(ಚಿತ್ರ ಕೃಪೆ: ಉದಯವಾಣಿ) |
ದಿನಾಂಕ ೦೨.೦೮.೨೦೧೩ರ ಉದಯವಾಣಿಯಲ್ಲಿ ಹೀಗೊಂದು ಸುದ್ದಿ ಪ್ರಕಟವಾಗಿದೆ. ಕರ್ನಾಟಕದ ಕೆಲ ನುಡಿಗಳು ಕಣ್ಮರೆಯಾಗುವ ಅಪಾಯದ ಅಂಚಿಗೆ ತಲುಪಿವೆ ಎನ್ನುವುದೇ ಈ ಸುದ್ದಿಯ ಸಾರ. ಹೀಗೆ ಅವಸಾನಗೊಳ್ಳಲು ಕಾರಣ ‘ಆಯಾ ಭಾಷೆಯನ್ನಾಡುವ ಜನರ ಜನಸಂಖ್ಯೆ ಕುಸಿಯುತ್ತಿರುವುದು ಮತ್ತು ಆ ಜನರು ತಮ್ಮ ನುಡಿಯನ್ನು ಬಿಟ್ಟು ಸಮೀಪದ ಬಲಿಷ್ಟವಾದ ನುಡಿಯನ್ನು ಅಪ್ಪಿಕೊಳ್ಳುತ್ತಿರುವುದು’ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ವೈವಿಧ್ಯತೆಯ ಅಳಿವು ಒಳಿತಲ್ಲಾ!
ಕರ್ನಾಟಕದಲ್ಲಿ ಕನ್ನಡವಲ್ಲದೆ, ಇದೇ ನೆಲದ ಇನ್ನೂ ಹಲವು ಭಾಷೆಗಳಿವೆ. ಇವುಗಳಲ್ಲಿ ತುಳು, ಕೊಡವ ನುಡಿಗಳಂಥಾ ಲಕ್ಷಗಟ್ಟಲೆ ಜನರಾಡುವ ನುಡಿಗಳು ಇರುವಂತೆಯೇ ಕುಂದಾಪುರದ ಸುತ್ತಮುತ್ತಲಿನ ಸುಮಾರು ಐವತ್ತು ಕುಟುಂಬಗಳು ಮಾತ್ರಾ ಮಾತಾಡುವ ಬೆಳಾರಿ ಎಂಬ ನುಡಿಯಂತಹವುಗಳೂ ಇವೆ. ಈ ನುಡಿಗಳಲ್ಲಿ ಅಳಿವಿನಂಚಿಗೆ ಬಂದು ತಲುಪಿರುವುವು ಹತ್ತು ಎಂದು ದಿ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ಼್ ಇಂಡಿಯಾ ಎಂಬ ಸಂಸ್ಥೆಯ ವರದಿ ತಿಳಿಸುತ್ತಿದೆ. ನುಡಿಯೆಂಬುದು ಹೀಗೆ ನಶಿಸಿಹೋಗುವುದು ಎಂದಿಗೂ ಒಪ್ಪುವಂತಹುದಲ್ಲಾ! ವೈವಿಧ್ಯತೆಯೇ ಜೀವಾಳ ಎನ್ನುವ ಮನಸಿಗರಿಗೆ ಈ ಸುದ್ದಿ ಕಹಿಯಾದುದೇ ಆಗಿದೆ. ನುಡಿಯೊಂದನ್ನು ಒಂದು ಪರಂಪರೆಯೆಂದು ಗುರುತಿಸುತ್ತಿರುವ ಈ ಸಂದರ್ಭದಲ್ಲಿ ಪರಂಪರೆಗಳು ನಮ್ಮ ಕಣ್ಣೆದುರೇ ಅಳಿದುಹೋಗುವುದನ್ನು ಸಹಿಸುವುದಾದರೋ ಹೇಗೆ?
ಅಳಿವಿಗೆ ಕಾರಣ
ಈ ನುಡಿಗಳು ಕರ್ನಾಟಕದ ಹಲವು ಮೂಲನಿವಾಸಿಗಳ ನುಡಿಯಾದುದರಿಂದಾಗಿ ಇವುಗಳನ್ನು ಉಳಿಸಿಕೊಳ್ಳುವ ಹೊಣೆಯೂ ನಮ್ಮದೇ ಆಗಿದೆ. ಈ ಹೊಣೆಯು ಬಹಳ ಸೂಕ್ಷ್ಮತರವಾದದ್ದಾಗಿದೆ ಎಂಬುದನ್ನು ಅರಿಯಬೇಕಾದರೆ ಈ ನುಡಿಗಳ ಅವಸಾನದೆಡೆಗಿನ ಪಯಣಕ್ಕೆ ನಿಜವಾದ ಕಾರಣಗಳನ್ನು ಹುಡುಕಬೇಕಾಗಿದೆ. ಸದ್ಯ ಈ ಪಟ್ಟಿಯಲ್ಲಿರುವ ನುಡಿಗಳು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಮೂಲನಿವಾಸಿಗಳದ್ದು. ನುಡಿಯೊಂದು ಮಾರ್ಪಡುವುದೇ ಆ ನುಡಿಯಾಡುವ ಜನರು ಬೇರೆ ನುಡಿಯಾಡುವ ಜನರೊಡನೆ ಸಂಪರ್ಕಕ್ಕೆ ಬಂದಾಗ. ಜನ ಸಮುದಾಯವೊಂದು ಹೊರಜಗತ್ತಿಗೆ ತೆರೆದುಕೊಳ್ಳುವುದರಿಂದಲೇ ತನ್ನ ಆರ್ಥಿಕ ಬೆಳವಣಿಗೆಯನ್ನು ಕಂಡುಕೊಳ್ಳಲು ಸಾಧ್ಯ ಎನ್ನುವಂತಹ ಈ ಕಾಲದಲ್ಲಿ ಇಂತಹ ಸಂಪರ್ಕಗಳು ಸಹಜ ಮತ್ತು ಬೇಕಿರುವುದೇ ಆಗಿದೆ. ಹಾಗಿದ್ದಾಗ ತಮ್ಮತನವನ್ನು ಈ ಜನರು ಬಿಟ್ಟುಕೊಡಲು ಕಾರಣವೇನು? ಈ ಜನರ ನುಡಿಗಳನ್ನು ನುಂಗುತ್ತಿರುವುದು ಯಾವುದು? ಎಂಬುದನ್ನು ಅರಿಯಬೇಕಾಗಿದೆ. ಜನರು ತಮ್ಮನುಡಿಯನ್ನು ಬಿಟ್ಟುಕೊಡುವುದು ಅದಕ್ಕೆ ಇಂತಿಂತಹ ಯೋಗ್ಯತೆಯಿಲ್ಲಾ, ಇಂತಿಂತಹ ಕೆಲಸಗಳಲ್ಲಿ ಅದನ್ನು ಬಳಸಲು ಆಗುವುದಿಲ್ಲ ಎನ್ನಿಸಿದಾಗ ಮತ್ತು ತನ್ನ ನುಡಿಯ ಬಗ್ಗೆ ಕೀಳರಿಮೆ ಬೆಳೆದಾಗಲೇ ಎನ್ನಿಸುತ್ತದೆ.
೨೦ನೇ ಶತಮಾನದಲ್ಲಿ ಸಾಕ್ಷರತೆಯ, ಆಧುನಿಕ ಶಿಕ್ಷಣದ ಬಲುದೊಡ್ಡ ಅಲೆಯೆದ್ದಿತ್ತು. ಆಗ ತನ್ನೆಲ್ಲಾ ಪ್ರಜೆಗಳನ್ನೂ ಅಕ್ಷರಸ್ಥರನ್ನಾಗಿಸುವ ಪಣತೊಟ್ಟಿದ್ದ ನಮ್ಮ ಹಿರಿಯರು ಕಲಿಕಾ ಕೇಂದ್ರಗಳ ಮೂಲಕ ಶಿಕ್ಷಣವನ್ನು ಈ ಸಮುದಾಯಗಳಿಗೂ ದೊರಕಿಸಿಕೊಡಲು ಮುಂದಾದರು. ಅವರಾದರೋ ಕನ್ನಡ ಮಾಧ್ಯಮದಲ್ಲಿ ಕಲಿಸುವ ಮೂಲಕ, ಬಹುಶಃ ತಾವು ಅನಾಗರೀಕರನ್ನು ಅಕ್ಷರ ಕಲಿಸಿ ನಾಗರೀಕರನ್ನಾಗಿಸುತ್ತಿದ್ದೇವೆ ಎಂದೇ ಭಾವಿಸಿಕೊಂಡಿದ್ದರು. ಈ ಕಲಿಕೆಯನ್ನು ಈ ಸಮುದಾಯಗಳ ತಾಯ್ನುಡಿಯಲ್ಲಿ ತರುವ ಪ್ರಯತ್ನಗಳು ಗಂಭೀರವಾಗಿ ಆಗಲೇ ಇಲ್ಲಾ. ಕರ್ನಾಟಕದಲ್ಲಿ ಒಂದು ಹಂತದವರೆಗೆ ಕನ್ನಡ ನಂತರ ಇಂಗ್ಲೀಶ್ ಎನ್ನುವುದು ಕಲಿಕೆಯ ಮಾಧ್ಯಮವಾದವು. ಇಂತಹ ವಾತಾವರಣದಲ್ಲಿರುವ ಸಣ್ಣಸಂಖ್ಯೆಯ ಭಾಷಿಕ ಸಮುದಾಯಗಳು, ಲಿಪಿಯ ಹಂಗಿಲ್ಲದೆಯೇ ತಮ್ಮತನವನ್ನು ಎಷ್ಟುಕಾಲ ಉಳಿಸಿಕೊಂಡು ಬರಲು ಸಾಧ್ಯ? ಹೀಗಾಗಿ ಈ ನುಡಿಗಳ ಬಳಕೆ ಕುಗ್ಗುತ್ತಾ ಬಂದಿತು. ಇದೇ ಇಂದಿನ ಅವಸಾನದ ಅಂಚಿಗೆ ಈ ನುಡಿಗಳನ್ನು ತಂದು ನಿಲ್ಲಿಸಿರುವುದು. ಈ ನುಡಿಗಳ ಈ ದುಸ್ಥಿತಿಗೆ ಕಾರಣವೂ ಕೂಡಾ ಈ ನುಡಿಗಳ ಬಳಕೆಯ ಹರವನ್ನು ಹಿಗ್ಗಿಸಲು ಆಯಾ ನುಡಿಜನಾಂಗಗಳಿಗೆ ಅವಕಾಶವಿಲ್ಲದೆ ಇದ್ದುದರಿಂದಲೇ. ಕಾಡಿನಲ್ಲಿ ವಾಸಿಸುವ ಜನಾಂಗವೊಂದು ತನ್ನ ಬದುಕಲ್ಲಿ ಕಾಣುವ, ಕೇಳುವ, ಬಳಸುವ ಎಲ್ಲದಕ್ಕೂ ಒಂದು ಜಾಗವನ್ನು ತನ್ನ ನುಡಿಯಲ್ಲಿಮಾಡಿಕೊಂಡಿರುತ್ತದೆ. ಇಂತಹ ಪರಿಸರಕ್ಕೆ ಹೊಸದೊಂದು ಬದುಕುವ ಬಗೆ, ಸಂಸ್ಕೃತಿ ಪರಿಚಯವಾದಾಗ ಅವುಗಳನ್ನೂ ತನ್ನ ನುಡಿಯಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಹೀಗೆ ಅಳವಡಿಸಿಕೊಳ್ಳಲು ಶಕ್ತವಾಗದೇ ಇದ್ದಲ್ಲಿ ನುಡಿಯೊಂದು ಅವಸಾನದತ್ತ ಸಾಗುತ್ತದೆ ಎನ್ನುವುದು ಸಾರಾಂಶ.
(ಚಿತ್ರಕೃಪೆ: http://www.worldgeodatasets.com/language/huffman/) |
ಕರ್ನಾಟಕ ಸರ್ಕಾರದ ಹೊಣೆ
ಕರ್ನಾಟಕದಲ್ಲಿರುವ ಎಲ್ಲಾ ವೈವಿಧ್ಯತೆಗಳನ್ನು ಪೊರೆಯುವ ಹೊಣೆ ಆಯಾ ಜನಾಂಗಗಳದ್ದೇ ಆದರೂ ನಮ್ಮ ಸರ್ಕಾರವೂ ಕೂಡಾ ಇವುಗಳನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಭಾಷಾ ಅಕಾಡಮಿಗಳು ನಿಜಕ್ಕೂ ಬೇಕಿರುವುದೇ ಈ ನುಡಿಗಳ ಬೆಳವಣಿಗೆಗೆ. ಈ ನುಡಿಗಳ ಇಂದಿನ ಸ್ಥಿತಿಗೆ ಆಯಾ ನುಡಿಜನಾಂಗಗಳಷ್ಟೇ ಅಲ್ಲದೇ ಅವುಗಳನ್ನೊಳಗೊಂಡಿರುವ ರಾಜ್ಯ/ ದೇಶಗಳೂ ಕಾರಣವಾಗಿವೆ. ಹಾಗಾಗಿ ಇವುಗಳನ್ನು ಪೊರೆಯಲು ತುರ್ತಾಗಿ ಕರ್ನಾಟಕ ಸರ್ಕಾರ ಮುಂದಾಗಬೇಕಾಗಿದೆ. ಮೊದಲಿಗೆ ಈಗಿರುವ ನುಡಿಗಳನ್ನು ದಾಖಲಿಸಿಕೊಳ್ಳುವ, ಅವುಗಳ ಬಳಕೆಯ ಹರವನ್ನು ಹಿಗ್ಗಿಸುವ, ಬಳಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಈ ನುಡಿಗಳನ್ನು ಪೊರೆಯಲಿಕ್ಕಾಗಿ ತುರ್ತಾಗಿ ಒಂದಷ್ಟು ಸಂಸ್ಥೆಗಳನ್ನೂ ಕಟ್ಟಿ ಅನುದಾನಗಳನ್ನೂ ನೀಡಬೇಕಾಗಿದೆ. ಇಂತಹ ಪ್ರಯತ್ನಗಳು ಈ ಹಿಂದೆ ರಷ್ಯಾದಲ್ಲಿಯೂ ಯಶಸ್ವಿಯಾಗಿ ನಡೆದಿವೆಯಂತೆ. ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆಯ ಜನರ ನುಡಿಯೊಂದನ್ನು ಹೀಗೆ ಅಕಾಡಮಿ ರಚಿಸುವ ಮೂಲಕ ಉಳಿಸಿಕೊಂಡದ್ದಷ್ಟೇ ಅಲ್ಲದೆ ಆ ನುಡಿಯಲ್ಲಿ ಸಾಹಿತ್ಯದ ರಚನೆಯೂ ಆಗುವುದನ್ನು ಸಾಧ್ಯಮಾಡಲಾಯಿತಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಯಾವ ಸರ್ಕಾರವೂ ಇಂಥಾ ಯಾವ ಸಾಧ್ಯತೆಯನ್ನೂ ಪರಿಗಣಿಸದೆ, ತನ್ನ ನಾಡಿನ ನುಡಿಯೊಂದು ಸಾಯುತ್ತಿರುವುದನ್ನು ನೋಡುತ್ತಾ ಇರಲು ಸಾಧ್ಯವಿಲ್ಲಾ! ಇರಬಾರದು!! ಕರ್ನಾಟಕ ಸರ್ಕಾರ ತನ್ನ ಭಾಷಾನೀತಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳುವುದು ಒಳ್ಳೆಯದು.
ಕೊನೆಹನಿ: ಭಾಷೆಯೊಂದು ಬಳಕೆಯ ಹರವನ್ನು ಹಿಗ್ಗಿಸಿಕೊಳ್ಳದೆ, ಕಾಲಕಾಲಕ್ಕೆ ಬದಲಾಗದೇ ಹೋದರೆ ಅಂಥಾ ನುಡಿಯ ಅಳಿವನ್ನು ತಪ್ಪಿಸಲಾಗದು. ಹಾಗಾಗೇ ನುಡಿಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್)ಯಂತಹ ಸಲಕರಣೆಗಳನ್ನು ಬಳಸಿಕೊಳ್ಳುವುದು ಮುಖ್ಯ. ಇದು ಕನ್ನಡಕ್ಕೂ ಅನ್ವಯವಾಗುತ್ತದೆ. ಇಂದು ಸಾಹಿತ್ಯಕ್ಕೋ ಮತ್ತೊಂದಕ್ಕೋ ಕನ್ನಡವೇನಾದರೋ ಸೀಮಿತವಾಗುಳಿದು ಬದುಕಿನ ವಿದ್ಯೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳದೆ ಇದ್ದರೆ ನಾಳೆ ಕನ್ನಡವೂ ಅವಸಾನದ ಅಂಚಿನಲ್ಲಿ ಬಂದು ನಿಲ್ಲುವುದು ಖಚಿತ!
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!