ಶಾಲೆಯಲ್ಲಿ ತುಳು ಕಲಿಸೋದು ಒಳ್ಳೆ ನಡೆ

ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ಭಾಷೆಯಾಗಿ ತುಳುವನ್ನು ಕಲಿಸುವ ನಿರ್ಧಾರ ಸರ್ಕಾರ ಕೈಗೊಂಡಿದೆ ಅನ್ನೋ ಸುದ್ದಿ ಮಾರ್ಚ್ 26ನೇ ತಾರೀಖಿನ ವಿ.ಕ ಪತ್ರಿಕೆಯಲ್ಲಿ ಬಂದಿದೆ. ಇದು ತುಂಬಾ ಒಳ್ಳೇ ನಿರ್ಧಾರ ಗುರು.

ಸಾವಿರಾರು ವರ್ಷಗಳಷ್ಟು ಹಳೆಯದಾದ, ಕನ್ನಡ ನಾಡಲ್ಲಿ ಕನ್ನಡದೊಡನೆ ಶತಶತಮಾನಗಳ ನಂಟು ಹೊಂದಿರುವ ಕರ್ನಾಟಕದ ಭಾಷೆಗಳಲ್ಲಿ ಒಂದಾದ ತುಳುವನ್ನು ಪ್ರಾಥಮಿಕ ಶಾಲಾ ಹಂತದಲ್ಲಿ ಪರಿಚಯಿಸುವ ಮೂಲಕ ತುಳುವನ್ನು ಉಳಿಸುವ, ಬೆಳೆಸುವ ಈ ನಡೆ ಸರಿಯಾದದ್ದು.

ತಾಯ್ನುಡಿಯಲ್ಲಿ ಶಿಕ್ಷಣ ಏಳಿಗೆಗೆ ದಾರಿ

ಯಾವುದೇ ಭಾಷಾ ಜನಾಂಗದ ಏಳಿಗೆ ಅತ್ಯುತ್ತಮವಾಗಲು ಅವರಾಡುವ ಭಾಷೆ ಕೇವಲ ಮಾತಿನ ರೂಪದಲ್ಲಷ್ಟೇ ಉಳಿಯದೇ, ಶಾಲೆಯಲ್ಲಿ ಕಲಿಕೆಯ ರೂಪ ಪಡೆದುಕೊಳ್ಳುವುದು ಒಂದು ಮುಖ್ಯ ಹಂತ. ಇವತ್ತು ತುಳುವಿಗೆ ಅಂತಹ ಸಾಧ್ಯತೆ ಸಿಗುತ್ತಿರುವುದು ತುಳುವರ ಏಳಿಗೆಯ ದೃಷ್ಟಿಯಿಂದ ಒಳ್ಳೆಯದು ಗುರು.

ಕನ್ನಡದ ಮತಯಂತ್ರ: ಸರೀನಾ? ತಪ್ಪಾ?

ಇವತ್ತು (28.03.2010) ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೇಲಿ ಬಳಸಿದ ಮತಯಂತ್ರಗಳಲ್ಲಿ (ಫೋಟೋ ಕೃಪೆ: ಟೈಮ್ಸ್), ಕನ್ನಡವೊಂದರಲ್ಲೇ ಎಲ್ಲಾ ಅಭ್ಯರ್ಥಿಗಳ ಹೆಸರುಗಳು ಇದ್ದವು. ಈ ಮತಯಂತ್ರಗಳನ್ನು ನಿನ್ನೆ ದಿವಸ ಅಧಿಕಾರಿಗಳು ಸಂಬಂಧಪಟ್ಟೋರಿಗೆ ವಿವರಿಸುತ್ತಿದ್ದಾಗ, ಇದರ ಬಗ್ಗೆ ಮತ್ತು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿ, ಕಡತ, ತರಬೇತಿ ಶಿಬಿರಗಳು ಕನ್ನಡದಲ್ಲಿ ಮಾತ್ರ ಇದ್ದಿದ್ದರ ಬಗ್ಗೆ ಚುನಾವಣೆಗೆ ನಿಂತಿದ್ದ ಕೆಲ "ಸುಧಾರಣಾವಾದಿ" ಚಿಕ್ಕ ಪಕ್ಷಗಳು ತಮ್ಮ ವಿರೋಧ ವ್ಯಕ್ತಪಡಿಸಿರೋ ಸುದ್ದಿ ಇವತ್ತಿನ ಇಂಗ್ಲಿಷ್ ಪತ್ರಿಕೆಗಳಲ್ಲಿ ಬಂದಿದೆ. ಅಲ್ಲಾ ಗುರು, ಬೆಂಗಳೂರಿನ ಜನರ ಭಾಷೆಯನ್ನೇ ಕಲಿಯಲ್ಲ ಅನ್ನೋರು ಅದು ಹೇಗೆ ಆ ಜನರ ಸಮಸ್ಯೆಗಳನ್ನ ಅರ್ಥ ಮಾಡ್ಕೊತಾರೆ ? ಜನರ ಸಮಸ್ಯೆನೇ ಅರ್ಥ ಆಗದೇ ಅದು ಹೇಗೆ ಆಡಳಿತ ಸುಧಾರಿಸ್ತಾರೆ ಅನ್ನೋ ಪ್ರಶ್ನೆ ಏಳಲ್ವಾ ? ಆದರೂ ಇವರಿಗೆ ಇದು ತಪ್ಪು ಅಂತಾ ಯಾಕೆ ಅನ್ನುಸ್ತು? ಹೀಗೆ ಕನ್ನಡದಲ್ಲಿ ಮಾತ್ರಾ ಇರೋದನ್ನು ತಪ್ಪು ಅಂತಾ ಇವರುಗಳು ಯಾಕಂತಿದಾರೆ ಅಂತಾ ನೋಡೋಣ.

ಕನ್ನಡವೊಂದೇ ಯಾಕೆ ಅನ್ನೋರ ಮಾತು!
  • "ಬೆಂಗಳೂರು ಒಂದು ಕಾಸ್ಮೊಪಾಲಿಟಿನ್ ಸಮಾಜ, ಒಂದು ಬಹುಭಾಷಾ ನಗರ. ಇಲ್ಲಿ ಮತಯಂತ್ರ ಬರೀ ಕನ್ನಡದಲ್ಲಿದ್ರೆ ಕನ್ನಡೇತರರು ಬರೀ ಚಿಹ್ನೆ ನೋಡ್ಕೊಂಡು ಮತ ಹಾಕಬೇಕಾ?. ಈ ಊರಿನ ಅಭಿವೃದ್ಧಿಗೆ ಕನ್ನಡೇತರ ದುಡ್ಡು ಬೇಕು, ಆದ್ರೆ ಅವರಿಗೆ ಇಂಗ್ಲಿಷ್ ಭಾಷೆಯಲ್ಲಿ ಪಟ್ಟಿ ಯಾಕ್ ಕೊಡಲ್ಲ"
  • "ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ವಲಸಿಗರಿದ್ದಾರೆ. ಅವರಿಗೆಲ್ಲ ಕನ್ನಡ ಬರೆಯಲು, ಓದಲು ಬರಲೇಬೇಕು ಅಂತೇನಿಲ್ಲ"
  • "ಕನ್ನಡೇತರರಿಗೆ ಕನ್ನಡ ಓದೋಕೆ ಬರಲಿ ಅಂತಾ ನಿರೀಕ್ಷೆ ಮಾಡೋದು ಸರಿಯಲ್ಲ"

ಯಾಕೆ ಕನ್ನಡ ಮಾತ್ರಾ ಇತ್ತು?
  • ರಾಜ್ಯ ಚುನಾವಣಾ ಅಯೋಗ ಹೇಳಿದ್ದು "ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯನ್ವಯ, ಕರ್ನಾಟಕದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಯಂತ್ರದಲ್ಲಿ ಕನ್ನಡವೊಂದಿದ್ದರೆ ಸಾಕು. ಅದರಂತೆಯೇ ಕನ್ನಡದಲ್ಲಿ ಹಾಕಿದ್ದೇವೆ."

ಯಾಕೆ ಕನ್ನಡ ಮಾತ್ರಾ ಸಾಕು?

ಕರ್ನಾಟಕ ಸರ್ಕಾರದ ಆಡಳಿತ ಭಾಷೆ ಕನ್ನಡ. ಈ ನಾಡಿನ ಬಹುಸಂಖ್ಯಾತರು ಕನ್ನಡಿಗರು. ಅವರಿಗಾಗಿ ಇರುವ ವ್ಯವಸ್ಥೆ ಕನ್ನಡದಲ್ಲಿರಲಿ, ಜನಕ್ಕೆ ಅನುಕೂಲ ಆಗಲೀ ಎಂದು ತಾನೇ? ಹಾಗಿದ್ದಾಗ ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುತ್ತೀವಿ ಅಂತ ಬರೋ ಯಾರಿಗೆ ಆದ್ರೂ ಕನ್ನಡ ಬರಬೇಕು ಅನ್ನೋದು ಸಹಜವಾದ ನಿರೀಕ್ಷೆ ತಾನೇ? ಇವತ್ತು ಬೆಂಗಳೂರಲ್ಲಿ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಆದ್ದರಿಂದ ಇಂಗ್ಲಿಷ್ ಬೇಕು ಅನ್ನುವ ಇವರ ಮಾತಿನರ್ಥ ವಲಸೆ ಬಂದ ಎಲ್ಲರಿಗೂ ಇಂಗ್ಲಿಷ್ ಬರುತ್ತೆ ಅಂತಾನಾ? ಹಾಗಿದ್ರೆ ಬಿಹಾರದಿಂದ ಬಡಗಿಯ ಕೆಲಸ ಮಾಡೋಕೆ ಬರೋರಿಗೂ, ತಮಿಳುನಾಡಿಂದ ಕೂಲಿ ಕೆಲಸ ಮಾಡೋಕ್ ಬರೋನಿಗೂ ಇಂಗ್ಲಿಷ್ ಬರುತ್ತಾ? ಅಥವಾ ಅವರಿಗೆ ಇಂಗ್ಲಿಷ್ ಬರಲ್ಲ, ಹೀಗಾಗಿ ಅವರಿಗೂ ಅನುಕೂಲ ಮಾಡ್ ಕೊಡೋಕೆ ಹಿಂದಿ, ತಮಿಳು, ತೆಲುಗು, ಮರಾಠಿ ಹೀಗೆ ಎಲ್ಲ ದೇಶದ ಎಲ್ಲಾ 22 ಭಾಷೆನೂ ಹಾಕಿ ಅಂತಾರಾ? ಹೋಗಲಿ, ಮತಯಂತ್ರಗಳಲ್ಲಿ ಗುರುತಿನ ಸಿಹ್ನೆ ಯಾಕಿರುತ್ತೆ? ಓದಕ್ಕೆ ಬರದವರಿಗೆ ಅಂತಲೇ ತಾನೇ? ಹೀಗಿದ್ದಾಗ ಈ ರೀತಿ ಒಂದು ನಾಡಿನ ಆಡಳಿತ ಭಾಷೆಯನ್ನೇ ಪ್ರಶ್ನೆ ಮಾಡೋರು, ಆ ನಾಡಿನ ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸೋಕೆ ಅರ್ಹರಾ ಅನ್ನೋ ಮೂಲಭೂತ ಪ್ರಶ್ನೆ ಮೂಡಲ್ವಾ ಗುರು? ಇಷ್ಟಕ್ಕೂ ಕನ್ನಡನಾಡಿನ ಜನಪ್ರತಿನಿಧಿ ಆಗೋರಿಗೂ, ಆರಿಸೋರಿಗೂ ಕನ್ನಡ ಬರಬೇಕಾದ್ದು ಸರೀ ಅಲ್ವಾ ಗುರು?

ನಾಳೆ ಹೀಗೂ ಆಗಬಹುದು!

ಈ ರೀತಿ ಕನ್ನಡ ಕಲಿಯಲ್ಲ, ಕನ್ನಡ ತಿಳಿಯಲ್ಲ ಅನ್ನೋರು ನಾಳೆ ನಮ್ಮ ನಾಡಿನ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದ್ರೆ ಏನೇನ್ ಆಗಬಹುದು. ಸುಮ್ನೆ ತಮಾಷೆಗೆ ಅಂತ ಒಂದು ಚಿಕ್ಕ ಪಟ್ಟಿ:
  • ಕನ್ನಡ ಭಾವಗೀತೆ, ಜಾನಪದ ಇದೆಲ್ಲ ಇಲ್ಲಿರೋ ವಲಸಿಗರಿಗೆ ಅರ್ಥ ಆಗಲ್ಲ. ಹೀಗಾಗಿ, ಇವುಗಳ ಉಳಿವು ಬೆಳವಿಗಾಗಿ ಸರ್ಕಾರ ದುಡ್ಡು ಖರ್ಚು ಮಾಡೋದು ದೊಡ್ಡ ತಪ್ಪು, ಅದನ್ನ ಕೂಡಲೇ ನಿಲ್ಲಿಸಬೇಕು. ನಮ್ಮ ಕವಿಗಳು ಇವನ್ನು ಇಂಗ್ಲೀಷಿನಲ್ಲಿ ಬರೀಬೇಕು.
  • ಬೆಂಗಳೂರಿನ ರಸ್ತೆಗಳಿಗೆ, ಪಾರ್ಕುಗಳಿಗೆ "ಕೆಂಪೇಗೌಡ, ರಾಜ್‍ಕಮಾರ್, ವಿಶ್ವೇಶ್ವರಯ್ಯ, ಬೇಂದ್ರೆ, ಗೋಕಾಕ್, ಕುವೆಂಪು" ಅಂತೆಲ್ಲ ಹೆಸರಿಟ್ರೆ ಅದನ್ನ ಉಚ್ಚರಿಸೋದು ಕನ್ನಡೇತರರಿಗೆ ಕಷ್ಟ ಆಗುತ್ತೆ. ಹೀಗಾಗಿ ಅಂತ ಹೆಸರೆಲ್ಲ ಇನ್ ಮೇಲೆ ಇಡೋ ಹಾಗಿಲ್ಲ.
  • ಮಂತ್ರಿಗಳು, ಶಾಸಕರು ಕನ್ನಡದಲ್ಲಿ ಮಾತಾಡಿದ್ರೆ ಕನ್ನಡೇತರರಿಗೆ ಹೇಗೆ ಅರ್ಥ ಆಗುತ್ತೆ. ಇನ್ ಮೇಲೆ ಇಂಗ್ಲಿಷ್ ಬಾರದ ಮಂತ್ರಿಗಳು, ಶಾಸಕರು ಒಬ್ಬ ದುಭಾಷಿಯನ್ನು ಇಟ್ಟುಕೊಂಡೇ ತಮ್ಮ ಭಾಷಣ ಮಾಡಬೇಕು.
  • ಆಟೋ, ಬಸ್ಸುಗಳಲ್ಲಿ ಬರೀ ಕನ್ನಡ ಮಾತಾಡೋ ಸಿಬ್ಬಂದಿಯಿದ್ರೆ ಕನ್ನಡೇತರರಿಗೆ ಶಾನೆ ಕಷ್ಟ ಆಗುತ್ತೆ. ಆದ್ದರಿಂದ ಇನ್ ಮೇಲೆ ಇಂಗ್ಲಿಷ್ ಬರದೇ ಇವರಿಗೆಲ್ಲ ಲೈಸೆನ್ಸ್ ಕೊಡೋ ಹಾಗಿಲ್ಲ.
ಹೀಗೆ ಪಟ್ಟಿ ಮಾಡೋಕ್ ಹೊರಟ್ರೆ ಸಾವಿರ ಬರುತ್ತೆ. ಇವು ಭವಿಷ್ಯದಲ್ಲಿ ನಿಜವಾಗಬಾರದು ಅಂದ್ರೆ, ಆಯಾ ನಾಡಿನಲ್ಲಿ ಚುನಾವಣೆಗೆ ನಿಲ್ಲೋರು, ಅಲ್ಲಿನ ಸ್ಥಳೀಯ ಆಡಳಿತ ಭಾಷೆ ಬಲ್ಲವರಾಗಿರಬೇಕು ಅನ್ನೋ ಕಾನೂನು ಬರಬೇಕು. ಏನಂತೀರಾ ಗುರುಗಳೇ?

ಸನ್ಮಾನ್ಯ ಲೋಕಾಯುಕ್ತರೇ...ಕನ್ನಡದಲ್ಲಿ ಮಾತಾಡಿ ಅನ್ನೋದು ಬ್ಲ್ಯಾಕ್‍ಮೇಲಾ?



ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!’
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!
(ಮೇಲೆ ಬರೆದಿರೋ ಪದಗೋಳು ನಮ್ ಎಂಡ್ ಕುಡುಕ ರತ್ನಂದು. ಅಂದ್ರೆ ಜೆ.ಪಿ.ರಾಜರತ್ನಂ ಅವ್ರುದ್ದು.)

ನ್ಯಾಯಮೂರ್ತಿಗಳ ಈ ಸಿಟ್ಟು ನ್ಯಾಯಾನಾ?

ಗೌರವಾನ್ವಿತರಾದ ಶ್ರೀ ಸಂತೋಷ್ ಹೆಗ್ಡೆಯವರನ್ನು ಭಾಳ ಒಳ್ಳೇ ಪ್ರಾಮಾಣಿಕ ನ್ಯಾಯಮೂರ್ತಿಗಳು ಅಂತಾನೇ ನಮ್ಮ ಕರ್ನಾಟಕ ರಾಜ್ಯ ಸರ್ಕಾರದೋರು ಕನ್ನಡನಾಡಿನ ಸೇವೆ ಮಾಡಲಿ ಅಂತಾ ಲೋಕಾಯುಕ್ತ ಪಟ್ಟದಲ್ಲಿ ಕೂಡಿಸಿರೋದು. ಆ ಸ್ಥಾನಕ್ಕೆ ಅವರು ಘನತೆ ಗೌರವ ತಂದುಕೊಡೋ ಹಾಗೇ ನಡ್ಕೊತಿದಾರೆ ಅಂತಾ ಇಡೀ ನಾಡು ಮೆಚ್ಚಿಕೊಳ್ತಿದೆ. ಅಂದ್ರೆ ಅವ್ರು ಭ್ರಷ್ಟಾಚಾರ ತೊಡೆದು ಹಾಕಕ್ಕೆ ನಿಂತಿರೋ ದೇವರ ಹಾಗೆ ನಮ್ ಜನರ ಕಣ್ಣಗೆ ಕಾಣುಸ್ತಾ ಇದಾರೆ ಅಂದಂಗಾಯ್ತು. ಇರಲಿ ಬಿಡಿ, ಅವ್ರು ಜನುಕ್ಕೆ ದೇವರ ಥರಾ ಕಾಣಕ್ಕೂ ಮೇಲೆ ಬರೆದ ರತ್ನನ್ ಪದುಕ್ಕೂ ಅಂಥಾ ಸಂಬಂಧ ಏನಿಲ್ಲಾ, ಹಂಗೇ ನೆನಪಾಯ್ತು ಅಷ್ಟೆ.

ಮೊನ್ನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘನತೆವೆತ್ತ ನ್ಯಾಯಮೂರ್ತಿಗಳು ಭಾಷಣಾ ಮಾಡೋವಾಗ ಅದ್ಯಾವನೋ ಐನಾಸಿ ಕನ್ನಡದಲ್ಲಿ ಮಾತಾಡಿ ಅಂದುಬುಟ್ಟಾ ಅಂತಾ ಗೌರವಾನ್ವಿತರು, ಭಾರಿ ಅಪಮಾನಕ್ಕೊಳಗಾದವರಂತೆ "ನಾನ್ ಯಾವನ್ಗೂ ಹೆದ್ರಲ್ಲಾ, ನಾನು ನಿಮಗಿಂತಾ ಪಸಂದಾಗ್ ಕನ್ನಡಾ ಮಾತಾಡ್ತೀನಿ, ನಾನೂ ಕನ್ನಡಿಗ, ಆದ್ರೂ ನಾನು ಇಲ್ಲಿ ಇಂಗ್ಲಿಷಲ್ಲೇ ಮಾತಾಡೋದು. ಅದು ನನ್ನ ಹಕ್ಕು, ಇಲ್ಲಿರೋ ಹಲವರಿಗೆ ಕನ್ನಡ ಬರಲ್ಲಾ, ಅದುಕ್ಕೇ ಇಂಗ್ಲೀಷ್ ಮಾತಾಡ್ತೀನಿ" ಅಂದ್ರಂತೆ. ಹೀಗಂತಾ ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಒಂದು ಪತ್ರಿಕೆಯಲ್ಲಿ ವರದಿ ಮೂಡಿ ಬಂದಿದೆ.

ಕರ್ನಾಟಕದ ಆಡಳಿತ ಭಾಷೆ ಕನ್ನಡ ಅನ್ನಕ್ಕಾಗುತ್ತಾ?

ಕರ್ನಾಟಕದಲ್ಲಿ ಹಲವರಿಗೆ ಕನ್ನಡ ಬರಲ್ಲಾ, ಅದುಕ್ಕೇ ವಿಧಾನಸಭೇ ಕಲಾಪ, ಮುಖ್ಯಮಂತ್ರಿ ಸ್ಪೀಚು ಎಲ್ಲಾ ಇಂಗ್ಲೀಷಲ್ಲಿ ಇರಲಿ ಅನ್ನೋ ಮನಸ್ಥಿತಿ ಸರೀನಾ? ಹಾಗಾದ್ರೆ ಕರ್ನಾಟಕ ಅಂದ್ರೇನು? ಇಲ್ಲಿನ ಆಡಳಿತ ಭಾಷೆ ಕನ್ನಡಾ ಅಂದ್ರೇನು? ಕನ್ನಡ ನಾಡಲ್ಲಿ ಹಲವರಿಗೆ ಕನ್ನಡ ಬರಲ್ಲಾ ಅಂತಾ ನಮ್ಮ ಸರ್ಕಾರ ಇಂಗ್ಲೀಷಲ್ಲಿ ಆಡಳಿತ ಮಾಡೋದಕ್ ಆಗುತ್ತಾ? ಅದು ಸರೀನಾ? ಹಾಗೇನೇ ನ್ಯಾಯಮೂರ್ತಿಗಳುನ್ನ ಕನ್ನಡದಲ್ಲಿ ಮಾತಾಡಿ ಅಂತಾ ಕೇಳಿದ ವ್ಯಕ್ತಿಗೆ ಇಂಗ್ಲೀಷ್ ಬರ್ತಿಲ್ದೆ ಹಾಗೆ ಕೇಳಿರಬಹುದಲ್ವಾ? ಬರ್ತಾ ಇದ್ರೂ ಏನಂತೆ? ಬದೇ ಇರೋರಿಗೆ ಅನುಕೂಲ ಆಗಲೀ ಅಂತಾ ಕೇಳಿರಬೌದಲ್ವಾ? ಅದುಕ್ಕೇ ಬ್ಲಾಕ್‍ಮೇಲೂ ಅನ್ನೋ ಖಾರದ ಮಾತಾಡಿ ನಾ ಎದ್ ಹೋಗ್ತೀನಿ ಅಂದುಬುಟ್ರೆ ಹೆಂಗೇ ಗುರ್ರೂ? ಇಷ್ಟಕ್ಕೂ ಬೆಂಗಳೂರು ಮಹಾನಗರ ಪಾಲಿಕೆಯ ಅಭ್ಯರ್ಥಿಗಳು, ಮತದಾರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತಾಡಿ ಅಂತಾ ಕೇಳೋದು ಅಪರಾಧಾನಾ?

ಸಂಕುಚಿತತೆ ಅನ್ನೋದ್ರ ಅರ್ಥ ತಿಳಿಯದ ಮಾಧ್ಯಮ!

ಈ ಘಟನೆಗೆ ಇಂಡಿಯನ್ ಎಕ್ಸ್‍ಪ್ರೆಸ್ ಸಮೂಹದ ಪತ್ರಿಕೆ ಕೊಟ್ಟಿರೋ ಹೆಡ್ಡಿಂಗು "ಪೆರೋಕಿಯಲ್ ಡಿಮಾಂಡ್ ಆಂಗರ್ಸ್ ಹೆಗ್ಡೆ" ಅಂತಾ. ಪೆರೋಕಿಯಲ್ ಅಂದ್ರೆ ನಿಘಂಟಲ್ಲಿ ನಾನಾ ಅರ್ಥಗಳಿದ್ರೂ ಇಲ್ಲಿ ಬಳಕೆ ಆಗಿರೋದು "ಪ್ರಾದೇಶಿಕ ಸಂಕುಚಿತತೆ" ಅನ್ನೋ ಅರ್ಥದಲ್ಲಿ ಅಂತನ್ನೋದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತಾಡಿ ಅಂದ್ರೆ ಅದೆಂಗೆ ಸಂಕುಚಿತ ಮನೋಭಾವದ ಬೇಡಿಕೆ ಆಗುತ್ತೆ? ಅಂತಾ ಈ ಪತ್ರಿಕೆಯೋರುನ್ನಾ ಯಾರಾನಾ ಒಸಿ ಕೇಳಬೇಕಾಗಿದೆ ಅಲ್ವಾ ಗುರೂ! ಯಾವುದಾದ್ರೂ ರಾಜ್ಯದ ಜನಾ ನಮ್ಮ ಮೇಲೆ ಬೇರೆ ಭಾಷೆ ಹೇರಬೇಡಿ ಅನ್ನೋದೇ ದೊಡ್ಡ ಅಪರಾಧ ಅನ್ನೋಹಾಗೆ ಇವ್ರು ನಡ್ಕೋತಾ ಇರೋದನ್ನು ಒಪ್ಪಕ್ಕಾಗುತ್ತಾ ಗುರೂ?

ಬಿ.ಬಿ.ಎಂ.ಪಿ ಚುನಾವಣೇಲಿ ಕನ್ನಡೇತರ ಅಭ್ಯರ್ಥಿಗಳೆಷ್ಟು?


ಮೊನ್ನೆ ತಾನೇ ಬಿ.ಬಿ.ಎಮ್.ಪಿ ಚುನಾವಣೇಲಿ ಬೆಂಗಳೂರೆಂಬ ಕನ್ನಡಿಗರ ಕೋಟೆಯನ್ನು ಗೆಲ್ಲೋಕೆ ಯಾವ್ಯಾವ ದಂಡನಾಯಕರು ಬತ್ತಾ ಔರೆ, ಯಾವ್ಯಾವ ದೊಣೆನಾಯಕರು ಹೊಂಚು ಹಾಕ್ತಾ ಔರೆ ಅನ್ನೋದನ್ನ ಓದುದ್ವಿ. ಈ ದಂಡನಾಯಕ್ರಲ್ಲಿ ಎಷ್ಟೆಷ್ಟು ಜನರನ್ನು ನಮ್ಮ ಯಾವ ಯಾವ ಪಕ್ಷಗಳು ನಿಲ್ಲುಸ್ತಿವೆ ಅಂತನ್ನೋ ಸುದ್ದಿ ಇವತ್ತಿನ (21.03.2010ರ) ಕನ್ನಡ ಪ್ರಭದಾಗೆ ಬಂದಿರೋ ಒಂದು ವರದಿ ಹೇಳ್ತಾ ಇದೆ! ಹೊರರಾಜ್ಯದೋರು ಬಿಟ್ಟು ನಮ್ಮದೇ ನಾಡಲ್ಲಿ ಈಗಾಗಲೇ ಅಧಿಕಾರಾನೂ ಅನುಭವಿಸಿರೋ ಮೂರೂ ರಾಷ್ಟ್ರೀಯ ಪಕ್ಷಗಳು ಹೀಗೆ ದೊಡ್ಡ ಸಂಖ್ಯೆಯಲ್ಲಿ ಕನ್ನಡೇತರರಿಗೆ ಟಿಕೇಟ್ ಕೊಟ್ಟು ಬೆಂಗಳೂರಲ್ಲಿ ಕನ್ನಡ-ಕನ್ನಡಿಗರ ಹಿತಕ್ಕೆ ಎಳ್ಳುನೀರು ಬಿಡಲು ಹೊರಟಿವೆಯಾ ಅನ್ನೋ ಅನುಮಾನ ಜನರನ್ನು ಕಾಡಕ್ಕೆ ಶುರುವಾಗಿದೆ ಗುರೂ!

ಯಾರು ಎಷ್ಟ್ ಎಷ್ಟು?

ಬಿ.ಬಿ.ಎಂ.ಪಿಯಲ್ಲಿ ಈಗ ಇರೋದು 198 ವಾರ್ಡುಗಳು. ಒಟ್ಟು ಅಭ್ಯರ್ಥಿಗಳು 1342 ಜನಾ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾದಳಗಳು ಒಟ್ಟು ನಿಲ್ಲಿಸಿರೋ ಅಭ್ಯರ್ಥಿಗಳ ಸಂಖ್ಯೆ 591. ಇದರಲ್ಲಿ ಶೇಕಡಾ 27ಕ್ಕೂ ಹೆಚ್ಚಿನ ಅಭ್ಯರ್ಥಿಗಳು ಕನ್ನಡೇತರರಂತೆ. ಉರ್ದು ಭಾಷಿಕರನ್ನು ಹೊರತುಪಡಿಸಿ, ಬಿಜೆಪಿ, ಕಾಂಗ್ರೆಸ್ ತಲಾ 36 ವಾರ್ಡುಗಳನ್ನು ಕನ್ನಡೇತರರಿಗೆ ಬಿಟ್ಟು ಕೊಟ್ಟಿದ್ದರೆ, ಜೆ.ಡಿ(ಎಸ್) 28 ವಾರ್ಡುಗಳಲ್ಲಿ ಕನ್ನಡೇತರರಿಗೆ ಮಣೆ ಹಾಕಿದೆ. ಅಷ್ಟೇ ಅಲ್ಲ, ಕನಿಷ್ಟ 10 ವಾರ್ಡುಗಳಲ್ಲಿ 3 ರಾಷ್ಟ್ರೀಯ ಪಕ್ಷಗಳಿಂದ ಯಾರೇ ಗೆದ್ದರೂ, ಅದು ಕನ್ನಡದ ಸೋಲು. ಯಾಕೆ ಅಂತೀರಾ ? ಯಾಕೆಂದ್ರೆ ಈ ವಾರ್ಡುಗಳಲ್ಲಿ ಮೂರೂ ಪಕ್ಷಗಳು ಟಿಕೆಟ್ ಕೊಟ್ಟಿರುವುದು ಕನ್ನಡೇತರ ಅಭ್ಯರ್ಥಿಗಳಿಗೇ ಗುರು! ಜನತೆ ಮತ ಹಾಕೋಕೆ ಮೊದಲು ಯಾರಿಗೆ ಹಾಕಬೇಕು? ಅವರೆಷ್ಟು ನಮ್ಮ ನಾಡು ನುಡಿ ನಾಡಿಗರ ಹಿತ ಕಾಪಾಡುತ್ತಾರೆ ಅಂತೆಲ್ಲಾ ಯೋಚಿಸೋಕೆ ಇದು ಸಕಾಲ.

ಎಳ್ಳು ನೀರು: ಒಟ್ಟಾರೆ 50ಕ್ಕೂ ಹೆಚ್ಚು ವಾರ್ಡುಗಳಿಂದ ಕನ್ನಡೇತರರು ಆಯ್ಕೆಯಾಗಿ ಬರುವ ಸಾಧ್ಯತೆಗಳಿವೆ ಎಂದು ವರದಿ ಹೇಳುತ್ತೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕನ್ನಡೇತರರು ಆಯ್ಕೆಯಾಗಿ ಬಂದ್ರೆ, ಆ ಸದಸ್ಯರ ಮುಲಾಜಿನಲ್ಲಿ ಬೆಂಗಳೂರಿನ ಆಡಳಿತ ನಡೆದರೆ, ಬೆಂಗಳೂರಲ್ಲಿ ಕನ್ನಡ ಆಡಳಿತ ಭಾಷೆ ಮಾಡೋದಾಗಲಿ, ಕನ್ನಡ-ಕನ್ನಡಿಗರ ಹಿತ ಕಾಯೋ ಕೆಲಸವಾಗಲಿ ನಡೆಯೋದು ಸಾಧ್ಯಾನಾ ಅಂತಾ ಕನ್ನಡದ ಮನಸ್ಸುಗಳು ಕೇಳ್ತಾ ಇವೆ ಗುರೂ!

ರಾಜ್ಯ ಚುನಾವಣಾ ಆಯೋಗ: ಇಂಗ್ಲಿಷ್ ಬೆಲ್ಲ, ಕನ್ನಡ ಬೇವಾ?


ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣಾ ಸಮಯ. ಚುನಾವಣೆಯ ವೇಳಾಪಟ್ಟಿ, ಚುನಾವಣೆ ನೀತಿ ಸಂಹಿತೆ, ಚುನಾವಣಾಧಿಕಾರಿಗಳ ಸಂಪರ್ಕ ಮಾಹಿತಿ, ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅಭ್ಯರ್ಥಿ ಕೈಪಿಡಿ, ಮತದಾರರ ಪಟ್ಟಿ ಹೀಗೆ ಚುನಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನ ರಾಜ್ಯ ಚುನಾವಣಾ ಆಯೋಗ ತನ್ನ ಮಿಂಬಲೆ ತಾಣದಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳಿಗೆ ಅನುಕೂಲ ಆಗಲಿ ಅಂತ ಇವರು ಮಾಡಿರೋ ಈ ಕೆಲಸಾ ಏನೋ ಒಳ್ಳೆದೇ, ಆದ್ರೆ ಇದು ಮುಟ್ಟಬೇಕಾದ ಜನರನ್ನ ಪರಿಣಾಮಕಾರಿಯಾಗಿ ಮುಟ್ಟುತ್ತೆ ಅನ್ನೋದು ಮಾತ್ರಾ ಸಕತ್ ಡೌಟು ಗುರು, ಯಾಕಂದ್ರೆ ಈ ತಾಣದಲ್ಲಿ ಎಲ್ಲ ಮಾಹಿತಿ ಬರೀ ಇಂಗ್ಲಿಷ್ ಅಲ್ಲಿ ಕೊಟ್ಟವ್ರೆ, ಕನ್ನಡಕ್ಕೆ ಪೂರ್ತಿ ಕೊಕ್ ಕೊಟ್ಟವ್ರೆ.

ಈ ತಾಣ ಯಾರಿಗಾಗಿ ?
ಇವರು ಇಡೀ ತಾಣಾನಾ ಇಂಗ್ಲಿಷ್ ನಲ್ಲಿ ಮಾಡಿದಾಗ ಹುಟ್ಟೋ ಮೊದಲನೇ ಪ್ರಶ್ನೆ "ಈ ತಾಣ ಯಾರಿಗಾಗಿ? " ಅನ್ನೋದು. ಬರೀ ಬಿ.ಬಿ.ಎಮ್.ಪಿ ಒಂದೇ ಅಲ್ಲ, ಕರ್ನಾಟಕದಲ್ಲಿ ನಡೆಯೋ ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ತಾಲೂಕು, ಜಿಲ್ಲಾ ಪಂಚಾಯ್ತಿ ಸೇರಿದಂತೆ ಎಲ್ಲ ಮುಖ್ಯ ಚುನಾವಣೆಗಳ ಬಗ್ಗೆಯೂ ಸಂಬಂಧಿಸಿದ ಮಾಹಿತಿಯನ್ನು ಈ ತಾಣ ಪೂರೈಸುತ್ತೆ. ಈ ಎಲ್ಲ ಚುನಾವಣೇಲಿ ಮತ ಹಾಕೋನು, ಚುನಾವಣೆಗೆ ನಿಲ್ಲೋನು ಯಾರ್ ಗುರು? ಕನ್ನಡಿಗ ತಾನೇ? ಹಾಗಿದ್ದಾಗ, ಇಡೀ ನಾಡಿನ ಚುನಾವಣಾ ಮಾಹಿತಿ ಕೊಡೋ ಈ ತಾಣ, ಸಹಜವಾಗಿ ಮೊದಲು ಕನ್ನಡದಲ್ಲಿ ತಾನೇ ಬರಬೇಕಿತ್ತು ? ಈ ರೀತಿ ಕನ್ನಡ ಕಡೆಗಣಿಸೋರ ತಲೇಲಿ, ಅಂತರ್ಜಾಲದಲ್ಲಿ ಇಂಗ್ಲಿಷ್ ಅಂದ್ರೆ ಬೆಲ್ಲ, ಕನ್ನಡ ಅಂದ್ರೆ ಬೇವು ಅನ್ನೋ ಮನಸ್ಥಿತಿ ಇರೋದು ಕಾಣಸ್ತಿಲ್ವಾ ಗುರು ?

ಕೊನೆಹನಿ
ಈ ತಾಣದಲ್ಲಿ ಅದ್ಯಾವ್ ಕಾಲದಿಂದಲೂ "Kannada Version will be Released Shortly" ಅನ್ನೋ ಒಂದು ಸಾಲಿದೆ. ಅದು ನಿಜ ಆಗೋಕೆ ಇನ್ನೆಷ್ಟು ಯುಗಾದಿ ಬರಬೇಕೋ?

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.
ಈ ಸೈಟಲಿ ಕನ್ನಡವದು ಬರಲು ಯಾಕೋ ಅಳುತಿದೆ...!!

ಬಿಬಿಎಂಪಿ: ರಾಷ್ಟ್ರೀಯ ಪಕ್ಷಗಳಿಂದ ಕನ್ನಡೇತರರ ಓಲೈಕೆ!


ಕೇಳ್ರಪ್ಪೋ ಕೇಳಿ! ಕನ್ನಡಿಗರ ಹೆಮ್ಮೆಯ, ಅಂದಿನ ಕೆಂಪೇಗೌಡರು ಕಟ್ಟಿದ, ಇಂದಿನ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ ಆಗೈತೆ. ಈ ಚುನಾವಣೆಯಲ್ಲಿ ಗೆದ್ದೋರು ಈ ಬೆಂಗಳೂರನ್ನು ಆಳ್ತಾರೆ ಅನ್ನೋದು ಗೊತ್ತಿರೋ ಇಚಾರಾನೆ. ಈ ಬೆಂಗಳೂರೆಂಬ ಕನ್ನಡಿಗರ ಕೋಟೆಯನ್ನು ಗೆಲ್ಲೋಕೆ ಯಾವ್ಯಾವ ದಂಡನಾಯಕರು ಬತ್ತಾ ಔರೆ, ಯಾವ್ಯಾವ ದೊಣೆನಾಯಕರು ಹೊಂಚು ಹಾಕ್ತಾ ಔರೆ ಗೊತ್ತಾ?

ನಾವು ಯಾರಿಗೇನು ಕಮ್ಮಿ?

ಇಂಗಂತಿರೋದು ನಮ್ಮ ರಾಷ್ಟ್ರೀಯ ಪಕ್ಷಗಳು. ಭಾರತೀಯ ಜನತಾ ಪಕ್ಷ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ನಿಲ್ಸಿದ್ ನಾವೇ, ಅದ್ಕೆ ತಮಿಳ್ರೆಲ್ಲಾ ನಮಗೇ ಓಟ್ ಹಾಕಿ ಅನ್ನೋಕ್ ಒಂಟವ್ರಂತೆ. ಅವ್ರು ನಿಲ್ಲುಸ್ವಾಗಾ ನಾವೂ ಸುಮ್ಕೆ ತೆಪ್ಪುಗಿದ್ವಿ ಅದ್ಕೆ ನಮ್ಗ್ ಓಟ್ ಹಾಕಿ ಅಂತಾ ಕಾಂಗ್ರೆಸ್ಸು ಅಂದೀತಂತೆ. ಇನ್ನು ದಳದೋರು ಓದ್ಸಲಾ ಶಾಂತಿನಗರದಲ್ಲಿ ತಮಿಳಿನಾಗೇ ನಾವು ಪ್ರಚಾರಾ ಮಾಡಿದ್ದು ಈಗ್ಲೂ ಬೇಜಾನ್ ತಮಿಳ್ರುಗೆ ಟಿಕೆಟ್ ಕೊಟ್ಟಿದೀವಿ ನಮಗ್ ಓಟ್ ಹಾಕಿ ಅಂದಾರಂತೆ. ಅಯ್ಯಾ! ನೀವು ಬೆಂಗಳೂರಲ್ ಕುಂತ್ಕೊಂಡು ತಮಿಳ್ರುಗ್ ಸೀಟು ಕೊಟ್ಟೆ ಸೀಟು ಕೊಟ್ಟೆ ಅಂದ್ರೆ ಆಯ್ತುದಾ? ನಾವು ಇಲ್ಲಿ... ಚೆನ್ನೈಯಿಂದಾನೆ ನಮ್ ದಂಡು ಕಳುಸ್ತೀವಿ ಅಂತಾ ಅಣ್ಣಾ ಡಿ.ಎಂ.ಕೆ ಮತ್ತು ಡಿ.ಎಂ.ಕೆ ಪಕ್ಷದೋರು ಕ್ಯಾಂಡಿಡೇಟ್ ಹಾಕ್ತಾ ಔರಂತೆ. ಇಲ್ಲಿ ಕನ್ನಡದ್ ಐಕ್ಳುಗಳು ಮಾತ್ರಾ ಬಾರತಾನ ಕಾಪಾಡಕ್ಕೆ ಈ ರಾಷ್ಟ್ರೀಯ ಪಕ್ಷದೋರಿಂದಾನೇ ಸಾಧ್ಯಾ, ಇದು ಬಾರತಾ, ಯಾರು ಎಲ್ಲಾದ್ರೂ ಚುನಾವಣೆಗ್ ನಿಂತ್ಕೋಬೌದು, ನಾವ್ ಕಣ್ಮುಚ್ಕೊಂಡು ಓಟ್ ಹಾಕುದ್ರಾಯ್ತು ಅನ್ನೋ ಹಂಗೇ ಕುಂಬಕರ್ಣನ್ ಜಪಾ ಮಾಡ್ಕೊಂಡು ಮಲುಕ್ಕೊಂಡವ್ರಂತೆ. ಅಷ್ಟುಕ್ಕೂ ಕಾರ್ಪೋರೇಷನ್ ಆಪೀಸಿನ ಬಾಗ್ಲಾಗೆ ಕನ್ನಡದಲ್ಲಿ ಬರೆದವ್ರೇ, ಅಷ್ಟು ಸಾಲ್ದಾ ಅಂತಾ ರಗ್ ಎಳ್ಕಂಡವ್ರೇ ಗುರೂ!

ಹಂಪಿ: ಕನ್ನಡ ವಿಶ್ವವಿದ್ಯಾಲಯದ ನೆಲವೇ ಬೇಕೆಂಬ ಹಟ ಬೇಡ!


ಕರ್ನಾಟಕದ ಬಿಜೆಪಿ ಸರ್ಕಾರ ಇತ್ತೀಚಿಗೆ ಯಾಕೋ ಹಂಪಿಯಲ್ಲಿರೋ ಕನ್ನಡ ವಿಶ್ವವಿದ್ಯಾಲಯದ ನೆಲದ ಮೇಲೆ ಕಣ್ಣು ಹಾಕಿಬಿಟ್ಟಿದೆಯಲ್ಲಾ! ಈಗ ಇದು ವಿಜಯನಗರ ಪುನಶ್ಚೇತನಾ ಪ್ರತಿಷ್ಠಾನ ಎನ್ನೋ ಹೆಸರಿನ ಒಂದು ಟ್ರಸ್ಟಿಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರೋ ಎಂಬತ್ತು ಎಕರೆ ಜಮೀನನ್ನು ಕೊಡಕ್ಕೆ ಮುಂದಾಗಿದೆ. ಈ ಪರಭಾರೆ ಬಗ್ಗೆ ಸಾಕಷ್ಟು ವಿರೋಧಗಳು ಹುಟ್ಟಿದೆ. ಇತ್ತೀಚಿಗೆ ರಾಜ್ಯಪಾಲರು ಕೂಡಾ ಸರ್ಕಾರಕ್ಕೆ ಬೇಡಾ ಅನ್ನೋ ಸಲಹೆ ಸೂಚನೆ ನೀಡಿದ್ದಾರೆ.

ಯಾಕೆ ಈ ಪರಭಾರೆಗೆ ವಿರೋಧ?
1990ನೇ ಇಸವಿಯಲ್ಲಿ ಹಂಪಿಯಲ್ಲಿ ಸುಮಾರು 800 ಎಕರೆ ಪ್ರದೇಶದಲ್ಲಿ, ಗುಡ್ಡಗಾಡುಗಳ ನಡುವೆ ಆರಂಭವಾದ ಕನ್ನಡ ವಿಶ್ವವಿದ್ಯಾಲಯ ಇಡೀ ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಇಲ್ಲಿ ಕಲಿಕೆಗಿಂತ ಹೆಚ್ಚಿನ ಮಹತ್ವವನ್ನು ಅಧ್ಯಯನ, ಸಂಶೋಧನೆಗಳಿಗೆ ಕೊಡಲಾಗಿದ್ದು ನಾಳೆಯ ದಿನಕ್ಕೆ ಉನ್ನತ ಶಿಕ್ಷಣವನ್ನು ಕನ್ನಡದಲ್ಲೇ ತರಬೇಕು ಅನ್ನುವ ಹೊಣೆಯನ್ನೂ ಹೊರಿಸಲಾಗಿದೆ. ಈಗ ಕನ್ನಡ ವಿಶ್ವವಿದ್ಯಾಲಯಕ್ಕೆ ಸೇರಿರೋ ಜಾಗಾನೆ ಈ ಟ್ರಸ್ಟಿಗೆ ವಹಿಸಬೇಕು ಅಂತಾ ಸರ್ಕಾರ ಯಾಕೆ ಹಟ ಹಿಡಿದಿದೆ? ಅನ್ನೋದು ಯಕ್ಷ ಪ್ರಶ್ನೇನೆ ಆಗಿದೆ. ಮಾನ್ಯ ಮಂತ್ರಿಗಳು ವಿಶ್ವವಿದ್ಯಾಲಯ ಯೋಗ್ಯವಾಗಿ ಕೆಲಸ ಮಾಡ್ತಿಲ್ಲಾ, ಅದ್ಕೇ ಟ್ರಸ್ಟ್ ಮಾಡಿದೀವಿ ಅನ್ನೋ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಹೇಳಿದ್ದು ನಿಜವೇ ಆಗಿದ್ದ ಪಕ್ಷದಲ್ಲಿ ಸರ್ಕಾರ ವಿವಿಯನ್ನು ಹೇಗೆ ಬಲಗೊಳಿಸಬೇಕು ಅಂತಾ ಯೋಚ್ಸಿ ಅದುಕ್ ಬೇಕಾದ ಅನುದಾನ ಮತ್ತು ಜಮೀನುಗಳನ್ನು ಕೊಡಬೇಕೇ ಹೊರತು ಇರೋದನ್ನು ಕಿತ್ತುಕೋಬಾರದು!

ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸಗಳು!
ಇಷ್ಟುಕ್ಕೂ 800 ಎಕರೆ ಪ್ರದೇಶ ಈ ವಿಶ್ವವಿದ್ಯಾಲಯಕ್ಕೆ ಯಾಕೆ ಬೇಕು ಅನ್ನೋದಾದ್ರೆ ಇದು ನಮ್ಮ ನಾಡಿನ ನಾಳೆಗಳನ್ನು ರೂಪಿಸಬಲ್ಲ ಸಾಮರ್ಥ್ಯ ಇರೋ ಶಕ್ತಿಕೇಂದ್ರ. ಇಲ್ಲಿಂದಲೇ ಕರ್ನಾಟಕದ ಏಳಿಗೆಯ ಬೆಳಕಿರಣಗಳು ಹೊಮ್ಮಬೇಕು. ಆ ಕೆಲಸಗಳು ನಮ್ಮ ನುಡಿಯ ಅಧ್ಯಯನ, ನುಡಿಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್) ನಂತಹ ಮಹತ್ವದ ಕೆಲಸಗಳ ಮೂಲಕ ಆಗಬೇಕು. ಸುಮ್ನೆ ಈ ಕೆಳಗಿನ ಪಟ್ಟಿ ನೋಡಿ:

೧. ಹಳೆಗನ್ನಡ ಮತ್ತು ಹೊಸಗನ್ನಡದ ಕೊಂಡಿಯ ಬಗ್ಗೆ ಅಧ್ಯಯನ.
೨. ನುಡಿಯರಿಮೆ (ಭಾಷಾ ವಿಜ್ಞಾನ).
೩. ಪದ ಟಂಕಸಾಲೆ - ಹೊಸ ಪದಗಳನ್ನು ಕಟ್ಟುವ ವಿಭಾಗ.
೪. ಕನ್ನಡ ಭಾಷಾ ಸ್ವರೂಪ/ ವ್ಯಾಕರಣ ಶಾಸ್ತ್ರದ ಅಧ್ಯಯನ.
೫. ದ್ರಾವಿಡ ಭಾಷೆಗಳ ಜೊತೆ ಕನ್ನಡದ ಸಂಬಂಧದ ಅಧ್ಯಯನ.
೬. ತಂತ್ರಜ್ಞಾನ/ ಉನ್ನತ ಕಲಿಕೆ ತರ್ಜುಮೆ.
೭. ಪಠ್ಯ ಪುಸ್ತಕ ರಚನೆ.
೮. ಕಲಿಕೆ, ಮಾರುಕಟ್ಟೆ, ಗ್ರಾಹಕಸೇವೆ, ಆಡಳಿತಗಳಲ್ಲಿ ಬಳಸಬೇಕಾದ ಭಾಷಾ ಸ್ವರೂಪ.
೯. ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಘಂಟು.
೧೦. ಕನ್ನಡದ ಒಳನುಡಿಗಳ ಅಧ್ಯಯನ.
೧೧. ನುಡಿ ಮತ್ತು ಪ್ರದೇಶಗಳ ಅನುಬಂಧದ ಅಧ್ಯಯನ.
೧೨. ನಾಡಿಗೆ ನುಡಿ ಹಮ್ಮುಗೆ (ಲಾಂಗ್ವೇಜ್ ಪ್ಲಾನಿಂಗ್).
೧೩. ವ್ಯವಸಾಯ, ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆಯಂತಹ ಕುಶಲ ಕೆಲಸಗಳ ಅರಿಮೆಯ ದಾಖಲಿಸುವಿಕೆ.
೧೪. ಶಾಸ್ತ್ರೀಯ ಭಾಷೆಯ ಅನುದಾನದ ಸದ್ಬಳಕೆಗೆ ಯೋಜನೆಗಳು.

ಅಬ್ಬಬ್ಬಾ... ಎಷ್ಟೆಲ್ಲಾ ಕೆಲಸಗಳನ್ನು ಮಾಡಬಲ್ಲ ಸಾಧ್ಯತೆ ಅವಕಾಶಗಳು ಇವೆಯಲ್ಲವೇ? ಈ ದಿಕ್ಕಿನಲ್ಲಿ ಸರ್ಕಾರ ಯೋಚಿಸಿದರೆ ಗತವೈಭವದ ನಕಲು ಸೃಷ್ಟಿ ಮಾಡೋಕೆ ಸುರಿದ/ ಸುರಿಯಲು ಮುಂದಾಗಿರುವ ನೂರಾರು ಕೋಟಿ ರೂಪಾಯಿ ಉಳಿಯುತ್ತೆ. ಜನರ ತೆರಿಗೆ ಹಣ ಸದ್ಬಳಕೆ ಆಗುತ್ತೆ. ರಾಜ್ಯ ಸರ್ಕಾರ ನಾಡಿಗೆ ಏನಾದ್ರೂ ಒಳ್ಳೇದು ಮಾಡಬೇಕು ಅಂತಾ ಪ್ರಾಮಾಣಿಕವಾಗಿ ಯೋಚಿಸಿದ್ದಲ್ಲಿ ಇನ್ನೊಂದು ನೂರಿನ್ನೂರು ಎಕರೆ ಭೂಮೀನಾ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಡಲಿ, ಕನ್ನಡದ ಜನರ ಬದುಕು ಕಟ್ಟಿಕೊಡಬಲ್ಲ ಮೇಲಿನ ಕೆಲಸಗಳಿಗಾಗಿ ಸರಿಯಾಗಿ ಅನುದಾನ ಕೊಡಲಿ, ಕನ್ನಡದ ಕೆಲಸಗಳಿಗಾಗಿ ಯೋಗ್ಯರಾದ ಸಮರ್ಥರಾದ ಸಿಬ್ಬಂದಿಯನ್ನು ನೇಮಿಸಲಿ, ಮಹಾಪಂಡಿತರನ್ನು ಹುಟ್ಟುಹಾಕಲು ಕಾರಣವಾಗಲಿ...

ಹಾಗಾದ್ರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಲ್ಲ ಈ ಪುನಶ್ಚೇತನ, ನಕಲು ನಿರ್ಮಾಣಗಳು, ಥೀಮ್ ಪಾರ್ಕುಗಳು ಬೇಡ್ವಾ ಅಂತೀರಾ? ಆ ಚರ್ಚೆ ಬೇರೆಯಾಗಿ ನಡೆಯಲಿ. ಆದರೆ ಆ ಯೋಜನೆಗೆ ಕನ್ನಡ ವಿಶ್ವವಿದ್ಯಾಲಯಕ್ಕೆ ಕೊಟ್ಟಿರೋ ಭೂಮೀನೇ ಬೇಕು ಅನ್ನೋ ಹಟಾ ಯಾಕೆ? ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡೋದಕ್ಕಾಗಿ ಕನ್ನಡದ ನುಡಿಗುಡಿಯ ಹೊನ್ನಗಂಟೆ ಕೀಳುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಕೈಬಿಡಲಿ.

ಭಾರತ - ಒಂದು ಅಲೆಮಾರಿಗಳ ದೇಶವಾ?

ಭಾರತ ದೇಶಕ್ಕೆ ಆಡಳಿತ ಭಾಷೆ ಯಾವುದಪ್ಪ ಇರಬೇಕು ಅನ್ನೋ ಪ್ರಶ್ನೆಗೆ ಕೆಲವು ಅಲ್ಪಮತಿಗಳು ಕೊಡೊ ಉತ್ತರ ಹಿಂದಿ ಎಂದು. ದೇಶಕ್ಕೆ ಒಂದು ಭಾಷೆ ಅಂತ ಇಲ್ಲದೇ ಹೋದ್ರೆ, ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗೊರಿಗೆ ಎಷ್ಟು ಅನಾನುಕೂಲ ಆಗಲ್ವಾ ಅಂತ ಪ್ರಶ್ನೆ ಮಾಡೋರು ಇದ್ದಾರೆ. ಹಾಗಿದ್ರೆ, ನಿಜಕ್ಕೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆ ಪ್ರಮಾಣದಲ್ಲಿ ವಲಸೆ ಆಗ್ತಿದ್ಯಾ? ವಲಸಿಗರಿಗಾಗಿ ವ್ಯವಸ್ಥೆ ಕಟ್ಟಬೇಕು ಅನ್ನೋದು ಸರಿ ಅನ್ನೋರಿಗೆ ಉತ್ತರವಾಗಿ ಕರ್ನಾಟಿಕ್ ಬ್ಲಾಗಿನಲ್ಲಿ ಬಾ.ರಾ. ಕಿರಣ ಅವರು ಬರೆದಿರೋ ಅಂಕಣದ ಕನ್ನಡ ಸಾರಾಂಶ ಇಲ್ಲಿದೆ ಗುರು.
- ಸಂಪಾದಕ, ಏನ್ ಗುರು

ದೊಡ್ಡ ದೊಡ್ಡ ಊರುಗಳಲ್ಲಿರೋ, ಅದರಲ್ಲೂ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕಲ್ಕತ್ತಾದಂತಹ ಊರುಗಳಲ್ಲಿ ಬೇರೆ ಬೇರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವವರಲ್ಲಿ, ಇಂಗ್ಲಿಷ್ ಮಾಧ್ಯಮಗಳಲ್ಲಿ ಕೆಲಸ ಮಾಡೋರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನಪ್ಪ ಅಂದ್ರೆ ಭಾರತ ಅನ್ನೋದು ಒಂದು ಅಲೆಮಾರಿಗಳ ದೇಶ, ಇಲ್ಲಿರೋ ಜನಕ್ಕೆ ಒಂದು ಊರಿಂದ ಇನ್ನೊಂದ್ ಊರಿಗೆ, ಒಂದು ರಾಜ್ಯದಿಂದ ಇನ್ನೊಂದ್ ರಾಜ್ಯಕ್ಕೆ ವಲಸೆ ಹೋಗೊದು ಬಿಟ್ರೆ ಬೇರೆ ಕೆಲ್ಸಾನೇ ಇಲ್ಲ ಅನ್ನೋದು.

ಇವರ ತಲೇಲಿರೋ ಇಂತಹ ತಪ್ಪು ಕಲ್ಪನೆಯಿಂದ ಇವರ ತಲೇಲಿ ಹುಟ್ಟಿರೋ ಭಾರತದಲ್ಲಿ ಕನ್ನಡ, ಮರಾಠಿ, ತಮಿಳು, ಬೆಂಗಾಳಿಯಂತಹ ನುಡಿಗಳಿಗೆ ಯಾವ ಬೆಲೆಯೂ ಇಲ್ಲ, ನೆಲೆಯೂ ಇಲ್ಲ. ಇವರ ಕಲ್ಪನೆಯ ಈ ಅಲೆಮಾರಿಗಳ ದೇಶದಲ್ಲಿ ಹಿಂದಿಗೆ ಮಾತ್ರ ಈ ದೇಶಾನಾ ಬೆಸೆಯೋ ಶಕ್ತಿ ಇರೋದು. ಇವರ ಕಲ್ಪನೆಯ ಭಾರತದಲ್ಲಿ ಅಲ್ಲಿನ ಕಲಿಕೆ, ಆಡಳಿತ, ಉದ್ಯೋಗವಕಾಶಗಳಿರೊದೇ ವಲಸಿಗರ ಅನುಕೂಲಕ್ಕಾಗಿ (ಅದರಲ್ಲೂ ವಿಶೇಷವಾಗಿ ಹಿಂದಿ ಭಾಷಿಕ ವಲಸಿಗರಿಗಾಗಿ). ಇವರ ಕಲ್ಪನೆಯ ಭಾರತದಲ್ಲಿ ಹಿಂದಿ ಭಾಷಿಕರ ಮುಂದೆ ಸ್ಥಳೀಯರ ಭಾರತೀಯತೆ ಸಪ್ಪೆ ಸಪ್ಪೆ.

ಹಾಗಿದ್ರೆ ಬನ್ನಿ 2001ರ ಜನಗಣತಿ ಪ್ರಕಾರ ಭಾರತದಲ್ಲಿ ಕಂಡು ಬಂದಿರುವ ವಲಸೆ ಅಂಕಿಅಂಶ ನೋಡೊಣ. ಅರಗಿಸಿಕೊಳ್ಳೊಕೆ ಕಷ್ಟ ಅನ್ನಿಸೋ ಸತ್ಯ ಏನು ಅನ್ನೋದನ್ನ ಸ್ವಲ್ಪ ನೋಡೊಣ.

2001ರ ಜನಗಣತಿಯ ಆಧಾರ ಇಟ್ಕೊಂಡು ಕೆಲವು ಲೆಕ್ಕಾಚಾರ ಹಾಕಿ, ತಾನು ಹುಟ್ಟಿರೋ ಊರು, ಜಿಲ್ಲೆ ಇಲ್ಲಾ ರಾಜ್ಯದಲ್ಲೇ ಉಳಿದುಕೊಂಡಿರೋ ಭಾರತಿಯರ ಸಂಖ್ಯೆ ಏನಿರಬಹುದು ಅಂತಾ ನೋಡಿದ್ರೆ ಕಾಣಿಸೋದು ಇಂತಿದೆ.(ಪ್ರತಿ ಸಾವಿರ ಭಾರತೀಯರಿಗೆ ಎಂದು ಅಂದಾಜಿಸಿಲಾಗಿದೆ):

ಇದರಂತೆ, ಜನಗಣತಿ ತಂಡ ಮಾತನಾಡಿಸಿದ ಪ್ರತಿ ಸಾವಿರ ಜನರಲ್ಲಿ 953 ಜನ ಗಣತಿ ನಡೆದ ಆ ರಾಜ್ಯದಲ್ಲೇ ಹುಟ್ಟಿರೋದು. ಅವರು ಬೇರೊಂದು ರಾಜ್ಯದಿಂದ ವಲಸೆ ಬಂದಿರೋರಲ್ಲ. ಹಾಗೆಯೇ, ಜನಗಣತಿ ತಂಡ ಮಾತನಾಡಿಸಿದ ಪ್ರತಿ 1000 ಜನರಲ್ಲಿ 878 ಜನ ಗಣತಿ ನಡೆದ ಅದೇ ಜಿಲ್ಲೆಯಲ್ಲೇ ಹುಟ್ಟಿರೋದು. ಕೊನೆಯಲ್ಲಿ, ಪ್ರತಿ 1000 ಜನರಲ್ಲಿ ಸುಮಾರು 701 ಜನ ಗಣತಿ ನಡೆದ ಹಳ್ಳಿಯಲ್ಲೇ ಹುಟ್ಟಿರೋದು ! ಇವರು ತಮ್ಮ ಜಿಲ್ಲೆಯಲ್ಲೇ ಇನ್ನೊಂದು ಜಾಗಕ್ಕೆ ವಲಸೆ ಹೋಗಿಲ್ಲ !

ಈ ಮೇಲಿನ ಅಂಕಿಅಂಶ ಭಾರತ ಅನ್ನೋದು ಅಲೆಮಾರಿಗಳ ದೇಶವಲ್ಲ ಅನ್ನೋದನ್ನ ಒತ್ತಿ ಹೇಳುತ್ತೆ. ನೆಲೆಸಿಗನನ್ನು ಕಡೆಗಣಿಸಿ, ವಲಸಿಗನಿಗಾಗಿ ಒಂದು ನಾಡಿನ ಕಲಿಕೆ, ಆಡಳಿತ, ಉದ್ಯೋಗವಕಾಶ ಕಟ್ಟಬೇಕು ಅನ್ನೋದು ತಪ್ಪು ನಿರ್ಧಾರ ಅಂತ ಒತ್ತಿ ಹೇಳುತ್ತೆ. ಅಷ್ಟೇ ಅಲ್ಲ, ಭಾರತ ಸರ್ಕಾರವೂ ಸೇರಿದಂತೆ ಹಲವರಲ್ಲಿರೋ, ಹಿಂದಿ ಬಿಟ್ಟು ಬೇರಾವ ಭಾಷೆಯೂ ಭಾರತವನ್ನು ಪ್ರತಿನಿಧಿಸಲ್ಲ ಅನ್ನೋ ನಂಬಿಕೆ ಎಷ್ಟು ಪೊಳ್ಳು ಅನ್ನೋದನ್ನು ಎತ್ತಿ ತೋರಿಸುತ್ತೆ.

ಇನ್ನೊಂಚೂರು ಇದರ ಆಳಕ್ಕೆ ಇಳಿದು, ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಿಜಕ್ಕೂ ವಲಸೆ ಹೋಗೊ ಜನರಿಗೂ, ತಮ್ಮ ಹುಟ್ಟು ರಾಜ್ಯದಲ್ಲೇ ನೆಲೆಸೋ ಸ್ಥಳೀಯರ ಸಂಖ್ಯೆಗೂ ಹೋಲಿಕೆ ಮಾಡಿದ್ರೆ ಕಾಣಿಸೋದು ಇಂತಿದೆ. (ನೆನಪಿರಲಿ, ಇಲ್ಲಿ ವಲಸಿಗ ಅಂದ್ರೆ ಒಂದು ಭಾಷೆ ಮಾತಾಡೋ ರಾಜ್ಯದ ಗಡಿ ದಾಟಿ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗೋನು. ಹಾಗೇ, ಸ್ಥಳೀಯ ಅಂದ್ರೆ ಗಣತಿ ಮಾಡ್ತೀರೋ ರಾಜ್ಯದಲ್ಲೇ ಹುಟ್ಟಿದವನು)

ಮೇಲೆ ಯಾವ ಅಂಕಿಅಂಶ ಹೆಚ್ಚು ಅನ್ನೋದನ್ನ ಬಾಲವಾಡಿಲೀ ಓದ್ತಿರೋ ಒಬ್ಬ ಪುಟ್ಟ ಹುಡುಗಾ ಕೂಡಾ ಹೇಳಬಲ್ಲ. ಇದನ್ನ ನೋಡಿದ ಮೇಲೆ, ದಿಲ್ಲಿ ದೊರೆಗಳು ಯಾರನ್ನ ಗಮನದಲ್ಲಿಟ್ಟುಕೊಂಡು ತಮ್ಮ ನೀತಿ-ನಿಯಮ ರೂಪಿಸಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳೊದು ನಿಜಕ್ಕೂ ಅಂತಾ ಕಷ್ಟ ಏನಲ್ಲ. ಆದ್ರೆ ಏನ್ ಮಾಡೋದು, ದಿಲ್ಲಿ ದೊರೆಗಳಿಗಿರೋ ಯೋಚನೆಗಳೇ ಬೇರೆ ಅನ್ಸುತ್ತೆ. ದಿಲ್ಲಿದೊರೆಗಳನ್ನ, ಹಾಗೇ ದೊಡ್ಡ ಊರುಗಳಲ್ಲಿರೋ ನಮ್ಮ ಕೆಲವು ಗೆಳೆಯರನ್ನ ಇನ್ನೊಮ್ಮೆ ಬಾಲವಾಡಿಗೋ, ಅಂಗನವಾಡಿಗೋ ಸೇರಸಿದ್ರೆ ಇನ್ನೊಂದ್ ಸ್ವಲ್ಪ ತಿಳುವಳಿಕೆ ಬರಬಹುದೆನೋ

ಈ ಜಾಹೀರಾತು ರೂಪಿಸಿದ ಬೃಹಸ್ಪತಿ ಯಾರಪ್ಪಾ?


ಇದು ಇವತ್ತಿನ ಅಂದ್ರೆ ದಿನಾಂಕ ೦೪.೦೩.೨೦೧೦ರ ಕನ್ನಡಪ್ರಭದಲ್ಲಿ ಬಂದಿರೋ ಜಾಹೀರಾತು. ಮಿನಿಸ್ಟ್ರಿ ಆಫ್ ಓವರ‍್ಸೀಸ್ ಇಂಡಿಯನ್ ಅಫೇರ್ಸ್ ಅನ್ನೋ ಕೇಂದ್ರಸರ್ಕಾರಿ ಮಂತ್ರಾಲಯದೋರು ನಮ್ ಜನುಕ್ ಭೋ ಉಪಕಾರ ಮಾಡಕ್ಕೆ ಅಂತಾ ಈ ಒಂದು ಜಾಹಿರಾತನ್ನು ಹಾಕ್ಸಿದಾರೆ!
ಹಿಂದಿ ಹೇರಿಕೆಯೋ? ಸೋಮಾರಿತನಾನೋ?

ಇದುನ್ ಓದಕ್ಕೆ ಕನ್ನಡ ಓದಕ್ ಬರೋ ಎಲ್ರುಗೂ ಸಾಧ್ಯ... ಅದೇ ತಾನೆ ಒಂದು ಪತ್ರಿಕೆಯಲ್ಲಿ ಬರೆಯೋರ ಉದ್ದೇಶ! ನಾವು ಬರ್ದಿರೋದ್ನ ಎಲ್ಲಾ ಓದಬೇಕು ಅನ್ನೋದು.. ಓದಿದ್ದನ್ನು ಅರ್ಥ ಮಾಡ್ಕೋಬೇಕು ಅನ್ನೋ ಉಮ್ಮೇದಿಯಂತೂ ಇವರಿಗೆ ಇದ್ದಂಗಿಲ್ಲಾ. ಕನ್ನಡದಲ್ಲಿ ಹಾಕಬೇಕು ಅಂತಾ ಎಲ್ಲೋ ರೂಲ್ಸ್ ಇರಬೇಕು, ಅದುಕ್ಕೆ ಹೀಗೆ ಕಾಟಾಚಾರಕ್ಕೆ ಹಾಕಿದಾರೆ. ಇದುನ್ ಓದಿದ ಯಾವನೇ ಒಬ್ಬ ಕನ್ನಡಿಗ ಇದ್ನ ಪೂರ್ತಿಯಾಗಿ ಸರಿಯಾಗಿ ಅರ್ಥ ಮಾಡ್ಕೊಂಬುಟ್ರೆ... ಕನ್ನಡ ಕುಲದೈವ ಮಧುಕೇಶ್ವರನ ಮೇಲಾಣೆ. ಒಟ್ನಲ್ಲಿ ನಮ್ಮ ತೆರಿಗೆ ಹಣ ನಮ್ಮ ಉಪಯೋಗಕ್ಕೆ ಖರ್ಚಾಗಿರೋ ಲೆಕ್ಕಕ್ಕೆ ಸೇರಿಕೊಳ್ಳುತ್ತಾ ಹೇಗೆ ವೃಷಭಾವತಿ ಪಾಲಾಗ್ತಿದೆ ಅನ್ನೋದನ್ನು ನೋಡಿ ಗುರುಗಳೇ... ಏನಂದ್ರೀ? ಭವ್ಯ ಭಾರತ ದೇಸ ಇನ್ಯಾವಾಗ ಸುಧಾರಿಸುತ್ತೋ ಅಂತೀರಾ?

ಶಾಲೆ ಪಾಠದಲ್ಲಿ ಬ್ಯಾಂಕು, ಹಣಕಾಸು - ಈ ನಡೆ ಫಸ್ಟ್ ಕ್ಲಾಸು !

ಬ್ಯಾಂಕ್ - ಹಣಕಾಸು ನಿರ್ವಹಣೆ ಮುಂತಾದ, ಎಲ್ಲರ ಜೀವನದಲ್ಲೂ ಅತಿ ಅವಶ್ಯವಾದ ವಿದ್ಯೆನಾ ಶಾಲೆಲಿದ್ದಾಗಲೇ ಮಕ್ಕಳಿಗೆ ಹೇಳಿ ಕೊಡೊ ಕಾರ್ಯಕ್ಕೆ ಕರ್ನಾಟಕ ಕೈ ಹಾಕಲಿದೆ ಅನ್ನೋ ಸುದ್ದಿ ಫೆಬ್ರವರಿ 26ರ ವಿ.ಕ ದಲ್ಲಿ ಬಂದಿದೆ. ಬೆಳೆವ ಸಿರಿಗೆ ಮೊಳಕೆಯಲ್ಲೇ ಇದನ್ನೆಲ್ಲ ಹೇಳಿ ಕೊಡೊ ಈ ಪ್ರಯತ್ನ ನಿಜಕ್ಕೂ ಸಕತ್ ಒಳ್ಳೆ ಕೆಲಸ ಗುರು !

ಏನ್ ಅಂತೆ ಪ್ಲಾನು?
ಬ್ಯಾಂಕಿಂಗ್ ಹಣಕಾಸು ನಿರ್ವಹಣೆ ಕುರಿತ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವಂತೆ ದೇಶದ ಎಲ್ಲ ರಾಜ್ಯಗಳಿಗೂ ಆರ್.ಬಿ.ಐ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ಕರ್ನಾಟಕ 2010ರಿಂದಲೇ ಜಾರಿಗೆ ಬರುವಂತೆ 5ರಿಂದ 9 ನೇ ತರಗತಿವರೆಗೆ ಬ್ಯಾಂಕಿಂಗ್ ಕುರಿತ ಪಾಠಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಮುಂದಾಗಿದೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಬ್ಯಾಂಕ್ - ಹಣಕಾಸು ವಿಚಾರಗಳ ಬಗ್ಗೆ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಗುರು.

ಬ್ಯಾಂಕು, ಅಕೌಂಟು ಅಂದ್ರೆ ಇರೋ ಗಾಬರಿ ಹೋಗಬೇಕು
ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಬ್ಯಾಂಕುಗಳೆಂದರೆ, ಅಲ್ಲಿ ಹೋಗಿ ವ್ಯವಹರಿಸುವುದು ಅಂದ್ರೆ ಹಳ್ಳಿಗರು ಗಾಬರಿಯಾಗ್ತಾರೆ. ಬ್ಯಾಂಕುಗಳು, ಅಲ್ಲಿ ದೊರೆಯುವ ಸೌಕರ್ಯ, ಹಣ ಹೂಡಲು, ಸಾಲ ಪಡೆಯಲು ಇರುವ ಸವಲತ್ತಿನ ಬಗ್ಗೆ ಯಾವುದೇ ಮಾಹಿತಿ, ಶಿಕ್ಷಣ ಇಲ್ಲದಿರುವುದು ಇದಕ್ಕೆ ಬಹುಪಾಲು ಕಾರಣವೂ ಹೌದು. ಈಗ, ಈ ಯೋಜನೆಯ ಆಶಯದಂತೆ ಚಿಕ್ಕಂದಿನಿಂದಲೇ ಬ್ಯಾಂಕು, ಹಣಕಾಸು ಸಂಸ್ಥೆಗಳ ಬಗ್ಗೆ ಕಲಿಕೆಯಲ್ಲಿ ಬಂದರೆ ಸಾಕಷ್ಟು ಬದಲಾವಣೆ ಆಗೋದ್ರಲ್ಲಿ ಅನುಮಾನಾ ಇಲ್ಲ ಗುರು.

ಈ ಯೋಜನೆಯಲ್ಲಿ ಬ್ಯಾಂಕು -ಹಣಕಾಸು ನಿರ್ವಹಣೆಯ ವಿಷಯಗಳ ಜೊತೆಗೆ ಶೇರು ಮಾರುಕಟ್ಟೆಯೆಂದರೇನು? ಅಲ್ಲಿ ಹಣ ತೊಡಗಿಸುವುದು ಹೇಗೆ, ಅದರ ಪ್ರಯೋಜನಗಳೇನು? ಶೇರು ವಹಿವಾಟು ನಡೆಸುವುದು ಹೇಗೆ? ವಿಮೆ (insurance) ಯೆಂದರೇನು ? ಜೀವನದಲ್ಲಿ ಆರೋಗ್ಯ ವಿಮೆ, ಜೀವ ವಿಮೆಯ ಮಹತ್ವವೇನು ? ಇನ್ನೂ ಮುಂತಾದ ವಿಷಯಗಳ ಬಗ್ಗೆಯೂ ಕಲಿಸುವ ಏರ್ಪಾಡಾಗಬೇಕು. ಬರೀ ಪಾಠವಷ್ಟೇ ಅಲ್ಲದೇ ಈ ವಿಷ್ಯಗಳ ಬಗ್ಗೆ ಚಿಕ್ಕ ಪುಟ್ಟ ಆಟಗಳ ಮೂಲಕ ಇದನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ಮನದಟ್ಟಾಗುವಂತೆ ಮಾಡಬೇಕು. ವ್ಯಾಪಾರ, ವಹಿವಾಟು, ಬ್ಯಾಂಕು, ಶೇರು ಮುಂತಾದ ಕೆಲಸಾನಾ ಬೇರೆ ಎಲ್ಲರಂತೆ ಕನ್ನಡಿಗರು ಅದ್ಭುತವಾಗಿ ಮಾಡೋ ಹಾಗಾಗಬೇಕು ಮತ್ತು ಅದರಿಂದ ದೊರೆಯೋ ಎಲ್ಲ ಆರ್ಥಿಕ ಲಾಭಾನಾ ಪಡೆಯೋ ಹಾಗಾಗಬೇಕು. ಆ ದಿಕ್ಕಲ್ಲಿ ಇದೊಂದು ಸಕತ್ ಒಳ್ಳೆ ನಡೆ ಗುರು !
Related Posts with Thumbnails