A.I.E.E.E ಪರೀಕ್ಷೆಗಳಲ್ಲಿ ಕನ್ನಡಿಗರು ಹೆಚ್ಚು ಭಾಗವಹಿಸಬೇಕು!

ಭಾರತದಲ್ಲೇ ಪ್ರತಿಷ್ಠಿತ ಅನ್ನಿಸಿಕೊಂಡಿರುವ, ಒಳ್ಳೆಯ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ಹೆಸರಾದ ಐ.ಐ.ಟಿ/ ಎನ್.ಐ.ಟಿ (IIT/NIT) ಕಾಲೇಜುಗಳ ಪ್ರವೇಶಕ್ಕೆ ನಡೆಯುವ ಎ.ಐ.ಇ.ಇ.ಇ (AIEEE) ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಕನ್ನಡಿಗರ ಸಂಖ್ಯೆ ನಿಜಕ್ಕೂ ತುಂಬಾ ಕಮ್ಮಿ ಇದೆ ಅನ್ನೋ ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ ಗುರು! ಭಾರತದೆಲ್ಲೆಡೆಯಿಂದ ವಿದ್ಯಾರ್ಥಿಗಳು ಈ ಪರೀಕ್ಷೆ ತಗೋತಾ ಇದ್ದು, ಇದರಲ್ಲಿ ಕರ್ನಾಟಕದ ಪಾಲು ಕೇವಲ 2% ದಷ್ಟು ಮಾತ್ರ ಇದ್ದು, ಕನ್ನಡದ ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ಐ.ಐ.ಟಿ - ಜೆ.ಇ.ಇ/ ಎ.ಐ.ಇ.ಇ.ಇ (IIT-JEE / AIEEE) ಯಂತಹ ಪರೀಕ್ಷೆಗಳ ಬಗ್ಗೆ, ಈ ಸಂಸ್ಥೆಗಳಲ್ಲಿ ಕಲಿಯೋದ್ರಿಂದ ಆಗೋ ಲಾಭದ ಬಗ್ಗೆ ಹೆಚ್ಚಿನ ಅರಿವಿಲ್ಲದಿರೋದೇ ಇದಕ್ಕೆ ಕಾರಣ ಗುರು!

ಕಮ್ಮಿ ಅಂದ್ರೂ 50000 ಜನ ತಗೋಬೇಕಿತ್ತು

2009ರ ಸಾಲಿನಲ್ಲಿ ದೇಶದೆಲ್ಲೆಡೆಯಿಂದ ಸುಮಾರು 9,62,119 ವಿದ್ಯಾರ್ಥಿಗಳು ಈ ಪರೀಕ್ಷೆ ತಗೊಂಡ್ರೆ ಅದರಲ್ಲಿ ಕರ್ನಾಟಕದೋರು ಬರೀ 19,479 ಜನ ಅಂತೆ. ಅಂದ್ರೆ ಲೆಕ್ಕ ಹಾಕಿದ್ರೆ ಬರೀ 2.02% ಜನ ಮಾತ್ರ ಕರ್ನಾಟಕದಿಂದ ಇಂತಹ ಪರೀಕ್ಷೆ ತಗೊಂಡಿರೋದು. ಈ 19,479 ರಲ್ಲಿ ಬೆಂಗಳೂರು ಒಂದರಿಂದಲೇ 12,313 ಜನ ಈ ಪರೀಕ್ಷೆ ತಗೊಂಡ್ರೆ, ಕರ್ನಾಟಕದ ಉಳಿದ ಭಾಗದಿಂದ ತಗೊಂಡವರ ಸಂಖ್ಯೆ ಬರೀ 7,166. ಇನ್ನೂ ಬೆಂಗಳೂರಿನ ಅಂಕಿಅಂಶ ಬಿಟ್ಟು, ಕರ್ನಾಟಕದ ಬೇರೆ ಭಾಗದ ( ಹೆಚ್ಚು ಕಮ್ಮಿ ಕರ್ನಾಟಕದ 87% ಜನರು) ಅಂಕಿಅಂಶವನ್ನೇನಾದ್ರೂ ಭಾರತದೊಂದಿಗೆ ಹೋಲಿಸಿದ್ರೆ ಕರ್ನಾಟಕದ ಪಾಲು ಬರೀ 0.75% ಪ್ರತಿಶತದಷ್ಟು ಮಾತ್ರ ಗುರು. ಭಾರತದ ಜನಸಂಖ್ಯೆಯಲ್ಲಿ ಕಮ್ಮಿ ಅಂದ್ರೂ 5% ನಮ್ಮ ರಾಜ್ಯದ್ದು. ಜನಸಂಖ್ಯೆ ಲೆಕ್ಕದಲ್ಲೇ ಹೇಳೊದಾದ್ರೆ ಕಮ್ಮಿ ಅಂದ್ರೂ 50,000 ವಿಧ್ಯಾರ್ಥಿಗಳು ನಮ್ಮ ನಾಡಿಂದ ಈ ಪರೀಕ್ಷೆ ತಗೋಬೇಕಾಗಿತ್ತು. ಹಾಗಿದ್ರೆ ಪರೀಕ್ಷೆ ತೊಗೋಂಡೋರಲ್ಲಿ ನಮ್ಮ ಸಂಖ್ಯೆ ಇಷ್ಟ್ಯಾಕೆ ಕಮ್ಮಿ ಇದೆ ಗುರು?

ನಮ್ಮಲ್ಲಿರೋ ಕಾಲೇಜುಗಳು ಸಾಕು ಸಾಕನ್ನೋ ಅಸಡ್ಡೆ ಬೇಡ!

ನಮ್ಮ ಕರ್ನಾಟಕದಲ್ಲೇ ಸಾಕಷ್ಟು ಇಂಜಿನಿಯರಿಂಗ್ ಕಾಲೇಜುಗಳಿದ್ದು, ಅದರಿಂದಾಗೇ ಕನ್ನಡದ ಪಾಲಕರಲ್ಲಿ, ವಿದ್ಯಾರ್ಥಿಗಳಲ್ಲಿ ಐ.ಐ.ಟಿ /ಎನ್.ಐ.ಟಿ ಎಲ್ಲಾ ನಮಗ್ಯಾಕ್ ಬೇಕು ಅನ್ನೋ ಮನೋಭಾವನೆ ಇದ್ಯಾ ಅನ್ಸುತ್ತೆ. ಈ ಮನಸ್ಥಿತಿ ನಮಗಿದ್ರೆ ಇದರಿಂದಾಗಿ ನಾವು ಕಳೆದುಕೊಳ್ತಾ ಇರೋದು ತುಂಬಾ ಇದೆ ಗುರು. ಐ.ಐ.ಟಿ/ ಎನ್.ಐ.ಟಿ/ ಐ.ಐ.ಎಸ್.ಸಿ ತರಹದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರಿಗೆ ಒಳ್ಳೆಯ ಹುದ್ದೆಗಳಿಗೆ ನೇಮಕಾತಿ, ಒಳ್ಳೆಯ ಹಣ ಸಂಪಾದನೆ, ಸಮಾಜದಲ್ಲಿ ಹೆಚ್ಚಿನ ಗೌರವ, ಕೆಲಸದಲ್ಲಿ ಬೇಗನೆ ಭಡ್ತಿ ಸಿಗೋದು, ಬೇಗನೆ ಉನ್ನತ ಹುದ್ದೆಗಳಿಗೆ ಏರೋ ಅವಕಾಶ, ನಾಡಿನ ಅಭಿವೃದ್ಧಿಗೆ ಅನುಕೂಲವಾಗುವಂತ ಸಂಶೋಧನೆ, ಅಭಿವೃದ್ಧಿ ತರಹದ ಕೆಲಸಗಳನ್ನು ಮಾಡುವ ಅವಕಾಶ ಹೀಗೆ ಸಾಕಷ್ಟು ಪ್ರಯೋಜನಗಳಿದ್ದು, ಇದನ್ನೆಲ್ಲಾ ಕನ್ನಡಿಗರು ತಮ್ಮದಾಗಿಸಿಕೊಳ್ಳಬೇಕು ಗುರು. ನಮ್ಮ ನಾಡಿಗಿಂತಲೂ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳಿರುವ (ನಮಲ್ಲಿ 158 ಇದ್ದರೆ, ಅವರಲ್ಲಿರೋದು 250 ಕ್ಕೂ ಹೆಚ್ಚು) ತಮಿಳುನಾಡಿನ ವಿದ್ಯಾರ್ಥಿಗಳು ನಮ್ಮ ರಾಜ್ಯಕ್ಕಿಂತಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಐ.ಐ.ಟಿ/ ಎನ್.ಐ.ಟಿ/ ಐ.ಐ.ಎಸ್.ಸಿ ತರಹದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಮ್ಮ ನಾಡಿನ ಪಾಲಕರು ಐ.ಐ.ಟಿ/ಎನ್.ಐ.ಟಿ/ ಐ.ಐ.ಎಮ್/ ಯು.ಪಿ.ಎಸ್.ಸಿ ತರಹದ ಸಮಾಜದ ಮೇಲೆ ಪ್ರಭಾವ ಬೀರುವ, ಪ್ರಭಾವಶಾಲಿ ಹುದ್ದೆಗಳನ್ನು ಸೃಷ್ಟಿಸುವ ಕಲಿಕೆಯತ್ತ ತಮ್ಮ ಮಕ್ಕಳನ್ನು ಹೆಚ್ಚೆಚ್ಚು ಕಳಿಸಬೇಕು. ಇದು ಕನ್ನಡ ನಾಡಿನ ಏಳಿಗೆಗೆ ಬಲು ಮುಖ್ಯವಾದದ್ದು. ಏನಂತೀಯಾ ಗುರು?

3 ಅನಿಸಿಕೆಗಳು:

Anonymous ಅಂತಾರೆ...

nija guru .. nan prakara nam hudugrige IIT bagge gothagode PUC aadmele , gothiddoru try madtare aadre professional coaching tagollodu tumba kammi. nam jana swalpa risk tagolloke hedurtare guru , yak bekappa ille BE madidre aramagi kelsa siguthe anno yochne ..

Gireesh BT ಅಂತಾರೆ...

ನನಗೆ ತಿಳಿದ ಮಟ್ಟಿಗೆ, ಈ ಬಗ್ಗೆ ನಮ್ಮವರಿಗೆ ಸರಿಯಾದ ತಿಳುವಳಿಕೆಕದಿಮೆ ಇದೆ. ಐ.ಐ.ಟಿ/ ಎನ್.ಐ.ಟಿ/ ಐ.ಐ.ಎಸ್.ಇ (IIT/ NIT/ IISc) ಗಳಿಗೆ ಹೋಗಿ ಕಲಿತ ಕನ್ನಡಿಗರು, ಸಮಾಜದಲ್ಲಿ ಸಾಕಷ್ಟು ಮೇಲೇರಿದ ಕನ್ನಡಿಗರು ಈ ಬಗ್ಗೆ ತಾವಾಗಿಯೇ ಬೇರೆಯವರಿಗೆ ತಿಳಿಸಿಕೊಡುವ ಕೆಲಸ ಮಾಡುವುದಿಲ್ಲ. ಕರ್ನಾಟಕ ಸರಕಾರದ ಕಡೆಯಿಂದ ಇಂಥ ದಾರಿಯಲ್ಲಿ ಯಾವುದೇ ಕೆಲಸವಾಗಿಲ್ಲ. ಬೆಂಗಳೂರು ಹಾಗೂ ಮೈಸೂರು ಬಿಟ್ಟರೆ ರಾಜ್ಯದ ಬೇರೆಕಡೆ ಈ ವಿಶಯದ ಬಗ್ಗೆ ಮಾಹಿತಿ ಬಹಳ ಕಡಿಮೆ. ಅಲ್ಲಿಂದ ಯಾರಾದರೂ ಈ ಶೈಕ್ಷಣಿಕ ಸಂಸ್ಥೆ ಸೇರಿದ್ದರೆ ಅದು ಅವರ ಸ್ವಂತ ಪ್ರಯತ್ನದಿಂದ. ಈ ಶೈಕ್ಷಣಿಕ ಸಂಸ್ಥೆಗಳನ್ನು ಸೇರಲು ಸಾಕಷ್ಟು ಪರಿಶ್ರಮ ಬೇಕು. ಸರಿಯಾದ ದಾರಿ ತೋರಿಸಲು, ಇವುಗಳ ಪರೀಕ್ಷೆಗಳನ್ನು ಎದುರಿಸಲು ಕಲಿಕೆಗೆ ಯಾವುದೇ ವ್ಯವಸ್ಥೆ ಯಾರೂ ಇಲ್ಲದಿರುವುದು ಈ ತರಹದ ಕಾರಣ ಎಂದು ನನಗೆ ಅನಿಸುತ್ತದೆ.

baktavar ಅಂತಾರೆ...

ನಿಜ ಗುರು...ತಮಿಳುನಾಡಿನ / ಆಂಧ್ರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖೆಯಲ್ಲಿ ಈ ಸಂಸ್ಥೆಗಳಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಚಾರ ಆದರೆ, ನಮ್ಮವರ ಪಾಲು ಕೇವಲ 2% ದಷ್ಟು ಮಾತ್ರ, ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ... ನಮ್ಮ ನಾಡಿನ ಏಳಿಗೆಗೆ ನಮ್ಮವರು ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡಬೇಕು ಗುರು. ಯು.ಪಿ.ಎಸ್.ಸಿ/ಐ.ಎ.ಎಸ್ ಹುದ್ದೆಗಳಲ್ಲಿ ನಮ್ಮವರ ಸಂಖೆ ಇನ್ನು ಜಾಸ್ತಿ ಆಗಬೇಕು ...

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails