ಸರಿಯಾದ ವ್ಯವಸ್ಥೆಯೊಂದೇ ಕಾಪಾಡಬಲ್ಲದು!

ಮುಂಬೈನ ತಾಜ್ ಹೋಟೆಲ್, ಓಬೆರಾಯ್ ಹೋಟೆಲ್, ನಾರಿಮನ್ ಹೌಸ್ ಮುಂತಾದ ಕಡೆ ರಕ್ಕಸರು ನಡೆಸಿದ ದಾಳಿ ಇಡೀ ಭಾರತದ ಜನರಲ್ಲಿ ತಲ್ಲಣ ಹುಟ್ಟುಹಾಕಿದೆ. ಈ ಘಟನೇನ ಬೇರಾಗಿಸಿಕೊಂಡು ಅನೇಕ ವಿಚಾರಲಹರಿಗಳು ಹರಿದಾಡ್ತಾ ಇದ್ದು ಜನರ ಮನಸ್ಸು ದುರ್ಬಲವಾಗಿದ್ದಾಗ ಹಲವು ರೀತಿಯಲ್ಲಿ ಗೊಂದಲ ಹುಟ್ಟುಹಾಕ್ತಿರೋದು ಕೂಡಾ ನಿಜಾ ಗುರು!

ರಾಷ್ಟೀಯ ಏಕತೆಯ ತಪ್ಪು ಪ್ರಚಾರ!

ಸಾವಿನ ಮನೆಯಲ್ಲಿ ಗಳ ಹಿಡಿಯೋ ಪ್ರವೃತ್ತಿಗೆ ಕೆಲ "ರಾಷ್ಟ್ರೀಯ" ಮಾಧ್ಯಮಗಳೂ ಇಳಿದು ಇವತ್ತು ಭಯೋತ್ಪಾದನೆ ತಡೆಯಲು ಭಾರತೀಯರೆಲ್ಲಾ ಒಂದಾಗಬೇಕು ಅನ್ನೋ ಕರೆ ಕೊಡೋ ನೆಪದಲ್ಲಿ ಒಕ್ಕೂಟ ಧರ್ಮದ ಸಿದ್ಧಾಂತವನ್ನೇ ಟೀಕಿಸುವ ಕೀಳಾಟಕ್ಕೆ ಇಳಿದಿವೆ. ಇವತ್ತು ಮುಂಬೈಯಲ್ಲಿ ಹೋರಾಡಿದ ಸೈನಿಕರಲ್ಲಿ ಮರಾಠಿಗಳೇ ಇರಲಿಲ್ಲವೆಂತಲೂ, ಹೊರನಾಡಿಗರಿಂದಲೇ ಮುಂಬೈ ಉಳಿಯಿತೆಂತಲೂ ಪ್ರಚಾರ ಮಾಡುತ್ತಿದ್ದಾರೆ. ಮಹಾರಾಷ್ಟ್ರವೂ ಸೇರಿದಂತೆ ಎಲ್ಲ ರಾಜ್ಯಗಳ ರಕ್ಷಣಾ ಹೊಣೆಯನ್ನು ಕೇಂದ್ರಸರ್ಕಾರ ಹೊರುವುದಕ್ಕೂ ಮಹಾರಾಷ್ಟ್ರಕ್ಕೆ ಅನಿಯಂತ್ರಿತ ವಲಸೆ ಬೇಡ ಅನ್ನುವುದಕ್ಕೂ ಏನು ಸಂಬಂಧವೋ ತಿಳಿಯದು. ರಾಜ್ ಠಾಕ್ರೆ ಮರಾಠಿಗರ ಸಮಸ್ಯೆಗಳ ಬಗ್ಗೆ ಮಾತಾಡೋದೆ ಕ್ಷುಲ್ಲಕ ಅನ್ನೋ ಧಾಟೀಲಿ ಇವರು ಮಾತಾಡ್ತಿದಾರೆ. ವಾಸ್ತವವೆಂದರೆ ರಾಜ್ಯಗಳ ಸ್ವಾಯತ್ತತೆ ರಾಷ್ಟ್ರೀಯ ಏಕತೆಗೆ ಪೂರಕವೇ ಹೊರತು ಮಾರಕವಲ್ಲ ಅಂತ ಅರಿಯಬೇಕಾಗಿದೆ ಗುರು!

ಪೊಳ್ಳು ನಾಡಪ್ರೇಮದ ಹುಚ್ಚೆಬ್ಬಿಸೋರು!

ಜನರ ಮಿಡಿವ ಮನಸ್ಸನ್ನೇ ಬಂಡವಾಳವಾಗಿಸಿಕೊಳ್ಳೋ ಕೆಲ ಮಾಧ್ಯಮಗಳೋರು ಜನರಿಗೆ ನೀವೆಲ್ಲಾ ಕ್ಯಾಂಡಲ್ ಹಚ್ಚಿ, ಸಂತಾಪ ಸೂಚಿಸೋಕ್ಕೆ ಚಿಕ್ಕೋಲೆಗಳನ್ನು (SMS) ಕಳಿಸಿ ಅಂತೆಲ್ಲಾ ಮರುಳು ಮಾಡಿ ವ್ಯಾಪಾರಕ್ಕಿಳಿದಿದ್ದಾರೆ. ನಾವು ನಿಜವಾಗ್ಲೂ ಅರಿಯ ಬೇಕಿರೋದು ಏನಪ್ಪಾ ಅಂದ್ರೆ ಇಷ್ಟೇಯೇನು ದೇಶಪ್ರೇಮ ಅಂದ್ರೆ ? ಕ್ರಿಕೆಟ್ಟಲ್ಲಿ ಗೆದ್ದಾಗ ಮುಖದ ಮೇಲೆ ಬಾವುಟ ಬರ್ಕೊಳ್ಳೋದು, ನಾಡಹಬ್ಬ ಬಂತಂದ್ರೆ ನಮ್ಮ ನಮ್ಮ ಗಾಡಿಗಳಿಗೆ ಬಾವುಟ ಕಟ್ಕೊಂಡು ಊರತುಂಬಾ ಅಲೆಯೋದು ಇಷ್ಟಕ್ಕೇ ಸೀಮಿತಾನಾ ನಮ್ಮ ನಾಡಪ್ರೇಮ? ಅನ್ನೋ ಪ್ರಶ್ನೆ ಕೇಳ್ಕೊಬೇಕಿದೆ. ಇದನ್ನೆಲ್ಲಾ ಮಾಡಲೇಬಾರದು ಅನ್ನುತ್ತಿಲ್ಲಾ, ಆದ್ರೆ ನಾಗರೀಕರಾಗಿ ನಮ್ಮ ನಾಡಪ್ರೇಮ ಅನ್ನೋದು ಹೀಗೆ ಒಂದೊಂದು ದಿನಕ್ಕೆ, ಒಂದೆರಡು ವಾರಗಳಿಗೆ ಮಾತ್ರಾ ಸೀಮಿತವಾಗಿದ್ರೆ ನಾಡು ಉದ್ಧಾರ ಆಗುತ್ತಾ ಅನ್ನೋದನ್ನು ಯೋಚಿಸಬೇಕಾಗಿದೆ. ದಿನಾ ಬೀದಿಯಲ್ಲಿ ಹೋಗುವಾಗ ಸಂಚಾರಿ ನಿಯಮವನ್ನು ಪಾಲಿಸಿ ಟ್ರಾಫಿಕ್ ದೀಪಗಳಿಗೆ ಗೌರವ ಕೊಡ್ತೀವಿ ಅನ್ನೋದ್ರಿಂದ ಹಿಡಿದು ನಮ್ಮ ಕೆಲಸ ಆಗಬೇಕು ಅಂತ ಲಂಚ ಕೊಡದೆ, ಲಂಚ ತೊಗೊಳ್ದೆ ನಮ್ಮ ಕೆಲಸ ಮಾಡ್ತೀವಿ ಅನ್ನೋ ತನಕ ಈ ನಾಡಪ್ರೇಮ ನಮ್ಮಲ್ಲಿ ಜಾಗೃತವಾಗಿರಬೇಕಲ್ವಾ ಗುರು? ಈ ಜಾಗೃತಿ ಒಂದು ದಿನದ್ದಲ್ಲ... ಪ್ರತಿದಿನಾ ಇರಬೇಕಾದ್ದು.

ಸರಿಯಾದ ವ್ಯವಸ್ಥೆ ಮಾತ್ರಾ ನಮ್ಮನ್ನು ಕಾಪಾಡಬಲ್ಲದು!

ಹೊರನಾಡಿನಿಂದ ಈ ಭಯೋತ್ಪಾದಕ ಕೃತ್ಯ ನಡೆದಿದ್ರೆ ಅದನ್ನು ಎದುರಿಸಲು ಬೇಕಿರೋದು ಗಟ್ಟಿಯಾದ ವಿದೇಶಾಂಗ ನೀತಿ. ಎಲ್ಲಿಯವರೆಗೆ ಸಹಿಸ್ತೀವಿ? ಎಂತಹ ಕಠಿಣ ಕ್ರಮಕ್ಕೆ ಮುಂದಾಗ್ತೀವಿ? ಹೇಗೆ ಜಾಗತಿಕ ಸಮುದಾಯದ ಸಹಕಾರ ತೊಗೋತೀವಿ? ಅನ್ನೋದೆಲ್ಲಾ ಸಹಜವಾಗೇ ಇಂತಹ ವಿದೇಶಾಂಗ ನೀತಿಯ ಅಂಗವಾಗಿರುತ್ತೆ. ಭಯೋತ್ಪಾದಕರು ನಾಡಿನ ಒಳಗಿನವರಾದ್ರೆ ಅಂತಹವರ ಹುಟ್ಟಡಗಿಸೋದು ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಅಂತಹವರ ಹಿಂದೆ ಎಂತಹ ಬೆಂಬಲ ನೀಡುವ ಶಕ್ತಿಯೇ ಇದರೂ ಅದನ್ನು ಬಗ್ಗು ಬಡಿಯಬೇಕಾಗಿದೆ. ಇಂತಹ ದಿಟ್ಟಕ್ರಮ ಕೈಗೊಳ್ಳಬೇಕು ಅಂದ್ರೆ ನಮ್ಮ ನ್ಯಾಯಾಲಯಗಳು ಬೇಗನೆ ಕಠಿಣವಾದ ತೀರ್ಪು ನೀಡಬೇಕಾದ ಅಗತ್ಯವಿದೆ. ನಮ್ಮ ಪೊಲೀಸ್ ಜಾಲವನ್ನು ಬಲಗೊಳಿಸಬೇಕಿದೆ. ನಮ್ಮ ನಾಗರೀಕರ ಚಲನವಲನಗಳ ಬಗ್ಗೆ ಕಣ್ಣಿಡುವಂತಹ ಗುಪ್ತಚರ ಇಲಾಖೆ ಬಲಗೊಳ್ಳಬೇಕಾಗಿದೆ. ಭ್ರಷ್ಟತೆಯ ಗೆದ್ದಲು ಹತ್ತಿರೋ ವ್ಯವಸ್ಥೆ ನಮ್ಮದಾಗಿದ್ದರೆ ಈ ಸವಾಲನ್ನು ಎದುರಿಸಲು ಸಾಧ್ಯವೇ ಇಲ್ಲ. ರಾಜಕೀಯ ಕೈವಾಡವಿಲ್ಲದ, ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿರುವ ಪೊಲೀಸ್ ವ್ಯವಸ್ಥೆ - ಅತ್ಯುತ್ತಮ ಆಧುನಿಕ ಶಸ್ತ್ರಾಸ್ತ್ರಗಳು, ವಿಶ್ವದರ್ಜೆಯ ತರಬೇತಿ ಪಡೆದ ಸಿಬ್ಬಂದಿ, ಅತ್ಯಂತ ಎಚ್ಚರಿಕೆಯಿಂದ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಬಲ್ಲ ಗುಪ್ತಚರ ದಳ, ಇದಕ್ಕೆಲ್ಲಾ ಕಲಶವಿಟ್ಟಂತೆ ಸಕಾಲದಲ್ಲಿ ಸೂಕ್ತವಾದ ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ದಕ್ಷ ನಾಯಕತ್ವ - ಇಂತಹ ವ್ಯವಸ್ಥೆ ಕಟ್ಟಿದಾಗ "ನಿಮ್ಮ ಪಕ್ಕದಲ್ಲಿ ಬಾಂಬ್ ಇರಬಹುದು, ಅನುಮಾನ ಬಂದರೆ ಪೊಲೀಸರಿಗೆ ತಿಳಿಸಿ" ಅನ್ನೋ ಜಾಹಿರಾತು ಹಾಕೋ ಪರಿಸ್ಥಿತೀನೆ ಬರಲ್ಲ. ಅದರ ಬದಲು ಹಾಗೆ ನಮ್ಮ ಪಕ್ಕದಲ್ಲಿ ಬಾಂಬ್ ಇಡುವುದನ್ನೇ ಅಸಾಧ್ಯವಾಗಿಸಲಾಗುತ್ತದೆ. ಇಂತಹ ವ್ಯವಸ್ಥೆಯ ಬಗ್ಗೆ, ಅದರಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕಾಗಿದೆ.

4 ಅನಿಸಿಕೆಗಳು:

Anonymous ಅಂತಾರೆ...

೧)ಕಾರ್ನಾಟಿಕ್ ತರಹನೇ ಏನ್ ಗುರು ನಲ್ಲೂ ಕಮೆ೦ಟ್ ಬಾಕ್ಸ್ ನ ರೆಡಿ ಮಾಡಕ್ಕೆ ಆಗತ್ತ?
೨) ಬರಹ ಉತ್ತಮವಾಗಿದೆ ಆದರೆ ಸ್ವಲ್ಪ ಸ್ಪೆಲ್ಲಿ೦ಗ್ ತಪ್ಪುಗಳಿವೆ.
೩) ಬಟ್ಟರು ಹೇಳಿರುವ ಹಾಗೆ ಏನ್ ಗುರುನೇ ಒ೦ದು ಕ್ರಾ೦ತಿ ತ೦ದರೆ ಹೇಗೆ. ಅ೦ದರೆ ಅವರು ತೋರುವ ಹೊಸಕನ್ನಡದ ಹಾದಿಯಲ್ಲಿ ಏನ್ ಗುರುನೇ ನಡೆದು ತೋರಿಸಿದರೆ ಹೇಗೆ?
೪) ಹೊಸಕನ್ನಡ ಬಳಸಿ, ಇ೦ಗ್ಲಿಶ್ ಪದಗಳನ್ನು ಕಡಿಮೆ ಮಾಡಿದಮೇಲೂ ಏನ್ ಗುರು ಬ್ಲಾಗ್ ಸಕ್ಕತ್ತಾಗಿ ಓಡಿದರೆ, ಇನ್ನು ೨ ವರ್ಶಗಳಲ್ಲಿ ನಾವು ಹೊಸಕನ್ನಡವನ್ನು ಶಾಲಾ ಪಟ್ಯ ಪುಸ್ತಕಗಳಲ್ಲಿ ಕಾಣಬಹುದು, ಏನ೦ತೀರ?
೫) ಏನ್ ಗುರು ಒ೦ದು ನಾಯಕತ್ವ ಕೊಡುವ ಸ್ಥಾನದಲ್ಲಿರುವಾಗ ಹೊಸಕನ್ನಡ ನೀವು ಬಳಸಿದರೆ, ಅದನ್ನು ನೋಡಿ ಹತ್ತು ಹಲವು ಬ್ಲಾಗ್ ಗಳು ಹೊಸಕನ್ನಡದಲ್ಲೇ ಹುಟ್ಟಿಕೊಳ್ಳುತ್ತವೆ.

ಗುರು ಹೊಸಕನ್ನಡಕ್ಕೆ ಚಾಲನೆ ಕೊಡಿ... ನಮಗೂ ಹೊಸಕನ್ನಡ ಕಲಿಸಿ. Lets begin the process of unlearning and learning the Correct Kannada, the simple Kannada.

ಬಟ್ಟರ ಹೊಸ ಹೊತ್ತಿಗೆ ಊರಲ್ಲಿ ಚೆನ್ನಾಗಿ ಸಿಗುತ್ತಿದೆ... ಇದನ್ನು ಎಲ್ಲರೂ ಕೊ೦ಡು ಓದಬೇಕಾಗಿ ನ್ನನ್ನ ಮನವಿ.

Anonymous ಅಂತಾರೆ...

ತೀಟೆ ಸುಬ್ಬ,

ತಕ್ಕಳಿ ಇಲ್ಲೂ ಅನಿಸಿಕೆ ಡಬ್ಬಾನ ಇಲ್ಲೇ ಹಾಕಿದೀವಿ.

ಅಂದಾಗೆ ಯಾದ್ಯಾದೋ ಅನಿಸಿಕೇನ ಎಲ್ಲೆಲ್ಲೋ ಬಂದು ಬರ್ದೀರಲ್ರೀ ಸಾಮಿ?

Priyank ಅಂತಾರೆ...

ಸರಿಯಾದ ಮಾತು ಗುರು.
ಒಂದು ಪಕ್ಷ ಮಡಿದ ಸಾಹಸಿ ಸೈನಿಕರು ಮರಾಠಿಗರಾಗಿದ್ದರೆ ರಾಷ್ಟ್ರೀಯ ಮಾಧ್ಯಮದೋರು "ರಾಜ್ ಠಾಕ್ರೆ ಹೇಳದು ಸರಿ" ಅಂತ ಒಪ್ಕೊತಿದ್ರಾ?
"ಪಕ್ಕದ ಮನೆಗೆ ಬೆಂಕಿ ಹತ್ತಿತು ಅಂದ ತಕ್ಷಣ ತಮ್ಮ ಬೇಳೆ ಕಾಯಿಸ್ಕೊಳಕ್ಕೆ ಓಡಿದ್ರು" ಅಂದಂಗಾಯ್ತು ಈ ಮಾಧ್ಯಮದೊರ ಕಥೆ.

Anonymous ಅಂತಾರೆ...

ಯಾಕ್ರೀ, ಸತ್ತ ಪೋಲೀಸಿನವರು , ಮರಾಠಿಗರಲ್ಲ್ವೇನ್ರಿ??? ಮುಂಬಯಿಯಲ್ಲಿ ಬಿಹಾರಿಗಳಿಂದ ನಡೆಯುವ ಅಪರಾಧಗಳನ್ನ ತಡೆಯೋ ಪೋಲಿಸಿನವರು ಮರಾಠಿಗರಲ್ಲ್ವಾ???

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails