ಯಶ್ಪಾಲ್ ಸಮಿತಿಯ ಈ ವರದಿಯನ್ನು ಬನವಾಸಿ ಬಳಗದಲ್ಲಿ ನಾವು ಆಳವಾಗಿ ಅಧ್ಯಯನ ಮಾಡಿದ್ದೇವೆ. ಈ ವರದಿಯು ತಿಳಿಸಿಕೊಡುವ ಬದಲಾವಣೆಗಳನ್ನು ಭಾರತದಲ್ಲಿ ಅನುಷ್ಠಾನಕ್ಕೆ ತಂದರೆ, ಉನ್ನತ ಶಿಕ್ಷಣದಲ್ಲಿ ತಾತ್ಕಾಲಿಕವಾಗಿ ಸುಧಾರಣೆ ಕಂಡು ಬರಬಹುದು, ಆದರೆ ಕಾಲಕಳೆದಂತೆ ಸುಧಾರಣೆಯ ಫಲವು ಇಲ್ಲವಾಗುವುದು, ಇಲ್ಲವೇ ಪರಿಸ್ಥಿತಿಯು ಇನ್ನಷ್ಟು ಹಾಳಾಗಬಲ್ಲುದೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಇಂತಹ ಬದಲಾವಣೆಗಳ ಅನುಷ್ಠಾನದಿಂದ ಸಮಾಜದಲ್ಲಿ ಉನ್ನತ ಶಿಕ್ಷಣದ ಹರವು ಹೆಚ್ಚಲಾರದು. ಅಲ್ಲದೆ, ಜನರಲ್ಲಿ ಜಾತಿ ಮತ್ತು ವರ್ಗ ಆಧಾರಿತ ಮೇಲು-ಕೀಳು ಭಾವನೆಗಳು ಹೋಗಬೇಕೆಂಬ ಈ ಸಮಿತಿಯ ಆಸೆಯೂ ಪೂರೈಸಲಾರದು. ಭಾರತದ ಮೇಲೆ ದಬ್ಬಾಳಿಕೆಯ ಆಡಳಿತವನ್ನು ಮಾಡಿದ ವಸಾಹತುಶಾಹಿ ಬ್ರಿಟಿಷರ ಆಂಗ್ಲ ಭಾಷೆಯಲ್ಲಿ ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಉನ್ನತ ಶಿಕ್ಷಣವು ಸಾಧ್ಯವೇ ಇಲ್ಲವೆಂದುಕೊಂಡಿರುವ ಹೆಚ್ಚಿನ ಭಾರತೀಯರ ಕೊರತೆಯು ಈ ಸಮಿತಿಯಲ್ಲೂ ಇರುವುದೇ ಈ ವಿಫಲತೆಗೆ ಕಾರಣವಾಗಿದೆ. ಈ ಸಮಿತಿಯ ಬದಲು ಭಾರತೀಯ ಭಾಷೆಗಳಲ್ಲೇ ಉನ್ನತ ಶಿಕ್ಷಣವನ್ನು ಒದಗಿಸಲು ಪರಿಹಾರ ಸೂಚಿಸುವ ಹೊಸ ಸಮಿತಿಯನ್ನು ಕಪಿಲ್ ಸಿಬಲ್ ಅವರು ರಚಿಸಬೇಕಾಗಿದೆ. ಅಂತಹ ಸಮಿತಿಯು ಒಂದು ಶಾಶ್ವತ, ಹೆಚ್ಚಿನ ಹರವಿನ, ಸಮರ್ಪಕ ಹಾಗೂ ಏಳಿಗೆಮಾಡಿಸುವಂತಹ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ನಿಟ್ಟಿನಲ್ಲಿ ಉಪಯುಕ್ತವಾಗಬಲ್ಲದು. ಅಂತಹ ಸಮಿತಿಯು ಕೂಡ ವಿಕೇಂದ್ರೀಕರಣದ ಪ್ರಾಶಸ್ತ್ಯವನ್ನು ಅರಿತುಕೊಳ್ಳಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಕೇಂದ್ರೀಕರಣವನ್ನು ಮಾಡಹೊರಟಲ್ಲಿ ಇಡೀ ಭಾರತದ ಭವಿಷ್ಯಕ್ಕೇ ಮಾರಕವಾಗಲಿದ್ದು, ವಿಕೇಂದ್ರೀಕರಣದಿಂದ ಈಗಾಗಿರುವ ತುಸು ಏಳಿಗೆಯೂ ನೀರಿನಲ್ಲಿ ಹೋಮವಾಗುವುದು ಖಂಡಿತ!
ಇನ್ನು ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಯಶ್ಪಾಲ್ ಸಮಿತಿಯ ಚಿಂತನೆ ಮತ್ತು ತೀರ್ಮಾನಗಳು ಬೇಜಾರಾಗುವಂತಿದ್ದು, ಯಾವುದೇ ಆಳವಾದ ಚಿಂತನೆ ಇದರಲ್ಲಿ ನಮಗೆ ಕಾಣಿಸುತ್ತಿಲ್ಲ. ಅಲ್ಲದೆ, ಇದರಲ್ಲೂ ವಿಕೇಂದ್ರೀಕರಣದ ಬದಲು ಕೇಂದ್ರೀಕರಣವೇ ಕಣ್ಣಿಗೆ ರಾಚುತ್ತಿದೆ. ಭಾರತದ ಶೇಕಡ 90ರಷ್ಟು ಮಕ್ಕಳು ಸರಿಸುಮಾರು 20 ಭಾರತೀಯ ಭಾಷೆಗಳಲ್ಲಿಯೇ ಪಾಠ ಹೇಳುವಂತಹ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಶಾಳೆಗಳಲ್ಲಿ ಓದುತ್ತಿದ್ದಾರೆ ಎಂಬುದನ್ನೇ ಈ ಸಮಿತಿ ಕಡೆಗಣಿಸಿದೆ. ಈ ಎಲ್ಲಾ ಶಾಲೆಗಳ ಆಡಳಿತ ಒಂದು ಕೇಂದ್ರ ಸಂಸ್ಥೆಯ ಕೈಗೆ ಕೊಡಲಾಗದು; ಅಂತಹ ಕೇಂದ್ರ ಸಂಸ್ಥೆಗೆ ಇವೆಲ್ಲಾ ಭಾಷೆಗಳ ಶಿಕ್ಷಣ ವ್ಯವಸ್ಥೆಯನ್ನು ನಡೆಸುವ ಯೋಗ್ಯತೆಯಂತೂ ಎಂದಿಗೂ ಬರಲಾರದು. ಇಲ್ಲವೇ ಭಾರತದ ಶಾಲೆಗಳನ್ನೆಲ್ಲ ಆಂಗ್ಲ ಅಥವಾ ಹಿಂದಿ ಮಾಧ್ಯಮಕ್ಕೆ ಬದಲಾಯಿಸಿದರಂತೂ ಇಡೀ ಭಾರತವನ್ನು ನರಕಕ್ಕೆ ತಳ್ಳಿದಂತಾದೀತು. ಇಂತಹ ತಪ್ಪು ಆಧಾರಗಳ ಮೇಲೆ ನಿಂತಿರುವ ಯಶ್ಪಾಲ್ ಸಮಿತಿಯ ವರದಿಯನ್ನು ಮಂತ್ರಿ ಕಪಿಲ್ ಸಿಬಲ್ ಅವರು ತಿರಸ್ಕರಿಸುವುದು ಭಾರತೀಯರ ಹಿತಾಸಕ್ತಿಯ ದೃಷ್ಟಿಯಿಂದ ಮುಖ್ಯವಾಗಿದೆ.
ಅಲ್ಲದೆ, ಈ ವಿಚಾರದಲ್ಲಿ ಕಪಿಲ್ ಸಿಬಲ್ ಅವರ ನಡತೆ ಸ್ವತಂತ್ರ ದೇಶವೊಂದರ ಒಕ್ಕೂಟ ವ್ಯವಸ್ಥೆಯ ಸರ್ಕಾರದ ಒಬ್ಬ ಸೇವಕನ ನಡತೆಯಂತಿಲ್ಲದೆ ಹುಕುಂ ನೀಡುವ ವಸಾಹತುಶಾಹಿ ಸರದಾರನ ನಡತೆಯನ್ನೇ ಹೆಚ್ಚು ಹೋಲುತ್ತದೆ. ಸಿಬಲ್ ಅವರ ಈ ನಡವಳಿಕೆಯನ್ನು ಈಗಾಗಲೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಒರಿಸ್ಸಾ, ರಾಜಾಸ್ಥಾನದಂತಹ ರಾಜ್ಯಗಳು ವಿರೋಧಿಸಿವೆ. ಕಪಿಲ್ ಅವರು ತಾವಿರುವುದು ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಎಂದು ಮರೆಯದೆ, ಇನ್ನು ಮುಂದೆ ಈ ರೀತಿಯ ತೀರ್ಮಾನಗಳನ್ನು ಸುದ್ದಿ-ಮಾಧ್ಯಮಗಳಲ್ಲಿ ನೇರವಾಗಿ ತೇಲಿಬಿಡುವ ಮುನ್ನ ರಾಜ್ಯಸರ್ಕಾರಗಳೊಡನೆ ಚರ್ಚಿಸಿ, ಒಪ್ಪಿಗೆ ಪಡೆದು, ನಂತರವೇ ತೀರ್ಮಾನಕ್ಕೆ ಬರುವುದು ಉತ್ತಮ. ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ಸಕಾಲದಲ್ಲಿ ಸರ್ಕಾರದ ಅಂತರ್ಜಾಲ ಪುಟಗಳಲ್ಲಿ ಹಾಕುವುದೂ ಮುಖ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಅಪ್ಪಣೆ ಕೊಡುವುದು ನಿಮ್ಮ ಕೆಲಸವಲ್ಲ ಸಿಬಲ್ ಅವರೆ, ರಾಜ್ಯಗಳ ಅಭಿಪ್ರಾಯವನ್ನು ಸಂಗ್ರಹಿಸಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ತೀರ್ಮಾನಗಳಿಗೆ ಬರುವುದು ಮಾತ್ರ. ನೆನಪಿರಲಿ!
ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಿದೆ, ಹೌದು. ಆದರೆ ಅರ್ಥವಿಲ್ಲದ, ಇರುವುದನ್ನೂ ಹಾಳುಮಾಡುವಂತಿರುವ ಯಶ್ಪಾಲ್ ಸಮಿತಿಯು ಸೂಚಿಸುವ ಬದಲಾವಣೆಯಲ್ಲ. ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೂ ಬದಲಾವಣೆ ಬೇಕಿದೆ, ಹೌದು, ಆದರೆ ಸಮಸ್ಯೆಯನ್ನೇ ಬಗೆಹರಿಸದ ಹಳೆಯ ವ್ಯವಸ್ಥೆಗೆ ಒಂದು ಹೊಸ ರೂಪವನ್ನು ಕೊಡಲು ಹೊರಟಿರುವ ಯಶ್ಪಾಲ್ ಸಮಿತಿಯು ಸೂಚಿಸಿರುವ ಬದಲಾವಣೆಯಿಂದ ಉಪಯೋಗವಿಲ್ಲ.
ಭಾರತದ ಜನರಿಗೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲದೆ ಇರುವುದಕ್ಕೆ ಶಿಕ್ಷಣವೆಂಬ ವಿಷಯವನ್ನು ಇನ್ನೂ ಸಂವಿಧಾನದ ಜಂಟಿ-ಪಟ್ಟಿಯಲ್ಲಿ ಇರಿಸಿರುವುದೇ ಮುಖ್ಯವಾದ ಕಾರಣವೆಂದು ಓದುಗರು ಮನಗಾಣಬೇಕು. ಇದರ ಬದಲು ಶಿಕ್ಷಣವನ್ನು ಸಂಪೂರ್ಣವಾಗಿ ರಾಜ್ಯ-ಪಟ್ಟಿಗೆ ಸೇರಿಸಿ ಕೇಂದ್ರ-ಪಟ್ಟಿಯಲ್ಲಿ ಗಡಿ ರಕ್ಷಣೆಯಂತಹ ಕೆಲಸಗಳಿಗೆ ಮೀಸಲಿಡುವುದೇ ಸರಿ.
ಈ ಬರಹವನ್ನು ಬನವಾಸಿ ಬಳಗದ KARNATIQUE (English) ಮತ್ತು ಕಲಿಕೆಯು (ಕನ್ನಡ) ಬ್ಲಾಗುಗಳಲ್ಲಿ ಕೂಡ ಹಾಕಲಾಗಿದೆ.