ಅಂದೊಮ್ಮೆ...
ಕಾರ್ಗಿಲ್ ಯುದ್ಧದಿ
ದಂಡಿನ ಮಂದಿ ಬಲಿಯಾದಾಗ
ಮರುಗಿದ ಕನ್ನಡ ಮನವೇ ...
ಹಿಂದೊಮ್ಮೆ ...
ಲಾಥೂರ್, ಕಿಲಾರಿಯಲ್ಲಿ,
ಕಛ್, ಭುಜ್ನಲ್ಲಿ,
ಗುಡುಗುಡುಗಿ ನೆಲನಡುಗಿ,
ಮನೆಮುರಿದಾಗ
ಮಿಡಿದ ಕನ್ನಡ ಮನವೇ ...
ನಿನ್ನೆ ...
ಸಾಗರದಲೆಗಳು ತಮಿಳು ತೀರದಲಿ
ಮೃತ್ಯು ನರ್ತನ ನಡೆಸಿರಲು,
ಧಿಗ್ಗನೆ ನೆರವಿಗೆ
ಧಾವಿಸಿದ ಕನ್ನಡ ಮನವೇ ...
ಮೆಚ್ಚಿ ತಲೆಬಾಗುವೆ
ನಿನ್ನ ರಾಷ್ಟ್ರೀಯ ಭಾವಕ್ಕೆ!
ಜಾತಿ ಭಾಷೆ ಮೀರಿದ
ನಿನ್ನ ಉದಾತ್ತತೆಗೆ!!
ನಿನ್ನೊಡಲ ದೇಶ ಪ್ರೇಮಕ್ಕೆ ...
ಇಂದು ...
ಸುರಿದ ಮಳೆಗೆ ಕೃಷ್ಣೆ ಉಕ್ಕಿಹುದು,
ಮಲಪ್ರಭೆ, ತುಂಗಭಧ್ರೆ ನುಗ್ಗಿಹುದು
ನಿನ್ನದೇ ಮನೆಯ ಒಳಗೆ ...
ನೆಲ, ಮನೆ, ದನಕರು
ಕಡೆಗೆ ಹೆತ್ತಕಂದಮ್ಮಗಳೂ ... ಕೃಷ್ಣಾರ್ಪಣ!!
ಇಂದು ...
ರಾಯಚೂರಾಗಿದೆ ಚೂರು ಚೂರು,
ಬಿಜಾಪುರದ ಗುಂಬಜ್ಗಳಲ್ಲಿ ಮಸಣಮೌನ,
ಕಾರವಾರದಿ ಮೈಮೇಲೆ ಮುರಿದು ಬಿದ್ದ ಗುಡ್ಡ!
ಕಮರಿದೆ ಕನಸು, ಮುರುಟಿದೆ ಮನಸು
ಬಟಾ ಬಯಲಾಗಿದೆ ಬದುಕು...
ಭೂಕಂಪಿತರಿಗೆ ಬಟ್ಟೆ
ಸೈನ್ಯದ ಜನಕೆ ಹಣ,
ಸುನಾಮಿ ಪೀಡಿತರಿಗೆ ಚಪಾತಿ ಅನ್ನ.
ನಿನ್ನಯ ಮನೆಯ ಜನಕ್ಕೆ ??
ಕಡೆ ಪಕ್ಷ ಒಂದು ಹನಿ ಕಣ್ಣೀರು ?
ಮನೆಗೆ ಮಾರಿ ಊರಿಗೆ ಉಪಕಾರಿ
ಇದು ಕನ್ನಡಿಗನ ನಿಜ ರೂಪವೆಂದು
ಬೆಚ್ಚಿಹಳು ಭುವನೇಶ್ವರಿ ...
ನಿನ್ನ ನಿರಭಿಮಾನ ನಿರ್ಲಜ್ಜತನ, ನಿನ್ನದೇ ಜನಗಳ
ಕಷ್ಟಕಾಲದಲ್ಲೂ ತಟಸ್ಥವಾಗಿಹ ನಿನ್ನ ಗುಣ,
ಮೈಮನ ತುಂಬಿಹ ನಿರ್ವಿಣ್ಣತೆ
ನಿನ್ನಂತಹ ಮಕ್ಕಳನ್ನು ಹಡೆದವ್ವೆ ಧನ್ಯ !!!
ಅಳಿಸು ಈ ಕೆಟ್ಟಹೆಸರನಿಂದು ಗೆಳೆಯಾ,
ಇದು ನಮ್ಮವರ ಕಣ್ಣೊರೆಸೆ ಮುನ್ನುಗ್ಗೊ ಸಮಯಾ!
ಮುಂದಾಗು ಕನ್ನಡದ ಮನೆಯ ಮತ್ತೆ ಕಟ್ಟಲು,
ಕನ್ನಡ ರಾಜರಾಜೇಶ್ವರಿಯ ಋಣ ತೀರಿಸಲು!!
11 ಅನಿಸಿಕೆಗಳು:
ಉತ್ತಮ ಸಂದೆಶವೊಂದನ್ನ ಕವನದ ಮೂಲಕ ನೀಡಿದ್ದೀರಿ...
ದೇಶದ ಇತರೆಡೆ ಅವಘಡ ಸಂಭವಿಸಿದಾಗ ಸಹಾಯ ಹಸ್ತ ನೀಡಿ ರಾಷ್ಟ್ರೀಯತೆ ಮೆರೆದ ಕನ್ನಡಿಗರು ಈಗ ತಮ್ಮ ತವರಿನಲ್ಲೇ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರೋ ಸಹೋದರರಿಗೆ ಸಹಾಯ ಹಸ್ತ ಚಾಚಲೇ ಬೇಕಾಗಿದೆ.. ಆ ಮೂಲಕ "ಮನೆಗೆ ಮಾರಿ ಊರಿಗೆ ಉಪಕಾರಿ " ಅನ್ನೋ ಗಾಧೆ ಮಾತನ್ನ ಸುಳ್ಳು ಮಾಡಬೇಕಿದೆ...
ಮತ್ತೊಂದು ವಿಚಾರ ತುಂಬಾ ಬೇಸರ ಮೂಡಿಸಿದೆ..ಅದೆಂದರೆ ದೇಶದ ಇತರೆಡೆ ಚಿಕ್ಕ ಘಟನೆ ನಡೆದರೂ ಅದನ್ನು ದೊಡ್ಡ issue ಮಾಡುವ ರಾಷ್ಟ್ರೀಯ ಸುದ್ದಿ ವಾಹಿನಿಗಳು ಕರ್ನಾಟಕ, ಆಂಧ್ರ ಪ್ರದೇಶಗಳಲ್ಲಿ ಸಂಭವಿಸಿದ ಅವಘಡಕ್ಕೆ ಯಾವುದೇ ಮಹತ್ವ ಕೊಡದೆ ಇರುವುದು..
ಸರಿಯಾಗಿ ಹೇಳಿದ್ದೀಯ ಗುರು.. ನಿನ್ನೆಯಿ೦ದ ನಮ್ಮ ಕಛೇರಿಯಲ್ಲಿ/ಗೆಳೆಯರ ಬಳಿ ಸ೦ತ್ರಸ್ತರ ಸಹಾಯಕ್ಕೆ ಹಣ ಒಟ್ಟು ಮಾಡಲು ಹೆಣಗುತ್ತಿದ್ದೆನೆ. ಕಾರ್ಗಿಲ್, ಸುನಾಮಿಗೆ ಮನಸ್ಸು ಬಿಚ್ಚಿ ದಾನ ಮಾಡಿದ ಕೈಗಳು ನಮ್ಮ ನಾಡಿನ ಸಮಸ್ಯೆಗೆ ಮೊಟಕಾಗಿವೆ...ಛೆ! ಆದರೆ ಈಗ ಈ ನಿನ್ನ ಕವನವನ್ನು ತೋರಿಸಿ ಪ್ರಯತ್ನ ಮು೦ದುವರಿಸುತ್ತೇನೆ. ನನ್ನಿ ಗುರು, ನನ್ನಿ.
ನಿಮ್ಮ ಕವನಗಳ ಒಳ ಅರ್ಥ ತುಂಬಾ ಚೆನ್ನಾಗಿದೆ,
ನಾವು ಕನ್ನಡಿಗರು ಬಲು ಉದಾತ್ತ ಮನೋಭಾವ ಹೊಂದಿದ್ದೇವೆ. ಬೆಂಗಳೂರಿನಲ್ಲಿ ಎಲ್ಲರನ್ನೂ ಬರಲು ಬಿಟ್ಟಿದ್ದೇವೆ, ಇಂದು ನಮ್ಮದೇ ಜನ ಮಳೆಗೆ ಕಂಗಾಲಾಗಿದ್ದಾರೆ, ನಾವು ಬೆಂಗಳೂರಿನಲ್ಲಿ ವಸತಿ ಕಲ್ಪಿಸಿದ ಯಾವ ಜನರೂ ಸಹಾಯಕ್ಕೆ ಬರುತ್ತಿಲ್ಲ, ನಮ್ಮವರೂ ಬರುತ್ತಿಲ್ಲ,
ನಿಜಕ್ಕೂ ವಿಷಾಧನೀಯ
ಕವನ ಬರೆದವರ ಹೆಸರು ತಿಳ್ಕೋಬೋದ?
ಸೂಪರ್ ಪದ್ಯ. ಇದರ ಸಾರಂಶ ತುಂಬಾ ಚೆನ್ನಾಗಿದೆ.
maaysaa,
hesarallEnide geLeyaa? saMsdEsha saakalvaa?
kannaDiga
ಕವನ ಬರೆದ ಕವಿ ಯಾರೆಂದು ತಿಳಿದುಕೊಳ್ಳೋದರ ಕುತುಕ ಅಷ್ಟೆ.
ಸಂದೇಶ ರವಾನೆಯಾಗಿದೆ. :)
Tumba Chennagide kavana....
ಕವನ ಅರ್ಥಪೂರ್ಣವಾಗಿದೆ.
ಸೌಮ್ಯ.ನಾ.ಕುಮಾರ್
ಕವನ ಚೆನ್ನಾಗಿದೆ. ಹನಿಗವನ ಓದುವ,ಬರೆಯುವ ಹವ್ಯಾಸವಿದ್ದರೆ ಈ ಬ್ಲಾಗನ್ನೊಮ್ಮೆ ವೀಕ್ಷಿಸಿ..
http://chataki.blogspot.com/
ಸೋಮಾರಿ !!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!