ಪರಭಾಷಿಕರ ಓಲೈಕೆ... ಇದ್ಯಾಕೋ ಅತಿಯಾಯ್ತು!


ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಭರಪೂರ ಪ್ರಚಾರದಲ್ಲಿ ತೊಡಗಿವೆ. ಹೀಗೆ ಮತಗಳನ್ನು ಬೇಡುವಾಗ ಈ ಪಕ್ಷಗಳು ಮತದಾರರನ್ನು ಯಾವ್ಯಾವ ರೀತಿಯಲ್ಲಿ ಓಲೈಸಲು ಸಾಧ್ಯವೋ ಅದೆಲ್ಲಾ ಬಗೆಯಲ್ಲಿ ಓಲೈಸಲು ಮುಂದಾಗುತ್ತವೆ. ಹೀಗೆ ಮಾಡುವಾಗ ಜಾತಿ, ಧರ್ಮ, ಪಂಗಡಗಳಷ್ಟೇ ಪರಿಣಾಮಕಾರಿಯಾಗಿ ಬಳಸಲಾಗುತ್ತಿರುವ ಅಸ್ತ್ರ ಭಾಷೆ. ಅಭಿವೃದ್ಧಿಯನ್ನು ಭಾಷಿಕ ಜನರಿಗೆ ಸೀಮಿತಗೊಳಿಸುವ ಉದಾಹರಣೆಗಳನ್ನೂ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಲಿವೆ. ನಾಡೊಂದರಲ್ಲಿ ನಾನಾ ಭಾಷೆಯ ಜನರು ಇರುವುದು ಸಹಜ. ಆದರೆ ಈ ಜನರ ಮತಕ್ಕಾಗಿ ಇವರುಗಳನ್ನು ಓಲೈಸಲು ಮುಂದಾಗುವಾಗ ಅದರಿಂದ ನಾಡಿನ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ವಲಸೆ ಬಂದು ಈ ನಾಡಿನಲ್ಲಿ ನೆಲೆಸಿದವರನ್ನು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡುವ ಈ ಓಲೈಕೆಗಳು ನಾಳೆ ನಾಡನ್ನು ಮುಳುಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲಾ! ಇಷ್ಟೂ ಕಾಳಜಿ ಇಲ್ಲದ ರಾಜಕೀಯ ಪಕ್ಷಗಳಿಗೆ ಕನ್ನಡಿಗರು ತಮ್ಮ ಮತದಾನದ ಹಕ್ಕನ್ನು ಬಳಸಿ ಉತ್ತರ ಹೇಳಬೇಕಾಗಿದೆ. 

ಪರಭಾಷಿಕರ ಓಲೈಕೆ

ಸೌಹಾರ್ದತೆಯ ಹೆಸರಲ್ಲಿ ಕನ್ನಡಿಗರ ಮೇಲೆ ಪರಭಾಷೆಗಳನ್ನು ಹೇರುವುದು ನಿರಂತರವಾಗಿ ನಡೆದೇ ಇದೆ. ನಾವು ಸಹಿಸಿಕೊಳ್ಳುತ್ತಿರುವ ಕಾರಣದಿಂದಲೇ ನಮ್ಮ ಹಿತವನ್ನು ಅಳಿಸಲು ಈ ರಾಜಕಾರಣಿಗಳು ಹೇಸದೆ ಇರುವುದು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ ಅಂಥದ್ದೊಂದು ದೊಡ್ಡ ಘಟನೆ. ಸಾಂಸ್ಕೃತಿಕ ವಿನಿಮಯ ಮಣ್ಣುಮಸಿ ಎಂದು ಏನೆಲ್ಲಾ ಹೇಳಿ ಪ್ರತಿಭಟನೆಯನ್ನು ಹತ್ತಿಕ್ಕಿ ಕನ್ನಡಿಗರ ತಲೆ ಸವರಲಾಯಿತೆಂದರೆ ಈ ಹಿಂದೆ ಅದನ್ನು ವಿರೋಧಿಸಿದ್ದ ದೊಡ್ಡ ಸಾಹಿತಿಗಳೇ ಇದ್ದಕ್ಕಿದ್ದಂತೆ ರಿವರ್ಸ್‌‌ಗೇರ್ ಹಾಕಿಕೊಂಡು ತಾವು ಬೂಟಾಟಿಕೆಯವರೆಂದು ಸಾಬೀತು ಮಾಡಿಕೊಂಡರು. ಕನ್ನಡಿಗರ ಕಣ್ಮಣಿಯನ್ನು ಅಪಹರಿಸಿ ಒಬ್ಬ ಕಾಡುಗಳ್ಳನಿಂದ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಬೇಡಿಕೆಯನ್ನು ಇಡಿಸಿದ್ದ ನೆನಪು ಹಸಿರಾಗಿರುವಾಗಲೇ ಸ್ಥಾಪನೆಯಾದ ಆ ವಿಗ್ರಹ ತಮಿಳರ ಪಾಲಿಗೆ ಬೆಂಗಳೂರಿನಲ್ಲಿ ದೊಡ್ಡ ಗೆಲುವಿನ ಸಂಕೇತವಾಗಿ, ದೊಡ್ಡ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿ ತಲೆಯೆತ್ತಿತು. ಇದೇ ತಿರುವಳ್ಳುವರ್ ಪ್ರತಿಮೆಯ ಎದುರು ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಲವಾರು ತಮಿಳು ರಾಜಕಾರಣಿಗಳು ಸೇರಿ ಕರ್ನಾಟಕದಲ್ಲಿ ತಮಿಳರ ಹಿತಕಾಯುವ ಪ್ರತಿಜ್ಞೆ ಮಾಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಈ ರಾಜಕಾರಣಿಗಳ ಬದ್ಧತೆ ತಮಿಳರ ಹಿತಕಾಯುವುದಷ್ಟೇ ಆಗಿರುವಂತೆ ಅವರ ಮಾತುಗಳಿದ್ದುದನ್ನು ನೋಡಬಹುದು. ಇದು ತಮಿಳು ಅಭ್ಯರ್ಥಿಗಳ ಕತೆಯಾದರೆ ಅದಕ್ಕೆ ಕಾರಣಕರ್ತರು ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿದ ಬಿಜೆಪಿ ಸರ್ಕಾರದವರು.

ಇದೀಗ ತಮಿಳರ ಓಲೈಕೆಯಲ್ಲಿ ಮುಂದಾಗಿರುವ ಪಕ್ಷಗಳ ನಡೆಗಳನ್ನು ನೋಡಿದರೆ ತಮಿಳು ಭವನದ ಭರವಸೆ ಕೊಟ್ಟಿರುವ, ಮಾತುಮಾತಿಗೆ ಕನ್ನಡಪರ ಎಂದುಕರೆದುಕೊಳ್ಳುತ್ತಿರುವ ಕರ್ನಾಟಕ ಜನತಾ ಪಕ್ಷ ಮುಂಚೂಣಿಯಲ್ಲಿದೆ. ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹ್ಯಾರಿಸ್ ಶಾಂತಿನಗರದಲ್ಲಿ ತಮಿಳಿನಲ್ಲಿ ಭಾಷಣ ಮಾಡುತ್ತಿರುವುದಲ್ಲದೆ ಇವರ ಜೊತೆ ಸ್ಟಾರ್ ಕ್ಯಾಂಪೇನರ್, ‘ಕನ್ನಡವನ್ನು ಇಂಗ್ಲೀಶಿನಲ್ಲಿ ಮಾತಾಡುವ’ ಅಚ್ಚ ಕನ್ನಡತಿ ರಮ್ಯಾರವರೂ ತಮಿಳಿನಲ್ಲಿ ಮಾತನಾಡಿದ್ದಲ್ಲದೆ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಇವರ ಮಾತಿನಂತೆ ಭಾರತದ ಯಾವ ಭಾಷೆಯನ್ನಾದರೂ ಎಲ್ಲಾದರೂ ಬಳಸುವುದು ತಪ್ಪಲ್ಲಾ! ತನ್ನತನದ ಅರಿವಿರದ ನಿರಭಿಮಾನಿ ಮತಿಗೇಡಿಗಳ ಬಾಯಿಂದ ಮತ್ತೇನು ತಾನೇ ನಿರೀಕ್ಷೆ ಮಾಡಲಾದೀತು! ಹೀಗೆ ತಮಿಳರ ಓಲೈಕೆಯನ್ನು ಎಗ್ಗುಸಿಗ್ಗಿಲ್ಲದೆ ಮಾಡುವವರು ತಮಿಳುನಾಡಿನೊಂದಿಗಿನ ವಿವಾದಗಳಾದ ಕಾವೇರಿ ನೀರುಹಂಚಿಕೆಯ ಬಗ್ಗೆ, ಹೊಗೇನಕಲ್ ನಡುಗಡ್ಡೆಯ ವಿವಾದದ ಬಗ್ಗೆ ಯಾವ ಮಾತನ್ನೂ ಆಡುವುದಿಲ್ಲಾ!

ಇನ್ನು ತೆಲುಗರ ಓಲೈಕೆಗಾಗಿ ಆಂಧ್ರದಿಂದ ಚಿರಂಜೀವಿಯನ್ನು, ಕಿರಣ್‌ಕುಮಾರ್ ರೆಡ್ಡಿಯವರನ್ನು ಕಾಂಗ್ರೆಸ್ಸಿನವರು ಕರೆಸಿದ್ದಾರೆ. ತುಂಗಭದ್ರಾ ನದಿಗೆ ಕದ್ದು ಕಾಲುವೆ ಮಾಡಿಕೊಳ್ಳುತ್ತಿರುವ ಆರೋಪವಿರುವ, ಕೃಷ್ಣಾ ನದಿನೀರು ಹಂಚಿಕೆಯಲ್ಲಿ ಎದುರಾಳಿಯಾಗಿ ನಮ್ಮ ನೀರಿಗೆ ಎರವಾಗಿರುವ, ಗಡಿ ಒತ್ತುವರಿ ಮಾಡಿಕೊಂಡದ್ದನ್ನು ಕಣ್ಣುಮುಚ್ಚಿ ನೋಡಿಕೊಂಡಿರುವ ಆಂಧ್ರಪ್ರದೇಶದ ನಾಯಕರುಗಳಾಗಿರುವ ಇವರುಗಳು ಹೇಗೆ ಕನ್ನಡನಾಡಿನ ಹಿತದ ಬಗ್ಗೆ ಮಾತಾಡಬಲ್ಲರು? ತೆಲುಗರನ್ನು ಓಲೈಸುವ ಪ್ರಯತ್ನದಲ್ಲಿ ಇದೀಗ ಬಿಜೆಪಿಯವರು ಅದ್ಯಾರೋ ಕೃಷ್ಣಾರೆಡ್ಡಿ ಎನ್ನುವವರನ್ನು ಕರೆಸುತ್ತಿದ್ದಾರಂತೆ. ಇನ್ನು ಕನ್ನಡಿಗರ ಹೆಮ್ಮೆಯ, ಕೃಷ್ಣಾ ಕಾವೇರಿ ಹೋರಾಟದಲ್ಲಿ ಸಾಯಬೀಳೋ ಹೋರಾಡಿದ, ಶ್ರೀ ವೆಂಕಯ್ಯನಾಯ್ಡು ಎನ್ನುವ ರಾಜ್ಯಸಭಾ ಸದಸ್ಯರನ್ನೂ ಬಿಜೆಪಿ ತೆಲುಗಲ್ಲಿ ಪ್ರಚಾರ ಮಾಡಲು ಬಳಸಿಕೊಂಡಿದೆ. ಇನ್ನು ಮರಾಠಿ ಭಾಷಿಕರನ್ನು ಓಲೈಸಲು ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ಶ್ರೀ ಪೃಥ್ವಿರಾಜ ಚೌಹಾಣ್ ಅವರನ್ನು ಕರೆಸಿದ್ದಾರೆ. ಈ ಯಪ್ಪಾ ‘ಬೆಳಗಾವಿ ವಿವಾದ ಇನ್ನೂ ಜೀವಂತ, ಎರಡೂ ರಾಜ್ಯಗಳು ಸುಪ್ರಿಂಕೋರ್ಟ್ ತೀರ್ಮಾನಕ್ಕೆ ಬದ್ಧರು’ ಎಂದೆಲ್ಲಾ ಮಾತಾಡಿದ್ದಾರೆ. ಇಷ್ಟಲ್ಲದೆ ನಮ್ಮೂರಿಗೆ ಬಂದು ಬಾಯಿಗೆ ಬಂದಂತೆ ಮಾತಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಆರ್. ಆರ್ ಪಾಟೀಲರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಲು ರಾಯಭಾರ ಮಾಡಿದ್ದಾರೆ. ಇಷ್ಟೇ ಸಾಲದೆಂಬಂತೆ ಕೊಂಕಣಿ ಜನರ ಓಲೈಕೆಗಾಗಿ ಗೋವಾದಿಂದ ಮನೋಹರ್ ಪರಿಕ್ಕಾರ್ ಅವರನ್ನು ಕರೆಸಿದ್ದಾರೆ. ಹೀಗೆ ಕರೆಸಿದವರು ಇವರನ್ನೊಮ್ಮೆ ಮಹದಾಯಿ ನೀರಿನಲ್ಲಿ ೪ ಟಿಎಂಸಿ ಕುಡಿಯಲು ಬಳಸಿಕೊಳ್ಳುತ್ತೇವೆ, ಕಳಸಾ ಬಂಡೂರ ಯೋಜನೆಗೆ ಅಡ್ಡಗಾಲಿಕ್ಕಬೇಡಿ ಎನ್ನಲಿ ನೋಡೋಣ! ಇನ್ನು ಮಲಯಾಳಿಗಳ ಓಲೈಕೆಗಾಗಿ ಕೇರಳ ಮುಖ್ಯಮಂತ್ರಿ ಉಮ್ಮಾನ್ ಚಾಂಡಿಯವರನ್ನು ಕರೆಸಿದ್ದಾರೆ.

ಇದೆಂಥಾ ಕರ್ಮ ಕನ್ನಡಿಗರದ್ದು!

ಇಂಥಾ ಘಟನೆಗಳು ನೆರೆಯ ತಮಿಳುನಾಡಿನಲ್ಲಿ ನಡೆದಿದ್ದರೆ ಅಲ್ಲಿಯ ಜನರು ಇವರನ್ನೆಲ್ಲಾ ಬೀದಿಬೀದಿಗಳಲ್ಲಿ ಅಟ್ಟಾಡಿಸಿಕೊಳ್ಳುತ್ತಿದ್ದರೋ ಏನೋ? ನಮ್ಮ ಕನ್ನಡಿಗರು ಕಡೇಪಕ್ಷ ಮತವೆಂಬ ಬಾರುಕೋಲನ್ನಾದರೂ ಸರಿಯಾಗಿ ಪ್ರಯೋಗಿಸುತ್ತಾರೆ ಎನ್ನುವ ಬಗ್ಗೆಯೂ ಅನುಮಾನವಿದೆ. ಇವೆಲ್ಲಾ ಏನೂ ಒಂದೇ ದಿನದಲ್ಲಿ ಆಗುತ್ತಿರುವುದಲ್ಲಾ. ಇದಕ್ಕೆ ಈ ರಾಜಕಾರಣಿಗಳಷ್ಟೇ ಕಾರಣವಲ್ಲಾ! ತನ್ನತನವ ಮರೆತು ಸಹಿಷ್ಣುತೆಯ ಪಾಠಕ್ಕೆ ನಿರಂತರವಾಗಿ ತಲೆ ತೊಳಿಸಿಕೊಂಡ ಕನ್ನಡಿಗರೇ ಕಾರಣ ಎಂದರೆ ತಪ್ಪಿಲ್ಲಾ! ಕನ್ನಡಿಗರ ಸಮಸ್ಯೆಗಳು ಯಾವ ರಾಜಕೀಯ ಪಕ್ಷಕ್ಕೂ ಸಮಸ್ಯೆಯಲ್ಲಾ ಎಂದರೆ ಇದಕ್ಕೆ ಹೊಣೆ ತಲೆ ಮೇಲೆ ತಲೆ ಬಿದ್ದರೂ ನಾವು ಇವರ ಕೈಬಿಡುವುದಿಲ್ಲಾ ಎನ್ನುವ ನಂಬಿಕೆಯೇ ಕಾರಣ!! ಎಂದಿಗೆ ಕನ್ನಡಿಗರು ಒಂದು ಓಟ್ ಬ್ಯಾಂಕ್ ಆಗುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೇ! ಕನ್ನಡಿಗರು ಜಾತಿ, ಧರ್ಮ, ರಾಷ್ಟ್ರೀಯ ಪಕ್ಷಗಳ ಬಾಲಬಡುಕರಾಗಿ ಇರುವತನಕವೂ ಇದು ತಪ್ಪಿದ್ದಲ್ಲಾ! ಇನ್ನಾದರೂ ಕನ್ನಡದ ಜನರು ನಾಡು ನುಡಿ ಕೇಂದ್ರಿತ ರಾಜಕಾರಣವನ್ನು ಕಟ್ಟಿಕೊಳ್ಳದಿದ್ದರೆ ಈ ನಾಡನ್ನು ನೆರೆರಾಜ್ಯಗಳಿಗೆ, ವಲಸಿಗರಿಗೆ ಹರಿದುಹಂಚಿಕೊಡುವುದನ್ನು ನೋಡುವ ದಿನಗಳು ದೂರವಿಲ್ಲಾ!! ಸ್ವಾಭಿಮಾನ ಇಲ್ಲದ ಜನಾಂಗವೊಂದು ತನ್ನ ಅಳಿವನ್ನು ಅಸಹಾಯಕವಾಗಿ ನೋಡುವುದನ್ನು ನಿಲ್ಲಿಸಿ, ಹೊಸ ಸ್ವಾಭಿಮಾನ, ಹೊಸ ಹುರುಪು, ಹೊಸ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ದಿನಗಳು ಬೇಗ ಬರಲಿ!!

2 ಅನಿಸಿಕೆಗಳು:

Girish Nanjappa ಅಂತಾರೆ...

Its high time we make our stand clear. Even the regional parties are in the race of appeasing lingual minorities and converting them as vote banks. My rage is not against appeasing people who are minority,but its against the rift it creates between people and so called leaders being so ignorant about this. We should spill light on the long term effect it causes.
Kannada balasaduddakke kshame irali.

makara ಅಂತಾರೆ...

"ಕನ್ನಡಿಗರಿಗೆ ಬುದ್ಧಿ ಹೇಳೋದೂ ಒಂದೇ, ಗೊಮ್ಮಟೇಶ್ವರನಿಗೆ ಚಡ್ಡಿ ಹೊಲಿಸೋದು ಒಂದೇ" ಎಂದು ದಿವಂಗತ ಹಿರಿಯ ನಟ ಉದಯ ಕುಮಾರ್ ಅವರು ಒಮ್ಮೆ ತಮ್ಮ ಭಾಷಣದಲ್ಲಿ ನೊಂದು ನುಡಿದಿದ್ದರು. ರಾತ್ರಿಯೆಲ್ಲಾ ಕನ್ನಡದ ಬಗ್ಗೆ ಅವರ ಭಾಷಣ ಕೇಳಿ ಬೆಳಿಗ್ಗೆ ಹೋಗಿ ಇತರೇ ಭಾಷೆಗಳ ಚಿತ್ರಗಳನ್ನು ನೋಡುತ್ತಾರೆ ಎಂದು. ನಮ್ಮ ರಾಜಕೀಯ ಪುಡಾರಿಗಳೂ ಸಹ ಇಂತಹವರೇ, ಬಾಯಲ್ಲಿ ಆಡೋದೇ ಬೇರೆ ಮಾಡೋದೇ ಬೇರೆ. ತಮ್ಮ ಪ್ರಧಾನಿ ಪಟ್ಟವನ್ನು ಉಳಿಸಿಕೊಳ್ಳಲು ರಾತ್ರೋರಾತ್ರಿ ನೀರು ಬಿಡುವ ದೇವೇಗೌಡ, ಮು.ಮಂ. ಪಟ್ಟವನ್ನು ಉಳಿಸಿಕೊಳ್ಳು ಇದೇ ರೀತಿ ಮಾಡಿದ ಎಸ್. ಎಂ. ಕೃಷ್ಣ, ಮತ್ತು ಇದೀಗ ದುರ್ಬಲ ಸಿ.ಎಮ್. ಶೆಟ್ಟರ್; ಮತ್ತೊಂದೆಡೆ ಜೋಕರಿನಂತೆ ಬಡಬಡಿಸುವ ವಾಟಾಳ್ ನಾಗರಾಜ್; ಇಂತಹವರಿಂದ ಕನ್ನಡಿಗರಿಗೆ ಮುಕ್ತಿ ಎಂದೋ ತಿಳಿಯದು. ಒಂದೋ ಅತೀ ಉದಾರತೆ ಇಲ್ಲಾ ದಿವ್ಯ ನಿರ್ಲಕ್ಷ್ಯ. ಕನ್ನಡಿಗ ಎಚ್ಚೆತ್ತುಕೊಂಡು ಸರಿಯಾದ ವ್ಯಕ್ತಿಗಳಿಗೆ ಮತ ಚಲಾಯಿಸದಿದ್ದರೆ ಎಲ್ಲರೂ ನಮ್ಮನ್ನು ಹತ್ತಿ ತುಳಿಯುವವರೇ. ಸಕಾಲಿಕ ಲೇಖನಕ್ಕೆ ಧನ್ಯವಾದಗಳು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails