"ಕನ್ನಡ ಕಲಿ"ಸೋಕೆ ಮುಂದಾಗಿರೋ ಫ್ರೆಂಚ್ ಕಲಿಸೋ ಸಂಸ್ಥೆ!


ಬೆಂಗಳೂರಿನಲ್ಲಿ ಫ್ರೆಂಚ್ ಭಾಷೆ ಕಲ್ಸಕ್ಕೇ ಅಂತಾ ಒಂದು ಸಂಸ್ಥೆ ಇದೆ. ಇದರ ಹೆಸ್ರು "ಅಲೈಯನ್ಸ್ ಫ್ರಾಂಸೈಸ್ ಡಿ ಬ್ಯಾಂಗಲೂರ್" ಅಂತ. ಈ ಸಂಸ್ಥೆ ಫ್ರೆಂಚ್ ನುಡಿ ಮತ್ತು ಸಂಸ್ಕೃತಿಗಳನ್ನು ಜಗತ್ತಿನ ಮೂಲೆ ಮೂಲೇಲಿ ಹರಡಕ್ಕೆ ಅಂತ 1883ರಲ್ಲಿ ಶುರುವಾದ "ಅಲೈಯನ್ಸ್ ಫ್ರಾಂಸೈಸ್ ಡಿ"ಯ ಶಾಖೆ. ಈ ಸಂಸ್ಥೇಲಿ ಫೆಂಚ್ ನುಡಿಯನ್ನು ಕಲಿಸೋ ವಿಧಾನವೇ ಸೊಗಸು. ಮೂವತ್ತು ದಿನದಲ್ಲಿ ಕಲ್ತುಕೊಳ್ಳಿ ಅನ್ನೋ ಪುಸ್ತಕಗಳ ಥರದ ತರ್ಜುಮೆ ವಿಧಾನ ಇಲ್ಲಿಲ್ಲ. ಇಲ್ ಏನಿದ್ರೂ ತರಗತಿ ಒಳಗೆ ಹೋದಾಗಿಂದ ಹೊರಗೆ ಬರೊ ತನಕ ಬರೀ ಪ್ರೆಂಚ್ ಒಂದೇ ನಮಗೆ ಕೇಳೋದು. ಈ ವಿಧಾನದಲ್ಲಿ ಸುತ್ತಮುತ್ತ ಇರೋ ಕುರ್ಚಿ, ಮೇಜು, ದೀಪ, ಹೆಸರುಗಳು ಇಂಥವುಗಳ ಬಗ್ಗೆ ಮಾತಾಡ್ತಾ ಆಡ್ತಾನೆ ಫ್ರೆಂಚ್ ನುಡಿ ಕಲಿಸಿಬಿಡ್ತಾರೆ. ಭಾಷಾ ಕಲಿಕೇಲಿ ಇರೋ ಮುಖ್ಯವಾದ ಪರಿಣಾಮಕಾರಿ ವಿಧಾನ ಅಂದ್ರೆ ಇದೇ ಅನ್ನೋದು ಹಲವರ ಅಭಿಪ್ರಾಯ. ನೂರಾ ಇಪ್ಪತ್ತೈದು ವರ್ಷಗಳಿಗೂ ಮೀರಿದ ಅನುಭವ ಈ ಸಂಸ್ಥೆಗೆ ಸಕ್ಕತ್ ವೃತ್ತಿಪರತೆ ತಂದುಕೊಟ್ಟಿದೆ ಗುರು! ಅರೆರೆ... ಇದೇನ್ರಿ ಈ ಸಂಸ್ಥೆ ಬಗ್ಗೆ ಯಾಕ್ ಬರೀತಾ ಇದೀರಾ? ಇದಕ್ಕೂ ಕನ್ನಡಕ್ಕೂ ಏನು ಸಂಬಂಧಾ ಅಂದ್ಕೋತಾ ಇದೀರಾ? ಇದೆ... ಸಂಬಂಧ ಇದೆ.

ಕನ್ನಡ ಕಲಿ ಈಗ ಫ್ರೆಂಚ್ ಕಲಿಕಾ ಸಂಸ್ಥೆಯಲ್ಲೂ...

ಬೆಂಗಳೂರಿನ ಈ ಸಂಸ್ಥೆಯೋರು ಇದೀಗ ಕೆಲವು ಕನ್ನಡ ಕಲಿಸೋ ವೃತ್ತಿಪರರ ಜೊತೆ ಸೇರಿಕೊಂಡು ಕರ್ನಾಟಕದಲ್ಲಿರೋ ಹೊರದೇಶದವರಿಗೆ, ಪರಭಾಷಿಕರಿಗೆ ಕನ್ನಡ ಕಲಿ ತರಗತಿಗಳನ್ನು ಶುರು ಮಾಡುವ ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ. ಇದು ಕನ್ನಡ ಕಲಿಕೆಗೆ ಇರೋ ಮಾರುಕಟ್ಟೆ ಸಾಧ್ಯತೆಯನ್ನು ತೋರುಸ್ತಾ ಇದೆ. ನಮ್ಮ ನಾಡಿಗೆ ಏನಪ್ಪಾ ಇದರಿಂದ ಲಾಭಾ ಅಂದ್ರೆ ಈ ಸಂಸ್ಥೆ ಮೂಲಕ ಹಲವು ಪರಭಾಷಿಕರು ನಮ್ಮ ನುಡಿ ಕಲೀತಾರೆ. ನಮ್ಮ ಕನ್ನಡ ಕಲಿಕಾ ಸಂಸ್ಥೆಗಳಾದ ಕನ್ನಡ ಪ್ರಸಾರ ಪರಿಷತ್ ಮತ್ತಿತರ ಸಹಯೋಗಿ ಸಂಸ್ಥೆಗಳು "ಅಲೈಯನ್ಸ್ ಪ್ರಾಂಸೈಸ್ ಡಿ" ಸಂಸ್ಥೆಯ 125 ವರ್ಷಗಳ ಅನುಭವದ ಸಾಕಷ್ಟು ಸಾರವನ್ನು ಹೀರಿಕೊಳ್ಳಬಹುದು. ಆ ಮೂಲಕ ಮುಂದಿನ ದಿನಗಳಲ್ಲಿ ಕನ್ನಡ ಕಲಿಕಾ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಒಯ್ಯಬಹುದು! ಇವತ್ತಿನ ದಿವಸ ಬೆಂಗಳೂರಿನಲ್ಲಿ ಶುರುವಾಗ್ತಿರೋ ಕನ್ನಡ ಕಲಿಸೋ ತರಗತಿಗಳು ನಾಡೊಳಗೆ ಆಗಲೇ ಕಾಲಿಟ್ಟಿರೋ ಪರಭಾಷಿಕರನ್ನು ಗುರಿಯಾಗಿಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಕನ್ನಡ ನಾಡಿಗೆ ಬರಲು ಮನಸ್ಸು ಮಾಡೋ ಹೊರನಾಡಿಗರಿಗೆ ಅವರಿದ್ದಲ್ಲೇ ಕನ್ನಡ ಕಲಿಸೋ ವ್ಯವಸ್ಥೆಯಾಗಿ ಬೆಳೀಬೇಕು ಗುರು!
ಕೊನೆಹನಿ : ಬರೀ ಕನ್ನಡ ನುಡಿಯಾಡೋದ್ನ ಹೇಳಿಕೊಟ್ರೆ ಮಾತ್ರಾ ಸಾಕಾಗಲ್ಲ ಗುರು. ನಮ್ಮ ನುಡಿ ಜೊತೆಗೆ ನಮ್ಮ ನಡೆ, ನಂಬಿಕೆ, ಸಮಾಜ, ಸಂಸ್ಕೃತಿ, ಇತಿಹಾಸ, ಹಿರಿಮೆಗಳ ಪರಿಚಯಾನೂ ಕೊಡಬೇಕು. ಫ್ರೆಂಚರನ್ನೇ ನೋಡಿ, ಜಗತ್ತಿಗೆ ತಮ್ಮ ಸಣ್ಣ ಸಣ್ಣ ವಿಶೇಷತೆಗಳನ್ನು ಹೇಗೆ ತೋರುಸ್ಕೋತಾರೆ ಅನ್ನೋಕೆ "ಫೆಂಚ್ ಮುತ್ತು" ಹ್ಯಾಗೆ ಕೊಡೋದೂ ಅನ್ನೋದಕ್ಕೂ ಒಂದು ಪುಟ ಮಾಡಿಟ್ಟಿದ್ದಾರೆ.

2 ಅನಿಸಿಕೆಗಳು:

ಕಿಶೋರ್! ಅಂತಾರೆ...

ಬರೀ ಭಾಷೆಯಲ್ಲ.. ನಾವು ಜೀವನಶೈಲಿಯನ್ನೇ ಹೇಳ್ಕೊಡ್ತಿವಿ ಅ೦ತರೆ "ಅಲೈಯನ್ಸ್ ಫ್ರಾಂಸೈಸ್ ಡಿ ಬ್ಯಾಂಗಲೂರ್". ಇವರು ಒ೦ದು ಪುಟ್ಟ ತರಗತಿಯಲ್ಲಿ ಇಷ್ಟೆಲ್ಲಾ ಹೇಳ್ಕೊಡಕ್ಕೆ ಸಾಧ್ಯ ಆಗ್ತಿದೆ ಅ೦ದ್ರೆ.... ಇನ್ನು ಪರಭಾಷಿಕರಿಗೆ ಕನ್ನಡನಾಡಲ್ಲಿ ಕನ್ನಡ ಭಾಷೆ, ಜೀವನಶೈಲಿ ಹೇಳ್ಕೊಡಕ್ಕೆ ಖ೦ಡಿತ ಕಷ್ಟ ಇಲ್ಲ. ದಿನನಿತ್ಯದ ಜೀವನದಲ್ಲಿ ಕನ್ನಡಿಗರು ತಮ್ಮ ಸುತ್ತ ಮುತ್ತ ಯಾವ ರೀತಿಯ ವಾತಾವರಣ ಹುಟ್ಟಿಹಾಕ್ತಿದ್ದಾರೆ ಅನ್ನೋದರ ಮೇಲೆ, ಪರಭಾಷಿಕರು ಕನ್ನಡ ಕಲಿಬೇಕಾ ಬೇಡ್ವಾ ನಿರ್ಧಾರ ಆಗತ್ತೆ.

Nidhi ಅಂತಾರೆ...

ಇದು ವಾವ್ ಅನ್ನುವಂತಾ ವಿಚಾರ ಗುರು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails