(ಚಿತ್ರಕೃಪೆ: ಲಿವ್ ಮಿಂಟ್ & ದಿ ವಾಲ್ಸ್ಟ್ರೀಟ್ ಜರ್ನಲ್) |
ಜಗತ್ತಿನ ಅತಿದೊಡ್ಡ ಮಿಂದಾಣದ ಸಂಸ್ಥೆಯಾದ ಗೂಗಲ್ ಸಂಸ್ಥೆಯ ಭಾರತದ ಶಾಖೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ರಾಜನ್ ಆನಂದನ್ ಎಂಬುವವರ ಸಂದರ್ಶನವೊಂದು ಮಿಂಟ್ ಪತ್ರಿಕೆಯಲ್ಲಿ ಮೂಡಿಬಂದಿದೆ. ಮಹತ್ವಾಕಾಂಕ್ಷಿ ಸಂಸ್ಥೆಯಾದ ಗೂಗಲ್, ತನ್ನ ಉದ್ದಿಮೆಗೆ ೧೦% ಬೆಳವಣಿಗೆಯ ಗುರಿಯನ್ನು ಮುಂದಿಟ್ಟುಕೊಳ್ಳದೆ ಹತ್ತುಪಟ್ಟು ಬೆಳೆಯುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ ಎನ್ನುವ ಮೂಲಕ ಇವರು ಸಂಸ್ಥೆಯ ಮುಂದಿನ ಬೆಳವಣಿಗೆಗಳ ಬಗ್ಗೆ ಹೇಳಿಕೆ ನೀಡಿದ್ದಾರೆ. ೧೯೯೮ರಲ್ಲಿ ಆರಂಭವಾದ ಈ ಸಂಸ್ಥೆಯು ೨೦೧೩ರ ಈ ಹೊತ್ತಿನಲ್ಲಿ ಬೆಳೆದಿರುವ ಎತ್ತರ ಗಮನಿಸಿದವರಿಗೆ ಈ ಸಂಸ್ಥೆಯ ಉದ್ಯಮಿಗಾರಿಕೆ ತಂತ್ರವು ಪೊಳ್ಳಿನದ್ದಲ್ಲಾ ಎಂಬುದು ಚೆನ್ನಾಗೇ ತಿಳಿದಿರುತ್ತದೆ. ಇಂತಿಪ್ಪ ಗೂಗಲ್ ಸಂಸ್ಥೆಯು ಭಾರತದ ೧೨೦ ಕೊಟಿ ಜನಸಂಖ್ಯೆಯನ್ನು ತನ್ನ ಭವಿಷ್ಯದ ಮಾರುಕಟ್ಟೆಯನ್ನಾಗಿ ಗುರುತಿಸಿಕೊಂಡಿದ್ದು ಸದರಿ ಮಾರುಕಟ್ಟೆಯನ್ನು ಕೈವಶ ಮಾಡಿಕೊಳ್ಳುವ ತಂತ್ರದ ಬಗ್ಗೆ ಈ ಸಂದರ್ಶನದಲ್ಲಿ ಶ್ರೀ ರಾಜನ್ ಆನಂದನ್ ಅವರು ಮಾತಾಡಿರುವ ಅಂಶಗಳು ಆಸಕ್ತಿಕರವಾಗಿವೆ.
ನಾಳಿನ ಮಿಂದಾಣದ ಸೇವೆಗಳು ಕನ್ನಡದಲ್ಲೇ!
ಈ ಸಂದರ್ಶನದ ಒಂದು ಭಾಗದಲ್ಲಿ ಇವರು "ಮೊಬೈಲುಗಳ ಮೂಲಕ ಮಿಂಬಲೆ ಸೇವೆಗಳನ್ನು ಪದೆದುಕೊಳ್ಳುವುದು ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ. ಖಚಿತವಾಗಿಯೂ ಈ ಬೆಳವಣಿಗೆಗೆ ಇರುವ ಪ್ರಮುಖವಾದ ತೊಡಕುಗಳಲ್ಲಿ ಒಂದು ಭಾಷೆ. ಸ್ಥಳೀಯ ಭಾಷೆಯಲ್ಲಿ ಹೆಚ್ಚೆಚ್ಚು ಆಯ್ಕೆಯ ಅವಕಾಶವನ್ನು ನೀಡುವ ಮೂಲಕ ಈ ತೊಡಕನ್ನು ನಿವಾರಿಸಿಕೊಂಡು ಬೆಳವಣಿಗೆಯನ್ನು ಕಂಡುಕೊಳ್ಳಲು ಸಾಧ್ಯ. ಈಗ ೧೫ ಕೋಟಿಯಷ್ಟು ಜನರು ಮಿಂಬಲೆಯನ್ನು ಬಳಸುತ್ತಿದ್ದು ಮುಂದಿನ ೩೦ ಕೋಟಿ ಜನರು ಇಂಗ್ಲೀಶ್ ಬಳಸದ ಮಿಂಬಲೆ ಬಳಕೆದಾರರಾಗಿರಲಿದ್ದಾರೆ. ಹಾಗಾಗಿ ಸ್ಥಳೀಯ ಭಾಷೆಗಳನ್ನು ಬಳಸುವುದು ಉದ್ದಿಮೆಯನ್ನು ಬೆಳೆಸಲು ಇರುವ ದೊಡ್ಡ ದಾರಿ" ಎಂದಿದ್ದಾರೆ.
ಈ ಮಾತುಗಳನ್ನು ಕೇಳಿದಾಗ ಇಂಗ್ಲೀಶ್ ಬರುವವರಿಗೆ ಮಾತ್ರಾ ಅಂತರ್ಜಾಲ, ತಂತ್ರಜ್ಞಾನ ಎನ್ನುವ ಭ್ರಮೆಗಳು ಕಳಚಿ ಬೀಳುವ ದಿನಗಳು ಹತ್ತಿರದಲ್ಲೇ ಇದೆ ಎನ್ನಿಸುತ್ತದೆ. ‘ನಿಮಗೆ ಇಂಥಾ ಭಾಷೆ ಬರುವುದಿಲ್ಲಾ ಹಾಗಾಗಿ ಈ ಸೇವೆಯನ್ನು ನಿಮಗೆ ನೀಡುವುದಿಲ್ಲಾ’ ಎನ್ನುವಂಥಾ ಮಾತುಗಳು ಕೊನೆಯಾಗುವ ದಿನಗಳು ಬರಲಿವೆ. ಕನ್ನಡದಲ್ಲೇ ಎಲ್ಲಾ ಬಗೆಯ ಮಿಂಬಲೆ ಸೇವೆಗಳನ್ನು ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ ಕೆಲಸಕ್ಕೆ ಅಮೇರಿಕಾದ ಗೂಗಲ್ ಸಂಸ್ಥೆ ಮುಂದಾಗಿರುವುದು ಒಂದು ಮಹತ್ವದ ಸಂಗತಿಯಾಗಿದೆ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!