ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...



ಅಕ್ಕರೆಯ ಓದುಗಾ,

೨೦೦೭ರಿಂದ "ಏನ್ ಗುರು? ಕಾಫಿ ಆಯ್ತಾ..." ಬ್ಲಾಗನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೊದಲಿಗೆ ಶ್ರೀ ಕಿರಣ್ ಬಾಟ್ನಿಯವರು ಇದನ್ನು ಶುರು ಮಾಡಿದರು. ಮುಂದೆ ನಾನೂ ಇದರಲ್ಲಿ ಬರಹಗಳನ್ನು ಬರೆಯುತ್ತಾ ನಂತರ ಸಂಪಾದಕ ಮತ್ತು ಬರಹಗಾರನಾಗಿ ಹಲವು ವರ್ಷಗಳಾದವು. ಇಷ್ಟು ಕಾಲ ನಮ್ಮ ಬೆನ್ತಟ್ಟಿ ಇದನ್ನು ಓದಿದ ತಮಗೆಲ್ಲಾ ಮನದುಂಬಿದ ವಂದನೆಗಳು.

ಈ ಬ್ಲಾಗಿನ ಹರವನ್ನು ಹೆಚ್ಚಿಸಲು ಇದೀಗ "ಕನ್ನಡ ಡಿಂಡಿಮ" ಎನ್ನುವ ತಾಣವನ್ನು ಶುರುಮಾಡಿದ್ದೇನೆ. ಇನ್ಮುಂದೆ ನನ್ನೆಲ್ಲಾ ಬರಹಗಳಿಗಾಗಿ ದಯಮಾಡಿ ಹೊಸತಾಣಕ್ಕೆ ಭೇಟಿ ಕೊಡಿ. ಕನ್ನಡ ಕನ್ನಡಿಗ ಕರ್ನಾಟಕ ಪರವಾದ ವಿಚಾರಗಳನ್ನು ಅಲ್ಲಿ ಮತ್ತಷ್ಟು ಆಳವಾಗಿ, ಪರಿಣಾಮಕಾರಿಯಾಗಿ ಚರ್ಚಿಸೋಣ.

ತಾಣದ ವಿಳಾಸ ಇಲ್ಲಿದೆ: http://bit.ly/TlTpRG

ಕಲಿಕೆಯ ಮಾಧ್ಯಮದ ತೀರ್ಪು: ಒಂದು ಸೀಳುನೋಟ


ಭಾರತದ ಸರ್ವೋಚ್ಚ ನ್ಯಾಯಾಲಯವು ಕರ್ನಾಟಕದಲ್ಲಿನ ಕಲಿಕೆಯ ಮಾಧ್ಯಮದ ಬಗ್ಗೆ ಇಂದು ಒಂದು ತೀರ್ಪನ್ನು ನೀಡಿದೆ. ಕಲಿಕೆಯ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕು ಮಗುವಿನ ತಾಯಿ-ತಂದೆಯರದ್ದೇ ಹೊರತು ರಾಜ್ಯಸರ್ಕಾರದ್ದಲ್ಲಾ ಎಂದಿದೆ ಕೋರ್ಟು. ಇದು ಜನರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ತೀರ್ಪು ಎನ್ನುವ ದೃಷ್ಟಿಯಿಂದ ನೋಡಿದರೆ ಸರಿಯೆನ್ನಿಸುತ್ತದೆ. ಆದರೆ "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಮ್ಮ ನಾಡಿನ ಕಲಿಕೆಯ ಏರ್ಪಾಟನ್ನು ತೀರ್ಮಾನಿಸುವ ಹಕ್ಕು ನಮ್ಮ ರಾಜ್ಯಸರ್ಕಾರಕ್ಕೆ ಇಲ್ಲಾ" ಎನ್ನುವುದನ್ನು ಕಂಡಾಗ ಈ ತೀರ್ಪು ಸರಿಯೇ ಎಂಬ ಅನುಮಾನ ಮೂಡುತ್ತದೆ. ಇಷ್ಟಕ್ಕೂ ಈ "ಕಲಿಕೆಯ ಮಾಧ್ಯಮದ ಪ್ರಶ್ನೆ" ಕೋರ್ಟಿನ ಮುಂದೆ ಹೋದದ್ದೇ ಬೇರೆಯ ಕಾರಣದಿಂದಾಗಿ ಎನ್ನುವುದರ ಜೊತೆಗೇ ಸದರಿ ತೀರ್ಪಿನ ಬೆಂಬಲಕ್ಕೆ ಯಾವುದೇ ವೈಜ್ಞಾನಿಕ ಅಧ್ಯಯನದ ತಳಹದಿ ಇಲ್ಲದಿರುವನ್ನು ಕಂಡಾಗ ಈ ತೀರ್ಪು ಸರಿಯಿಲ್ಲಾ ಎನ್ನಿಸಿದರೆ ಅಚ್ಚರಿಯಿಲ್ಲ. ಒಟ್ಟಾರೆ ಇದಕ್ಕೆ ಕೆಲವಾರು ಆಯಾಮಗಳಿದ್ದು ಯೋಚಿಸಬೇಕಾದ ವಿಷಯವಾಗಿದೆ.

ಕಲಿಕೆ ಏರ್ಪಾಟಿನ ಹೊಣೆ ಸರ್ಕಾರದ್ದಲ್ಲವೇ?

"ತನ್ನ ನಾಡಿನ ಮಕ್ಕಳು ಏನನ್ನು ಕಲಿಯಬೇಕೆಂಬುದನ್ನು ತೀರ್ಮಾನಿಸುವ ಹೊಣೆ ಒಂದು ನಾಡಿನ ಸರ್ಕಾರಕ್ಕಿರುವುದಿಲ್ಲವೇ? ತನ್ನ ನಾಡಿನ ಶಾಲೆಗಳಲ್ಲಿ ಏನನ್ನು ಕಲಿಸಬೇಕೆನ್ನುವುದನ್ನು ತೀರ್ಮಾನಿಸುವ ಹೊಣೆ ಅಲ್ಲಿನ ಸರ್ಕಾರದ್ದಲ್ಲವೇ? ತನ್ನ ನಾಡಲ್ಲಿ ಯಾವ ಕಲಿಕೆಯ ಮಾಧ್ಯಮವಿರಬೇಕು ಎನ್ನುವುದನ್ನು ತೀರ್ಮಾನಿಸುವ ಹಕ್ಕನ್ನು ಸರ್ಕಾರ ಹೊಂದಿಲ್ಲವೇ?" ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು ಜಗತ್ತಿನ ಬೇರೆ ಬೇರೆ ಕಡೆ ಯಾವ ಏರ್ಪಾಟಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ಜರ್ಮನಿಯಲ್ಲಿ ಯಾವ ಮಾಧ್ಯಮದ ಕಲಿಕೆಯಿರಬೇಕೆನ್ನುವುದನ್ನು ತೀರ್ಮಾನಿಸುವ ಹಕ್ಕು ಅಲ್ಲಿನ ಸರ್ಕಾರಕ್ಕಿದೆ. ಹಾಗೇ ಜಪಾನಿನ ಕಲಿಕೆಯ ಮಾಧ್ಯಮ ಯಾವುದಿರಬೇಕೆಂದು ತೀರ್ಮಾನಿಸುವ ಹಕ್ಕು ಜಪಾನಿನ ಸರ್ಕಾರಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಮಕ್ಕಳ ಕಲಿಕೆಯ ಏರ್ಪಾಡು ಕಟ್ಟುವ, ನಿರ್ವಹಿಸುವ ಹಕ್ಕನ್ನು ತಮ್ಮ ಸರ್ಕಾರಕ್ಕೆ ಬಿಟ್ಟುಕೊಟ್ಟಿರುವುದರಿಂದ ಯಾವುದೇ ಸರ್ಕಾರಕ್ಕೆ ತನ್ನ ನಾಡಿನ ಕಲಿಕೆಯ ಏರ್ಪಾಡನ್ನು ನಿರ್ಣಯಿಸುವ ಹಕ್ಕಿರುವುದು ಸಹಜನ್ಯಾಯವಾಗಿದೆ. ಯಾಕೆಂದರೆ ಶಿಕ್ಷಣ ವ್ಯವಸ್ಥೆ ಎನ್ನುವುದು ಒಂದು ಸರ್ಕಾರ, ತನ್ನ ನಾಡಿನ ನಾಳೆಗಳನ್ನು ಕಟ್ಟಿಕೊಳ್ಳುವ ಸಾಧನವಾಗಿದೆ ಮತ್ತು ಯಾವುದೇ ಸಂದರ್ಭದಲ್ಲಿ ಇಂತಹ ಹಕ್ಕನ್ನೇ ಇಲ್ಲವಾಗಿಸುವುದು ನ್ಯಾಯಯುತವಾದ ತೀರ್ಪು ಎನ್ನಿಸುತ್ತದೆಯೇ ಎನ್ನುವುದನ್ನು ಕೇಳಿಕೊಳ್ಳಬೇಕಾಗಿದೆ!

ನ್ಯಾಯಾಲಯದ ನಿಲುವಿನ ಕಾರಣ!

ನ್ಯಾಯಾಲಯವು "ಕರ್ನಾಟಕದ ಸರ್ಕಾರೇತರ ಶಾಲೆಗಳಲ್ಲಿ ಕಲಿಕೆಯ ಮಾಧ್ಯಮವಾಗಿ ಕನ್ನಡವನ್ನು ಕಡ್ಡಾಯ ಮಾಡುವಂತಿಲ್ಲಾ" ಎನ್ನುವ ತೀರ್ಪು ನೀಡುತ್ತಾ ‘ಸರ್ಕಾರದಿಂದ ಸಹಾಯ ಪಡೆಯದ ಶಾಲೆಗಳಿಗೆ ಸರ್ಕಾರಿ ನೀತಿ ಅನ್ವಯವಾಗದು ಎಂದಿದೆ. ಆ ಮೂಲಕ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮೇಲೆ ಸರ್ಕಾರಕ್ಕೆ ಇರುವ ಹಿಡಿತವನ್ನು ಎತ್ತಿಹಿಡಿದಿದೆ ಎನ್ನಿಸಿ, ಆ ಮೂಲಕ ಒಂದು ಸರ್ಕಾರಕ್ಕೆ ಇದೆಯೆಂದು ಮೇಲೆ ವಿವರಿಸಿಲಾದ ‘ಸಹಜವಾದ ಅಧಿಕಾರ’ಕ್ಕೆ ಧಕ್ಕೆ ತಂದಿಲ್ಲಾ ಎನ್ನುವ ಮಾತನ್ನಾಡಬಹುದು. ಆದರೆ ಖಾಸಗಿ ಶಾಲೆಗಳು ಎನ್ನುವುದನ್ನು ಒಂದು ಉದ್ಯಮವೆಂದು ಪರಿಗಣಿಸಿ, ಶಾಲೆಗಳನ್ನು ನಡೆಸುವುದನ್ನು ‘ಉದ್ಯಮ ನಡೆಸುವ ಹಕ್ಕು’ ಎಂದು ನ್ಯಾಯಾಲಯ ಪರಿಗಣಿಸುತ್ತಿರುವುದೇ ಒಂದು ರೀತಿ ಗೊಂದಲಕಾರಿಯಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಮತ್ತು ನಿರ್ವಹಿಸುವ ಹೊಣೆಗಾರಿಕೆ ನಾಡಿನ ಸರ್ಕಾರದ್ದು ಎನ್ನುವುದು ಬೇರುಮಟ್ಟದ ದಿಟ. ಸರ್ಕಾರದ ಈ ಹೊಣೆಗಾರಿಕೆಯನ್ನು ಸಾಮಾಜಿಕ ಕಳಕಳಿಯ ಸಂಘಸಂಸ್ಥೆಗಳು ಹಗುರ ಮಾಡಲು, ಸರ್ಕಾರ ತಲುಪಲಾಗದ ಕಡೆ ಶಾಲೆಗಳನ್ನು ತೆರೆದು - ಅಂತಹ ಶಾಲೆಗಳ ನಿರ್ವಹಣೆಗೆ ಬೇಕಾದಷ್ಟು ಮಾತ್ರಾ ಹಣವನ್ನು ಸರ್ಕಾರದಿಂದ ಪಡೆಯಲು ಅರ್ಹರು - ನಡೆಸುವುದಕ್ಕೆ ಮಾತ್ರಾ ಸೀಮಿತ. ಸರಿಯಾದ ನಾಡುಗಳಲ್ಲಿ ಈ ಕಾರಣದಿಂದಲೇ ಶಿಕ್ಷಣ ಸಂಸ್ಥೆಗಳು ಬರಿಯ ಸರ್ಕಾರದ್ದಾಗಿದ್ದು ಉಚಿತವಾಗಿರುತ್ತದೆ. ಇಂತಹ ವ್ಯವಸ್ಥೆಯಾಗಬೇಕಾಗಿದ್ದ ನಮ್ಮ ನಾಡಿನ ಶಿಕ್ಷಣ ಕ್ಷೇತ್ರ, ನಿಧಾನವಾಗಿ ಖಾಸಗಿ ಉದ್ಯಮವಾಗಿದ್ದೂ.. ಇದನ್ನು ನ್ಯಾಯಾಲಯವೂ ಉದ್ಯಮವಾಗಿ ಪರಿಗಣಿಸಿದ್ದು ವಿಚಿತ್ರವಾದ ಸತ್ಯವಾಗಿದೆ! ನ್ಯಾಯಾಲಯಗಳು ಶಾಲೆ ನಡೆಸುವುದನ್ನು ಉದ್ಯಮವೆಂದದ್ದೂ, ಹಾಗಾಗಿ ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವುದೂ ನಮ್ಮ ಸರ್ಕಾರದ ಅಸಮರ್ಪಕ ಕಾನೂನು ಹೋರಾಟಕ್ಕೆ ಕನ್ನಡಿಯಾಗಿದೆ.

ಮುಂದೆ?!

ವಾಸ್ತವವಾಗಿ ರಾಜ್ಯದಲ್ಲಿರುವ ೭೫% ಕನ್ನಡ ಶಾಲೆಗಳ ಮೇಲಾಗಲೀ, ೮~೧೦% ಪರಭಾಷಾ ಮಾಧ್ಯಮದ ಶಾಲೆಗಳ ಮೇಲಾಗಲೀ ನೇರವಾಗಿ ಈ ತೀರ್ಪು ಪರಿಣಾಮ ಬೀರದು. ಅಲ್ಲೆಲ್ಲಾ ಸರ್ಕಾರದ ಭಾಷಾನೀತಿಯೇ ಮುಂದುವರೆಯಲಿದೆ. ಆದರೆ ಖಾಸಗಿ ಶಾಲೆಗಳು ಸರ್ಕಾರದ ಎಲ್ಲಾ ನಿಯಂತ್ರಣಗಳಿಂದ ಮುಕ್ತವಾಗಲಿವೆ ಮತ್ತು ಸರ್ಕಾರಕ್ಕೆ ತನ್ನ ನಾಡಿನ ಕಲಿಕೆಯ ಏರ್ಪಾಟನ್ನು ಕಟ್ಟಿ, ನಿರ್ವಹಿಸುವುದರ ಮೇಲಿನ ಹಿಡಿತ ಸಡಿಲವಾಗಲಿದೆ. ಶಾಲೆಗಳನ್ನು ತೆರೆಯುತ್ತೇವೆ ಎನ್ನುವವರಿಗೆ ಅನುಮತಿ ನೀಡುವುದನ್ನು ಬಿಟ್ಟು ಯಾವ ಹಿಡಿತವೂ ಸರ್ಕಾರಕ್ಕೆ ಇರುವುದಿಲ್ಲವಾದ್ದರಿಂದ ಲೆಕ್ಕವಿಲ್ಲದಂತೆ ಶಾಲೆಗಳ ಹೆಸರಲ್ಲಿ ಖಾಸಗಿ ಸುಲಿಗೆ ಕೇಂದ್ರಗಳು ಶುರುವಾಗಬಹುದು. ಇಂತಹ ಸಂದರ್ಭದಲ್ಲಿ ನಮ್ಮ ನಾಡಿನ ಜನರಲ್ಲೂ ಇಂಗ್ಲೀಶ್ ಮಾಧ್ಯಮದ ಬಗ್ಗೆ ಒಲವು ಉಕ್ಕುತ್ತಿರುವಾಗ ನ್ಯಾಯಾಲಯವು ಕನ್ನಡ ಮಾಧ್ಯಮದ ಪರವಾಗಿ ತೀರ್ಪು ನೀಡಿದ್ದರೂ ಜನರಿಂದ ವಿರೋಧ ಎದುರಿಸಬೇಕಾಗುತ್ತಿತ್ತು ಎನ್ನುವುದನ್ನು ಅಲ್ಲಗಳೆಯಲಾಗದು. ಹಾಗಾದಲ್ಲಿ ಮುಂದಿನ ದಾರಿಯೇನು?

ಈಗಿರುವ ಕನ್ನಡ ಮಾಧ್ಯಮದ ಶಾಲೆಗಳನ್ನು ಸೌಕರ್ಯ, ಅನುಕೂಲತೆ, ಕಲಿಕೆಯ ಗುಣಮಟ್ಟದ ದೃಷ್ಟಿಯಲ್ಲಿ ಅತ್ಯುತ್ತಮಗೊಳಿಸಬೇಕು. ಕನ್ನಡದಲ್ಲಿ ಎಲ್ಲಾ ಹಂತದ ಕಲಿಕೆಯನ್ನೂ, ಕಲಿಕೆಯ ಎಲ್ಲಾ ವಿಭಾಗಗಳನ್ನೂ ತರಬೇಕು. ಇಂತಹ ಏರ್ಪಾಟಿನಲ್ಲಿ ಕಲಿಯುವುದರಿಂದ ನಮ್ಮ ಮಕ್ಕಳ ನಾಳೆಗಳು ಅತ್ಯುತ್ತಮವಾಗುತ್ತದೆ ಎನ್ನುವಂತಹ ಗುಣಮಟ್ಟದ ಕಲಿಕೆಯನ್ನು ಕನ್ನಡದಲ್ಲಿ ತರುವ ಮೂಲಕ ಜಗತ್ತೆಲ್ಲಾ ಅರಿತಿರುವ "ತಾಯ್ನುಡಿ ಕಲಿಕೆಯೇ ಅತ್ಯುತ್ತಮ" ಎನ್ನುವ ಏರ್ಪಾಟನ್ನು ಕಟ್ಟಿಕೊಳ್ಳಬೇಕು. ಇದೊಂದೇ ಇರುವ ದಾರಿ. ತಾಯ್ನುಡಿಯಲ್ಲಿ ಉನ್ನತ ಕಲಿಕೆಯನ್ನೂ ಮಾಡಲು ಸಾಧ್ಯವಾಗಿಸುವುದರ ಮೂಲಕ ಅತ್ಯುತ್ತಮ ಕಲಿಕೆಯನ್ನೂ, ಹೊರನಾಡುಗಳ ಭಾಷೆಗಳಾದ ಇಂಗ್ಲೀಶ್, ಜಪಾನೀಸ್, ಜರ್ಮನ್, ಫ್ರೆಂಚ್ ಮೊದಲಾದವನ್ನು ಕಲಿಸುವ ಏರ್ಪಾಟಿನ ಮೂಲಕ ಹೊರಜಗತ್ತಿನಲ್ಲಿ ಗೆಲ್ಲಬಲ್ಲ ಸತ್ವವನ್ನೂ ತಂದುಕೊಡುವ ಕಲಿಕೆಯ ಏರ್ಪಾಟನ್ನು ಕಟ್ಟಿಕೊಳ್ಳಬೇಕಾದ ಬದ್ಧತೆಯನ್ನು ರಾಜ್ಯಸರ್ಕಾರ ತೋರಬೇಕಾಗಿದೆ. ಸರ್ಕಾರಕ್ಕಿಂತಲೂ ಹೆಚ್ಚಿನ ಬದ್ಧತೆಯನ್ನು ಕನ್ನಡ ಸಮಾಜ ತೋರಬೇಕಾಗಿದೆ.

ಸಹಜ ನ್ಯಾಯವೆನ್ನುವುದೇ ಇಲ್ಲಿ ಸಂವಿಧಾನ ಬಾಹಿರ!

(ಚಿತ್ರಕೃಪೆ: ಉದಯವಾಣಿ ದಿನಪತ್ರಿಕೆ)
ರಾಜ್ಯಸರ್ಕಾರ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕವನ್ನು ಹಾಕುವುದನ್ನು ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶವನ್ನು "ಸರಿಯಿಲ್ಲಾ" ಎಂದು ರಾಜ್ಯ ಉಚ್ಚನ್ಯಾಯಾಲಯ ಹೇಳಿದೆ ಎನ್ನುವ ಸುದ್ದಿ ಇಂದಿನ (೩೧.೦೩.೨೦೧೪ರ) ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸಂವಿಧಾನಬಾಹಿರ ಎಂದರೂ ಇದು ನ್ಯಾಯಬದ್ಧ!

ಕನ್ನಡನಾಡಲ್ಲಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವುದು ಸಹಜ ನ್ಯಾಯ. ಯಾಕೆಂದರೆ ಸರ್ಕಾರ ತನ್ನ ನಾಡಿನ ವ್ಯವಸ್ಥೆಗಳನ್ನು ತನ್ನ ಜನರಿಗೆ ಆದಷ್ಟೂ ಹತ್ತಿರಗೊಳಿಸುವಲ್ಲಿ ಜನರ ನುಡಿ ಪ್ರಮುಖವಾದದ್ದು. ಪ್ರಜಾಪ್ರಭುತ್ವದ ಯಶಸ್ಸಿಗೆ ಇದೊಂದು ಅತ್ಯುತ್ತಮ ಸಾಧನ ಎನ್ನುವುದನ್ನು ಪ್ರಪಂಚವೇ ಎತ್ತಿಹೇಳುತ್ತದೆ. ವಿಶ್ವಸಂಸ್ಥೆಯೂ ನುಡಿಜನಾಂಗಕ್ಕಿರುವ ಹಕ್ಕುಗಳನ್ನು ಗುರುತಿಸಿ ಘೋಷಿಸಿದೆ. ಆದರೆ ಭಾರತದ ಸಂವಿಧಾನದಲ್ಲಿರುವ ಭಾಷಾನೀತಿಯ ಹುಳುಕಿನ ಸಾಲುಗಳು ಈ ನಾಡ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನ ಮಾಡಿದೆ. ರಾಜ್ಯಸರ್ಕಾರಗಳು ಕೇಂದ್ರದ ಗುಲಾಮರು ಎನ್ನುವಂತೆ ರೂಪಿಸಿರುವ ಈ ದೇಶದ ನೀತಿ ನಿಯಮಗಳಲ್ಲಿ...
- ಕರ್ನಾಟಕದ ವಾಹನಗಳ ಮೇಲೆ ಕನ್ನಡದಲ್ಲಿ ನೋಂದಣಿ ಸಂಖ್ಯೆ ಬರೆಯುವುದು ಕಾನೂನು ಬಾಹಿರ
- ಕರ್ನಾಟಕದಲ್ಲಿರುವ ಪಾಸ್‌ಪೋರ್ಟ್ ಕಚೇರಿ, ವಿಮಾನ ನಿಲ್ದಾಣ ಮೊದಲಾದೆಡೆ ಕನ್ನಡ ಬಳಸದಿರುವುದು ಅಪರಾಧವಲ್ಲಾ.
- ಈ ನಾಡಿನ ಅಂಚೆಕಚೇರಿ, ಬ್ಯಾಂಕು, ರೈಲುಗಳಲ್ಲಿ ಕನ್ನಡವೇ ಇರದೆ ಬರೀ ಹಿಂದೀ ಇಂಗ್ಲೀಷ್ ಇರುವುದು ಸಂವಿಧಾನ ಬದ್ಧ!
- ಈ ನಾಡಿನಲ್ಲಿ ಮಾರಾಟವಾಗುವ ಔಷಧಗಳ ಮೇಲೆ ಕನ್ನಡದಲ್ಲಿ ಯಾವ ಮಾಹಿತಿಯನ್ನು ಕೊಡದಿದ್ದರೂ ಪರ್ವಾಗಿಲ್ಲಾ, ಇಂಗ್ಲೀಷು ಹಿಂದೀಲಿ ಇರಬೇಕು.

ಭಾರತದ ಸಂವಿಧಾನವೇ ಇಂಥಾ ಹುಳುಕನ್ನು ಪೊರೆಯುತ್ತಿರುವಾಗ ನಮ್ಮ ಹಣೆಬರಹ ಹೀಗಿರದೆ ಇನ್ನು ಹೇಗಿರಲು ತಾನೇ ಸಾಧ್ಯ? ಇದಕ್ಕೆಲ್ಲಾ ಮದ್ದು ರಾಜ್ಯಸರ್ಕಾರದ ನಾಡಪರಬದ್ಧತೆಯಲ್ಲಿದೆ, ಭಾರತದ ಹುಳುಕಿನ ಭಾಷಾನೀತಿ ಬದಲಾಗುವುದರಲ್ಲಿದೆ, ಕರ್ನಾಟಕದ ರಾಜಕಾರಣ ಕರ್ನಾಟಕ ಕೇಂದ್ರಿತವಾಗುವುದರಲ್ಲಿದೆ... ಬನವಾಸಿ ಬಳಗವು ನಮ್ಮ ಹಕ್ಕೊತ್ತಾಯವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಲುಪಿಸಲು ಮಿಂಬಲೆಯಲ್ಲಿ ಒಂದು ಸಹಿ ಅಭಿಯಾನ ಆರಂಭಿಸಿದೆ. ನೀವು ಅದಕ್ಕೆ ಸಹಿ ಹಾಕಿರಿ. ನಿಮ್ಮವರೊಂದಿಗೂ ಹಂಚಿಕೊಳ್ಳಿ. ಈ ಹಕ್ಕೊತ್ತಾಯವನ್ನು ಮುಖ್ಯಮಂತ್ರಿಗಳಿಗೆ ನಾವು ತಲುಪಿಸುತ್ತೇವೆ.

ಪಿಟಿಷನ್ನಿನ ಕೊಂಡಿ: http://chn.ge/1dJ4zsv

ಲೋಕಸಭಾ ಚುನಾವಣೆಗಳು ಕರ್ನಾಟಕ ಕೇಂದ್ರಿತವಾಗಲಿ!

(ಫೋಟೋ ಕೃಪೆ: ಪ್ರಜಾವಾಣಿ)
ಬರುವ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯಲಿದ್ದು ಭಾರತದ ಸಂಸತ್ತಿನಲ್ಲಿ ನಮ್ಮ ಪ್ರತಿನಿಧಿಗಳಾಗಿ ದನಿಯೆತ್ತುವವರನ್ನು ಆರಿಸುವ ಸಂದರ್ಭ ನಮ್ಮೆದುರು ಮೂಡಿಬಂದಿದೆ. ಹೌದೇ? ನಿಜಕ್ಕೂ ಲೋಕಸಭಾ ಚುನಾವಣೆಗಳು ಈ ಉದ್ದೇಶಕ್ಕಾಗಿಯೇ ನಡೆಯುತ್ತಿದೆಯೇ? ಈ ಹಿಂದೆ ಇಷ್ಟೂ ವರ್ಷಗಳ ಕಾಲ ನಡೆದ ಅಷ್ಟೂ ಚುನಾವಣೆಗಳಲ್ಲಿ ನಮ್ಮಿಂದ ಆರಿಸಿಹೋದ ಸಂಸದರು ನಮ್ಮ ದನಿಯಾಗಿ ದೆಹಲಿಗೆ ತೆರಳಿದ್ದರೇ? ನಾಡಿನ ಪರವಾಗಿ ಬೇಡ, ಸಂಸದರಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಎಂದು ನೋಡಿದರೆ ಪಕ್ಷಾತೀತರಾಗಿ ಎಲ್ಲರೂ ಕಳಪೆಯೇ ಎಂಬ ಭಾವ ಮೂಡುತ್ತದೆ.

ವಾಸ್ತವವಾಗಿ ಭಾರತದ ಬಹುತೇಕ ಕಡೆಗಳಲ್ಲಿರುವಂತೆ ಪ್ರಾದೇಶಿಕ ಪಕ್ಷಗಳು ಕರ್ನಾಟಕದಲ್ಲಿನ್ನೂ ಅಸ್ತಿತ್ವಕ್ಕೆ ಬಾರದಿರುವ ಈವತ್ತಿನ ಸನ್ನಿವೇಶದಲ್ಲಿ ಕರ್ನಾಟಕದ ಮತದಾರರ ಮುಂದೆ ಆಯ್ಕೆಗಳು ವಿರಳವಾಗಿದ್ದು, ಕನ್ನಡ ಕನ್ನಡಿಗ ಕರ್ನಾಟಕದ ಪರವಾಗಿ ದನಿ ಎನ್ನುವುದೇ ಚುನಾವಣೆಯ ವಿಷಯವೇ ಆಗದೆ ಇರುವುದು ನಾಡಿನ ದುರಂತವಲ್ಲದೆ ಮತ್ತೇನು? ಇಡೀ ಚುನಾವಣೆಯಲ್ಲಿ ನಮ್ಮ ನಾಡಿನ ಕುರಿತಾಗಿ ಸ್ಪಷ್ಟವಾದ ಯಾವ ಭರವಸೆಯನ್ನು ನಮ್ಮ ಅಭ್ಯರ್ಥಿಗಳು/ ಪಕ್ಷಗಳು ನೀಡುತ್ತಿವೆ, ಯಾವ ಪಕ್ಷ/ ಅಭ್ಯರ್ಥಿ ಯಾವ ಯೋಜನೆಗಳನ್ನು ನಮ್ಮ ನಾಡಿಗಾಗಿ ಯೋಜಿಸುತ್ತಿವೆ ಎಂಬುದಾಗಿ ಮತದಾರರು ಯೋಚನೆಯನ್ನೂ ಮಾಡಲು ಬಿಡದ ಹಾಗೆ ಇಡೀ ಲೋಕಸಭಾ ಚುನಾವಣೆಯ ವಿಷಯವನ್ನು ಸಾಮಾನ್ಯರಿಂದ ದೂರಕ್ಕೊಯ್ದು ನಿಲ್ಲಿಸಿರುವುದು ಕಣ್ಣಿಗೆ ರಾಚುತ್ತದೆ,

ಕೇಂದ್ರದಲ್ಲಿ ರಾಜ್ಯದ ಕಡೆಗಣನೆ

ಸ್ವತಂತ್ರ ಬಂದಾಗಿನಿಂದ ಇಂದಿನವರೆವಿಗೂ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಸರಮಾಲೆಯನ್ನು ಕಂಡಾಗ ಇದಕ್ಕೆ ಮೂಲ ಕಾರಣ ನಮ್ಮ ಸಂಸದರು ಎಂಬುದು ಕಾಣುತ್ತದೆ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಚಿಕ್ಕದಾಗಿರುವ ನೆರೆಯ ತಮಿಳುನಾಡಿನಲ್ಲಿರುವ ರೈಲು ಮಾರ್ಗದ ಉದ್ದ ೫೯೫೨ ಕಿಮೀ ಇದ್ದರೆ ಕರ್ನಾಟಕದ್ದು ೩೦೮೯ ಕಿಮೀ. ಒಟ್ಟು ರಾಷ್ಟ್ರೀಯ ಹೆದ್ದಾರಿಯ ಉದ್ದ ಅಲ್ಲಿ ೫೦೩೬ ಕಿಮೀ ೩೯೭೩ ಇದೆ. ತಮಿಳುನಾಡಿನ ೩೦% ರೈಲು ಮಾರ್ಗ ವಿದ್ಯುತ್ ಮಾರ್ಗವಾಗಿದ್ದರೆ ಇಲ್ಲಿಯದು ಬರೀ ೫%. ಇದು ಇಡೀ ದೇಶದಲ್ಲೇ ಅತಿ ಕಡಿಮೆ. ಕೇಂದ್ರವಿದ್ಯುತ್ ಜಾಲದಿಂದ ತಮಿಳುನಾಡಿಗೆ ೬೧% ವಿದ್ಯುತ್ ಸಿಗುತ್ತಿದ್ದರೆ ನಮ್ಮ ರಾಜ್ಯಕ್ಕೆ ಸಿಗುತ್ತಿರುವುದು ೨೧% ಮಾತ್ರಾ, ಪ್ರತಿಷ್ಟಿತ ನರ್ಮ್ ಯೋಜನೆಯಲ್ಲಿ ಬಿಡುಗಡೆಯಾದ ಹಣ ತಮಿಳುನಾಡಿಗೆ ೨೨೫೦ ಕೋಟಿಯಾದರೆ ಕರ್ನಾಟಕಕ್ಕೆ ೧೫೨೪ ಕೋಟಿ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ತಮಿಳುನಾಡಿನಿಂದ ಆಯ್ದದ್ದು ೭೨% ಆದರೆ ಕರ್ನಾಟಕದ್ದು ೩೬%. ಚೆನ್ನೈ ಮೆಟ್ರೋದಲ್ಲಿ ಬರೀ ತಮಿಳು ಇಂಗ್ಲೀಷಿಗೆ ಸ್ಥಾನವಾದರೆ ಬೆಂಗಳೂರಿನಲ್ಲಿ ಕನ್ನಡ ಹಿಂದೀ ಇಂಗ್ಲೀಷಿಗೆ ಸ್ಥಾನ! ಈ ಬರಹದಲ್ಲಿ ಓದುಗರಿಗೆ ಸುಲಭವಾಗಿ ಅರ್ಥವಾಗಲೆಂದು ಬರಿಯ ನೆರೆಯ ತಮಿಳುನಾಡಿನೊಂದಿಗೆ ಹೋಲಿಕೆ ನೀಡಲಾಗಿದೆ. ವಾಸ್ತವವಾಗಿ ದೇಶದ ಸರಾಸರಿಗೆ ಹೋಲಿಸಿದರೂ, ಇನ್ನಾವುದೇ ರಾಜ್ಯಕ್ಕೆ ಹೋಲಿಸಿದರೂ ನಮ್ಮ ನಾಡಿನ ಪರಿಸ್ಥಿತಿ ಇಷ್ಟೇ! ಒಟ್ಟಾರೆ ಸದಾಕಾಲ ಕರ್ನಾಟಕದ ಕಡೆಗಣನೆಯೇ ಆಗುತ್ತಿರುವುದನ್ನು ಸರ್ಕಾರಿ ಅಂಕಿಅಂಶಗಳೇ ತೋರಿಸುತ್ತಿರುವಾಗ ಇದಕ್ಕೆಲ್ಲಾ ಕಾರಣ ಏನು ಎಂದು ಹುಡುಕಬೇಕಾಗಿದೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವಿದೆ ಇಲ್ಲಿ ರಾಷ್ಟ್ರೀಯ ಪಕ್ಷಗಳು ಆಳುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡರೂ ಆಳದಲ್ಲಿ ಕಾಣುವುದು ನಮ್ಮ ಸಂಸದರು ಪ್ರತಿನಿಧಿಸುತ್ತಿರುವುದು ಕರ್ನಾಟಕವನ್ನಾಗಲೀ, ಕನ್ನಡಿಗರನ್ನಾಗಲೀ ಅಲ್ಲಾ.. ಬದಲಿಗೆ ತಮ್ಮ ಪಕ್ಷದ ಹೈಕಮಾಂಡ್/ ಸರ್ಕಾರವನ್ನು ಮಾತ್ರಾ ಎನ್ನುವುದು ಎದ್ದು ಕಾಣುತ್ತದೆ.

ನಮ್ಮ ಸಂಸದರು ಮತ್ತು ಸಂಸತ್ತು

ಸಂಸದರಾಗಿದ್ದವರು ಲೋಕಸಭೆಯ ಕಲಾಪಗಳಲ್ಲಿ ಭಾಗವಹಿಸದಿರುವುದು, ಸಂಸದರ ನಿಧಿಯನ್ನು ಸರಿಯಾಗಿ ಬಳಸಿಕೊಳ್ಳದಿರುವುದು, ಪ್ರಶ್ನೆಗಳನ್ನು ಕೇಳದಿರುವುದು ಇವೆಲ್ಲಾ ಒಂದೆಡೆಯಾದರೆ ನಮ್ಮ ನಾಡಿಗೆ ಸಂಬಂಧವೇ ಇರದ ಬುಂದೇಲಖಂಡದ ಯಾವುದೋ ನೀರಾವರಿ ಯೋಜನೆಯ ಸ್ಥಿತಿಗತಿ ತಿಳಿಯಲು ಮೇಲೆ ಬಿದ್ದು ಮೂರ್ಮೂರು ಮಂದಿ ಸಂಸದರು ಪ್ರಶ್ನೆಯನ್ನು ಕೇಳಿರುವುದೂ ಇದೆ. ಮತ್ತೊಂದೆಡೆ ನಾಡಿನ ಸಮಸ್ಯೆಗಳ ವಿಷಯಕ್ಕೆ ಬಂದಾಗ ನಮ್ಮ ಸಂಸದರೆಲ್ಲಾ ಒಂದಾಗಿ ನಿಲ್ಲುವುದೇ ಅಪರೂಪ ಎನ್ನುವ ಪರಿಸ್ಥಿತಿಯಿದೆ. ಹಾಗೆ ನಿಂತರೂ ಕೂಡಾ ಗಾಂಧಿ ಪ್ರತಿಮೆಯೆದುರು ಪ್ರತಿಭಟನೆ ಮಾಡಿಯೋ, ಸಂಸತ್ತಿನ ಹೊರಗೋ, ಜಂತರ್ ಮಂತರ್ ಬಳಿ ಸೇರಿ ಕೂಗುವುದೋ ಮೊದಲಾದ ತೋರಿಕೆಯ ಪ್ರತಿಭಟನೆಗಳಿಗಷ್ಟೇ ಇವರ ದನಿ ಸೀಮಿತವಾಗಿರುವುದನ್ನು ಕಾಣಬಹುದಾಗಿದೆ.

ಸಂಸದರಿಂದ ನಿರೀಕ್ಷೆಗಳು

ಭಾರತವೆನ್ನುವ ರಾಜ್ಯಗಳ ಒಕ್ಕೂಟದಲ್ಲಿ ಕೇಂದ್ರಸರ್ಕಾರವು ಹೇಗೆ ಕೆಲಸ ಮಾಡಬೇಕಾಗಿದೆ, ಸಂಸತ್ತಿನಲ್ಲಿ ರೂಪುಗೊಳ್ಳುವ ಕಾಯ್ದೆ ಕಾನೂನು ನಿಯಮಾವಳಿಗಳು ಹೇಗಿರಬೇಕಾಗಿದೆ ಎಂಬ ಚಿಂತನೆಯೇ ನಮ್ಮ ಸಂಸದರಲ್ಲಿ ಇಲ್ಲವಾಗಿದೆ. ರಾಷ್ಟ್ರೀಯ ಪಕ್ಷಗಳೇ ಈ ಚುನಾವಣೆಯ ಪ್ರಮುಖ ಪಾಲುದಾರರಾಗಿದ್ದು ತಮ್ಮ ಮೂಗಿನ ನೇರದ ವಿಷಯಗಳನ್ನಷ್ಟೇ ಚುನಾವಣೆಗಳ ಕೇಂದ್ರವಾಗಿಸುತ್ತಿರುವುದು ಕಾಣುತ್ತಿದೆ. ಈ ಹಂತದಲ್ಲಿ ನಮ್ಮ ನಾಡಿನ ಸಂಸದರಿಂದ ಜನರಿಗಿರಬೇಕಾದ ನಿರೀಕ್ಷೆಗಳ ಬಗ್ಗೆ ಮತದಾರರು ಯೋಚಿಸಬೇಕಾಗಿದೆ.

ಸಮಾನತೆಯ ಭಾರತ ಒಕ್ಕೂಟ: ಸಂಸತ್ತು ಕಾಯ್ದೆ ಕಾನೂನುಗಳನ್ನು ರೂಪಿಸುವ ಪ್ರಾಥಮಿಕ ಹೊಣೆ ಹೊಂದಿದ್ದು ಭಾರತದ ಸ್ವರೂಪವನ್ನು ಒಕ್ಕೂಟವಾಗಿಸುವತ್ತ ಗಮನಹರಿಸಬೇಕಾಗಿದೆ. ಸಂಸದರು ರಾಜ್ಯಗಳಿಗೆ ಹೆಚ್ಚೆಚ್ಚು ಸ್ವಾಯತ್ತತೆ ಕೊಡಿಸುವ ಬಗ್ಗೆ, ಅಧಿಕಾರ ವಿಕೇಂದ್ರೀಕರಣದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ದುಡಿಯಬೇಕಾಗಿದೆ, ಕೇಂದ್ರಸರ್ಕಾರದ ಕಪಿಮುಷ್ಟಿಯಲ್ಲಿರುವ ಅಧಿಕಾರಗಳಲ್ಲಿ ಬಹುತೇಕವನ್ನು ರಾಜ್ಯಗಳಿಗೆ ಬಿಟ್ಟುಕೊಡುವಂತೆ ಮಾಡಬೇಕಾಗಿದೆ, ರಾಜ್ಯಗಳ ಅನನ್ಯತೆಯನ್ನು ಎತ್ತಿಹಿಡಿಯುವ ವೈವಿಧ್ಯತೆಯನ್ನು ಪೊರೆಯುವ ಆಡಳಿತ ಭಾಷಾನೀತಿ, ಅನಿಯಂತ್ರಿತ ವಲಸೆ ನಿಯಂತ್ರಣ ನೀತಿ, ರಾಜ್ಯ ರಾಜ್ಯಗಳ ಸಂಬಂಧ ಸುಧಾರಣೆಗೆ ಅಂತರರಾಜ್ಯ ಮಾತುಕತೆಗೆ ಒತ್ತುಕೊಡುತ್ತಲೇ ನದಿ ನೀರು ಹಂಚಿಕೆ ಮಾರ್ಗದರ್ಶಿ ಸೂತ್ರ, ಗಡಿ ನಿರ್ಣಯಿಸುವ ಮಾರ್ಗದರ್ಶಿ ಸೂತ್ರ ಮೊದಲಾದ ನೀತಿಗಳನ್ನು ರೂಪಿಸಲು ಶ್ರಮಿಸಬೇಕಾಗಿದೆ.

ಕಾಪಾಡಬೇಕಾದ ನಾಡಿನ ಹಿತ: ಕರ್ನಾಟಕದ ಸಂಸದರು ಕನ್ನಡನಾಡಿಗೆ ರೈಲ್ವೇ, ರಾಷ್ಟ್ರೀಯ ಹೆದ್ದಾರಿ, ನೀರಾವರಿ, ವಿದ್ಯುತ್ ಸೇರಿದಂತೆ ನಾಡಿನ ಏಳಿಗೆಗೆ ಬೇಕಾದ ಯೋಜನೆಗಳನ್ನು ದಕ್ಕಿಸಿಕೊಳ್ಳುವತ್ತ ದುಡಿಯಬೇಕಾಗಿದೆ. ಕಾವೇರಿ, ಕೃಷ್ಣಾ, ಕಳಸಾ ಭಂಡೂರ ಯೋಜನೆಯಂತಹ ನದಿನೀರು ಹಂಚಿಕೆಯ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾಗಿದೆ. ನೆರೆ ಬರ ಮೊದಲಾದ ಸಂಕಷ್ಟಗಳ ಸಮಯದಲ್ಲಿ ಮಾಡಲಾಗುವ ಕೇಂದ್ರದ ನೆರವು ಹಂಚಿಕೆಯಲ್ಲಿ ತಾರತಮ್ಯವಾಗದಂತೆ ರಾಜ್ಯದ ಹಿತ ಕಾಪಾಡಬೇಕಾಗಿದೆ, ನಮ್ಮ ಸಂಸದರ ನಿಧಿಯನ್ನು ಸೂಕ್ತವಾಗಿ ಬಳಸುವ ಮೂಲಕ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಮೂಲಭೂತ ಹೊಣೆಯೂ ಇವರಿಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಒಗ್ಗಟ್ಟು ಮತ್ತು ಏಳಿಗೆಗೆ ಕಂಟಕಪ್ರಾಯವಾಗುವಂಥಾ ಎರಡನೇ ರಾಜ್ಯ ಪುನರ್ವಿಂಗಡನಾ ಆಯೋಗ ರಚನೆಯಂತಹ ಕ್ರಮಗಳನ್ನು ಆರಂಭದಿಂದಲೇ ವಿರೋಧಿಸುವ, ನಾಡಿನ ಒಗ್ಗಟ್ಟು ಏಳಿಗೆಗಳಿಗಾಗಿ ತಮ್ಮದೇ ಪಕ್ಷದ ಸರ್ಕಾರ/ ಹೈಕಮಾಂಡುಗಳನ್ನು ಎದುರುಹಾಕಿಕೊಳ್ಳಬಲ್ಲಂಥಾ ಗಟ್ಟಿತನವನ್ನು ನಮ್ಮೆಲ್ಲಾ ಸಂಸದರಿಂದ ನಿರೀಕ್ಷಿಸಬೇಕಾಗಿದೆ. ಈ ಚುನಾವಣೆಯಲ್ಲಿ ನಮ್ಮ ಮುಂದೆ ಇಂತಹ ನಿಲುವಿನ ಪಕ್ಷಗಳಾಗಲೀ ಅಭ್ಯರ್ಥಿಗಳಾಗಲೀ ಕಾಣದಿದ್ದರೆ ನಾಳೆಗಳಿಗಾಗಿ ಕನ್ನಡಿಗರು ಇಂತಹ ಬದಲಾವಣೆಯನ್ನು ನಾಡಿನ ರಾಜಕಾರಣದಲ್ಲಿ ತರಲೇಬೇಕಾಗಿದೆ.

(ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹ)

ಗ್ರಾಹಕ ಹಕ್ಕಿಗಾಗಿ ನೀವೂ ದನಿಗೂಡಿಸಿ!



ಪ್ರತಿವರ್ಷ ಮಾರ್ಚ್ ತಿಂಗಳ ೧೫ನೇ ದಿನವನ್ನು ವಿಶ್ವ ಗ್ರಾಹಕಹಕ್ಕು ದಿನವಾಗಿ ಆಚರಿಸಲಾಗುತ್ತದೆ. ೧೯೬೨ರ ಇದೇ ದಿನ ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಜಾನ್ ಎಫ಼್ ಕೆನಡಿಯವರು ಮಾಡಿದ ಭಾಷಣದ ನೆನಪಿಗಾಗಿ ಈ ದಿನವನ್ನು ಹೀಗೆ ಆಚರಿಸಲಾಗುತ್ತದೆ. ಭಾರತದಲ್ಲೂ ಕೂಡಾ ಹೀಗೆ ಎಲ್ಲೆಡೆ ಗ್ರಾಹಕರ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ತಮಾಶೆಯೆಂದರೆ ಗ್ರಾಹಕಹಕ್ಕು ರಕ್ಷಣೆಯ ಬಗ್ಗೆ ಮೂಡಿಸುವ ಜಾಗೃತಿಯ ಈ ಕಾರ್ಯದಲ್ಲಿ ಗ್ರಾಹಕರ ನುಡಿಯನ್ನು ಬಳಸಬೇಕೆನ್ನುವ ಆಯಾಮವನ್ನೇ ಕೈಬಿಟ್ಟು ಬರೀ ಉತ್ಪನ್ನಗಳ ತೂಕ, ಗುಣಮಟ್ಟ, ಅಳತೆಗಳ ಬಗ್ಗೆ ಇರುವ ಹಕ್ಕುಗಳನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ನಿಜವಾಗಿ ಗ್ರಾಹಕರ ಹಕ್ಕುಗಳನ್ನು ಸರಿಯಾಗಿ ದಕ್ಕಿಸಿಕೊಳ್ಳಲು ಇರುವ ಸಾಧನಗಳಲ್ಲಿ ಗ್ರಾಹಕನ ನುಡಿಯ ಬಳಕೆ ಮುಖ್ಯವಾದದ್ದು. ಈ ಬಗ್ಗೆ ಕನ್ನಡಿಗರಲ್ಲಿ ಎಚ್ಚರ ಮೂಡಿಸುವ ಕನ್ನಡ ಗ್ರಾಹಕರ ಕೂಟದ ಒಂದು ಪ್ರಯತ್ನ ಇಲ್ಲಿದೆ.


ಸಾಮಾನ್ಯವಾಗಿ ಗ್ರಾಹಕನ ಹಕ್ಕು ಎಂದಾಗ ತೂಕ, ಅಳತೆ, ಗುಣಮಟ್ಟಗಳ ಸುತ್ತ ವಿಷಯಗಳು ಚರ್ಚಿಸಲ್ಪಡುತ್ತವೆ. ಈ ವಿಷಯಗಳು ನಿಜಕ್ಕೂ ಮುಖ್ಯವಾದವಾಗಿದ್ದರೂ ಸಹ, ಈ ವಿಷಯಗಳು ಜನರಿಗೆ ಯಾವ ಭಾಷೆಯಲ್ಲಿ ತಿಳಿಸಲ್ಪಡುತ್ತವೆ ಅನ್ನುವುದು ಹೆಚ್ಚಾಗಿ ಪ್ರಸ್ತಾಪವಾಗುವುದಿಲ್ಲ. ಈ ಮಾಹಿತಿಗಳು ಇಂಗ್ಲೀಶ್ ಅಥವಾ ಹಿಂದೀ ಭಾಷೆಗಳಲ್ಲಿ ಮಾತ್ರವಿದ್ದು, ಜನರ ಭಾಷೆಯಲ್ಲಿ ಇರದೇ ಹೋದರೆ ಈ ಮಾಹಿತಿಯನ್ನು ಕೊಡುವುದರಿಂದ ತಾನೇ ಏನು ಪ್ರಯೋಜನ? ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ಕೊಡಬೇಕಾದುದು ಸ್ವಾಭಾವಿಕವೂ, ಜನಪರವೂ ಹಾಗೂ ನ್ಯಾಯಸಮ್ಮತವೂ ಆಗಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಕನ್ನಡದಲ್ಲೇ ಸೇವೆಯನ್ನು ಪಡೆಯುವುದು ನಮ್ಮೆಲ್ಲರ ಹಕ್ಕಾಗಿದೆ. ಈ ಹಕ್ಕು ಸಹಜವಾಗಿ ನಮಗೆ ದಕ್ಕುತ್ತಿಲ್ಲದಿದ್ದಲ್ಲಿ ಅದಕ್ಕಾಗಿ ದನಿಯೆತ್ತುವ, ಹೋರಾಟಗಳ ಮೂಲಕವಾದರೂ ಸರಿಯೇ, ಅವುಗಳನ್ನು ದಕ್ಕಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.


ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ದಕ್ಕಿಸಿಕೊಳ್ಳಲು ಹಲವಾರು ಪ್ರಯತ್ನಗಳು ಈವರೆಗೂ ನಡೆದಿವೆ ಹಾಗೂ ನಡೆಯುತ್ತಿವೆ. ಗ್ರಾಹಕ ಸೇವೆಯಲ್ಲಿ ಹಾಗೂ ನಾಗರೀಕ ಸೇವೆಯಲ್ಲಿ ಕನ್ನಡದ ಬಳಕೆ ಆಗುವಂತೆ ಮಾಡಲು ನಾವು ನೀವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕನ್ನಡದಲ್ಲಿ ಸೇವೆ ಪಡೆಯಲು ಆಗುತ್ತಿರುವ ಎಲ್ಲಾ ಪ್ರಯತ್ನಗಳಿಗೆ ಇಂಬು ಕೊಡುವ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟದ ವತಿಯಿಂದ ಒಂದು ಫೋರಮ್ ಅನ್ನು ತೆರೆಯಲಾಗಿದೆ. ಈ ಫೋರಮ್ ನಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗದೆ ನಿಮಗಾದ ಕಹಿ ಅನುಭವವನ್ನು ಹಂಚಿಕೊಳ್ಳಬಹುದು. ಹಾಗೆ ಅದನ್ನು ಸರಿ ಮಾಡಲು ಮಾಡಿದ ಪ್ರಯತ್ನಗಳನ್ನು ಕೂಡ ಹಂಚಿಕೊಳ್ಳಬಹುದು. ಇದರೊಟ್ಟಿಗೆ ಮಾರುಕಟ್ಟೆಯ ಮಾಹಿತಿ ಮತ್ತು ಗ್ರಾಹಕ ಸೇವೆ ಕಾನೂನಿನ ಮಾಹಿತಿಯನ್ನು ಹಂಚಿಕೊಳ್ಳಬಹುದು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗುವೆಡೆ ನೀವು ಪ್ರಯತ್ನಿಸಿ ಯಶಸ್ವಿಯಾದ ಸುದ್ದಿಗಳನ್ನೂ ಕೂಡ ಇಲ್ಲಿ ಹಂಚಿಕೊಳ್ಳಬಹುದು.

ಕನ್ನಡ ಗ್ರಾಹಕರ ಒಗ್ಗಟಿನ ಸೂರಾದ ಈ ಫೋರಮ್ ಗೆ ಸೇರಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ. ನಿಮ್ಮ ಗೆಳೆಯರಿಗೂ ಇದರ ಬಗ್ಗೆ ತಿಳಿಸಿ.

ನಮಗೆ ಬೇಕಿರೋದು "ನಮ್ಮ ಮೆಟ್ರೋ"! "ಹಮಾರಾ ಮೆಟ್ರೋ" ಅಲ್ಲಾ!!



ಉಪೇಂದ್ರ ಅವರ ಸಿನಿಮಾ ಶೈಲಿಯಲ್ಲಿ ಹೇಳಬೇಕೆಂದರೆ... ಇಂದು ಬೆಂಗಳೂರಿನಲ್ಲಿ ಎರಡನೇ ಹಂತದ "ಹಮಾರ ಮೆಟ್ರೋ" ಉದ್ಘಾಟನೆಯಾಗಿದೆ. ಐ ಲೈಕ್ ಇಟ್! ಎಲ್ಲಾ ಕನ್ನಡಿಗರಿಗೂ ಅಭಿನಂದನೆ. "ಹಮಾರಾ ಮೆಟ್ರೋ" ಅಧಿಕಾರಿ ವರ್ಗಕ್ಕೂ, ಅರ್ಧಕ್ಕಿಂತಾ ಹೆಚ್ಚು ಬಂಡವಾಳ ಹಾಕಿ ಇಡೀ ಕರ್ನಾಟಕವನ್ನು ಹಿಂದೀಮಂದಿಗೆ ಬರೆದುಕೊಡುತ್ತಿರುವ ರಾಜ್ಯಸರ್ಕಾರಕ್ಕೂ... ಇಷ್ಟೆಲ್ಲಾ ನಡೆಯುತ್ತಿದ್ದರೂ ‘ತಮಗೆ ಏನೂ ಆಗೇ ಇಲ್ಲಾ, ಆಗೋದೇ ಇಲ್ಲಾ, ಹಿಂದೀ ಭಾರತದ ರಾಷ್ಟ್ರಭಾಷೆ, ಇದು ಭಾರತದ ಒಗ್ಗಟ್ಟಿನ ಭಾಷೆ’ ಎಂಬ ಭ್ರಮೆಯಲ್ಲಿ ನಾಳಿನ ಕನ್ನಡಿಗರ ಬದುಕನ್ನು ಕರಾಳವಾಗಿಸುತ್ತಿರುವ ಕನ್ನಡನಾಡಿನ ಎಲ್ಲಾ "ಸತ್-ಪ್ರಜೆ"ಗಳಿಗೂ ಅಭಿನಂದನೆಗಳು!

ಇಂದು ಮೆಟ್ರೋ ಮೂಲಕ ನುಸುಳುವ ಹಿಂದೀ ನಾಳೆ ಬಿಎಂಟಿಸಿಯನ್ನು ಬಿಡೋದಿಲ್ಲಾ! ಮುಂದೊಮ್ಮೆ ಮುಂಬೈಯಲ್ಲಿ ಮರಾಟಿಗೆ ಆಗಿರುವ ಗತಿ ಕನ್ನಡಕ್ಕೂ ಆಗುವ ಮೊದಲು ನಾಡಿನ ಜನರು, ಸರ್ಕಾರ ಎಚ್ಚೆತ್ತುಕೊಂಡರೆ ಒಳಿತು. ಯಾವುದೇ ಕಾನೂನಿನ ಬೆಂಬಲವಿಲ್ಲದ, ಕೇವಲ ಮೆಟ್ರೋದ ಆಡಳಿತ ಮಂಡಳಿ ತೆಗೆದುಕೊಂಡಿರುವ ಈ ಹಿಂದೀ ಪರವಾದ ನಿಲುವು ಎಷ್ಟು ಬೇಗ ಬದಲಾದರೆ ಅಷ್ಟು ನಾಡಿಗೆ ಒಳಿತು! ಏಕೆಂದರೆ...

ನಮ್ಮ ಮೆಟ್ರೋ ಎಂಬ ಹಿಂದೀ ಪ್ರಚಾರಕ!

"ಸಮಾನತೆಯೇ ಜೀವಾಳ, ಇಲ್ಲಿ ಎಲ್ಲರೂ ಸಮಾನರು" ಎಂದು ಬಡಾಯಿ ಕೊಚ್ಚಿಕೊಳ್ಳುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ, ಬಹುಸಂಖ್ಯಾತರ ನೆಪದಲ್ಲಿ... ನಿಜಕ್ಕೂ ಅರ್ಧಕ್ಕಿಂತಲೂ ಹೆಚ್ಚು ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಿರುವುದು ಉತ್ತರವಾಗಿ ಕಾಣುತ್ತದೆ. ಭಾರತವು ತನ್ನ ಸಂವಿಧಾನದಲ್ಲಿ ಬರೆದುಕೊಂಡು ಒಪ್ಪಿಕೊಂಡು ಆಚರಿಸುತ್ತಿರುವ "ಆಡಳಿತ ಭಾಷಾ ನೀತಿ"ಯೇ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ನಮ್ಮ ನಿಮ್ಮ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ‘ಹಿಂದೀ ಭಾಷೆಯನ್ನು ಈ ದೇಶದ ಮೂಲೆಮೂಲೆಗಳಿಗೆ ಹರಡಲು’ ಬಳಸಲಾಗುತ್ತಿದೆ. ಈ ಹರಡುವಿಕೆಯ ಹಿಂದಿರುವ ಉದ್ದೇಶವೇ ಇಡೀ ಭಾರತವನ್ನು ಹಿಂದೀ ಭಾಷಿಕರ ಆಡುಂಬೊಲ ಮಾಡುವುದು ಎಂಬಂತೆ ಕಾಣುತ್ತಿದೆ.  ಹಿಂದೀ ಭಾಷಿಕರು ಎಲ್ಲೇ ಹೋಗಲಿ ಅವರ ಬದುಕು ಸರಾಗವಾಗಿರುವಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ. ಇಲ್ಲದಿದ್ದರೆ ಭಾರತದ ಯಾವುದೇ ಮೂಲೆಯಲ್ಲಿನ ಕೇಂದ್ರಸರ್ಕಾರಿ ಕಚೇರಿಯಲ್ಲೂ ಹಿಂದೀಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದೀಯಲ್ಲೇ ಉತ್ತರಿಸುವುದು ಕಡ್ಡಾಯ ಎನ್ನುವ ಕಾನೂನು ಇರುತ್ತಿರಲಿಲ್ಲ! ಇರಲಿ... ಈ ಹರಡುವಿಕೆಯು ಕೆಲವೆಡೆ ಹೇರಿಕೆಯಾಗಿದ್ದರೆ ಇನ್ನೂ ಕೆಲವೆಡೆ ಹೇರಿಕೆ ಗೊತ್ತೇ ಆಗದಂತಿದೆ. ಇಂಥಾ ಒಂದು ಪುಣ್ಯಕ್ಷೇತ್ರ ನಮ್ಮ ಬೆಂಗಳೂರಿನಲ್ಲೇ ಹರಿದಾಡುತ್ತಿದೆ. ಅದು "ನಮ್ಮ ಮೆಟ್ರೋ" ರೈಲು ಸಂಪರ್ಕ ವ್ಯವಸ್ಥೆ!

ಮೆಟ್ರೋದಲ್ಲಿ ಹಿಂದೀ ನರ್ತನ!

ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರದ ಹಣ ಸ್ವಲ್ಪಮಟ್ಟಿಗೆ ತೊಡಗಿಸಲಾಗಿದೆ ಎನ್ನುವ ಕಾರಣ ನೀಡಿಯೋ, ಕರ್ನಾಟಕವು ತ್ರಿಭಾಷಾಸೂತ್ರವನ್ನು ಒಪ್ಪಿದೆಯೆನ್ನುವ ಕಾರಣ ನೀಡಿಯೋ ಮೂರುಭಾಷೆಗಳಲ್ಲಿ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ಇದುವರೆವಿಗೆ ಬೆಂಗಳೂರಿನ ಸಾರ್ವಜನಿಕ ಬಳಕೆಯ ಸ್ಥಳೀಯ ಸಾರಿಗೆಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಿಟ್ಟು ಹಿಂದೀಯನ್ನು ಬಳಸಿರಲಿಲ್ಲಾ! ಇದೀಗ ನಮ್ಮ ಮೆಟ್ರೋದಲ್ಲಿ ಬರಿಯ ಫಲಕಗಳಷ್ಟೇ ಅಲ್ಲದೆ ಹಿಂದೀಯಲ್ಲಿ ಸೂಚನೆಗಳನ್ನು ಕೂಡಾ ನೀಡಲು ಶುರುಮಾಡಿದ್ದಾರೆ. ಅಲ್ಲಾರೀ! ಕನ್ನಡದಲ್ಲಿದೆಯಲ್ಲಾ... ಹಿಂದೀಲಿ ಇದ್ದರೇನು? ಎಂದು ಭಾವಿಸುವ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಆದರೆ ಯೋಚಿಸಿ ನೋಡಿದರೆ.. ಇದರ ಹಿಂದೆ ಹಿಂದೀ ಭಾಷಿಕರ ವಲಸೆಯನ್ನು ಉತ್ತೇಜಿಸುವ, ಆ ಮೂಲಕ ಕರ್ನಾಟಕದಂತಹ ರಾಜ್ಯಗಳ ಜನಲಕ್ಷಣವನ್ನೇ ಬುಡಮೇಲುಗೊಳಿಸುವ ಹುನ್ನಾರ ಕಾಣುತ್ತದೆ. ಈ ನೀತಿಯ ಹಿಂದೆ ಭಾರತದ ಭಾಷಾನೀತಿಯು ಕೆಲಸ ಮಾಡಿರುವುದು ಕಾಣುತ್ತದೆ ಮತ್ತು ಅದರ ಹುಳುಕು ಕಣ್ಣಿಗೆ ರಾಚುತ್ತದೆ!

ಹುಳುಕು ಯಾಕೆಂದರೆ...!

ಇಲ್ಲಿ ಹಿಂದೀಯ ಅಗತ್ಯವೇ ಇಲ್ಲದಿರುವಾಗಲೂ ಹಾಗೆ ಹಿಂದೀಯನ್ನು ಬಳಸಿರುವುದರ ಏಕೈಕ ಉದ್ದೇಶ "ಹಿಂದೀ ಭಾಷಿಕ ಜನರಿಗೆ ಅನುಕೂಲವಾಗಲೀ" ಎನ್ನುವುದೇ ಆಗಿದೆ. ‘ಬೆಂಗಳೂರಿಗೆ ಭಾರತದ ಎಲ್ಲೆಡೆಯಿಂದ ಜನರು ಬರುತ್ತಾರೆ ಹಾಗಾಗಿ ಇಲ್ಲಿ ಹಿಂದೀ ಬೇಕು’ ಎನ್ನುವವರು ಅರಿಯಬೇಕಾದದ್ದು, ಬೆಂಗಳೂರಿನ ಎರಡನೇ ದೊಡ್ಡ ಭಾಷಿಕ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿರುವ ತೆಲುಗರದ್ದು! ಹಾಗೇ ಉರ್ದು ಭಾಷಿಕರು, ತಮಿಳರು ಎಲ್ಲಾ ಆದಮೇಲೆ ಹಿಂದಿಯವರ ಸರತಿ ಬರುತ್ತದೆ. ಭಾರತೀಯರೆಲ್ಲಾ ಸಮಾನರೆನ್ನುವುದೇ ದಿಟವಾದರೆ ನಮ್ಮ ಮೆಟ್ರೋದಲ್ಲಿ ಕನ್ನಡದ ಜೊತೆಗೆ ತೆಲುಗು, ಉರ್ದು, ತಮಿಳು ಭಾಷೆಗಳೂ ಇರಬೇಕಿತ್ತು! ಬೇಡಪ್ಪಾ... ದೆಹಲಿಯ ಮೆಟ್ರೋದಲ್ಲಿ ಭಾರತದ ಇನ್ಯಾವ ಭಾಷೆಗೆ ಸ್ಥಾನ ನೀಡಿದ್ದಾರೆ? ಅಂದರೆ ಭಾರತದ ಮೂಲೆಮೂಲೆಯಲ್ಲೂ ಆಯಾಜನರ ಭಾಷೆಯ ಜೊತೆಗೆ ಹಿಂದೀಯನ್ನು ಸೇರಿಸುವುದು! ಅದಕ್ಕೆ ಹೆಚ್ಚು ಜನರಿಗೆ ಅದು ಬರುವ ಭಾಷೆ ಎಂದುಬಿಡುವುದು. ಆ ಮೂಲಕ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಭಾಷಿಕ ರಾಜ್ಯಗಳ ಜನರಿಗೆ ಕರ್ನಾಟಕದಂತಹ ಸಮೃದ್ಧ ಜನವಿರಳ ಪ್ರದೇಶಗಳಿಗೆ ವಲಸೆ ಹೋಗಲು ಅನುಕೂಲ ಮಾಡಿಕೊಡುವುದು! ಇದು ಯಾವರೀತಿಯಲ್ಲಿ ಸಮಾನತೆಯೇ ಜೀವಾಳ ಎನ್ನುವ ಮಾತಿಗೆ ಹತ್ತಿರವಾಗಿದೆ? ಇನ್ನು ಹೀಗೆ ಮೆಟ್ರೋದಂತಹ ಸ್ಥಳೀಯ ಸಮೂಹ ಸಾರಿಗೆಯಲ್ಲಿ ಹಿಂದೀ ತೂರಿಸಿರುವುದನ್ನು ಸಮಾನತೆಯ ಸಂಕೇತವಾಗಿ ಕಾಣಬೇಕೋ... ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಪ್ರತೀಕವಾಗಿ ಕಾಣಬೇಕೋ? ಬೆಂಗಳೂರಿಗೆ ವಲಸೆ ಬರುವ ಹಿಂದೀ ಭಾಷಿಕರಿಗೆ ತೊಂದರೆಯಾಗಬಾರದೆನ್ನುವ ಘನ ಉದ್ದೇಶ ಭಾರತ ಸರ್ಕಾರಕ್ಕಿರುವಂತೆಯೇ... ದೆಹಲಿಗೆ ಹೋಗುವ, ದೆಹಲಿಯಲ್ಲಿರುವ ಕನ್ನಡದವರ ಬಗ್ಗೆಯೂ ಇದೆಯೇ? ಅಸಲಿಗೆ ಹೀಗೆ ಎಲ್ಲರಿಗೂ ಅನುಕೂಲ ಮಾಡಿಕೊಡುವಂತಹ ಭಾಷಾನೀತಿ ಭಾರತದಲ್ಲಿದೆಯೇ ಎಂದರೆ ಕಾಣುವುದು ದೊಡ್ಡ ನಿರಾಸೆ! 

ಸಮಾನತೆಯ ಕೂಗು!

"ಈ ಹುಳುಕು ಸರಿ ಹೋಗಲಿ... ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಲಿ. ತನ್ನ ನಾಡಿನಲ್ಲಿ ಆಯಾಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆ ತಾರದಂತಹ ಭಾಷಾನೀತಿ ರೂಪುಗೊಳ್ಳಲಿ" ಎಂಬ ದನಿ ಎತ್ತುವಲ್ಲಿ ನಮ್ಮ ಕನ್ನಡಿಗರೇನು ಹಿಂದೆ ಬಿದ್ದಿಲ್ಲ - ಇದು ಹಿಗ್ಗಿನ,  ಭರವಸೆಯ ವಿಷಯ. ಮೆಟ್ರೋದಲ್ಲಿ ಹಿಂದೀ ತುರುಕಲು ಆರಂಭಿಸಿದಾಗಲೇ ಇದರ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ದೂರು ಸಲ್ಲಿಸಿದವರು ಹಲವರು. ಮೆಟ್ರೋ ಮುಖ್ಯಸ್ಥರ ಉದ್ಧಟತನದ ಉತ್ತರದಿಂದ ಬೇಸತ್ತವರು ಮತ್ತೆ ಕೆಲವರು. ಸೋಲೊಪ್ಪದೆ ಬೆನ್ನು ಹತ್ತಿ ಮೆಟ್ರೋದ ಈ ಹಿಂದೀ ಪರವಾದ ನಿಲುವನ್ನು ಪ್ರಶ್ನಿಸಿ "ಇಂತಹ ನಿಲುವಿಗೆ ಕಾರಣ ವಿವರಿಸಿ" ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ನಕ್ಷತ್ರಿಕನ ಹಾಗೆ ಬೆನ್ನು ಹತ್ತಿದವರು ಮತ್ತೆ ಕೆಲವರು. ಮನವಿಕಾಯುವಿಕೆಮೇಲ್ಮನವಿದೂರು,  ವಿಚಾರಣೆ... ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಾ ಮೆಟ್ಟಿಲುಗಳನ್ನೂ ಹತ್ತುತ್ತಾ, ಸುಮಾರು ಎರಡು ವರ್ಷಗಳಿಂದಲೂ ಉತ್ಸಾಹ ಬತ್ತಿಸಿಕೊಳ್ಳದೆ ಮೆಟ್ರೋದ ಬೆನ್ನು ಬಿದ್ದಿರುವ ಗೆಳೆಯರಿಗೆ ಬಂದಿರುವ ಉತ್ತರಗಳನ್ನು ನೀವು ಇಲ್ಲಿ ನೋಡಿರಿ.

ಆರ್ ಟಿ ಐಗೆ ಉತ್ತರ!



ಹೀಗೆ ರಾಜ್ಯಸರ್ಕಾರದ ಗೆಜೆಟ್ ಸೂಚನೆಯಂತೆ ಹಿಂದೀ ಬಳಸಿದ್ದೇವೆ ಎಂದು ಮೊದಲು ಹೇಳಿದವರು ಅದಕ್ಕೆ ಬೇಕಾದ ಆಧಾರ ಕೊಡದೆ ಯಾವುದೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪತ್ರ ಲಗತ್ತಿಸಿದ್ದರು. ಮುಂದೆ ಮೇಲ್ಮನವಿ/ ವಿಚಾರಣೆ ಅಂದಾಗ ಇದು ತಮ್ಮ ಆಡಳಿತ ಮಂಡಳಿಯ ತೀರ್ಮಾನ ಮತ್ತು ಯಾವುದೇ ಸರ್ಕಾರದ ಆದೇಶವಲ್ಲಾ ಎಂದರು. ಇದು ಇವರ ಸದ್ಯದ ಕೊನೆಯ ಉತ್ತರ. ಕನ್ನಡ ನಾಡಿನ ಮೆಟ್ರೋಲಿ ಹಿಂದೀ ಇರಬೇಕೆಂಬ ನಿರ್ಣಯವನ್ನು ತೆಗೆದುಕೊಳ್ಳಲು ಇದೇನು ಇವರ ಖಾಸಗಿ ಸ್ವತ್ತೇ ಎಂಬ ಪ್ರಶ್ನೆ ಜನರದ್ದು! ನಾಳೆ ನಾಲ್ಕು ಮಂದಿ ಮಲಯಾಳಿಗಳೋ, ತಮಿಳರೋ ಬಂದು ಆಡಳಿತ ಮಂಡಳಿಯಲ್ಲಿ ಕೂತು ಮಲಯಾಳವನ್ನೋ, ತಮಿಳನ್ನೋ ಬೆಂಗಳೂರಿನ ಮೆಟ್ರೋದಲ್ಲಿ ತರುವುದಿಲ್ಲಾ ಎನ್ನಲು ಸಾಧ್ಯವೇ! ಕನ್ನಡದ ಜನತೆ ಎಚ್ಚೆತ್ತುಕೊಳ್ಳದೆ ಹೋದರೆ ನಾಳೆ ಪಶ್ಚಾತ್ತಾಪ ಪಡಬೇಕಾದೀತು!! ಅಲ್ವಾ ಗುರೂ?







ನಾಳೆ ಉದ್ಘಾಟನೆಯಾಗಲಿರುವ "ಬಹುಭಾಷಿಕ ಭಾರತಕ್ಕಾಗಿ ಚಳವಳಿ"!


ನಾಳೆ ಅಂತರ್ರಾಷ್ಟ್ರೀಯ ತಾಯ್ನುಡಿ ದಿನಾಚರಣೆ. ಈ ದಿನವನ್ನು ವಿಭಿನ್ನವಾಗಿ ಆಚರಿಸಲಾಗುವ ಕಾರ್ಯಕ್ರಮವೊಂದು ನವದೆಹಲಿಯಲ್ಲಿ ನಾಳೆ ನಡೆಯಲಿದೆ. ಸಮಾನ ಗೌರವದ, ಸಮಾನ ಅವಕಾಶದ ಭಾರತಕ್ಕಾಗಿ ಹಂಬಲಿಸುತ್ತಿರುವ ಹಲವು ಮಂದಿ ನಾಳೆ ಮಧ್ಯಾಹ್ನ ನವದೆಹಲಿಯ ಪ್ರಗತಿ ಮೈದಾನದಲ್ಲಿ ವಿಶ್ವ ತಾಯ್ನುಡಿ ದಿನಾಚರಣೆಯನ್ನು ಆಚರಿಸುವುದರ ಒಟ್ಟೊಟ್ಟಿಗೆ ಭಾರತೀಯರ ಭಾಷಾಹಕ್ಕುಗಳನ್ನು ಎತ್ತಿಹಿಡಿಯುವ ಚಳವಳಿಯ ಘೋಷಣೆಯನ್ನೂ ಮಾಡಲಿದ್ದಾರೆ. ಈ ಚಳವಳಿಯ ಹೆಸರು "ಬಹುಭಾಷಿಕ ಭಾರತಕ್ಕಾಗಿ ಚಳವಳಿ" (Movement for Multi-lingual India).

ಈ  ಕಾರ್ಯಕ್ರಮದಲ್ಲಿ ಭಾರತದ ಬೇರೆ ಬೇರೆ ತಾಯ್ನುಡಿಯ ಜನರು ಒಟ್ಟಾಗಿ ಸೇರಲಿದ್ದು ಮುಂದಿನ ರೂಪುರೇಶೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬನವಾಸಿ ಬಳಗವೂ ಕೂಡಾ ಈ ಚಳವಳಿಯ ಜೊತೆ ಗುರುತಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಭರವಸೆ ಹೊಂದಿದೆ. ಬನವಾಸಿ ಬಳಗದ ಶ್ರೀ ರಾಘವೇಂದ್ರರವರು ಕನ್ನಡಿಗರ ಪ್ರತಿನಿಧಿಯಾಗಿ ಖುದ್ದಾಗಿ ಇದರಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಎಂಟು ಹತ್ತು ವರ್ಷಗಳಿಂದ ನಮ್ಮ ಭಾಷಾಹಕ್ಕುಗಳಿಗಾಗಿ ದನಿಎತ್ತಿರುವ ಬನವಾಸಿ ಬಳಗವು, ಸಂಬಂಧಿಸಿದ ಸರ್ಕಾರಗಳ ಮೇಲೆ ಸಾರ್ವಜನಿಕ ಸಹಿಸಂಗ್ರಹದ ಹಕ್ಕೊತ್ತಾಯ ಪತ್ರಗಳ ಮೂಲಕ ಒತ್ತಡ ಹಾಕುತ್ತಲೇ ಬಂದಿದೆ. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನವಾಸಿ ಬಳಗ ಹೊರತಂದಿರುವ "ಹಿಂದೀ ಹೇರಿಕೆ: ಮೂರು ಮಂತ್ರ - ನೂರು ತಂತ್ರ" ಹೊತ್ತಗೆಯು ಪರಿಣಾಮಕಾರಿಯಾಗಿದ್ದು ಅನೇಕ ಮಾಹಿತಿಪೂರ್ಣ ವಿಚಾರಗಳನ್ನು ಹೊಂದಿದೆ. ಇದೀಗ ಭಾರತದ ಹುಳುಕಿನ ಭಾಷಾನೀತಿಯ ಬದಲಾವಣೆಗಾಗಿ ಹೊರರಾಜ್ಯದ ಜನರೊಂದಿಗೆ ಸೇರಿ ಸಂಘಟಿತ ಹೋರಾಟಕ್ಕೆ ಬಳಗ ಮುಂದಾಗಿದೆ.

ಸಭೆಯಲ್ಲಾದ ತೀರ್ಮಾನಗಳ ಬಗ್ಗೆ, ಮುಂದಿನ ಹೋರಾಟದ ಸ್ವರೂಪಗಳ ಬಗ್ಗೆ ನಿಮ್ಮೊಂದಿಗೆ ಸೂಕ್ತಸಮಯದಲ್ಲಿ ಸೂಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ನೀವು ದೆಹಲಿಯಲ್ಲಿದ್ದರೆ ನಾಳಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಭಾರತದ ಸಂಸತ್ತಿಗೂ.. ಇವರಿಗೂ ಏನು ವ್ಯತ್ಯಾಸ?

(ಚಿತ್ರಕೃಪೆ: ೧೯೮೪ರ ಸಿಖ್ ವಿರೋಧಿ ದಂಗೆಯ ಪತ್ರಿಕಾ ವರದಿಯೊಂದರಿಂದ)
ಭಾರತದ ಸಂಸತ್ತಿನಲ್ಲಿ ಮಂಗಳವಾರದಿಂದೀಚಿಗೆ ದಕ್ಷಿಣ ಭಾರತೀಯರನ್ನು ಒಳಗೆ ಬಿಡುವುದಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವ ಸುದ್ದಿ ನೋಡಿ ಅಚ್ಚರಿಯಾಗಿದೆ. ದಕ್ಷಿಣ ಭಾರತೀಯರು ಈ ದೇಶದ ಪ್ರಜೆಗಳೋ ಅಲ್ಲವೋ ಎನ್ನುವ ಭೀತಿಗೆ ಕಾರಣವಾಗಿದೆ. 

ಹಿಂದೆ ಮಹಾತ್ಮಾಗಾಂಧಿಯವರ ಹತ್ಯೆಯಾದಾಗ ಕೈಗೆ ಸಿಕ್ಕಿದ ಚಿತ್ಪಾವನರೆಂದು ಕರೆಯಲಾಗುವ ಮರಾಟಿ ಬ್ರಾಹ್ಮಣರ ಮೇಲೆ ಅವರು ಚಿತ್ಪಾವನರೆಂಬ ಕಾರಣಕ್ಕೇ ಹಲ್ಲೆ ಮಾಡಲಾಗಿತ್ತು. ಇದೇ ರೀತಿ ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದುಹಾಕಿದ್ದಾಗ, ಹಂತಕರು ಸಿಖ್ ಸಮುದಾಯಕ್ಕೆ ಸೇರಿದ್ದರಿಂದಾಗಿ ಕಂಡಕಂಡಲ್ಲಿ ಕೈಗೆ ಸಿಕ್ಕ ಸಿಖ್ಖರನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ಗೋಧ್ರಾದಲ್ಲಿ ನಡೆದ ಹತ್ಯೆಯ ಪ್ರತಿಧ್ವನಿಯಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಕೊಲ್ಲಲಾಯಿತು. ಅಮಾಯಕರನ್ನು ಕೊಲ್ಲಲಾಗಿದ್ದ ಈ ಘಟನೆಗಳನ್ನೂ ಎಂದಿಗೂ ಒಪ್ಪಲಾಗದ ಅಮಾನುಷ ಕೃತ್ಯವೆಂದೂ, ಜನಾಂಗೀಯ ದ್ವೇಶದಿಂದ ಮಾಡಿದ ಕಗ್ಗೊಲೆಯೆಂದೂ ಬಣ್ಣಿಸಲಾಗುತ್ತದೆ.  

ಇಲ್ಲೆಲ್ಲಾ ಹಾಗೆ ದ್ವೇಶದಿಂದ ನರಮೇಧಕ್ಕಿಳಿದವರನ್ನು "ಸಂವಿಧಾನ ವಿರೋಧಿಗಳು" "ಸಹಿಷ್ಣುತೆಯ ವಿರೋಧಿಗಳು" " ಭಾರತ ರಾಷ್ಟ್ರೀಯತೆಯ - ಒಗ್ಗಟ್ಟಿನ ವಿರೋಧಿಗಳು" "ದೇಶ ವಿರೋಧಿಗಳು" ಎಂದು ಇಡೀ ದೇಶ ಬಣ್ಣಿಸಿ ಖಂಡಿಸಿತು. ಇವೆಲ್ಲಾ ಕೃತ್ಯಗಳು ನಡೆದದ್ದು ಖಾಸಗಿ ವ್ಯಕ್ತಿಗಳಿಂದ... ಇದಕ್ಕೆ ಕುಮ್ಮಕ್ಕು ಕೊಟ್ಟವರು ಅಧಿಕಾರದಲ್ಲಿದ್ದವರು ಎಂಬ ದೂರಿದ್ದರೂ ಇದುವರೆವಿಗೆ ಯಾವುದೇ ಸರ್ಕಾರವೂ ಜನಾಂಗೀಯ ತಾರತಮ್ಯವನ್ನು ಸಮರ್ಥಿಸಿದ ಉದಾಹರಣೆಯಿಲ್ಲ! ಆದರೆ ದಕ್ಷಿಣ ಭಾರತದ ಹೆಸರನ್ನು ಹೊಂದಿರುವ ಸಾರ್ವಜನಿಕರನ್ನು ಸಂಸತ್ತಿನ ಕಲಾಪದಿಂದ ಹೊರಗಿಡುತ್ತಿರುವುದು ಮಾತ್ರಾ ಭಾರತ ಸರ್ಕಾರವೇ ಇಂಥಾ ತಾರತಮ್ಯಕ್ಕೆ ಮುಂದಾಗಿದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಹಿಂದೆ ಅಮೇರಿಕಾದಲ್ಲಿ ಉಗ್ರಗಾಮಿಗಳು ವಿಮಾನ ಕದ್ದು ಎತ್ತರದ ಕಟ್ಟಡಗಳೂ ಸೇರಿದಂತೆ ನಾಲ್ಕೈದು ಪ್ರಮುಖ ಜಾಗಗಳಿಗೆ ನುಗ್ಗಿಸಿ ಸಾವಿರಾರು ಜನರ ಸಾವಿಗೆ ಕಾರಣರಾದ ದಿನದಿಂದ ಆ ದೇಶಕ್ಕೆ ಹೋಗುವ ಮುಸ್ಲಿಮ್ ಹೆಸರಿನವರನ್ನೆಲ್ಲಾ ಸಿಕ್ಕಾಪಟ್ಟೆ ತಪಾಸಣೆ ಮಾಡೇ ಒಳಗೆ ಬಿಟ್ಟುಕೊಳ್ಳುವ ಏರ್ಪಾಟು ಶುರುವಾಯಿತು. ಅದೂ ಕೂಡಾ ಹೊರದೇಶಗಳಿಂದ ಬರುವವರಿಗೆ ಅನ್ವಯವಾಗುತ್ತಿತ್ತು. ಹಾಗೆ ತಪಾಸಣೆ ಮಾಡಿದರೇ ಹೊರತು ಒಳಗೆ ಬಿಟ್ಟುಕೊಳ್ಳಲ್ಲಾ ಎನ್ನಲಿಲ್ಲಾ! ಆದರೆ ಭವ್ಯ ಭಾರತದಲ್ಲಿ ಮಾತ್ರಾ, ಸಂಸತ್ತಿಗೆ ಪಾಸು ಪಡೆದು ಹೋಗುವ ಜನಸಾಮಾನ್ಯರ ಹಕ್ಕನ್ನು ದಕ್ಷಿಣ ಭಾರತೀಯರು ಎನ್ನುವ ಕಾರಣದಿಂದಲೇ ನಿರಾಕರಿಸಿರುವುದು ಸರಿಯಲ್ಲಾ! ಇಂತಹ ಕ್ರಮಗಳಿಂದ ಭಾರತದ ಸಂಸತ್ತು, ದಕ್ಷಿಣದವರಿಗೆ ನೀವು ಭಾರತೀಯರಲ್ಲಾ ಎನ್ನುತ್ತಿದೆಯೇನೋ ಎನ್ನುವ ಭಾವನೆಗೆ ಕಾರಣವಾಗುತ್ತಿದೆ. ಇಂಥಾ ನಡೆ ಅದ್ಯಾವುದೇ ಕಾರಣಕ್ಕಾಗಲಿ ಸಂಸತ್ ತೆಗೆದುಕೊಳ್ಳುವುದನ್ನು ಒಪ್ಪಲಾಗದು. ನಮ್ಮ ಜನರನ್ನು ಹೊರಗಿಡುವ ಸಂಸತ್ತಿಗೆ ನಾವೂ ಬರುವುದಿಲ್ಲಾ ಎನ್ನುವ ಗಟ್ಟಿ ನಿಲುವನ್ನು ತೆಗೆದುಕೊಂಡಾದರೂ ನಮ್ಮ ಸಂಸದರು ಈ ತಾರತಮ್ಯವನ್ನು ಇಲ್ಲವಾಗಿಸಬೇಕು.

ಸಮಸ್ಯೆಯ ಮೂಲವಿರುವುದು ಸಂವಿಧಾನದ ಮೂರನೇ ಕಾಲಂನಲ್ಲಿ ಬರೆಯಲಾಗಿರುವ "ರಾಜ್ಯಗಳ ಗಡಿ ನಿರ್ಣಯಿಸುವ ಹಕ್ಕು ಸಂಸತ್ತಿನದು" ಎನ್ನುವ ಮಾತಿನಲ್ಲಿ. ಈ ಅಂಶವನ್ನು ತಾಂತ್ರಿಕವಾಗಿ ಬಳಸಿಕೊಂಡು, ಆಂಧ್ರಪ್ರದೇಶದ ಶಾಸನಸಭೆಯ ನಿಲುವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಆಂಧ್ರಪ್ರದೇಶವನ್ನು ಒಡೆಯಲು ಭಾರತದ ಸಂಸತ್ತು ಮುಂದಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವದ/ ಒಕ್ಕೂಟದ ಸ್ಪೂರ್ತಿಗೆ ವಿಡಂಬನೆ. ಸಂಸತ್ತಿನಲ್ಲಿ ಉಳಿದೆಲ್ಲಾ ಸಂಸದರು ಒಂದಾಗಿ ಸೇರಿದರೆ ಯಾವೊಂದು ರಾಜ್ಯದ ಸಂಸದರ ಒಟ್ಟು ಸಂಖ್ಯೆಯೂ ಅದನ್ನು ಸಂಖ್ಯಾಬಲದಲ್ಲಿ ಮೀರಿಸಲಾಗದ್ದು ಗೊತ್ತಿರುವ ವಿಷಯವೇ! ಹೀಗಿದ್ದಾಗ ರಾಜ್ಯವೊಂದರ ಸಂಸದರ ಅಭಿಪ್ರಾಯಕ್ಕಾಗಲೀ, ಸದರಿ ರಾಜ್ಯದ ಶಾಸನಸಭೆಯ ನಿರ್ಣಯಕ್ಕಾಗಲೀ ಬೆಲೆಕೊಡದೆ ರಾಜ್ಯವೊಂದನ್ನು ಒಡೆದು ಹಾಕಿಬಿಡಬಹುದಾದಂಥಾ ಸ್ವಾತಂತ್ರ್ಯ ನಮ್ಮ ಸಂಸತ್ತಿಗೆ ಇರುವುದೇ ಸರಿಯಲ್ಲಾ!! ಅಲ್ವಾ ಗುರೂ? 

ವಿರೋಧವೇನೋ ಸಂವಿಧಾನ ಬದ್ಧ! ಆದರೆ "ನಿಶೇಧ" ಅಲ್ವಲ್ಲಾ ಗುರುಗಳೇ!

(ಚಿತ್ರಕೃಪೆ: ಪ್ರಜಾವಾಣಿ ದಿನಪತ್ರಿಕೆ)
ಕಳೆದ ವಾರದಲ್ಲೊಂದು ದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಾಡಿನ ಹಿರಿಯ ಸಾಹಿತಿ ಚಿಂತಕರೆಂದು ಹೆಸರಾದ ಶ್ರೀ ಬರಗೂರು ರಾಮಚಂದ್ರಪ್ಪನವರು ಬರೆದ ಬರಹವೊಂದು ಪ್ರಕಟವಾಯಿತು. “ಡಬ್ಬಿಂಗ್ ವಿರೋಧ, ಸಂವಿಧಾನ ಬದ್ಧ” ಎಂಬ ತಲೆಬರಹದ ಬರಹದಲ್ಲಿ ಶ್ರೀಯುತರು ಡಬ್ಬಿಂಗ್ ವಿರೋಧವಾಗಿ ಮಾತನಾಡುತ್ತಾ ಡಬ್ಬಿಂಗ್ ಮೇಲಿನ ನಿಶೇಧವನ್ನು ಸಮರ್ಥಿಸುತ್ತಿರುವುದು ಕಂಡಿತು. ಇವರ ಮಾತುಗಳನ್ನು ಒಂದೊಂದಾಗಿ ಬಿಡಿಸಿ ನೋಡಿದರೆ ಇದರ ಪೊಳ್ಳುತನ ತಿಳಿಯುವುದಷ್ಟೇ ಅಲ್ಲದೆ ಡಬ್ಬಿಂಗ್ ವಿರೋಧದ ತಮ್ಮ ನಿಲುವಿನ ಬೆಂಬಲಕ್ಕಾಗಿ ಹೇಗೆ ಸಂವಿಧಾನವನ್ನು ಗುರಾಣಿಯಂತೆ ಬಳಸಲು ತಪ್ಪು ತಪ್ಪಾಗಿ ಬಳಸಿದ್ದಾರೆ ಎಂಬುದು  ತಿಳಿಯುತ್ತದೆ.

ವಿರೋಧದ ಕಾರಣಗಳು
೧. ಡಬ್ಬಿಂಗ್ ಚಿತ್ರಗಳು ಸೃಜನಶೀಲತೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಇದಕ್ಕೆ ನನ್ನ ವಿರೋಧವಿದೆ ಎಂದಿರುವ ಶ್ರೀಯುತರ ಅಭಿಪ್ರಾಯವನ್ನು ಗೌರವಿಸುತ್ತಾ ಅವರಿಗೇ ಆಗಲೀ ಮತ್ತೊಬ್ಬರಿಗೇ ಆಗಲಿ ಡಬ್ಬಿಂಗ್ ಚಿತ್ರ ವಿರೋಧಿಸುವ ಸ್ವತಂತ್ರ ಇದ್ದೇ ಇದೆ ಎನ್ನಬೇಕಾಗಿದೆ. ಏಕೆಂದರೆ ಡಬ್ಬಿಂಗ್ ಬೇಕು ಎನ್ನುವ ಸ್ವಾತಂತ್ರ್ಯವನ್ನು ಈ ನಾಡಿನಲ್ಲಿ ಹತ್ತಿಕ್ಕಲಾಗುತ್ತಿದೆಯೇ ಹೊರತು ಬೇಡ ಎನ್ನುವ ಸ್ವಾತಂತ್ರ್ಯವನ್ನಲ್ಲಾ! ಶ್ರೀಯುತರು ಮುಂದುವರೆಯುತ್ತಾ ತಾವೇ ತಾವಾಗಿ ಎದುರಾಳಿಗಳ ಪ್ರಶ್ನೆಗಳನ್ನೆತ್ತಿ ಉತ್ತರಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಾಸ್ತವವಾಗಿ ಕನ್ನಡ ಚಿತ್ರಗಳು ಸೃಜನಶೀಲವಾಗಿಲ್ಲದಿರುವುದಕ್ಕೆ ಡಬ್ಬಿಂಗ್ ಚಿತ್ರಗಳು ಬರಬೇಕೆನ್ನುವ ವಾದವೇ ಇಲ್ಲದಿರುವಾಗ ಹಾಗೊಂದು ಪ್ರಶ್ನೆ ಹುಡುಕಿ ಅದಕ್ಕೊಂದು ಉತ್ತರ ನೀಡಿರುವುದು ಇವರು ವಿಷಯ ವಿಶ್ಲೇಷಣೆಗಿಳಿಯದೆ ಸುಮ್ಮನೇ ಅನಿಸಿಕೆಯೊಂದನ್ನು ರೂಪಿಸಿಕೊಂಡು ಅದಕ್ಕೆ ಸಮರ್ಥನೆ ಹುಡುಕುತ್ತಿರುವಂತೆ ಅನ್ನಿಸುತ್ತದೆ. ಕನ್ನಡ ಚಿತ್ರಗಳು ಅದ್ಭುತವಾಗಿದ್ದರೂ, ಸೃಜನಶೀಲತೆ ಅಲ್ಲಿ ಸಾಕಾರವಾಗುತ್ತಿದ್ದರೂ, ಜಗತ್ತಿನಲ್ಲೇ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರೋದ್ಯಮ ನಮ್ಮ ಮುಂದೆ ತಂದಿಡುತ್ತಿದ್ದರೂ “ಡಬ್ಬಿಂಗ್ ಚಿತ್ರಗಳನ್ನು ನೋಡಬೇಕು” ಎಂದು ಕನ್ನಡದ ಪ್ರೇಕ್ಷಕ ಬಯಸುವುದು ಅಪರಾಧವೇನೂ ಅಲ್ಲಾ! ಆಗಲೂ ತನ್ನ ತಾಯ್ನುಡಿಗೆ ಡಬ್ ಆದ ಕಾರ್ಯಕ್ರಮಗಳನ್ನು ನೋಡುವ ಆಯ್ಕೆ ಕನ್ನಡಿಗನಿಗೆ ಸಿಗಲೇಬೇಕಲ್ಲವೇ? ಇದೇ ರೀತಿ ‘ಜಾಗತೀಕರಣದ ಯುಗದಲ್ಲಿ ಕನ್ನಡ ಚಿತ್ರಗಳಿಗೆ ಎದುರಾಗಿ ಡಬ್ಬಿಂಗ್ ಚಿತ್ರಗಳನ್ನು ಇಡುವ ಬದಲಿಗೆ ಕೆಟ್ಟ ಕನ್ನಡ ಚಿತ್ರಗಳಿಗೆ, ಒಳ್ಳೆಯ ಕನ್ನಡ ಚಿತ್ರಗಳನ್ನು ಎದುರಾಗಿಸುವುದು ಒಳಿತೆಂ’ದು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಕೇಂದ್ರಿತ ಮನೋಭಾವ ಸೃಜನಶೀಲತೆಗೆ ಮಾರಕ ಎಂದೂ ಹೇಳಿ ಇಡೀ ವಿಷಯವನ್ನು ಗೊಂದಲಮಯವಾಗಿಸಿದ್ದಾರೆ. ಕಲೆ, ಸೃಜನಶೀಲತೆಗಳೇ ಸರಕಾಗಿರುವ ಚಿತ್ರೋದ್ಯಮ ಇವರ ಮಾತನ್ನು ಒಪ್ಪಿದರೆ, ನಾಳೆಯಿಂದ ಯಾವ ಸಿನಿಮಾಕ್ಕೂ ಟಿಕೆಟ್ ಇಟ್ಟು ತೋರಿಸುವ ಹಾಗಿರುವುದಿಲ್ಲಾ! ಯಾಕೆಂದರೆ ಸೃಜನಶೀಲ ಚಿತ್ರಗಳು ತೆರೆಕಾಣಲೂ ಕೂಡಾ ವ್ಯಾಪಾರ ಮಾಡಬೇಕು. ಇವರಿಗೆ ಅದೇಕೆ ವ್ಯಾಪಾರ, ಮಾರುಕಟ್ಟೆ, ಗ್ರಾಹಕ ಎಂದೊಡನೆ “ಅದು ಕೆಟ್ಟದ್ದು” ಎಂದೆನ್ನಿಸುತ್ತದೆ ಎಂಬುದಕ್ಕೆ ಉತ್ತರವಿಲ್ಲಾ!

೨. ಡಬ್ಬಿಂಗ್ ಚಿತ್ರಗಳು ಬರುವುದರಿಂದ ಸ್ವಂತ ಚಿತ್ರನಿರ್ಮಾಣ ನಿಂತು ಕಾರ್ಮಿಕರ ಬದುಕುವ ಹಕ್ಕು ಕಿತ್ತುಕೊಂಡಂತಾಗುತ್ತದೆ ಎನ್ನುವ ಮಾತುಗಳನ್ನು ಆಡಿರುವ ಶ್ರೀಯುತರು, ವಾಸ್ತವವಾಗಿ ನಿರೀಕ್ಷಿಸುತ್ತಿರುವುದಾದರೋ ಏನನ್ನು? ಚಿತ್ರರಂಗದಲ್ಲಿ ಹಣ ಹೂಡುವವರು ತಮಗೆ ಯಾವುದು ಲಾಭದಾಯಕವೋ  ಅದನ್ನು ತಾನೇ ಮಾಡುತ್ತಾರೆ. ನಿಮಗೆ ಲಾಭದ ದಾರಿ ಮುಚ್ಚುತ್ತೇವೆ, ನಷ್ಟವಾದರೂ ಇದೇ ದಾರಿಯಲ್ಲಿ ಸಾಗಿ ಸಾವಿರಾರು ಕಾರ್ಮಿಕರನ್ನು ಉಳಿಸಿ ಎನ್ನುವ ನಿಲುವು ಸರಿಯಾದುದೇ ಎಂದು ಪ್ರಾಜ್ಞರು ಯೋಚಿಸಬೇಕು. ನಿರ್ಮಾಪಕನಿಗೆ ತನ್ನ ಆಯ್ಕೆಯ ಚಿತ್ರ ಮಾಡುವ ಹಕ್ಕನ್ನು ಕಿತ್ತುಕೊಳ್ಳುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗದೇ? ಡಬ್ಬಿಂಗ್ ಚಿತ್ರಗಳು ಮತ್ತು ತುಟಿಚಲನೆ, ಗುಣಮಟ್ಟದ ಕೊರತೆ ಮುಂತಾಗಿ ಹೇಳುವ ಬರಗೂರರು ಅಂತಹ ಚಿತ್ರಗಳನ್ನು ಒಪ್ಪುವ, ತಿರಸ್ಕರಿಸುವ ಅಥವಾ ಮೆಚ್ಚುವ ಅವಕಾಶವನ್ನೇ ನಿರಾಕರಿಸುವುದನ್ನು ಹೇಗೆ ತಾನೇ ಸಮರ್ಥಿಸಿಕೊಳ್ಳಬಲ್ಲರು?

೩. ಇನ್ನು ಕನ್ನಡದ ಬೆಳವಣಿಗೆ ಮತ್ತು ಡಬ್ಬಿಂಗ್ ಎನ್ನುವ ವಿಷಯವಾಗಿ ಮಾತಾಡುತ್ತಾ, ಡಬ್ಬಿಂಗಿನಿಂದ ಕನ್ನಡ ಬೆಳವಣಿಗೆ ಆಗದು ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಯಾವ ಆಧಾರವನ್ನೂ ನೀಡಿಲ್ಲಾ. ವಾಸ್ತವವಾಗಿ ಕನ್ನಡದ ಮಕ್ಕಳು/ ಜನರು ತಮ್ಮ ಇಷ್ಟದ ಪರಭಾಷೆಯ ಕಾರ್ಯಕ್ರಮಗಳನ್ನು/ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡುವ ಅವಕಾಶ ದೊರೆಯುವುದಕ್ಕಿಂತಾ ದೊಡ್ಡದು ಬೇರೇನು ಬೇಕು? ನಮ್ಮ ಮಕ್ಕಳು ಚಿಕ್ಕಂದಿನಿಂದಲೂ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸದೆ ಕನ್ನಡಕ್ಕೆ ಅಂಟಿಕೊಳ್ಳುವುದಕ್ಕಿಂತಾ ದೊಡ್ಡ ಇನ್ನಾವ ಕನ್ನಡದ ಬೆಳವಣಿಗೆ ಬೇಕಾಗಿದೆ? ಡಬ್ಬಿಂಗ್ ಚಿತ್ರಗಳಲ್ಲಿ ನಾನಾ ಬಗೆಯ ಕನ್ನಡಕ್ಕೆ ಅವಕಾಶವಿಲ್ಲ ಎನ್ನುವುದರ ಅರ್ಥವಾದರೂ ಏನು? ಯಾಕೆ ಅದು ಸಾಧ್ಯವಾಗುವುದಿಲ್ಲಾ? ಯಾಕೆ ತುಟಿಚಲನೆಗಾಗೇ ಡೈಲಾಗ್ ಬರೀಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಇಲ್ಲಾ! ಪ್ರಪಂಚದಲ್ಲಿ ಡಬ್ ಮಾಡುವ ಎಲ್ಲೆಡೆಯೂ ಇರದ ಇಂತಹ ನಿಯಮವನ್ನು ತಡೆಗಾಗಿಯೇ ಬಳಸುತ್ತಿರುವಂತೆ ತೋರುತ್ತದೆ. ವಾಸ್ತವವಾಗಿ ಹಾಗೆ ತುಟಿಚಲನೆಗೆ ಸಂಪೂರ್ಣವಾಗಿ ಹೊಂದಿಸಿ ಡಬ್ ಮಾಡುವುದು ಎಂದಿಗೂ ಎಲ್ಲಿಯೂ ಯಾರಿಗೂ ಸಾಧ್ಯವೇ ಆಗದ ಕ್ರಿಯೆ! ಯಾರಾದರೂ ಇಂಗ್ಲೀಶ್ ಸಿನಿಮಾಗೆ ಕನ್ನಡದ ಡೈಲಾಗ್ ಕೂಡಿಸಿ ಬರೆಯಲು ಸಾಧ್ಯವೇ? ಫ್ರೆಂಚ್ ಸಿನಿಮಾಗೆ  ಜಪಾನೀಸ್ ಭಾಷೆ ಕೂಡಿಸಲು ಸಾಧ್ಯವೇ? ಡಬ್ ಸಿನಿಮಾ ಎಂದರೇ ತುಟಿಚಲನೆ ಹೊಂದಿಕೆಯಾಗಿರುವುದಿಲ್ಲ ಎನ್ನುವುದನ್ನು ನೋಡುಗ ತಿಳಿದೇ ಇರುತ್ತಾನೆ ಮತ್ತು ಈ ಹೊಂದಾಣಿಕೆಯಿಲ್ಲದೆ ಇರುವುದೇ ಅವನು ಡಬ್ಬಿಂಗ್ ಸಿನಿಮಾವನ್ನು ಮೆಚ್ಚದಿರಲು ಕಾರಣವಾಗಬಹುದು ಎಂಬುದನ್ನು ಅದ್ಯಾಕೋ ಚಿತ್ರರಂಗದ ಮಂದಿ ಯೋಚಿಸುವುದಿಲ್ಲ!

ಸಂವಿಧಾನದ ತಪ್ಪು ವ್ಯಾಖ್ಯಾನ

ಇನ್ನು ಬರಗೂರರು ಸಂವಿಧಾನವನ್ನು ಉದ್ಗರಿಸಿ ಡಬ್ಬಿಂಗ್ ನಿಶೇಧವನ್ನು ಎತ್ತಿಹಿಡಿಯುವ ವ್ಯರ್ಥಸಾಹಸಕ್ಕೆ ಮುಂದಾಗಿದ್ದಾರೆ. ಸಂವಿಧಾನದ ನಾಲ್ಕು ವಿಧಿಗಳ ಬಗ್ಗೆ ಮಾತಾಡಿದ್ದಾರೆ. ೧೯ (ಜಿ), ೧೯ (೬), ೨೧, ೨೩ ಮತ್ತು ೨೪ನ್ನು ಎತ್ತಿ ಆಡಿದ್ದಾರೆ. ಡಬ್ಬಿಂಗ್ ನಿಶೇಧವನ್ನು ಸಮರ್ಥಿಸಲು ಸಂವಿಧಾನವನ್ನೂ ಬಿಡದೆ ಬಳಸಿಕೊಂಡಿರುವ ಶ್ರೀಯುತರು ಈ ಭರದಲ್ಲಿ ತಮಗೆ ಬೇಕಾದಂತೆ ಟಿಪ್ಪಣಿ ನೀಡಿದ್ದಾರೆ ಮತ್ತು ಕನ್ನಡನಾಡಲ್ಲಿರುವ ಅಸಾಂವಿಧಾನಿಕ ಡಬ್ಬಿಂಗ್ ತಡೆಯೆನ್ನುವುದು ಎಲ್ಲಾ ರೀತಿಯಲ್ಲೂ ಸಂವಿಧಾನಕ್ಕೆ ವಿರುದ್ಧವಾದುದು ಎನ್ನುವುದನ್ನೇ ಮರೆತಿರುವಂತೆ ನಡೆದುಕೊಳ್ಳುತ್ತಿರುವುದು ಮಾತ್ರಾ ದುರಂತ! ಭಾರತೀಯ ಸಂವಿಧಾನದ ೧೯(ಜಿ) ತನ್ನ ಪ್ರಜೆಗಳಿಗೆ ಯಾವುದೇ ನ್ಯಾಯಬದ್ಧ ವ್ಯಾಪಾರ ಮಾಡುವ ಹಕ್ಕಿದೆ ಎನ್ನುತ್ತದೆ. ಡಬ್ಬಿಂಗ್ ಕಾನೂನುಬದ್ಧವಾದ ಕ್ರಿಯೆಯಾದ್ದರಿಂದ ಇದನ್ನು ಸಂವಿಧಾನ ಎತ್ತಿ ಹಿಡಿಯುತ್ತದೆನ್ನುವ ಬರಗೂರರ ಮಾತುಗಳು ಒಪ್ಪಬೇಕಾದ್ದೇ! ಆದರೆ ಅವರ ಮುಂದಿನ ಮಾತುಗಳನ್ನು ಸಾಣೆ ಹಿಡಿಯಬೇಕಾಗಿದೆ.

೧೯(೬)ರ ಪ್ರಕಾರ ಸರ್ಕಾರಕ್ಕೆ ಯಾವುದನ್ನೇ ನಿಶೇಧಿಸುವ ಹಕ್ಕಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧವಾಗಬೇಕು ಎನ್ನುವ ಅರ್ಥದಲ್ಲಿ ಶ್ರೀಯುತರು ಬರೆದಿದ್ದಾರೆ. ಇಲ್ಲಿ ಸರ್ಕಾರಕ್ಕೆ “ನ್ಯಾಯೋಚಿತ ನಿಶೇಧ” ಹೇರುವ ಅವಕಾಶವಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧ ಮಾಡಬಹುದು ಎಂದಿದ್ದಾರೆ. ಈ ನ್ಯಾಯೋಚಿತ ನಿಶೇಧ ಅನ್ನುವುದರ ವ್ಯಾಖ್ಯಾನವಾದರೂ ಏನು? ಯಾವುದರಿಂದ ಸಮಾಜದ ಸ್ವಾಸ್ಥ್ಯ/ ಜನರ ಆರೋಗ್ಯ/ ಬದುಕು ಹಾನಿಗೊಳಗಾಗುತ್ತೋ ಅಂಥದ್ದನ್ನು ಇದರಡಿಯಲ್ಲಿ ಸರ್ಕಾರ ನಿಶೇಧ ಮಾಡಿರೋದನ್ನು ಕಾಣಬಹುದು. ಒಂದಂಕಿ ಲಾಟರಿ, ಸರಾಯಿ, ಗುಟ್ಕಾ ಮೊದಲಾದವು... ಈ ಪಟ್ಟಿಯಲ್ಲಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಸರ್ಕಾರ ಸಮರ್ಥನೆ ನೀಡಿರುವುದೂ ಕೂಡಾ ಇವು ನಿಯಂತ್ರಿಸಲಾಗದಂತಹ... ಆರೋಗ್ಯಕ್ಕೆ/ ಬದುಕಿಗೆ ಹಾನಿಕರವಾದವು ಎಂದೇ.  ಇಲ್ಲಿ ಡಬ್ಬಿಂಗ್ ಎನ್ನುವುದು ಹೇಗೆ ಹಾನಿಕರ ಎನ್ನುವುದನ್ನು ಇಡೀ ಜಗತ್ತು ಒಪ್ಪುವಂತೆ ವಿವರಿಸದೆ ಸರ್ಕಾರ ಇಂಥಾ ಕ್ರಮಕ್ಕೆ ಮುಂದಾದರೆ ನ್ಯಾಯಾಲಯದಲ್ಲಿ ಚೀಮಾರಿಗೊಳಗಾಗುವುದು ನಿಶ್ಚಿತ.

ಇನ್ನು ಸಂವಿಧಾನದ ೨೩, ೨೪ನೇ ಕಾಲಮ್ಮುಗಳನ್ನು ಸಂಬಂಧವೇ ಇಲ್ಲದಿದ್ದರೂ ಎಳೆದುತಂದಿದ್ದಾರೆ. ೨೩ನೇ ಕಾಲಮ್ಮು ಜೀತಪದ್ದತಿ ಹಾಗೂ ಅಕ್ರಮ ಮಾನವ ಸಾಗಣೆಗಳ ನಿಶೇಧಗಳ ಬಗ್ಗೆ, ಸೇವಾ ಕಾಯ್ದೆಯಾದ ಎಸ್ಮಾ ಬಗ್ಗೆ ಮಾತಾಡಿದೆ.  ೨೪ನೇ ಕಾಲಮ್ಮಿನಲ್ಲಿ ಬಾಲಕಾರ್ಮಿಕ ಪದ್ದತಿ ನಿಶೇಧದ ಬಗ್ಗೆ ಮಾತಾಡಲಾಗಿದೆ. ಇದಕ್ಕೂ ಡಬ್ಬಿಂಗಿಗೂ ಅದೆಲ್ಲಿಂದ ಸಂಬಂಧವಿದೆಯೋ ಬಲ್ಲವರೇ ಹೇಳಬೇಕು.

ಸಿಸಿಐನ ವ್ಯಾಪ್ತಿ ಮತ್ತು ಮನರಂಜನೆ

ಇನ್ನು ಕಡೆಯದಾಗಿ ಭಾರತೀಯ ಸ್ಪರ್ಧಾ ಆಯೋಗದ ಬಗ್ಗೆಯೂ ತಪ್ಪುತಪ್ಪಾದ ಮಾಹಿತಿ ನೀಡಿದ್ದಾರೆ. ಸಿಸಿಐ ಗ್ರಾಹಕ ಹಕ್ಕು ಮತ್ತು ಸರಕುಗಳಿಗೆ ಸಂಬಂಧಿಸಿದ್ದು ಎಂಬುದು ಸರಿಯಲ್ಲಾ. ಮೂಲತಃ ಸಿಸಿಐ ಅಡಿಯಲ್ಲಿ ಮನರಂಜನೆಯೂ ಕೂಡಾ ಬರುತ್ತಿದ್ದು ಜನರಿಂದ ಹಣಪಡೆದು ನೀಡುವ ಯಾವುದೇ ಸೇವೆಯೂ ಕೂಡಾ ಗ್ರಾಹಕ ಸೇವೆಯೇ ಆಗಿದೆ ಎನ್ನುತ್ತಾ ಹಾಗಾಗಿ ಚಲನಚಿತ್ರವೂ ಸೇರಿದಂತೆ ಇಡೀ ಮನೋರಂಜನಾ ವಲಯವೂ ಸಿಸಿಐ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆಂದು ಬರೆಯಲಾಗಿದೆ.

ಸಿಸಿಐ ಕಾಯ್ದೆಯ ೫೪ನೇ ಕಾಲಮ್ಮಿನಲ್ಲಿ ಯಾವುದನ್ನೇ ಆಗಲಿ ಸಿಸಿಐ ವ್ಯಾಪ್ತಿಯಿಂದ ಹೊರಗಿಡುವ ಅಧಿಕಾರ ಕೇಂದ್ರಸರ್ಕಾರಕ್ಕಿದೆ ಎಂದಿರುವ ಶ್ರೀಯುತರು ಅರೆಸತ್ಯವೊಂದನ್ನು ಮಾತ್ರಾ ಮಾತಾಡಿದ್ದಾರೆ. ಮುಂದುವರೆಯುತ್ತಾ ಇದೇ ಕಾಲಮ್ಮಿನಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಕೇಂದ್ರಸರ್ಕಾರ ಇಂಥಾ ಕ್ರಮಕ್ಕೆ ಮುಂದಾಗಬಹುದು ಎಂದೂ ವಿವರಿಸುತ್ತಾ ಸರ್ಕಾರದ ಭದ್ರತೆಗೆ, ಜನತೆಯ ಹಿತಕ್ಕೆ ಧಕ್ಕೆ ತರುವಂತಿದ್ದರೆ, ಅಂತರದೇಶೀಯ ಒಪ್ಪಂದಗಳಿಗೆ ಧಕ್ಕೆ ತರುವಂತಿದ್ದರೆ, ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕಾಗಿ ದುಡಿಯುವ ಯಾವುದೇ ಸಂಸ್ಥೆಯಾಗಿದ್ದರೆ ವಿನಾಯ್ತಿ ನೀಡಬಹುದು.. ಅದೂ ಕೂಡಾ ಸಾರ್ವಭೌಮತ್ವದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿನಾಯ್ತಿ ನೀಡಬಹುದು ಎನ್ನಲಾಗಿದೆ ಅಷ್ಟೇ!


ಇಷ್ಟಕ್ಕೂ ಕೇಂದ್ರವೋ ರಾಜ್ಯವೋ ಮತ್ತೊಂದು ಸರ್ಕಾರ ಡಬ್ಬಿಂಗನ್ನು ನಿಶೇಧ ಮಾಡಿದ್ದ ಪಕ್ಷದಲ್ಲಿ ಇವರಾಡಿದ ಮಾತುಗಳನ್ನು ಒಪ್ಪಬಹುದಾಗಿತ್ತು. ಅಂತಹ ಯಾವ ನಿಶೇಧವೂ ಇಲ್ಲದಿದ್ದರೂ ಚಿತ್ರರಂಗದ ದೊಣೇನಾಯಕರ ಪರ ವಹಿಸಿರುವುದು ಅಚ್ಚರಿಯೆನ್ನಿಸುತ್ತದೆ. ಒಟ್ಟಾರೆ ಶತಾಯ ಗತಾಯ ಡಬ್ಬಿಂಗ್ ತಡೆಯಲೇ ಬೇಕೆನ್ನುವ ಉಮ್ಮೇದಿನಲ್ಲಿ ಬರಗೂರು ರಾಮಚಂದ್ರಪ್ಪನವರಂಥಾ ಹಿರಿಯರೂ ಕೂಡಾ ಈ ದೇಶದ ಸಂವಿಧಾನ, ಜನಸಾಮಾನ್ಯರ ಆಯ್ಕೆಸ್ವಾತಂತ್ರ್ಯ, ಸ್ಪರ್ಧೆಗಳ ಮೂಲ ಆಶಯಗಳನ್ನೇ ಮರೆತವರಂತೆ ನಡೆದುಕೊಂಡಿರುವುದು ಮಾತ್ರಾ ವಿಷಾದನೀಯ.

ಕಿರಣ್ ಬಾಟ್ನಿಯವರ ಹೊಸ ಇಂಗ್ಲೀಶ್ ಹೊತ್ತಗೆ ಮಾರುಕಟ್ಟೆಗೆ!

( ಚಿತ್ರಕೃಪೆ: http://kiranbatni.com/)

ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಬ್ಲಾಗನ್ನು ಆರಂಭಿಸಿ, ಕನ್ನಡ ಅಂತರ್ಜಾಲ ತಾಣದಲ್ಲೊಂದು ಹೊಸಅಲೆಗೆ ಕಾರಣರಾದ, ಹೊಸಪೀಳಿಗೆಯ ಯುವ ಚಿಂತಕರಾದ ಶ್ರೀ ಕಿರಣ್ ಬಾಟ್ನಿಯವರು ಇಂಗ್ಲೀಷಿನಲ್ಲಿ ಬರೆದಿರುವ ಹೊಸ ಹೊತ್ತಗೆ "ದಿ ಪಿರಮಿಡ್ ಆಫ಼್ ಕರಪ್ಶನ್" ಬಿಡುಗಡೆಗೆ ಸಿದ್ಧವಾಗಿದೆ. ಇದೇ ಫ಼ೆಬ್ರವರಿ ೧೫ರಂದು ಬೆಳಗ್ಗೆ ೯:೦೦ಗಂಟೆಗೆ ಅಂತರ್ಜಾಲದ ಮೂಲಕವೂ ಪುಸ್ತಕ ಬಿಡುಗಡೆಯನ್ನು ಹೊಸಬಗೆಯಲ್ಲಿ ಆಚರಿಸಲಾಗುತ್ತಿದೆ.

ಕಿರಣ್ ಬಾಟ್ನಿ ಮತ್ತು ನಾಡಪರ ಚಿಂತನೆ

ಮೂಲತಃ ಮೈಸೂರಿನವರಾದ ಕಿರಣ್, ದೆಹಲಿಯ ಐಐಟಿಯಲ್ಲಿ ಎಂ.ಟೆಕ್ ಪದವೀಧರರು. ಇಪ್ಪತ್ತೈದಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಟ ನಡೆಸಿರುವ ಇವರು ಸದಾ ತಮ್ಮ ಹೊಸತನದ ಚಿಂತನೆಗಳಿಂದ ಜನಮನ ಸೆಳೆದಿದ್ದು, ಅಧ್ಯಾತ್ಮ ಮತ್ತು ಲೌಕಿಕ ಬದುಕಿನ ದಿಟಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನವನ್ನೂ ನಡೆಸುತ್ತಿರುವ ಕಿರಣ್ ಬಾಟ್ನಿಯವರು ನಾಡು, ನುಡಿ, ಏಳಿಗೆ, ಏರ್ಪಾಟುಗಳ ಬಗ್ಗೆ ಸಾಕಷ್ಟು ಮಹತ್ವದ ಬರಹಗಳನ್ನು ಬರೆದಿದ್ದಾರೆ. ಇಂಗ್ಲೀಷಿನಲ್ಲಿ "ಕರ್ನಾಟಿಕ್" ಎಂಬ ಬ್ಲಾಗನ್ನು ನಡೆಸುತ್ತಿರುವ ಕಿರಣ್, ಹೊನಲು ಹೆಸರಿನ ಕನ್ನಡದ ವಿಶಿಷ್ಟವಾದ ತಾಣವನ್ನು ನಡೆಸುತ್ತಿದ್ದು ಇಲ್ಲಿ ಕನ್ನಡದಲ್ಲಿಯೇ ಅರಿಮೆಯ ಬರಹಗಳನ್ನು ಬರೆಯುವ ಬರಹಗಾರರ ದಂಡೊಂದು ತಯಾರಾಗುತ್ತಿದೆ. ಇದೀಗ ಕಿರಣ್ ಬಾಟ್ನಿ ಬರೆದಿರುವ "ಪಿರಮಿಡ್ ಆಫ಼್ ಕರಪ್ಶನ್" ಹೊತ್ತಗೆ ಮಾರುಕಟ್ಟೆಗೆ ಬರುತ್ತಿದ್ದು ಇದು ಇವರ ಮೊದಲ ಇಂಗ್ಲೀಷ್ ಹೊತ್ತಗೆಯಾಗಿದೆ.

ಕನ್ನಡದಲ್ಲಿ "ಮಂದಿಯಾಳ್ವಿಕೆಯಲ್ಲಿ ಕನ್ನಡಿಗ" ಹೊತ್ತಗೆಯನ್ನು ಬರೆದಿರುವ ಕಿರಣ್, ಡಾ ಡಿ ಎನ್ ಶಂಕರಬಟ್ಟರ "ಕನ್ನಡ ನುಡಿಯರಿಮೆಯ ಇಣುಕುನೋಟ" ಹೊತ್ತಗೆಯ ಸಂಪಾದಕರೂ ಆಗಿದ್ದಾರೆ. ಇಂಗ್ಲೀಷಿನಲ್ಲಿ ಬರೆಯುವ ಮೂಲಕ ತಮ್ಮ ನಿಲುವುಗಳನ್ನು ಇಂಗ್ಲೀಷ್ ಓದಬಲ್ಲ ಕನ್ನಡದ ಒಂದು ವರ್ಗವನ್ನು ಮಾತ್ರವಲ್ಲದೆ, ಕನ್ನಡೇತರರನ್ನೂ ತಲುಪುವ ಉದ್ದೇಶವನ್ನು ಶ್ರೀ ಕಿರಣ್ ಬಾಟ್ನಿ ಹೊಂದಿದ್ದಾರೆ. ಈ ಹೊತ್ತಗೆಯನ್ನು "ಅಂತರ್ಜಾಲ"ದ ಮೂಲಕ ಕೊಳ್ಳಬಹುದಾಗಿದೆ. ಭ್ರಷ್ಟಾಚಾರದ ಬಗ್ಗೆ ಹೊಸನೋಟವನ್ನು ಬೀರುವ ಸದರಿ ಹೊತ್ತಗೆಯು ಭ್ರಷ್ಟಾಚಾರದ ಬಗ್ಗೆ ಓದುಗರಿಗೆ ಈಗಾಗಲೇ ಇರಬಹುದಾದ ನಂಬಿಕೆಗಳ ಬುಡವನ್ನೇ ಅಲುಗಿಸಬಲ್ಲದಾಗಿದೆ.

ಈ ಹೊತ್ತಗೆಯನ್ನು ಮುಂದಾಗಿ ಕೊಳ್ಳಲು ಈ ತಾಣಕ್ಕೆ ಭೇಟಿ ನೀಡಿ.

ಮರೆಯಾದ ಯಶವಂತ ಹಳಿಬಂಡಿ!

(ಚಿತ್ರಕೃಪೆ: ಕಣಜ)

ಹಿರಿಯ ಹಾಡುಗಾರರಾದ ಶ್ರೀ ಯಶವಂತ ಹಳಿಬಂಡಿಯವರು ಇಂದು ತೀರಿಕೊಂಡಿದ್ದಾರೆ. ಅರವತ್ತೆರಡು ವರ್ಷ ವಯಸ್ಸಿನ ಹಳಿಬಂಡಿಯವರು "ಪಾತರಗಿತ್ತಿ ಪಕ್ಕಾ, ನೋಡಿದ್ಯೇನೇ ಅಕ್ಕಾ" "ಹೋಗೂ ಮನಸೇ ಹೋಗು, ನಲ್ಲೇ ಇರುವಲ್ಲಿ ಹೋಗು" "ನಾನು ಚಿಕ್ಕವನಾಗಿದ್ದಾಗ ಅಪ್ಪಾ ಹೇಳುತ್ತಿದ್ದರೂ..." ಮೊದಲಾದ ಹಾಡುಗಳಿಂದ ಕನ್ನಡನಾಡಿನ ಮನೆ ಮನೆಯನ್ನು ತಲುಪಿದ್ದವರು. ಕನ್ನಡ ಭಾವಗೀತೆಯ ಕ್ಷೇತ್ರ ಇವರ ನಿಧನದಿಂದ ಸೊರಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬನವಾಸಿ ಬಳಗ ಕೋರುತ್ತದೆ.

"ವ್ಯಾಪಾರಿ" ನಿರ್ಮಾಪಕ ಮತ್ತು "ಗ್ರಾಹಕ" ಕಲಾರಸಿಕ!

(ಚಿತ್ರಕೃಪೆ: ಪ್ರಜಾವಾಣಿ)
ಡಬ್ಬಿಂಗ್ ತಡೆಯುತ್ತೇವೆ ಎನ್ನುವ ಕೂಗು ತಾರಕಕ್ಕೇರಿರುವ ಈ ಹೊತ್ತಿನಲ್ಲೇ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕನ್ನಡ ಚಿತ್ರನಿರ್ಮಾಪಕರಲ್ಲಿ ಹಲವರು ನಡೆಸಿದ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು. ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಈ ವರದಿಯನ್ನು ನೋಡಿದರೆ ನಿರ್ಮಾಪಕರುಗಳು ಡಬ್ಬಿಂಗ್ ಪರವಾಗಿದ್ದಾರೆ ಎಂಬುದು ಅರಿವಾಗುತ್ತದೆ. ಆದರೆ ಇದಕ್ಕೂ ಮಿಗಿಲಾದದ್ದೇನೆಂದರೆ ಸಿನಿಮಾ ಕಲೆಯಷ್ಟೇ ಅಲ್ಲಾ, ಅದು ವ್ಯಾಪಾರ ಎನ್ನುವುದು ಮನದಟ್ಟಾಗುತ್ತದೆ.

ನಿರ್ಮಾಪಕ ಅನ್ನದಾತನೇ? ಪ್ರೇಕ್ಷಕ ಗ್ರಾಹಕನೇ?

ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್ ಅವರು ನಿರ್ಮಾಪಕರನ್ನು "ಅನ್ನದಾತ"ರೆಂದೂ ಪ್ರೇಕ್ಷಕರನ್ನು "ಅಭಿಮಾನಿ ದೇವರು"ಗಳೆಂದೂ ಕರೆಯುತ್ತಿದ್ದುದನ್ನು ಎಲ್ಲರೂ ಬಲ್ಲೆವು. ಆದರೆ ಚಿತ್ರರಂಗದ ಕೆಲಮಂದಿ "ಸಿನಿಮಾ ಒಂದು ಕಲೆ, ಇದು ಉದ್ಯಮವಲ್ಲ" "ಪ್ರೇಕ್ಷಕ ಕಲಾರಸಿಕ, ಗ್ರಾಹಕನಲ್ಲ" ಎಂದು ಆಡುವ ಮಾತುಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ವಾಸ್ತವವಾಗಿ ಮೇಲಿನ ಸುದ್ದಿ ಅದನ್ನು ಅಲ್ಲಗಳೆಯುತ್ತಿದೆ. ಸಿನಿಮಾ ಕಲೆಯೂ ಹೌದು, ಪ್ರೇಕ್ಷಕ ರಸಿಕನೂ ಹೌದು. ಆದರೆ ಅದೇ ಹೊತ್ತಿನಲ್ಲಿ ಸಿನಿಮಾ ಉದ್ಯಮವೂ ಆಗಿದೆ. ಪ್ರೇಕ್ಷಕ ಗ್ರಾಹಕನೂ ಆಗಿದ್ದಾನೆ ಎಂಬುದನ್ನು ಅಲ್ಲಗಳೇಯಲಾಗದು.

ಡಬ್ಬಿಂಗ್ ಬಂದೊಡನೆ ಕನ್ನಡ ಚಿತ್ರರಂಗ ಉದ್ಧಾರವಾಗಿಬಿಡುತ್ತದೆ ಎಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಸಿನಿಮಾ ರಂಗ ಅಳಿದು ಹೋಗುತ್ತದೆ ಎನ್ನಲೂ ಆಗದು. ಚಿತ್ರವೊಂದು ಎಷ್ಟೇ ಕಲಾತ್ಮಕವಾಗಿದೆ ಎಂದರೂ ಅಲ್ಲಿ "ಎಕನಾಮಿಕ್ಸ್" (ಲಾಭ ನಷ್ಟದ ಲೆಕ್ಕಾಚಾರ) ಇದ್ದೇ ಇರುತ್ತದೆ. ಯಾಕೆಂದರೆ ಯಾವ ಸಿನಿಮವನ್ನೂ ಪುಗಸಟ್ಟೆ ತೆಗೆಯಲು ಸಾಧ್ಯವಾಗದು. ಅದಕ್ಕೆ ಹಣ ಬೇಕೇ ಬೇಕು ಮತ್ತು ಹಾಗೆ ತೊಡಗಿಸಿದವನು ಹಾಕಿದ್ದನ್ನು ಕಳೆದುಕೊಳ್ಳಲು ಎಂದೂ ಸಿದ್ಧನಾಗನು. ಹೀಗಿದ್ದಾಗ ಸಹಜವಾಗೇ ಬಂಡವಾಳ ಹಾಕುವವನು ಸಿನಿಮಾ ತಯಾರಾದ ನಂತರದ ಲಾಭ-ನಷ್ಟವನ್ನೂ ಎಣಿಕೆ ಹಾಕಲೇಬೇಕಾಗುತ್ತದೆ. ಆದರೆ ನಿರ್ದೇಶಕ, ತಂತ್ರಜ್ಞರು, ನಟರೂ ಸೇರಿದಂತೆ ಎಲ್ಲಾ ಕಲಾವಿದರಿಗೂ ತಮ್ಮ ಸಂಭಾವನೆ ಸಿಕ್ಕರೆ ಮುಗಿಯಿತು. ಇದನ್ನೆಲ್ಲಾ ನೀಡುವ ನಿರ್ಮಾಪಕನೇ ಚಿತ್ರರಂಗದ ಎಲ್ಲಾ ಕಾರ್ಮಿಕರ ಅನ್ನದಾತ! ನಿರ್ಮಾಪಕರನ್ನು ಹೊರತುಪಡಿಸಿ ಉಳಿದವರಿಗೆ ಒಂದು ಸಿನಿಮಾ ತಯಾರಾದ ನಂತರ ಅದು ಬಿಡುಗಡೆಯಾಗುತ್ತಾ, ಬಿಡುಗಡೆಯಾದರೂ ಓಡುತ್ತಾ, ದುಡ್ಡು ಮಾಡುತ್ತಾ ಅನ್ನೋದೆಲ್ಲಾ ಮಹತ್ವದ್ದಲ್ಲವೇನೋ ಎನ್ನಿಸುತ್ತದೆ. "ವರ್ಷವೊಂದಕ್ಕೆ ನೂರಿಪ್ಪತ್ತು ಸಿನಿಮಾ ಬರುತ್ತೆ, ಅದರಲ್ಲಿ ಐದೋ ಆರೋ ಮಾತ್ರಾ ಲಾಭ ತರುತ್ತೆ ಎಂದು ಒಪ್ಪಿಕೊಳ್ಳುತ್ತಲೇ ನಮ್ಮ ಕಾರ್ಮಿಕರಿಗೆ ೧೨೦ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ, ಅದರಿಂದ ಹೊಟ್ಟೆ ಹೊರೆಯಬೇಕು, ಡಬ್ಬಿಂಗ್ ಬಂದರೆ ಅದು ನಿಲ್ಲುತ್ತದೆ" ಎಂದು ಇವರಾಡುವ ಮಾತಿನ ಹಿಂದಿರುವ ಗೂಡಾರ್ಥವೇನು? ನಷ್ಟವೆಲ್ಲಾ ನಿರ್ಮಾಪಕರದ್ದಾಗಲಿ, ನಮ್ಮ ಸಂಭಾವನೆ ನಮಗೆ ಸಿಗುತ್ತಿರಲಿ ಎಂದಲ್ಲವೇ? ಹೀಗಿದ್ದಾಗ ನಿರ್ಮಾಪಕರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸಹಜವೇ ಅಲ್ಲವೇ? ಬಂಡವಾಳವನ್ನು ಹೂಡುವುದಷ್ಟೇ ಅಲ್ಲದೆ ಅತಿ ಹೆಚ್ಚು ಮಾರುಕಟ್ಟೆ ಗಂಡಾಂತರಕ್ಕೆ(ರಿಸ್ಕಿಗೆ) ತನ್ನನ್ನು ತಾನು ಒಡ್ಡಿಕೊಳ್ಳುವ ನಿರ್ಮಾಪಕನಿಗೇ ಸಿನಿಮಾ ಮಾರುಕಟ್ಟೆಯ ಬಗ್ಗೆ ಮಾತಾಡುವ, ತೀರ್ಮಾನಿಸುವ ಹಕ್ಕಿರುವುದಲ್ಲವೇ? ವಾಸ್ತವ ಹೀಗಿರುವಾಗ ಕನ್ನಡ ಚಿತ್ರರಂಗದ ಮಂದಿ ಡಬ್ಬಿಂಗ್ ಬೇಕೆನ್ನುವ ನಿರ್ಮಾಪಕರನ್ನು "ಕನ್ನಡ ದ್ರೋಹಿ"ಗಳ ಪಟ್ಟಿಗೆ ಸೇರಿಸಲಾರರು ಎಂದುಕೊಳ್ಳೋಣ.

ಇನ್ನು ಸಿನಿಮಾ ಎಷ್ಟೇ ಕಲಾತ್ಮಕವಾದರೂ ಅದನ್ನು ತನ್ನ ದುಡ್ಡು ಮತ್ತು ಸಮಯ ಖರ್ಚು ಮಾಡೇ ನೋಡುವ ಪ್ರೇಕ್ಷಕನು ಕಲಾರಸಿಕನೇ ಆಗಿದ್ದರೂ ಜೊತೆಯಲ್ಲೇ ಗ್ರಾಹಕನೂ ಆಗಿರುತ್ತಾನೆ. ಇಲ್ಲಿ ಸಾಮಾನ್ಯ ಗ್ರಾಹಕನಿಗೆ ಇರುವ ಎಲ್ಲಾ "ಹಕ್ಕುಗಳು" ಅವನಿಗೆ ಇರಬೇಕೆನ್ನುವುದಕ್ಕಿಂತಲೂ "ಗೌರವ" ಇರಬೇಕೆನ್ನುವುದು ಮುಖ್ಯವಾದುದಾಗಿದೆ. ಇಡೀ ಡಬ್ಬಿಂಗ್ ಚರ್ಚೆಯಲ್ಲಿ ಡಬ್ಬಿಂಗ್ ತಡೆಯುವ ಮಾತಾಡುತ್ತಿರುವವರು ಒಮ್ಮೆಯಾದರೂ ಗ್ರಾಹಕನ ಈ ಬೇಕು ಬೇಡಗಳಿಗೆ ಸ್ಪಂದಿಸಿದ್ದಾರೆಯೇ? ಇವರು "ನಾವೆಷ್ಟೊಂದು ಅದ್ಭುತ ಸಿನಿಮಾಗಳನ್ನು ತೆಗೆದಿದ್ದೇವೆ, ಕನ್ನಡಿಗರು ಅವನ್ನು ನೋಡಲ್ಲಾ, ಅವರಿಗೆ ಬೇರೆ ಭಾಷೇದೇ ಬೇಕು" ಎಂದು ದೂರಲು ಮಾತ್ರಾ ಪ್ರೇಕ್ಷಕ ಬಳಕೆಯಾಗುತ್ತಾನೆ! ಸತ್ಯಮೇವ ಜಯತೇ ಬೇಕೆಂದರೆ ಬದುಕು ಜಟಕಾ ಬಂಡಿ ನೋಡಿ ಎನ್ನುವ ಉದ್ಧಟತನ ಇವರದ್ದು! ಈ ಮಂದಿ ನಮಗೇನು ಬೇಕು ಬೇಡ ಎಂಬುದನ್ನು ತೀರ್ಮಾನಿಸುವ ದೊಣೆನಾಯಕರಾಗಿಬಿಡುತ್ತಾರೆ! ಇದು ಬಿಟ್ಟು ಇನ್ನುಳಿದಂತೆ ಗ್ರಾಹಕನ ಯಾವುದೇ ಬೇಕು ಬೇಡಗಳಿಗೆ ಇವರಿಂದ ಸ್ಪಂದನೆಯೂ ಇಲ್ಲಾ, ಬೆಲೆಯೂ ಇಲ್ಲಾ. ಹಾಗೆ ಗ್ರಾಹಕ, ಇವರದೇ ಭಾಷೆಯಲ್ಲಿ ಪ್ರೇಕ್ಷಕ, ಕಲಾರಸಿಕನ ಬಗ್ಗೆ ಕಿಂಚಿತ್ತದರೂ ಗೌರವವಿದ್ದಿದ್ದರೆ ಅಷ್ಟೊಂದು ಮಂದಿ ಬೇಕು ಬೇಕು ಎನ್ನುತ್ತಿದ್ದರೂ... ಮೂರೇ ದಿನದಲ್ಲಿ ಮೂವತ್ತು ಸಾವಿರ ಮಂದಿ ಅಂತರ್ಜಾಲ ತಾಣದಲ್ಲಿಯೇ ನೋಡಿ ತಣಿಯುತ್ತಿದ್ದುದನ್ನು ಸಹಿಸದೇ "ಸತ್ಯಮೇವ ಜಯತೇ" ಧಾರಾವಾಹಿಯ ಕನ್ನಡ ಅವತರಣಿಕೆಯನ್ನು ತೆಗೆಸಿ ಹಾಕುತ್ತಿರಲಿಲ್ಲಾ!! (ಅಯ್ಯೋ, ಅದು ನಾವು ತೆಗೆಸಿದ್ದಲ್ಲಾ, ಅವರೇ ತೆಗೆದದ್ದು ಎನ್ನುವ ಗೋಸುಂಬೆ ಮಾತುಗಳನ್ನು ಇನ್ನು ನಿರೀಕ್ಷಿಸಬಹುದು!) ಹೀಗಿದ್ದಾಗ ಚಲನಚಿತ್ರವನ್ನು ನೋಡುವವನೊಬ್ಬ ತನ್ನ ಬೇಕು ಬೇಡಗಳ ಹಕ್ಕನ್ನು ಗ್ರಾಹಕನಾಗಿ ಚಲಾಯಿಸದೇ ಇರುತ್ತಾನೆಯೇ? ತೀರಾ ಸಾರಾಸಗಟು ನಿಶೇಧ ಎನ್ನುತ್ತಾ ನೋಡುಗನ ಅವಕಾಶಗಳ ಬಾಗಿಲುಗಳನ್ನು ಮುಚ್ಚಿದರೆ ಅವನಾದರೋ ಏನು ತಾನೇ ಮಾಡಬಲ್ಲ? ಇರುವ ಕಾನೂನಿನ ಎಲ್ಲ ಅವಕಾಶಗಳನ್ನು ಬಳಸಿ ಕೊಳ್ಳುವುದು ಸಹಜ!

ಇರಲಿ, ನಿರ್ಮಾಪಕ ವ್ಯಾಪಾರಿಯೋ ಅಲ್ಲವೋ, ಸಿನಿಮಾ ಸರಕೋ ಅಲ್ಲವೋ ಬೇರೆಯದೇ ಮಾತು. ಆದರೆ ಸಿನಿಮಾವನ್ನು ದುಡ್ಡುಕೊಟ್ಟು ನೋಡುವ ಪ್ರೇಕ್ಷಕನೊಬ್ಬನಿಗೆ ತನಗೆ ಬೇಕಾದುದನ್ನು ನೋಡುವ, ಮೆಚ್ಚುವ, ತಿರಸ್ಕರಿಸುವ ಆಯ್ಕೆ ಸ್ವಾತಂತ್ರ್ಯವಿರುವುದನ್ನಾದರೂ ಚಿತ್ರರಂಗ ಗೌರವಿಸಬೇಕಾಗುತ್ತದೆ. ಇದನ್ನು ಕಡೆಗಣಿಸಿದಾಗ ಕಾನೂನು ಈ ಹಕ್ಕನ್ನು ಎತ್ತಿಹಿಡಿಯುವುದು ಮಾತ್ರಾ ದಿಟ! ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯಷ್ಟೇ ಅಲ್ಲಾ, ದೇಶದ ಪ್ರಧಾನಿಯೇ ಮಧ್ಯಸ್ತಿಕೆಗಿಳಿದರೂ ಆಗಬೇಕಾದ್ದೂ, ಆಗುವುದೂ ಇದೇ!

ಡಬ್ಬಿಂಗ್ ಬೇಕೆನ್ನೋದು ಬರೀ ಹಕ್ಕಲ್ಲಾ!


ಕನ್ನಡಕ್ಕೆ ಡಬ್ಬಿಂಗ್ ಬರಲು ಬಿಡದೇ ತಡೆಯುತ್ತಿರುವ ಹತೋಟಿಕೂಟವೊಂದು ಇದೆ ಎನ್ನುವುದು ಈ ಬಾರಿ ಅನುಮಾನಕ್ಕೆಡೆಯಿರದ ರೀತಿಯಲ್ಲಿ ಸಾಬೀತಾಗುತ್ತಿದೆ. ಕನ್ನಡ ಗ್ರಾಹಕ ಕೂಟವು ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ - ಕಾಂಪಿಟೇಶನ್ ಕಮಿಶನ್ ಆಫ಼್ ಇಂಡಿಯಾ) ಸಲ್ಲಿಸಿದ್ದ ದೂರನ್ನು ಆಧರಿಸಿ ಆಯೋಗದ ಶೋಧನಾ ಸಮಿತಿಯು ಸಿದ್ಧಪಡಿಸಿದೆಯೆನ್ನಲಾದ ವರದಿಯೊಂದು ಅದು ಹೇಗೋ ಮಾಧ್ಯಮಗಳಿಗೆ ಸೋರಿ ಹೋಗಿ ಪ್ರಕಟವಾದ ಕ್ಷಣದಿಂದಲೇ ಕಲ್ಲುಬಿದ್ದ ಜೇನುಗೂಡಿನಂತೆ ಇಡೀ ಹತೋಟಿ ಕೂಟವು ಚಡಪಡಿಸಲು ಶುರುಮಾಡಿ ತಾನಾಗೇ ಹೊರಬಂದು ತನ್ನ ಅಸ್ತಿತ್ವವನ್ನು ಸಾರುತ್ತಿರುವುದು ಕಾಣುತ್ತಿದೆ. ಇದನ್ನು ಕಂಡಾಗ ಕನ್ನಡದಲ್ಲಿರುವ ಅಘೋಶಿತ ಡಬ್ಬಿಂಗ್ ನಿಶೇಧ ಇನ್ನಿಲ್ಲವಾಗುವ ಗಳಿಗೆ ಹತ್ತಿರವಾದಂತೆ ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತಾದ ಕೆಲ ವಿಶಯಗಳತ್ತ ಕಣ್ಣು ಹಾಯಿಸೋಣ.

೬೦ರ ದಶಕದ ಐತಿಹಾಸಿಕ ನಿಶೇಧದಿಂದೀಚೆಗೆ...

ಕನ್ನಡ ಚಿತ್ರರಂಗ ಮದ್ರಾಸಿನ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ ಡಬ್ಬಿಂಗಿನಿಂದಾಗಿ ಕನ್ನಡದಲ್ಲಿಯೇ ಚಿತ್ರ ತೆಗೆಯುವುದು ಕಡಿಮೆಯಾಗಿ ಕನ್ನಡ ಕಲಾವಿದರಿಗೆ, ಚಿತ್ರೋದ್ಯಮಿಗಳಿಗೆ ಅವಕಾಶ ಇಲ್ಲವಾಗುತ್ತಿದೆ ಎಂದು ಡಬ್ಬಿಂಗ್ ವಿರೋಧಿ ಹೋರಾಟವೊಂದು ನಡೆದು ನಮ್ಮ ನಾಡಲ್ಲಿ ಕನ್ನಡಕ್ಕೆ ಡಬ್ ಆದ ಪರಭಾಷಾ ಚಿತ್ರಗಳು ಬಿಡುಗಡೆಯಾಗುವುದು ನಿಂತಿತು. ಆಗಲೂ ಇದು ಸಂವಿಧಾನ, ನೆಲದ ಕಾನೂನುಗಳಿಗೆ ವಿರುದ್ಧವಾಗಿಯೇ ಇತ್ತು. ಬಹುಷಃ, ಈ ಏರ್ಪಾಟಿನಿಂದಾಗಿ ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನು ಆ ಭಾಷೆಗಳು ಬಾರದು ಎನ್ನುವ ಕಾರಣಕ್ಕೆ ನೋಡದೆ (ಆ  ಮೂಲಕ ಅವುಗಳಿಗೆ ಯಶಸ್ಸು ತಂದುಕೊಡದೆ) ಕನ್ನಡ ಚಿತ್ರಗಳನ್ನು ಮಾತ್ರಾ ನೋಡಿ ಮೆಚ್ಚಿ ಗೆಲ್ಲಿಸುವ ಹಂತಕ್ಕೆ ಬಂದರೇನೋ ಗೊತ್ತಿಲ್ಲಾ!

ನಿಜವಾದ ಭಯ ಏನೆಂದರೆ...

ಆದರೆ ನಿಧಾನವಾಗಿ ಪರಭಾಷೆಯ ಚಿತ್ರಗಳು ಪ್ರತಿಊರಿನಲ್ಲೂ ಬೆಳಗಿನ ಆಟ, ಒಂದು ಟಾಕೀಸಿನಿಂದ ಶುರುವಾಗಿ ಇದೀಗ ಕನ್ನಡನಾಡಲ್ಲೇ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತೊಡಗಿವೆ. ಪ್ರತಿಯೊಂದು ಹಬ್ಬದ ಸಂದರ್ಭದಲ್ಲಿಯೂ ದೊಡ್ಡ ಕನ್ನಡ ಚಿತ್ರಗಳು ನಮ್ಮ ನಾಡಲ್ಲಿ ಬಿಡುಗಡೆಯಾಗುತ್ತಿದ್ದ ದಿನಗಳು ಇತ್ತೀಚೆಗೆ ಮರೆಯಾಗಿ ಹಬ್ಬದ ಸಂದರ್ಭದಲ್ಲೂ ಪರಭಾಷೆಯ ದೊಡ್ಡಚಿತ್ರ ಬರುತ್ತಿದೆ ಎಂದು ಬೆದರಿ ಕನ್ನಡ ಚಿತ್ರಗಳು ಬಿಡುಗಡೆ ಆಗುವುದೇ ನಿಂತು ಹೋಗಿದೆ. ಇದು ಚಲನಚಿತ್ರಗಳಿಗೆ ಸಂಬಂಧಿಸಿದಂತಾದರೆ ದೂರದರ್ಶನಗಳದ್ದು ಮತ್ತೊಂದು ಕಥೆ! ಪ್ರತಿಮನೆಯಲ್ಲೂ ಮಕ್ಕಳು ನೋಡುವ ಕಾರ್ಟೂನ್ ಸಿನಿಮಾಗಳು, ಡಿಸ್ಕವರಿ, ಹಿಸ್ಟರಿ, ಅನಿಮಲ್ ಪ್ಲಾನೆಟ್ ಥರದ ಅನೇಕ ಚಾನೆಲ್ಲುಗಳಲ್ಲಿ ಕನ್ನಡವಿರದೆ, ಕನ್ನಡದ ಮಕ್ಕಳು ಚಿಕ್ಕಂದಿನಿಂದಲೇ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸುವ ಪರಿಸ್ಥಿತಿ ಹುಟ್ಟಿಕೊಂಡಿದೆ. ಹೀಗೆ ಬಾಲ್ಯದಿಂದಲೇ ಮನರಂಜನೆಯ ವಿಷಯದಲ್ಲಿ ಪರಭಾಷೆಗೆ ಅಂಟಿಕೊಳ್ಳುವ ಮಕ್ಕಳು ನಾಳೆ ಕನ್ನಡ ಚಿತ್ರಗಳನ್ನು ನೋಡುವುರಾದರೋ ಹೇಗೇ? ಡಬ್ಬಿಂಗ್ ನಿಶೇಧ ಎನ್ನುವುದು ಇಂದು ಕನ್ನಡಿಗರನ್ನು ಕನ್ನಡದಿಂದ ದೂರ ಮಾಡುವ ಕ್ರಮವಾಗಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ಇಂದಿನ ಬೆಳವಣಿಗೆಗೆ ಕಾರಣ...

ಇಷ್ಟಕ್ಕೂ ನಮ್ಮ ವಿರೋಧವಿರುವುದು ಸಾರಾಸಗಟು ನಿಶೇಧಕ್ಕೆ ಮಾತ್ರವೇ! ಆದರೆ ಖಾಸಗಿ ಟಿ.ವಿ ವಾಹಿನಿಯವರು ಸತ್ಯಮೇವ ಜಯತೇ ಎಂಬ ಹಿಂದೀ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಮುಂದಾದಾಗ, ಚಿತ್ರೋದ್ಯಮದ ಕೆಲಗಣ್ಯರು ಸಾರ್ವಜನಿಕವಾಗಿ "ಸೌಹಾರ್ದತೆ"ಯಿಂದ ಮಾಲೀಕರೇ ಒಪ್ಪಿ ಹಿಂತೆಗೆದೆರೆನ್ನುತ್ತಾ ಕನ್ನಡ ಕಾರ್ಯಕ್ರಮವನ್ನು ಪ್ರಸಾರ ಮಾಡುವುದನ್ನು ತಡೆಹಿಡಿದದ್ದಲ್ಲದೆ... ವಾಹಿನಿಯವರು ವೆಬ್‌ಕ್ಯಾಸ್ಟ್ ಮಾಡಿದ್ದಕ್ಕೂ ಕತ್ತರಿ ಹಾಕಿಸಿದ್ದರಿಂದಾಗಿ ಬೇರೆ ದಾರಿಯಿರದ ನೋಡುಗರು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದರಿಂದಾಗಿ ಭಾರತೀಯ ಸ್ಪರ್ಧಾ ಆಯೋಗ(ಸಿ.ಸಿ.ಐ)ಕ್ಕೆ ದೂರು ಸಲ್ಲಿಸಲಾಯಿತು. ಸದರಿ ದೂರಿನ ತನಿಖೆಯನ್ನು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದ ಸಮಿತಿಗೆ ಸಿ.ಸಿ.ಐ ಒಪ್ಪಿಸಿತು. ಈ ಸಮಿತಿಯ ವರದಿಯೇ ಇದೀಗ ಮಾಧ್ಯಮಗಳಿಗೆ ಸೋರಿ ಹೋಗಿ ಊರೆಲ್ಲಾ ಢಾಣಾಡಂಗೂರವಾಗಿರುವುದು! ಈ ವರದಿ ಪತ್ರಿಕೆಯಲ್ಲಿ ಪ್ರಕಟವಾದದ್ದೇ ತಡ ಡಬ್ಬಿಂಗ್ ವಿರೋಧಿ ಹೋರಾಟವನ್ನು ನಡೆಸುವುದಾಗಿ ಚಿತ್ರರಂಗ ಸಾರಿತು! ಅಲ್ಲೂ ಪರ ವಿರೋಧದ ವಾಗ್ವಾದಗಳು ನಡೆದವು. ಡಬ್ಬಿಂಗ್ ನಿಶೇಧ ಕಾನೂನುಬಾಹಿರ ಎನ್ನುವುದನ್ನು ಒಪ್ಪದ ಕೆಲವರಂತೂ ಸಿಸಿಐ ಅಸ್ತಿತ್ವವನ್ನೇ ಪ್ರಶ್ನಿಸಿದರು! ವಾಸ್ತವವಾಗಿ ನ್ಯಾಯಾಲಯವೊಂದು ನೀಡುವ ತೀರ್ಪು ಸಮ್ಮತವಲ್ಲದಿದ್ದರೆ ಮೇಲಿನ ನ್ಯಾಯಾಲಯಕ್ಕೆ ಹೋಗಬೇಕಲ್ಲದೇ ನ್ಯಾಯಾಲಯದ ಅಸ್ತಿತ್ವವನ್ನೇ ಪ್ರಶ್ನೆ ಮಾಡೊದು ಹತಾಶೆಯ ಪರಮಾವಧಿ ಎನ್ನಿಸುತ್ತದೆ! ಹಾಸ್ಯಾಸ್ಪದವಾಗುತ್ತದೆ!

ವಿಷಯ ಡಬ್ಬಿಂಗ್ ಅಲ್ಲಾ... ನುಡಿಹಮ್ಮುಗೆಯದು!

ವಾಸ್ತವವಾಗಿ ಮೇಲ್ನೋಟಕ್ಕೆ ಇದು ಕನ್ನಡದಲ್ಲಿ ಮನರಂಜನೆ ಬೇಕೆಂದು ಹಟ ಹಿಡಿದ ಕೆಲವರ ಕಾನೂನು ಹೋರಾಟದ ಹಾಗೆ ಕಂಡರೂ ಆಳದಲ್ಲಿ ಇದು ಕನ್ನಡದ ನುಡಿಹಮ್ಮುಗೆಯ ವಿಷಯಕ್ಕೆ ಸಂಬಂಧಿಸಿದಂತಹುದು. ಕನ್ನಡಕ್ಕೆ ಮಾತ್ರಾ ಸೀಮಿತವಲ್ಲದ ಈ ನುಡಿಹಮ್ಮುಗೆ, ನುಡಿಯೊಂದು ಎಷ್ಟೆಲ್ಲಾ ಹರವು ಹೊಂದಿರಬೇಕೆನ್ನುವುದನ್ನು ಹೇಳುತ್ತದೆ. ನುಡಿಯೊಂದರ ಇಂತಹ ಹರವು... ಆಯಾಜನಾಂಗದ ಕಲಿಕೆ, ಮನರಂಜನೆ, ದುಡಿಮೆ, ಗ್ರಾಹಕಸೇವೆ ಮೊದಲಾದ ಹತ್ತುಹಲವು ಆಯಾಮಗಳನ್ನು ಹೊಂದಿರುತ್ತದೆ ಮತ್ತು ಇಲ್ಲೆಲ್ಲಾ ನುಡಿಯೊಂದು ತನ್ನ ಅಸ್ತಿತ್ವವನ್ನು ಹೊಂದಿರಬೇಕಾದ್ದು ಮಹತ್ವದ್ದಾಗಿರುತ್ತದೆ. ಇದಕ್ಕೆ ಡಬ್ಬಿಂಗ್ ಕೂಡಾ ಒಂದು ಸಾಧನವಾಗಿದೆ ಎನ್ನುವುದನ್ನು ವಿಶ್ವಸಂಸ್ಥೆ(UNESCO)ಯೂ ಬಾರ್ಸಿಲೋನಾ ಭಾಷಾ ಘೋಷಣೆಯ ಮೂಲಕ ಎತ್ತಿಹಿಡಿದಿರುವುದನ್ನು ಗಮನಿಸಿದಾಗ "ಡಬ್ಬಿಂಗ್ ನುಡಿಯೊಂದಕ್ಕೆ ಮಾರಕವಲ್ಲಾ, ಬದಲಿಗೆ ಪೂರಕ" ಎನ್ನುವುದು ಅರಿವಾಗುತ್ತದೆ. ಒಟ್ಟಾರೆ ಡಬ್ಬಿಂಗ್ ಎನ್ನುವುದು "ನುಡಿಹಮ್ಮುಗೆ"ಯಲ್ಲೊಂದು ಪ್ರಮುಖ ಅಸ್ತ್ರವಾಗಿದೆ ಎಂಬುದು ಮಾತ್ರಾ ಸತ್ಯ. ಕನ್ನಡದ ನುಡಿಹರವಿನ ಒಂದು ಅಂಗ, ಕನ್ನಡಿಗರ ಮನರಂಜನೆ. ಇಲ್ಲಿ ಕನ್ನಡವಿರಬೇಕಾದ್ದು ಕನ್ನಡಿಗರ ಅಸ್ತಿತ್ವ ಮತ್ತು ಏಳಿಗೆಯ ದೃಷ್ಟಿಯಿಂದ ಬಲುಮುಖ್ಯವಾದುದಾಗಿದೆ. ಹಾಗೆಂದು ಇದು ಮನರಂಜನೆ ಮಾತ್ರಾ ಸೀಮಿತವಾದುದಲ್ಲಾ! ಮನರಂಜನೆಯೂ ಇದರಲ್ಲಿ ಸೇರಿರುವುದರಿಂದಾಗಿ ಇಂದು ಡಬ್ಬಿಂಗ್ ಹೋರಾಟ, ಡಬ್ಬಿಂಗ್ ಚರ್ಚೆ ಮುಂಚೂಣಿಗೆ ಬಂದು ನಿಂತಿದೆ...

ಡಬ್ಬಿಂಗ್ ಬಂದರೆ ಕನ್ನಡ ಬೆಳೆಯುತ್ತದೆಯೇ? ತೊಂದರೆ ಇಲ್ಲವೇ?

ಈ ಪ್ರಶ್ನೆಗೆ ಉತ್ತರ "ಹೌದು" ಮತ್ತು "ಇದೆ" ಎಂಬುದಾಗಿದೆ. ಬದಲಾವಣೆ ಎಂದಿಗೂ ನೋವಿನಿಂದಲೇ ಕೂಡಿರುವುದು ಸಹಜ. ಡಬ್ಬಿಂಗ್ ಬಂದೊಡನೇ ಕನ್ನಡ ಉದ್ಧಾರವಾಗಿಬಿಡುತ್ತದೆ ಎನ್ನುವ ಭ್ರಮೆ ನಮಗೂ ಇಲ್ಲಾ. ಮೊದಲಿಗೆ ಕೆಟ್ಟಾಕೊಳಕಾ ಚಿತ್ರಗಳ ಸುರಿಮಳೆಯೂ ಆದೀತು, ಗುಣಮಟ್ಟದಲ್ಲೂ ಡಬ್ ಆದವು ಕೆಟ್ಟದಾಗಿರಬಹುದು! ಮುಂದೆ ಇದು ಸುಧಾರಿಸುವುದಂತೂ ಖಂಡಿತಾ! ಯಾಕೆಂದರೆ ಮಾರುಕಟ್ಟೆಯೇ ಬದಲಾವಣೆಯನ್ನು ನಿರ್ಣಯಿಸುತ್ತದೆ! ಡಬ್ಬಿಂಗ್ ಬಂದೊಡನೆಯೇ ಮೂಲಚಿತ್ರಗಳ ಸಂಖ್ಯೆ ಕಡಿಮೆಯೂ ಆಗಬಹುದು. ಆದರೆ ಡಬ್ಬಿಂಗ್ ಎನ್ನುವುದು, ತಮ್ಮ ಮನರಂಜನೆಗಾಗಿ ನಿಧಾನವಾಗಿ ಕನ್ನಡದಿಂದಲೇ ದೂರಾಗುತ್ತಿರುವ ಪ್ರೇಕ್ಷಕರನ್ನು ಖಚಿತವಾಗಿ ಕನ್ನಡಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಡಬ್ಬಿಂಗ್ ಚಿತ್ರಗಳು ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ನೆಲದ ಸೊಗಡಿನ, ನಮ್ಮ ಬೇರ್ಮೆಯನ್ನು ಎತ್ತಿಹಿಡಿವ ಚಿತ್ರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸಾವಿರಾರು ಜನರಿಗೆ ಇದು ಅನ್ನವೇ ಆಗಿದ್ದರೂ ಕೋಟ್ಯಾಂತರ ಜನರಿಗೆ ಮನರಂಜನೆ ಎನ್ನುವುದನ್ನು ಕಡೆಗಣಿಸಲಾಗದು. ಕನ್ನಡದ ಮನರಂಜನೆ ನಿಧಾನ ಸಾವಿಗೆ ತುತ್ತಾಗುತ್ತಿರುವುದನ್ನು ಗಮನಿಸಬಲ್ಲ ಜನರು ಡಬ್ಬಿಂಗನ್ನು ಒಂದು ಮದ್ದು ಎಂದು ಗುರುತಿಸಬಲ್ಲರು. ಈ ಮದ್ದು ಕೆಲವರಿಗೆ ಕಹಿಯೂ ಆಗಿರಬಹುದು... ಆದರೆ ಡಬ್ಬಿಂಗಿನಿಂದಾಗಿ ನಮ್ಮ ಸಂಸ್ಕೃತಿ ಹಾಳಾಗುತ್ತದೆ, ಭಾಷೆ ಅಳಿಯುತ್ತದೆ ಮುಂತಾಗಿ ಹೇಳುವುದು ಮಾತ್ರಾ ಪೊಳ್ಳು ಎನ್ನಿಸುತ್ತದೆ. ಕನ್ನಡ ಚಿತ್ರೋದ್ಯಮವೂ ಕೂಡಾ ಡಬ್ಬಿಂಗ್ ಒಡ್ಡುವ ಗುಣಮಟ್ಟದ ಸವಾಲನ್ನು ಸರಿಯಾಗಿ ಸ್ವೀಕರಿಸಿ ಒಳ್ಳೊಳ್ಳೆಯ ಸ್ವಂತಿಕೆಯ ಚಿತ್ರಗಳನ್ನು ನೀಡುವ ಮೂಲಕವೇ ತನ್ನ ಅಸ್ತಿತ್ವ ಕಾಯ್ದುಕೊಳ್ಳಬೇಕಲ್ಲದೆ ಆ ಸಬ್ಸಿಡಿ, ಈ ವಿನಾಯಿತಿ, ಆ ನಿಶೇಧ, ಈ ಸಹಾಯಧನಗಳಿಂದ ಅಲ್ಲಾ!! ಇಷ್ಟಕ್ಕೂ ಕನ್ನಡದ ಪ್ರೇಕ್ಷಕನು ತನಗೇನು ಬೇಕೋ ಅದನ್ನು ಮಾತ್ರವೇ ಹೀರಿಕೊಳ್ಳಬಲ್ಲನಲ್ಲದೆ ಡಬ್ಬಿಂಗ್ ಆದವುಗಳನ್ನೆಲ್ಲಾ ಒಪ್ಪಿಕೊಂಡು ಮೂಲಚಿತ್ರಗಳಿಂದ ದೂರಾಗುತ್ತಾನೆ ಎನ್ನುವಂತಿಲ್ಲಾ! ಹಾಗಾಗಿ ಕನ್ನಡ ಚಿತ್ರರಂಗದ ಮಂದಿ ಸ್ಪರ್ಧೆಯನ್ನು ಎದುರಿಸುವ ರಾಜಮಾರ್ಗವನ್ನು ಹಿಡಿಯಲಿ ಮತ್ತು ಅದರಲ್ಲಿ ಗೆಲ್ಲಲಿ ಎಂದು ಆಶಿಸೋಣ. ಏನಂತೀ ಗುರೂ?

ಕನ್ನಡ ನುಡಿಯರಿಮೆಯ ಇಣುಕುನೋಟ: ಶಂಕರಬಟ್ಟರ ಹೊಸಹೊತ್ತಗೆ ಮಾರುಕಟ್ಟೆಗೆ!


ಇತ್ತೀಚಿಗೆ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಪಡೆದಿರುವ ನಾಡಿನ ಹೆಮ್ಮೆಯ ಭಾಷಾವಿಜ್ಞಾನಿ ನಾಡೋಜ ಡಾ. ಡಿ ಎನ್ ಶಂಕರ ಬಟ್ಟರ ಹೊಸಹೊತ್ತಗೆಯೊಂದು ಬಿಡುಗಡೆಯಾಗಿದೆ. ಯುವಚಿಂತಕ ಶ್ರೀ ಕಿರಣ್ ಬಾಟ್ನಿಯವರು ಸಂಪಾದಿಸಿರುವ ಕನ್ನಡ ನುಡಿಯರಿಮೆಯ ಇಣುಕುನೋಟ ಹೆಸರಿನ ಈ ಹೊತ್ತಗೆ ಕನ್ನಡ ಸಮಾಜಕ್ಕೆ ದಾರಿತೋರುಕವಾದುದಾಗಿದೆ. ತಮ್ಮ ಎಡೆಬಿಡದ ಹತ್ತಾರು ವರ್ಷಗಳ ಅಧ್ಯಯನದ ಸಾರವನ್ನು ಎಳೆಯರಿಗೂ ಅರ್ಥವಾಗುವಂತೆ ತಿಳಿಯಾಗಿ ತಿಳಿಸಬಲ್ಲ ಸಾಮರ್ಥ್ಯವಿರುವ ಬಟ್ಟರ ಬರಹದ ಶೈಲಿ ಈ ಹೊತ್ತಗೆಯಲ್ಲೂ ಇದ್ದು ಓದುಗರಿಗೆ ಸರಳವಾಗಿ ಅರಿಮೆಯನ್ನು ತಲುಪಿಸುತ್ತದೆ. ಈ ಹೊತ್ತಗೆಯು ಮಡಿಕೇರಿಯಲ್ಲಿನ "೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಮೊದಲಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬನವಾಸಿ ಬಳಗ ಪ್ರಕಾಶನದ ಮಳಿಗೆಯಲ್ಲಿ ಮಾರಾಟಕ್ಕೆ ಸಿಗುತ್ತಿರುವ ಈ ಹೊತ್ತಗೆಯ ಮೊದಲಲ್ಲಿ ಸಂಪಾದಕರಾದ ಕಿರಣ ಬಾಟ್ನಿಯವರು ಹೀಗೆ ಬರೆದಿದ್ದಾರೆ.

ಇಣುಕುನೋಟದ ಮುನ್ನುಡಿಯಲ್ಲಿ...

ಬರಹದ ಕನ್ನಡವು ಕಾಲಕಾಲಕ್ಕೆ ಮಾರ್ಪಡುತ್ತಲೇ ಬಂದಿದೆ. ಬರಿಗೆಮಣೆ (ಅಕ್ಶರಮಾಲೆ), ಪದಬಳಕೆಹಾಗೂ ಒಡ್ಡವದಲ್ಲಾದ ಮಾರ್ಪಾಡುಗಳು ಒಂದು ಬಗೆಯವಾದರೆ, ಬರವಣಿಗೆಯ ಇಟ್ಟಳದಲ್ಲಾದ ಮಾರ್ಪಾಡುಗಳು ಇನ್ನೊಂದು ಬಗೆಯವು ಎನ್ನಬಹುದು. ಆದರೆ ಇವೆರಡು ಬಗೆಯ ಮಾರ್ಪಾಡುಗಳು ಒಂದನ್ನೊಂದು ಬೆಂಬಲಿಸಿಯೇ ನಡೆದಿವೆ ಎನ್ನಬಹುದು. ಎತ್ತುಗೆಗೆ, -ಕಾರ ಮತ್ತು ಱ-ಕಾರಗಳು ಚಲಾವಣೆಯಲ್ಲಿದ್ದಾಗ ಬರವಣಿಗೆಯನ್ನು ಹೆಚ್ಚು-ಕಡಿಮೆ ದಾರ್ಮಿಕ ವಿಶಯಗಳನ್ನು ಪದ್ಯರೂಪದಲ್ಲಿ ಹೇಳುವುದಕ್ಕಾಗಿ ಮಾತ್ರವೇ ಬಳಸಲಾಗುತ್ತಿತ್ತು; ಆದರೆ, ಕಾಲ ಕಳೆದಂತೆ ಈ ಬರಿಗೆಗಳು ಕಾಣೆಯಾದವಶ್ಟೇ ಅಲ್ಲ, ದರ್ಮಕ್ಕೆ ನಂಟಿರದ ವಿಶಯಗಳನ್ನು ಪದ್ಯವಲ್ಲದ ಒಡ್ಡವಗಳಲ್ಲಿ ಹೇಳುವಂತಹ ಬರವಣಿಗೆಗಳೂ ಕಾಣಿಸಿಕೊಂಡವು.


ಇವತ್ತಿನ ದಿನವಂತೂ ಹೊಚ್ಚಹೊಸದಾದ ಅರಿಮೆಗಳನ್ನು ಆಯಾ ಅರಿಮೆಯ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಬರವಣಿಗೆಗೆ ಇಳಿಸಬೇಕಾದ ಪರಿಸ್ತಿತಿಯಿದೆ. ಒಂದಲ್ಲ ಒಂದು ಬಗೆಯ ನಲ್ಬರಹ(ಸಾಹಿತ್ಯ)ಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂದವೂ ಇಲ್ಲದ ಅರಿಗರು, ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.


ಇದನ್ನೆಲ್ಲ ಅರಿತು, ಈ ಬೆಳವಣಿಗೆಗಳು ಆಗದಿದ್ದರೆ ಕನ್ನಡಿಗರು ಪಡಲಿರುವ ಕಶ್ಟವನ್ನೆಲ್ಲ ಮನಗಂಡು, ನಲ್ಬರಹವನ್ನು ಬಿಟ್ಟು ಬೇರೆಲ್ಲೂ ಕನ್ನಡದ ಬಳಕೆ ಆಗುತ್ತಿಲ್ಲವೆಂದು ಕಣ್ಣೀರು ಸುರಿಸುವುದೊಂದೇ ನಮ್ಮ ಪಾಡೆಂದು ನಂಬಲು ತಯಾರಿಲ್ಲದ ಕನ್ನಡದ ಯುವಕರ ಪಡೆಯೊಂದು ಮೆಲ್ಲನೆ ಎದ್ದುನಿಲ್ಲುತ್ತಿದೆ, ಮತ್ತು ಅದರಿಂದ ಕನ್ನಡದಲ್ಲಿ ಹಿಂದೆಂದೂ ಕಂಡಿರದ ರೀತಿಯ ಬರವಣಿಗೆಗಳು ಇಂದು ಮೂಡುತ್ತಿವೆ.ಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗಎಲ್ಲರ ಕನ್ನಡವೊಂದು ರೂಪುಗೊಳ್ಳುತ್ತಿದೆ. ಇದರಲ್ಲಿ ಕನ್ನಡಿಗರ ಉಲಿಕೆಯಲ್ಲಿಲ್ಲದ ಮಹಾಪ್ರಾಣಗಳಿಲ್ಲ, ಋಕಾರವಿಲ್ಲ, ವಿಸರ್ಗವಿಲ್ಲ; -ಕಾರ, -ಕಾರಗಳಿಲ್ಲ. ಹಾಗೆಯೇ, ‘ಎಲ್ಲರ ಕನ್ನಡವೆಂದರೆ ನಿಜಕ್ಕೂ ಎಲ್ಲರದಾಗಿದ್ದು, ಅತಿ ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸುವ ಬದಲು ಆದಶ್ಟು ಕನ್ನಡದ ಪದಗಳನ್ನೇ ಬಳಸಲಾಗುತ್ತದೆ, ಹೊಸ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ.

ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಕೆಲವು ಜಾತಿಗಳ ಬೆರಳೆಣಿಕೆಯ ಮಂದಿಯದಲ್ಲ, ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.

ಕನ್ನಡ ಸಮಾಜದ ಬಗ್ಗೆ ಕಾಳಜಿಯಿರುವ, ಕನ್ನಡಿಗರ ಏಳಿಗೆಗೆ ದಾರಿ ಹುಡುಕುತ್ತಿರುವ ಮಂದಿಗೆ ಈ ಹೊತ್ತಗೆ ದಾರಿದೀಪವಾದರೆ ನುಡಿಯರಿಮೆಯನ್ನು ಸಾಮಾನ್ಯರೂ ಅರಿಯಲು ಅತ್ಯಂತ ಸಹಕಾರಿಯಾಗಿದೆ. ಇದು ನಿಮ್ಮಲ್ಲಿರಲೇಬೇಕಾದ ಹೊತ್ತಗೆ.

ಕನ್ನಡ ಡಿಂಡಿಮ: ಬಳಗದ ಹೊಸ ಹೊತ್ತಗೆ ಮಾರುಕಟ್ಟೆಗೆ!


ಬನವಾಸಿ ಬಳಗವು ಪ್ರಕಾಶನದ ಮೂಲಕ ಹೊತ್ತಗೆಗಳನ್ನು ಅಚ್ಚುಹಾಕಿಸಲು ಶುರುಮಾಡಿ ಐದುವರ್ಷಗಳಾದ ಹಿನ್ನೆಲೆಯಲ್ಲಿ ಇದೀಗ ಐದು ಹೊಸಹೊತ್ತಗೆಗಳನ್ನು ಹೊರತಂದಿದೆ. ಹೊತ್ತಗೆಗಳನ್ನು ಕೊಳ್ಳಿರಿ, ಓದಿರಿ, ತಿಳಿದವರಿಗೆ ಉಡುಗೊರೆಯಾಗಿ ನೀಡಿರಿ. ಹೊತ್ತಗೆಗಳು ದಿನಾಂಕ ೦೭ನೇ ಜನವರಿಯಿಂದ ೯ನೇ ಜನವರಿಯವರೆಗೆ, ಮಡಿಕೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಬನವಾಸಿ ಬಳಗದ ಮಳಿಗೆಯಲ್ಲಿ ಸಿಗುತ್ತದೆ. ಎಲ್ಲೆಡೆಯ ಹೊತ್ತಗೆ ಅಂಗಡಿಗಳಲ್ಲೂ ಸಿಗಲಿವೆ. "ಕನ್ನಡ ಡಿಂಡಿಮ - ಸತ್ತಂತಿಹರನು ಬಡಿದೆಚ್ಚರಿಸು" ಹೆಸರಿನ ಈ ಹೊತ್ತಗೆಗಳ ಮುನ್ನುಡಿಯ ಕೆಲಸಾಲುಗಳು ತಮ್ಮ ಓದಿಗಾಗಿ...

ಕನ್ನಡ ಡಿಂಡಿಮ

ಕನ್ನಡ ಕನ್ನಡಿಗ ಕರ್ನಾಟಕಗಳ ಏಳಿಗೆಯ ಹೆಗ್ಗುರಿಯು ನಮ್ಮ ಮುಂದಿರುವಾಗ,ಇದನ್ನೇ ಮನದಲ್ಲಿಟ್ಟುಕೊಂಡು ನೋಡತೊಡಗಿದರೆ ನಮ್ಮ ಸುತ್ತಲಿನ ಜಗತ್ತನ್ನು ನಾವು ನೋಡುವ ಬಗೆಯೇ ಬದಲಾಗುತ್ತದೆ. ಹಾಗೆ ನೋಡುತ್ತಾ ಹೋದರೆ ಕಾಣುವ ನೋಟಗಳು ಹೆಜ್ಜೆಹೆಜ್ಜೆಗೂ ಸ್ಪಷ್ಟವಾಗುತ್ತಾ ಹೋಗುತ್ತದೆ. ನಮ್ಮ ಸುತ್ತ ನಡೆಯುತ್ತಿರುವುದರಲ್ಲಿ ಯಾವುದು ನಮಗೆ ಮತ್ತು ನಮ್ಮ ನಾಡಿಗೆ ಮಾರಕ, ಯಾವುದು ನಮ್ಮ ಏಳಿಗೆಗೆ ಪೂರಕ ಎಂಬುದು ಅರಿವಾಗತೊಡಗುತ್ತದೆ. ಈ ಯೋಚನೆಗಳ ದೀಪಕ್ಕೆ ನಿಜಕ್ಕೂ ಎಣ್ಣೆಯಾಗುವುದು ಹೊರದೇಶಗಳಲ್ಲಿರುವ ವ್ಯವಸ್ಥೆಗಳನ್ನು ಕಂಡ ಅನುಭವಗಳು. ಈ ಅನುಭವ ನಮ್ಮ ಮೂಲಗುರುತನ್ನು ನುಡಿಗೆ ಅಂಟಿಸಿಬಿಡುತ್ತದೆ.

 ಹಾಗೆ ನೋಡಿದರೆ ನಮ್ಮೆಲ್ಲರ ಅತಿ ಪುರಾತನವಾದ ಗುರುತೆಂದರೆ ನಮ್ಮ ನುಡಿಯೇ! ನುಡಿಯೊಂದು ಬೆಳೆದು ಬರುವ ಪರಿ, ಅದನ್ನಾಡುವ ಜನರು ಒಂದು ಸಮಾಜವಾಗಿರುವುದರ ಹಳಮೆಯನ್ನು ಕಂಡಾಗ ನಮ್ಮ ಹಳಮೆಯು ನಮ್ಮ ಮೂಲಗುರುತನ್ನು ನಾವಾಡುವ ನುಡಿಯೊಂದಿಗೆ ಜೋಡಿಸುವುದು ಸಹಜ ಎನ್ನಿಸುತ್ತದೆ. ಕಾಲಾಂತರದಲ್ಲಿ ಸಮಾಜದಲ್ಲಿನ ಕಟ್ಟುಪಾಡುಗಳಿಂದಾಗಿ ಹೊಸ ಹೊಸ ಗುರುತುಗಳು ಆವರಿಸುತ್ತಾ ಮೂಲಗುರುತನ್ನು ಮರೆಸುವಂತೆ ಮೆತ್ತಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ‘ನಾನು’ ಕನ್ನಡಿಗನೆನ್ನುವ ಗುರುತು ಉಳಿದೆಲ್ಲಾ ಗುರುತಿಗಿಂತ ಸಹಜವಾದದ್ದೂ, ಏಳಿಗೆಯನ್ನು ಸಾಧಿಸಲು ಬಳಕೆಯಾಗಬೇಕಾದದ್ದು ಎಂಬುದು ಮನವರಿಕೆಯಾಗುತ್ತದೆ. ಕನ್ನಡ ಡಿಂಡಿಮ ಹೊತ್ತಗೆಯು, ಕನ್ನಡಿಗರಲ್ಲಿ ಕನ್ನಡತನದ ಅರಿವನ್ನು ಎಚ್ಚರಿಸುವ ಡಿಂಡಿಮವಾಗಲೆಂದು ನನ್ನಾಶಯ.





ಈ ಹೊತ್ತಗೆಯ ಹೆಸರನ್ನು ಕನ್ನಡ ಡಿಂಡಿಮ ಎಂದು ಇಡಲು ಪ್ರೇರಣೆಯೇ ರಾಷ್ಟ್ರಕವಿ ಕುವೆಂಪು ಅವರ ಹೆಸರಾಂತ ಕವನ. ಈ ಕವನ ಹೀಗಿದೆ:

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ
ಬಾರಿಸು ಕನ್ನಡ ಡಿಂಡಿಮವ ||

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು ||

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ
ಬಾರಿಸು ಕನ್ನಡ ಡಿಂಡಿಮವ ||

ಈ ಪದ್ಯವನ್ನು ನಾವೆಲ್ಲಾ ಶಾಲೆಯಲ್ಲಿ ಕಲಿತಿರುತ್ತೇವೆ. ಶಾಲೆಯಲ್ಲಿ ಓದುವಾಗ ಇದರ ಆಶಯವೇ ಅರ್ಥವಾಗಿರಲಿಲ್ಲ. ಯಾಕಾಗಿ ಇಷ್ಟೊಂದು ಕಟುವಾಗಿ ಕನ್ನಡಿಗರನ್ನು “ಸತ್ತಂತಿಹರು” ಎಂದಿದ್ದಾರೆ? ಯಾಕಾಗಿ “ಹೃದಯಶಿವ”ನಲ್ಲಿ “ಡಿಂಡಿಮ” “ಬಾರಿಸು”ವಂತೆ ಬೇಡಿದ್ದಾರೆ? ಕುವೆಂಪುರವರು ಡಿಂಡಿಮವನ್ನು “ನುಡಿಸು” ಎನ್ನದೆ “ಬಾರಿಸು” ಎಂದಿರುವುದರಲ್ಲೇ, ಕನ್ನಡಿಗರ ಈ ಸತ್ತಂತಿರುವಿಕೆಯ ತೀವ್ರತೆ ಎಷ್ಟೆಂದು ಅರಿವಾಗುತ್ತದೆ. ಏನಾಗಿದೆ ಕನ್ನಡಿಗರಿಗೆ? ಏನಿದು ಸತ್ತಂತಿರುವಿಕೆ? ಹೃದಯಶಿವ ನುಡಿಸಬೇಕಾದ ಡಿಂಡಿಮ ಯಾವುದು? ಈ ಎಲ್ಲಾ ಪ್ರಶ್ನೆಗಳ ಆಳಕ್ಕೆ ಇಳಿದಾಗ ನಮ್ಮನ್ನು ಮುಸುಕಿರುವ ತೆರೆ ಎಂಥದ್ದು... ನಮ್ಮ ಮೇಲೆ ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯು ಎಂಥದ್ದು ಎಂಬುದು ಅರಿವಾಗುತ್ತದೆ.

ನಮ್ಮ ನಾಡಿನಲ್ಲಿ ಕನ್ನಡವೊಂದನ್ನೇ ಬಲ್ಲ ಒಬ್ಬ ಸಾಮಾನ್ಯ ನಾಗರೀಕನಿಗೆ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಯಾವುದೇ ಹಿಂಜರಿಕೆ, ಕೀಳರಿಮೆಯಿಲ್ಲದೇ ಮಾಡಿಕೊಳ್ಳುವುದು ಸಾಧ್ಯವಾಗುವ, ತನ್ನ ಬದುಕಿನಲ್ಲಿ ಏಳಿಗೆ ಸಾಧಿಸಲು ಬೇರೊಂದು ನುಡಿಯ ಕಲಿಕೆ ಅನಿವಾರ್ಯ ಎನ್ನುವುದು ಇಲ್ಲವಾಗುವ ದಿನ ಬಂದಂದು ನಿಜಕ್ಕೂ ನಾಡಿನ ಮತ್ತು ನಾಡಜನರ ಏಳಿಗೆಯ ಕನಸು ನನಸಾಗುವುದು. ಇಂಥದ್ದೊಂದು ದಿನ ತಾನಾಗೇ ಎಂದಿಗೂ ಬಾರದು. ಕನ್ನಡದ ಜನರು ತಾವಾಗೇ ದೇಶಕಾಲಗಳಲ್ಲಿ ಒಗ್ಗಟ್ಟನ್ನು ಸಾಧಿಸುವ ಮೂಲಕ ಈ ಗುರಿಯನ್ನು ಮುಟ್ಟಲು ಸಾಧ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕನ್ನಡಿಗನಿಗೆ ಏಳಿಗೆಯ ಪರಮಗುರಿಯೇ ಕಾಣುತ್ತಿದೆ ಎನ್ನಿಸದು. ಕಾಣುತ್ತಿದ್ದರೂ ಅದನ್ನು ಮುಟ್ಟುವ ದಾರಿ ಕಾಣುತ್ತಿದೆ ಎನ್ನಿಸದು. ಈ ಗುರಿ ಮತ್ತು ದಾರಿಯನ್ನು ಕಂಡುಕೊಳ್ಳುವ ಮತ್ತು ಕಂಡುಕೊಂಡಿದ್ದನ್ನು ಕನ್ನಡಿಗರಿಗೆ ಮುಟ್ಟಿಸುವ ಹಿರಿಯ ಗುರಿಯೊಡನೆ ಬನವಾಸಿ ಬಳಗವು ಕೆಲಸ ಮಾಡುತ್ತಿದೆ. ಈ ನಾಡಪರ ಚಿಂತನೆಗಳ ಸಾರವೇ ಇದೀಗ ಹೊತ್ತಗೆಯಾಗಿ ಮೂಡಿಬಂದಿದೆ.
Related Posts with Thumbnails