು ಅವರಿಗೆ ಸರಿಯಾದ ಸಂಬಳವಿಲ್ಲಾ ಎನ್ನುವ, ಖದೀಮರ ಗ್ಯಾಂಗುಗಳ ಬೆದರಿಕೆಗೆ ಹೀಗೆ ಮಾಡುತ್ತಾರೆನ್ನುವ, ಅವರಿಗೆ ವಾಸಿಸಲು ಯೋಗ್ಯವಾದ ಮೂಲಭೂತ ಸೌಕರ್ಯಗಳಿಲ್ಲ ಎನ್ನುವ ಕಾರಣಗಳನ್ನು ಹೇಳುತ್ತಾರೆ. ಹೀಗೆ ಹೇಳುತ್ತಲೇ ಇಲ್ಲಿ ಅಪರಾಧವೆಸಗಿ ತವರಿಗೆ ಮರಳಿ ಸಾಹುಕಾರಿಕೆಯ ಜೀವನ ಸಾಗಿಸುವ ಟ್ರೆಂಡ್ ಬಗ್ಗೆಯೂ ಹೇಳುತ್ತಾರೆ. ತಮಾಶೆಯೆಂದರೆ ನೇಪಾಳದ ಹೆಸರನ್ನು ನೇರವಾಗಿ ಹೇಲುವವರಿಗೆ ಅಸ್ಸಾಂ, ಬಿಹಾರ ಮೊದಲಾದ ಹೆಸರನ್ನು ನೇರವಾಗಿ ಹೇಳಲು ಆಗಿಲ್ಲಾ! ಹಾಗೆ ಇವರಿಗೆ ಭಾರತದ ಇತರೆ ರಾಜ್ಯಗಳಿಂದ ಬಂದಿರುವ ವಲಸಿಗರ ಮೇಲೆ ಆರೋಪ ಹೊರಿಸಲು ಇನ್ನಾವುದೋ ಹೆದರಿಕೆ ಇರಬಹುದು! ಇರಲಿ, ವಾಸ್ತವವೆಂದರೆ ನಮ್ಮೂರಲ್ಲಿ ಅಪರಾಧವೆಸಗಿ ತಮ್ಮ ತವರು ರಾಜ್ಯಕ್ಕೆ ಓಡಿಹೋಗಬಲ್ಲ ಅವಕಾಶವಿರುವುದರಿಂದಾಗಿ ವಲಸಿಗರಿಂದ ಹೆಚ್ಚಿನ ಅಪರಾಧಗಳು ಆಗುತ್ತಿವೆಯೆನ್ನುವುದು ಮತ್ತು ಅಂತಹ ಅಪರಾಧಿಗಳನ್ನು ಹಿಡಿಯಲು ಕಷ್ಟವಾಗುತ್ತಿದೆ ಎನ್ನುವುದು.

ಸಮಸ್ಯೆಯ ಮೂಲವಿರುವುದು

ನಿಜವಾದ ಸಮಸ್ಯೆಯ ಮೂಲವಿರುವುದು ಭಾರತದ ಸಂವಿಧಾನದಲ್ಲಿ. ಕಾನೂನು ಸುವ್ಯವಸ್ಥೆಗಳನ್ನು ರಾಜ್ಯಸರ್ಕಾರಗಳ ಹೊಣೆಗಾರಿಕೆಯಾಗಿಸಿರುವ ವ್ಯವಸ್ಥೆ ಅಂತಹ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಅನಿಯಂತ್ರಿತ ವಲಸೆಗೆ ತಾನೇ ಉತ್ತೇಜನ ನೀಡುತ್ತದೆ. ಹೊಣೆ ಮಾತ್ರಾ ಹೊರಿಸಿ, ಅದರ ಜಾರಿಯನ್ನು ತೊಡಕಾಗಿಸುವಂಥಾ ನೀತಿಯನ್ನು ಭಾರತದಲ್ಲಿ ಅನುಸರಿಸಲಾಗುತ್ತಿರುವುದು ಸೋಜಿಗದ ವಿಷಯವಾಗಿದೆ. ಅನಿಯಂತ್ರಿತ ವಲಸೆಗೆ ಕಡಿವಾಣ ಹಾಕದೆ ಇದ್ದರೆ ಈ ಸಮಸ್ಯೆಗೆ ಕೊನೆಯಿಲ್ಲಾ. ನಮ್ಮೂರಿಗೆ ಬರುವವರ ಮೇಲೆ ನಮಗೆ ಯಾವ ನಿಯಂತ್ರಣವೂ ಇಲ್ಲಾ ಎನ್ನುವುದೇ ಹಾಸ್ಯಾಸ್ಪದವಾದುದಾಗಿದೆ. ಇಲ್ಲಿಗೆ ಬರುವವರು ಯಾರು? ಅವರ ಪೂರ್ವಾಪರವೇನು? ಅವರ ಮೂಲನೆಲೆಯೇನು? ಹಿನ್ನೆಲೆಯೇನು? ಇದ್ಯಾವುದನ್ನೂ ಕೇಳುವ ಹಕ್ಕು, ದಾಖಲಿಸುವ ವ್ಯವಸ್ಥೆ ನಮ್ಮಲ್ಲಿಲ್ಲಾ! ಹೀಗಾಗಿ ಹುಚ್ಚುಹೊಳೆಯಂತೆ ಹರಿದು ಬರುತ್ತಿರುವ ವಲಸೆ, ಯಾವುದೇ ಒಂದು ನಾಡಿನ ಶಾಂತಿ ಸುವ್ಯವಸ್ಥೆಗೆ ತೊಡಕಾದುದಾಗಿದೆ. ಇಂತಹ ಅನಿಯಂತ್ರಿತ ವಲಸೆಯ ಕಾರಣದಿಂದಲೇ ನಮ್ಮ ನಾಡಿನಲ್ಲಿಯೂ ಉಗ್ರವಾದ, ಉಗ್ರಗಾಮಿ ಚಟುವಟಿಕೆಗಳು ಎಗ್ಗುಸಿಗ್ಗಿಲ್ಲದೆ ನಡೆಯಲು ಸಾಧ್ಯವಾಗುವಂತಾಗಿದೆ. ಇದಕ್ಕೆ ಕೊನೆಹಾಡಬೇಕೆಂದರೆ, ನಮ್ಮ ನಾಡಿನ ನೆಮ್ಮದಿ ಉಳಿಯಬೇಕೆಂದರೆ "ಅನಿಯಂತ್ರಿತ ಅಂತರರಾಜ್ಯ ವಲಸೆ ನಿಯಂತ್ರಣ"ಕ್ಕೊಂದು ಕಾಯ್ದೆ ಬರಲೇಬೇಕು!

ರಾಜಕಾರಣದ "ತೋರುಮುಖ"ಗಳು!


ನಮ್ಮ ನಾಡಿನ ರಾಜಕಾರಣಿಗಳಲ್ಲಿ ಕೆಲವರನ್ನು ಬಹಳ ಶುದ್ಧಹಸ್ತರು, ಪ್ರಾಮಾಣಿಕರು ಎಂದು ಗುಣಗಾನ ಮಾಡುತ್ತಾ ಅವರ ಸಾರ್ವಜನಿಕ ಬದುಕಿನ ವೈಯುಕ್ತಿಕ ಪರಿಶುದ್ಧತೆಯನ್ನು ಕೊಂಡಾಡುವುದನ್ನು ಕಾಣಬಹುದಾಗಿದೆ. ಚುನಾವಣೆಗಳಲ್ಲಿ ಇವರ ಮುಖ ತೋರಿಸಿ ‘ಇವರ ನಾಯಕತ್ವದ ಪಕ್ಷವನ್ನು ಪಟ್ಟಕ್ಕೆ ತನ್ನಿರಿ’ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಹೀಗೆ ರಾಜಕೀಯ ಪರಿಶುದ್ಧರು ಎಂದು ರಾಜಕೀಯ ಪಕ್ಷಗಳು ಚುನಾವಣೆಗೆ ಸದರಿ "ತೋರುಮುಖ"ಗಳನ್ನು ತೋರಿಸುವುದು ನಮ್ಮ ನಾಡಿನ ರಾಜಕೀಯ ಪಕ್ಷಗಳ ಒಂದು ತಂತ್ರವೇ ಆಗಿದೆ ಅನ್ನಿಸುತ್ತದೆ ಗುರೂ!

ಇವರು ಶುದ್ಧಹಸ್ತರೆಂದೇ ಜನಪ್ರಿಯರು!

ಈ ಪಟ್ಟಿಯಲ್ಲಿರುವವರ ದಕ್ಷತೆ, ಆಡಳಿತ ಮತ್ತು ಮುತ್ಸದ್ದಿತನದ ಬಗ್ಗೆ ಇಲ್ಲಿ ಯಾವ ವಿಶ್ಲೇಷಣೆಯನ್ನೂ, ಅಭಿಪ್ರಾಯವನ್ನೂ ಕೊಡುತ್ತಿಲ್ಲ. ಅದು ಈ ಬರಹದ ಹೊರಗಿನ ವ್ಯಾಪ್ತಿಯದ್ದು ಮತ್ತು ಈ ತೋರುಮುಖದ ನಾಯಕರುಗಳು ವೈಯುಕ್ತಿಕವಾಗಿ ಶುದ್ಧಹಸ್ತರೂ ಇರಬಹುದು. ಅದನ್ನೂ ಕಡೆಗಣಿಸುತ್ತಿಲ್ಲ. ಈ ಬರಹದ ಉದ್ದೇಶವೇ ಇಂತಹ "ತೋರುಮುಖ"ದ ಪರಿಶುದ್ಧ ರಾಜಕಾರಣ ಬರೀ ಓಳು ಅನ್ನೋದರತ್ತ ತಮ್ಮ ಗಮನ ಸೆಳೆಯುವುದು ಮಾತ್ರವೇ ಆಗಿದೆ! ಈ ಮುನ್ಮಾತಿನೊಡನೆ ವಿಷಯಕ್ಕೆ ಹೋಗೋಣ.

ಇಂಥಾ ತೋರುಮುಖಗಳು ಎಲ್ಲಾ ಪಕ್ಷಗಳಲ್ಲೂ ಇವೆ. ಕಾಂಗ್ರೆಸ್ ಪಕ್ಷದಲ್ಲಿ ಇಂದಿನ ಪ್ರಧಾನಮಂತ್ರಿಗಳಾಗಿರುವ ಡಾ.ಮನಮೋಹನ್ ಸಿಂಗ್‌ರವರನ್ನು ಇವರು ತುಂಬಾ ಓದಿಕೊಂಡಿದ್ದಾರೆ, ತುಂಬಾ ದೊಡ್ಡ ಆರ್ಥಿಕ ತಜ್ಞ, ಪರಮ ಪ್ರಾಮಾಣಿಕ ಎನ್ನಲಾಗುತ್ತದೆ. ಇಂಥಾ ಪಾವಿತ್ರ್ಯತೆಯ ಬಿರುದಿನ ಈ ವ್ಯಕ್ತಿ ಕಾಂಗ್ರೆಸ್ ಪಕ್ಷದ ತೋರುಮುಖ! ಇವರಂತೆಯೇ ಶುದ್ಧಹಸ್ತರೆಂದು ಕಾಂಗ್ರೆಸ್ ಪಕ್ಷದಲ್ಲಿ ಹೆಸರಾಗಿರುವುದು ಶ್ರೀ ಏ.ಕೆ.ಆಂಟೋನಿಯವರು. ಶ್ರೀ.ರಾಜೀವ್‌ಗಾಂಧಿಯವರನ್ನಂತೂ ಮಿ.ಕ್ಲೀನ್ ಎಂದೇ ಬಿಂಬಿಸಲಾಗಿತ್ತು! ಚುನಾವಣೆಯ ಸಂದರ್ಭಗಳಲ್ಲಿ ಇಡೀ ಪಕ್ಷದ ಭ್ರಷ್ಟರನ್ನೆಲ್ಲಾ ತೆರೆಮರೆಗೆ ತಳ್ಳಿ ಈ ತೋರುಮುಖಗಳನ್ನು ಮುಂದೊಡ್ಡಿ ಚುನಾವಣೆ ಎದುರಿಸುವುದು ಸಾಮಾನ್ಯ. ಇದರಂತೆಯೇ ಕರ್ನಾಟಕದಲ್ಲಿ ಶ್ರೀ ಸಿದ್ದರಾಮಯ್ಯನವರು. ಇವರ ಮೇಲೆ ಯಾವ ಭ್ರಷ್ಟಾಚಾರದ ಆರೋಪವೂ ಇಲ್ಲಾ ಎನ್ನುವುದನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಾ ಜನರಲ್ಲಿ ತನ್ನ ಶುದ್ಧತೆಗೆ ಪ್ರಮಾಣ ಒದಗಿಸಲು ಯತ್ನಿಸುತ್ತದೆ. ಈ ಹಪಾಹಪಿಯ ಪರಿಣಾಮವೇ ಸಂಪುಟದಲ್ಲಿ ಬರೀ ಶುದ್ಧಹಸ್ತರಿಗೆ ಮಾತ್ರಾ ಸ್ಥಾನ ಎನ್ನುವ ಸರ್ಕಸ್!!

ಇನ್ನು ಭಾರತೀಯ ಜನತಾಪಕ್ಷದ ಅತಿ ದೊಡ್ಡ ತೋರುಮುಖವೆಂದರೆ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರದ್ದು! ಇವರು ಐವತ್ತರ ದಶಕದಿಂದಲೂ ರಾಜಕಾರಣದಲ್ಲಿದ್ದು ಭಾರತದ ಪ್ರಧಾನಮಂತ್ರಿಗಳೂ ಆಗಿದ್ದವರು. ಇವರನ್ನು ಬಿಜೆಪಿ ತನ್ನ ಪಕ್ಷದ ಪರಿಶುದ್ಧತೆಯ ಸಂಕೇತವಾಗಿ ಬಿಂಬಿಸುತ್ತಾ ಬಂದಿದ್ದು ತನ್ನೆಲ್ಲಾ ಚುನಾವಣೆಗಳಲ್ಲಿ ಇದನ್ನು ಯಶಸ್ವಿಯಾಗಿ ಬಳಸಿದೆ. ಹಾಗೇ ಶ್ರೀ ನರೇಂದ್ರಮೋದಿಯವರದ್ದು ಮತ್ತೊಂದು ತೋರುಮುಖ! ಬ್ರಹ್ಮಚಾರಿ ಎನ್ನುವುದನ್ನು ದೇಶಕ್ಕಾಗಿ ತ್ಯಾಗವೆಂದೂ ಕೆಲವರು ಬಿಂಬಿಸುತ್ತಾರೆ!

ತೋರುಮುಖಗಳು ಗಾಂಧೀಜಿ ಹೇಳಿದ ಕೋತಿಗಳಂತೆ!

ಹೀಗೆ ಪ್ರತಿಯೊಂದು ಪಕ್ಷದಲ್ಲೂ ಪರಿಶುದ್ಧತೆಯ ಪ್ರತೀಕವಾಗಿ ಚುನಾವಣೆಗಳಲ್ಲಿ ಜನರ ಮುಂದೊಡ್ಡಲು ತೋರುಮುಖಗಳಿವೆ. ಆದರೆ ಪ್ರಶ್ನೆಯೇನೆಂದರೆ ಈ ನಾಯಕರುಗಳ ಪರಿಶುದ್ಧತೆ ಇವರಷ್ಟಕ್ಕೆ ಮಾತ್ರಾ ಸೀಮಿತವೇ ಎನ್ನುವುದು. ಇವರ ಪಕ್ಷದಲ್ಲೇ ಇದ್ದು, ಪಕ್ಷದ ಚುನಾವಣೆಗಳಿಗಾಗಿ ದುಡ್ಡು ಕೂಡಿಹಾಕುವ, ಪರಮ ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಹೊಡೆಯುತ್ತಿರುವ, ಮಾಡಬಾರದ್ದನ್ನು ಮಾಡುತ್ತಿರುವ ಅನೇಕಾನೇಕ ಜನರು ಇವರದೇ ನಾಯಕತ್ವದ ಪಕ್ಷ ಮತ್ತು ಸರ್ಕಾರಗಳಲ್ಲಿ ಸಕ್ರಿಯರಾಗಿದ್ದರು, ಸಕ್ರಿಯರಾಗಿದ್ದಾರೆ ಎನ್ನುವುದು ಪರಮಸತ್ಯವಾಗಿದೆ. ಇಂಥಾ ಕಡುಭ್ರಷ್ಟರ ವಿಷಯದಲ್ಲಿ ಸದರಿ ತೋರುಮುಖಗಳದ್ದು ಕಿವುಡು, ಕುರುಡು ಮತ್ತು ಬೀಗ ಬಿದ್ದ ಬಾಯಿ ಎಂಬುದನ್ನು ಇದು ಎತ್ತಿ ತೋರುತ್ತದೆ.

ಅಸಹಾಯಕತೆಯೇ ಅಪಾಯಕಾರಿ!

ಭಾರತದ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಹಣಬಲ, ತೋಳ್ಬಲಗಳದ್ದೇ ಮೇಲುಗೈ ಎನ್ನುವ ಪರಿಸ್ಥಿತಿಯಿದ್ದಾಗ ಇಂತಹ ಭ್ರಷ್ಟರ ಅಗತ್ಯವೂ ಪಕ್ಷಗಳಿಗೆ ಅನಿವಾರ್ಯವಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಹೀಗೆ ಹಣಹೊಂದಿಸಲು ಇಡೀ ದೇಶದಾದ್ಯಂತ ಜಾಲವಿದ್ದರೆ ಪ್ರಾದೇಶಿಕ ಪಕ್ಷಗಳ ಅವಕಾಶದ ವ್ಯಾಪ್ತಿ ಆಯಾರಾಜ್ಯಕ್ಕೆ ಸೀಮಿತ. ಹೀಗಾಗೇ ಪ್ರಾದೇಶಿಕ ಪಕ್ಷಗಳ ಭ್ರಷ್ಟತೆ ಕಣ್ಣಿಗೆ ರಾಚುತ್ತದೆ ಎನ್ನುವುದೂ ಕೂಡಾ ಒಂದು ಲೆಕ್ಕದಲ್ಲಿ ಸತ್ಯವೇ ಅನ್ನಿಸುತ್ತದೆ! ಹೀಗೆ ಪ್ರತಿಯೊಂದು ಪಕ್ಷದಲ್ಲೂ ಸಂಪನ್ಮೂಲ ಜೋಡಿಸುವ, ಉದ್ದಿಮೆಗಳೊಂದಿಗೆ ಸಂಪರ್ಕ ಹೊಂದಿರುವ ಜನರಿದ್ದೇ ಇರುತ್ತಾರೆ. ಇಂತಹವರು ಕಾಂಗ್ರೆಸ್ಸಿನಲ್ಲೂ ಬಿಜೆಪಿಯಲ್ಲೂ ಮತ್ತೊಂದರಲ್ಲೂ ಇರುವಾಗ ಆ ಪಕ್ಷದ ತೋರುಮುಖಗಳು ತೆಪ್ಪಗಿರುವುದು ಅವರ ಒಳ್ಳೆಯತನವಲ್ಲಾ! ಅದು ಅಸಹಾಯಕತೆ ಮತ್ತು ನಾಯಕತ್ವ ಗುಣದ  ಕೊರತೆ ಎನ್ನಿಸುವುದರಲ್ಲಿ ಸಂಶಯವಿಲ್ಲ! ಇಷ್ಟರಜೊತೆಗೆ ಹೇಳಲೇಬೇಕಾದ ಮಾತೆಂದರೆ ಭ್ರಷ್ಟರೆಂದೇ ಗುರುತಿಸಲಾಗುತ್ತಿರುವವರ ಭ್ರಷ್ಟತೆಗಿಂತಲೂ ಈ ಮಂದಿಯ ಅಸಹಾಯಕತೆ ನಾಡಿಗೆ ಹೆಚ್ಚು ಅಪಾಯಕರ! ಏನಂತೀರಾ ಗುರೂ?

ಸಿಹಿಸುದ್ದಿ: ಕನ್ನಡ ಪತ್ರಿಕೆಗಳಿಗೆ ಓದುಗರ ಹೆಚ್ಚಳ!

(ಫೋಟೋ ಕೃಪೆ: ವಿಜಯವಾಣಿ ದಿನಪತ್ರಿಕೆ)
ಆಡಿಟ್ ಬ್ಯೂರೋ ಆಫ಼್ ಸರ್ಕ್ಯುಲೇಶನ್ ಎನ್ನುವ ಒಂದು ಸಂಸ್ಥೆ ಆರು ತಿಂಗಳಿಗೊಮ್ಮೆ ಭಾರತದಲ್ಲಿ ಯಾವ್ಯಾವ ಭಾಷಾ ಪತ್ರಿಕೆಗಳು ಎಷ್ಟೆಷ್ಟು ಪ್ರಸಾರ ಹೊಂದಿವೆ ಎನ್ನುವುದನ್ನು ಸಮೀಕ್ಷೆ ಮಾಡುತ್ತದೆ. ೨೦೧೨ನೇ ವರ್ಷದ ಸಮೀಕ್ಷೆಗಳಲ್ಲಿ ಕೆಲವು ಅಂಕಿಅಂಶಗಳು ಹೊರಬಿದ್ದಿವೆ. ಮೇಲಿನ ಪತ್ರಿಕಾ ವರದಿಯು ವಿವರಗಳನ್ನು ಹೇಳುತ್ತಿದೆ.

ವರದಿ ತೋರುವ ಕೆಲ ದಿಟಗಳು

ಈ ಪಟ್ಟಿಯಲ್ಲಿ ಕನ್ನಡಕ್ಕೆ ಎಂಟನೇ ಸ್ಥಾನವಿದೆ. ಕನ್ನಡವು ಕಳೆದ ಆರು ತಿಂಗಳಲ್ಲಿ ನೂರಕ್ಕೆ ೧೬ರಷ್ಟು ಹೆಚ್ಚಳವನ್ನು ಕಂಡಿದೆ. ನಮಗಿಂತಾ ಕಡಿಮೆ ಜನಸಂಖ್ಯೆಯ ಕೇರಳದಲ್ಲಿ ಪತ್ರಿಕೆಗಳ ಪ್ರಸಾರ ಹೆಚ್ಚೇ ಇದೆ. ಆರುತಿಂಗಳಲ್ಲಿ ಪ್ರಸಾರ ಸಂಖ್ಯೆಯಲ್ಲಿ ಕುಸಿತ ಕಂಡಿರುವ ಭಾಷೆಗಳ ಸಾಲಿನಲ್ಲಿ ಹಿಂದೀ, ಇಂಗ್ಲೀಶ್, ಮರಾಟಿ, ಬೆಂಗಾಲಿ ಮತು ತೆಲುಗುಗಳಿದ್ದರೆ... ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯವು ಮಾತ್ರಾ ಹೆಚ್ಚಳ ಕಂಡಿವೆ. ಕನ್ನಡಕ್ಕಿಂತ ಹೆಚ್ಚು ಪ್ರಸಾರ ಹೊಂದಿರುವ ಭಾಷೆಗಳ ಪಟ್ಟಿಯಲ್ಲಿ ನಮಗಿಂತಾ ಹೆಚ್ಚು ಅಥವಾ ನಮ್ಮಷ್ಟೇ ಜನಸಂಖ್ಯೆಯನ್ನು ಹೊಂದಿರುವ ರಾಜಾಸ್ಥಾನಿ, ಗುಜರಾತಿ ಭಾಷೆಗಳ ಪತ್ರಿಕೆಗಳ ಹೆಸರಿಲ್ಲದಿರುವುದು ಗಮನಾರ್ಹ. ಹಿಂದೀಯನ್ನು ಒಪ್ಪಿಕೊಂಡು ತಲೆಮೇಲಿರಿಸಿಕೊಂಡಿರುವ ಕಾರಣದಿಂದಲೇ ಹೀಗಾಗಿರಬಹುದೇ ಎನ್ನುವ ಸಂದೇಹವನ್ನು ಇದು ಮೂಡಿಸುತ್ತಿದೆ.

ಕನ್ನಡಿಗರು ಹೆಚ್ಚುಚ್ಚು ದಿನಪತ್ರಿಕೆಗಳನ್ನು ಕೊಂಡು ಓದುವಂತಾಗಲಿ. ಹೀಗಾಗಬೇಕಾದರೆ ನಮ್ಮ ಪತ್ರಿಕೆಗಳಲ್ಲೂ ಕೂಡಾ ನಾನಾ ವಿಷಯ ವೈವಿಧ್ಯತೆಗಳು ಹೆಚ್ಚಬೇಕಾಗಿದೆ. ಇಂದಿಗೂ ನಮ್ಮ ನಾಡಿನಲ್ಲಿ ಆರ್ಥಿಕ ವಿಷಯಗಳಿಗೆ ಸಂಬಂಧಪಟ್ಟ ದೊಡ್ಡ ದಿನಪತ್ರಿಕೆಗಳಿಲ್ಲ. ಹೋಗಲಿ, ನಮ್ಮ ಇರುವ ದಿನಪತ್ರಿಕೆಗಳಲ್ಲಿಯೇ ಈ ಬಗ್ಗೆ ಗಂಭೀರವಾದ ಬರಹಗಳಿರುವುದು ಕಡಿಮೆ! ಕನ್ನಡ ದಿನಪತ್ರಿಕೆಗಳೆಂದರೆ ಸುದ್ದಿ, ಸಿದ್ಧಾಂತ, ಸಿನಿಮಾ ಮತ್ತು ಸಾಹಿತ್ಯಗಳಂತಹ ನಲ್ಬರಹಗಳನ್ನು ಮಾತ್ರಾ ನೀಡಲು ಸೀಮಿತವಾಗದೆ ಹೊಸಹೊಸ ವಿಷಯಗಳನ್ನು ಕೊಡುವತ್ತ ಗಮನಹರಿಸಿದರೆ.... ಜೊತೆಗೇ ಪತ್ರಿಕೆಗಳನ್ನು, ಆದಷ್ಟೂ ಜನರಿಗೆ ಹತ್ತಿರವಾದ ನುಡಿಯಲ್ಲಿ ತರುವಂತಾದರೆ ಈ ಪ್ರಸಾರ ಸಂಖ್ಯೆ ಮತ್ತಷ್ಟು ಹೆಚ್ಚುವುದು ಸಾಧ್ಯ! ಹಾಗಾಗಲೆಂಬುದು ನಮ್ಮ ಆಶಯ!!

ಸಿದ್ದರಾಮಯ್ಯನವರೇ? ನೀವಾಗುವಿರಾ "ಮಾತು ತಪ್ಪದ ಮಗ"!


ಮುಖ್ಯಮಂತ್ರಿಗಳಾಗಲಿರುವ ಮಾನ್ಯ ಶ್ರೀ ಸಿದ್ದರಾಮಯ್ಯನವರೇ,

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಹೊಸ ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗುವಲ್ಲಿ ತಮ್ಮ ಪಾತ್ರವೂ ದೊಡ್ಡದಿದೆ. ಸದರಿ ಸರ್ಕಾರದ ಮುಖ್ಯಸ್ಥರಾಗಿಯೂ ತಾವು ಆಯ್ಕೆಯಾಗಿದ್ದೀರಿ. ನಿಮ್ಮ ಪಕ್ಷವು ಈ ಬಾರಿ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ನಾಡಿಗೆ ನಿಜಕ್ಕೂ ಏಳಿಗೆಗೆ ಪೂರಕವಾದವುಗಳಾಗಿವೆ. ಇವುಗಳತ್ತ ತಮ್ಮ ಗಮನ ಸೆಳೆಯುವುದು ನಮ್ಮ ಉದ್ದೇಶ! ಏನೇ ಆಗಲಿ.. ಇವುಗಳನ್ನಾದರೂ ಮಾಡಿರಿ ಎನ್ನುವುದು ನಮ್ಮ ಒತ್ತಾಯ!!

ಕಾಂಗ್ರೆಸ್ ಪ್ರಣಾಳಿಕೆಯಂತೆ ಆಗಲೇ ಬೇಕಾದ್ದು!


ಇವೆಲ್ಲದರ ಜೊತೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಸಂಪರ್ಕಿಸುವ ರೈಲು ಮಾರ್ಗಗಳನ್ನು ರಾಜ್ಯಕ್ಕೆ ತರಲು ಸಮಗ್ರ ಯೋಜನೆಯನ್ನು ರೂಪಿಸಿ ಕೇಂದ್ರಸರ್ಕಾರದಿಂದ ಜಾರಿಮಾಡಿಸಿ. ರಾಜ್ಯಕ್ಕೆ ಹೆಚ್ಚೆಚ್ಚು ವಿದ್ಯುತ್ ರೈಲು ಮಾರ್ಗಗಳನ್ನು ತರಲು ಮುಂದಾಗಿರಿ. 


ಏಳಿಗೆಗೆ ಬೇಕಾದ್ದು!

ಒಂದು ನಾಡಿನ ಏಳಿಗೆಗೆ ಬೇಕಾದ್ದು ಆ ನಾಡಿನ ರಸ್ತೆ, ರೈಲು, ನೀರು ಮೊದಲಾದ ಮೂಲಭೂತಸೌಕರ್ಯಗಳನ್ನು ಕಟ್ಟಿಕೊಡುವುದು. ಆ ನಾಡಿನ ಜನರ ಕಲಿಕೆಯನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ದುಡಿಮೆಯ ಅವಕಾಶಗಳನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ಕೌಶಲಗಳನ್ನು ಹೆಚ್ಚಿಸುವುದು. ಆ ನಾಡಿನಲ್ಲಿ ಉದ್ದಿಮೆಗಳನ್ನು ನಡೆಸಲು ಪೂರಕವಾದ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ವ್ಯವಸ್ಥೆಯನ್ನು ಕಟ್ಟುವುದು! ನಿಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಎಲ್ಲವನ್ನೂ ಮಾಡಿ. ನಮ್ಮ ಜನರ ಕಲಿಕೆ ಅತ್ಯುತ್ತಮವಾಗಲು, ಜಗತ್ತಿನ ಅತ್ಯುತ್ತಮ ಕಲಿಕೆಯ ವ್ಯವಸ್ಥೆಗಳ ಸಾಲಿನಲ್ಲಿ ನಮ್ಮದನ್ನೂ ನಿಲ್ಲಿಸಬಲ್ಲಂತಹ ಕನ್ನಡದ ಕಲಿಕೆಯ ವ್ಯವಸ್ಥೆಯನ್ನು ಕಟ್ಟಲು ಬೇಕಾದ ದೀರ್ಘಾವಧಿ ಯೋಜನೆಯನ್ನು ಮಾಡಿರಿ. ನೀವು ಇತ್ತೀಚಿಗಷ್ಟೇ ನಾಡಿನ ಅನೇಕ ಹಿರಿಯ ಕವಿ-ಸಾಹಿತಿ-ಚಿಂತಕರುಗಳನ್ನು ಭೇಟಿಯಾಗಿ ಬಂದಿದ್ದೀರಿ. ಇದು  ಅವರುಗಳ ಮೇಲಿನ ಗೌರವದಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಗೌರವ ಅದೇ ಹಿರಿಯರು ತಾಯ್ನುಡಿ ಶಿಕ್ಷಣದ ಪರವಾಗಿ ಹೊಂದಿರುವ ನಿಲುವುಗಳ ಬಗ್ಗೆಯೂ ತಮಗಿರಲಿ ಎನ್ನುವುದು ನಮ್ಮ ಆಶಯ! 

ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವ, ಇಡೀ ಪ್ರಪಂಚದಲ್ಲಿ ನಮ್ಮನ್ನು ಉಳಿದವರಿಗಿಂತಲೂ ಬೇರೆಯಾಗಿಸಿರುವ ನಮ್ಮ ನುಡಿ, ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಪೊರೆಯುವ ಕ್ರಮಗಳನ್ನು ಕೈಗೊಳ್ಳಿರಿ. ಧರ್ಮ, ಜಾತಿ, ಆಚರಣೆ, ಒಳನುಡಿಗಳೇ ಮೊದಲಾದ ವಿಭಿನ್ನತೆಗಳನ್ನು ಕನ್ನಡತನದ ಮೂಲಕ ಒಗ್ಗೂಡಿಸಿ ಹಿಡಿದಿಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ. ಕನ್ನಡಿಗರಿಗೆ ತಮ್ಮದೇ ನೆಲದಲ್ಲಿ ಬದುಕು ನಡೆಸಲು ತೊಡಕಾಗದಂತಹ ಆಡಳಿತ ವ್ಯವಸ್ಥೆಯನ್ನು ಕಟ್ಟುವುದು ಒಂದು ಮುಖ್ಯವಾದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕಾರ್ಯನಿರ್ವಹಿಸಲಿ...

ಒಟ್ಟಾರೆ ನಾಡಿನ ಜನರ ನಿರೀಕ್ಷೆಗಳೇನೋ ಹೆಚ್ಚಾಗಿಯೇ ಇವೆ. ಇವುಗಳನ್ನು ಈಡೇರಿಸುವತ್ತ ಮುಂದಾಗಿ.. ಇದು ನಮ್ಮ ನಾಡಿನ ಹೊಸ ಮುಖ್ಯಮಂತ್ರಿಗಳಾಗುತ್ತಿರುವ ನಿಮ್ಮಿಂದ ನಮಗಿರುವ ನಿರೀಕ್ಷೆ! ಕಾಂಗ್ರೆಸ್ಸಿನವರು ಸಾಕಷ್ಟು ಭರವಸೆಗಳನ್ನು ನೀಡಿದ್ದೀರಾ! ಈ ಭರವಸೆಗಳು ಭರವಸೆಗಳಲ್ಲಾ... ನಾಡಿಗರಿಗೆ ಕೊಟ್ಟ ಮಾತು! ನೀವು  ಮಾತು ತಪ್ಪದ ಮಗನಾಗಿರಿ ಎಂಬುದು ನಮ್ಮ ಆಗ್ರಹ!

ಚುನಾವಣಾ ಫಲಿತಾಂಶ: ಕಲಿತರೆ ಪಾಠ! ಮೈಮರೆತರೆ ಗೋತಾ!!


ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬಂದಿವೆ. ನಿರೀಕ್ಷೆಯಂತೆ ಕಾಂಗ್ರೆಸ್ ಗೆದ್ದಿದೆ, ನಿರೀಕ್ಷೆಗೂ ಮೀರಿ ಗೆದ್ದಿದೆ! ಈ ಚುನಾವಣೆಯ ಫಲಿತಾಂಶವು ಮೇಲ್ನೋಟಕ್ಕೆ ಕಾಂಗ್ರೆಸ್ಸಿನ ಸಾದಾಸೀದ ಗೆಲುವಾಗಿ ಕಾಣುತ್ತಿದ್ದರೂ ಇದರ ಒಳನೋಟ ಕುತೂಹಲಕಾರಿಯಾಗಿದೆ. ನಾಡಿನಲ್ಲಿರುವ ನಾಲ್ಕಾರು ದೂರದರ್ಶನ ವಾಹಿನಿಗಳು ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡ್ತಾಯಿದ್ದಾರೆ. ಸರಿ.. ನಾವೂ ಕೂಡಾ ಸ್ವಲ್ಪ ನಮ್ಮ ಮೂಗಿನ ನೇರಕ್ಕೆ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿ ನೋಡೋಣ.

ಚುನಾವಣೆ ವಿಶ್ಲೇಷಣೆಯಲ್ಲಿ ಮುಖ್ಯವಾಗಿ ಕಂಡದ್ದು!

ಈ ಬಾರಿ ಎಲ್ಲೆಡೆ ಕಾಂಗ್ರೆಸ್ ಗೆದ್ದಿದೆ.  ಜನರು ಕಾಂಗ್ರೆಸ್ ಪಕ್ಷವನ್ನು ಭರ್ಜರಿಯಾಗಿ ಕೈಹಿಡಿದಿದ್ದಾರೆ. ಒಟ್ಟು ಬಹುಮತಕ್ಕೆ ಬೇಕಾದ ೧೧೩ ಶಾಸಕರ ಸಂಖ್ಯೆಗಿಂತಲೂ ಹೆಚ್ಚೇ ಸಂಖ್ಯೆಯ ಶಾಸಕರನ್ನು ಕಾಂಗ್ರೆಸ್ ಗೆಲ್ಲಿಸಿಕೊಂಡಿದೆ. ಈ ಕಾರಣದಿಂದ ಕರ್ನಾಟಕವನ್ನು ಐದುವರ್ಷಗಳ ಕಾಲ ಆಳುವ ಅವಕಾಶವನ್ನೂ ಪಡೆದುಕೊಂಡಿದೆ. ಹಾಗೇ ಭ್ರಷ್ಟಾಚಾರ ಮತ್ತು ಒಳಜಗಳವೂ ಸೇರಿದಂತೆ ನಾನಾ ಗೋಜಲುಗಳಿಂದಾಗಿ ಒಡೆದು ಹೋಳಾದ ಬಿಜೆಪಿ ಕಳೆದ ಬಾರಿಗಿಂತ ತೀರಾ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಜಾತ್ಯಾತೀತ ಜನತಾದಳವು ೪೦ ಸ್ಥಾನ ಗಳಿಸಿ ಉತ್ತಮವಾದ ಸಾಧನೆ ಮಾಡಿದ್ದರೂ ಸಾಕಷ್ಟು ಸಾಧಿಸಿಲ್ಲಾ! ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಶಾಸಕರ ಎಣಿಕೆಯ ಓಟದಲ್ಲಿ ಹಿಂದುಳಿದಿವೆ! ಈ ಮೇಲ್ನೋಟದ ದಿಟಗಳನ್ನು ಹಿಡಿದುಕೊಂಡು ಕೆಲಮಾಧ್ಯಮಗಳು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಎಡೆಯಿಲ್ಲಾ, ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ನೆಲೆಯಿಲ್ಲಾ, ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲಾ... ಜನರು ಸ್ಪಷ್ಟ ಬಹುಮತ ಕೊಡಬೇಕು ಎಂದೇ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ... ಇತ್ಯಾದಿ ವಿಶ್ಲೇಷಣೆಗಳನ್ನು ಮಾಡುತ್ತಿವೆ.

ಎಚ್ಚೆತ್ತರೆ ಇದು ಒಳ್ಳೇ ಪಾಟ! ಮೈಮರೆತರೆ ಮುಳುಗು!!

ಕನ್ನಡ ಕನ್ನಡಿಗ ಕರ್ನಾಟಕದ ಹಿತದೃಷ್ಟಿಯನ್ನು ಗಮನವಿಟ್ಟುಕೊಂಡು ನೋಡಿದರೆ ನಿಜವಾದ ಏಳಿಗೆಗೆ ನಮ್ಮ ರಾಜಕೀಯ ಆಯ್ಕೆಗಳು ಸಾಗಬೇಕಾದ ದಿಕ್ಕು ಹೀಗೆ ಕಾಣುತ್ತಿತ್ತು!
ಭಾರತದಲ್ಲಿರುವ ಆಳ್ವಿಕೆ ವ್ಯವಸ್ಥೆಯಲ್ಲಿ ನಮ್ಮ ಜನಪ್ರತಿನಿಧಿಗಳು ನಿಭಾಯಿಸಬೇಕಾದ ಹೊಣೆಗಾರಿಕೆಯಾದರೂ ಎಂಥದ್ದು? ಕೇಂದ್ರಸರ್ಕಾರದಲ್ಲಿ ಕೂತು ಒಪ್ಪುಕೂಟ ರೂಪಿಸಲು ಬೇಕಿರುವ ವ್ಯವಸ್ಥೆಗಳನ್ನು ರೂಪಿಸುವುದು, ಆಗಬೇಕಾದ ಬದಲಾವಣೆಗಳನ್ನು ಮಾಡುವುದು, ಕೇಂದ್ರವು ಕೊಡಮಾಡುವ ಯೋಜನೆಗಳನ್ನು ರಾಜ್ಯಕ್ಕೆ ತರುವುದು, ಇಂದಿನ ದಿನಕ್ಕೆ ಅನಿವಾರ್ಯವಾಗಿರುವ “ಕೇಂದ್ರದ ಜುಟ್ಟುಹಿಡಿದು ರಾಜ್ಯದ ಹಿತ ಕಾಪಾಡುವುದು”... ಮೊದಲಾದವುಗಳು. ಇವುಗಳನ್ನು ಪರಿಣಾಮಕಾರಿಯಾಗಿ ಮಾಡಲು ಯಾವ ಮಾದರಿಯ ರಾಜಕಾರಣವನ್ನು ಅನುಸರಿಸಬೇಕು ಎನ್ನುವುದನ್ನು ನಾಡಿನ ಜನರು ಯೋಚಿಸಬೇಕಾಗಿದೆ.
ಈ ನಿಟ್ಟಿನಲ್ಲಿ ನೋಡಿದಾಗ ನಾಡಜನರು ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಕೈಹಿಡಿಯಬೇಕಿತ್ತು! ಹಾಗಾಗಿದೆಯೇ ಎಂಬುದನ್ನು ನೋಡಿದಾಗ ಕಾಣುವ ಕೆಲವು ವಿಷಯಗಳು ಹೀಗಿವೆ. ಒಟ್ಟು ಚಲಾವಣೆಯಾದ ಮತಗಳಲ್ಲಿ ಜೆಡಿಎಸ್, ಕೆಜೆಪಿ ಮತ್ತು  ಬಿಎಸ್‌ಆರ್ ಒಟ್ಟಾಗಿ ಸೇರಿ ಗಳಿಸಿರುವುದು ಸುಮಾರು ೩೩% ಮತಗಳನ್ನು. ಕೆಜಿಪಿ ಪಕ್ಷವು ಸೀಟು ಗಳಿಕೆಯಲ್ಲಿ ಎರಡಂಕಿ ದಾಟದಿದ್ದರೂ ಕೂಡಾ ಒಟ್ಟು ೪೧ ಕ್ಷೇತ್ರಗಳಲ್ಲಿ ಮೊದಲೆರಡು ಸ್ಥಾನದಲ್ಲಿದೆ. ಹೀಗೆ ರಾಷ್ಟ್ರೀಯವಲ್ಲದ ಪಕ್ಷಗಳ ಒಟ್ಟು ಮತಗಳಿಕೆ  ಆಶಾದಾಯಕವಾಗಿದ್ದರೂ ಇದರಿಂದಾಗಿ ಕನ್ನಡಿಗರು ಕನ್ನಡಿಗರಾಗಿ ಮತ ಚಲಾಯಿಸಿದ್ದಾರೆ ಎನ್ನಲಾಗದು. ಬೆಳಗಾವಿಯಲ್ಲಿ ವರ್ಷಗಳ ಕಾಲ ಕನ್ನಡಿಗರನ್ನು ಒಗ್ಗೂಡಿಸಲು ನಡೆದ ಪ್ರಯತ್ನಗಳನ್ನು ಮತಗಳಾಗಿ ಚಲಾಯಿಸುವಲ್ಲಿ ಅಲ್ಲಿನ ಕನ್ನಡಿಗರು ಎಡವಿದ್ದಾರೆ. ಇದು ಎಂಇ‌ಎಸ್‌ನ ಇಬ್ಬರು ಶಾಸಕರ ಗೆಲುವಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಕನ್ನಡಪರವಾಗಿ ರಾಜಕಾರಣ ಮಾಡಲು ವಿಫುಲವಾದ ಅವಕಾಶಗಳು ಕಾಣುತ್ತಿದೆಯಾದರೂ ಕನ್ನಡಿಗರು ಒಂದು ಮತಬ್ಯಾಂಕ್ ಆಗುವಲ್ಲಿ ಸಾಗಬೇಕಾದ ದಾರಿ ಕಡಿದಾಗಿಯೂ, ತೊಡಕಿನದ್ದಾಗಿಯೂ ಕಾಣುತ್ತಿದೆ. ಹಾಗಿದ್ದರೂ ದಾರಿಯಂತೂ ಇದೆಯೆನ್ನುವುದು ಆಶಾಭಾವನೆಗೆ ಕಾರಣವಾಗಿದೆ. ಕನ್ನಡಿಗರು ಇನ್ನಾದರೂ ತಮ್ಮದೇ ಪಕ್ಷ ಕಟ್ಟಿಕೊಳ್ಳದಿದ್ದರೆ..."ಕಾಂಗ್ರೆಸ್ ಗೆಲುವಿಗಾಗಿ ನೂರಾರು ಕಿಮೀ ಪಾದಯಾತ್ರೆ ಮಾಡಿ, ವರುಶಗಟ್ಟಲೆ ಹೋರಾಟ ಮಾಡಿ, ಗೆಲುವು ದಕ್ಕಿಸಿಕೊಟ್ಟು... ಇದೀಗ ಮುಖ್ಯಮಂತ್ರಿ ಹುದ್ದೆಯ ಆಯ್ಕೆಯನ್ನು ದೆಹಲಿ ದೊರೆಗಳಿಗೆ ಒಪ್ಪಿಸಿ ಕುಳಿತಿರುವ" ಶ್ರೀ ಸಿದ್ಧರಾಮಯ್ಯನವರೂ, "ಬಕ್ರೀದಿನಲ್ಲಿ ಬದುಕುಳಿದರೆ ಮೊಹರಂನಲ್ಲಿ ಕುಣೀತೀವಿ" ಎಂದು ಹೈಕಮಾಂಡಿನ ಎದುರಿಗೆ ತಮ್ಮನ್ನು ಕುರಿಗೆ ಹೋಲಿಸಿಕೊಂಡ ಖರ್ಗೆಯವರೇ ಮೊದಲಾದ ನಾಯಕರುಗಳಂತೆಯೇ ಇಡೀ ಕನ್ನಡನಾಡೂ ದೆಹಲಿ ಗುಲಾಮರಾಗಬೇಕಾಗುತ್ತದೆ! ಅಷ್ಟೇ!!

ಪರಭಾಷಿಕರ ಓಲೈಕೆ... ಇದ್ಯಾಕೋ ಅತಿಯಾಯ್ತು!


ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಭರಪೂರ ಪ್ರಚಾರದಲ್ಲಿ ತೊಡಗಿವೆ. ಹೀಗೆ ಮತಗಳನ್ನು ಬೇಡುವಾಗ ಈ ಪಕ್ಷಗಳು ಮತದಾರರನ್ನು ಯಾವ್ಯಾವ ರೀತಿಯಲ್ಲಿ ಓಲೈಸಲು ಸಾಧ್ಯವೋ ಅದೆಲ್ಲಾ ಬಗೆಯಲ್ಲಿ ಓಲೈಸಲು ಮುಂದಾಗುತ್ತವೆ. ಹೀಗೆ ಮಾಡುವಾಗ ಜಾತಿ, ಧರ್ಮ, ಪಂಗಡಗಳಷ್ಟೇ ಪರಿಣಾಮಕಾರಿಯಾಗಿ ಬಳಸಲಾಗುತ್ತಿರುವ ಅಸ್ತ್ರ ಭಾಷೆ. ಅಭಿವೃದ್ಧಿಯನ್ನು ಭಾಷಿಕ ಜನರಿಗೆ ಸೀಮಿತಗೊಳಿಸುವ ಉದಾಹರಣೆಗಳನ್ನೂ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಲಿವೆ. ನಾಡೊಂದರಲ್ಲಿ ನಾನಾ ಭಾಷೆಯ ಜನರು ಇರುವುದು ಸಹಜ. ಆದರೆ ಈ ಜನರ ಮತಕ್ಕಾಗಿ ಇವರುಗಳನ್ನು ಓಲೈಸಲು ಮುಂದಾಗುವಾಗ ಅದರಿಂದ ನಾಡಿನ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ವಲಸೆ ಬಂದು ಈ ನಾಡಿನಲ್ಲಿ ನೆಲೆಸಿದವರನ್ನು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡುವ ಈ ಓಲೈಕೆಗಳು ನಾಳೆ ನಾಡನ್ನು ಮುಳುಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲಾ! ಇಷ್ಟೂ ಕಾಳಜಿ ಇಲ್ಲದ ರಾಜಕೀಯ ಪಕ್ಷಗಳಿಗೆ ಕನ್ನಡಿಗರು ತಮ್ಮ ಮತದಾನದ ಹಕ್ಕನ್ನು ಬಳಸಿ ಉತ್ತರ ಹೇಳಬೇಕಾಗಿದೆ. 

ಪರಭಾಷಿಕರ ಓಲೈಕೆ

ಸೌಹಾರ್ದತೆಯ ಹೆಸರಲ್ಲಿ ಕನ್ನಡಿಗರ ಮೇಲೆ ಪರಭಾಷೆಗಳನ್ನು ಹೇರುವುದು ನಿರಂತರವಾಗಿ ನಡೆದೇ ಇದೆ. ನಾವು ಸಹಿಸಿಕೊಳ್ಳುತ್ತಿರುವ ಕಾರಣದಿಂದಲೇ ನಮ್ಮ ಹಿತವನ್ನು ಅಳಿಸಲು ಈ ರಾಜಕಾರಣಿಗಳು ಹೇಸದೆ ಇರುವುದು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ ಅಂಥದ್ದೊಂದು ದೊಡ್ಡ ಘಟನೆ. ಸಾಂಸ್ಕೃತಿಕ ವಿನಿಮಯ ಮಣ್ಣುಮಸಿ ಎಂದು ಏನೆಲ್ಲಾ ಹೇಳಿ ಪ್ರತಿಭಟನೆಯನ್ನು ಹತ್ತಿಕ್ಕಿ ಕನ್ನಡಿಗರ ತಲೆ ಸವರಲಾಯಿತೆಂದರೆ ಈ ಹಿಂದೆ ಅದನ್ನು ವಿರೋಧಿಸಿದ್ದ ದೊಡ್ಡ ಸಾಹಿತಿಗಳೇ ಇದ್ದಕ್ಕಿದ್ದಂತೆ ರಿವರ್ಸ್‌‌ಗೇರ್ ಹಾಕಿಕೊಂಡು ತಾವು ಬೂಟಾಟಿಕೆಯವರೆಂದು ಸಾಬೀತು ಮಾಡಿಕೊಂಡರು. ಕನ್ನಡಿಗರ ಕಣ್ಮಣಿಯನ್ನು ಅಪಹರಿಸಿ ಒಬ್ಬ ಕಾಡುಗಳ್ಳನಿಂದ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಬೇಡಿಕೆಯನ್ನು ಇಡಿಸಿದ್ದ ನೆನಪು ಹಸಿರಾಗಿರುವಾಗಲೇ ಸ್ಥಾಪನೆಯಾದ ಆ ವಿಗ್ರಹ ತಮಿಳರ ಪಾಲಿಗೆ ಬೆಂಗಳೂರಿನಲ್ಲಿ ದೊಡ್ಡ ಗೆಲುವಿನ ಸಂಕೇತವಾಗಿ, ದೊಡ್ಡ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿ ತಲೆಯೆತ್ತಿತು. ಇದೇ ತಿರುವಳ್ಳುವರ್ ಪ್ರತಿಮೆಯ ಎದುರು ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಲವಾರು ತಮಿಳು ರಾಜಕಾರಣಿಗಳು ಸೇರಿ ಕರ್ನಾಟಕದಲ್ಲಿ ತಮಿಳರ ಹಿತಕಾಯುವ ಪ್ರತಿಜ್ಞೆ ಮಾಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಈ ರಾಜಕಾರಣಿಗಳ ಬದ್ಧತೆ ತಮಿಳರ ಹಿತಕಾಯುವುದಷ್ಟೇ ಆಗಿರುವಂತೆ ಅವರ ಮಾತುಗಳಿದ್ದುದನ್ನು ನೋಡಬಹುದು. ಇದು ತಮಿಳು ಅಭ್ಯರ್ಥಿಗಳ ಕತೆಯಾದರೆ ಅದಕ್ಕೆ ಕಾರಣಕರ್ತರು ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿದ ಬಿಜೆಪಿ ಸರ್ಕಾರದವರು.

ಇದೀಗ ತಮಿಳರ ಓಲೈಕೆಯಲ್ಲಿ ಮುಂದಾಗಿರುವ ಪಕ್ಷಗಳ ನಡೆಗಳನ್ನು ನೋಡಿದರೆ ತಮಿಳು ಭವನದ ಭರವಸೆ ಕೊಟ್ಟಿರುವ, ಮಾತುಮಾತಿಗೆ ಕನ್ನಡಪರ ಎಂದುಕರೆದುಕೊಳ್ಳುತ್ತಿರುವ ಕರ್ನಾಟಕ ಜನತಾ ಪಕ್ಷ ಮುಂಚೂಣಿಯಲ್ಲಿದೆ. ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹ್ಯಾರಿಸ್ ಶಾಂತಿನಗರದಲ್ಲಿ ತಮಿಳಿನಲ್ಲಿ ಭಾಷಣ ಮಾಡುತ್ತಿರುವುದಲ್ಲದೆ ಇವರ ಜೊತೆ ಸ್ಟಾರ್ ಕ್ಯಾಂಪೇನರ್, ‘ಕನ್ನಡವನ್ನು ಇಂಗ್ಲೀಶಿನಲ್ಲಿ ಮಾತಾಡುವ’ ಅಚ್ಚ ಕನ್ನಡತಿ ರಮ್ಯಾರವರೂ ತಮಿಳಿನಲ್ಲಿ ಮಾತನಾಡಿದ್ದಲ್ಲದೆ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಇವರ ಮಾತಿನಂತೆ ಭಾರತದ ಯಾವ ಭಾಷೆಯನ್ನಾದರೂ ಎಲ್ಲಾದರೂ ಬಳಸುವುದು ತಪ್ಪಲ್ಲಾ! ತನ್ನತನದ ಅರಿವಿರದ ನಿರಭಿಮಾನಿ ಮತಿಗೇಡಿಗಳ ಬಾಯಿಂದ ಮತ್ತೇನು ತಾನೇ ನಿರೀಕ್ಷೆ ಮಾಡಲಾದೀತು! ಹೀಗೆ ತಮಿಳರ ಓಲೈಕೆಯನ್ನು ಎಗ್ಗುಸಿಗ್ಗಿಲ್ಲದೆ ಮಾಡುವವರು ತಮಿಳುನಾಡಿನೊಂದಿಗಿನ ವಿವಾದಗಳಾದ ಕಾವೇರಿ ನೀರುಹಂಚಿಕೆಯ ಬಗ್ಗೆ, ಹೊಗೇನಕಲ್ ನಡುಗಡ್ಡೆಯ ವಿವಾದದ ಬಗ್ಗೆ ಯಾವ ಮಾತನ್ನೂ ಆಡುವುದಿಲ್ಲಾ!

ಇನ್ನು ತೆಲುಗರ ಓಲೈಕೆಗಾಗಿ ಆಂಧ್ರದಿಂದ ಚಿರಂಜೀವಿಯನ್ನು, ಕಿರಣ್‌ಕುಮಾರ್ ರೆಡ್ಡಿಯವರನ್ನು ಕಾಂಗ್ರೆಸ್ಸಿನವರು ಕರೆಸಿದ್ದಾರೆ. ತುಂಗಭದ್ರಾ ನದಿಗೆ ಕದ್ದು ಕಾಲುವೆ ಮಾಡಿಕೊಳ್ಳುತ್ತಿರುವ ಆರೋಪವಿರುವ, ಕೃಷ್ಣಾ ನದಿನೀರು ಹಂಚಿಕೆಯಲ್ಲಿ ಎದುರಾಳಿಯಾಗಿ ನಮ್ಮ ನೀರಿಗೆ ಎರವಾಗಿರುವ, ಗಡಿ ಒತ್ತುವರಿ ಮಾಡಿಕೊಂಡದ್ದನ್ನು ಕಣ್ಣುಮುಚ್ಚಿ ನೋಡಿಕೊಂಡಿರುವ ಆಂಧ್ರಪ್ರದೇಶದ ನಾಯಕರುಗಳಾಗಿರುವ ಇವರುಗಳು ಹೇಗೆ ಕನ್ನಡನಾಡಿನ ಹಿತದ ಬಗ್ಗೆ ಮಾತಾಡಬಲ್ಲರು? ತೆಲುಗರನ್ನು ಓಲೈಸುವ ಪ್ರಯತ್ನದಲ್ಲಿ ಇದೀಗ ಬಿಜೆಪಿಯವರು ಅದ್ಯಾರೋ ಕೃಷ್ಣಾರೆಡ್ಡಿ ಎನ್ನುವವರನ್ನು ಕರೆಸುತ್ತಿದ್ದಾರಂತೆ. ಇನ್ನು ಕನ್ನಡಿಗರ ಹೆಮ್ಮೆಯ, ಕೃಷ್ಣಾ ಕಾವೇರಿ ಹೋರಾಟದಲ್ಲಿ ಸಾಯಬೀಳೋ ಹೋರಾಡಿದ, ಶ್ರೀ ವೆಂಕಯ್ಯನಾಯ್ಡು ಎನ್ನುವ ರಾಜ್ಯಸಭಾ ಸದಸ್ಯರನ್ನೂ ಬಿಜೆಪಿ ತೆಲುಗಲ್ಲಿ ಪ್ರಚಾರ ಮಾಡಲು ಬಳಸಿಕೊಂಡಿದೆ. ಇನ್ನು ಮರಾಠಿ ಭಾಷಿಕರನ್ನು ಓಲೈಸಲು ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ಶ್ರೀ ಪೃಥ್ವಿರಾಜ ಚೌಹಾಣ್ ಅವರನ್ನು ಕರೆಸಿದ್ದಾರೆ. ಈ ಯಪ್ಪಾ ‘ಬೆಳಗಾವಿ ವಿವಾದ ಇನ್ನೂ ಜೀವಂತ, ಎರಡೂ ರಾಜ್ಯಗಳು ಸುಪ್ರಿಂಕೋರ್ಟ್ ತೀರ್ಮಾನಕ್ಕೆ ಬದ್ಧರು’ ಎಂದೆಲ್ಲಾ ಮಾತಾಡಿದ್ದಾರೆ. ಇಷ್ಟಲ್ಲದೆ ನಮ್ಮೂರಿಗೆ ಬಂದು ಬಾಯಿಗೆ ಬಂದಂತೆ ಮಾತಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಆರ್. ಆರ್ ಪಾಟೀಲರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಲು ರಾಯಭಾರ ಮಾಡಿದ್ದಾರೆ. ಇಷ್ಟೇ ಸಾಲದೆಂಬಂತೆ ಕೊಂಕಣಿ ಜನರ ಓಲೈಕೆಗಾಗಿ ಗೋವಾದಿಂದ ಮನೋಹರ್ ಪರಿಕ್ಕಾರ್ ಅವರನ್ನು ಕರೆಸಿದ್ದಾರೆ. ಹೀಗೆ ಕರೆಸಿದವರು ಇವರನ್ನೊಮ್ಮೆ ಮಹದಾಯಿ ನೀರಿನಲ್ಲಿ ೪ ಟಿಎಂಸಿ ಕುಡಿಯಲು ಬಳಸಿಕೊಳ್ಳುತ್ತೇವೆ, ಕಳಸಾ ಬಂಡೂರ ಯೋಜನೆಗೆ ಅಡ್ಡಗಾಲಿಕ್ಕಬೇಡಿ ಎನ್ನಲಿ ನೋಡೋಣ! ಇನ್ನು ಮಲಯಾಳಿಗಳ ಓಲೈಕೆಗಾಗಿ ಕೇರಳ ಮುಖ್ಯಮಂತ್ರಿ ಉಮ್ಮಾನ್ ಚಾಂಡಿಯವರನ್ನು ಕರೆಸಿದ್ದಾರೆ.

ಇದೆಂಥಾ ಕರ್ಮ ಕನ್ನಡಿಗರದ್ದು!

ಇಂಥಾ ಘಟನೆಗಳು ನೆರೆಯ ತಮಿಳುನಾಡಿನಲ್ಲಿ ನಡೆದಿದ್ದರೆ ಅಲ್ಲಿಯ ಜನರು ಇವರನ್ನೆಲ್ಲಾ ಬೀದಿಬೀದಿಗಳಲ್ಲಿ ಅಟ್ಟಾಡಿಸಿಕೊಳ್ಳುತ್ತಿದ್ದರೋ ಏನೋ? ನಮ್ಮ ಕನ್ನಡಿಗರು ಕಡೇಪಕ್ಷ ಮತವೆಂಬ ಬಾರುಕೋಲನ್ನಾದರೂ ಸರಿಯಾಗಿ ಪ್ರಯೋಗಿಸುತ್ತಾರೆ ಎನ್ನುವ ಬಗ್ಗೆಯೂ ಅನುಮಾನವಿದೆ. ಇವೆಲ್ಲಾ ಏನೂ ಒಂದೇ ದಿನದಲ್ಲಿ ಆಗುತ್ತಿರುವುದಲ್ಲಾ. ಇದಕ್ಕೆ ಈ ರಾಜಕಾರಣಿಗಳಷ್ಟೇ ಕಾರಣವಲ್ಲಾ! ತನ್ನತನವ ಮರೆತು ಸಹಿಷ್ಣುತೆಯ ಪಾಠಕ್ಕೆ ನಿರಂತರವಾಗಿ ತಲೆ ತೊಳಿಸಿಕೊಂಡ ಕನ್ನಡಿಗರೇ ಕಾರಣ ಎಂದರೆ ತಪ್ಪಿಲ್ಲಾ! ಕನ್ನಡಿಗರ ಸಮಸ್ಯೆಗಳು ಯಾವ ರಾಜಕೀಯ ಪಕ್ಷಕ್ಕೂ ಸಮಸ್ಯೆಯಲ್ಲಾ ಎಂದರೆ ಇದಕ್ಕೆ ಹೊಣೆ ತಲೆ ಮೇಲೆ ತಲೆ ಬಿದ್ದರೂ ನಾವು ಇವರ ಕೈಬಿಡುವುದಿಲ್ಲಾ ಎನ್ನುವ ನಂಬಿಕೆಯೇ ಕಾರಣ!! ಎಂದಿಗೆ ಕನ್ನಡಿಗರು ಒಂದು ಓಟ್ ಬ್ಯಾಂಕ್ ಆಗುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೇ! ಕನ್ನಡಿಗರು ಜಾತಿ, ಧರ್ಮ, ರಾಷ್ಟ್ರೀಯ ಪಕ್ಷಗಳ ಬಾಲಬಡುಕರಾಗಿ ಇರುವತನಕವೂ ಇದು ತಪ್ಪಿದ್ದಲ್ಲಾ! ಇನ್ನಾದರೂ ಕನ್ನಡದ ಜನರು ನಾಡು ನುಡಿ ಕೇಂದ್ರಿತ ರಾಜಕಾರಣವನ್ನು ಕಟ್ಟಿಕೊಳ್ಳದಿದ್ದರೆ ಈ ನಾಡನ್ನು ನೆರೆರಾಜ್ಯಗಳಿಗೆ, ವಲಸಿಗರಿಗೆ ಹರಿದುಹಂಚಿಕೊಡುವುದನ್ನು ನೋಡುವ ದಿನಗಳು ದೂರವಿಲ್ಲಾ!! ಸ್ವಾಭಿಮಾನ ಇಲ್ಲದ ಜನಾಂಗವೊಂದು ತನ್ನ ಅಳಿವನ್ನು ಅಸಹಾಯಕವಾಗಿ ನೋಡುವುದನ್ನು ನಿಲ್ಲಿಸಿ, ಹೊಸ ಸ್ವಾಭಿಮಾನ, ಹೊಸ ಹುರುಪು, ಹೊಸ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ದಿನಗಳು ಬೇಗ ಬರಲಿ!!

B-PAC: ಇದು ಕಾರ್ಪೊರೇಟ್ ರಾಜಕಾರಣ!

(ಫೋಟೋ ಕೃಪೆ: ಬಿ.ಪ್ಯಾಕ್ ಅಂತರ್ಜಾಲ ತಾಣ)
ಈ ಬಾರಿಯ ಚುನಾವಣೆಯಲ್ಲಿ ಬಿ.ಪ್ಯಾಕ್ ಎನ್ನುವ ಸರ್ಕಾರೇತರ ಸಂಸ್ಥೆಯೊಂದು ವಿಶೇಷಪಾತ್ರ ವಹಿಸಲು ಮುಂದಾಗಿರುವುದನ್ನು ಕಾಣಬಹುದಾಗಿದೆ. ಬಿ.ಪ್ಯಾಕ್ ಎಂದರೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ. ಹಾಗೆಂದರೆ ಬೆಂಗಳೂರು ರಾಜಕೀಯ ಕ್ರಿಯಾಸಮಿತಿ ಎನ್ನಬಹುದು. ಈ ಸಂಸ್ಥೆಯನ್ನು ಮಾಡಿಕೊಂಡಿರುವುದು ರಾಜ್ಯದ ಪ್ರಮುಖ ಉದ್ದಿಮೆಗಳಲ್ಲಿ ಮುಖ್ಯವಾದ ಪಾತ್ರ ಹೊಂದಿರುವ ‘ಕೆಲವು ಗಣ್ಯ’ರು! ಈ ಸಂಸ್ಥೆಯ ಅಂತರ್ಜಾಲ ತಾಣವನ್ನು ನೋಡಿದರೆ ವಿವರ ತಿಳಿಯುತ್ತದೆ. ಸದರಿ ಗಣ್ಯರು ಬೆಂಗಳೂರನ್ನು ಉದ್ಧಾರ ಮಾಡಬೇಕೆಂಬ ಆಶಯದಿಂದ ಕಟ್ಟಿಕೊಂಡಿರುವ ಈ ಸಂಸ್ಥೆಯ ಮುಖ್ಯಉದ್ದೇಶ ಇದರ ಹೆಸರೇ ಹೇಳುವಂತೆ "ರಾಜಕೀಯ" ಲಾಬಿ! ಈ ಸಂಸ್ಥೆಯ ಧ್ಯೇಯೋದ್ದೇಶಗಳು ಮತ್ತು ನಡೆಗಳು ಹೀಗಿವೆ.

ಬಿ. ಪ್ಯಾಕ್ ಉದ್ದೇಶಗಳು!

ಬೆಂಗಳೂರಿನ ಎಲ್ಲಾ ನಗರಪಾಲಿಕೆ ಸದಸ್ಯರುಗಳ ಆಯ್ಕೆಯಲ್ಲಿ, ಶಾಸಕರ ಆಯ್ಕೆಯಲ್ಲಿ, ಸಂಸದರ ಆಯ್ಕೆಯಲ್ಲಿ  ಸಾರ್ವಜನಿಕ ಆಡಳಿತದಲ್ಲಿ ಬಲಿಷ್ಠರಾದವರನ್ನು ಆರಿಸಿ ಬೆಂಬಲಿಸುವುದು. ಇವರು ಯಾವ ಪಕ್ಷಕ್ಕೆ ಸೇರಿದವರು ಎನ್ನುವುದು ಮುಖ್ಯವಲ್ಲಾ. ಬದಲಿಗೆ ಬಿ.ಪ್ಯಾಕ್ ಯೋಜನೆಗಳನ್ನು ಒಪ್ಪುವಂತವರಾಗಿದ್ದರೆ ಸಾಕು ಮತ್ತು ಪ್ರಮುಖವಾಗಿ ಕ್ರಿಮಿನಲ್‌ಗಳಾಗಿಲ್ಲದಿದ್ದರೆ ಸಾಕು.  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಹದಿನಾಲ್ಕು ಅಭ್ಯರ್ಥಿಗಳಿಗೆ ತಮ್ಮ ಟ್ರಸ್ಟಿನಿಂದ ಚುನಾವಣೆಯಲ್ಲಿ ಖರ್ಚು ಮಾಡಲು ತಲಾ ಐದು ಲಕ್ಷ ರೂಪಾಯಿಗಳನ್ನೂ ಕೊಡುತ್ತಿದ್ದಾರೆ. ಒಂದೇ ಕ್ಷೇತ್ರದಲ್ಲಿ ಇಬ್ಬರು ಬೆಂಬಲಿತ ಅಭ್ಯರ್ಥಿಗಳಿದ್ದರೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಈ ಗುಂಪಿನ (ಕಮಿಟಿಯ) ಹಿಂದೆ ಇರುವವರು ಮೂಲತಃ ಬೆಂಗಳೂರಿನಲ್ಲಿ ಉದ್ದಿಮೆ ಹೊಂದಿರುವ ಗಣ್ಯರುಗಳು. ಕಾರ್ಪೋರೇಟ್ ವಲಯದ ದಿಗ್ಗಜರುಗಳು. ಇವರುಗಳ ಉದ್ದೇಶವನ್ನು ಕೇಳಿ ಬೆಂಗಳೂರಿಗರು ಅತಿಯಾಗಿ ಹಿಗ್ಗುವಂತೇನೂ ಇಲ್ಲಾ! ಯಾಕೆಂದರೆ ಇದೇ ಅಂತರ್ಜಾಲ ತಾಣದಲ್ಲಿ ಬೆಂಗಳೂರಿನ ಬಗ್ಗೆ ಏನನ್ನು ಮಾಡಬೇಕೆಂದು ಬಯಸುತ್ತಿದ್ದಾರೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಭ್ರಷ್ಟಾಚಾರ ರಹಿತವಾದ ದಕ್ಷ ಆಡಳಿತದ ಪರವಾಗಿದ್ದೇವೆಂದು ಹೇಳುವ ಈ ತಂಡದವರು ಆಡಳಿತ ಸುಧಾರಣೆಯ ಅನೇಕ ಯೋಜನೆಗಳ ಜೊತೆಯಲ್ಲಿ ಮೂಲತಃ "ನಗರ ಆಳ್ವಿಕೆ (ಸಿಟಿ ಗವರ್ನೆನ್ಸ್)" ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಹಣವನ್ನು ಬೆಂಗಳೂರಿಗಾಗೇ ಬಳಸುವ ಉದ್ದೇಶವನ್ನು ಹೊಂದಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ರೊಫೆಶನಲ್ ತೆರಿಗೆ (೧೦೦%),  ಸ್ಟಾಂಪ್ ಡ್ಯೂಟಿ (೫೦%) ಮತ್ತು ರಸ್ತೆ ತೆರಿಗೆ(೫೦%)ಯನ್ನು ನಗರದ ಬಿಡಿಎ, ಬಿಬಿಎಂಪಿ ಹಾಗೂ ಇನ್ನಿತರ ಸಂಸ್ಥೆಗಳಿಗೇ ನೀಡಬೇಕೆನ್ನುವುದು ಇವರ ನಿಲುವು. 

ಇದು ತರವೇ?

ಈ ನಿಲುವುಗಳ ಹಿಂದೆ ಬೆಂಗಳೂರನ್ನು ಸಿಟಿ ಸ್ಟೇಟ್ ಮಾಡುವ ಒಂದು ಸ್ಪಷ್ಟ ಉದ್ದೇಶ ಕಾಣುತ್ತದೆ. ಇಡೀ ಕರ್ನಾಟಕದ ಒಟ್ಟು ಆದಾಯದಲ್ಲಿ ೬೦% ಬೆಂಗಳೂರಿನಲ್ಲೇ ಹುಟ್ಟುವುದರಿಂದ ಇವರು ಹೇಳುವುದು ಸರಿಯೆಂದೇ ಬೆಂಗಳೂರಿಗರಿಗೆ ತೋಚಬಹುದು. ಆದರೆ ಈ ನಡೆ ಇಡೀ ಕರ್ನಾಟಕದಿಂದ ಬೆಂಗಳೂರನ್ನು ಬೇರೆ ಮಾಡುವ ಅಪಾಯ ಹೊಂದಿದೆ. ರಾಜ್ಯಗಳಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆ ಹಣದ ಮೇಲೆ ಆಯಾ ರಾಜ್ಯಗಳಿಗೇ ಪೂರ್ತಿ ಹಕ್ಕು ಕೊಡಿ ಎನ್ನುವುದನ್ನು ಇದಕ್ಕೆ ಹೋಲಿಸಲಾಗದು. ಏಕೆಂದರೆ ರಾಜ್ಯವೊಂದರಲ್ಲಿ ಆ ರಾಜ್ಯದ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ, ವ್ಯಾಪಾರ, ವಹಿವಾಟು, ಉದ್ದಿಮೆ ನಡೆಸಲಾಗುತ್ತದೆ. ಆ ಮೂಲಕ ತೆರಿಗೆ ಕೂಡಿಹಾಕಲಾಗುತ್ತದೆ. ಈ ತೆರಿಗೆಯಲ್ಲಿ ದೊಡ್ಡಪಾಲನ್ನು ಆ ರಾಜ್ಯದ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಹೀಗೆ ಒತ್ತಾಯಿಸುತ್ತದೆ.

ಆದರೆ ಇದೇ ಮಾತನ್ನು ಬೆಂಗಳೂರಿನಂತಹ ನಗರದ ಬಗ್ಗೆ ಹೇಳಲಾಗದು. ಇಲ್ಲಿಗೆ ನೀರು ಮಂಡ್ಯದಿಂದ ಬರಬೇಕು.  ವಿದ್ಯುತ್ ಶಿವನಸಮುದ್ರದಿಂದ ಬರಬೇಕು. ಹಾಲು ಕೋಲಾರದಿಂದ ಬರಬೇಕು. ತರಕಾರಿ ಮತ್ತೊಂದರಿಂದ, ಜನರು ಮಗದೊಂದರಿಂದ... ಇದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ರಾಜ್ಯಸರ್ಕಾರ ಮತ್ತು ಇಡೀ ರಾಜ್ಯದ ಕೊಡುಗೆಯ ಕಾರಣದಿಂದಲೇ ಬೆಂಗಳೂರು ಇಂದಿನ ಕಾರ್ಪೋರೇಟ್ ಬೆಂಗಳೂರಾಗಿ ಎದ್ದು ನಿಂತಿದೆ. ಇದಕ್ಕಾಗಿ ಎಲ್ಲಾ ಪ್ರದೇಶಗಳಿಂದಲೂ ಕೊಡುಗೆಯಿದೆ ಎನ್ನುವುದನ್ನು ಕಡೆಗಣಿಸಲಾಗದು. ರಾಜ್ಯಕ್ಕೆ ಇಂದು ಬೆಂಗಳೂರನ್ನು ಬೆಳೆಸಿದ ಹಾಗೆ, ಮತ್ತೊಂದು ಊರನ್ನೂ ಬೆಳೆಸುವ ಅವಕಾಶ ಇತ್ತು ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಬೆಂಗಳೂರನ್ನು ಕರ್ನಾಟಕದಿಂದ ಬೇರೆಯಾಗಿ ನೋಡಲಾಗದು ಎನ್ನುವ ಅರಿವಾಗುತ್ತದೆ. ಹಾಗಾಗಿ ಈ "ಸಿಟಿ ಸ್ಟೇಟ್" ಪರಿಕಲ್ಪನೆ ಸರಿಯೇ ಎಂಬುದು ಪ್ರಶ್ನಾರ್ಹವಾದುದಾಗಿದೆ. ಇಡೀ ರಾಜ್ಯವನ್ನೇ ಬೆಳೆಸಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರವು ತನ್ನ ಆದಾಯದ ದೊಡ್ಡಮೂಲವನ್ನೇ ಬಿಟ್ಟುಕೊಡಬೇಕೆನ್ನುವ ಮಾತನ್ನು ಒಪ್ಪಲಾಗದು!

ಬೆಂಬಲಿತರ ನಿಲುವೇನು?

ಇಷ್ಟಕ್ಕೂ ಈ ಸಂಸ್ಥೆಯವರು ಬೆಂಬಲ ನೀಡಿ ಶಿಫ಼ಾರಸ್ಸು ಮಾಡಿ, ಚುನಾವಣೆಯ ಕರ್ಚಿಗೆ ಹಣ ನೀಡುತ್ತಿರುವ ಅಭ್ಯರ್ಥಿಗಳು ಈ ಬಗ್ಗೆ ಏನನ್ನುತ್ತಾರೆ ಎನ್ನುವುದು ಕುತೂಹಲಕಾರಿಯಾದುದಾಗಿದೆ. ಯಾಕೆಂದರೆ ಸ್ಪಷ್ಟವಾಗಿಯೇ ಬಿ.ಪ್ಯಾಕ್‌ನವರು ತಮ್ಮ ನೀತಿಗಳನ್ನು ಒಪ್ಪಿದವರನ್ನು ಮಾತ್ರಾ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಇವರಿಂದ ಬೆಂಬಲ ಪಡೆದವರು ಇವರ ನಿಲುವುಗಳನ್ನು ಒಪ್ಪಿದ್ದಾರೆ ಎನ್ನುವುದಾದರೆ ಅದನ್ನು ನೇರವಾಗಿ ಜನರ ಮುಂದಿಡಬೇಕಾದ್ದು ನ್ಯಾಯವಾದುದಾಗಿದೆ. ಬೆಂಗಳೂರನ್ನು ಕರ್ನಾಟಕದಿಂದ ಬೇರೆಯ ರೀತಿಯಲ್ಲಿ ನಡೆಸಿಕೊಳ್ಳುವ ಉದ್ದೇಶವಿದೆ ಎನ್ನುವುದನ್ನು ಹೇಳಿಕೊಳ್ಳಲಿ. ಸಿಟಿ ಸ್ಟೇಟ್ ಪರಿಕಲ್ಪನೆಯು ಚರ್ಚೆಗೊಳಗಾಗಲಿ

ಇವೆಲ್ಲಕ್ಕೂ ಮಿಗಿಲಾಗಿ ಕಾರ್ಪೋರೇಟ್ ವಲಯದವರು ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಜನತೆಯ ಹೆಸರಲ್ಲಿ ಮೂಗುತೂರಿಸುವುದು, ತಮ್ಮ ಮೂಗಿನ ನೇರದ ಬೇಡಿಕೆಗಳನ್ನು ಮುಂದಿಟ್ಟು ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುವುದು ಎಷ್ಟು ಸರಿ ಎಂಬುದನ್ನು ಜನರು ಯೋಚಿಸಬೇಕಾಗಿದೆ. ಈ ಗುಂಪಿನ ಆದ್ಯತೆಗಳೇನು, ಉದ್ದೇಶಗಳೇನು, ಕಾರ್ಯವೈಖರಿಯೇನು ಎನ್ನುವುದನ್ನೆಲ್ಲಾ ಸೂಚ್ಯವಾಗಿ ತಿಳಿಸುವ ಒಂದು ಫೋಟೋ ಇಲ್ಲಿದೆ... ನೋಡಿ!


ಈ ದಿಗ್ಗಜರು ನಡೆಸುತ್ತಿರುವ ಸಂವಾದ ಕಾರ್ಯಕ್ರಮದ ಈ ಫೋಟೋದಲ್ಲಿ ಗಮನಿಸಬೇಕಾದ ಅಂಶಗಳು ಎರಡು... ಒಂದಕ್ಷರ ಕನ್ನಡವೂ ಇದರಲ್ಲಿಲ್ಲ ಎನ್ನುವುದು ಮತ್ತು ಒಂದು ಸಂವಾದಕ್ಕೂ ಬೇರೆ ಬೇರೆ ಸಂಸ್ಥೆಗಳ ಪ್ರಾಯೋಜಕತ್ವ ಪಡೆದಿರುವುದು. ಇವರ ಕಲ್ಪನೆಯ ಬೆಂಗಳೂರಿನಲ್ಲಿ ಕನ್ನಡ ಕನ್ನಡಿಗರಿಗೆ ಸ್ಥಾನವೇನು ಮತ್ತು ರಾಜಕಾರಣದಲ್ಲಿ ಈ ಕಾರ್ಪೋರೇಟ್ ವಲಯದ ಉದ್ದೇಶಿತ ಹಿಡಿತವೇನು ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಒಟ್ಟಾರೆ ಬಿ.ಪ್ಯಾಕ್ ಸಂಸ್ಥೆಯ ಅಜೆಂಡಾ ಬೆಂಗಳೂರನ್ನು ಕರ್ನಾಟಕದಿಂದ ಕಸಿದುಕೊಳ್ಳುವ ಹುನ್ನಾರದಂತೆ ತೋರಿದರೆ ಅಚ್ಚರಿಯಿಲ್ಲ!
Related Posts with Thumbnails