ಹದಿನೇಳು ವರುಷ ವನವಾಸದಿಂದ...
1984ರಲ್ಲಿ ಬೆಳಗಾವಿ ನಗರ ಪಾಲಿಕೆ ಅಸ್ತಿತ್ವಕ್ಕೆ ಬಂತು. ಆಗಿಂದ್ಲೂ ಇಲ್ಲಿನ ಮೇಯರುಗಳು ಎಂ.ಇ.ಎಸ್ ಪಕ್ಷದವರೇ. ಒಂದು ಸರ್ತಿ ಮಾತ್ರ 1991ರಲ್ಲಿ ಹಿರಿಯರಾದ ಸಿದ್ಧನ ಗೌಡ ಪಾಟೀಲರು ಆರಿಸಿ ಬಂದಿದ್ದರು. ಆಗ ರಾಜ್ಯದಲ್ಲಿ ಬಂಗಾರಪ್ಪನವರ ಸರ್ಕಾರವಿತ್ತು. ಹದಿನೇಳು ವರ್ಷಾ ಅಯ್ತು, ಮತ್ತೆ ಕನ್ನಡಿಗರೊಬ್ಬರು ಅಲ್ಲಿ ಮೇಯರ್ ಆಗಲು. ಇದೀಗ ಮತ್ತೆ ಕನ್ನಡತಿಯಾದ ಪ್ರಶಾಂತ ಬುಡವಿ ಅವರು ಆರಿಸಿ ಬಂದಿದಾರೆ. ಉಪಮೇಯರ್ ಆಗಿ ಕನ್ನಡಿಗರಾದ ಯೂನುಸ್ ಮೋಮಿನ್ ಅವರು ಆಯ್ಕೆಯಾಗಿ ಬಂದಿದ್ದಾರೆ.
ಬೆಳಗಾವೀಲಿ ಕನ್ನಡಿಗರ ಸಂಖ್ಯೆ ಹೆಚ್ಚಿತೇನು?
ಇಷ್ಟು ದಿನ ಇಲ್ಲದ್ದು ಈಗ ಕನ್ನಡದೋರು ಗೆದ್ದು ಬರಬೇಕು, ಎಲ್ರಿಗಿಂತ ಹೆಚ್ಚು ಮತ ಗಳಿಸಬೇಕು ಅಂದ್ರೆ, ಬೆಳಗಾವಿಯಲ್ಲಿ ಇದ್ದಕ್ಕಿದ್ದ ಹಾಗೆ ಕನ್ನಡಿಗರ ಜನಸಂಖ್ಯೆ ಹೆಚ್ಚಿ ಬಿಡ್ತೇನು? ಅದು ಸಾಧ್ಯವೇ ಇಲ್ಲ ಅಂತೀರಾ? ಹಿಂದಿನ ಚುನಾವಣೆಗಳಲ್ಲಿ ಇದ್ದ ಕನ್ನಡಿಗರ ಪ್ರಮಾಣವೇನು ಮಾಯಾಜಾಲದಂತೆ ಬದಲಾಗಲಿಲ್ಲ. ಆದರೆ ಕನ್ನಡಿಗ ಬದಲಾದ. ಬಹುದಿನಗಳಿಂದ ಮೈ ಮರೆವೆಯಿಂದ ಕೂಡಿದ್ದ ಕೊಳೆಯಾ ಕೊಚ್ಚಿ ಎದ್ದು ನಿಂತ. ನಿಜವಾಗ್ಲೂ ಆಗಿದ್ದು ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ. ಇದನ್ನು ಮಾಡಿದೋರು?
ಗೆಲುವಿನ ಕಾರಣ: ಹೋರಾಟ, ಜಾಗೃತಿ, ಸಂಘಟನೆ ಮತ್ತು ಒಗ್ಗಟ್ಟು
ಈ ಜಾಗೃತಿಯನ್ನು ಮಾಡಿದ್ದು ಕನ್ನಡಪರ ಸಂಘಟನೆಗಳು ಅಂತ ಅನೇಕ ಮಾಧ್ಯಮಗಳು ಬರೆದಿವೆ. ಆದರೆ ಇದನ್ನು ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆಯೆಂಬ ಗಂಡುಗಲಿ ನಾಡಭಕ್ತರ ಪಡೆ ಎಂದು ಬರೆಯಲು ಅದ್ಯಾಕೋ ಇವು ಹಿಂದೆ ಮುಂದೆ ನೋಡಿದ್ವು. ಬೆಳಗಾವಿಯ ಕನ್ನಡಿಗ ಎಲ್ಲ ಮುಗೀತು ಅಂತ ಕೈಚೆಲ್ಲಿ ಕುಳಿತಿದ್ದು, ಅಂದು 2005ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಿರ್ಣಯ ಮಂಡಿಸಿದಾಗ. ಇದರ ವಿರುದ್ಧ ಕರ್ನಾಟಕದ ಯಾವ ರಾಜಕೀಯ ಪಕ್ಷವೂ, ನಾಯಕ ಶಿಖಾಮಣಿಗಳೂ, ಕನ್ನಡ ಪರ ಸಂಘಟನೆಗಳೂ ದನಿ ಎತ್ತದೆ ಇದ್ದಾಗ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ.
ಬೆಂಗಳೂರಿಗೆ ಬಂದಿದ್ದ ಅಂದಿನ ಮೇಯರ್ ವಿಜಯ್ ಮೋರೆಯ ಮೂತಿಗೆ ಮಸಿ ಬಳಿದ ಘಟನೆ ಬೆಳಗಾವಿಯ ಕನ್ನಡಿಗರಿಗೆ ಹೊಸ ಶಕ್ತಿಯ ಸಂಚಯನವಾಗಲು ನೆಪವಾಯಿತು. ಆ ದಿನಗಳಲ್ಲಿ "ತಾಕತ್ತಿದ್ದರೆ ಬೆಳಗಾವಿಗೆ ಕಾಲಿಡಲಿ" ಎನ್ನುವ ನೇರ ಸವಾಲನ್ನು ದಿಟ್ಟವಾಗಿ ಎದುರಿಸಿ, ಬೆಳಗಾವಿಯಲ್ಲಿ ತೊಡೆ ತಟ್ಟಿ ನಿಂತು ಕನ್ನಡಿಗರನ್ನು ಸಂಘಟಿಸಿದ್ದು ರಕ್ಷಣಾ ವೇದಿಕೆಯ ನಾರಾಯಣ ಗೌಡ್ರು.
ಬೆಳಗಾವಿಯಲ್ಲಿ ಇತ್ತೀಚಿಗೆಂದೂ ಆಗಿಲ್ಲದ ವೇಗದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸಗಳು ಆರಂಭವಾದವು. ಕನ್ನಡವೇ ಸತ್ಯ ಕಾರ್ಯಕ್ರಮ ನಡೆಸಿ 25000ಕ್ಕೂ ಹೆಚ್ಚು ಕನ್ನಡಿಗರನ್ನು ಒಗ್ಗೂಡಿಸಿ ಹಳದಿ ಕೆಂಪು ಬಾವುಟಗಳನ್ನು ಬೆಳಗಾವಿಯಲ್ಲಿ ಪಟಪಟಿಸುವಂತೆ ಮಾಡಲಾಯಿತು. ಎ.ಪಿ.ಎಂ.ಸಿ ಚುನಾವಣೆ ಇರಲಿ, ಸಂಸದರ ಕನ್ನಡ ವಿರೋಧಿ ನಿಲುವಿರಲಿ ಅವುಗಳ ವಿರುದ್ಧ ದನಿ ಎತ್ತಿ ಹೋರಾಡಿದ್ದು, ವಿಧಾನ ಸಭಾ ಅಧಿವೇಶನಕ್ಕಾಗಿ ವಿಧಾನ ಸೌಧವನ್ನು ನಿರ್ಮಿಸಲು ಒತ್ತಾಯಿಸಿ ಅಮರಣಾಂತ ಉಪವಾಸ ನಡೆಸಿದ್ದು, ನಿಪ್ಪಾಣಿ, ಖಾನಾಪುರಗಳಂತಹ ಕೊನೆ ಊರಿನಲ್ಲೂ ಕನ್ನಡಿಗರನ್ನು ಸಂಘಟಿಸಿದ್ದು, ಕನ್ನಡಿಗರ ಈ ಒಗ್ಗಟ್ಟು ಮರಾಠಿಗರ ವಿರುದ್ಧವಲ್ಲಾ, ನಾಡು ಒಡೆಯುವ ದನಿ ಎತ್ತುವವರ ವಿರುದ್ಧ ಎಂದು ಬೆಳಗಾವಿಯ ಜನ ಸಾಮಾನ್ಯರಲ್ಲಿ ಮನವರಿಕೆ ಮಾಡಿಕೊಟ್ಟು ಬೆಳಗಾವಿ ಕನ್ನಡಿಗರದ್ದು ಎಂಬ ಭರವಸೆಯನ್ನು ಬೆಳಗಾವಿಯ ಕನ್ನಡಿಗರಲ್ಲಿ ಮೂಡಿಸಿದ್ದು... ಕರ್ನಾಟಕ ರಕ್ಷಣಾ ವೇದಿಕೆಯೇ. ಈ ದಿನ ಬೆಳಗಾವಿ ನಗರ ಪಾಲಿಕೆಯ ಮೇಲೆ ಕನ್ನಡದ ಹಳದಿ, ಕೆಂಪು ಬಾವುಟ ಹಾರಲು ಸಾಧ್ಯವಾಗಿರುವುದು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದ ಜಾಗೃತಿ, ಸಂಘಟನೆಗಳೇ ಕಾರಣದಿಂದಲೇ.
ರಾಯಣ್ಣನ ತವರಲ್ಲಿ ಹೊತ್ತಿದ ಈ ಕಿಡಿ ನಾಡಲೆಲ್ಲ ಹಬ್ಬಲಿ
ಸಂಗೊಳ್ಳಿ ರಾಯಣ್ಣನ ತವರಲ್ಲಿ ಹೊತ್ತಿಕೊಂಡಿರುವ ಈ ಸ್ವಾಭಿಮಾನದ ಕಿಡಿ ಕನ್ನಡನಾಡಿನ ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ಹೊತ್ತಿಕೊಳ್ಳುವ ದಿನ ದೂರವಿಲ್ಲ. ಕನ್ನಡತನ ಬಡಿದೆಬ್ಬಿಸುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ. ನಿಮ್ಮದೂ ಒಂದು ಹಾರೈಕೆ ಇರಲಿ ಗುರು...
5 ಅನಿಸಿಕೆಗಳು:
೧೯೩೪ರಲ್ಲಿ ಗಾಂಧೀಜಿ ಬೆಳಗಾವಿಯಲ್ಲಿ ಬಾಷಣ ಮಾಡಿದನಂತರ ಗಂಗಾಧರ್ ರಾವ್ ದೇಶಪಾಂಡೆಗೆ ಆ ಬಾಷಣವನ್ನು ಕನ್ನಡದಲ್ಲಿ ಬಾಷಾಂತರಿಸಲು ಹೇಳಿದರು. ಆ ಸಮಯದಲ್ಲಿ ಜನರು ಅವರ ಹಸ್ತಾಕ್ಷರ ಪಡೆಯಲು ಇಚ್ಚಿಸಿ, ಒಬ್ಬ ಶಾಲೆ ಮೇಷ್ಟ್ರು ೫ ರೂ ನೋಟಿನ ಮೇಲೆ ಹಸ್ತಾಕ್ಷರ ಮಾಡಲು ಗಾಂಧಿಗೆ ನೀಡಿಧನು. 'ಗಾಂಧಿ' ಎಂದು ಕನ್ನಡದಲ್ಲಿ, ಗಾಂಧೀಜಿ ಬರೆದರಂತೆ. ಇದಕ್ಕೆ ಆ ಮೇಷ್ಟ್ರು ಆಕ್ಷೇಪಿಸಿ ಮರಾಠಿಯಲ್ಲಿ ಬರಿಯಿರಿ ಎಂದನಂತೆ . ಆಗ ಗಾಂಧೀಜಿ ಮರಾಠಿಯಲ್ಲಿ ನನ್ನ ಹಸ್ತಾಕ್ಷರ ಬೇಕಾದರೆ ಪುಣೆಗೆ ಬನ್ನಿ ಎಂದರಂತೆ . ಈ ಗಟನೆಯ ಪ್ರತ್ಯಕ್ಷ ಸಾಕ್ಷಿಯಗಿದ್ದ ಸ್ವತಂತ್ರ ಹೋರಾಟಗಾರ ಶ್ರೀ ಅಂದನಪ್ಪ ದೊಡಮೆಠಿ ಈ ವಿಷಯವನ್ನು ಕರ್ನಾಟಕ ಶಾಸನ ಸಬೆಯಲ್ಲಿ ಜುಲೈ ೧೯೬೬ ರಲ್ಲಿ ಹಂಚಿಕೊಂಡರು.
great show KRV !!
We are with u
aadre ivattu nippaNi nagara sabeli maratili taravu tegedukondiddaare.
ka.ra.ve alli enu maadtidare guru?
nippaNi nagara sabeli agiddara bagge en gati? intha vichaaragaLu yaavude kannaDa vahinigaLalli baruvudilla yaake? maharashTradavarige avarade aada saviraaru samasyegaLu illave?
aite guru aite...haraaike yavaglu idde irutte...
/dg
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!