ಅಲ್ಲಿರೋವ್ರು ಕನ್ನಡ ಬಳುಸ್ತಿಲ್ಲಾ ಅಂದ್ರೆ ಇಲ್ಲಿರೋವ್ರು ತಾನೆ ಹೊಣೆ?
13.10.09
ಆರು ಲಕ್ಷಕ್ಕೂ ಹೆಚ್ಚಿರುವ ಕರ್ನಾಟಕ ಸರ್ಕಾರಿ ನೌಕರರ ಪೈಕಿ ಸುಮಾರು ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ (ಅಂದರೆ ಸುಮಾರು 17% ನೌಕರರು!!) ಕನ್ನಡ ಬಳಸಕ್ಕೆ ತ್ರಾಸಂತೆ! ಇವರಿಗೆ ಸುಲಲಿತವಾಗಿ ಕನ್ನಡಾನ ಬರೆಯಕ್ಕೆ ಬರಲ್ಲ ಅನ್ನೋ ಹೌಹಾರುವಂತಾ ಸುದ್ದೀನಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಹೊರ ಹಾಕಿದ್ದಾರೆ ಗುರು! ಈಗ ಇವರೆಲ್ಲರಿಗೂ ಸುಮಾರು 2.5 ಕೋಟಿ ರೂಪಾಯಿ ಸರ್ಕಾರಿ ವೆಚ್ಚದಲ್ಲಿ ಕನ್ನಡ ಕಲಿಸುವ ಕೆಲಸಕ್ಕೆ ಸರ್ಕಾರ ಕೈ ಹಾಕಲಿದೆ ಅಂತಾನೂ ಹೇಳಿದ್ದಾರೆ. ಕರ್ನಾಟಕದ ಆಡಳಿತ ಭಾಷೆಯನ್ನೇ ಸಲೀಸಾಗಿ ಬಳಸಕ್ಕೆ ಬರದವರು ನಮ್ಮ ರಾಜ್ಯಸರ್ಕಾರಿ ನೌಕರಿಯಲ್ಲಿ ವರ್ಷಗಟ್ಲೆ ಅರಾಮಾಗಿ ಕೆಲಸ ಮಾಡಕ್ಕೆ ಆಗುತ್ತೇ ಅನ್ನೋದೆ ತಮಾಷೆ ಸುದ್ದಿ ಅಲ್ವಾ? ಪಾಪಾ! ಚಂದ್ರು ಅವ್ರು ಈಗ ಇವರಿಗೆ ಪಾಠ ಹೇಳಿಕೊಡೋದು ಬಿಟ್ಟು ಇನ್ನೇನು ತಾನೆ ಮಾಡಬಲ್ಲರು?
ಕನ್ನಡ ಬಳುಸ್ತಿಲ್ಲ ಅಂದ್ರೆ ಯಾರು ಕಾರಣ?
ಅಲ್ಲಾ ಗುರು! ನಾಡಿನ ಜನರ ನುಡಿಯಾದ ಕನ್ನಡದಲ್ಲೇ ನಮ್ಮ ಆಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳೆಲ್ಲಾ ನಡೀಬೇಕು ಅನ್ನೋದನ್ನು ಸರಿಯಾಗಿ ಸರ್ಕಾರ ಅರ್ಥ ಮಾಡ್ಕೊಂಡು ವ್ಯವಸ್ಥೆ ಜಾರಿಗೆ ತಂದಿದ್ರೆ ಇಂಥಾ ಕೆಟ್ಟ ಪರಿಸ್ಥಿತಿ ಬರ್ತಿತ್ತಾ? ಈಗ ಇರೋರಲ್ಲಿ ಲಕ್ಷಾಂತರ ಜನಕ್ ಕನ್ನಡ ಬಳಸಕ್ ಆಗದೆ ಇರೋದ್ರಿಂದ ಎಷ್ಟು ಜನರಿಗೆ ಸಮಸ್ಯೆ ಅಲ್ವಾ? ಸರ್ಕಾರಗಳು ಮೊದ್ಲಿಂದ ಬಿಗಿಯಾಗಿ ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡದೇ ಈಗ 17% ನೌಕರರಿಗೆ ಕನ್ನಡದಲ್ಲಿ ಸರಿಯಾಗಿ ವ್ಯವಹರಿಸಕ್ ಆಗಲ್ಲಾ ಅಂದ್ರೆ ಕನ್ನಡ ಅನುಷ್ಠಾನ ಮಾಡಕ್ಕೆ ನಮ್ಮ ಸರ್ಕಾರಗಳು ಎಷ್ಟೊಂದು ಕಾಳಜಿ ತೋರಿಸಿವೆ ಅನ್ನೋದ್ ತಿಳಿಯಲ್ವಾ? ಆಡಳಿತ ಭಾಷೆಯ ಅನುಷ್ಠಾನಕ್ಕೆ ಅಂತ ಯಾವ್ದೋ ಸಮಿತಿ, ಸುಡ್ಗಾಡು ಶುಂಠಿ ಅಂತ ಮಾಡಿ ಸರ್ಕಾರ ಕೈತೊಳ್ಕೊಂಬುಟ್ರೆ ಆಗೋಯ್ತಾ? ಪಾಪಾ, ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನ್ನೋ ಹಲ್ಲು ಕಿತ್ತ ಹಾವು ಎಷ್ಟು ಭುಸುಗುಟ್ಟುದ್ರೆ ತಾನೇ ಏನಾಗುತ್ತೆ? ಈಗಲಾದರೂ ಸರ್ಕಾರ ತನ್ನ ಕೆಲಸದಲ್ಲಿ ಆಗ್ತಿರೋ 20% ಕ್ಷಮತೆಯ ನಷ್ಟಾನಾ ಅರ್ಥ ಮಾಡ್ಕೊಂಡು ಸರೀಗೆ ಕನ್ನಡದಲ್ಲಿ ಆಡಳಿತ ಮಾಡಬೇಕು ಗುರು!
4 ಅನಿಸಿಕೆಗಳು:
naukara annokinta kelasagara andre chenna yake andre idu kannadada pada.
ಕನ್ನಡ ಅಭಿವ್ರುದ್ಧಿ ಪ್ರಾಧಿಕಾರ ಹಲ್ಲು ಕಿತ್ತ ಹಾವಾಗಿದೆಯಾ ಗುರು??
ಬೇಸರದ ಸಂಗತಿ.
ಕನ್ನಡ ಬಳಸೋದು ಕಲ್ತ್ಕೊಬೇಕು, ಕರ್ನಾಟಕದಲ್ಲಿ ಇದ್ದು ಬಳಸೋಕೆ ತ್ರಾಸು ಅಂದ್ರೆ ಏನರ್ಥ?
ಇದೊಳ್ಳೆ ಚೆನ್ನಾಗಿದೆ ಗುರು, ಒಂದು ನಾಡಿನ ಆಡಳಿತ ಭಾಷೆಯನ್ನೇ ಓದಲು ಬರೆಯಲು ಬರದವರು ಆ ರಾಜ್ಯದ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳೊದು (ಅದು ಕೂಡಾ ಇಷ್ಟು ದೊಡ್ಡ ಸಂಖ್ಯೆಯಲ್ಲಿ ! ), ಆಮೇಲೆ ಅಂತಹ ಜನರಿಗೆ ಆ ನಾಡಿನ ಜನರ ದುಡ್ಡಲ್ಲೇ ಕನ್ನಡ ಕಲಿಸ್ತಿನಿ ಅಂತ ಅಲ್ಲಿನ ಸರ್ಕಾರವೇ ಹೊರಡೋದನ್ನ ನೋಡಬೇಕು ಅಂದ್ರೆ ಅದು ಕರ್ನಾಟಕದಲ್ಲಿ ಮಾತ್ರ ಸಾಧ್ಯ ಏನೋ !
ಕನ್ನಡ ಆಮೇಲೆ ಕಲಿಸುವಿರಂತೆ, ಅಷ್ಟೊಂದು ಜನ ಕನ್ನಡ ಗೊತ್ತಿಲ್ಲದವರು ಸರ್ಕಾರಿ ನೌಕರಿಗೆ ಸೇರಿದ್ದಾದರೂ ಹೇಗೆ?
ಅಲ್ಲಾ ಗುರು, ನಮ್ಮ ನಾಡಿನ ಸರ್ಕಾರಿ ನೌಕರಿ ನ್ಯಾಯವಾಗಿ ಸಿಗಬೇಕಾದದ್ದು ಈ ನಾಡಿನ ಮಕ್ಕಳಾದ ನಮಗೆ ಅಂದ್ರೆ ಕನ್ನಡಿಗರಿಗೆ ಅಲ್ವಾ? ಇವರೆಲ್ಲ ಕನ್ನಡಿಗರಾಗಿದ್ರೆ ಅದು ಹೇಗೆ ಇವರಿಗೆಲ್ಲ ಕನ್ನಡ ಓದಲು ಬರೆಯಲು ಬರಲ್ಲ? ಸರಿ, ಇವರೆಲ್ಲ ಬರೀ ಕನ್ನಡ ಮಾತನಾಡಲು ಬರೋ ಕನ್ನಡಿಗರು ಅಂತಾನೇ ಅಂದುಕೊಳ್ಳೊಣ, ಆಗ ಏಳೋ ಪ್ರಶ್ನೆ ಅಂದ್ರೆ ಕರ್ನಾಟಕ ಸರ್ಕಾರಿ ನೌಕರಿ ಮೂಲಕ ನಾಡಿನ ಜನರಿಗೆ ಪರಿಣಾಮಕಾರಿಯಾಗಿ ಆಡಳಿತ ಸೇವೆ ನೀಡಲು ಯಾವುದೇ ನೌಕರನಿಗೆ ಇರಬೇಕಾದ ಮೂಲಭೂತ ಗುಣ (pre requisite) ಎಂದರೆ ಆಡಳಿತ ಭಾಷೆಯಾದ ಕನ್ನಡವನ್ನು ಚೆನ್ನಾಗಿ ಓದಲು, ಬರೆಯಲು ಬರುವುದು. ಅಂತಾದ್ರಲ್ಲಿ ಕನ್ನಡ ಓದಲು ಬರೆಯಲು ಬಾರದ ಜನರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಮ್ಮ ರಾಜ್ಯ ಸರ್ಕಾರಿ ನೌಕರಿ ಸಿಕ್ಕಿದ್ದಾದರೂ ಹೇಗೆ? ಐ.ಪಿ.ಎಸ್ / ಐ.ಎ.ಎಸ್ ತರಹದ ಕೇಂದ್ರ ಸರ್ಕಾರದಿಂದ ನೇಮಕಗೊಂಡು ರಾಜ್ಯ ಸರ್ಕಾರದ ಕೆಲಸ ನಿಭಾಯಿಸುತ್ತಿರುವ ಕೆಲ ಜನರಿಗೆ ಕನ್ನಡ ಓದಲು-ಬರೆಯಲು ಬರಲ್ಲ ಅಂದ್ರೆ ನಂಬೋಣ, ಆದ್ರೆ ಅವರ ಸಂಖ್ಯೆ ಖಂಡಿತವಾಗಿಯೂ 1ಲಕ್ಷದಷ್ಟು ದೊಡ್ಡ ಸಂಖ್ಯೆಯಲ್ಲಿ ಇರಲು ಸಾಧ್ಯವಿಲ್ಲ. ಹಾಗಿದ್ದರೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೇಮಕಗೊಂಡಿರುವವರು ಕನ್ನಡೇತರರು ಅನ್ನೋ ಸಂದೇಹ ಬರ್ತಿಲ್ವಾ ಗುರು ? ಕರ್ನಾಟಕ ಸರ್ಕಾರದ ಉದ್ಯೋಗಗಳೆಲ್ಲ ನ್ಯಾಯವಾಗಿ ಕನ್ನಡಿಗರಿಗೆ ಸಿಗುವಂತೆ ಮಾಡಬೇಕಿದ್ದ ನಾಡನ್ನಾಳಿದ ಸರ್ಕಾರಗಳಿಗೆ ಈ ವಿಷಯದಲ್ಲಿ ಅದೇಷ್ಟು ಕಾಳಜಿ ಇದೆ ಅನ್ನುವುದು ಇಲ್ಲೇ ಗೊತ್ತಾಗುತ್ತೆ.
ನಾಡಿನ ಆಡಳಿತ ಭಾಷೆಯಾದ ಕನ್ನಡ ಓದಲು ಬರೆಯಲು ಬರದ ಪರಭಾಷಿಕರನ್ನು ಕೆಲಸಕ್ಕೆ ತೆಗೆದುಕೊಂಡು ಆಮೇಲೆ ಆಡಳಿತದಲ್ಲಿ ಕನ್ನಡ ಅನುಷ್ಟಾನ ಆಗುತ್ತಿಲ್ಲ ಅಂತ ಏನ್ ಬಾಯ್ ಬಡ್ಕೊಂಡ್ರೆ ಏನ್ ಬಂತು. ಇನ್ನೂ ದೊಡ್ಡ ತಮಾಷೆ ಅಂದ್ರೆ, ಈ ಎಲ್ಲ ಕನ್ನಡ ಅಕ್ಷರ ಜ್ಞಾನ ಇಲ್ಲದವರಿಗೆ ನಮ್ಮ ದುಡ್ಡಲ್ಲೇ ಓದಲು ಬರೆಯಲು ಹೇಳಿಕೊಡ್ತಾರಂತೆ. ಬೇಲಿ ಇಲ್ಲದೇ ವಲಸೆ ಬಿಟ್ಕೊಳ್ಳೋದು, ಆಮೇಲೆ ಬಾಯ್ ಬಡ್ಕೊಳ್ಳೋದು, ಕೊನೆಗೆ ನಮ್ಮ ದುಡ್ಡಲ್ಲೇ ಅವರಿಗೆಲ್ಲ ಕನ್ನಡ ಕಲಿಸ್ತಿನಿ ಅನ್ನೋದು. ಸರಿ ಹೋಯ್ತು ಗುರು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!