ಸಮಸ್ಯೆನೇ ಮರೆತು ‘ಪರಿಹಾರ’ ಕೊಡುವ ಹಿಂದೀವಾದಿಗಳು!

ಅಕ್ಟೋಬರ್ ೧೪ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರೊ. ವಿ.ಸಿ. ಕವಲಿ ಅವರು “ಹಿಂದಿ ನಮ್ಮ ರಾಷ್ಟ್ರಭಾಷೆಯೇ?” ಎಂಬ ಬರಹದಲ್ಲಿ ಬಹಳ ಮಹತ್ವದ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ. ಆ ಬರಹದಲ್ಲಿ ಶ್ರೀ ಕವಲಿ ಅವರು ಭಾರತಕ್ಕೆ ಯಾವ ರೀತಿಯ ಭಾಷಾ ಪದ್ದತಿಯು ಬೇಕೆಂಬುದರ ಬಗ್ಗೆ ಅನೇಕ ತಪ್ಪುಗಳನ್ನು ಮಾಡಿರುತ್ತಾರೆ. ಅಷ್ಟೇ ಅಲ್ಲದೆ “ಹಿಂದಿ ನಮ್ಮ ರಾಷ್ಟ್ರಭಾಷೆಯೇ?” ಎಂಬ ಪ್ರಶ್ನೆಯನ್ನು ಅವರ ಬರಹದ ಹೆಸರು ಕೇಳುತ್ತದೆಯೇ ಹೊರತು ಅವರ ಮನಸ್ಸು ಮತ್ತು ಅವರ ಬರಹವು “ಹಿಂದಿಯೇ ನಮ್ಮ ರಾಷ್ಟ್ರಭಾಷೆ” ಎಂದು ಒಪ್ಪಿ ಕನ್ನಡಕ್ಕಷ್ಟೇ ಅಲ್ಲ, ಪ್ರಜಾಪ್ರಭುತ್ವಕ್ಕೇ ದ್ರೋಹವೆಸಗಿರುತ್ತವೆ.

ಹಿಂದಿ ರಾಷ್ಟ್ರಭಾಷೆ ಎನ್ನುವ ಕಾಗಕ್ಕನ ಕತೆ!

ಮೊದಲನೆಯದಾಗಿ ಹಿಂದಿಯು ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಉತ್ತರಿಸಿದರೆ “ರಾಷ್ಟ್ರೀಯ ಏಕತಾ ಭಾವನೆಗೆ ಅಪಚಾರವಾದಂತಾಗುತ್ತದೆ” ಎಂದು ದಕ್ಷಿಣದ ನಾಲ್ಕು ರಾಜ್ಯಗಳ ಬಹುಪಾಲು ಜನರ ಅಭಿಪ್ರಾಯವಾಗಿದೆ ಎಂದು, ನಿಜಾಂಶದ ಅರಿವಿಲ್ಲದಿದ್ದರೂ ಪತ್ರಿಕೆಯೊಂದರಲ್ಲಿ ಸಾರಿ ಸಾರಿ ಹೇಳುವ ಇವರ ಧೈರ್ಯವನ್ನು ಮೆಚ್ಚಬೇಕು! ನಿಜಕ್ಕೂ ನೋಡಿದರೆ ಬಹುಪಾಲು ದಕ್ಷಿಣದ ನಾಡುಗಳ ಜನರಿಗೆ ಯಾವುದೋ ಒಂದು ಭಾಷೆಯನ್ನು ರಾಷ್ಟ್ರಭಾಷೆಯೆಂದು ಕರೆದರೇ “ಭಾರತದಲ್ಲಿ ಏಕತಾ ಭಾವನೆಗೆ” ಅಪಚಾರವಾದಂತಾಗುತ್ತದೆ ಎನ್ನುವ ಅರಿವು ಬಹಳ ಚೆನ್ನಾಗಿದೆ. ದಕ್ಷಿಣದವರು ಮೊದಲಿಂದಲೂ ಭಾರತಕ್ಕೆ ಒಂದು ರಾಷ್ಟ್ರಭಾಷೆಯಿರಬೇಕೆಂಬ ಹುನ್ನಾರಗಳನ್ನು ಎದುರಿಸುತ್ತಲೇ ಬಂದಿದ್ದಾರೆ, ಇಂದಿಗೂ ಎದುರಿಸುತ್ತಾರೆ, ಮುಂದೆಯೂ ಎದುರಿಸುತ್ತಾರೆ. ಯಾವುದೋ ಒಂದು ತಮ್ಮದಲ್ಲದ ಭಾಷೆಯನ್ನು ಭಾರತದ ಜನರ ಮೇಲೆಲ್ಲ ಹೇರಿದ್ದಾರೆ ಎನ್ನುವುದು ಅಂತರ್ರಾಷ್ಟ್ರೀಯ ಸಮುದಾಯಕ್ಕೆ ತಿಳಿದುಬಂದರೆ ಭಾರತವು ಪ್ರಜಾಪ್ರಭುತ್ವವೇ ಅಲ್ಲ ಎಂಬ ಕೂಗು ಏಳುವ ಸಾಧ್ಯತೆಯೂ ಇದೆ! ಆದ್ದರಿಂದ ಪೂರ್ತಿ ಸಂತೋಷದಿಂದಾಗಲೀ, ತುಸು ಸಂತೋಷದಿಂದಾದರೂ ಆಗಲಿ ಹಿಂದಿಯನ್ನು ನಮ್ಮ ರಾಷ್ಟ್ರಭಾಷೆ ಎಂದು ಹಿಂದಿಯೇತರ ನುಡಿಗಳನ್ನಾಡುವವರು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.

ಇನ್ನು ಹಿಂದಿಯನ್ನು ಏಕೆ ರಾಷ್ಟ್ರಭಾಷೆಯಾಗಿ ಕರೆಯಲಾಯಿತು ಎಂಬ ಕತೆಯನ್ನು ಶ್ರೀ ಕವಲಿಯವರು ಚೆನ್ನಾಗಿ ಕುಯ್ದಿದ್ದಾರೆ. ಆದರೆ ಇವತ್ತಿಗೂ ನಮ್ಮ ಸಂವಿಧಾನವು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯುವುದಿಲ್ಲ ಎನ್ನುವುದು ಇವರ ಗಮನಕ್ಕೆ ಬರದೆ ಹೋಯಿತೇನೋ. ಇಂಥ ಬುದ್ಧಿಜೀವಿಗಳು ಒಮ್ಮೆ ಸಂವಿಧಾನವನ್ನು ಓದಬಾರದೇಕೆ? ಹಿಂದಿಯನ್ನು (ಅದು “ಆಕಾಶವಾಣಿ ಹಿಂದಿ”ಯನ್ನಾಗಲಿ “ಫಿಲ್ಮೀ ಹಿಂದಿ”ಯನ್ನಾಗಲಿ) ಭಾರತದ ಸಂವಿಧಾನವು ರಾಷ್ಟ್ರಭಾಷೆ ಎಂದು ಕರೆದಿಲ್ಲ. ಅದನ್ನು ಭಾರತದಲ್ಲಿ ಯಾವನೂ ಕಡ್ಡಾಯವಾಗಿ ಕಲಿಯಬೇಕಿಲ್ಲ. ಆದರೆ ಸಂವಿಧಾನವು ಒಂದನ್ನು ಹೇಳಿದರೆ ಬೀದಿಯ ದಿಟವೇ ಬೇರೆಯೆಂಬುದು ಭಾರತದ ಪ್ರಜಾಪ್ರಭುತ್ವದ ಮೇಲೆ ಬಿದ್ದಿರುವ ಕಪ್ಪುಚುಕ್ಕೆ. ಹೌದು, ಆ ಹಿಂದಿಯನ್ನು ಕಲಿಯದಿದ್ದರೆ ನಿಮಗೆ ಕೇಂದ್ರಸರ್ಕಾರದ ಯಾವ ಹುದ್ದೆಯೂ ದಕ್ಕುವುದಿಲ್ಲವೆನ್ನುವುದು ದಿಟ.

ಶುದ್ಧ ಹಿಂದಿಯೆನ್ನುವ ಜನ ಬಳಸದ ಭಾಷೆ!

ಹಿಂದಿಯನ್ನು ರಾಷ್ಟ್ರಭಾಷೆಯೆಂದು ಯಾವ ತರ್ಕವೂ ಇಲ್ಲದೆ ಒಪ್ಪಿಕೊಂಡ ಶ್ರೀ ಕವಲಿಯವರು ಮುಂದೆ ಆ ರಾಷ್ಟ್ರಭಾಷೆಯೂ ಅದರ ಲಿಪಿಯೂ ಹೇಗೆ ದಕ್ಷಿಣದ ರಾಜ್ಯಗಳಿಗೆ ಹೊಂದುವುದಿಲ್ಲವೆಂದು ವಾದಿಸಿ ತಮ್ಮ ಸಿದ್ಧಾಂತಕ್ಕೇ ಕೊಡಲಿಯೇಟು ಹಾಕಿಕೊಂಡಿದ್ದಾರೆ. ನಿಜಕ್ಕೂ ನೋಡಿದರೆ ಇವರು ತಿಳಿಸುವ “ಫಿಲ್ಮೀ ಹಿಂದಿ”ಯೇ ಹಿಂದಿ ಭಾಷಿಕ ಜನರು ತಮ್ಮ ತಮ್ಮ ಮನೆ ಮನೆಗಳಲ್ಲಿ ಆಡುವ ಹಿಂದಿ. ಈ ಹಿಂದಿಗೂ ಉರ್ದೂಭಾಷೆಗೂ ಜಾಸ್ತಿ ಹೆಚ್ಚು-ಕಡಿಮೆಯೇ ಇಲ್ಲ! ಪಾಕಿಸ್ತಾನವು ಉರ್ದೂಭಾಷೆಯನ್ನು ರಾಷ್ಟ್ರಭಾಷೆ ಆಗಿಸಿಕೊಂಡಿತು ಎಂದ ಮಾತ್ರಕ್ಕೆ ಭಾರತದಲ್ಲಿ ಆ ಭಾಷೆಯನ್ನು ಆಡುವವರ ನಾಲಿಗೆಯನ್ನೇ ಬದಲಾಯಿಸಲಾದೀತೆ? ಇಲ್ಲವೇ ಇಲ್ಲ! ಆದ್ದರಿಂದ ಇವತ್ತಿಗೂ ಉತ್ತರಭಾರತದಲ್ಲಿ ಜನಪ್ರಿಯವಾಗಿರುವ ಹಿಂದಿಗೂ ಪಾಕಿಸ್ತಾನದ ಉರ್ದುಗೂ ಜಾಸ್ತಿ ವ್ಯತ್ಯಾಸವಿಲ್ಲ. ಪಾಕಿಸ್ತಾನದ ಜೊತೆಗಿರುವ ಹಗೆತನದ ಹಿನ್ನೆಲೆಯಲ್ಲಿ ಈ ಮಾತು ಹಿಡಿಸದಿರಬಹುದು, ಆದರೆ ಹಾಗೆಂದು ಸತ್ಯವನ್ನೇ ಮುಚ್ಚಿ ಹಾಕುವುದು ಸರಿಯಲ್ಲ.

ಇಂತಹ ಅತಾರ್ಕಿಕತೆಯನ್ನು ಪ್ರದರ್ಶಿಸಿ ಒಂದು “ಶುದ್ಧ ಹಿಂದಿ” ಯನ್ನು ಹುಟ್ಟಿಸಿಬಿಟ್ಟು, ಅದರಲ್ಲಿ ದಕ್ಷಿಣದ ಭಾಷೆಗಳನ್ನು ಪ್ರತಿನಿಧಿಸುವ ಅಕ್ಷರಗಳಿಲ್ಲ ಎಂದು ಶ್ರೀ ಕವಲಿಯವರು ಗೊಳೋ ಎಂದು ಅತ್ತಿರುವುದು ನಗೆಪಾಟಲಾಗಿದೆ. ಇವರು ಹೇಳುವ ಬದಲಾವಣೆಗಳನ್ನೆಲ್ಲ ಮಾಡುತ್ತ ಹೋದರೆ ಹಿಂದಿಯೆನ್ನುವುದನ್ನು ಹಿಂದಿಯವರೇ ಕೈ ಬಿಟ್ಟಾರು! ಉತ್ತರದ ಜನರು ಸ್ವಾಭಾವಿಕವಾಗಿ “ಔರ್, ಲೇಕಿನ್, ಸಿರ್ಫ್, ಮುತಾಬಿಕ್” ಎನ್ನುವಾಗ “ತಥಾ, ಪರಂತು, ಕೇವಲ್, ಅನುಸಾರ್” ಎನ್ನಿರಿ ಎಂದು ಹೇಳಿದರೆ ಅವರ ಪಾಡೇನಾದೀತು?!

ಭಿನ್ನ ನೆಲೆಯ ಹಿಂದಿ - ಕನ್ನಡ

ಹೋಗಲಿ, ಆ “ಶುದ್ಧ ಹಿಂದಿ”ಯನ್ನು ದಕ್ಷಿಣದವರೆಲ್ಲ ಕಣ್ಣಿಗೆ ಒತ್ತಿಕೊಂಡು ಪೂಜಿಸುತ್ತಾರೆ ಎಂದು ಇವರು ತಿಳಿದಿರುವುದಂತೂ ಮಹಾ ಆತ್ಮವಂಚನೆಯೇ, ಏಕೆಂದರೆ ಇವರ ಕಲ್ಪನೆಯ ಶುದ್ಧ ಹಿಂದಿಯು ಸಂಸ್ಕೃತವೇ ಆಗಿದ್ದು ದಕ್ಷಿಣದ ಭಾಷೆಗಳಿಗಿಂತ ತೀರ ಬೇರೆಯಾದ ಒಂದು ಇಂಡೋ-ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುತ್ತದೆ. ದಕ್ಷಿಣದ ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರುತ್ತವೆ. ಇವೆರಡೂ ಭಾಷಾ ಕುಟುಂಬಗಳ ನಡುವೆ ಹೆಚ್ಚೇನೂ ಸಾಮ್ಯತೆಯಿಲ್ಲದಿರುವುದರಿಂದ ಒಂದನ್ನು ಇನ್ನೊಂದನ್ನಾಡುವವರ ಮೇಲೆ ಹೇರಲಾಗುವುದಿಲ್ಲ. ಶ್ರೀ ಕವಲಿಯವರೇನಾದರೂ ಮರೆತುಬಿಟ್ಟಿದ್ದರೆ ಮೇಲಿನ ಪದಗಳಿಗೆ ಕನ್ನಡದಲ್ಲಿ “ಮತ್ತು, ಆದರೆ, ಬರೀ, ಹಂಗೆ/ಹಾಗೆ” ಎನ್ನುವ ಪದಗಳಿವೆ. ಇವಕ್ಕೂ “ಶುದ್ಧ ಹಿಂದಿ”ಗೂ ಯಾವ ನಂಟೂ ಇಲ್ಲವೆನ್ನುವುದು ತಿಳುವಳಿಕಸ್ತರಿಗೆ ಅರ್ಥವಾಗದೆ ಹೋಗುವುದಿಲ್ಲ.

ಇನ್ನು ಶ್ರೀ ಕವಲಿಯವರು ಕೊಟ್ಟಿರುವ “ನರುಗಂಪು ಬೀರುವ ಹೂಗಳ ಸಜ್ಜಿಕೆ ಮನಸ್ಸನ್ನು ಮುದಗೊಳಿಸಿತು” ಎನ್ನುವುದೇ ಕನ್ನಡ. ಅದನ್ನು “ಸಿರಿಗನ್ನಡ” ಎಂದು ಕರೆಯುವುದು ಬೇಕಾಗಿಲ್ಲ; ಅದೇ “ಕನ್ನಡ”. “ಸುಗಂಧಭರಿತ ಪುಷ್ಪಗಳ ಅಲಂಕಾರ ಮನಸ್ಸನ್ನು ಮೋಹಗೊಳಿಸಿತು” ಎನ್ನುವುದು ಸಂಸ್ಕೃತಕ್ಕೂ ಕನ್ನಡಕ್ಕೂ ತಾಯಿ-ಮಗಳ ಸಂಬಂಧವಿದೆಯೆಂದು ತಪ್ಪಾಗಿ ತಿಳಿದಿರುವವರ ಒಂದು ಭಾಷೆ. ಈ ಭಾಷೆಯು ಕರ್ನಾಟಕದ ಸಾಹಿತ್ಯದಲ್ಲಿ ಬಹಳ ಓಡಾಡುತ್ತಿರುವುದು ಕನ್ನಡಿಗರ ಏಳಿಗೆಗೆ ಮಾರಕವಾಗಿದೆಯೆನ್ನುವುದು ಬೇರೆಯ ವಿಷಯ. ಸಾಹಿತ್ಯದಲ್ಲಿ ಇರುವುದೇ ಕನ್ನಡವೆಂದು ಸಾಮಾನ್ಯ ಕನ್ನಡಿಗರು ತಪ್ಪಾಗಿ ತಿಳಿದು ತಮ್ಮ ಆಡುನುಡಿಯೇ ಸರಿಯಿಲ್ಲವೆಂದುಕೊಂಡಿರುವುದು ಮತ್ತೊಂದು ವಿಷಯ. ಇವುಗಳ ಬಗ್ಗೆಯೆಲ್ಲ ಇಲ್ಲಿ ಬರೆಯುವುದು ವಿಷಯದಿಂದ ದೂರ ಹೋದಂತಾದೀತೆಂದು ಕೈಬಿಡೋಣ.

ಇನ್ನು ದೂರದರ್ಶನದಲ್ಲಿ ರಾಮಾಯಣ-ಮಹಾಭಾರತ ಧಾರವಾಹಿಗಳು “ಶುದ್ಧ ಹಿಂದಿ”ಯಲ್ಲಿ ಬಂದಾಗ ದಕ್ಷಿಣದವರಿಗೆ ಕಷ್ಟವಾಗಲಿಲ್ಲ ಎಂದು ವಾದಿಸುವುದು ನಿಜಕ್ಕೂ ಮಹಾ ಮೂರ್ಖತನವೇ. ದಕ್ಷಿಣದ ಜನರಿಗೆ ಆ ಧಾರವಾಹಿಗಳು ಅರ್ಥವಾಗಿದ್ದರೆ ಅದು ಆಯಾ ಕತೆಗಳನ್ನು ದಕ್ಷಿಣದ ಕವಿಗಳು ಇಲ್ಲಿಯ ಭಾಷೆಗಳಿಗೆ ಬಹಳ ಹಿಂದೆಯೇ ತಂದಿರುವುದರಿಂದ; ರಾಮಾಯಣ-ಮಹಾಭಾರತಗಳು ದಕ್ಷಿಣದ ಜನರಲ್ಲೂ ಬಹಳ ಹೆಸರುವಾಸಿಯಾಗಿರುವುದರಿಂದಲೇ ಹೊರತು “ಶುದ್ಧ ಹಿಂದಿ”ಯು ದಕ್ಷಿಣದ ಜನರಿಗೆ ಹತ್ತಿರವಾದ ಭಾಷೆ ಎಂದೇನಲ್ಲ!

ಸುಸಂಸ್ಕೃತ ಕನ್ನಡ ಎನ್ನುವ ಬೆದರುಬೊಂಬೆ!

ಕನ್ನಡವನ್ನು ಕೈಬಿಟ್ಟು “ಸುಸಂಸ್ಕೃತ ಕನ್ನಡ” ಎಂಬ ಹೊಸದೊಂದು ಬೆದರುಬೊಂಬೆಯನ್ನು ಹುಟ್ಟಿಸಿ ಅದನ್ನು ಆಡಿ ಎಂದು ಶ್ರೀ ಕವಲಿಯವರು ಕನ್ನಡಿಗರಿಗೆ ಹೇಳುವುದು ಮತ್ತೊಂದು ಅಪರಾಧವೇ ಸರಿ! ಇಡೀ ಕನ್ನಡ ಜನಾಂಗವು ತನ್ನ ನುಡಿಯನ್ನು ಒಬ್ಬರಿಬ್ಬರ ತೀಟೆಗಾಗಿ ಬದಲಾಯಿಸಿಕೊಳ್ಳಲಾಗುವುದೂ ಇಲ್ಲ, ಹಾಗೆ ಬದಲಾಯಿಸಿಕೊಳ್ಳಿ ಎನ್ನುವುದು ಪ್ರಜಾಪ್ರಭುತ್ವವನ್ನೇ ಕಡೆಗಣಿಸಿದಂತೆಯೂ ಹೌದು. ಈ “ಸುಸಂಸ್ಕೃತ ಕನ್ನಡ”ಕ್ಕೂ “ಶುದ್ಧ ಹಿಂದಿ”ಗೂ ಅಂಥದ್ದೇನು ವ್ಯತ್ಯಾಸವಿಲ್ಲ ಎಂದು ತೋರಿಸುವ ಶ್ರೀ ಕವಲಿಯವರು ಮರೆತಿರುವುದೇನೆಂದರೆ ಅವೆರಡೂ ನಿಜವಾದ ಭಾಷೆಗಳಲ್ಲ! ಅವೆರಡನ್ನೂ ಯಾರೂ ಆಡುವುದಿಲ್ಲ! ಇವರ ಕಾಲುಗಳು ನೆಲದ ಮೇಲೆ ಇವೆಯೋ ಇಲ್ಲವೋ ಎಂಬ ಪ್ರಶ್ನೆ ಓದುಗರಿಗೆ ಹುಟ್ಟಿದರೆ ತಪ್ಪೇನಿಲ್ಲ! ಇವರು ಯಾವ ಸಮಸ್ಯೆಗೆ ಪರಿಹಾರ ಕೊಡುತ್ತಿದ್ದಾರೆ ಎನ್ನುವುದನ್ನೇ ಮರೆತಿದ್ದಾರೆ!

ಭಿನ್ನತೆ ಕಾಯ್ದುಕೊಂಡರೇ ಏಕತೆ!

ಅಷ್ಟೇ ಅಲ್ಲದೆ ಈ “ಶುದ್ಧ ಹಿಂದಿ”ಯು ಹಿಂದಿಯನ್ನು ಆಡುವವರಿಗೂ ದೂರವಾದ ಭಾಷೆ, ಆದ್ದರಿಂದ “ಮೋಸವು ಬರೀ ದಕ್ಷಿಣದವರಿಗೆ ಆಗುತ್ತಿಲ್ಲ, ಇಗೋ ನೋಡಿ! ಎಲ್ಲರಿಗೂ ಮೋಸವನ್ನು ಮಾಡಿದ್ದೇನೆ!” ಎನ್ನುವ ಪೆದ್ದತನದ ಹೆಜ್ಜೆಗಳೇಕೆ? ಅದನ್ನು ಬಿಟ್ಟು ಭಾರತದಲ್ಲಿ ಭಾಷಾ-ಏಕತೆಯಿಲ್ಲವೆಂದು ಧೈರ್ಯವಾಗಿ ಒಪ್ಪಿಕೊಂಡು ಇಲ್ಲದ ಭಾಷಾ-ಏಕತೆಯನ್ನು ಹುಟ್ಟಿಹಾಕುವ ಪ್ರಯತ್ನವನ್ನೇ ಮಾಡಬಾರದು. ಭಾರತವೆಂದು ಕರೆಯಲ್ಪಡುವ ಪುಣ್ಯಭೂಮಿಯಲ್ಲಿ ಬೇರೆಬೇರೆ ಭಾಷಾವಾರು ಜನಾಂಗಗಳ ನಡುವೆ ಈಗಾಗಲೇ ಯಾವ ರೀತಿಯ ಏಕತೆಯಿದೆಯೋ ಅದನ್ನು ಗಟ್ಟಿ ಮಾಡಿಕೊಳ್ಳುವುದು ಬುದ್ಧಿವಂತರ ವಿಧಾನವು. ಅದನ್ನು ನೇರವಾಗಿ ಗಟ್ಟಿಮಾಡಿಕೊಳ್ಳುವ ಯೋಗ್ಯತೆಯಿರುವ ವೀರರೇ, ಬುದ್ಧಿವಂತರೇ ಮುಂದೆ ಭಾರತವನ್ನು ಏಳಿಗೆಯ ಹಾದಿಯಲ್ಲಿ ಕರೆದೊಯ್ಯಬಲ್ಲವರು; ಹೇಡಿಗಳಲ್ಲ; ಸತ್ಯವನ್ನು ಮುಚ್ಚಿಹಾಕುವವರಲ್ಲ; ಸಮಸ್ಯೆಯನ್ನೇ ಮರೆತು ಪರಿಹಾರಗಳ ಬಗ್ಗೆ ಮಾತಾಡುವ ಜಾಣರಲ್ಲ.

12 ಅನಿಸಿಕೆಗಳು:

Anonymous ಅಂತಾರೆ...

Applaud dudes!

What a confidence.... Its thought provoking sharp write up. Keep it up

deva

Anonymous ಅಂತಾರೆ...

ಬಹಳ ಕಡೆಗಳಲ್ಲಿ ಈ ಮಾತುಗಳನ್ನು ಕೇಳಿದ್ದೇನೆ? "ಹಿ೦ದಿಯು ಉತ್ತರದ ಯಾವರಾಜ್ಯದ ಭಾಷೆಯೂ ಅಲ್ಲಾ, ಪಾಪ ಉತ್ತರದ ಹಲವು ಪ್ರದೇಶಗಳಲ್ಲಿ ಜನರಿಗೆ ಹಿ೦ದಿಯೂ ಸಹ ಓದಲು ಬರೆಯಲು ಬರುವುದಿಲ್ಲ.. ಇವರಿಗೆಲ್ಲ ನೀವು ಇ೦ಗ್ಲೀಷ್ ಕಲಿಯಲು ಹೇಳುತ್ತೀರಲ್ಲ?"

ಅ೦ದರೆ ಈ ಮಹಾನುಭಾವರು ಹೇಳುವುದೇನೆ೦ದರೆ, ಹಿ೦ದಿಯನ್ನು ಹೇಗೆ ಉತ್ತರದ ಭಾಷೆಗಳ ಮೇಲೆ ಹೇರಲಾಗುತ್ತಿದೆಯೋ ಹಾಗೆಯೇ ನಿಮ್ಮ ಮೇಲೆಯೂ! ಈ ಹಿ೦ದಿಯೆ೦ಬ ಪೆಣ೦ಭೂತದ ಕಾಲೆರಗಿದವನೇ ರಾಷ್ಟ್ರಪೇಮಿ.

ಹಿ೦ದಿಯನ್ನು ಕನ್ನಡದ ಜನರು ಎಷ್ಟು ಹೆಚ್ಚು ಒಪ್ಪುತ್ತಾರೋ ಅಷ್ಟೇ ನಮ್ಮ ಅವನತಿ ನಮ್ಮನ್ನು ಅಟ್ಟಿಸಿಕೊ೦ಡು ಬರುತ್ತದೆ. ಒ೦ದು ದೊಡ್ಡ ಜಾಗೃತಿ ಆಗದಿದ್ದರೆ, ಬೆ೦ಗಳೂರು = ಮು೦ಬೈ ಆಗಬೇಕಾಗುತ್ತದೆ.

ಉತ್ತರದ ಕೆಲವರು ಹೇಳುವುದು ಹೀಗೆ: "ಭಾರತದಲ್ಲಿ ಒ೦ದು ನಾಡಿನ ಪ್ರಗತಿಯ ಉದಾಹರಣೆಯೇ ಮು೦ಬೈಯ೦ತೆ?" ನಮ್ಮ ಜನರು ಉದ್ಯಮಶೀಲರಾಗದಿದ್ದರೆ ಬೆ೦ಗಳೂರನ್ನು ಬ೦ಗ್ಲೋರ್ ಮಾಡಿ ಇದನ್ನು ಇನ್ನೊ೦ದು ಮು೦ಬೈ ಮಾಡಿಕೊ೦ಡು ಹಿ೦ದಿಯವರು ಬ೦ದು ಇಲ್ಲೇ ನೆಲೆಸುತ್ತಾರೆ. ಕನ್ನಡತನವು ಇಲ್ಲಿ೦ದ ಮಾಯವಾಗುತ್ತದೆ.

Anonymous ಅಂತಾರೆ...

ಹಿಂದಿ ರಾಷ್ಟ್ರಭಾಷೆಯಲ್ಲ..
ಇಂಗ್ಲೀಶ್ ರಾಷ್ಟ್ರಭಾಷೆಯಲ್ಲ..


ಯಾವುದೂ ರಾಷ್ಟ್ರಭಾಷೆಯಲ್ಲ..

ಆದರೆ ಆಡಳಿತ ಮಾಡಲಿಕ್ಕೆ ಒಂದು ಭಾಷೆ ಬೇಕಲ್ಲ.. ಆ ಆಡಳಿತ ಭಾಷೆ ಹಿಂದಿಯಾಗಿದೆ..

ಇನ್ನು ಆಡಳಿತಭಾಷೆಯಾದ ಮೇಲೆ ಅದು ಎಲ್ಲರಿಗು ತಿಳಿದಿರಬೇಕು ಅನ್ನುವುದು ಕಾಮಾನ್ ಸೆನ್ಸ್.. ಇಲ್ಲದೇ ಇದ್ದರೆ ಅದನ್ನು ಆಡಳಿತ ಭಾಷೆ ಮಾಡಿ ಏನು ಪ್ರಯೋಜನ!


ಒಂದು ದೇಶ ಅಂದ ಮೇಲೆ ಒಂದು ಆಡಳಿತಭಾಷೆ ಬೇಕಲ್ಲವೇ.. ಇರುವ ೨೬ಭಾಷೆಯಲ್ಲೂ ಆಡಳಿತ ಮಾಡಲು ಹೇಗೆ ಸಾಧ್ಯ?

ಏನ್‌ಗುರು ಅಲ್ಲಿ ಬರುವುದು ಲಾಜಿಕ್ ಎಂದು ತೋರಿದರೂ ಇಮ್‌ಪ್ರಾಕ್ಟಿಕೆಬಲ್ ಎಂದು ಅನ್ನಿಸುವುದು.

Anonymous ಅಂತಾರೆ...

ಅನಾನಿಮಸ್ ಅವರೆ, ಇವತ್ತು ಆಡಳಿತ ಯಾವ ಭಾಷೇಲಿ ನಡೀತಿದೆ? ಇಂಗ್ಲೀಷಲ್ಲಿ ತಾನೆ? ಹೇಳ್ಕೊಳ್ದೇ ಹೋದ್ರೂ ಅದೇ ರಾಷ್ಟ್ರಭಾಷೆ! ಸುಮ್ಮನೆ ಇಂಗ್ಲೀಷ್ನೇ ಮುಂದುವರೆಸಿಕೊಂಡು ಹೋಗಿ ಹಿಂದೀಗೆ ಸಲ್ಲದ ಸ್ಥಾನ ಕೊಟ್ಟಿರೋದ್ನ ಕಿತ್ತುಹಾಕಬೇಕು.

ಎಷ್ಟು ದಿನ ಅಂತ ತಾನೆ ಇಂಗ್ಲೇಂಡು ನಮ್ಮನ್ನ ಆಳಿತ್ತು ಅನ್ನೋ ಕಾರಣವೊಂದೇ ಭಾರತವನ್ನ ಒಗ್ಗೂಡಿಸಿ ಇಟ್ಟಾತು? ನಾವೆಲ್ಲ ಒಂದೇ ಅಂತ ತೋರಿಸಿಕೊಳ್ಳಕ್ಕೆ ನಾವೆಲ್ಲ ಹಿಂದೂಗಳು ಅಂದ್ರೆ ಸಾಲ್ದೆ? ಧರ್ಮವೇ ನಮ್ಮನ್ನ ಒಗ್ಗೂಡಿಸೋದು ಅಂತ ಎದೆತಟ್ಟಿ ಹೇಳಕ್ಕೇನು ರೋಗ ಭಾರತೀಯರಿಗೆ?

Anonymous ಅಂತಾರೆ...

Hi anonymous,

You can't sacrifice logic for the sake of being practicle.
An analogy -- Logically terrorism can't be eliminated in 2 years from now, so do you endorse dying practically?

if you are unreasonally dumb read this

http://en.wikipedia.org/wiki/Anti-Hindi_agitations

A sample from the page --- "If we had to accept the principle of numerical superiority while selecting our national bird, the choice would have fallen not on the peacock but on the common crow"

Anonymous ಅಂತಾರೆ...

ಸನ್ಮಾನ್ಯ ಗುಂಡ..


ಹಿಂದಿಯನ್ನು ರಾಷ್ಟ್ರಭಾಷೆ ಮಾಡಲಿ ಎಂದು ಹೇಳಿಲ್ಲ.. ಸರಿಯಾಗಿ ಓದಿ.

ಆದರೆ ಆಡಳಿತ ಭಾಷೆಯಾಗಿ ನಮಗೆ ಹಿಂದಿ ಬೇಡ ಅಂದರೆ ಹೇಗೆ?

ಬರೀ ಇಂಗ್ಲೀಶಲ್ಲೇ ಆಡಳಿತ ನಡೆಸ್ತೀವಿ ಅಂದರೆ ಯಾವ ಅಡ್ಡಿಯೂ ಇಲ್ಲ.............


ಏನ್ಗುರು ಹೇಳ್ತಾ ಇರೋದು ಹಿಂದಿ ಬಿಟ್ಟು ಬರೀ ಇಂಗ್ಲೀಶಲ್ಲಿ ಆಡಳಿತ ನಡೆಯಲಿ ಎಂದು ಅಲ್ಲ ಅನ್ನಿಸ್ತದೆ...


ಇನ್ನು ಆ ಕವಲಿಯ ಬರಹ ಚನ್ನಾಗಿಲ್ಲ.. ವಿಷಯಗಳನ್ನು ಸರಿಯಾಗಿ ಹೇಳಿಲ್ಲ............

Anonymous ಅಂತಾರೆ...

ಯಾರಿದು ಕವಲಿ ಬರೆಯಲು ಏನೂ ವಿಶಯ ಸಿಗಲಿಲ್ಲ ಎಂದು ಏನೋ ಒಂದು ಬರೆದ ಹಾಗಿದೆ. ಸುಮ್ಮನೆ ಹಾಗೆ ಮಾಡಿ ಹೀಗೆ ಮಾಡಿ ನಿಮ್ಮ ಭಾಶೆಯನ್ನು ಬದಲಾಯಿಸಿ ನಂತರ ಅದನ್ನು ಒಪ್ಪಿಕೊಳ್ಳೋಣ ಎಂದು ಮಾತನಾಡುವ ಬದಲು ಆಯಾ ರಾಜ್ಯಗಳ ಭಾಶೆಗಳನ್ನೇ ರಾಷ್ಟ್ರ ಭಾಷೆಯನ್ನಾಗಿ ಮಾಡಿ ಇಂಗ್ಲೀಶನ್ನು ಆಡಳಿತ ಭಾಶೆಯನ್ನಾಗಿ ಮಾಡುವುದೇ ಒಳ್ಳೆಯದು. ನಿಮ್ಮ ಈ ಲೇಖನವನ್ನು ವಿಜಯ ಕರ್ನಾಟಕಕ್ಕೆ ಅವರ ಲೇಖನದ ಪ್ರತಿಕ್ರಿಯೆಯಾಗಿ ಕಳುಹಿಸಿ ಏನ್ ಗುರು.

Anonymous ಅಂತಾರೆ...

ಇಲ್ಲಿ ಅನಾಗ್ತಿದೆ ಅಂದ್ರೆ "ಎಲ್ಲಿ ಯಾರು ಏನು ಹೇ(ಕೇ)ಳಿದ್ರೋ , ಏನಂತ ಬರೆದರೋ, ಅಲ್ಲಿ ಏನಿದೆ ಅದು ಯಾಕಿದೆ ಅಂತ ಯೋಚನೆ ಮಾಡೋರೆ ಹೊರತು....... ಕರ್ನಾಟಕದಲ್ಲಿ ಆಡಳಿತ ಬಾಷೆ ಸಂಪೂರ್ಣವಾಗಿ ಇದೆಯಾ..... ಅಂತ ಯೋಚಿಸಿ ನೋಡಿ......ಇಲ್ಲ ಅಂದ್ರೆ "ಆಡಳಿತಭಾಷೆ ಕನ್ನಡ ಆಗೋಕೆ ಎನ್ ಮಾಡಬೇಕು ಅಂತ ಎಲ್ಲರು ಸಭೆಸೇರಿ, ಚರ್ಚೆ ಮಾಡಿ, ಯಾವತರಹ ಹೋರಾಟ ಮಾಡಬಹುದು ಅಂತ ಪರಸ್ಪರ ವಿಚಾರ ವಿನಿಮಯಮಾಡಿ. ನಮ್ಮ ಕನ್ನಡ ತಾಣವನ್ನು ಜನರಲ್ಲಿ ಉಳಿಸಲು ಮತ್ತು ನಮ್ಮ ಕರ್ನಾಟಕದ ಭವ್ಯತೆಯನ್ನು ಪರಿಚಯಿಸುವ ಕೆಲಸ ಮಾಡಿ ಆಗಲೇ ಈ ಅಂತರ್ಜಾಲ (ಬನವಾಸಿ ಬಳಗ)ಕ್ಕೆ ಒಂದು ಕೀರ್ತಿ ಕನ್ನಡಿಗರಾಗಿದ್ದಕ್ಕೆ ಸಾರ್ಥಕತೆ ಸಿಗೋದು.


ಒಮ್ಮೆ ಈ ಬ್ಲಾಗು ಡಾಣಕ್ಕೆ ಬೇಟಿ ಕೊಡಿ....
http://karnatakapravasi.kannadavedike.net/


ನನ್ನ ಮಾತಿನಲ್ಲಿ ತಪ್ಪಿದ್ದರೆ ಕ್ಷಮಿಸಿ.

Anonymous ಅಂತಾರೆ...

ಇಂಗ್ಲಿಶ್ ಭಾರತೀಯ ಭಾಷೆ ಅಲ್ಲ. ಅದು ಅನುಕೂಲಕ್ಕೊಬ್ಬ ಗಂಡ ಇದ್ದಂತೆ. ಅದನ್ನು ಆಡಳಿತ ಭಾಷೆಯಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಬಹುದು. ಆದರೆ ಭಾರತೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಹಿಂದಿ, ಪಂಜಾಬಿ, ಮರಾಠಿ ಇವೆಲ್ಲ ಸಹೋದರರಿದ್ದಂತೆ. ಮಲತಾಯಿಧೋರಣೆ ಸಲ್ಲದು.

ನಾವೇಕೆ ಹಿಂದಿ ನ ಆಡಳಿತ ಭಾಷೆಯಾಗಿ ಸ್ವೀಕರಿಸಬೇಕು? ಹಾಗೆ ಕನ್ನಡ ನ ಆಡಳಿತ ಭಾಷೆ ಮಾಡಿ ಅಂದ್ರೆ ಬೇರೆಯವರು ಸುಮ್ಮನೆ ಇರ್ತಾರ?

ವಿ.ರಾ.ಹೆ. ಅಂತಾರೆ...

ದಯವಿಟ್ಟು ಈ ಬರಹವನ್ನು ಶ್ರೀ ಕದಲಿಯವರಿಗೆ ತಲುಪಿಸುವ ವ್ಯವಸ್ಥೆ ಮಾಡಿ, ಚರ್ಚೆಗೆ ಕರೆದು ಅವರ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಕೆಲಸವಾದರೆ ಒಳ್ಳೆಯದು.

ತಿಳಿಗಣ್ಣ ಅಂತಾರೆ...

ಹೌದು

ವಿಕಾಸ ಹೆಗೆಡಯವರು ಹೇಳಿದಂತೆ, ಈ ಬರಹವನ್ನು ವಿಜಯಕರ್ನಾಟಕಕ್ಕೆ ಕಳಿಸುವುದು ಒಳ್ಳೆಯದು.

ಕವಲಿಯವರಿಗೆ ಅವರ ಅನಿಸಿಕೆಯ ಸರಿತಪ್ಪುಗಳು ತಿಳಿಯುತ್ತದೆ.

ನನ್ನಿ.

Anonymous ಅಂತಾರೆ...

ಯಾಕೆ ಈ ಲೇಖನವನ್ನು ವಿ.ಕಕ್ಕೆ ಕಳುಹಿಸಬಾರದು ಗುರು,ಕೊನೆಯ ಪಕ್ಷ ವಾಚಕರ ವಿಜಯಕ್ಕೆ ಕಳುಹಿಸಬಹುದಲ್ಲವೇ...? ನಮ್ಮ ದೇಶದಲ್ಲಿ ಜನ internetಗಿ೦ತಲೂ ಪತ್ರಿಕೆ ಜಾಸ್ತಿ ನೋಡುತ್ತಾರೆ,ಓದುತ್ತಾರೆ.ಭಾಷೆಯ ಬಗ್ಗೆ ಕೇವಲ ಅ೦ತರ್ಜಾಲಿಗರು ಮಾತ್ರವಲ್ಲ,ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಲ್ಲವೇ..? @ annonymus ಇವತ್ತು ಭಾರತದಲ್ಲಿ ೨೩ ಆಡಳಿತ ಭಾಷೇಗಳೇ ಇರುವುದು

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails