ಹಿಂದಿ ಹೇರಿಕೆ ತಡೆಗೆ 12 ಸೂತ್ರಗಳು!!

ಕೇಂದ್ರ ಸರ್ಕಾರದೋರು ಇಡೀ ದೇಶದ ತುಂಬಾ ಹಿಂದೀನ ತುಂಬ ಬೇಕು ಅಂತ ಏನೇ ಸರ್ಕಸ್ ಮಾಡುದ್ರು ಕಡೆಗೆ ಅದನ್ನು ನಾವು ಧಿಕ್ಕರಿಸಿದ್ರೆ ಅವ್ರೇನೂ ಮಾಡಕ್ ಆಗಲ್ಲಾ ಗುರು! ಹಿಂದಿ ಭಾಷಿಕರಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ, ಮಣಿಪುರದಿಂದ ಮುಂಬೈ ತನಕ ಜೀವನ ಮಾಡಕ್ಕೆ ಅನುಕೂಲ ಮಾಡಿ ಕೊಡಬೇಕು, ಅವ್ರು ಯಾವ ಕಛೇರಿಗೆ ಹೋದ್ರೂ ಅವ್ರಿಗೆ ತೊಂದರೆ ಆಗಬಾರ್ದು, ಯಾವ ಅಂಗಡಿಗ್ ಹೋದ್ರೂ ಸಲೀಸಾಗ್ ಬೇಕು. ಅವ್ರೇ ಹಿಂದಿ ಇಲ್ಲದಿರೋ ನಾಡಲ್ ಹೋಗಿ ಅಂಗಡಿ ತೆಗುದ್ರೂ, ಫ್ಯಾಕ್ಟರಿ ಕಟ್ಟುದ್ರೂ, ಕೂಲಿ ಮಾಡುದ್ರೂ ಭಾಷೆ ತೊಡಕಾಗಬಾರ್ದು ಅನ್ನೋ ಘನವಾದ ಉದ್ದೇಶದಂದ ಹಿಂದಿ ಅನ್ನೋ ಭಾಷೆನ ನಮ್ ತಲೆಗ್ ಕಟ್ಟಕ್ ಹೊರ್ಟಿದಾರೆ. ಅದಕ್ಕೆ ಸಾವಿರಾರು ದಾರಿಗಳ್ನ ಹುಡುಕ್ಕೊಂಡಿದಾರೆ. ದೇಶದ ಒಗ್ಗಟ್ಟು ಉಳ್ಸಕ್ಕೆ ಅಂತಾರೆ, ದೇಶಕ್ಕೊಂದು ಕಾಮನ್ ಭಾಷೆ ಇರಬೇಕು ಅಂತಾರೆ, ಯಾರ್ ಯಾವ ಬಾಷೇನ ಬೇಕಾದ್ರೂ ಮಾತಾಡಬೋದು ಅಂತಾರೆ, ಇದುನ್ ಸಂವಿಧಾನದ ಆಶಯ ಅಂತಾರೆ... ಹೀಗೆ ಇರೋ ಬರೋ ಸಾದ್ನ ಎಲ್ಲಾ ಬಳುಸ್ಕೊಂಡು ಹಿಂದಿ ಪ್ರಸಾರಕ್ ಮುಂದಾಗಿದಾರೆ.

ಹಿಂದೀನ ಒಪ್ಪಿದರೆ...

ಇಂಥಾ ಹೇರಿಕೆಯಿಂದ ಕನ್ನಡ ನಾಡಿಗೆ ವಲಸೆ ಹೆಚ್ಚುತ್ತೆ, ನಮ್ಮೋರಿಗೆ ಕೆಲಸ ಇಲ್ಲದಂಗ್ ಆಗುತ್ತೆ, ನಮ್ಮೂರಿನ ವ್ಯವಸ್ಥೆ ನಮಗಾಗಿ ಇರಲ್ಲ ಬರೀ ಹಿಂದಿಯವರಿಗೆ ಇರುತ್ತೆ (ಬೆಂಗಳೂರಿನ ಕೇಂದ್ರ ಸರ್ಕಾರಿ ಕಛೇರಿಲೂ ಕನ್ನಡದಲ್ಲಿ ಸೇವೆ ಕೊಡೋದು ಕಡ್ಡಾಯ ಅಲ್ಲ, ಆದ್ರೆ ಹಿಂದೀಲಿ ಕೊಡಲ್ಲ ಅನ್ನೋದು ಅಪರಾಧ ಅನ್ನುತ್ತೆ ’ಅಫಿಷಿಯಲ್ ಲಾಂಗ್ವೇಜ್ ಆಕ್ಟ್’). ಕಡೆಗೆ ನಮ್ಮ ನಾಡು, ಜನ, ನಾಡಿನ ಸಂಪತ್ತು ಎಲ್ಲಾ ಈ ಹಿಂದಿಯೋರ ಗುಲಾಮಗಿರಿಗೆ ಇರೋ ಸವಲತ್ತುಗಳಾಗ್ತವೇ ಅಷ್ಟೆ. ಇದನ್ನು ತಪ್ಪಿಸಬೇಕಾದದ್ದು ನಮ್ಮ ನಿಮ್ಮ ಹೊಣೆಯಾಗಿದೆ.

ಒಪ್ಪದೇ ಇರಕ್ ಏನ್ ಮಾಡ್ಬೇಕಪ್ಪಾ ಅಂದ್ರೆ...

ಶಿಕ್ಷಣ

೦೧. ಮಕ್ಕಳಿಗೆ ಮೊದಲು ಹಿಂದಿ ರಾಷ್ಟ್ರಭಾಷೆ ಅನ್ನೋ ಸುಳ್ಳನ್ನು ಹೇಳಿಕೊಡೋದನ್ನು ನಿಲ್ಲಿಸೋಣ. ಭಾರತ ನಾನಾ ಭಾಷಾ ಪ್ರದೇಶಗಳ, ಸಂಸ್ಕೃತಿ ಜನಾಂಗಗಳ ನಾಡು, ಇದರಲ್ಲಿ ಎಲ್ಲಕ್ಕೂ ಸಮಾನವಾದ ಸ್ಥಾನಮಾನ ಇರಬೇಕು, ಹಿಂದೀನೂ ಕನ್ನಡದ ಹಾಗೆ ಒಂದು ಜನಾಂಗವಾಡೋ ಭಾಷೆ, ಅದುಕ್ಕೇನು ಕೊಂಬಿಲ್ಲ ಅಂತ ಹೇಳಿಕೊಡೋಣ.

೦೨. ಕರ್ನಾಟಕ ರಾಜ್ಯ ಕಲಿಕಾ ಪದ್ದತಿಯಲ್ಲಿ ಅಳವಡಿಸಿಕೊಂಡಿರೋ ತ್ರಿಭಾಷಾ ಸೂತ್ರವನ್ನು ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸೋಣ. ನಮ್ಮ ನಾಡಿನ ಮಕ್ಕಳಿಗೆ ಶಾಲಾ ಹಂತದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಸಾಕು. ಮುಂದೆ ಅವರಿಗೆ ಬೇಕಾದ ಭಾಷೆ ಕಲಿಯೋ ವ್ಯವಸ್ಥೆ ಇರಲಿ ಅಷ್ಟೆ. ಜೊತೆಗೆ ಕೇಂದ್ರ ಸರ್ಕಾರ ವರ್ಗಾವಣೆಗಳಿಗೆ ಈಡಾಗೋ ತನ್ನ ನೌಕರರ ಮಕ್ಕಳಿಗೆ ಅಂತಲೇ ಹುಟ್ಟು ಹಾಕಿರೋ ಐ.ಸಿ.ಎಸ್.ಇ, ಸಿ.ಬಿ.ಎಸ್.ಇ ಹಾಗೂ ಕೇಂದ್ರೀಯ ವಿದ್ಯಾಲಯಗಳ ಮೇಲೆ ನಿಯಂತ್ರಣ ಇಟ್ಕೊಂಡು ಅಲ್ಲಿ ಬರೀ ಅಂತಹ ಮಕ್ಕಳಿಗೆ ಮಾತ್ರಾ ಶಿಕ್ಷಣ ಕೊಡ್ಸೋದ್ನ ಖಾತ್ರಿ ಮಾಡ್ಕೊಳ್ಳಲಿ, ಜೊತೆಗೆ ಅಂತಹ ಶಾಲೆಗಳಲ್ಲೂ ಆಯಾ ಪ್ರದೇಶದ ಭಾಷೇನ ಕಡ್ಡಾಯವಾಗಿ ಕಲಿಸೋ ವ್ಯವಸ್ಥೆ ಮಾಡಲಿ ಅಂತ ಕೇಂದ್ರ ಸರ್ಕಾರಾನ ಒತ್ತಾಯಿಸೋಣ.

೦೩. ನಮ್ಮ ಮಕ್ಕಳು ಹಿಂದಿ ಪರೀಕ್ಷೆಗಳನ್ನು ತೊಗೊಳ್ಳೋದನ್ನು ಉತ್ತೇಜಿಸೋದು ಬೇಡ. ಯಾಕಂದ್ರೆ ಆ ಮೂಲಕ ನಾವು ಮಕ್ಕಳಿಗೆ ಚಿಕ್ಕಂದಿನಲ್ಲೇ ತಲೇಲಿ ಭಾರತದಲ್ಲಿರೋಕೆ ಹಿಂದಿ ಕಲೀಬೇಕು ಅನ್ನೋ ತಪ್ಪು ಸಂದೇಶ ಕೊಡ್ತೀವಿ ಅಲ್ಲದೆ ಆ ಪರೀಕ್ಷೆಗಳ ಮೂಲಕ ಹಿಂದಿ ರಾಷ್ಟ್ರಭಾಷೆ ಅಂತ ಸುಳ್ಳು ತುಂಬ್ತೀವಿ.


ಆಡಳಿತ


೦೪. ಕನ್ನಡ ನಾಡಿನ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದಲ್ಲಿ ಸೇವೆ ನಮ್ಮ ಮೂಲಭೂತ ಹಕ್ಕು ಮತ್ತು ಇದರ ಜಾರಿಗೆ ಇರೋ ಅಡೆತಡೆ ನಿವಾರಣೆಗೆ ಸರ್ಕಾರ ಗ್ರಾಹಕ ಸೇವೆಯ ಕಾಯ್ದೆ ಮಾಡಿ ಕನ್ನಡದಲ್ಲಿ ಸೇವೆ ಕೊಡದೆ ಇರೋದು ಶಿಕ್ಷಾರ್ಹ ಅಪರಾಧ ಅನ್ನುವುದನ್ನು ಜಾರಿಗೆ ತರಲಿ ಎಂದು ಸರ್ಕಾರಾನ ಒತ್ತಾಯಿಸೋಣ.


೦೫. ಕೇಂದ್ರ ಸರ್ಕಾರದ ಅಧೀನದ ಬ್ಯಾಂಕುಗಳೂ ಸೇರಿದಂತೆ ಎಲ್ಲ ಸರ್ಕಾರಿ ಕಛೇರಿಗಳ ವ್ಯವಹಾರದಲ್ಲಿ ಕನ್ನಡವೊಂದನ್ನೇ ಬಳಸೋಣ. ಕನ್ನಡ ನಮೂನೆಗಳು ಇರುವಂತೆ ಒತ್ತಾಯಿಸೋಣ. ಕರ್ನಾಟಕ ಸರ್ಕಾರ ತನ್ನ ನೆಲದಲ್ಲಿರೋ ಎಲ್ಲಾ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕನ್ನಡದ ನಮೂನೆ, ಕನ್ನಡದ ಸೇವೆ ಕಡ್ಡಾಯ ಮಾಡಲಿ ಎಂದು ಒತ್ತಾಯಿಸೋಣ.

೦೬. ಕೇಂದ್ರ ಸರ್ಕಾರಿ ನೌಕರರಾಗಿದ್ದಲ್ಲಿ, ಹಿಂದಿ ದಿವಸ/ ಹಿಂದಿ ಸಪ್ತಾಹಗಳ ಆಚರಣೆಗಳನ್ನು ಸಾರಸಗಟಾಗಿ ಬಹಿಷ್ಕರಿಸೋಣ.

ಗ್ರಾಹಕ ಸೇವೆ


೦೭. ಕರ್ನಾಟಕದ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದಲ್ಲಿ ಬೋರ್ಡುಗಳನ್ನು ಹಾಕುವಂತೆ, ಕನ್ನಡ ಬಲ್ಲ ಸಿಬ್ಬಂದಿ ಇಟ್ಟುಕೊಳ್ಳುವಂತೆ ಒತ್ತಡ ಹೇರೋಣ.


೦೮. ತಳ್ಳೋ ತರಕಾರಿ ಗಾಡಿಯೋರಿಂದ ಹಿಡ್ದು ಅಪಾರ್ಟ್ಮೆಂಟ್ ಮಾರೋರ ತನಕ ಎಲ್ಲಾರ್ ಜೊತೆ ನಾವು ಗ್ರಾಹಕರಾಗಿ ನಮಗಿರೋ ಹಕ್ಕನ್ನು ತಪ್ಪದೇ ಚಲಾಯಿಸೋಣ. ಅಂದ್ರೆ ಎಲ್ಲೆಡೆ ಕನ್ನಡದಲ್ಲೇ ವ್ಯವಹರಿಸೋಣ. ಕನ್ನಡ ಮಾತಾಡಲ್ಲ ಅಂದ್ರೆ ’ಹೋಗ್ರೀ ಸ್ವಾಮಿ, ನೀವೂ ಬೇಡ, ನಿಮ್ ಅಂಗಡೀನೂ ಬೇಡ’ ಅಂತ ಎದ್ ಬರೋಣ.

ವಲಸೆ

೦೯. ಹಿಂದಿ ತಾಯ್ನುಡಿಯೋರು ಮಾತ್ರಾ ಅಲ್ದೆ ಇಲ್ಲಿಗೆ ಬರೋ ಬೇರೆ ಭಾಷೆಯೋರ ಜೊತೆಗೂ ಕನ್ನಡದಲ್ಲೇ ಮಾತಾಡಿಸಿ ಕನ್ನಡ ಕಲಿಸಲು ಮುಂದಾಗಿ, ಕನ್ನಡ ಕಲಿಯೋ ವಾತಾವರಣ ಹುಟ್ ಹಾಕೋಣ. ಹಿಂದಿ ಬರೋರೂ ಕೂಡಾ ನಮಗೆ ಹಿಂದಿ ಬರಲ್ಲ ಅಂತ ಸೋಗು ಹಾಕಿ, ಹಿಂದಿ ಬಳಸೋರಿಗೆ ಅಸಹಕಾರ ಒಡ್ಡೋಣ.

ಮನರಂಜನೆ

೧೦. ಮನರಂಜನೆ ಅನ್ನೋದು ಹಿಂದಿ ಹೇರಕ್ಕೆ ಬಳಕೆ ಆಗ್ತಿರೋ ಅತಿ ಮುಖ್ಯವಾದ ಸಾಧನ. ಆ ಕಾರಣದಿಂದಾಗಿ ಹಿಂದಿ ಸಿನಿಮಾಗಳನ್ನು ಪ್ರೋತ್ಸಾಹಿಸೋದನ್ನು ನಿಲ್ಲಿಸೋಣ. ಹಿಂದಿ ಹಾಡುಗಳನ್ನು ಹಾಕೋ ರೇಡಿಯೋ ವಾಹಿನಿಗಳನ್ನು ಬಹಿಷ್ಕರಿಸೋಣ. ಹಿಂದೀಲಿ ಜಾಹಿರಾತು ಹಾಕೋರಿಗೆ ಕನ್ನಡದಲ್ಲಿ ಹಾಕಿ ಅಂತ ಒತ್ತಾಯಿಸೋಣ.

ಜೊತೆಯಲ್ಲೇ...

೧೧. ಹಿಂದಿಗೂ ದೇಶಭಕ್ತಿಗೂ ಯಾವ ಸಂಬಂಧವೂ ಇಲ್ಲ, ಹಿಂದಿಗೂ ದೇಶದ ಒಗ್ಗಟ್ಟಿಗೂ ಯಾವ ಸಂಬಂಧವೂ ಇಲ್ಲ ಅಂತಾ ಮನವರಿಕೆ ಮಾಡ್ಕೊಳ್ಳೋಣ. ನಿಜವಾಗ್ಲೂ ಹಿಂದಿ ಅನ್ನೋ ಒಂದು ಭಾಷೇನ ಎಲ್ಲರ ಮೇಲೆ ಹೇರೋದ್ರ ಮೂಲಕ ದೇಶದ ಒಗ್ಗಟ್ಟನ್ನು ಬಿಕ್ಕಟ್ಟಿಗೆ ತಳ್ಳಿದ ಹಾಗಾಗುತ್ತೆ ಅಂತ ಅರ್ಥ ಮಾಡ್ಕೊಳ್ಳೋಣ.

೧೨. ಕಡೆಯದಾಗಿ ಕನ್ನಡ ಜನರಲ್ಲಿ ಈ ಹಿಂದಿ ಅನ್ನೋದ್ರ ಹೇರಿಕೆ ನಡೀತಾ ಇದೆ, ಅದುನ್ನ ಒಪ್ಕೊಂಡ್ರೆ ನಮ್ಮ ಸರ್ವನಾಶ ಗ್ಯಾರಂಟಿ ಅನ್ನೋ ಜಾಗೃತಿ ಹುಟ್ಟುಹಾಕೋಣ. ನಮ್ಮ ವಿರೋಧ ಹಿಂದಿ ನಾಡಿನಲ್ಲಿ ಹಿಂದಿಯ ಸಾರ್ವಭೌಮತ್ವದ ವಿರುದ್ಧ ಅಲ್ಲ, ಅದೇನಿದ್ರೂ ನಮ್ಮ ನಾಡಲ್ಲಿ ಹಿಂದೀನ ನಮ್ಮ ಮೇಲೆ ಹೇರೋದರ ವಿರುದ್ಧ ಅನ್ನೋದನ್ನು ಮನವರಿಕೆ ಮಾಡಿಸೋಣ.

ನಿಜವಾದ ಒಕ್ಕೂಟ ವ್ಯವಸ್ಥೆ ನಮಗೆ ಬೇಕು

ನಮಗೆ ಇಂದು ಬೇಕಿರುವುದು ಸಮ ಗೌರವದ ಸರಿಯಾದ ಒಂದು ಒಕ್ಕೂಟ ವ್ಯವಸ್ಥೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ಮರಾಠಿಯೂ, ತಮಿಳುನಾಡಿನಲ್ಲಿ ತಮಿಳೂ, ಕನ್ನಡನಾಡಿನಲ್ಲಿ ಕನ್ನಡವೂ, ಪಂಜಾಬಿನಲ್ಲಿ ಪಂಜಾಬಿಯೂ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಹಿಂದಿಯೂ ಸಾರ್ವಭೌಮ ಭಾಷೆ ಆಗಿರುತ್ತದೆ. ಪ್ರತಿಯೊಂದು ನಾಡಿನ ಆಡಳಿತ ಭಾಷೆಯಾಗಿ ಆಯಾ ಪ್ರದೇಶದ ಭಾಷೆಯಿರುತ್ತದೆ. ನಾಡಿನ ವ್ಯವಸ್ಥೆ ವಲಸಿಗರಿಗಾಗಿ ಇರದೆ ನಾಡಿಗರಿಗಾಗಿ ಇರುತ್ತದೆ. ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಯಾಗಿ ಎಲ್ಲ ಭಾರತೀಯ ಭಾಷೆಗಳೂ ಇರುತ್ತವೆ. ಯಾವ ಒಂದು ಭಾಷಿಕ ಜನಾಂಗಕ್ಕೂ ಉಳಿದವರ ಮೇಲೆ ದೌರ್ಜನ್ಯ ಮಾಡುವ, ದರ್ಪ ತೋರುವ, ಗುಲಾಮಗಿರಿಗೆ ತಳ್ಳುವ, ಸವಾರಿ ಮಾಡುವ ಅವಕಾಶವಿರುವುದಿಲ್ಲ. ಯಾವೊಂದು ಭಾಷೆಯನ್ನೂ ಉಳಿದವುಗಳಿಗಿಂತ ಮೇಲು ಎಂದು ವಿಶೇಷ ಸ್ಥಾನಮಾನದ ಮೂಲಕ ಉತ್ತೇಜಿಸುವ ಮತ್ತು ಹೇರುವ ಅವಕಾಶ ಇರುವುದಿಲ್ಲ. ಇಂತಹ ಒಕ್ಕೂಟ ವ್ಯವಸ್ಥೆಯೇ ಭಾರತವನ್ನು ಬಲಿಷ್ಟಗೊಳಿಸುವುದು, ಭಾರತವನ್ನು ಒಂದಾಗಿಡುವುದು. ಏನಂತೀ ಗುರು?

6 ಅನಿಸಿಕೆಗಳು:

Anonymous ಅಂತಾರೆ...

ಕೇ೦ದ್ರ ಸರ್ಕಾರಕ್ಕೆ ಯಾಕೋ ಬುದ್ದಿ ಬರೋಹಾಗೆ ಕಾಣೆ ಗುರು.. ನಮ್ಮ ನಾಡಿನ ಸರ್ಕಾರಾನೂ ರಾಷ್ಟ್ರೀಯ ಪಕ್ಷಗಳ ಗುಲಾಮ.. ನಾವು ಹೇಳೋದು ಯಾರು ಕೇಳುತ್ತಾರೆ? ನಮ್ಮ ಅಹವಾಲುಗಳನ್ನು ಕೇ೦ದ್ರದ ಮು೦ದೆ ಯಾರು ಪ್ರತಿನಿಧಿಸುತ್ತಾರೆ?

ಇಲ್ಲಿ ಬಾ೦ಬು ಧಾಳಿಯಾದರೂ ಸುಮ್ಮನಿರುವ ಸರ್ಕಾರಗಳು, ನಾಡ ಉನ್ನತಿಗೆ ಕನ್ನಡವೇ ಬೇಕು,ಹಿ೦ದಿ ಹೇರಿಕೆ ಮಾಡಬೇಡಿ ಎ೦ದು ಹೇಳುತ್ತಾರೆಯೇ? ಖ೦ಡಿತ ಇಲ್ಲ.

ಪರಿಹಾರ = ಜಾಗ್ರುತಿಯೊ೦ದೇ!! ೧೨ ಸೂತ್ರಗಳನ್ನು ಸಕ್ಕತ್ತಾಗಿ ಎಲ್ಲರೂ ಪಾಲಿಸಿದರೆ... ಸ್ವಲ್ಪ ಬದಲಾವಣೆ ತರಲು ಸಾಧ್ಯ!

ಹಿಂದಿ ಬಳಸೋರಿಗೆ ಅಸಹಕಾರ ಒಡ್ಡೋಣ.. ಆದರೆ ಅ೦ಗಡಿ ಇಟ್ಟವ ಹೀಗೆ ಮಾಡಲಾರ. ಹಿ೦ದಿಯವರು ಸತ್ತರೂ ಕನ್ನಡ ಮಾತಾಡಲ್ಲ! ಇದೇ ನೆಲದಲ್ಲಿ ಹಿ೦ದಿ ಗು೦ಪುಗಳನ್ನು ಮಾಡ್ತಾರೆ, ನಾವೇ ದೇಶಭಕ್ತರು ಅ೦ತ ಕೊಚ್ಕೊತಾರೆ!

clangorous ಅಂತಾರೆ...

tumba artha poornavaada soothragaLu, nimage nanna hrudayapooraka abhinandanegaLu.ee soothrugaLu jaarige barodu nyaya guru.. ondu bhaashe inda innodu bhaashege kantaka akshyamya aparadha guru. yellavu namma bharathada bhaashegaLallave ... ? yaavattu gaurava kottu gaurava apekshisabekallave ? .... koneyadaagi ivattina dina intaha olle lekhana kottiddakke namma tumbu hrudayada vandanegaLu guru..

Hindiya herikege dhikkaravirali !!!

jai kannadambe

kannadabhimani

Anonymous ಅಂತಾರೆ...

I guess the intense of forcing Hindi started during recent BJP rule in center. Therefore we need to force current BJP in Karnataka to correct the rest of the BJP in the country. Local state language and English are adequate for all states and learning other languages should be purely optional.

Anonymous ಅಂತಾರೆ...

anonymnous ravare,
Hindi imperialism bahala hinde indane nadedukondu bandide.. Rashtrana ottugoodisakke hindine matadbeku anta kelavu sanghatanegalaadre, innu kelavu prantiya bhashegalige sthana sigabekendu haagu bhaashaadharita Rashtra kattabeku endu ottayisuttiddaru.

1965 nalli rashtra bere agibidabekagittu.. ashtaralli sarkara hogli Englishu irali antandru.. illadidre.. ivattu Tamilnadu bere desha agogta ittu..

Tamilarige Desha odeyoshtu kopa yakappa bandittu... anta swalpa itihasada putagalannu tiruvi hakidre namagella tiliyatte.. adakke karana Bhayankaravada E Hindi Herike.

hamsanandi ಅಂತಾರೆ...

ಚೆನ್ನಾಗಿ ಬರೆದಿದೀರ್ರೀ!

ಇದರಲ್ಲಿ ಕೆಲವು ಸೂತ್ರಗಳನ್ನಾದ್ರೂ ಬಿಟ್ಟೂ ಬಿಡದೇ ಹಿಡಿದ್ರೆ ಎಷ್ಟೋ ಒಳ್ಳೇದಾಗುತ್ತೆ :)

Anonymous ಅಂತಾರೆ...

೧೨ ಸೂತ್ರಗಳು - ೧೨ ನಿಬಂದನೆಗಳಾಗಬೇಕು, ಅದು ಯಾವಾಗ್ಲೂ ಕನ್ನಡಕ್ಕೇ ಮತ್ತು ಕರ್ನಾಟಕಕ್ಕೆ ಪ್ರೋತ್ಸಾಹ ಕೊಡೊ ಹಾಗೆ ಇರಬೇಕು...

"ಕನ್ನಡ ನಾಡಿನ ಕಲ್ಲಿನ ಮೇಲೆ - ಕೆತ್ತು ನೀ ಕನ್ನಡದ ರಣ ಕಹಳೆಯ ಮಾಲೆ
ಕನ್ನಡಿಗರ ಎದೆಯ ಮೇಲೆ - ಬಿತ್ತು ನೀ ಕನ್ನಡದ ಅಕ್ಷರ ಮಾಲೆ
ಎರಡು ಬಣ್ಣದ ಬಾವುಟ ಹಿಡಿದ ಮೇಲೆ - ಕನ್ನಡಿಗ ನೀ ಕರುನಾಡ ಸಿಡಿಲಿನ ಮಾಲೆ".

ಅಲ್ಲ ಗುರು..... ನಮ್ಮ ಕೇಂದ್ರ ಸರ್ಕಾರಕ್ಕೆ ಬುದ್ದಿನೇ ಬರಲ್ಲ ಗುರು.....

೨ ತಿಂಗಳಿಂದ ಇಚೆಗೆ ದೇಶದಲ್ಲಿ ೩ ಬಾರಿ ಸರಣಿ ಬಾಂಬ್ ಪ್ರಕರಣ ನಡೆದಿದೆ ಅದರಲ್ಲಿ ಒಂದು ನಮ್ಮದೇಶದ ರಾಜಧಾನಿಯಲ್ಲಿ....... ಕರ್ನಾಟಕ ಮತ್ತು ಗುಜರಾತ್ನಲ್ಲಿ ಇದರಬಗ್ಗೆ ಶರವೇಗದಲ್ಲಿ ತನಿಕೆ ನಡಿತಿರಬೇಕಾದ್ರೆ.... ಕೇಂದ್ರದಲ್ಲಿ ಮಾತ್ರ...... ಇಡಿ ದೇಷಣೆ ಹಾಲದ್ರು ಪರವಾಗಿಲ್ಲ ನಮಗೆ ಹಿಂದಿಯ ಸಾರ್ವಬೌಮತ್ವನೆ ಮುಖ್ಯ ಅಂತನೆ ತನ್ನ ಹೇರಿಕೆ ಮುಂದು ವರೆಸುತ್ತಿದೆಯಲ್ಲ, ಇದರಿಂದ ಮುಂದೆ ಆಗುವ ಪರಿಣಾಮ ಹೇಗಿರುತ್ತೆ ಅಂತ ಅದಕ್ಕೆ ಯೋಚಿಸೋ ದೂರದೃಷ್ಟಿನೆ ಇಲ್ಲ ಅನ್ಸುತ್ತೆ....... ಇಂತಹ ಬೇಜವಾಬ್ದಾರಿಯಿಂದ ದೇಶಾನೇ ಒಡೆದು ಚೂರು-ಚೂರು ಆಗೋದ್ರಲ್ಲಿ ಸಂದೇಹನೆ ಇಲ್ಲ.

ಭಾಷೆಗಿಂತ - ದೇಶ ದೊಡ್ಡದು, ದೇಶದ ಒಗ್ಗಟ್ಟು ಅದಕ್ಕಿಂತ ದೊಡ್ಡದು ಅನ್ನೋ ಮಾತನ್ನ ಕೇಂದ್ರ ಸರ್ಕಾರ ತಿಳ್ಕೊಲಲ್ಲ, ಇಲ್ಲಿವರೆಗೂ ತಿಳ್ಕೊಳಲ್ವೋ ಅಲ್ಲಿವರೆಗೂ ನಮ್ದೇಶ ಉದ್ದಾರ ಆಗೋಲ್ಲ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails