ಹಿಂದೀ ಹೇರಿಕೆ ಬರೀ ಹಿಂದಿಯೇತರರ ಮೇಲೆ ಮಾತ್ರಾ ಆಗ್ತಿಲ್ಲ. ಹಿಂದೀ ಭಾಷಿಕರು ಅಂತ ಕರೆಸಿಕೊಳ್ತಾ ಇರೋ ಉತ್ತರ ಭಾರತದ ಬಹುತೇಕ ಎಲ್ಲಾ ಭಾಷಾ ಜನಗಳ ಮೇಲೆ ಹಿಂದೀ ಹೇರಿಕೆ ಆಗ್ತಾಯಿದೆ ಅಂದ್ರೆ ನಂಬ್ತೀರಾ? ಗುರೂ! ಹೌದು, ಉತ್ತರ ಭಾರತದಲ್ಲಿರೋ ಅನೇಕ ಭಾಷೆಗಳನ್ನು ಹಿಂದಿ ಅನ್ನೋ ಆಲದ ಮರದಡಿ ಹರವಿ (ಆಲದ ಮರದ ಕೆಳಗೆ ಏನೂ ಬೆಳ್ಯಲ್ಲಾ ಅನ್ನೋದು ಮರೀಬೇಡಿ) ಅವ್ರುನ್ನೆಲ್ಲಾ ಹಿಂದಿಯೋರೂ ಅಂದು ಅವರದಲ್ಲದ ನುಡೀನಾ ಅವರುಗಳ ಮೇಲೆ ಹೇರುತ್ತಾ ಇರೋದು ದಿಟಾ ಗುರು!!
ಅದೆಂಗೇ ಅಂತೀರಾ?
ಈ ಚಿತ್ರ ನೋಡಿ ಗುರುಗಳೇ. ಇದು ಕರ್ನಾಟಕದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯೋರು ಅಪಾಯಾಕಾರಿಯಾದ ಕಸವನ್ನು ಸರಿಯಾದ ರೀತೀಲಿ ನಿರ್ವಹಿಸೋಕೆ ಅಂತಾ ರೂಪಿಸಿರೋ ಒಂದು ನಿಯಮದ ಅಂಗವಾಗಿರೋ ಸಣ್ಣ ಅಂಟುಚೀಟಿ.
ಈ ಅಂಟುಚೀಟೀನಾ ಸಂಬಂಧಪಟ್ಟ ಉತ್ಪಾದಕರು/ ಬಳಕೆದಾರರು (ಕಾರ್ಖಾನೆಯೋರು) ಬಹಳಾ ಮುತುವರ್ಜಿಯಿಂದ, ಬಿಸಾಕಲೆಂದು ಕೂಡಿಟ್ಟ ಅಪಾಯಕಾರಿ ಕಸದ ಡಬ್ಬಿಯ ಮೇಲೆ ಅಂಟಿಸಬೇಕು. ಇದರ ಮೇಲೆ ದೊಡ್ಡದಾಗಿ ಭವ್ಯ ಭಾರತದ ಮಹತ್ಸಾಧನೆಯಾದ ತ್ರಿಭಾಷಾ ಸೂತ್ರದ ಅನ್ವಯ ಮೂರು ಭಾಷೇಲಿ ಮುದ್ರಿಸಿದ್ದಾರೆ. ಕನ್ನಡದಲ್ಲಿ (?) “ಅಪಾಯಕಾರಿ ತ್ಯಾಜ್ಯ” ವೆಂದೂ, ಇಂಗ್ಲೀಷಿನಲ್ಲಿ “hazardous waste” ಎಂದೂ ಬರೆದಿದಾರೆ. ಆದ್ರೆ ದೇವನಾಗರೀ ಲಿಪಿಯಲ್ಲಿ ಬರೆದಿರೋ ಸಾಲುಗಳೇನು? ಅದು ಯಾವ ಭಾಷೇದು? ಅಂತಾ ವಸಿ ನೋಡು ಗುರು... “ಪರಿಸಂಕಟಮಯ ಅಪಶಿಷ್ಟ” ಅನ್ನೋದು ಯಾವ ಭಾಷೆ ಗುರೂ? ಇದನ್ನು ವಿನ್ಯಾಸ ಮಾಡಿರೋ ಮಹನೀಯರು ಹಿಂದೀ ಅಂತಾನೆ ಈ ಪದ ಬಳಸಿರೋದು. ಯಾವ ಹಿಂದೀ ಭಾಷಿಕರು ಇದನ್ನು ಬಳುಸ್ತಾರೆ? ಬಳುಸದ್ ಬಿಡಿ, ಯಾವ ಹಿಂದಿಯವನಿಗೆ ಇದು ಅರ್ಥವಾಗುತ್ತೆ? ಹಿಂದೀನೂ ಬಿಡಿ, ಹಿಂದೀ ಅನ್ನೋ ದೇವತೆ(?) ಇದುವರೆಗೂ ನುಂಗಿ ನೀರು ಕುಡ್ದಿರೋ ಭೋಜ್ಪುರಿ, ರಾಜಸ್ಥಾನಿ, ಪಹಾಡಿ, ಬ್ರಿಜ್ ಭಾಷಾ, ಅವಧಿ... ಮುಂತಾದ ೪೯ ಭಾಷೆಗಳಲ್ಲಿ ಯಾವ ಭಾಷೇಲಿ ಇದನ್ನು ಬಳುಸ್ತಾರೆ ಅಂತಾ ಕೇಳುದ್ರೆ... ‘ಊಹೂಂ ಯಾವ ಭಾರತೀಯ ಭಾಷೇಯ ಜನರೂ ಈ ಪದಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸಲ್ಲ’ ಅನ್ನೋದೇ ಉತ್ತರವಾಗಿದೆ ಗುರು. ಮತ್ಯಾಕೆ ಇವರು ಹೀಗೆ ಈ ಪದಗಳ್ನ ಬಳಸಿದಾರೆ? ಇದ್ಯಾವ ಭಾಷೇದೂ?
ಕಪ್ಪು ನಾಯೀನ ಬಿಳೀ ಮಾಡೊ ಪ್ರಯತ್ನ!
ಇಂದು ಹಿಂದೀ ಭಾಷೆ ಅಂತಾ ಕರೀತಿರೋದ್ರಲ್ಲಿ ಒಟ್ಟು ೪೯ ಭಾಷೆಗಳು ಅಡಕವಾಗಿವೆ. ಹಿಂದೀ ಭಾಷೆ ಮಾತಾಡೋರ ಸಂಖ್ಯೆ ಜಾಸ್ತಿ ಅಂತಾ ಬಿಂಬಿಸಿ ಹಿಂದೀನ ಎಲ್ಲರ ಮೇಲೆ ಹೇರೋ ಪ್ರಯತ್ನಾನ ಭಾರತ ಸರ್ಕಾರ ಹಿಂದಿನಿಂದಲೂ ಮಾಡ್ಕೊಂಡೇ ಬಂದಿದೆ. ಇಂಥಾ ಪ್ರಯತ್ನದ ಅಂಗವಾಗಿ ಪಂಜಾಬಿ ಭಾಷೇನೂ ಹಿಂದೀನೇ ಅಂತ ಅಂದು, ಅದರಿಂದ ಪಂಜಾಬು ಹತ್ತುರಿದದ್ದೂ ಆಗಿ ಕೊನೆಗೆ ಪಂಜಾಬಿ ಭಾಷೆಗೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲೊಂದು ಜಾಗ ಸಿಕ್ಕಿದ್ದು ಇತಿಹಾಸ. ಇರಲಿ, ಹೀಗೆ ೪೯ ಬೇರೆ ಬೇರೆ ನುಡಿಗಳನ್ನು ನುಂಗಿ ಆ ನುಡಿಗಳೆಲ್ಲವೂ ಹಿಂದೀನೇ ಅನ್ನೋವಾಗ ಜನರು ಯಾವ ಪದಾನ ಬಳುಸ್ಬೇಕು ಅನ್ನೋ ಗೊಂದಲಾ ಹುಟ್ಕೊಂಡ್ತು. ಕೆಲವರು ಅಪಾಯ ಅಂತಾ ಅಂದ್ರೆ, ಇನ್ನು ಕೆಲವರು ಖತ್ರಾ ಅಂದ್ರು. ಅದಕ್ಕೇ ಹೀಗಾಗೋದ್ ಬ್ಯಾಡಾ ಅಂತಾ ಕೇಂದ್ರಸರ್ಕಾರದೋರು ಹಿಂದೀ ಅಂದ್ರೆ ಇಂಥದ್ದು, ಇದು ಸ್ಟಾಂಡರ್ಡ್ ಹಿಂದಿ, ಇದುನ್ನೇ ಇನ್ಮೇಲೆ ನೀವೆಲ್ಲಾ ಬಳುಸ್ಬೇಕು, ಅಂತಾ ಹೇಳಕ್ಕೇ ಅಂತಲೇ “Centre for Hindi Directorate” ಅಂತಾನೆ ಒಂದು ಇಲಾಖೆ ತೆಕ್ಕೊಂಡು ಕೂತಿದೆ. ಇವ್ರು ಹಿಂದೀಲಿ ಯಾವ ಪದ ಬಳುಸ್ಬೇಕು ಅಂತಾ ತೀರ್ಮಾನ ಮಾಡ್ತಾರೆ. ಹೊಸಪದಗಳನ್ನು ಹುಟ್ಟು ಹಾಕ್ತಾರೆ. ಒಟ್ಟಾರೆ ಜನರು ಬಳಸದ ತಥಾ, ಪರಂತು, ಕೇವಲ್, ಅನುಸಾರ್ ಮುಂತಾದ ಪದಗಳನ್ನು ಹುಟ್ಟು ಹಾಕೋರಿಗೆ ಏನನ್ನಬೇಕು ಗುರು?
ಹಿಂದಿಯೋರ ಮೇಲೇ ಹಿಂದಿ ಹೇರಿಕೆ
ಈಗೆ ಹೇಳಿ ಗುರುಗಳೇ, ಹಿಂದಿಯೋರ ಮೇಲೇ ಹಿಂದಿ ಹೇರಿಕೆ ಆಗ್ತಿದ್ಯೋ ಇಲ್ವೋ ಅಂತಾ. ಭಾಷಾ ವಿಜ್ಞಾನ ಅಂದ್ರೇನು? ಭಾಷೇ ಅಂದ್ರೇನು? ಇದು ಸಮಾಜದಲ್ಲಿ ಯಾವ ಪಾತ್ರ ವಹಿಸುತ್ತೆ? ಅನ್ನೋದನ್ನೆಲ್ಲಾ ಮರ್ತು ಒಂದು ದೇಶ ಅಂದಮೇಲೆ ಒಂದು ಭಾಷೇ ಬೇಡ್ವಾ? ಒಂದು ಭಾಷೆ ಅಂದಮೇಲೆ ಅದರಲ್ಲಿ ಎಲ್ರೂ ಬಳ್ಸೋ ಸ್ಟಾಂಡರ್ಡ್ ಪದಗಳೇ ಇರಬೇಕಲ್ವಾ? ಇದುಕ್ ಒಂದು ಸಣ್ಣ ಉದಾಹರಣೆ : ಇಡೀ ಕರ್ನಾಟಕ 'ಇದೆ' ಅನ್ನೋ ಪದಾನಾ ಇನ್ಮುಂದೆ 'ಇದೆ' ಅಂತಾನೇ ಅನ್ನಬೇಕು, ಅದಾವ, ಐತಿ, ಐತೆ, ಉಂಟು ಅನ್ನೋದನ್ನೆಲ್ಲಾ ಬಳುಸ್ಬಾರ್ದು ಅಂದ್ರೆ ಹೆಂಗೆ? ಈಗ ಹಾಗೇ ಇದೆ ಕೇಂದ್ರದ ಈ ಪ್ರಯತ್ನ. ದೇಶದಲ್ಲಿ ಒಗ್ಗಟ್ಟು ಮೂಡಿಸಲು ಆಗೋದು ನಮ್ಮ ನಡುವೆ ಈಗಾಗಲೇ ಇರೋ ಸಮಾನವಾದದ್ದನ್ನು ಎತ್ತಿ ಹಿಡಿಯುವ ಮೂಲಕವೇ ಹೊರತು ಇಲ್ಲದ ಸಮಾನತೇನಾ ಹೇರೋದ್ರ ಮೂಲಕ ಅಲ್ಲಾ ಅಲ್ವಾ ಗುರು?
5 ಅನಿಸಿಕೆಗಳು:
ಒಳ್ಳೇ ಬರಹ....
ಆದರೆ ಅದು ಸಂಸ್ಕೃತದ ಹೇರಿಕೆ, ಹಿಂದೀ ಹೆಸರಿನಲ್ಲಿ.
ಉರ್ದು ಪದಗಳನ್ನು , ಅರಬ್ಬಿ, ಪಾರಸೀ ಪದಗಳನ್ನು ಕಿತ್ತಾಕಿ ಅಲ್ಲಿ ಸಂಸ್ಕೃತ ತುಂಬಿ ಶುದ್ಧ ಹಿಂದಿ ಅನ್ನೋದು ಮುಕ್ಯವಾಗಿ ಉತ್ತರಪ್ರದೇಶದ ಹಿಂದೀ ಪಂಡಿತರ ಹಳೇ ಚಾಳಿ ( ನಮ್ಮ ಹಲ ಕನ್ನಡ ಪಂಡಿತರಂಗೆ ).
ಹಿಂದೆ ಒಂದು ಹಿಂದೀ ಕಾರ್ಯಕ್ರಮದಲ್ಲಿ ಇಂತಾ ಪಂಡಿತ್ರನ್ನ ಆಡಿಕೊಂಡು ಒಂದು ಜೋಕು ಬಂದಿತ್ತು....
ಹಿಂದಿಯಲ್ಲಿ "ಮೈ ಶರ್ಮ್ ಕೇ ಮಾರೇ ಪಾನಿ ಪಾನಿ ಹೋ ಗಯಿ" ಎಂದು ಒಂದು ಹೆಂಗಸು ಹೇಳಿದಕ್ಕೆ, ಅವಳ ಗಂಡ ಶುದ್ಧ ಹಿಂದೀ ಪಂಡಿತ.. "ಅಯ್ಯೊ ಅಯ್ಯೋ ಶರ್ಮ್, ಪಾನಿ ಇವೆಲ್ಲ ಶುದ್ಧ ಹಿಂದೀ ಅಲ್ಲ.. ಅದಕ್ಕೆ, ’ಮೈ ಲಜ್ಜಾ ಕೇ ಮಾರೇ ಜಲ್ ಜಲ್ ಹೋ ಗಯಿ’ ಅನ್ನೂ " ಎಂದೂ ತಿವೀತಾನೆ.!
ಹಿಂದೀ ಹೇರಿಕೆ ಅನ್ನೋ ಮುಖವಾಡ. ಅದರ ಹಿಂದೆ ಅವಿತಿರೋದು ’ಆಲದ-ಮರದ-ನುಡಿ’ ಬೇರೇದು. ಅದರ ತ್ರಾಸ ಪಾಪಾ ದಿಟವಾದ ಹಿಂದೀ ನುಡಿಗರಿಗೂ ತಿಕ್ಕಿದೆ.
ಒಳ್ಳೇ ಬರಹ. ಹಿಂದೀ ನುಡಿಗರೊಮ್ಮೆ ಓದಿಕೊಳ್ಬೇಕು.
-ಹಕಾರಲೋಪಸಂದಿ!
ಗುರು ಒಳ್ಳೆ ಅಭಿಪ್ರಾಯ ಬಡಪಾಯಿ ಹಿಂದಿಗರು...!
ಏನು ಮಾಡೋದು ನಮ್ಮ ಘನ ಸರಕಾರದ ಅವಾಂತ್ರ ಇದು.
ಘನ ಸರಕಾರ ಇಷ್ಟು ಸಣ್ಣ ವಿಷಯಗಳಲ್ಲೇ ಇಷ್ಟೊಂದು ತಪ್ಪು, ಇನ್ನು ದೊಡ್ಡ ದೊಡ್ಡ ನಿರ್ಧಾರಗಳಲ್ಲಿ
ಏನೇನು ಮಾಡುತ್ತಾರೋ
HI Dont beleive hindi people, they are always dominating us.
Really every day I am suffering from this issue.
Can you help me any one?
Please mail to me
kanasugara2008@gmail.com
Jai Karnataka Mathe
ಹಿಂದಿ ಸೇರಿದಂತೆ ಉತ್ತರ ಭಾರತದ ಅನೇಕ ಭಾಷೆಗಳಿಗೆ ತಮ್ಮದೇ ಆದ ಲಿಪಿಗಳೇ ಇಲ್ಲ. ಈ ಎಲ್ಲ ಭಾಷೆಗಳು ದೇವನಾಗರಿ ಲಿಪಿಯನ್ನೇ ಉಪಯೋಗಿಸುತ್ತವೆ. ಭಾರತದ ಇಷ್ಟೂ ರಾಜ್ಯಗಳಲ್ಲಿ ಹಿಂದಿ ಪ್ರಾದೇಶಿಕ ಭಾಷೆಯಾಗಿರುವ ರಾಜ್ಯಗಳು ಕೇವಲ ೫. ಇಲ್ಲೂ ಕೂಡ ಹಿಂದಿಯ ಜೊತೆಗೆ ಇನ್ನೂ ಕೆಲವು ಸಣ್ಣ ಪುಟ್ಟ ಭಾಷೆಗಳಿವೆ. ಉತ್ತರ ಭಾರತದ ಅನೇಕ ಭಾಷೆಗಳಿಗೆ ಹಿಂದಿ ಭಾಷೆಯೊಂದಿಗೆ ಇರುವ ಸಾಮ್ಯತೆಯನ್ನೇ ನೆಪವಾಗಿಟ್ಟುಕೊಂಡು ಹಿಂದಿ ಭಾಷೆಯನ್ನು ಹೆಚ್ಹು ಜನರು ಮಾತನಾಡುತ್ತಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದನ್ನು ನಾವು ಪ್ರಬವಾಗಿ ವಿರೋಧಿಸಬೇಕು.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!