ಕಪ್ ಕಾಫಿ ನೆನಪಿಸೋ ಗ್ರಾಹಕನ ತಾಕತ್ತು!

ಇಂಡಿಯನ್ ಕಾಫಿ ಬೋರ್ಡಿನೋರು ಕಾಫಿಯ ಪ್ರಚಾರ ಮತ್ತದರ ವ್ಯಾಪಾರ ಹೆಚ್ಚಿಸಲು ನಮ್ಮ ಭಾಷೇಲೆ ರೂಪ್ಸಿರೋ ಈ ಅಂತರ್ಜಾಲ ತಾಣ ನಿಜ್ವಾಗ್ಲೂ ಅದೆಷ್ಟು ಸೊಗಸು ಅಂದ್ರೆ ಇದುನ್ನ ನೋಡ್ತಿದ್ರೇ ಒಂದು ಲೋಟ ರುಚಿಯಾದ ಕಾಫಿ ಕುಡಿದಂತೇ ಆಗತ್ತೆ ಗುರು!
ಒಮ್ಮೆ ಈ ತಾಣಕ್ಕೆ ಹೋಗಿ ಕ್ಲಿಕ್ಕಿಸಿ ನೋಡಿ - ಇಲ್ಲಿ ಕಾಫಿಯ ಬಗ್ಗೆ ಇರೋ ಎಲ್ಲಾ ಮಾಹಿತಿಯೂ ಕನ್ನಡದಲ್ಲೇ ಇದೆ. ಕನ್ನಡಿಗನೊಬ್ಬ ಕಾಫಿ ಕುಡೀಯೋದ್ರ ಜೊತೆ ತಿಳಿಯಲು ಬಯಸುವ ಎಲ್ಲಾ ಮಾಹಿತಿ ಇಲ್ಲಿ ಕನ್ನಡದಲ್ಲೇ ಸಿಗತ್ತೆ ಗುರು! ಗ್ರಾಹಕರನ್ನು ಗೌರವಿಸೋ, ಅವರ ಮನಸ್ಸುಗಳ್ನ ಗೆಲ್ಲೋಕೆ ಇವ್ರು ಸರಿಯಾದ ಹೆಜ್ಜೆ ಇಟ್ಟಿದಾರೆ ಅನ್ನೋಕೆ ಇದೊಂದು ಒಳ್ಳೆಯ ಉದಾಹರಣೆ ಗುರು!
ಕನ್ನಡದಲ್ಲಿ ಸೇವೆ: ಮಾರುಕಟ್ಟೆ ಗೆಲ್ಲೋ ಕೀಲಿಕೈ !
ಕರ್ನಾಟಕದಲ್ಲಿ ಕಾಫಿಗೆ ಸಕ್ಕತ್ ಒಳ್ಳೆ ಮಾರುಕಟ್ಟೆ ಸಾಧ್ಯತೆ ಇದೆ ಅಂತ ಕಾಫಿ ಬೋರ್ಡಿನೋರು ಕಂಡ್ಕೊಂಡಿದಾರೆ. ಕಾಫಿ ಕುಡಿಯೋ ಪ್ರತಿಯೊಬ್ಬ ಕನ್ನಡಿಗನೂ ಈ ಅಂತರ್ಜಾಲ ತಾಣಾನಾ ತನ್ನನ್ನೇ ಉದ್ದೇಶಿಸಿ ಮಾತಾಡಲು, ಮೆಚ್ಚಿಸಲು, ಓಲೈಸಲು ರೂಪಿಸಿದ್ದಾರೆ ಅಂದ್ಕೊಳೋ ಹಾಗೆ ಇದು ಇದೆ. ಕಾಫಿ ಬೋರ್ಡಿನೋರ ಈ ನಡೆ ನಿಜಕ್ಕೂ ಮೆಚ್ಚೋ ವಿಚಾರ ಗುರು!

ನಾವು ಕುಡ್ಯೋ ಕಾಫಿ ಜಗತ್ತಿನ ಯಾವ್ದೇ ಮೂಲಿಯಿಂದ ಬಂದಿರ್ಲಿ, ಅದರ ಬಗ್ಗೆ ತಿಳ್ಕೊಳೋ ಮೂಲಕ ಅದರ ರುಚೀನ ಎರಡು ಪಟ್ಟು ಹೆಚ್ಚು ಅನುಭವಿಸಕ್ಕೆ ನಮ್ಮ ನುಡೀಲೇ ವಿವರ ಇರೋ ಈ ವ್ಯವಸ್ಥೆ ಎಷ್ಟು ಚೆನ್ನ ಅಂತ್ಲೂ, ಸಖತ್ ಸರಿ ಅಂತ್ಲೂ ಈ ತಾಣ ತೋರಿಸಿಕೊಟ್ಟಿದೆ. ಕರ್ನಾಟಕದಲ್ಲಿ ಕಾಫಿಗೆ ಮಾರುಕಟ್ಟೆ ಹೆಚ್ಸಕ್ಕೆ ಕನ್ನಡದಲ್ಲಿರೋ ಈ ತಾಣ ಸಕ್ಕತ್ ಉಪ್ಯೋಗ ಆಗತ್ತೆ ಅಂತ ಕಾಫಿ ಬೋರ್ಡಿನೊರ್ಗೆ ಅರಿವಾಗಿದೆ. ಹಾಗಾಗಿ ಕಾಫಿ ಬೋರ್ಡಿನೋರು ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ ಮುಂತಾದ ಭಾಷೆಗಳಲ್ಲೂ ಇಂಥಾ ತಾಣಗಳನ್ನು ರೂಪಿಸಿದ್ದಾರೆ ಗುರು! ಇದು ನಿಜಕ್ಕೂ ಖುಷಿ ತರೋ ವಿಷ್ಯಾನೆ!

ಕನ್ನಡದಲ್ಲಿ ಸೇವೆ ಗ್ರಾಹಕರ ಹಕ್ಕು!

ಕಾಫಿ ಬೋರ್ಡಿಗೆ ಮಾತ್ರಾ ಈ ಸೂತ್ರ ಅನ್ವಯ ಆಗಲ್ಲ. ಯಾವುದೇ ಉತ್ಪನ್ನ ನಮ್ಮ ಜನರನ್ನು ಪರಿಣಾಮಕಾರಿಯಾಗಿ ತಲುಪಬೇಕು ಅಂದ್ರೆ ಆ ವಸ್ತುವಿನ ಬಗ್ಗೆ ಇರೋ ಮಾಹಿತಿಗಳು ಕನ್ನಡದಲ್ಲಿರಬೇಕು. ಅದೆಷ್ಟೊ ವಸ್ತುಗಳನ್ನು ಹೇಗೆ ಬಳಕೆ ಮಾಡಬೇಕು ಅಂತಾ ಬರೆಯೋ ಸೂಚನೆಗಳು ಭಾಳಾ ಮುಖ್ಯವಾಗುತ್ತೆ. ಹಾಗಾಗಿ ಎಲ್ಲಾ ಸೂಚನೆಗಳು ಕೂಡ ಕನ್ನಡದಲ್ಲೇ ಇರಬೇಕು. ಇದು ಆಯಾ ಉತ್ಪನ್ನಗಳ ಮಾರಾಟ ಮಾತ್ರಾ ಹೆಚ್ಚಿಸಲ್ಲ, ಬದಲಿಗೆ ಗ್ರಾಹಕರ ಹಕ್ಕನ್ನೂ ಗೌರವಿಸೋ ಹಾಗಾಗುತ್ತೆ. ಗ್ರಾಹಕರು ಹಣ ಕೊಟ್ಟು ಕೊಂಡ್ಕೊಳ್ಳೋ ವಸ್ತೂನ ಅವ್ರಿಗೆ ಬೇಕಾದ ರೀತೀಲಿ ಮಾತ್ರಾ ಅಲ್ದೆ ಅದನ್ನ ಅವರು ಬಳಸಕ್ಕೆ ಅನುಕೂಲ ಆಗೋ ತರದಲ್ಲಿ ಕೊಡುವುದು ವ್ಯಾಪಾರಕ್ಕೇ ಒಳ್ಳೇದು ಅಂತ ಕಾಫಿ ಬೋರ್ಡಿನೋರ್ಗೆ ಅರ್ಥ ಆಗಿದೆ. ಇದು ಉಳಿಕೆ ಮಾರಾಟಗಾರರಿಗೂ ಅರ್ಥವಾದ್ರೆ ಒಳ್ಳೇದು ಗುರು!
ಪುಟ್ಟ ಕಾಫಿ ಲೋಟ ಕಲಿಸೋ ದೊಡ್ಡ ಪಾಠ!
ನಮಗಾದ್ರೂ ಈ ಪುಟ್ಟ ಕಾಫಿ ಲೋಟ ಕಲುಸ್ತಿರೋದು ಏನನ್ನು ಅಂತ ನೋಡಿ. ಬರೀ ಒಂದು ಲೋಟ ಕಾಫಿ ಕುಡ್ಯೋ ಮೂಲಕ ಅಷ್ಟು ದೊಡ್ಡ ಕಾಫಿ ಬೋರ್ಡಿನೋರೆ ನಮ್ಮ ಭಾಷೇಲಿ ಸೇವೆ ಕೊಡಕ್ಕೆ ಮುಂದಾಗಿದಾರೆ ಅಂದ್ರೆ ಅದು ನಾವು ಕುಡ್ಯೋ ಕಾಫಿಗೆ ಇರೋ ಶಕ್ತಿ ಅಲ್ಲ. ಗ್ರಾಹಕನಾಗಿ ನಮಗಿರೋ ಶಕ್ತಿ ಅಂತಾ. ಇದನ್ನು ನಾವು ಸರಿಯಾಗಿ ಅರ್ಥ ಮಾಡ್ಕೊಂಡು ಕನ್ನಡದಲ್ಲಿ ಸೇವೆಯನ್ನು ಒತ್ತಾಯಿಸಿದ್ರೆ ಎಲ್ಲಾ ಸಂಸ್ಥೆಗಳವ್ರೂ, ಉತ್ಪನ್ನದೋರೂ, ಸೇವೆಯೋರೂ ಕನ್ನಡಾನ ಅಳವಡ್ಸಿಕೊಳ್ಳೋದು ಖಂಡಿತಾ! ಅಲ್ವಾ ಗುರು?

1 ಅನಿಸಿಕೆ:

Anonymous ಅಂತಾರೆ...

coffee board website home page alli nodi,,

kodagu dressalli sakat jodi

http://indiacoffee.org/default.htm

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails