ಕರ್ನಾಟಕ ರಾಜ್ಯ ಹುಟ್ಟಿ ಐವತ್ತು ವರ್ಷ ಆಗಿದ್ರೂ, ಅವತ್ತಿಂದ ಇವತ್ತಿನ ತನಕಾ ಹತ್ತಾರು ಚುನಾವಣೆ ನಡ್ದು, ನೂರಾರು ನಾಯಕ್ರುಗಳು, ನಾಕಾರು ರಾಜಕೀಯ ಪಕ್ಷಗಳು ದರ್ಬಾರು ನಡ್ಸುದ್ರೂ ನಮ್ಮ ಹಣೆಬರಹಾನ ಸುಧಾರಿಸಕ್ಕೆ ಇವುಗಳಿಂದ ಇನ್ನೂ ಆಗಿಲ್ಲ. ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋದನ್ನು ಕೇಂದ್ರವಾಗಿಸಿಕೊಂಡ ರಾಜಕಾರಣ ನಡೆದಿಲ್ಲ. ಹೋಗ್ಲಿ, ಈ ಪಕ್ಷಗಳೇ ಹೇಳ್ಕೊಳೋ ಹಾಗೆ ಬಡತನ ನಿರ್ಮೂಲನ ಮಾಡಿ ಜನ್ರುನ್ನ ಉದ್ಧಾರ ಮಾಡೊ ಯೋಜನೆಗಳೂ ಇವುಗಳ ಬತ್ತಳಿಕೆಯಿಂದ ಹೊರಗ್ ಬರ್ತಾ ಇಲ್ಲ. ಈಗ ಮತ್ತೊಂದು ಚುನಾವಣೆಯ ಹೊಸಿಲಲ್ಲಿ ಬಂದು ನಿಂತಿದೀವಿ. ಮತದಾನ ಮಾಡೋ ಮುನ್ನ ಒಂದು ಚೂರು ಆ ಬಗ್ಗೆ ಮಾತಾಡೋಣ.
ಪ್ರಣಾಳಿಕೆಯೆಂಬ ಟೊಳ್ಳು ಭರವಸೆಗಳು!
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಭಾಜಪ ಮತ್ತು ಜನತಾದಳಗಳು ಮುಖ್ಯಸ್ಪರ್ಧಿಗಳಾಗಿದ್ದು, ಇವರಲ್ಲೇ ಯಾರಾದರೊಬ್ರು ಅಥ್ವಾ ಇಬ್ರು ನಾಳೆ ನಮ್ಮುನ್ ಆಳೋ ಸಾಧ್ಯತೆಗಳು ಹೆಚ್ಚು. ಈ ನಮ್ಮ ಭಾವಿ ಸರ್ಕಾರದೋರು ನಮ್ಮ ನಾಡಿನ ಏಳಿಗೆ ಬಗ್ಗೆ ಅದೇನು ಚಿಂತನೆ ಮಾಡ್ತಿದಾರೆ, ಅದೇನು ಭರವಸೆ ಕೊಡ್ತಿದಾರೆ ಅಂತ ನೋಡುದ್ರೆ ಎಷ್ಟು ಖಾಲಿತನ ಇವುಗಳಲ್ಲಿ ತುಂಬಿ ತುಳುಕಾಡ್ತಿದೆ ಅನ್ನೋದು ಅರ್ಥ ಆಗುತ್ತೆ ಗುರು! ಈ ಪಕ್ಷಗಳು [ಬಿಜೆಪಿ, ಕಾಂಗ್ರೆಸ್, ಜೆಡಿಎಸ್] ನೀಡಿರೋ ಭರವಸೆಗಳನ್ನು ಒಟ್ಟಾರೆ ನೋಡೋಣ ಬನ್ನಿ!
ನಾಡುನುಡಿ ಕಾಪಾಡೋ ಬಗ್ಗೆ!
ಮೂರೂ ಪಕ್ಷಗಳೋರು ಈ ಬಗ್ಗೆ ಏನು ನಿಲುವು ಇಟ್ಕೊಂಡಿದಾರೆ ಅಂತ ಕೇಳಣಾ ಅಂದ್ರೆ ಇವುಗಳಲ್ಲಿ ಒಂದಾದ್ರೂ ಮಹಾಜನ್ ವರದಿ, ನಂಜುಂಡಪ್ಪ ವರದಿ, ಸರೋಜಿನಿ ಮಹಿಷಿ ವರದಿಗಳ ಜಾರಿ ಬಗ್ಗೆ ಸ್ಪಷ್ಟವಾಗಿ ಮಾತಾಡಿಲ್ಲ. ಅಂತರ ರಾಜ್ಯ ನದಿ ನೀರು ಹಂಚಿಕೆಗೆ ರಾಷ್ಟ್ರೀಯ ಜಲ ನೀತಿ, ಅನಿಯಂತ್ರಿತ ವಲಸೆ ತಡೆ ಕಾಯ್ದೆಗಳನ್ನು ಮಾಡಲು ಕಾರ್ಯೋನ್ಮುಖರಾಗೋ ಬಗ್ಗೆ ಉಸಿರೆತ್ತಿಲ್ಲ.
ನಾಡಿನ ಏಳೆಗೆ ಬಗ್ಗೆ?
ಬಡತನದ ರೇಖೆಯನ್ನು ನಿರ್ಧರಿಸೋಕ್ಕೆ ಇರೋ ಆರ್ಥಿಕ ಮಟ್ಟವನ್ನು ಹೆಚ್ಚಿಸಿ ಇನ್ನಷ್ಟು ಜನರನ್ನು ಅದರೊಳ್ಗೆ ತರ್ತೀವಿ ಅಂತಾರೇ ಹೊರತು ಬಡತನದ ರೇಖೆಗಿಂತ ಹೇಗೆ ನಿಮ್ಮುನ್ ಮೇಲೆತ್ತುತ್ತೀವಿ ಅನ್ನಲ್ಲ. ಒಂದು ವರ್ಷ ಕಾಲ ನಿರುದ್ಯೋಗ ಭತ್ಯೆ ಕೊಡ್ತೀವಿ ಅಂತಾರೇ ಹೊರತು ನಿಮಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡ್ತೀವಿ ಅನ್ನಲ್ಲ. ಎರಡು ರೂಪಾಯಿಗೆ ಅಕ್ಕಿ ಕೊಡ್ತೀವಿ ಅಂತಾರೇ ಹೊರತು ಇಪ್ಪತ್ತು ರೂಪಾಯಿ ಅಕ್ಕಿಯನ್ನು ಕೊಳ್ಳಲು ನಿಮ್ಮನ್ನು ಶಕ್ತರನ್ನಾಗಿ ಮಾಡ್ತೀವಿ ಅನ್ನಲ್ಲ. ಸ್ವಯಂ ಉದ್ಯೋಗದ ಬಗ್ಗೆ ಮಾತನ್ನಾಡಿದ್ರೂ ಕೂಡಾ ನಮ್ಮ ನಾಡಿನಲ್ಲಿ ತಲೆ ಎತ್ತುತ್ತಿರುವ ಉದ್ದಿಮೆಗಳಲ್ಲಿ ಕನ್ನಡದವರಿಗೆ ಉದ್ಯೋಗ ಖಾತ್ರಿ ಕೊಡೋ ಬಗ್ಗೆ ಮಾತಾಡಲ್ಲ. ರೈತರಿಗೆ ಉಚಿತ ವಿದ್ಯುತ್ ಕೊಡ್ತೀವಿ ಅಂತಾರೆ ಹೊರತು ಅದರ ಸಬ್ಸಿಡಿ ದರವನ್ನು ಯಾರ ತಲೆ ಮೇಲೆ ಹಾಕ್ತೀವಿ ಅನ್ನಲ್ಲ. ರೈತರ ಬೆಳೆಗೆ ಮಾರುಕಟ್ಟೆ, ಸರಿಯಾದ ಬೆಲೆ ಸಿಗಲು ಬೇಕಾಗೋ ವ್ಯವಸ್ಥೆ, ಕೃಷಿಯಲ್ಲಿ ಉತ್ತಮ ಪದ್ದತಿಯ ತರಬೇತಿಗಳ ಮಾತಾಡಲ್ಲ. ಐವತ್ತು ಸಾವಿರ ಕೋಟಿ ಚೆಲ್ಲಿ ಬೆಂಗಳೂರು ನಗರಾನ ಮತ್ತಷ್ಟು ಬೆಳಸ್ತೀವಿ ಅಂತಾರೇ ಹೊರತು ಬೆಂಗಳೂರಿನಂತಹ ಇನ್ನೂ ನಾಕಾರು ನಗರ ಕಟ್ತೀವಿ ಅನ್ನಲ್ಲ. ಬಣ್ಣದ ಟಿವಿಯನ್ನು ಮನೆ ಮನೆಗೆ ತಲುಪುಸ್ತೀವಿ ಅಂತಾರೇ ಹೊರತು ಅಂಥಾ ಟಿವಿಯನ್ನು ನೀವೆ ಕೊಂಡುಕೊಳ್ಳುವಷ್ಟು ಆರ್ಥಿಕ ಸಬಲತೆಯನ್ನು ತಂದುಕೊಡ್ತೀವಿ ಅನ್ನಲ್ಲ. ಹಸಿದಿರೋನಿಗೆ ಅನ್ನ ಕೊಡಬೇಕು ಅನ್ನೋ ನೆಪ ಒಡ್ಡಿ ಅಕ್ಕಿ, ಟಿವಿ, ಬಿಟ್ಟಿ ಕರೆಂಟು, ಸಬ್ಸಿಡಿ ಅಂತಾ ಕೊಡೋಕೆ ಮುಂದಾಗೋರು ದೂರಗಾಮಿ ಯೋಜನೆಗಳ್ನೂ ಹೊಂದಿರಬೇಕಲ್ವಾ? ಹಸಿದವನಿಗೆ ಆ ಕ್ಷಣಕ್ಕೆ ಊಟ ಹಾಕುದ್ರೆ ಮಾತ್ರಾ ಸಾಲ್ದು, ತನ್ನ ಅನ್ನ ತಾನೇ ಗಳುಸ್ಕೊಳೋ ದಾರೀನೂ ತೋರಿಸ್ಬೇಕು ಗುರು!
ನಿಮ್ಮ ಮತ ಯಾರಿಗೆ?
ದುರದೃಷ್ಟವಶಾತ್ ಇಂದಿನ ಚುನಾವಣೆಯಲ್ಲಿ ನಾಡು ನುಡಿಯ ಏಳಿಗೆಯ ಬಗ್ಗೆ ಕಾಳಜಿ, ಕಳಕಳಿ, ಯೋಜನೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯ ಭಾಗವಾಗುಳ್ಳ ಯಾವ ಪಕ್ಷವೂ ಕಾಣ್ತಿಲ್ಲ. ಹಾಗಾದ್ರೆ ಯಾರಿಗೆ ನಮ್ಮ ಮತ ನೀಡೋಣ? ಪಕ್ಷಗಳ ಹಂಗಿಲ್ಲದೆ ಯಾವ ಅಭ್ಯರ್ಥಿ ಕನ್ನಡ-ಕನ್ನಡಿಗ-ಕರ್ನಾಟಕಗಳ ಪರವಾದ ನಿಲುವುಗಳನ್ನು ಹೊಂದಿರ್ತಾರೋ ಅವರನ್ನು ಆರಿಸೋಣ. ಯಾರು ನಾಡು ನುಡಿಗಳ ಪರವಾಗಿ ವಿಧಾನ ಸಭೆಯಲ್ಲಿ ದನಿ ಎತ್ತುತ್ತಾರೋ ಅವರನ್ನು ಆರಿಸೋಣ. ಉತ್ತಮ ಆಡಳಿತಗಾರನಾಗಿರುವುದರ ಜೊತೆಯಲ್ಲಿ ಕನ್ನಡತನವನ್ನೂ ಹೊಂದಿರುವವರನ್ನು ಆರಿಸೋಣ. ಇಲ್ಲದಿದ್ದರೆ ಬೇಲಿ ಹಾಕದೆ ಹಣ್ಣಿನ ತೋಟ ಬೆಳಿಸಿದಂತಾಗುತ್ತೆ. ನಮ್ಮ ಜನಗಳ ಪಾಲಾಗಬೇಕಾದ ಕೆಲಸಗಳು, ಗುತ್ತಿಗೆಗಳು, ಸವಲತ್ತುಗಳು ಪರರ ಪಾಲಾಗುತ್ತೆ. ಮತ್ತೆ ನಾಡು ನುಡಿ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸ್ತಿಲ್ಲಾ ಅಂತಾ ಸಂಕಟ ಬಂದಾಗಲೆಲ್ಲಾ ನಾವು ಚಡಪಡಿಸಿ ಕೊರಗಬೇಕಾಗುತ್ತದೆ. ಏನಂತೀರಾ ಗುರು!
2 ಅನಿಸಿಕೆಗಳು:
ee mahajan wardhi, nanjundappa wardhi maththu sarojini mahishi wardhigaLu enu antha nange gothilla...thiLkoLAkke oLLe yawa moolagaLu sikkilla...elladhru idhdhare thiLisi...saadhyawaadhre wikipedia dhalli adhannu bareeri
ನಾನು ಬಸವನಗುಡಿಲಿ ಇದೀನಿ ನನ್ನ ಓಟು: ಕನ್ನಡಪಕ್ಷದ ಆರ್.ಎಸ್.ಎನ್. ಗೌಡರಿಗೆ
ಚಾಮರಾಜಪೇಟೆಲಿ ಇರೋರು ಚಂಪಾಗೆ ಹಾಕಿ
ಚಾಮರಾಜನಗರದಲ್ಲಿ ವಾಟಾಳ್ ಗೆ ಹಾಕಿ
ತುರುವೆಕೆರೆಲಿ ಜಗ್ಗೇಶ್ ಗೆ ಹಾಕಿ
ಶ್ರೀರಂಗಪಟ್ಟಣದಲ್ಲಿ ಅಂಬರೀಷ್ ಗೆ ಹಾಕಿ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!