(ಕೃಪೆ: ಲೂಸಿಯಾ ಮಿಂದಾಣ) |
"ಈ ಹೊಸತನದ ಪ್ರಯೋಗವನ್ನು ಮೆಚ್ಚದವರು ಯಾರಾದರೂ ಇದ್ದೀರಾ?" ಎಂದು ಟಾರ್ಚ್ ಬಿಟ್ಕೊಂಡು ನೋಡ್ತಿರೋ ಹಾಗಿರೋ ಈ ಜಾಹಿರಾತು "ಲೂಸಿಯಾ" ಚಿತ್ರತಂಡದ ಕ್ರಿಯಾಶೀಲತೆಗೆ, ಕನ್ನಡ ಚಿತ್ರರಂಗದಲ್ಲಿನ್ನೂ ಹೊಸ ಹೊಸ ಸೃಜನಶೀಲ ಪ್ರಯತ್ನಗಳು ಆಗುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದೆ. ಇದಷ್ಟೇ ಆಗಿಲ್ಲದೆ ಕನ್ನಡದ ನುಡಿ ಸಾಧ್ಯತೆಯ ಪಟ್ಟಿಗೆ "ನೋಡುಗರ ಹೂಡಿಕೆಯ ಸಿನಿಮಾ" ಎನ್ನುವ ಹೊಸದೊಂದು ಸಾಲನ್ನು ಸೇರಿಸುತ್ತಿದೆ.
"ಲೂಸಿಯಾ" ಹೆಸರಿನ ಹೊಸ ಸಿನಿಮಾವೊಂದು ಒಂದೆರಡು ತಿಂಗಳುಗಳಲ್ಲಿ ಬಿಡುಗಡೆಯಾಗಲಿದ್ದು ನಿಧಾನವಾಗಿ ಪ್ರಚಾರ ಕಳೆಗಟ್ಟತೊಡಗಿದೆ. ಲೂಸಿಯ ಸಿನಿಮಾಗಿಂತಲೂ ನಮಗೆ ಮಹತ್ವದ್ದಾಗಿ ಕಾಣುತ್ತಿರುವುದು ಆ ಸಿನಿಮಾ ತಯಾರಾದ ಬಗೆ. ನೋಡುಗರೇ ಹೂಡಿಕೆದಾರರಾಗುವ ವಿಭಿನ್ನವಾದ ಅವಕಾಶದಿಂದಾಗಿ "ಆಡಿಯನ್ಸ್ ಫಿಲ್ಮ್" ಎಂಬ ಹೊಸ ವಿಧಾನವೊಂದು ನಮ್ಮ ನಾಡಲ್ಲಿ ಚಿಗುರುತ್ತಿರುವುದು ಎಲ್ಲರ ಕುತೂಹಲ ಮತ್ತು ಮೆಚ್ಚುಗೆಗೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಈ ಹೊಸ ಬೆಳವಣಿಗೆ ಹೊಸತನದಿಂದ ಕೂಡಿದ್ದು ಹೊಸದೊಂದು ಮಾದರಿಯಾಗುವ ಲಕ್ಷಣ ಹೊಂದಿದೆ.
ಹೊಸತನದ ಪ್ರಯೋಗ
ಸಿನಿಮಾವೊಂದಕ್ಕೆ ದೊಡ್ಡಮೊತ್ತದ ಬಂಡವಾಳ ಬೇಕೆನ್ನುವುದು ಗೊತ್ತಿರುವ ಸಂಗತಿಯೇ! ಈ ಬಂಡವಾಳವನ್ನು ತನ್ನ ಹಿಂದಿನ ಸಿನಿಮಾ ಹುಟ್ಟುಹಾಕಿದ ಭರವಸೆಯನ್ನು ಮುಂದೊಡ್ಡಿ ನೋಡುಗರೇ ತೊಡಗಿಸುವಂತೆ ಮಾಡಿದ ಈ ಬಗೆ ನಾಡಿಗೆ ಹೊಸದು. ಇದೇ ಕಾರಣಕ್ಕಾಗಿ ಲೂಸಿಯಾ ತಂಡಕ್ಕೆ ಪ್ರಶಸ್ತಿಯೂ ಬಂದದ್ದು, ಈ ಪ್ರಯತ್ನಕ್ಕೊಂದು ದೊಡ್ಡಬಲ ಬಂದಂತಾಗಿದೆ. ಇಂಥದ್ದೊಂದು ಪ್ರಯತ್ನದ ಹಿಂದೆ ದೊಡ್ಡದಾದ ಪ್ರಯೋಗಶೀಲತೆಯಿದೆ. ಮೇಲ್ನೋಟಕ್ಕೆ ಬಹಳ ಸುಲಭವಾದ ಪಟ್ಟಿನಂತೆ ಕಾಣುವ ಈ ಪ್ರಯೋಗವು ಬಹಳ ಎದೆಗಾರಿಕೆಯಿಂದ ಕೂಡಿರುವುದಾಗಿದೆ. ಈ ರೀತಿಯ ಹೊಸಪ್ರಯತ್ನಗಳು ಗೆಲ್ಲುವುದಾದಲ್ಲಿ ಇಂತಹ ಇನ್ನಷ್ಟು ಪ್ರಯೋಗಗಳು ನಮ್ಮಲ್ಲಾಗುತ್ತದೆ.
ವಾಸ್ತವವಾಗಿ ಸಿನಿಮಾವೊಂದನ್ನು ಹೀಗೆ ನೋಡುಗರೇ ಒಂದಷ್ಟು ಮಂದಿ ಹಣ ತೊಡಗಿಸಿ ನಿರ್ಮಾಣ ಮಾಡಬೇಕೆಂದರೆ ಅದರ ನಿರ್ಮಾಣದ ಬಗ್ಗೆ ಗಟ್ಟಿಯಾದ ನಂಬಿಕೆ ಇರಬೇಕಾಗುತ್ತದೆ. ಇಂತಹ ನಂಬಿಕೆ ಒಂದೇ ಬಾರಿಗೇ/ ಮೊದಲಬಾರಿಗೇ ಒಬ್ಬ ನಿರ್ದೇಶಕರ ಮೇಲೆ ಹುಟ್ಟುವುದು ಕಷ್ಟ! ಹಾಗಾಗಿ ಯಾವುದೇ ನಿರ್ದೇಶಕರಾದರೂ ಕೂಡಾ ಜನರಿಗೆ ತಮ್ಮ ಹಿಂದಿನ ಯಶಸ್ಸನ್ನು ತೋರಿಸಿ, ತಮ್ಮಲ್ಲಿರುವ ಪ್ರತಿಭೆಯ ಬಗ್ಗೆ ನಂಬಿಕೆ ಮೂಡಿಸಿಯೇ ಇಂಥಾ ಹೂಡಿಕೆ ಗಳಿಸಿಕೊಳ್ಳಲು ಸಾಧ್ಯ. ಈ ಕಾರಣದಿಂದಲೇ ಕನ್ನಡಚಿತ್ರರಂಗದಲ್ಲಿ ಇನ್ನಷ್ಟು ಮತ್ತಷ್ಟು ಹೊಸ ಪ್ರತಿಭೆಗಳು, ಒಳ್ಳೆಯ ಚಿತ್ರಗಳು ಮೂಡಿಬರಲಿವೆ. ಈ ಕಾರಣಕ್ಕಾಗಿ ಲೂಸಿಯಾ ಚಿತ್ರ ಗೆಲ್ಲಬೇಕು. ಹಾಗೆ ಗೆಲ್ಲಬೇಕೆಂದರೆ, ಅದಾಗುವುದು ನಾವೂ ನೀವು ಮನಸ್ಸು ಮಾಡಿದರೆ ಮಾತ್ರವೇ!
ಕೊನೆಹನಿ: ಈ ಚಿತ್ರದ ಹಂಚಿಕೆಯನ್ನೂ ನೋಡುಗರೇ ಮಾಡಬಹುದೆನ್ನುವ ಮತ್ತೊಂದು ಪ್ರಯೋಗವನ್ನೂ ಲೂಸಿಯಾ ತಂಡ ಮಾಡುತ್ತಿದೆ. ನಿಮಗೆ ಮನಸ್ಸಿದ್ದಲ್ಲಿ ಇದೇ ಆಗಸ್ಟ್ ೧೫ಕ್ಕೆ ಮೊದಲು ಈ ಕೆಳಗಿನ ತಾಣಕ್ಕೆ ಭೇಟಿ ನೀಡಿ... ಪವನ್ ಕುಮಾರ್ ತಂಡದೊಡನೆ ಕೈಜೋಡಿಸಿ. http://www.hometalkies.com/lucia/pre-order/
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!