ಕಳೆದ ಬರಹದಲ್ಲಿ ಭಾರತದ ಹುಳುಕಿನ ಭಾಷಾನೀತಿಯು ಬದಲಾಗಬೇಕೆಂಬ ನಮ್ಮ ಹಕ್ಕೊತ್ತಾಯವು ಸಾಗಿ ಬಂದ ಬಗ್ಗೆ ಬರೆದಿದ್ದೆವು. ಇಷ್ಟಕ್ಕೂ ಭಾರತದ ಭಾಷಾನೀತಿಯನ್ನು ಹುಳುಕಿನದ್ದು ಎಂದು ಕರೆಯಬಹುದೇ? ಎಂಬ ಪ್ರಶ್ನೆಗೆ "ಸಮಾನತೆಯೇ ಜೀವಾಳ, ಇಲ್ಲಿ ಎಲ್ಲರೂ ಸಮಾನರು" ಎಂದು ಬಡಾಯಿ ಕೊಚ್ಚಿಕೊಳ್ಳುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ, ಬಹುಸಂಖ್ಯಾತರ ನೆಪದಲ್ಲಿ... ನಿಜಕ್ಕೂ ಅರ್ಧಕ್ಕಿಂತಲೂ ಹೆಚ್ಚು ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಿರುವುದು ಉತ್ತರವಾಗಿ ಕಾಣುತ್ತದೆ. ಭಾರತವು ತನ್ನ ಸಂವಿಧಾನದಲ್ಲಿ ಬರೆದುಕೊಂಡು ಒಪ್ಪಿಕೊಂಡು ಆಚರಿಸುತ್ತಿರುವ "ಆಡಳಿತ ಭಾಷಾ ನೀತಿ"ಯೇ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ನಮ್ಮ ನಿಮ್ಮ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ‘ಹಿಂದೀ ಭಾಷೆಯನ್ನು ಈ ದೇಶದ ಮೂಲೆಮೂಲೆಗಳಿಗೆ ಹರಡಲು’ ಬಳಸಲಾಗುತ್ತಿದೆ. ಈ ಹರಡುವಿಕೆಯ ಹಿಂದಿರುವ ಉದ್ದೇಶವೇ ಇಡೀ ಭಾರತವನ್ನು ಹಿಂದೀ ಭಾಷಿಕರ ಆಡುಂಬೊಲ ಮಾಡುವುದು ಎಂಬಂತೆ ಕಾಣುತ್ತಿದೆ. ಹಿಂದೀ ಭಾಷಿಕರು ಎಲ್ಲೇ ಹೋಗಲಿ ಅವರ ಬದುಕು ಸರಾಗವಾಗಿರುವಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ. ಇಲ್ಲದಿದ್ದರೆ ಭಾರತದ ಯಾವುದೇ ಮೂಲೆಯಲ್ಲಿನ ಕೇಂದ್ರಸರ್ಕಾರಿ ಕಚೇರಿಯಲ್ಲೂ ಹಿಂದೀಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದೀಯಲ್ಲೇ ಉತ್ತರಿಸುವುದು ಕಡ್ಡಾಯ ಎನ್ನುವ ಕಾನೂನು ಇರುತ್ತಿರಲಿಲ್ಲ! ಇರಲಿ... ಈ ಹರಡುವಿಕೆಯು ಕೆಲವೆಡೆ ಹೇರಿಕೆಯಾಗಿದ್ದರೆ ಇನ್ನೂ ಕೆಲವೆಡೆ ಹೇರಿಕೆ ಗೊತ್ತೇ ಆಗದಂತಿದೆ. ಇಂಥಾ ಒಂದು ಪುಣ್ಯಕ್ಷೇತ್ರ ನಮ್ಮ ಬೆಂಗಳೂರಿನಲ್ಲೇ ಹರಿದಾಡುತ್ತಿದೆ. ಅದು "ನಮ್ಮ ಮೆಟ್ರೋ" ರೈಲು ಸಂಪರ್ಕ ವ್ಯವಸ್ಥೆ!
ಮೆಟ್ರೋದಲ್ಲಿ ಹಿಂದೀ ನರ್ತನ!
ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರದ ಹಣ ಸ್ವಲ್ಪಮಟ್ಟಿಗೆ ತೊಡಗಿಸಲಾಗಿದೆ ಎನ್ನುವ ಕಾರಣ ನೀಡಿಯೋ, ಕರ್ನಾಟಕವು ತ್ರಿಭಾಷಾಸೂತ್ರವನ್ನು ಒಪ್ಪಿದೆಯೆನ್ನುವ ಕಾರಣ ನೀಡಿಯೋ ಮೂರುಭಾಷೆಗಳಲ್ಲಿ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ಇದುವರೆವಿಗೆ ಬೆಂಗಳೂರಿನ ಸಾರ್ವಜನಿಕ ಬಳಕೆಯ ಸ್ಥಳೀಯ ಸಾರಿಗೆಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಿಟ್ಟು ಹಿಂದೀಯನ್ನು ಬಳಸಿರಲಿಲ್ಲಾ! ಇದೀಗ ನಮ್ಮ ಮೆಟ್ರೋದಲ್ಲಿ ಬರಿಯ ಫಲಕಗಳಷ್ಟೇ ಅಲ್ಲದೆ ಹಿಂದೀಯಲ್ಲಿ ಸೂಚನೆಗಳನ್ನು ಕೂಡಾ ನೀಡಲು ಶುರುಮಾಡಿದ್ದಾರೆ. ಅಲ್ಲಾರೀ! ಕನ್ನಡದಲ್ಲಿದೆಯಲ್ಲಾ... ಹಿಂದೀಲಿ ಇದ್ದರೇನು? ಎಂದು ಭಾವಿಸುವ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಆದರೆ ಯೋಚಿಸಿ ನೋಡಿದರೆ.. ಇದರ ಹಿಂದೆ ಹಿಂದೀ ಭಾಷಿಕರ ವಲಸೆಯನ್ನು ಉತ್ತೇಜಿಸುವ, ಆ ಮೂಲಕ ಕರ್ನಾಟಕದಂತಹ ರಾಜ್ಯಗಳ ಜನಲಕ್ಷಣವನ್ನೇ ಬುಡಮೇಲುಗೊಳಿಸುವ ಹುನ್ನಾರ ಕಾಣುತ್ತದೆ. ಈ ನೀತಿಯ ಹಿಂದೆ ಭಾರತದ ಭಾಷಾನೀತಿಯು ಕೆಲಸ ಮಾಡಿರುವುದು ಕಾಣುತ್ತದೆ ಮತ್ತು ಅದರ ಹುಳುಕು ಕಣ್ಣಿಗೆ ರಾಚುತ್ತದೆ!
ಹುಳುಕು ಯಾಕೆಂದರೆ...!
ಇಲ್ಲಿ ಹಿಂದೀಯ ಅಗತ್ಯವೇ ಇಲ್ಲದಿರುವಾಗಲೂ ಹಾಗೆ ಹಿಂದೀಯನ್ನು ಬಳಸಿರುವುದರ ಏಕೈಕ ಉದ್ದೇಶ "ಹಿಂದೀ ಭಾಷಿಕ ಜನರಿಗೆ ಅನುಕೂಲವಾಗಲೀ" ಎನ್ನುವುದೇ ಆಗಿದೆ. ‘ಬೆಂಗಳೂರಿಗೆ ಭಾರತದ ಎಲ್ಲೆಡೆಯಿಂದ ಜನರು ಬರುತ್ತಾರೆ ಹಾಗಾಗಿ ಇಲ್ಲಿ ಹಿಂದೀ ಬೇಕು’ ಎನ್ನುವವರು ಅರಿಯಬೇಕಾದದ್ದು, ಬೆಂಗಳೂರಿನ ಎರಡನೇ ದೊಡ್ಡ ಭಾಷಿಕ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿರುವ ತೆಲುಗರದ್ದು! ಹಾಗೇ ಉರ್ದು ಭಾಷಿಕರು, ತಮಿಳರು ಎಲ್ಲಾ ಆದಮೇಲೆ ಹಿಂದಿಯವರ ಸರತಿ ಬರುತ್ತದೆ. ಭಾರತೀಯರೆಲ್ಲಾ ಸಮಾನರೆನ್ನುವುದೇ ದಿಟವಾದರೆ ನಮ್ಮ ಮೆಟ್ರೋದಲ್ಲಿ ಕನ್ನಡದ ಜೊತೆಗೆ ತೆಲುಗು, ಉರ್ದು, ತಮಿಳು ಭಾಷೆಗಳೂ ಇರಬೇಕಿತ್ತು! ಬೇಡಪ್ಪಾ... ದೆಹಲಿಯ ಮೆಟ್ರೋದಲ್ಲಿ ಭಾರತದ ಇನ್ಯಾವ ಭಾಷೆಗೆ ಸ್ಥಾನ ನೀಡಿದ್ದಾರೆ? ಅಂದರೆ ಭಾರತದ ಮೂಲೆಮೂಲೆಯಲ್ಲೂ ಆಯಾಜನರ ಭಾಷೆಯ ಜೊತೆಗೆ ಹಿಂದೀಯನ್ನು ಸೇರಿಸುವುದು! ಅದಕ್ಕೆ ಹೆಚ್ಚು ಜನರಿಗೆ ಅದು ಬರುವ ಭಾಷೆ ಎಂದುಬಿಡುವುದು. ಆ ಮೂಲಕ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಭಾಷಿಕ ರಾಜ್ಯಗಳ ಜನರಿಗೆ ಕರ್ನಾಟಕದಂತಹ ಸಮೃದ್ಧ ಜನವಿರಳ ಪ್ರದೇಶಗಳಿಗೆ ವಲಸೆ ಹೋಗಲು ಅನುಕೂಲ ಮಾಡಿಕೊಡುವುದು! ಇದು ಯಾವರೀತಿಯಲ್ಲಿ ಸಮಾನತೆಯೇ ಜೀವಾಳ ಎನ್ನುವ ಮಾತಿಗೆ ಹತ್ತಿರವಾಗಿದೆ? ಇನ್ನು ಹೀಗೆ ಮೆಟ್ರೋದಂತಹ ಸ್ಥಳೀಯ ಸಮೂಹ ಸಾರಿಗೆಯಲ್ಲಿ ಹಿಂದೀ ತೂರಿಸಿರುವುದನ್ನು ಸಮಾನತೆಯ ಸಂಕೇತವಾಗಿ ಕಾಣಬೇಕೋ... ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಪ್ರತೀಕವಾಗಿ ಕಾಣಬೇಕೋ? ಬೆಂಗಳೂರಿಗೆ ವಲಸೆ ಬರುವ ಹಿಂದೀ ಭಾಷಿಕರಿಗೆ ತೊಂದರೆಯಾಗಬಾರದೆನ್ನುವ ಘನ ಉದ್ದೇಶ ಭಾರತ ಸರ್ಕಾರಕ್ಕಿರುವಂತೆಯೇ... ದೆಹಲಿಗೆ ಹೋಗುವ, ದೆಹಲಿಯಲ್ಲಿರುವ ಕನ್ನಡದವರ ಬಗ್ಗೆಯೂ ಇದೆಯೇ? ಅಸಲಿಗೆ ಹೀಗೆ ಎಲ್ಲರಿಗೂ ಅನುಕೂಲ ಮಾಡಿಕೊಡುವಂತಹ ಭಾಷಾನೀತಿ ಭಾರತದಲ್ಲಿದೆಯೇ ಎಂದರೆ ಕಾಣುವುದು ದೊಡ್ಡ ನಿರಾಸೆ!
ಸಮಾನತೆಯ ಕೂಗು!
"ಈ ಹುಳುಕು ಸರಿ ಹೋಗಲಿ... ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಲಿ. ತನ್ನ ನಾಡಿನಲ್ಲಿ ಆಯಾಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆ ತಾರದಂತಹ ಭಾಷಾನೀತಿ ರೂಪುಗೊಳ್ಳಲಿ" ಎಂಬ ದನಿ ಎತ್ತುವಲ್ಲಿ ನಮ್ಮ ಕನ್ನಡಿಗರೇನು ಹಿಂದೆ ಬಿದ್ದಿಲ್ಲ - ಇದು ಹಿಗ್ಗಿನ, ಭರವಸೆಯ ವಿಷಯ. ಮೆಟ್ರೋದಲ್ಲಿ ಹಿಂದೀ ತುರುಕಲು ಆರಂಭಿಸಿದಾಗಲೇ ಇದರ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ದೂರು ಸಲ್ಲಿಸಿದವರು ಹಲವರು. ಮೆಟ್ರೋ ಮುಖ್ಯಸ್ಥರ ಉದ್ಧಟತನದ ಉತ್ತರದಿಂದ ಬೇಸತ್ತವರು ಮತ್ತೆ ಕೆಲವರು. ಸೋಲೊಪ್ಪದೆ ಬೆನ್ನು ಹತ್ತಿ ಮೆಟ್ರೋದ ಈ ಹಿಂದೀ ಪರವಾದ ನಿಲುವನ್ನು ಪ್ರಶ್ನಿಸಿ "ಇಂತಹ ನಿಲುವಿಗೆ ಕಾರಣ ವಿವರಿಸಿ" ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ನಕ್ಷತ್ರಿಕನ ಹಾಗೆ ಬೆನ್ನು ಹತ್ತಿದವರು ಮತ್ತೆ ಕೆಲವರು. ಮನವಿ, ಕಾಯುವಿಕೆ, ಮೇಲ್ಮನವಿ, ದೂರು, ವಿಚಾರಣೆ... ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಾ ಮೆಟ್ಟಿಲುಗಳನ್ನೂ ಹತ್ತುತ್ತಾ, ಸುಮಾರು ಎರಡು ವರ್ಷಗಳಿಂದಲೂ ಉತ್ಸಾಹ ಬತ್ತಿಸಿಕೊಳ್ಳದೆ ಮೆಟ್ರೋದ ಬೆನ್ನು ಬಿದ್ದಿರುವ ಗೆಳೆಯರು ಆರ್.ಟಿ.ಐಗೆ ಸೂಕ್ತ ಉತ್ತರ ಬರುವವರೆಗೂ ಬಿಡೆನೆಂದು ನ್ಯಾಯದ ಎಲ್ಲಾ ಬಾಗಿಲುಗಳಿಗೆ ಎಡೆತಾಕುತ್ತಿದ್ದಾರೆ. ಇಂದಲ್ಲಾ ನಾಳೆ ಗೆಲುವು ದಕ್ಕೇ ದಕ್ಕುತ್ತದೆ ಎಂಬ ನಂಬಿಕೆಯಲ್ಲಿ... ಸಮಾನತೆಯ ಈ ಕೂಗಿಗೆ ಕನ್ನಡಿಗರ ಬೆಂಬಲ ಬೇಕು! ನಾವೆಲ್ಲರೂ ಇದರ ಬಗ್ಗೆ ದನಿಯೆತ್ತಬೇಕು ಎನ್ನುವ ನಿಲುವು ನಮ್ಮದು! ನಿಮ್ಮದೂ ಅದೇ ಆಗಿದ್ದಲ್ಲಿ... ಈ ಹಕ್ಕೊತ್ತಾಯಕ್ಕೆ ಸಹಿ ಹಾಕಿರಿ. ಅಸಮಾನತೆಯ ವಿರುದ್ದ ನಿಮ್ಮದೊಂದು ಕೂಗು ದಾಖಲಾಗಲಿ!