ಅವರೆ ಬೆಳೆ ಮೇಳ ಒಂದು ಉದ್ಯಮವಾಗಬೇಕು ಗುರು !

ಸಂಕ್ರಾಂತಿ ಸಮಯದಲ್ಲಿ ಬಸವನಗುಡಿಯ ಸಜ್ಜನ ರಾವ್ ವೃತ್ತದ ಬಳಿ ಹತ್ತು ದಿನಗಳ ಕಾಲ ನಡೆದ ವಾರ್ಷಿಕ ಅವರೆ ಮೇಳಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ ಗುರು. ಅವರೆ ಕಾಳೊಂದರಿಂದಲೇ ಮಾಡಿದ 30ಕ್ಕೂ ಹೆಚ್ಚು ಬಗೆಯ ತಿಂಡಿ-ತಿನಿಸುಗಳ ರುಚಿಯನ್ನು ಜನರು ಮುಗಿಬಿದ್ದು ಸವಿದರು. ಗ್ರಾಹಕರಿಗೂ ಖುಷಿ ಕೊಡೊ, ರೈತರಿಗೂ ಲಾಭ ಮಾಡ್ಕೊಡೋ ಈ ಮೇಳವನ್ನು ಪ್ರತಿ ವರ್ಷ ಯಶಸ್ವಿಯಾಗಿ ಒಂದು ಉದ್ಯಮದಂತೆ ನಡೆಸುಕೊಂಡು ಬರುತ್ತಿರುವ ಕನ್ನಡತಿ, ಕೆ.ಎಸ್. ಗೀತಾ ಶಿವಕುಮಾರ್ ಅವರ ಪ್ರಯತ್ನ, ಕನ್ನಡಿಗರಿಗೆ ಉದ್ಯಮಶೀಲರಾಗಲು ಪ್ರೇರಣೆ ನೀಡುವಂತಿದೆ ಗುರು !

ಇಷ್ಟೇ ಸಾಕಾ ಗುರು ?
ಕನ್ನಡ ನಾಡಲ್ಲಿ ಬೆಳೆಯೋ, ಅದರಲ್ಲೂ ಮಾಗಡಿ ಭಾಗದಲ್ಲಿ ಬೆಳೆಯೋ ಅವರೆ ಕಾಳಿನ ರುಚಿಗೆ ಸಾಟಿಯಿಲ್ಲ. ಇಂತಹ ಅವರೆ ಕಾಳಿಂದ ಹುಳಿ, ಉಪ್ಪಿಟ್ಟು, ನಿಪ್ಪಟ್ಟು, ಒಬ್ಬಟ್ಟು ಅಂತಾ ಒಂದು ಮೂರೋ ನಾಲ್ಕೋ ಪದಾರ್ಧ ಮಾಡ್ಕೊಂಡು ಚಿಕ್ಕ ಅಂಗಡಿಲಿ ಮಾರಾಟ ಮಾಡ್ಕೊಂಡು, ಅಷ್ಟರಲ್ಲೇ ತೃಪ್ತಿ ಪಟ್ಕೊಂಡು ಇರದೇ, ಈ ಮೇಳದ ರೂಪದಲ್ಲಿ ಅವರೆಕಾಯಿಯ ಹೊಸ ಹೊಸ ರುಚಿಯನ್ನು ಜನಪ್ರಿಯಗೊಳಿಸುವತ್ತ, ಬೆಳೆ ಬೆಳೆದ ರೈತನಿಗೂ ಲಾಭ ಕಲ್ಪಿಸುವತ್ತ ಆಯೋಜಕರು ಮಾಡಿರೋ ಕೆಲಸ ಪ್ರಶಂಸೆಗೆ ಅರ್ಹವಾದದ್ದು. ಆದ್ರೆ ಇಷ್ಟೇ ಸಾಕಾ ಗುರು ?

ಈ ಮೇಳ ಇನ್ನೊಂದು ಹೆಜ್ಜೆ ಮೇಲ್ ಹೋಗಬೇಕು
ಈ ಮೇಳ ಬರೀ ಕೆಲವು ತಿಂಡಿ ತಿನಿಸುಗಳ ಪ್ರದರ್ಶನ, ಮಾರಾಟಕ್ಕೆ ಸೀಮಿತವಾಗದೇ, ಅವರೆಬೆಳೆಯ ಹಲವು ಉತ್ಪನ್ನಗಳ ಕುರಿತ ಮಾಹಿತಿ, ದೇಶ-ವಿದೇಶಗಳಲ್ಲಿ ಅವುಗಳಿಗಿರುವ ಬೇಡಿಕೆ, ಬೆಳೆಯಲು ಇರುವ ಅವಕಾಶಗಳು, ಮಾರುಕಟ್ಟೆ ಕಟ್ಟಿಕೊಳ್ಳಲು ಆಗಬೇಕಾದ ಕೆಲಸಗಳು, ಇರುವ ಸವಾಲುಗಳು ಹೀಗೆ ಇದನ್ನೊಂದು ಉದ್ಯಮದಂತೆ ಬೆಳೆಸುವ, ಆ ಮೂಲಕ ಹೆಚ್ಚು ಹೆಚ್ಚು ಲಾಭ ಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ಚರ್ಚಿಸುವ, ರೈತರಿಗೆ ಮಾರ್ಗದರ್ಶನ ನೀಡುವ ವೇದಿಕೆಯಾಗಬೇಕು ಗುರು. ಈ ಮಾತು ವರ್ಷಕ್ಕೊಮ್ಮೆ ನಡೆಯೋ ಕಳ್ಳೆಕಾಯ್ ಪರಿಷೆಗೂ ಅನ್ವಯಿಸುತ್ತೆ. ನಮ್ಮ ನಾಡಿನ ಮಣ್ಣಲ್ಲಿ ಅದ್ಭುತವಾಗಿ ಬೆಳೆಯೋ ಈ ಬೆಳೆಗಳಿಂದ ಉಪ್ಪಿನಕಾಯಿ, ಚಟ್ನಿ, ಸಾಸ್, ಕಾರದ ಕಡ್ಡಿ, ಚಿಪ್ಸು, ರೆಡಿ ಟು ಈಟ್ ಸಾರಿನ ಪುಡಿ... ಹೀಗೆ, ಜಗತ್ತಿನ ಜನರು ಮೆಚ್ಚಿ ಇಷ್ಟಪಟ್ಟು ಬಳಸೋ ಉತ್ಪನ್ನಗಳನ್ನ ಮಾಡೋವಂತ ಉದ್ಯಮಗಳನ್ನ ಕನ್ನಡಿಗರು ಕಟ್ಟಬೇಕು. ಈ ಕೆಲಸ ನಾವು ಮಾಡದೇ ಹೋದ್ರೆ, ಹೊರಗಿಂದ ಬಂದೋನು ಯಾರೋ ಮಾಡಿ ಲಾಭ ಮಾಡ್ಕೊತಾನೆ, ನಾವು ಮಾತ್ರ ವರ್ಷಕ್ಕೊಮ್ಮೆ ಬಂದು ಪರಿಷೆ, ಮೇಳ ಅಂತ ಮಾಡ್ಕೊಂಡು ಅಲ್ಲಿ ಮಾರಾಟದಿಂದ ಬರೋ ಚಿಲ್ಲರೆ ಕಾಸು ಎಣುಸ್ಕೊಂಡೇ ಇರಬೇಕಾಗುತ್ತೆ. ಏನಂತೀಯಾ ಗುರು?

‘ಹಿಂದೀ ರಾಷ್ಟ್ರಭಾಷೆ ಅಲ್ಲಾ’ ಅಂದ ಕೋರ್ಟು!


ಅಂತೂ ಇಂತೂ ಅರವತ್ತು ಗಣರಾಜ್ಯೋತ್ಸವಗಳು ಮುಗುದು, 61ನೇದು ಕಾಲಿಟ್ಟಿರೋ ಸಂದರ್ಭದಲ್ಲಿ, ಗುಜರಾತಿನ ಉಚ್ಛ ನ್ಯಾಯಾಲಯವು ಭಾರತೀಯರಿಗೆಲ್ಲಾ ಉಡುಗೊರೆ ಕೊಟ್ಟಂಗೆ, ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ತೀರ್ಪು ನೀಡಿ ನಿಜಾನ ಎತ್ತಿ ಹಿಡಿದಿದೆ.

ಮುಂಬಾಗಿಲಲ್ಲಿ ಆಗ್ಸಕ್ಕೆ ಹಿಂಬಾಗ್ಲು ಎಂಟ್ರಿ!

ಭಾರತಕ್ಕೆ ಸ್ವತಂತ್ರ ಬಂದಾಗಿಂದ ಹಿಂದೀನಾ ರಾಷ್ಟ್ರಭಾಷೆ ಮಾಡೊ ಪ್ರಯತ್ನಗಳು ಮುಂಬಾಗಿಲಿನಿಂದ ನಡೆದಿದೆ. ಆದರೆ ಹಿಂದಿಯೇತರ ಪ್ರದೇಶಗಳ ವಿರೋಧ, ಹೋರಾಟ, ಬಲಿದಾನಗಳ ಫಲವಾಗಿ ಇವತ್ತಿನ ತನಕ ಇದಾಗಿಲ್ಲ. ಆದರೇನು? ಮುಂಬಾಗ್ಲಿಂದ ಆಗ್ದಿದ್ರೆ ಹಿಂಬಾಗ್ಲಿದೆಯೆಲ್ಲಾ? ಹಿಂದೀ ಒಂದಕ್ಕೇ ಭಾರತದ ರಾಷ್ಟ್ರಭಾಷೆಯ ಅಧಿಕೃತ ಪಟ್ಟ ಕೊಡಕ್ ಆಗ್ದಿದ್ರೂ ಮುಂದೊಂದು ದಿನಾ ಕೊಡ್ಸೋ ಹುನ್ನಾರದಿಂದ ಬೇಕಾದಷ್ಟು ವ್ಯವಸಾಯ ಅಂದಿನಿಂದ್ಲೇ ಶುರುವಾಯ್ತು. ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಅನ್ನೋ ಪಟ್ಟ ಕೊಡಲಾಯಿತು. ಇದುಕ್ ವಿರೋಧ ಬಂದಾಗ ಜೊತೇಲಿ ಇಂಗ್ಲೀಷಿಗೂ ಆ ಪಟ್ಟ 15 ವರ್ಷಕ್ಕೆ ಅಂತಾ ಕೊಡಲಾಯ್ತು. ಮುಂದೊಮ್ಮೆ ಹಿಂದೀ ಒಂದೇ ಭಾರತದ ಅಧಿಕೃತ ಆಡಳಿತ ಭಾಷೆ ಅನ್ನಕ್ ಹೋದಾಗ ತಮಿಳುನಾಡು ಹೊತ್ತುರಿದು ಕಡೆಗೂ ಇಂಗ್ಲಿಷನ್ನೂ ಉಳಿಸಿಕೊಳ್ಳಲಾಯಿತು. ಆದರೆ ಹಿಂದೀಗೆ ಪಟ್ಟಾಭಿಷೇಕ ಮಾಡೊದಕ್ಕೆ ಸಿದ್ಧತೆ ಮಾತ್ರಾ ಜೋರಾಗೆ ಮುಂದುವರೀತು. ಇವತ್ತಿಗೂ ನಡ್ದಿದೆ.

ಶಾಲೆಗಳಲ್ಲಿ ಇವತ್ತಿಗೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳುನ್ನ ಮಕ್ಕಳ ತಲೇಲಿ ತುಂಬ್ತಾ ಇರೋದನ್ನು ನೋಡಬಹುದು. ಅಧಿಕೃತವಾಗಿ ಎಲ್ಲೂ ಹಾಗೆ ಅಂದಿಲ್ಲಾ ಅಂದ್ರೂ ಇದು ನಿಂತಿರಲಿಲ್ಲ. ಶೆಡ್ಯೂಲಡ್ ಪಟ್ಟಿಯಲ್ಲಿರೋ 23 ಭಾಷೆಗಳೆಲ್ಲವೂ ಭಾರತದ ರಾಷ್ಟ್ರಭಾಷೆಗಳೇ ಅಂತ ತಿಳಿದೋರು ಅಂದಾಗ, ಹೌದು ಆ ಪಟ್ಟೀಲಿ ಹಿಂದೀನೂ ಇರೋದ್ರಿಂದ ಅದು ನಮ್ಮ ರಾಷ್ಟ್ರಭಾಷೆ ಅನ್ನಲಾಯ್ತು. ಒಟ್ನಲ್ಲಿ ಭಾರತದ ಎಲ್ಲಾ ಜನಗಳು ಹಿಂದೀ ಸಾಮ್ರಾಜ್ಯಶಾಹಿಯನ್ನು ಒಪ್ಪಿಕೊಳ್ಳೋ ಹಾಗೆ ಮಾಡೋ ಕೆಲಸ ಪರಿಣಾಮಕಾರಿಯಾಗೇ ನಡೀತು. ಭಾರತದ ಬೇರೆಬೇರೆ ಚಿತ್ರರಂಗಗಳನ್ನು ನುಂಗಿಹಾಕೋ ಹಾಗೆ ಹಿಂದೀ ಚಿತ್ರರಂಗಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡಿ ಮನರಂಜನೆಯ ಮೂಲಕ ಹಿಂದೀ ಪ್ರಚಾರ, ದೇಶಕ್ಕೊಂದು ಭಾಷೆ ಬೇಕು, ಸಂಪರ್ಕಕ್ಕೆ ಒಂದು ಭಾಷೆ ಬೇಕು, ಹೊರದೇಶದ ಇಂಗ್ಲಿಷ್ ಒಪ್ಪೋದಕ್ಕಿಂತ ಸ್ವದೇಶದ ಹಿಂದೀ ಒಪ್ಪಬೇಕು, ಹಿಂದೀ ರಾಷ್ಟ್ರಭಕ್ತಿಯ ಸಂಕೇತ, ಹಿಂದೀ ವಿರೋಧ ರಾಷ್ಟ್ರದ್ರೋಹ... ಬ್ಲಾ.. ಬ್ಲಾ.. ಬ್ಲಾ... ಅನ್ನೋ ನಾನಾ ಶಸ್ತ್ರಾಸ್ತ್ರಗಳನ್ನು ಬಳಸಲಾಯ್ತು. ಈ ಶಸ್ತ್ರಾಸ್ತ್ರಗಳಲ್ಲಿ ಬಲು ಮುಖ್ಯವಾದದ್ದು ಭಾರತದ ರಾಷ್ಟ್ರಭಾಷೆ ಹಿಂದೀ ಅನ್ನೋ ಸುಳ್ಳನ್ನು ಆರು ವರ್ಷದ ಆಡೋ ಮಕ್ಕಳಿಂದ ಅರವತ್ತಾರು ವರ್ಷದ ಅಲ್ಲಾಡೋ ಮುದುಕರ ತನಕ ಎಲ್ಲಾರಾ ತಲೇಲಿ ತುಂಬೋದು. ಆದ್ರೆ ಯಾರೊಬ್ರೂ ಭಾರತದ ಸಂವಿಧಾನದಲ್ಲಿ ಏನು ಬರೆದಿದೆ ಅನ್ನೋದನ್ನು ನೋಡೋ ಪ್ರಯತ್ನಾನೆ ಮಾಡಿಲ್ಲವೇನೋ ಅನ್ನೋ ಹಾಗೆ ಸುಮ್ಮನಿದ್ದುದ್ನ ನೋಡ್ತಿದೀವಿ. ಇಂಥಾ ಸನ್ನಿವೇಶದಲ್ಲಿ ಗುಜರಾತಿನ ಉಚ್ಛನ್ಯಾಯಾಲಯ ಇಂಥಾ ಹಸಿಸುಳ್ಳರ ಬಾಯಿಗೆ ಬೀಗ ಜಡಿಯೋ ಅಂಥಾ ತೀರ್ಪು ನೀಡಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ, ಅದುಕ್ಕೆ ಯಾವ ಕೋಡು ಇಲ್ಲಾ ಅಂತಾ ಅಂದಿದೆ.

ಹಸಿಸುಳ್ಳರ ಬಾಯಿಗೆ ಬೀಗ?

ತಮಾಷೆ ನೋಡಿ. ಗುಜರಾತೆಂಬ ಗುಜರಾತಿ ಮಾತಾಡೋ ಪ್ರದೇಶದ ಹೈಕೋರ್ಟಿನಲ್ಲಿ, ಯಾರೋ ಒಬ್ಬ ವ್ಯಕ್ತಿ ಹಿಂದೀನಾ ಭಾರತದಲ್ಲಿ ತಯಾರಾಗೋ ಎಲ್ಲಾ ಉತ್ಪನ್ನಗಳ ಮೇಲೆ ಅಚ್ಚು ಮಾಡೋಕೆ ಆದೇಶಾ ಹೊರಡುಸ್ಬೇಕು ಅಂತಾ ಕೇಸು ಹಾಕಿ, ತನ್ನ ಕೇಸಿನ ಸಮರ್ಥನೆಗಾಗಿ "ಹಿಂದೀ ಭಾರತದ ರಾಷ್ಟ್ರಭಾಷೆ, ಭಾರತದ ಹೆಚ್ಚು ಜನಕ್ಕೆ ಹಿಂದಿ ತಿಳಿಯುತ್ತೆ" ಅಂತಾ ವಾದಾ ಮಾಡೋ ಅಷ್ಟರ ಮಟ್ಟಿಗೆ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಹಸಿಸುಳ್ಳನ್ನು ಜನಗಳ ತಲೇಲಿ ತುಂಬಿದೆ ಈ ವ್ಯವಸ್ಥೆ... ಅಂದ್ರೆ ಏನನ್ನಬೇಕು? ನಮ್ಮ ನಾಡಲ್ಲೂ ಹಿಂದೀವಾದಿಗಳು ಈ ಸುಳ್ಳನ್ನು ನಂಬೇ, ಹಿಂದೀ ಅನ್ನೋ ಮಾರಮ್ಮನ್ನ ತಲೆಮೇಲೆ ಹೊತ್ಕೊಂಡು - ಆ ಮಾರಮ್ಮನ ಮಕ್ಕಳ ಹಿತಾನ ಕಾಪಾಡಕ್ಕೆ ಕನ್ನಡಿಗರ ಬದುಕನ್ನು ಬಲಿ ಕೊಡಕ್ ಮುಂದಾಗಿರೋದು. ಇದುನ್ ನೋಡ್ದಾಗ ಹಿಂದೀನ ಕಲುತ್ರೆ ಭಾರತದಲ್ಲಿ ಹೆಚ್ಚೋದು ಸಾಮರಸ್ಯ ಅಲ್ಲಾ, ’ಹೇಗೂ ನಿಮಗೆಲ್ಲ ಹಿಂದೀ ಬರುತ್ತಲ್ಲಾ... ಇನ್ಮುಂದೆ ಅದುನ್ನೇ ಬಳಸಿ, ಅದುನ್ನಾ ರಾಷ್ಟ್ರಭಾಷೆ ಅಂತಾ ಒಪ್ಕೊಳ್ಳಿ" ಅನ್ನೋ ಬಲವಂತ ಮಾಘಸ್ನಾನ... ಅಪ್ಪಿತಪ್ಪಿ ಹಾಗೇನಾದ್ರೂ ಹಿಂದೀ ರಾಷ್ಟ್ರಭಾಷೆ ಆಗೇಬುಟ್ರೆ, ಇಡೀ ಭಾರತ ಹಿಂದೀ ಭಾಷಿಕರ ವಸಾಹತು, ವಲಸೆಗೆ ಸ್ವರ್ಗ ಆಗೋಗುತ್ತೆ. ಮುಂದೆ ಹಿಂದೀಲಿ ಮಾತಾಡ್ದೆ ಇರೋದು, ಸೇವೆ ಕೊಡ್ದೆ ಇರೋದು ಶಿಕ್ಷಾರ್ಹ ಅಪರಾಧ ಅನ್ನೋ ದಿನ ಬಂದ್ರೂ ಬರಬೋದು. ಒಟ್ನಲ್ಲಿ ಇದರಿಂದ ಹಿಂದೀ ಭಾಷೆಯೋನು ಭಾರತದ ಮೊದಲ ದರ್ಜೆ ಪ್ರಜೆಯಾಗೋದೂ, ಹಿಂದಿಯೇತರನು ಎರಡನೇ ದರ್ಜೆಯ ಪ್ರಜೆಯಾಗೋದೂ ಖಂಡಿತ. ಇನ್ನಾದ್ರೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಪ್ರಚಾರ ನಿಲ್ಲಲಿ...

ಕೊನೆಹನಿ: ಇತ್ತೀಚಿಗೆ ಜನರಲ್ಲಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ಜಾಗೃತಿ ಆಗ್ತಿರೋದನ್ನು ಗಮನಿಸಿ ಹಿಂದೀವಾದಿ ಕನ್ನಡಿಗ ಮಹನೀಯರೊಬ್ಬರು, ‘ಹಿಂದೀ ಭಾರತದ ರಾಷ್ಟ್ರೀಯ ಭಾಷೆ’ ಅಂತಾ ಪಟ್ಟ ಕೊಡಕ್ ಮುಂದಾಗಿದ್ರು. ಹಿಂದೀ ರಾಷ್ಟ್ರಭಾಷೆ ಅಲ್ಲದಿದ್ದರೇನಂತೆ? ಈಗ ಅದುನ್ನ ರಾಷ್ಟ್ರಭಾಷೆ ಮಾಡಿ ಅನ್ನೋ ಪ್ರಭೃತಿಗಳು ಹಾಗೆ ಮಾಡೋದ್ರಿಂದ ಕನ್ನಡ ಕನ್ನಡಿಗರು ನಾಮಾವಶೇಷ ಆಗ್ತಾರೆ ಅನ್ನೋದ್ನ ಒಸಿ ಅರಿಯಬೇಕು. ಏನಂತೀ ಗುರು?

ಪಾ: ಸಾಮಾಜಿಕ ಸಂದೇಶ ಮತ್ತು ಡಬ್ಬಿಂಗ್


ಬೆಂಗಳೂರಲ್ಲಿ, ನಿನ್ನೆ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರು, ಮತ್ತವರ ಸಂಪುಟದ ಹಲವು ಸಹೋದ್ಯೋಗಿಗಳು, ಹಿಂದಿ ಚಿತ್ರ ನಟ ಶ್ರೀ ಅಮಿತಾಭ್ ಬಚ್ಚನ್ ಅವರೊಡನೆ ಪಾ ಅನ್ನೋ ಸಿನಿಮಾ ನೋಡಲು ಹೋಗಿದ್ರಂತೆ. ಈ ‘ಪಾ ಅನ್ನೋ ಚಿತ್ರ "ಪ್ರೊಜೇರಿಯಾ" ಅನ್ನೋ ವಿಚಿತ್ರ ಕಾಯಿಲೆ ಬಗ್ಗೆ ಮಾಹಿತಿ ನೀಡುವ ಚಿತ್ರವಾಗಿದ್ದು, ಈ ಖಾಯಿಲೆ ಬಗ್ಗೆ ತಿಳಿದುಕೊಳ್ಳೋ ಸಲುವಾಗಿಯಾದರೂ ನಾಡಿನ ಸಾಮಾನ್ಯ ಜನರು ಈ ಚಿತ್ರವನ್ನು ನೋಡಲೇಬೇಕು’ ಅಂತ ಯಡಿಯೂರಪ್ಪನವರು ಹೇಳಿರೋ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ ಗುರು.

ಜನಜಾಗೃತಿಗೆ ದಾರಿ ಯಾವುದಯ್ಯ?

ಈ ಚಲನಚಿತ್ರ, ಒಂದು ವಿಚಿತ್ರ ಖಾಯಿಲೆ ಬಗ್ಗೆ ತಿಳಿ ಹೇಳುವ ಸಾಮಾಜಿಕ ಸಂದೇಶ ಇರೋ ಸಿನೆಮಾ ಆಗಿದ್ದಲ್ಲಿ, ಆ ಸಂದೇಶ ಖಂಡಿತವಾಗ್ಯೂ ಕನ್ನಡ ನಾಡಿನ ಸಾಮಾನ್ಯ ಜನರಿಗೆ ತಲುಪಲೇಬೇಕು. ಆದ್ರೆ ಈಗಿರೋ ರೂಪದಲ್ಲೇ ಈ ಚಲನಚಿತ್ರಾನಾ ಕರ್ನಾಟಕದ ಒಂದೊಂದು ಮನೆಗೂ ಹೋಗಿ ತೋರ್ಸುದ್ರೂ ಕೂಡಾ ಅಂದುಕೊಂಡ ಅರಿವು ಮೂಡಿಸೋ ಕೆಲಸ ಆಗಲ್ಲ. ಯಾಕೆ ಅಂತೀರಾ? ಚಿತ್ರ, ಜನ ಸಾಮಾನ್ಯರಿಗೆ ಅರ್ಥ ಆಗೋ ಭಾಷೇಲಿದ್ರೆ ತಾನೇ ಅದು ಆಗೋದು? ಎಲ್ಲೋ ಅಲ್ಪ ಸ್ವಲ್ಪ ಜನರಿಗೆ ಬರೋ ಭಾಷೆಲಿದ್ರೆ, ಅದು ಜನಸಾಮಾನ್ಯರನ್ನೆಲ್ಲ ತಲುಪೋಕೆ ಸಾಧ್ಯಾನಾ? ಈ ಹಿಂದೀ ಸಿನೆಮಾ, ಇಲ್ಲವೇ ಸಾಮಾಜಿಕ ಸಂದೇಶ ಹೊತ್ತು ಬರೋ ಬೇರಾವುದೇ ಪರಭಾಷಾ ಸಿನಿಮಾ, ಅದು ಕನ್ನಡಕ್ಕೆ ಡಬ್ ಆಗಿ ಆಮೇಲೆ ಕನ್ನಡಿಗರ ಎದುರಿಗೆ ಬಂದ್ರೆ ತಾನೇ ಆ ಸಂದೇಶ ಅವರಿಗೆ ನಿಜಕ್ಕೂ ತಲುಪೋದು? ಎಲ್ಲ ಜನರು ಪಾ ಸಿನೆಮಾ ನೋಡಲಿ ಅನ್ನೋ ಮುಂಚೆ, ಅದನ್ನ ಕನ್ನಡಕ್ಕೆ ಡಬ್ ಮಾಡೋಣ ಅಂತ ಅಂದಿದ್ದಿದ್ರೆ ಮುಖ್ಯಮಂತ್ರಿಗಳ ಜನರಲ್ಲಿ ಜಾಗೃತಿ ತರೋ ಆಶಯ ಈಡೇರುತ್ತಾ ಇತ್ತೋ ಏನೋ ಗುರು.

ಕೊನೆಹನಿ
ಬೆಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಪಾ ಚಿತ್ರದ ಈ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಿದ್ದು ಸಮಾಜ ಕಲ್ಯಾಣ ಇಲಾಖೇನೋ, ಆರೋಗ್ಯ ಇಲಾಖೇನೋ ಅಂದ್ಕೊಂಡ್ರೇನೋ? ಊಹೂಂ... ಈ ವ್ಯವಸ್ಥೆ ಮಾಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂತೆ!

ಇದನ್ನೂ ಓದಿ:
ಡಬ್ಬಿಂಗ್ ಬೇಡ ಅನ್ನೋ ಕಾಲ ಇದಲ್ಲ !
ಡಬ್ಬಿಂಗ್ ಕನ್ನಡ ಚಿತ್ರರಂಗಾನ ಬೆಳಸುತ್ತೆ!

ಮುಂಬೈಲಿ ಮರಾಠಿ ಬರೋರಿಗೆ ಮಾತ್ರಾ ಟ್ಯಾಕ್ಸಿ ಪರ್ಮಿಟ್ ಅಂದ್ರೆ ತಪ್ಪಾ?


ಇನ್ ಮೇಲೆ 15 ವರ್ಷದಿಂದ ಮಹಾರಾಷ್ಟ್ರದಲ್ಲಿದ್ದು, ಮರಾಠಿ ಓದೋಕೆ, ಮಾತಾಡೋಕೆ, ಬರೆಯೋಕೆ ಬಂದ್ರೆ ಮಾತ್ರ ಮುಂಬೈ ನಗರದಲ್ಲಿ ಟ್ಯಾಕ್ಸಿ ಓಡಿಸೋ ಪರ್ಮಿಟ್ ಕೊಡ್ತಿವಿ ಅಂತ ಮಹಾರಾಷ್ಟ್ರ ಸಂಪುಟ ಸಭೇಲಿ ತೀರ್ಮಾನ ಆದ ಸುದ್ದಿ ನಿನ್ನೆ ಮಾಧ್ಯಮಗಳಲ್ಲಿ ಬಂತು. ಅದಾಗಿದ್ದೆ ತಡ ವಲಸಿಗರ ಕಾರ್ಖಾನೆ ಥರಾ ಇರೋ ಬಿಹಾರ್, ಯು.ಪಿ ರಾಜ್ಯಗಳ ನಾಯಕರುಗಳು, ದಿಲ್ಲಿಲಿ ಕೂತಿರೋ ಇಂಗ್ಲಿಷ್ ಮಾಧ್ಯಮದವರು ಏನೋ ಅನಾಹುತಾನೇ ಆಗೋಯ್ತು ಅನ್ನೋ ಹಾಗೆ ಬಾಯ್ ಬಡ್ಕೊಂಡು ಆ ನಿರ್ಧಾರ ಬದಲಿಸುವಂತೆ ಒತ್ತಡಾ ಹೇರೋ ಕೆಲ್ಸ ಶುರು ಹಚ್ಕೊಂಡ್ರು. ಇವರ ಒತ್ತಡಕ್ಕೆ ಮಣಿದು ಈಗ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಮರಾಠಿ ಜೊತೆ ಹಿಂದಿ, ಗುಜರಾತಿನೂ ಸ್ಥಳೀಯ ಭಾಷೆಗಳು-ಅವು ಗೊತ್ತಿದ್ರೆ ಮಾತ್ರ ಟ್ಯಾಕ್ಸಿ ಪರ್ಮಿಟ್ ಕೊಡೋದು ಅಂತ ಮಹಾರಾಷ್ಟ್ರ- ಮರಾಠಿಗಳ ಬಗ್ಗೆ ತಮಗಿರೋ ನಿಯತ್ತು ಎಷ್ಟು ಪೊಳ್ಳು ಅನ್ನೋದನ್ನ ತೋರಸ್ಕೊಂಡಿದಾರೆ ಗುರು.

ಯಾವುದು ಸರಿಯಾದ ನಿರ್ಧಾರ?

ಯಾವುದೇ ಊರಿನ ವ್ಯವಸ್ಥೆ ಯಾರಿಗಾಗಿ ಇರಬೇಕು? ಮುಂಬೈಗೆ ಪ್ರವಾಸಿ ಅಂತಾ ಬರೋರು ಎಷ್ಟಿರ್ತಾರೆ? ಮರಾಠಿಗರು ಎಷ್ಟು ಮಂದಿ ಇರ್ತಾರೆ. ರಾಜಧಾನಿಗೆ ಮಹಾರಾಷ್ಟ್ರದ ಮೂಲೆ ಮೂಲೆಯಿಂದ ಬರುವ ಜನ ಎಲ್ಲಾ ಮರಾಠಿ ಜನವೇ ತಾನೇ? ಹಾಗಿದ್ರೆ ಆ ಊರಲ್ಲಿ ಟ್ಯಾಕ್ಸಿಯಂತಹ ಸಾರ್ವಜನಿಕ ಸೇವೆಗೆ ಮೀಸಲಿರೋ ಉದ್ಯಮದಲ್ಲಿ ಕೆಲಸ ಮಾಡೋಕೆ ಅಲ್ಲಿಯ ಸ್ಥಳೀಯ ಭಾಷೆ ಓದೋಕೆ, ಬರೆಯೋಕೆ ಬಂದ್ರೆ ತಾನೇ ಆಗೋದು? ಒಬ್ಬ ತಾತರಾಯನ ಕಾಲದಿಂದ ಮುಂಬೈನಲ್ಲಿ ನೆಲೆಸಿರೋ ಮರಾಠಿಗ, ಟ್ಯಾಕ್ಸಿ ಹತ್ತಿ ಎಲ್ಲಿಗೋ ಹೋಗಲು ಮರಾಠಿಲಿ ದಾರಿ ಕೇಳಿದ್ರೆ, ಹೇಳಿದ್ರೆ, ಅವನಿಗೆ ಉತ್ರ ಸಿಗಲ್ಲ ಅನ್ನೋ ವಾತಾವರಣ ಸೃಷ್ಟಿಯಾದ್ರೆ ಅದರಿಂದ ಆ ಸ್ಥಳೀಯನಿಗೆ ಅನಾನುಕೂಲ ಆಗಲ್ವಾ ಗುರು? ನನ್ನೂರಲ್ಲಿ ನನ್ನ ಭಾಷೆ ಮಾತಾಡಿ ದಕ್ಕಿಸಿಕೊಳ್ಳಲು ಆಗಲ್ಲ ಅಂದ್ರೆ ಅದು ಸಂವಿಧಾನ ನನಗೆ ಕೊಟ್ಟಿರೋ ಮೂಲಭೂತ ಹಕ್ಕುಗಳ ಉಲ್ಲಂಘನೆ ಅಂತ ಅನ್ಸಲ್ವಾ ಗುರು ? ಅಷ್ಟಕ್ಕೂ ಮಹಾರಾಷ್ಟ್ರದ ಸರ್ಕಾರ ಬೇರಾವುದೇ ಭಾಷೆ ಮಾತಾಡಬಾರದು ಅಂತ ಹೇಳಿಲ್ಲ. ಮರಾಠಿ ಓದೋಕೆ, ಬರೆಯೋಕೆ, ಮಾತಾಡೋಕೆ ಬರಬೇಕು ಅಂತಷ್ಟೇ ಹೇಳಿರೋದು. ಹಾಗಿದ್ದಾಗ ಅದು ಹೇಗೆ ದೇಶದ್ರೋಹಿ ಕೆಲ್ಸ ಅಂತ ಅನ್ಸಕೊಳ್ಳುತ್ತೆ ಗುರು?

ದೇಶ ಒಡೆಯೋ ನಿಲುವು ಯಾರದ್ದು?

ಇನ್ನೂ ಈ ವಿಷ್ಯದಲ್ಲಿ ಇಂಗ್ಲಿಷ್ ಮಾಧ್ಯಮಗಳ ನಿಲುವು ನಿಜಕ್ಕೂ ದೇಶ ಒಡೆಯೋವಂತದ್ದು. ಮಹಾರಾಷ್ಟ್ರ ಸರ್ಕಾರ ಮರಾಠಿಗರಿಂದ ಆಯ್ಕೆ ಆಗಿರೋದಾದ್ರೂ ಯಾಕೆ? ಮರಾಠಿಗರ ಭಾಷೆ, ಸಂಸ್ಕೃತಿ, ಕಲಿಕೆ, ಉದ್ಯೋಗಗಳ ಹಕ್ಕು ಉಳಿಸಿ, ಬೆಳೆಸೋಕೆ ತಾನೇ? ಆ ಸರ್ಕಾರ ಇರೋದು ಯು.ಪಿ, ಬಿಹಾರದ ವಲಸಿಗರಿಗೆ ಕೆಲಸ ಸೃಷ್ಟಿಸಿ ಕೊಡೋಕಾ? ಸರಿಯಾದ ವ್ಯವಸ್ಥೆಯಲ್ಲಿ ಆ ಕೆಲಸ ಕ್ರಮವಾಗಿ ಯು.ಪಿ, ಬಿಹಾರ್ ಸರ್ಕಾರಗಳು ಮಾಡಬೇಕಾದದ್ದು ತಾನೇ? ಒಂದು ರಾಜ್ಯ ಸರ್ಕಾರ ತನ್ನ ಜನರ ಅನುಕೂಲಕ್ಕಾಗಿ ತಗೊಳ್ಳೋ ನಿರ್ಧಾರವನ್ನ ದಿಲ್ಲಿಯ ಸ್ಟುಡಿಯೋಗಳಲ್ಲಿ ಕೂತು ಇದೆಲ್ಲಾ ತಪ್ಪು ಅನ್ನೋ ತೀರ್ಮಾನ ಕೊಡೊ ಅಧಿಕಾರ ಇವರಿಗೆ ಯಾರ್ ಕೊಟ್ಟಿದ್ದು? ವಿವಿಧತೆಯಲ್ಲಿ ಏಕತೆ ಅನ್ನೋ ಸಂವಿಧಾನದ ಮೂಲ ಆಶಯವನ್ನೇ ಮರೆತು, ಸಹಜವಾಗಿ ಎಲ್ಲೆಲ್ಲಿ ಯಾವ ಭಾಷೆಯ ಸಾರ್ವಭೌಮತ್ವ ಇರಬೇಕಿತ್ತೋ ಅದನ್ನು ವಿರೋಧಿಸಿ, ಎಲ್ಲೆಡೆ ಹಿಂದಿಯನ್ನು, ಹಿಂದಿ ಭಾಷಿಕರನ್ನು ತುಂಬೋ ಪ್ರಯತ್ನಗಳಿಗೆ ಇಂಬು ಕೊಡೊ ಇವರ ಕೆಲಸ ದೇಶದ ಒಗ್ಗಟ್ಟಿಗೆ ಸಕತ್ ಮಾರಕ ಆಲ್ವಾ? ನಿಜಕ್ಕೂ ದೇಶ ಒಡೆಯೋ ನಿಲುವು ಯಾರದ್ದು? ನೀನೆ ಹೇಳು ಗುರು.

ಗೂಗಲ್ ನ್ಯೂಸ್ ಅಲ್ಲಿ ಕನ್ನಡ ಯಾಕಿಲ್ಲ ?

ನೂರಾರು ಭಾಷೆಗಳಲ್ಲಿ ಮಿಂಚೆ (ಈಮೇಲ್), ಚಾಟ್, ಹುಡುಕಾಟ ಮುಂತಾದ ಸೌಲಭ್ಯ ಕಲ್ಪಿಸಿ ಜಗತ್ತಿನ ಕೋಟ್ಯಾಂತರ ಜನರಿಗೆ ಅವರವರ ಭಾಷೆಯನ್ನೇ ಬಳಸಿ ಅಂತರ್ಜಾಲದ ಲಾಭ ಸವಿಯಲು ಗೂಗಲ್ ಸಂಸ್ಥೆಯವರು ಈಗ ಜಗತ್ತಿನ ಸುದ್ದಿಗಳನ್ನೆಲ್ಲಾ ಓದುಗನೊಬ್ಬ ಅವನ ಭಾಷೆಯಲ್ಲೇ ಒಂದೆಡೆ ಪಡೆಯಲು ಸಾಧ್ಯವಾಗುವಂತೆ ಗೂಗಲ್ ನ್ಯೂಸ್ ಅನ್ನೋ ಪ್ರಾಡಕ್ಟ್ ಮಾಡಿದ್ದಾರೆ ಗುರು. ಈಗಾಗಲೇ ಭಾರತದ ಹಲವು ಭಾಷೆಗಳಲ್ಲಿ ಈ ಸೇವೆ ಲಭ್ಯವಾಗಿದ್ರೂ ಕನ್ನಡಕ್ಕಿನ್ನೂ ಈ ಅನುಕೂಲ ಸಿಕ್ಕಿಲ್ಲ ಗುರು ! ಇದಕ್ಕೆ ಕಾರಣಗಳೇನು ಮತ್ತು ಇದನ್ನ ಸರಿ ಮಾಡೋಕೆ ನಾವೇನ್ ಮಾಡಬೌದು ಅಂತ ನೋಡೊಣ ಬಾ ಗುರು.

ತಾಣಗಳಲ್ಲಿ ಯೂನಿಕೋಡ್ ಬಳಸಲ್ಲ !
ಯೂನಿಕೋಡ್ ಎಂಬುದು ಕಂಪ್ಯೂಟರ್ ಒಳಗೆ ಜಗತ್ತಿನ ನೂರಾರು ಲಿಪಿಗಳಲ್ಲಿ ಬರೆಯಲು ಉಪಯೋಗಿಸುವ ತಂತ್ರಾಂಶ. ಈ ತಂತ್ರಾಂಶ ಬಳಸಿ ಕನ್ನಡದಲ್ಲಿ ಬರದಿರೋದನ್ನ ಕಂಪ್ಯೂಟರ್ ಒಳಗೆ ಆರಾಮಾಗಿ ಓದೋಕೆ, ಹುಡುಕೋಕೆ ಸಾಧ್ಯವಾಗತ್ತೆ. ಆದರೆ ಇಂದು ಹೆಚ್ಚಿನ ಕನ್ನಡ ಪತ್ರಿಕೆಗಳ ಪೋರ್ಟಲ್ ಗಳಲ್ಲಿ ಯೂನಿಕೋಡ್ ಅಳವಡಿಕೆಯಾಗದ ಕಾರಣ, ಕನ್ನಡದಲ್ಲಿ ಸುದ್ಧಿ ವರದಿ ಮಾಡೋ ಹಲವಾರು ತಾಣಗಳಿದ್ರೂ, ಗೂಗಲ್ ನ್ಯೂಸ್ ಬಳಸಿ ಕನ್ನಡದಲ್ಲಿ ಸುದ್ಧಿ ಹುಡುಕಿದರೆ ಏನೂ ಸಿಗ್ತಿಲ್ಲ ಗುರು.

ಹುಡುಕೋಕೆ ಕನ್ನಡ ಬಳಸಲ್ಲ !
ಅಲ್ಲೊಂದು ಇಲ್ಲೊಂದು ಕನ್ನಡ ತಾಣಗಳಲ್ಲಿ ಯೂನಿಕೋಡ್ ಬಳಕೆಯಾಗ್ತಿದ್ರೂ ಅವು ಗೂಗಲ್ ನ್ಯೂಸ್ ಅಲ್ಲಿ ಕಾಣ್ತಿಲ್ಲ! ಇದಕ್ಕೆ ಕಾರಣ ಅಂತರ್ಜಾಲದಲ್ಲಿ ಸುದ್ಧಿ ಹುಡುಕೋವಾಗ ಕನ್ನಡ ಬಳಸದೇ ಇರೋದು. ಇತ್ತೀಚಿನ ಒಂದು ಮಾಹಿತಿಯ ಪ್ರಕಾರ ದಿನವೊಂದರಲ್ಲಿ ಗೂಗಲ್ ಮೂಲಕ ಆಗುವ ಬಿಲಿಯಗಟ್ಟಲೆ ಹುಡುಕಾಟಗಳಲ್ಲಿ (searches) ಕನ್ನಡ ಪದಗಳನ್ನ ಉಪಯೋಗ್ಸಿ ಮಾಡೋ ಹುಡುಕಾಟಗಳು ಸಾವಿರಕ್ಕೂ ಕಡಿಮೆಯಂತೆ. ಲಕ್ಷಗಟ್ಟಲೆ ಕನ್ನಡಿಗರು ಅಂತರ್ಜಾಲದಲ್ಲಿ ಮಾಹಿತಿ ಹುಡುಕೋರಾಗಿದ್ರೂ ಒಂದು ದಿನಕ್ಕೆ ಒಂದು ಸಾವಿರ ಜನರೂ ಕನ್ನಡ ಬಳಸಿ ಮಾಹಿತಿ ಹುಡುಕುತ್ತಿಲ್ಲ ಅಂದ್ರೆ ಗೂಗಲ್ ಕಂಪನಿಯೋರು ತಮ್ಮ ನ್ಯೂಸ್ ತಾಣದಲ್ಲಿ ಕನ್ನಡದ ಆಯ್ಕೆನಾ ಅದ್ಯಾಕ್ ಕೊಟ್ಟಾರೂ ನೀನೇ ಹೇಳ್ ಗುರು.

ಏನ್ ಪರಿಹಾರ ?
ಇದನ್ನ ಬದಲಾಯಿಸೋದು ಅಂತರ್ಜಾಲದಲ್ಲಿರುವ ಕನ್ನಡಿಗರ ಕೈಲೇ ಇದೆ.
  • ಅಂತರ್ಜಾಲದಲ್ಲಿರುವ ಎಲ್ಲ ಕನ್ನಡ ವರದಿ ತಾಣಗಳಿಗೆ ಯುನಿಕೋಡ್ ಬಳಸುವಂತೆ ಮನವಿ ಮಾಡುವುದು.
  • ಕನ್ನಡ ಯುನಿಕೋಡಿನಲ್ಲಿ ಬರೋ ತಾಣಗಳನ್ನು ಓದಿ ಪ್ರೋತ್ಸಾಹಿಸೋದು.
  • ಅಂತರ್ಜಾಲದಲ್ಲಿ ಮಾಹಿತಿ/ಸುದ್ದಿ ಹುಡುಕಲು ಕನ್ನಡ ಲಿಪಿ ಬಳಸೋದು, ನಮ್ಮ ಗೆಳೆಯರಿಗೂ ಹಾಗೇ ಮಾಡಲು ಹೇಳೋದ್ರ ಮೂಲಕ ಕನ್ನಡದಲ್ಲಿ ಸುದ್ದಿ ಹುಡುಕಾಟಕ್ಕೆ ಬೇಡಿಕೆ ಬರುವಂತೆ ಮಾಡಬೇಕು ಗುರು.
ಅದು ಆದಾಗ ಗೂಗಲ್ ಕನ್ನಡದಲ್ಲಿ ಈ ಸೇವೆ ಖಂಡಿತ ಕೊಡುತ್ತೆ. ಇದ್ಯಾವುದನ್ನ ಮಾಡದೇ ಸುಮ್ಕೆ ಕುಂತಿದ್ರೆ , ಅಂತರ್ಜಾಲದಲ್ಲಿ ಎಲ್ಲಾ ರೀತಿಯ ಸೇವೆ ಬೇರೆಲ್ಲ ಭಾಷೆಲಿ ಬರ್ತಾನೇ ಇರುತ್ತೆ, ನಾವು ಮಾತ್ರ ಕನ್ನಡದಲ್ಲಿ ಯಾಕಿಲ್ಲ ಅಂತಾ ಗೋಳಾಡೋದೆ ಆಗುತ್ತೆ. ಹಾಗಿದ್ರೆ ಇದನ್ನ ಬದಲಾಯ್ಸೋಕೆ ಮುಂದಾಗೋಣ್ವಾ ಗುರು?

ದರ್ಶಿನಿಗಳು ಕಮ್ಮಿ ಆಗ್ತಿರೋದು ಯಾಕೆ?

ಸ್ಪರ್ಧಾತ್ಮಕ ದರದಲ್ಲಿ ಶುಚಿರುಚಿಯಾಗಿ ಬಿಸಿ ಬಿಸಿ ಇಡ್ಲಿ,ವಡೆ,ದೋಸೆ,ಫಿಲ್ಟರ್ ಕಾಫಿ,ಊಟ ಅಂತಾ ಜನರ ಹಸಿವು ಇಂಗಿಸುತ್ತಿದ್ದ, ಆ ಮೂಲಕ ಬೆಂಗಳೂರಲ್ಲಿ ಊಟ-ತಿಂಡಿ ವ್ಯವಸ್ಥೆ ವಿಷಯದಲ್ಲಿ ಒಂದು ಕ್ರಾಂತಿಯೇ ಆಗುವಂತೆ ಮಾಡಿದ್ದ ದರ್ಶಿನಿಗಳೆಲ್ಲ ಒಂದೊಂದಾಗಿ ಬಾಗಿಲು ಹಾಕ್ತಾ ಇವೆ, ವಲಸೆ ಬರ್ತಾ ಇರೋ ಜನರ ಊಟ-ತಿಂಡಿ ಅಗತ್ಯವನ್ನು ಅರ್ಥ ಮಾಡಿಕೊಳ್ಳಲು ಎಡವಿರೋದೇ ಇದಕ್ಕೆಲ್ಲ ಕಾರಣ ಎಂಬರ್ಥದ ಬರಹವೊಂದು ಡಿ.ಎನ್.ಎ ಪತ್ರಿಕೆಯಲ್ಲಿ ಬಂದಿದೆ ಗುರು. ಹೊಸತನವಿಲ್ಲದೆ ದರ್ಶಿನಿಗಳು ಸೊರಗಿರೋದೇ ಇದಕ್ಕೆಲ್ಲ ಕಾರಣ ಅನ್ನೋ ವರದಿಯ ವಾದದ ಹಿಂದೆ ಉದ್ದಿಮೆ ಬಗೆಗಿನ ಕಾಳಜಿಗಿಂತ ಹೆಚ್ಚಾಗಿ ಇನ್ನೆನೋ ಇದ್ದಂತೆ ಕಾಣುತ್ತೆ ಗುರು !

ಇವರು ಹೇಳೊದೇನು?
ದರ್ಶಿನಿಗಳು ಸ್ಪರ್ಧಾತ್ಮಕ ದರದಲ್ಲಿ, ರುಚಿರುಚಿಯಾಗಿ ಇಡ್ಲಿ,ವಡೆ,ದೋಸೆ ಕೊಟ್ಟು ಜನರ ಮನಸ್ಸು ಗೆದ್ದಿದ್ದೆನೋ ನಿಜ, ಆದ್ರೆ ಅದೆಲ್ಲ ಇತಿಹಾಸ. ಈಗ ಬೆಂಗಳೂರು ಬದಲಾಗ್ತಾ ಇದೆ. ಹಲವು ಭಾಷೆ, ಜನಾಂಗದ ಜನ ಇಲ್ಲಿಗೆ ನಿರಂತರವಾಗಿ ವಲಸೆ ಬರ್ತಾ ಇರೋದ್ರಿಂದ ಬೆಂಗಳೂರು ವಿವಿಧ ಸಂಸ್ಕೃತಿಗಳ ಕಾಸ್ಮೊ ಪಾಲಿಟಿನ್ ನಗರವಾಗಿದ್ದು, ಹೀಗೆ ಬರ್ತಾ ಇರೋ ಜನರ ಊಟ-ತಿಂಡಿ ಅಗತ್ಯಗಳ ಕಡೆ ದರ್ಶಿನಿಗಳು ಗಮನ ಕೊಡದೇ ಇರೋದ್ರಿಂದಲೇ, ಒಂದು ಕಾಲದಲ್ಲಿ 5000ದಷ್ಟಿದ್ದ ದರ್ಶಿನಿಗಳ ಸಂಖ್ಯೆ ಈಗ 3000ಕ್ಕೆ ಇಳಿದಿದೆ. ಇನ್ನೇನು ಕೆಲ ಕಾಲದಲ್ಲಿ ದರ್ಶಿನಿಗಳು ಇತಿಹಾಸದ ಪುಟ ಸೇರುತ್ತೆ ಅನ್ನೋದು ಈ ವರದಿಯ ಅಂಬೋಣ.

ಹೋಟೆಲ್ ಉದ್ಯಮಿಗಳು ಏನಂತಾರೆ ?
ಇದು ನಿಜವಾ ಅಂತ ನೋಡಿದ್ರೆ, ಹೋಟೆಲ್ ಉದ್ಯಮ ಹೇಳೊದೇ ಬೇರೆ ಇದೆ. ದರ್ಶಿನಿಗಳ, ಒಟ್ಟಾರೆ ಹೋಟೆಲ್ ಉದ್ಯಮದ ನಿಜವಾದ ಸಮಸ್ಯೆಗಳ ಬಗ್ಗೆ ಮೊನ್ನೆಯಷ್ಟೇ ಮಾತಾಡಿದ್ದ ಬೃಹತ್ ಬೆಂಗಳೂರು ಹೋಟೆಲ್ ಅಸೋಶಿಯೇಶನ್ ನ ಅಧ್ಯಕ್ಷರಾದ ವಾಸುದೇವ ಅಡಿಗಾ ಅವರು, ಗಗನಕ್ಕೇರುತ್ತಿರುವ ಪದಾರ್ಥಗಳ ಬೆಲೆ, ಬಾಡಿಗೆ, ವಿದ್ಯುತ್ ದರ, ಹೆಚ್ಚಿರುವ ತೆರಿಗೆ ದರ ಉದ್ಯಮವನ್ನು ಕಾಡುತ್ತಿದೆ. ತೆರಿಗೆಯಲ್ಲಿ ಕೊಂಚ ವಿನಾಯ್ತಿ ಕೊಟ್ಟು, ದೊಡ್ಡ ಮಟ್ಟದಲ್ಲಿ ಕನ್ನಡಿಗರಿಗೆ ಹೊಟ್ಟೆಪಾಡು ಕಲ್ಪಿಸಿರುವ ಈ ಉದ್ಯಮದ ಉಳಿವಿಗೆ, ಬೆಳೆವಿಗೆ ಸರ್ಕಾರ ಸ್ಪಂದಿಸಬೇಕು ಅನ್ನೋ ಕೋರಿಕೆ ಇರಿಸಿದ್ದರು. ವಲಸಿಗರ ಊಟ ತಿಂಡಿ ಅಗತ್ಯ ಅರ್ಥ ಮಾಡ್ಕೊಳ್ಳೊದ್ರಲ್ಲಿ ಎಡವಿದೀವಿ, ಅದರಿಂದಾನೇ ದರ್ಶಿನಿಗಳು ಬಾಗ್ಲು ಹಾಕ್ತಾ ಇರೋದು ಅಂತ ಹೋಟೆಲ್ ಉದ್ಯಮಿಗಳೆಲ್ಲೂ ಹೇಳಿಲ್ಲ, ಹಾಗಿದ್ರೆ ಈ ವರದಿಗಾರರು ಇಂತಹದೊಂದು ತೀರ್ಮಾನಕ್ಕೆ ಹೇಗ್ ಬಂದ್ರು ಗುರು ?

ಇಂತಹ ವರದಿಗಳ ನಿಜವಾದ ಉದ್ದೇಶ ಏನಿರಬಹುದು ?
ಒಂದು ಕಾಲದಲ್ಲಿ 5000 ದರ್ಶಿನಿಗಳಿದ್ದವು ಅಂತ ಈ ವರದಿ ಅಂದಾಗ, ಗ್ರಾಹಕರಿಲ್ಲದೇ, ಬೇಡಿಕೆ ಇಲ್ಲದೇ ಅವೆಲ್ಲ ಶುರುವಾಯ್ತಾ? ಹಾಗಿದ್ರೆ ಆವತ್ತು ಆ ದರ್ಶಿನಿಗಳಿಗೆ ಹೋಗುತ್ತಿದ್ದ ಗಿರಾಕಿ ಯಾರು? ಇದೇ ದರ್ಶಿನಿಗಳ ಇಡ್ಲಿ ವಡೆ ಇಷ್ಟ ಪಡುತ್ತಿದ್ದವನು ತಾನೆ ? ಹಾಗಿದ್ರೆ, ಇವತ್ತು ಅವರ ಸಂಖ್ಯೆ ಸಡನ್ ಆಗಿ ಕಡಿಮೆ ಆಗಿ ಬೇಡಿಕೆ ಕುಸಿದಿದ್ಯಾ? ಅಥವಾ ಅವರೆಲ್ಲ ಇಡ್ಲಿ-ವಡೆ-ಅನ್ನ-ಸಾಂಬಾರ್ ತಿನ್ನೋದೆ ನಿಲ್ಲಿಸಿ ಬಿಟ್ಟಿದಾರಾ? ಇಲ್ಲ ತಾನೇ? ಹಾಗಿದ್ರೆ ನಿಜವಾದ ಸಮಸ್ಯೆ ಮಾಡ್ತಿರೋ ಅಡುಗೆಯ ಬಗೆಯಲ್ಲಿ ಇದೆ ಅನ್ನೋ ಇವರ ಮಾತು ನಿಜಾ ಅಲ್ಲ ಅಂತ ಅನ್ಸಲ್ವಾ ಗುರು? ಹಾಗಿದ್ರೆ, ಇಂತಹ ವರದಿಗಳ ನಿಜವಾದ ಉದ್ದೇಶ ಏನಿರಬಹುದು ? ಹೋಟೆಲ್ ಉದ್ಯಮದ ಸಮಸ್ಯೆ ಬಗ್ಗೆ ಬರೆಯೋದಕ್ಕಿಂತ ಹೆಚ್ಚಾಗಿ ಬೆಂಗಳೂರು ಕಾಸ್ಮೊ ಪಾಲಿಟಿನ್, ಇಲ್ಲಿಗೆ ಬಂದಿರೋ ವಲಸಿಗರನ್ನ ತೃಪ್ತಿ ಪಡಿಸಲಿಲ್ಲ ಅಂದ್ರೆ ನೀವು ಉದ್ಧಾರ ಆಗಲ್ಲ ಅಂತಾ ಹೇಳೊದಾ ಗುರು ?

ಚಾಮಯ್ಯ ಮೇಷ್ಟ್ರು ಇನ್ನಿಲ್ಲ !

ಸುಮಾರು 370ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ, ಕಳೆದ ಹಲವು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ, ಸಾಮಾಜಿಕ, ಸಾಂಸಾರಿಕ ಪಾತ್ರಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಂತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಹಿರಿಯ ನಟ ರಾಮಾಚಾರಿಯ ಚಾಮಯ್ಯ ಮೇಷ್ಟ್ರು ಕೆ.ಎಸ್ ಅಶ್ವತ್ಥ್ ನಮ್ಮನ್ನೆಲ್ಲ ಅಗಲಿದ ದುಃಖದ ಸುದ್ದಿ ಬಂದಿದೆ ಗುರು ! ತಂದೆ ಅಂದರೆ ಇವರಂತೆ ಇರಬೇಕು ಅನ್ನುವ ಹಾಗೇ ತಂದೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದ ಇವರು ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಮೊನ್ನೆಯಷ್ಟೇ ವಿಷ್ಣುವರ್ಧನ್, ಗಾಯಕ ಅಶ್ವಥ್ ಅವರನ್ನು ಕಳೆದುಕೊಂಡು ಬಡವಾಗಿದ್ದ ಕನ್ನಡ ಚಿತ್ರರಂಗಕ್ಕೆ ಇದು ಬರ ಸಿಡಿಲಿನಂತೆ ಎರಗಿದೆ ಗುರು. ಅಗಲಿದ ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಒಂದು ಕೀಟನಾಶಕ ನಿಷೇಧಿಸೋಕು ದಿಲ್ಲಿಗ್ ಹೋಗಬೇಕಾ?

ಗೇರು ಬೆಳೆಗೆ ಹೆಲಿಕಾಪ್ಟರ್ ಮೂಲಕ ಸಿಂಪಡಿಸಲಾಗುವ ಎಂಡೋಸಲ್ಫಾನ್ ಎಂಬ ಕೀಟನಾಶಕ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ಜನ ಮತ್ತು ಜಾನುವಾರುಗಳ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ವರದಿ ಆಗಾಗ ಪತ್ರಿಕೆಗಳಲ್ಲಿ ಬರ್ತಾ ಇದೆ. ಇದರ ಬಗ್ಗೆ ಹೇಳಿಕೆ ಕೊಟ್ಟಿರೋ ಮಾನ್ಯ ಮುಖ್ಯಮಂತ್ರಿಗಳು, ದೆಹಲಿಗೆ ಹೋಗಿ ಮಾನ್ಯ ಪ್ರಧಾನಿಗಳನ್ನು ಕಂಡು, ಈ ಕೀಟನಾಶಕದ ಸಿಂಪಡಿಸುವಿಕೆಯನ್ನು ನಿಷೇಧಿಸಲು ಕೋರುವುದಾಗಿ ತಿಳಿಸಿರೋ ಸುದ್ಧಿ ಬಂದಿದೆ! ಅಲ್ಲಾ ಗುರು, ಒಂದು ಕೀಟನಾಶಕವನ್ನು ನಿಷೇಧಿಸಿ, ನಮ್ಮ ರೈತರ ಪ್ರಾಣ ಉಳಿಸಿಕೊಳ್ಳೋ ಅಧಿಕಾರಾನೂ ನಮ್ಮ ರಾಜ್ಯ ಸರ್ಕಾರಕ್ಕಿಲ್ವಾ? ಇಂತಹದೊಂದು ಚಿಕ್ಕ ನಿರ್ಧಾರ ತಗೊಳ್ಳೊಕೂ ದೆಹಲಿ ದೊರೆಗಳ ಅಪ್ಪಣೆ ಬೇಕು ಅನ್ನೋ ವ್ಯವಸ್ಥೆ ಇದ್ರೆ, ಅದು ನಿಜಕ್ಕೂ ಎಷ್ಟು ಸರಿಯಾದದ್ದು ?

37 ಜನ ಸತ್ರೂ ನಿಷೇಧ ಮಾಡೋಕಾಗಲ್ಲ !
ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ 37 ಜನರು ಸಾವನ್ನಪ್ಪಿದ್ದಾರೆ. ಸುಮಾರು 20 ಜನರು ದೈಹಿಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 18 ಜನರು, ದೈಹಿಕ ತೊಂದರೆಗಳನ್ನು ಸಹಿಸಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಎದೆ ನಡುಗಿಸೋ ಸುದ್ಧಿನಾ ಈ ವರದಿ ಹೇಳುತ್ತೆ. ಇಂತಹದೊಂದು ಔಷಧಿಯಿಂದ ಇಷ್ಟೆಲ್ಲ ತೊಂದರೆ ಆದಾಗ ಸಹಜವಾಗಿ ಅದನ್ನ ನಿಷೇಧಿಸೋ ಅಧಿಕಾರ ನಮ್ಮ ರಾಜ್ಯ ಸರ್ಕಾರಕ್ಕೆ ಇರಬೇಕಿತ್ತು ಅನ್ಸಲ್ವಾ ಗುರು ? ತನ್ನ ರಾಜ್ಯದ ಜನರ ಸಾವು ನೋವಿಗೆ ಕಾರಣವಾಗ್ತಿರೋ ಒಂದು ಕೀಟನಾಶಕವನ್ನು ನಿಷೇಧ ಮಾಡಬೇಕು ಅನ್ನೋ ನಿರ್ಧಾರ ತಗೊಳ್ಳೊಕೂ, ಒಂದು ರಾಜ್ಯ 2000 ಕಿ.ಮೀ ಆಚೆ ಇರೋ ದೆಹಲಿಗೆ ಹೋಗಿ, ದೆಹಲಿ ದೊರೆಗೆ ವಿನಂತಿ ಮಾಡ್ಕೊಬೇಕು ಅನ್ನೋ ಸ್ಥಿತಿ ಇದ್ರೆ, ಅದು ಹೇಗೆ ಆ ರಾಜ್ಯ ಸರ್ಕಾರ ತನ್ನ ಜನರಿಗೆ ಒಂದು ಪರಿಣಾಮಕಾರಿಯಾದ ಆಡಳಿತ ನೀಡೋಕೆ ಆಗುತ್ತೆ ಗುರು ?

ರಾಜ್ಯದ ತೆಕ್ಕೆಗೆ ಬರಬೇಕು
ಟ್ರಾಫಿಕ್ ಅಲ್ಲಿ ರೂಲ್ಸ್ ಮುರಿದರೆ ಹಾಕುವ ದಂಡದಿಂದ ಹಿಡಿದು, ಜೀವ ತೆಗೆಯೋ ಒಂದು ಕೀಟನಾಶಕದ ಬಳಕೆ ನಿಲ್ಲಿಸೋಕು ದಿಲ್ಲಿ ಕಡೆ ನೋಡಬೇಕು ಅನ್ನೋ ವ್ಯವಸ್ಥೆಯಿಂದ ರಾಜ್ಯಗಳ ಆಡಳಿತ ಅನ್ನೋದು ನಿಜಕ್ಕೂ ಜಿಡ್ಡುಗಟ್ಟಿ, ನಿಂತ ನೀರಾಗುತ್ತೆ ಅನ್ಸಲ್ವಾ ಗುರು? ಇಂತಹ ಅಧಿಕಾರಗಳು ರಾಜ್ಯ ಸರ್ಕಾರಗಳ ತೆಕ್ಕೆಗೆ ಬಂದಾಗಲಷ್ಟೇ ನಿಜಕ್ಕೂ ಜನರಿಗೆ ಅನುಕೂಲ ಕಲ್ಪಿಸೋ, ವೇಗದ ನಿರ್ಧಾರ ತೆಗೆದುಕೊಳ್ಳುವ ಪರಿಣಾಮಕಾರಿಯಾದ ಆಡಳಿತ ಕೊಡೊಕೆ ಸಾಧ್ಯ. ನೀನೇನ್ ಅಂತೀಯಾ ಗುರು?

ಬಂಡವಾಳ ಹೂಡಿಕೆ: ನಮ್ಮ ಜನಕ್ಕೆ ಕೆಲಸಾನೂ ಕೊಡಬೇಕು !

ಆರ್ಸೆಲರ್ , ಪೋಸ್ಕೋ, ಲಫಾರ್ಜ್ ಸೇರಿದಂತೆ ಹಲವು ದೊಡ್ಡ ದೊಡ್ಡ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿದ್ದು, ಸುಮಾರು ರೂ.1,38,000 ಕೋಟಿಯಷ್ಟು ಬಂಡವಾಳ ಹೂಡಲು ಮುಂದಾಗಿದ್ದಾರೆ ಮತ್ತು ಇದು 92,000ಕ್ಕೂ ಹೆಚ್ಚು ಕೆಲಸ ಹುಟ್ಟು ಹಾಕಲಿದೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ! ಇದು ರಾಜ್ಯದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ನೋಡಿದರೆ ಒಂದೊಳ್ಳೆ ಬೆಳವಣಿಗೆಯಾಗಿ ಕಾಣ್ತಿದೆ. ಈ ಸದವಕಾಶದ ಲಾಭ ನಮ್ಮ ನಾಡಿಗೆ ಸಂಪೂರ್ಣವಾಗಿ ಸಿಗಬೇಕಾದರೆ ಸರ್ಕಾರ ಈಗಿಂದಲೇ ಎಚ್ಚರಿಕೆಯಿಂದ ಕೆಲ್ಸ ಮಾಡ್ಬೇಕು. ಸರ್ಕಾರ ಎಚ್ಚರ ತಪ್ಪದ ಹಾಗೆ ಜನ ಎಚ್ಚರ ವಹಿಸಬೇಕು ಗುರೂ! ಇದು ಈ ಯೋಜನೆಯ ಸಂಪೂರ್ಣ ಲಾಭ ನಮ್ಮ ನಾಡಿಗೇ ಸಿಗೋಕ್ಕೆ ಭಾಳಾ ಅಗತ್ಯವಾಗಿದೆ.

ಏನೇನ್ ಆಗ್ತಿದೆ ?
ಈ ಯೋಜನೆಗಳಿಂದ ಸಿಮೆಂಟ್, ಕಬ್ಬಿಣ ಮತ್ತು ಅದಿರು ಮುಂತಾದ ವಿವಿಧ ದೊಡ್ಡ ಕೈಗಾರಿಕಾ ವಲಯಗಳಲ್ಲಿ ಉದ್ಯೋಗದ ಅವಕಾಶಗಳು ಸೃಷ್ಟಿ ಆಗುವುದರ ಜೊತೆಗೆ, ಪೂರಕ ವಲಯಗಳಾದ ಬಿಡಿ ಭಾಗಗಳ ತಯಾರಿಕೆ, ಮೂಲ ಉತ್ಪನ್ನಗಳ ಪೂರೈಕೆ, ಹೊಸ ಸಂಶೋಧನಾ ಘಟಕಗಳು, ಹೀಗೆಯೇ ಹತ್ತಾರು ಕ್ಷೇತ್ರಗಳಲ್ಲಿ ಹೊಸ ಹೊಸ ಕೆಲಸಗಳು ಹುಟ್ಟಿಕೊಳ್ಳಲಿವೆ.

ಇತ್ತ ಗಮನವಿರಲಿ !
ಸರ್ಕಾರ ಈ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳೊ ಸಂದರ್ಭದಲ್ಲೇ ಕೆಳಗಿನ ಕೆಲವು ಮುಖ್ಯ ವಿಷಯಗಳ ಬಗ್ಗೆ ಗಮನ ಹರಿಸಬೇಕು ಗುರು.
  • ಯೋಜನೆಗಳಿಂದ ಹುಟ್ಟುತ್ತಿರುವ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಹೇಗೆ ಕೊಡಿಸುವುದು ?
  • ಈ ಹೂಡಿಕೆಯಿಂದ ಯಾವ ಯಾವ ತರಹದ ಕೆಲಸಗಳು ಸೃಷ್ಟಿ ಆಗುತ್ತೆ? ಆ ಕೆಲಸಗಳಿಗೆಲ್ಲ ಬೇಕಾದ ನೈಪುಣ್ಯತೆ ಈ ಭಾಗದ ಕನ್ನಡಿಗರಲ್ಲಿದೆಯಾ? ಇಲ್ಲದೇ ಹೋದಲ್ಲಿ, ಅದನ್ನು ಹುಟ್ಟು ಹಾಕುವತ್ತ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬೇಕು?
  • ನಮ್ಮ ನೆಲ, ಜಲ ಸೇರಿದಂತೆ ಎಷ್ಟು ಸಂಪನ್ಮೂಲದ ಬಳಕೆಯಾಗುತ್ತೆ? ಆ ಬಳಕೆಗೆ ತಕ್ಕ ಲಾಭ ನಾಡಿಗೆ ಆಗಲಿದೆಯೇ?
  • ಯೋಜನೆಗಳಿಗೆ ರೈತರಿಂದ ಪಡೆಯುತ್ತಿರುವ ಭೂಮಿ ಎಂತಹದ್ದು? ರೈತರಿಂದ ಫಲವತ್ತಾದ ಕೃಷಿ ಭೂಮಿ ಪಡೆಯುವುದು ಅನಿವಾರ್ಯ ಅನ್ನುವಂತಹ ಸಂದರ್ಭದಲ್ಲಿ, ರೈತರಿಗೆ ಸರಿಯಾದ ಪುನರ್ವಸತಿ ಸೌಲಭ್ಯ ಸಿಗುವಂತೆ ಮಾಡುವುದಕ್ಕೆ ಏನು ಮಾಡಬೇಕು? ಅದಕ್ಕೂ ಮೀರಿ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಗಳಲ್ಲಿ ಒಬ್ಬ ಭಾಗಿದಾರ ಅನ್ನುವಂತೆ ತೊಡಗಿಸಿಕೊಳ್ಳುವುದು ಹೇಗೆ?
  • ಬಂಡವಾಳ ಹೂಡುತ್ತಿರುವ ಕಂಪನಿಗಳು ಶಾಲೆ, ಆಸ್ಪತ್ರೆ ನಿರ್ಮಾಣದಂತಹ ಕೆಲಸದ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿ ತೋರಿಸುವಂತೆ ಅವರ ಮನ ಒಲಿಸುವುದು ಹೇಗೆ?
ಬಂಡವಾಳ ತರೋದಷ್ಟೇ ತನ್ನ ಕೆಲಸ ಎಂದು ವರ್ತಿಸದೇ, ಸರ್ಕಾರ ಮೇಲಿನ ಎಲ್ಲ ಅಂಶಗಳ ಬಗ್ಗೆ ಸರಿಯಾದ ಗಮನ ಕೊಡಬೇಕು ಗುರು.

ಕೊನೆಹನಿ:
ಕಳೆದ ವರ್ಷ, ಧಾರವಾಡದಲ್ಲಿ ಟಾಟಾ ಸಂಸ್ಥೆಯ ಬಂಡವಾಳ ಹೂಡಿಕೆ ಕೈ ತಪ್ಪಲು, ಯೋಜನೆಗೆ ಅನುಮತಿ ನೀಡುವಲ್ಲಿ ಸರ್ಕಾರ ತೆಗೆದುಕೊಂಡ ಆಮೆವೇಗದ ನಿರ್ಧಾರಗಳು ಸಾಕಷ್ಟು ಮಟ್ಟಿಗೆ ಕಾರಣವಾಗಿದ್ದವು. ಕೊನೆ ಪಕ್ಷ ಈ ಬಾರಿ ಸರ್ಕಾರ, ಈ ಯೋಜನೆಗೆ ಪಾಲುದಾರರಾದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗ ಈ ಯೋಜನೆಗಳನ್ನು ಜಾರಿಗೆ ತಂದು, ಆ ಭಾಗದ ಕನ್ನಡಿಗರ ಬಾಳು ಹಸನಾಗುವಂತೆ ಮಾಡಲಿ ಎಂದು ಹಾರೈಸೋಣ. ಏನಂತೀಯಾ ಗುರು?

ಭಲೇ ಕೈಪಿಡಿ !

ಇತ್ತೀಚೆಗೆ ಬೆಂಗಳೂರಿನ ಔಷದಿ ಅಂಗಡಿಗಳಲ್ಲಿ ರೋಗಿಗೆ ಸಹಾಯವಾಗುವಂತ ಈ ಒಂದು ಕೈಪಿಡಿ (ಚಿತ್ರ ನೋಡಿ) ಕಾಣಿಸಿಕೊಳ್ಳಲು ಶುರುವಾಗಿದೆ. ಇದರ ವಿಶೇಷವೇನಂದ್ರೆ ಇದರಲ್ಲಿ ಮೂಡಿರುವ ಮಾಹಿತಿಯೆಲ್ಲವೂ ಕನ್ನಡದಲ್ಲೇ ಇದೆ. ರೋಗದ ಹೆಸರಿನಿಂದ ಹಿಡಿದು, ಅದರ ಅರ್ಥ, ಕಾರಣಗಳು, ಮತ್ತು ವಾಸಿ ಮಾಡಿಕೊಳ್ಳುವ ವಿಧಾನದ ಬಗ್ಗೆ ಎಲ್ಲಾ ಮಾಹಿತಿಯೂ ಈ ಕೈಪಿಡಿಯಲ್ಲಿ ಸುಲಭವಾಗಿ ಅರ್ಥವಾಗುವಂತೆ ಕನ್ನಡದಲ್ಲೇ ನೀಡಲಾಗಿದೆ ಗುರು!

ಬೆಂಗಳೂರಿನ ಕೆಲವು ಆಸ್ಪತ್ರೆಗಳು ಮತ್ತು ತಪಾಸಣೆ ಕೇಂದ್ರಗಳಲ್ಲಿ ಸಾಮಾನ್ಯ ನೋಟವಾಗಿರುವ ಇಂಗ್ಲಿಷ್ ಕೈಪಿಡಿಗಳ ನಡುವೆ ಇದೀಗ ಈ ಕನ್ನಡದ ಕೈಪಿಡಿಯು ಹೊಳೆಯುತ್ತಿರುವ ವಜ್ರದ ಹಾಗೆ ತಲೆದೋರಿದೆ. ಕನ್ನಡದಲ್ಲಿರುವ ಈ ಮಾಹಿತಿ ಸಹಜವಾಗಿಯೇ ಕನ್ನಡಿಗರನ್ನು ಹೆಚ್ಚು ಸುಲಭವಾಗಿ ತಲುಪುತ್ತದೆ. ಇದರಿಂದ ಓದುವ ರೋಗಿಗಷ್ಟೇ ಅಲ್ಲದೇ, ಮಾರಾಟದಲ್ಲಾಗುವ ಹೆಚ್ಚಳದಿಂದ ಈ ಔಷಧಿ ಕಂಪನಿಗೂ ಲಾಭವಾಗಲಿದೆ ಗುರು !

ಜನರನ್ನು ತಲುಪಲು ಜನರ ಭಾಷೆಯೇ ಸರಿ
ತಿಳಿಯದ ರೋಗಗಳ ಬಗ್ಗೆ ಜನರಲ್ಲಿ ಇರಬಹುದಾದ ಶಂಕೆ ಮತ್ತು ಗೊಂದಲಗಳನ್ನು ಬಿಡಿಸುವ ಮೂಲಕ, ಮತ್ತಿದನ್ನು ಗ್ರಾಹಕನ ಭಾಷೆಯಲ್ಲಿಯೇ ಹೇಳುವುದು ಗ್ರಾಹಕನ ಮನಸ್ಸು ಗೆಲ್ಲುವ ಅತ್ಯಂತ ಸುಲಭವೂ, ಪರಿಣಾಮಕಾರಿಯೂ ಆದ ವಿಧಾನ ಎಂಬುದನ್ನು ಈ ಸಂಸ್ಥೆಯೋರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಹಾಗಿದೆ ಗುರು. ತಮ್ಮ ಎಲ್ಲ ಪ್ರಕಟಣೆ, ಜಾಹೀರಾತು, ಮಾಹಿತಿಗಳನ್ನು ಇಂಗ್ಲಿಷ್ ಅಲ್ಲಿ ಮಾತ್ರ ಹಾಕ್ತಿರೋ ವೈದ್ಯಕೀಯ ಕ್ಷೇತ್ರದ ಇತರೆ ಕಂಪನಿಗಳು ಇವರನ್ನ ನೋಡಿ ಎಷ್ಟು ಬೇಗ ಕಲಿತಾರೋ ಅಷ್ಟು ಅವರಿಗೇ ಒಳ್ಳೆದು. ಏನಂತೀಯಾ ಗುರು ?

ಇದಕ್ಕೆ ಸಂಬಂಧಿಸಿದಂತೆ ನಮ್ಮ ಇನ್ನೊಂದು ಬ್ಲಾಗು ಇಲ್ಲಿ ಮೂಡಿ ಬಂದಿತ್ತು.

ರೈಲ್ವೇ ಯೋಜನೆಗಳು : ಅಂತೂ ಎಚ್ಚೆತ್ತ ಸರ್ಕಾರಗಳು!


ಅಂತೂ ಇಂತೂ ಕರ್ನಾಟಕದ ರಾಜಕಾರಣಿಗಳು ರೈಲ್ವೇ ವಿಷಯದಲ್ಲಿ ನಿದ್ದೆಯಿಂದ ಎದ್ದಂಗ್ ಕಾಣುಸ್ತಾ ಇದೆ ಗುರೂ! ಏನಪ್ಪಾ ವಿಷ್ಯಾ ಅಂದ್ರಾ? ಕರ್ನಾಟಕದ ರಾಜ್ಯ ಸರ್ಕಾರ ಮತ್ತು ಕೇಂದ್ರ ರೈಲ್ವೇ ಸಚಿವರಾದ ಕನ್ನಡಿಗ ಮುನಿಯಪ್ಪನೋರು ಈ ಸಾರಿ, ಇದೇ ಮೊದಲ ಸಾರಿ ರೈಲು ಹೋಗಕ್ ಮೊದಲೇ ಟಿಕೆಟ್ ತೊಗೊಳ್ಳೋಕೆ ಮುಂದಾಗಿದಾರೆ ಅನ್ನೋ ಸುದ್ದಿ ಇವತ್ತಿನ (03.01.2009) ದಿನಪತ್ರಿಕೆಗಳಲ್ಲಿ ರಾರಾಜುಸ್ತಾ ಇದೆ.

ರೈಲು ಬಜೆಟ್‍ಗೆ ಸಿದ್ಧತೆ!

ಪ್ರತೀ ಸಲಾ ರೈಲು ಬಜೆಟ್ ಮಂಡನೆ ಆದಮೇಲೆ ‘ಕರ್ನಾಟಕಕ್ಕೆ ಅನ್ಯಾಯ ಆಯ್ತು’ ಅಂತಾ ಕೇಂದ್ರದ ವಿಪಕ್ಷಗಳ ಕರ್ನಾಟಕದ ವಿಭಾಗದೋರು ಕಿರುಲೋದೂ, ‘ಇಲ್ಲಾ, ಇದು ಅದ್ಭುತವಾದ ಬಜೆಟ್, ಕರ್ನಾಟಕಕ್ಕೆ ಹೊಸದಾಗಿ ನಾಲ್ಕಾರು ರೈಲು ಹಾಕಲಾಗಿದೆ’ ಅಂತ ಕೇಂದ್ರದ ಆಡಳಿತ ಪಕ್ಷದ ಇಲ್ಲಿನ ಬಾಲಂಗೋಚಿಗೋಳು ಸಮರ್ಥಿಸಿಕೊಳ್ಳೋದೂ ಮಾಮೂಲಿ ಆಗೋಗಿತ್ತು. ಆದರೆ ಈ ಸಲ ಬಜೆಟ್‍ಗೆ ಮೊದಲೇ ಒಂದು ಪರಿಶೀಲನಾ ಸಭೆ ಮಾಡಿ ರಾಜ್ಯಕ್ಕೆ ಏನೇನಾಗಬೇಕು ಅನ್ನೋ ದಿಕ್ಕಲ್ಲಿ ಯೋಚನೆ ಮಾಡಿರೋದು ಮೆಚ್ಕೊಬೇಕಾದ್ದ ಸಂಗತೀನೆ ಗುರು! ಇದೊಂದು ಮಾದರಿ ವಿಧಾನವಾಗಿ ಪ್ರತಿವರ್ಷ ಮುಂದುವರೀಲಿ ಅನ್ನೋದು ನಮ್ಮಾಸೆ. ಇರಲಿ, ಈಗ ಇಂಥಾ ಬೆಳವಣಿಗೆ ಆಗಿರೋದಕ್ಕೆ ಯಾರು ಕಾರಣ? ಯಾಕೆ, ಎಂದೂ ಇಲ್ಲದ ಕಾಳಜೀನಾ ನಮ್ಮ ಸರ್ಕಾರಗಳು ತೋರುಸ್ತಿವೆ? ಅಂತ ಒಸಿ ನೋಡ್ಮಾ...

ಇಷ್ಟು ವರ್ಷಾ, ಎಲ್ಲಾ ಬರೀ ರೈಲು!


ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕರ್ನಾಟಕವನ್ನು ಎಲ್ಲಾ ಕ್ಷೇತ್ರಗಳಲ್ಲಿ ಹೇಗೆಲ್ಲಾ ಕಡೆಗಣನೆ ಮಾಡಲಾಗಿದೆ. ಈಗ ಭಾರತೀಯ ರೈಲ್ವೇಯನ್ನೇ ನೋಡಿ. ಕರ್ನಾಟಕದ 2/3ರಷ್ಟಿರೋ ತಮಿಳುನಾಡಲ್ಲಿ ಸುಮಾರು ೪೮೦೦ ಕಿಮೀ ಉದ್ದದ ರೈಲು ಮಾರ್ಗವಿದ್ದರೆ, ಕರ್ನಾಟಕದಲ್ಲಿ ಬರೀ 3100 ಕಿಮೀಗಳು. ಪುಟಾಣಿ ಜಾರ್ಖಂಡ್‍ನಂತಹ ರಾಜ್ಯದ ಶೇಕಡಾ 80ಕ್ಕಿಂತ ಹೆಚ್ಚು ರೈಲು ಮಾರ್ಗ ವಿದ್ಯುದೀಕರಣವಾಗಿದ್ದರೆ, ಕರ್ನಾಟಕದಲ್ಲಿ ಇದು ಬರೀ 5%. ನಮ್ಮ ನಾಡಲ್ಲಿ ವಿದ್ಯುತ್ ಮಾರ್ಗದ ಉದ್ದ ಬರೀ 150 ಕಿಮೀಗಿಂತಾ ಕಮ್ಮಿ ಇದೆ. ಇಲ್ಲಿನ ರೈಲು ಮಾರ್ಗಗಳು ನಮ್ಮ ನಗರಗಳನ್ನು ಜೋಡಿಸುವ ಉದ್ದೇಶದಿಂದ ಮಾಡೇಯಿಲ್ಲ ಅನ್ನುವಂತಿದೆ. ದಿಲ್ಲಿಗೆ, ಮುಂಬೈಗೆ, ಚೆನ್ನೈಗೆ ಹೋಗೋಕೆ ಬೇಕಾಗಿರೋ ಮಾರ್ಗದಲ್ಲಿರೋ ಜಿಲ್ಲೆಗಳು ಬಿಟ್ಟರೆ ನಮ್ಮ ನಗರಗಳನ್ನು ಜೋಡಿಸುವ ಸಂಪರ್ಕ ಜಾಲಗಳು... ಊಹೂಂ, ಇಲ್ಲವೇ ಇಲ್ಲ ಅನ್ನಬಹುದು. ಪ್ರತಿ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಅಷ್ಟು ಹೊಸರೈಲು, ಇಷ್ಟು ಹೊಸರೈಲು ಅಂತ ಘೋಷಣೆ ಮಾಡ್ತಾರೆ... ಆದ್ರೆ ಈ ರೈಲುಗಳಲ್ಲಿ ಹೆಚ್ಚಿನವು (ಭಾಗಷಃ ಎಲ್ಲಾ ಅನ್ನಿ) ಹೊರ ರಾಜ್ಯಗಳಿಗೆ ಹೋಗೋವೆ. ಹೋಗೋವೂ ಅನ್ನೋ ಹಾಗಿಲ್ಲಾ, ಹೊರ ರಾಜ್ಯಗಳಿಂದ ಇಲ್ಲಿಗೆ ಬರೋವು ಅನ್ನೋದೇ ಸೂಕ್ತ. ಗುವಾಹತಿ, ಕೊಲ್ಕತ್ತಾ, ಕೊಯಮತ್ತೂರು, ಚೆನ್ನೈ, ಮುಂಬೈ, ದಿಲ್ಲಿಗಳು ಸಾಲ್ದು ಅಂತಾ ಕಣ್ಣೂರು, ಲಕ್ನೋ, ಪಾಟ್ನಾ ಅಂತ ರೈಲು ಮೇಲೆ ರೈಲು ಹಾಕಿರೋದ್ರಿಂದ ಅದೆಷ್ಟು ಜನ ಕನ್ನಡದೋರಿಗೆ ಅನುಕೂಲ ಆಗಿದೆಯೋ ದೇವರೇ ಬಲ್ಲ. ಆದ್ರೆ ನಮ್ಮೂರುಗಳಿಗೆ ವಲಸೆ ಹೆಚ್ಚಿರೋದು ಮಾತ್ರಾ ಅಂಗೈ ಹುಣ್ಣಂಗೆ ಕಾಣ್ತಿದೆ. ಹೀಗೆ ಕರ್ನಾಟಕ ಅನ್ನೋ ಹಸುವಿನಿಂದ ಕೊಡಗಟ್ಲೆ ತೆರಿಗೆ ಅನ್ನೋ ಹಾಲು ಕರೆದುಕೊಳ್ಳೋ ಕೇಂದ್ರಸರ್ಕಾರ, ಇಷ್ಟು ದಿವ್ಸಾ ನಮಗಿಟ್ಟ ಮೇವು ಮಾತ್ರಾ ಮುಷ್ಟೀ ಗಾತ್ರವೂ ಇಲ್ಲ. ಹೀಗೆಲ್ಲಾ ಕಡೆಗಣನೆ ಆಗಿರೋದಕ್ಕೆ ಯಾರು ಹೊಣೆ? ಇಷ್ಟೂ ವರ್ಷಗಳ ಕಾಲ ಮೆಲಿಂದ ಮೇಲೆ ನಮ್ಮ ನಾಡನ್ನು ಆಳಿದ ರಾಷ್ಟ್ರೀಯ ಪಕ್ಷಗಳೇ ಅಲ್ವಾ ಗುರು?

ಎಚ್ಚೆತ್ತ ಕನ್ನಡಿಗ!

ಹಿಂದೆ ದಕ್ಷಿಣ ರೈಲ್ವೆಯ ಭಾಗವಾಗಿದ್ದಾಗ ಕರ್ನಾಟಕದ ತುಂಬಾ ತಮಿಳರನ್ನು ತಂದು ತುಂಬಿದ್ದನ್ನು ನೋಡಿ ಬೇಸತ್ತು, ನಮಗೆ ನಮ್ಮದೇ ಆದ ರೈಲ್ವೇ ವಲಯ ಇರಲಿ ಅಂತಾ ಸಾಕಷ್ಟು ಹೋರಾಡಿ ನೈಋತ್ಯ ವಲಯ ಗಿಟ್ಟುಸಿಕೊಂಡ ಮೇಲೂ ನಮ್ಮೂರ ಕೆಲಸಗಳು ಬೇರೆಯವರ ಪಾಲಾಗೋ ಪರಿಸ್ಥಿತಿ ಇತ್ತೀಚಿಗೆ ಉಂಟಾಗಿತ್ತು. ಕರ್ನಾಟಕಕ್ಕೇ ಅಂತಾ ನೈಋತ್ಯ ರೈಲ್ವೇ ವಲಯ ಆದಮೇಲೆ, ಡಿ ದರ್ಜೆ ಹುದ್ದೆಗಳಿಗಾಗಿ ನೇಮಕಾತಿ ಆರಂಭವಾದಾಗ ಎಂದಿನಂತೆಯೇ (?) ಹೊರರಾಜ್ಯದಿಂದ ಜನಗಳನ್ನು ಕರ್ಕೊಂಡುಬಂದು ತುಂಬೋ ಪ್ರಯತ್ನಗಳು ನಡುದ್ವು. ಇದು ನಮ್ಮ ಜನರನ್ನು ಕೆರಳಿಸಿದ್ದು ಸಹಜ. ಈ ಅನ್ಯಾಯದ ವಿರುದ್ಧವಾಗಿ ಕನ್ನಡಿಗರಲ್ಲಿ ಮೂಡಿದ ಜಾಗೃತಿ, ಅದಕ್ಕಾಗಿ ನಡೆಸಿದ ತೀವ್ರವಾದ ಹೋರಾಟ... ಆ ಮೂಲಕ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿನ ಹುಳುಕು ಬಯಲಿಗೆ ಬಂದದ್ದು, ಆ ನಂತರ ಭಾರತ ಸರ್ಕಾರ ಎಲ್ಲಾ ಭಾಷೆಗಳಲ್ಲಿ ಪರೀಕ್ಷೆಗೆ ಆದೇಶ ನೀಡಿದ್ದು ಮೊದಲಾದ ಘಟನೆಗಳು ನಡೆದವು. ಅನೇಕ ಸಂಘಟನೆಗಳು ನಮ್ಮ ನಾಡಿಗಾದ ಅನ್ಯಾಯದ ಬಗ್ಗೆ ಸಾಕಷ್ಟು ಅಂಕಿ ಅಂಶಗಳನ್ನು ಜನರ ಮುಂದಿಟ್ಟಿದ್ದೂ, ಪ್ರಾಣ ಪಣಕ್ಕಿಟ್ಟು ಹೋರಾಡಿದ್ದೂ, ಮಾಧ್ಯಮಗಳ ಪ್ರತಿನಿಧಿಗಳು ಈ ಅಂಕಿಅಂಶಗಳನ್ನು ರಾಜಕಾರಣಿಗಳ, ರಾಜಕೀಯ ಪಕ್ಷಗಳ ಮುಖದ ಮುಂದೆ ಹಿಡಿದದ್ದೂ ನಡೆದವು. ಈ ಎಲ್ಲಾ ಜಾಗೃತಿಯ ಪರಿಣಾಮವೇ ನಿನ್ನೆಯ ಸಭೆಗೆ ಕಾರಣ ಅನ್ನೋದು ಅತಿಶಯೋಕ್ತಿ ಅಲ್ಲಾ ಗುರು! ಹೌದು, ನಮ್ಮ ಹಕ್ಕುಗಳನ್ನು, ನಮ್ಮ ಪಾಲನ್ನು ದಕ್ಕಿಸಿಕೊಳ್ಳಲು ಇಂತಹ ಜಾಗೃತಿಯೇ ಪರಿಹಾರ ಅಂತನ್ನೋದನ್ನು ಇದು ತೋರ್ಸುತ್ತಲ್ವಾ ಗುರು? ಕನ್ನಡಿಗರಲ್ಲಿ ಹತ್ತಿರುವ ಜಾಗೃತಿಯ ಈ ಹಣತೆ ನಾಡನ್ನೇ ಬೆಳಗಲಿ!!
Related Posts with Thumbnails