ಬರೀ ಕಾನೂನಿದ್ರೆ ಸಾಲದು! ಸರೀಗ್ ಜಾರೀ ಮಾಡ್ಬೇಕು ಮೇಷ್ಟ್ರೇ..

ಕರ್ನಾಟಕ ರಾಜ್ಯ ಶಿಕ್ಷಣ ಮಂತ್ರಿಗಳಾದ ಮಾನ್ಯ ಶ್ರೀ ಕಾಗೇರಿಯವರಿಗೆ ಅಭಿನಂದನೆಗಳು. ಅಂತೂ ಪ್ರಾಮಾಣಿಕತೆಯಿಂದ "ಸರ್ಕಾರ ತನ್ನ ಕೆಲಸಾನ ಸರಿಯಾಗಿ ಮಾಡ್ತಿಲ್ಲಾ" ಅಂತಾ ಒಪ್ಕೊಂಡಿದಾರೆ.

ಮಾನ್ಯತೆ ನೀಡಲು ಸಿ.ಬಿ.ಎಸ್.ಇ ಬೋರ್ಡು ವಿಧಿಸಿರೋ ಕರಾರು...

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಇ) ತನ್ನ ಪಠ್ಯಕ್ರಮವನ್ನು ಅನುಸರಿಸಲು ಸಿದ್ಧವಾಗಿರೋ ವಿದ್ಯಾಸಂಸ್ಥೆಗಳಿಗೆ ಆಯಾ ರಾಜ್ಯಸರ್ಕಾರದಿಂದ ನಿರಪೇಕ್ಷಣಾ ಪತ್ರ (N.O.C) ಸಲ್ಲಿಸಬೇಕು ಅನ್ನೋ ನಿಯಮಾನ ಹೊಂದಿದೆ. ಖಾಸಗಿ, ಅನುದಾನಿತ, ಸರ್ಕಾರಿ ಯಾವುದೇ ಶಾಲೆಯಿದ್ದರೂ ಸರ್ಕಾರದ ಅನುಮತಿಯಿಲ್ಲದೆಯೇ ಮಾನ್ಯತೆಯನ್ನು ನೀಡುವಂತೆ ಇಲ್ಲ.

ನಿರಪೇಕ್ಷಣಾ ಪತ್ರ ಕೊಡಲು ಇರೋ ನಿಯಮಾ...

ಕರ್ನಾಟಕ ಸರ್ಕಾರವೂ ಕೂಡಾ ಸಿ.ಬಿ.ಎಸ್.ಇ ಶಾಲೆಗಳಿಗೆ ನಿರಪೇಕ್ಷಣಾ ಪತ್ರ ಕೊಡಕ್ಕೆ ಅಂತಾನೆ ಒಂದು ನಿಯಮಾನಾ 1989ರಲ್ಲೇ ಮಾಡಿದೆ. ಅದುಕ್ಕೆ ಆಗಿಂದಾಗ್ಗೆ
ತಿದ್ದುಪಡಿಗಳನ್ನೂ ಮಾಡಿಕೊಂಡು ಬಂದಿದೆ. ಈ ನಿಯಮದಲ್ಲಿರೋ ಪ್ರಮುಖವಾದ ಅಂಶಗಳು ಹೀಗಿವೆ.
- ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮವನ್ನು ಹೊಂದಿರತಕ್ಕದ್ದು.
- ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ, ಕೇಂದ್ರ ಸರ್ಕಾರದ ಸೇವೆ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾಂಕ್‍ಗಳು, ಸಂಸ್ಥೆಗಳು (ಫರ್ಮುಗಳು) ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಬ್ಯಾಂಕ್/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಸೂಚನೆಗಳನ್ನು ಪಾಲಿಸಿರಬೇಕು/ ಪಾಲಿಸಬೇಕು.

ಇದಕ್ಕೆ 2002ರಲ್ಲಿ ಒಂದು ತಿದ್ದುಪಡಿ ಮಾಡಿ, ‘ಕರ್ನಾಟಕ ರಾಜ್ಯಸರ್ಕಾರದ ಭಾಷಾನೀತಿಯನ್ನು ಕಾಲಕಾಲಕ್ಕೆ ನಿಗದಿಪಡಿಸಿದಂತೆ ಪಾಲಿಸತಕ್ಕದ್ದು’ ಎಂದು ಸೇರಿಸಿದ್ದಾರೆ.

ಇನ್ನಾದ್ರೂ ಕಾನೂನು ಪಾಲನೆ ಮಾಡ್ತಾರಾ?

ಇದರ ಬೆನ್ನ ಹಿಂದೆಯೇ ಇವತ್ತಿನ (30.01.2011) ದಿನಪತ್ರಿಕೆಗಳಲ್ಲಿ ಇನ್ನೆರಡು ಕೇಂದ್ರೀಯ ಶಾಲೆಗಳನ್ನು ತೆರೆಯೋದಾಗಿ ಭಾರತೀಯ ವಿದ್ಯಾಭವನ ಹೇಳಿದೆ. ಈಗ ಕಾಗೇರಿಯವರು ಈ ಶಾಲೆಗಳಲ್ಲಿ "ವರ್ಗಾವಣೆಗೆ ಈಡಾಗಬಲ್ಲ ಪೋಷಕರ ಸಂಖ್ಯೆಯ ಬಗ್ಗೆ" ಪ್ರಮಾಣಪತ್ರ ಪಡ್ಕೊಳ್ಳೋಕೆ ಮುಂದಾಗ್ತಾರಾ? ಈಗಾಗಲೇ ಸಾವಿರಾರು ಸಂಖ್ಯೆಲಿರೋ ಶಾಲೆಗಳು ಈ ನಿಯಮಗಳನ್ನು ಪಾಲಿಸುತ್ತಾ ಇವೆಯಾ? ಇಲ್ಲದ ಶಾಲೆಗಳ ಅನುಮತಿ ರದ್ದು ಮಾಡ್ತಾರಾ? ಈ ಹಿಂದಿನ ಸರ್ಕಾರಗಳು ಮಾಡಿದ "ಇರೋ ಕಾನೂನು ಪಾಲಿಸದ ಅಪರಾಧ"ಕ್ಕೆ ಪ್ರಾಯಶ್ಚಿತ್ತ ಮಾಡ್ಕೋತಾರಾ?ನೀವೇನಂತೀರಾ ಗುರೂ?

ಒಕ್ಕೂಟ ವ್ಯವಸ್ಥೆಯ ಸುಧಾರಣೆ ಇಬ್ಬರಿಗೂ ಬೇಡ!



ಮೊನ್ನೆ ದಿವಸ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹಂಸರಾಜ್ ಭಾರಧ್ವಾಜ್ ಅವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರ ವಿರುದ್ಧವಾಗಿ ಕಾನೂನು ಹೋರಾಟಕ್ಕೆ ಸಮ್ಮತಿ ಕೊಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯ್ತು. ಇದನ್ನು ಪ್ರತಿಭಟಿಸಿ ಆಡಳಿತ ಮಾಡ್ತಿರೋ ಭಾರತೀಯ ಜನತಾ ಪಕ್ಷದೋರು "ಸ್ವಯಂಘೋಷಿತ ಕರ್ನಾಟಕ ಬಂದ್"ಗೆ ಕರೆ ಕೊಟ್ರು. ನಿನ್ನೆ ಬಂದ್ ನಡೆದೂ ಬಿಟ್ತು. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ನಡೆದ ಈ ಘಟನೆಗಳನ್ನು ನೋಡುದ್ರೆ ಭಾರತ ಸರಿಯಾದ ಒಕ್ಕೂಟ ಆಗ್ಬೇಕು ಅಂತ ನಮ್ಮ ನಾಡಿನ ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಯಾವತ್ತಿಗೆ ಅನ್ಸುತ್ತೋ ಅನ್ನೋ ಭಾವನೆ ಉಂಟಾಗುತ್ತೆ. ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನೇ ನೋಡಿ. ನಮ್ಮ ರಾಜ್ಯಸರ್ಕಾರದ ಮೇಲಿರೋ ಸುಪ್ರೀಂಪವರ್ ಕೇಂದ್ರಸರ್ಕಾರವಾಗಿದೆ. ಪ್ರತಿರಾಜ್ಯದಲ್ಲೂ ಇಲ್ಲಿನ ಜನರಿಂದಲೇ ಆಯ್ಕೆಯಾಗೋ ಶಾಸಕರು, ಸರ್ಕಾರ ಮುಖ್ಯಮಂತ್ರಿಗಳಿದ್ದಾಗ್ಲೂ ಇದು ಸ್ವತಂತ್ರವಾಗಿಲ್ಲ. ಭಾರತದ ಸಂಸತ್ತಿನಿಂದ ಚುನಾಯಿಸಲ್ಪಟ್ಟ ರಾಷ್ಟ್ರಪತಿಗಳು ನೇಮಕ ಮಾಡಿರುವ, ಪ್ರತಿಯೊಂದು ರಾಜ್ಯದಲ್ಲಿ ಠಿಕಾಣಿ ಹೂಡಿರುವ ರಾಜ್ಯಪಾಲರೇ ಇಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಕುಳಿತು ರಾಜ್ಯಸರ್ಕಾರಗಳು ಉಸಿರಾಡಿಕೊಂಡಿರಲು ಕೃಪೆ ತೋರುತ್ತಿರಬೇಕಾದ ಪರಿಸ್ಥಿತಿ ಈ ದೇಶದ್ದು!

ಸರಿಹೋಗಬೇಕಾದ ವ್ಯವಸ್ಥೆ!

ಒಂದು ರಾಜ್ಯದ ರಾಜಕಾರಣದ, ವ್ಯವಸ್ಥೆಯ, ಆಡಳಿತದ ಅತ್ಯುನ್ನತ ಹಾಗೂ ನಿರ್ಣಾಯಕ ವ್ಯಕ್ತಿ ಆ ರಾಜ್ಯಕ್ಕೆ ಕೇಂದ್ರಸರ್ಕಾರ ನೇಮಿಸಿ ಕಳ್ಸಿರೋ ‘ರಾಜ್ಯಪಾಲ’ರು ಅನ್ನೋದು ಎಷ್ಟು ಸರಿ? ಒಂದು ರಾಜ್ಯದ ವಿಷಯವಾಗಿ ರಾಜ್ಯಪಾಲರಿಗೆ ಅಷ್ಟೊಂದು ಬಲ ತುಂಬಿರುವ ಈ ವ್ಯವಸ್ಥೆ ಸರಿಯೇ? ಈಗಿನ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರ ಬಲಿಷ್ಠವಾಗಿರಬೇಕಾದರೆ ರಾಜ್ಯಗಳ ಮೇಲೆ ಅದಕ್ಕೆ ಸಂಪೂರ್ಣ ಹಿಡಿತ ಇರಬೇಕು ಎನ್ನುವ ನೀತಿಯನ್ನು ನಾವು ಒಪ್ಪಿಕೊಂಡಂತಿದೆ. ರಾಜ್ಯಗಳಿಗೆ ಸಹಜವಾಗಿ ಯಾವ ಅಧಿಕಾರವೂ ಇಲ್ಲವಾಗಿದ್ದು ಇರುವ ಅಧಿಕಾರವೆಲ್ಲಾ ಕೇಂದ್ರಸರ್ಕಾರವು ಕೊಟ್ಟಿರುವುದು ಮಾತ್ರವೇ ಆಗಿದೆ. ಅಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿ ಬಂತು? ಅಧಿಕಾರ ವಿಕೇಂದ್ರೀಕರಣ ಅನ್ನೋಕೆ ಅರ್ಥವೇನು ಬಂತು?

ಹೀಗೆ ಇಂತಹ ಬದಲಾವಣೆಯನ್ನು ನಮ್ಮ ಸಂವಿಧಾನಕ್ಕೆ ಮಾಡಲು ಮುಂದಾಗಬೇಕು. ಅರವತ್ತು ವರ್ಷದ ನಂತರವಾದರೂ ಒಕ್ಕೂಟ ವ್ಯವಸ್ಥೆಯತ್ತ ಸಾಗಲು ಬೇಕಾದ ಬದಲಾವಣೆಗಳಿಗೆ ನಾವು ತೆರೆದುಕೊಳ್ಳಬೇಕು. ದುರಂತವೆಂದರೆ ಇಂತಹ ಬದಲಾವಣೆ ಮಾಡುವ ಮನಸ್ಸು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಲ್ಲ, ಸದಾಕಾಲ ರಾಜ್ಯಪಾಲರೆಂಬ ಕೇಂದ್ರಸರ್ಕಾರದ ಕೀಲಿಕೈಯ್ಯನ್ನು ರಾಜ್ಯಸರ್ಕಾರಗಳನ್ನು ಬಲಹೀನಗೊಳಿಸಲು ಇಬ್ಬರೂ ಶ್ರಮಿಸಿದವರೇ. ಈಗ ಕರ್ನಾಟಕದಲ್ಲಿ ರಾಜ್ಯಪಾಲರ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿ, ಜನರಿಂದ ಮರುಕ ಗಿಟ್ಟಿಸುವ, ರಾಜಕೀಯದಾಟ ಆಡುವ ಬದಲು ಕೇಂದ್ರದಲ್ಲಿ, ಭಾರತದಲ್ಲಿ ರಾಜ್ಯಗಳ ಮೇಲೆ ಕೇಂದ್ರ ಎಷ್ಟು ಕಡಿಮೆ ಹಿಡಿತ ಹೊಂದಬೇಕು ಅನ್ನೋದ್ರ ಬಗ್ಗೆ ವ್ಯವಸ್ಥೆ ರೂಪಿಸಲು ದನಿಯೆತ್ತಲಿ.

ಊಹೂಂ…! ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಿಜಕ್ಕೂ ರಾಜ್ಯಗಳನ್ನು ಬಲಪಡಿಸಬೇಕೆಂಬ ಕಲ್ಪನೆಯೂ ಇದ್ದಂತಿಲ್ಲ. ದೊಡ್ಡರಾಜ್ಯಗಳನ್ನು ಚಿಕ್ಕವನ್ನಾಗಿಸಿ ಅವುಗಳ ಬಲ ಕುಗ್ಗಿಸುವಂತಾದರೆ ಕೇಂದ್ರ ಬಲಿಷ್ಟವಾಗುತ್ತದೆ ಎಂದೇ ಇವೆರೆಡೂ ನಂಬಿರುವಂತೆ ಇವುಗಳ ರಾಜಕೀಯ ಇತಿಹಾಸ, ನಡವಳಿಕೆ, ನಿಲುವು ಮತ್ತು ಸಿದ್ಧಾಂತಗಳನ್ನು ಕಂಡಾಗ ಅನಿಸುತ್ತದೆ. ಅಲ್ವಾ ಗುರೂ!

ಗೂಡುಬಿಟ್ಟ ಹಾಡು ಕೋಗಿಲೆ!


ಇಡೀ ಭಾರತವನ್ನು ತನ್ನ ಹಾಡಿನಿಂದ, ತನ್ನ ಕಂಚಿನ ಕಂಠದಿಂದ ಮೋಡಿ ಮಾಡಿದ ಹಾಡು ಕೋಗಿಲೆ, ಕನ್ನಡಿಗ ಭಾರತ ರತ್ನ ಶ್ರೀ ಪಂಡಿತ್ ಭೀಮಸೇನಜೋಷಿಯವರು ಇನ್ನಿಲ್ಲವಾಗಿದ್ದಾರೆ. ಮೂಲತಃ ಗದುಗಿನವರಾದ ಇವರು ಹಾಡುಗಾರಿಕೆಯಲ್ಲಿ ಹೊಸ ಮಜಲನ್ನು ಹುಟ್ಟುಹಾಕಿದ ಗಾರುಡಿಗ. ಇವರನ್ನು ನೆನೆಯುತ್ತಾ ಬನವಾಸಿ ಬಳಗವು ತನ್ನ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ.

"ಕೇಂದ್ರೀಯ ಶಾಲೆಗಳು ರಾಜ್ಯ ಶಿಕ್ಷಣ ಕಾಯ್ದೆಯಡಿ" ಅಂದ್ರೆ ಬರೀ ಏಕರೂಪ ಶುಲ್ಕವಲ್ಲ!

ದಿನಾಂಕ 11.01.2011ರ ದಿನಪತ್ರಿಕೆಗಳಲ್ಲಿ ರಾಜ್ಯ ಹೈಕೋರ್ಟ್, ಕರ್ನಾಟಕದ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಕರ್ನಾಟಕ ರಾಜ್ಯಸರ್ಕಾರದ "ಕರ್ನಾಟಕ ಶಿಕ್ಷಣ ಕಾಯ್ದೆ" ಯ ವ್ಯಾಪ್ತಿಯಲ್ಲಿ ಬರುತ್ತವೆ ಅನ್ನೋ ತೀರ್ಪನ್ನು ಕೊಟ್ಟ ಸುದ್ದಿ ಪ್ರಕಟವಾಗಿದೆ. ಇದು ತುಂಬಾ ಒಳ್ಳೇ ತೀರ್ಪಾಗಿದ್ದು ನಮ್ಮ ಸರ್ಕಾರ ಇದನ್ನು ಹೇಗೆ ಬಳಸುತ್ತೆ ನೋಡೋಣ. ಮೂಲತಃ ಈ ಕಾನೂನು ಸಮರ ನಡೆದದ್ದು ಸಿ.ಬಿ.ಎಸ್.ಇ ಶಾಲೆಗಳಲ್ಲಿ ತೆಗೆದುಕೊಳ್ಳೋ ಶುಲ್ಕ, ಈ ಶಾಲೆಗಳ ಪ್ರವೇಶಕ್ಕಾಗಿ ಒಡ್ಡಿರೋ ಹಿಂದಿ ಇಂಗ್ಲೀಷ್ ಕಲಿತಿರಬೇಕೆಂಬ ನಿಯಮಗಳ ಕುರಿತಾಗಿ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ. ಈ ತೀರ್ಪಿನ ಪ್ರಕಾರ ಶಿಕ್ಷಣ ಕಾಯ್ದೆಯ 7(f) ನಿಯಮ ಈ ಶಾಲೆಗಳಿಗೂ ಅನ್ವಯವಾಗುತ್ತದೆ.


ಈ ತೀರ್ಪನ್ನು ರಾಜ್ಯ ಸರ್ಕಾರ ಒಪ್ಪಿ ಸ್ವಾಗತಿಸಿರೋದು ಭಾಳಾ ಒಳ್ಳೇ ಸುದ್ದಿ.


ಅಂದ್ರೆ "ಕೇಂದ್ರೀಯ ಶಾಲೆಗಳಾಗಲೀ ಮತ್ತೊಂದಾಗ್ಲೀ ಕರ್ನಾಟಕದಲ್ಲಿದ್ದ ಮೇಲೆ ನಮ್ಮ ರಾಜ್ಯಸರ್ಕಾರದ ಶಿಕ್ಷಣ ಕಾಯ್ದೆಯ ವ್ಯಾಪ್ತಿಯಿಂದ ತಾನು 1998ರಲ್ಲಿ ಹೊರಗಿಟ್ಟಿದ್ದು ತಪ್ಪು... ಆ ತಪ್ಪು ಈಗ ತಿದ್ಕೊಳ್ಳಕ್ಕೆ ಇದೊಂದು ಒಳ್ಳೇ ಅವಕಾಶ" ಅಂತಾಯ್ತು. ಭಾಳಾ ಒಳ್ಳೇ ತೀರ್ಮಾನಾನ ನಮ್ಮ ರಾಜ್ಯಸರ್ಕಾರ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಸಚಿವಾಲಯ ತೆಗೆದುಕೊಂಡಿದೆ. ಸರಿ ಹಾಗಾದ್ರೆ ಈ ಕಾಯ್ದೆಯ ಇನ್ಯಾವ ಅಂಶಗಳನ್ನು ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ರಾಜ್ಯಸರ್ಕಾರ ಜಾರಿಮಾಡಬಹುದು ಸ್ವಲ್ಪ ನೋಡೋಣ.

ಶಿಕ್ಷಣ ಕಾಯ್ದೆ 1983ರಲ್ಲೇನಿದೆ?

ಈ ಕಾಯ್ದೆಯಂತೆ ರಾಜ್ಯಸರ್ಕಾರ ತಾನು ನಿಗದಿ ಪಡಿಸಬಹುದಾದ ವಿಷಯಗಳಲ್ಲಿ 7(f) ಶುಲ್ಕ, ದೇಣಿಗೆ ಬಗ್ಗೆ ಹೇಳುವಂತೆ 7(c)ಯಲ್ಲಿ Medium of instruction ಅಂತಾ ಇದೇ ಗುರೂ. ಜೊತೇಲಿ objectives of education ಎಂಬ ನಿಯಮದಡಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಒಂದು ಹಂತದ ಪ್ರಾವೀಣ್ಯತೆಯನ್ನು ತಂದುಕೊಡಬೇಕೆಂದು ಇದೆ.
ಅಂದ್ರೆ ಕರ್ನಾಟಕದ ಸಿಬಿಎಸ್ಇ ಮುಂತಾದ ಶಾಲೆಗಳಲ್ಲಿ ಕಲಿಕಾ ಮಾಧ್ಯಮ ಕನ್ನಡ ಅಂತಾ ಮಾಡೊ ಅಧಿಕಾರ, ಸಮಾಜ ಶಾಸ್ತ್ರದಲ್ಲಿ ಕನ್ನಡನಾಡಿನ ಇತಿಹಾಸ ಹೇಳಿಕೊಡಿ ಅನ್ನಕ್ಕೆ, ನಮ್ಮ ನಾಡಿನ ಹಬ್ಬ ಹರಿದಿನ ಸಂಸ್ಕೃತಿಗಳನ್ನು ಪರಿಚಯಿಸಿ ಅನ್ನಕ್ಕೆ ಕರ್ನಾಟಕ ರಾಜ್ಯಸರ್ಕಾರಕ್ಕೆ ಅಧಿಕಾರ ಇದೆ ಅಂತಾಯ್ತು. ಅಷ್ಟ್ಯಾಕೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಬೇಕೂಂದ್ರೆ ಹೊರ ರಾಜ್ಯಗಳಿಗೆ ವರ್ಗಾವಣೆಯಾಗಬಲ್ಲ ಹುದ್ದೆಯ ಪೋಷಕರ ಇಂತಿಷ್ಟು ಮಂದಿ ಮಕ್ಕಳು ಇರಬೇಕು ಅನ್ನೋ ಒಂದೇ ಒಂದು ಚಾಲ್ತಿಯಲ್ಲಿರೋ ನಿಯಮಾನ ಸರಿಯಾಗಿ ಜಾರಿಮಾಡ್ಬುಟ್ರೆ ಸಾಕು. ಕಾಗೇರಿ ಸಾಹೇಬ್ರೇ... ಒಸಿ ಮನಸ್ಸು ಮಾಡ್ತೀರಾ?

ವೀಡಿಯೋಕಾನ್ ಗೆಲುವಿನ ಗುಟ್ಟು


ಇತ್ತೀಚಿಗಷ್ಟೇ ಡಿಶ್ ಮಾರುಕಟ್ಟೆಗೆ ಇಳಿದ ವಿಡಿಯೋಕಾನ್ d2h ಕಂಪನಿಯು “ಅತೀ ಹೆಚ್ಚು ಕನ್ನಡ ಚಾನಲ್ಲುಗಳನ್ನ ಕೊಡ್ತೀವಿ” ಅಂತ ಹೇಳುತ್ತಾ 13 ಕನ್ನಡ ಚಾನಲ್ಲುಗಳನ್ನು ನೀಡಿ ಗ್ರಾಹಕರನ್ನು ಸೆಳೆಯೋ ಪ್ರಯತ್ನ ಮಾಡ್ತಿರೋದರ ಬಗ್ಗೆ ಈ ಹಿಂದೆ ಏನ್ಗುರುವಿನಲ್ಲಿ ಬರೆದಿದ್ದೆವು. ಅದೇ ವಿಡಿಯೋಕಾನ್ d2h ಕಂಪನಿಯು ಈಗ ಇಪ್ಪತ್ತು ಲಕ್ಷ ಗ್ರಾಹಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆಯಂತೆ. ಈ ಮೈಲಿಗಲ್ಲು ತಲುಪಲು “ಜನರ ಭಾಷೆಯ” ಹೆಚ್ಚು ಹೆಚ್ಚು ಚಾನಲ್ಲುಗಳನ್ನು ಕೊಟ್ಟಿದ್ದೇ ಕಾರಣವಾಗಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್-ನಲ್ಲಿ ಮೂಡಿ ಬಂದ ಈ ಅಂಕಣ ಹೇಳ್ತಿದೆ ಗುರು.

ಬೇಕಾದ್ದು ಕೊಟ್ಟರೆ ಮಾತ್ರ ಗ್ರಾಹಕರನ್ನು ಗೆಲ್ಲಬಹುದು

ವಿಡಿಯೋಕಾನ್ ಕಂಪನಿಯು ಡಿಶ್ ಮಾರುಕಟ್ಟೆಗೆ ಇಳಿಯೋ ಮುನ್ನ ಮಾರುಕಟ್ಟೆಯಲ್ಲಿ ಇದ್ದ ಹಲವು ಕಂಪನಿಗಳು, ಗ್ರಾಹಕರ ಬೇಕುಗಳನ್ನು ಅರಿಯುವಲ್ಲಿ ಎಡವಿದ್ದಂತೆ ಕಾಣುತ್ತಿದ್ದವು. “ಸೌತ್ ಜಂಬೋ ಪ್ಯಾಕ್”, “ಸೌತ್ ಸಿಲ್ವರ್ ಪ್ಯಾಕ್” ಎಂಬ ತರತರದ ಹೆಸರಿನಲ್ಲಿ ಮೂರೋ ನಾಲ್ಕೋ ಕನ್ನಡ ಚಾನಲ್ಲುಗಳನ್ನು ಕೊಡುತ್ತಿದ್ದವರೇ ಹೆಚ್ಚು. ಕನ್ನಡಿಗ ಗ್ರಾಹಕರಿಗೆ ಕನ್ನಡ ಚಾನಲ್ಲುಗಳೇ ಬೇಕು ಎಂಬ ಸಾಮಾನ್ಯ ಅರಿವೂ ಮುಂಚಿನ ಕಂಪನಿಗಳ ಗಮನಕ್ಕೆ ಬಾರದೇ ಹೋದಂತಿತ್ತು.

ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡಕ್ಕಿರೋ ಬೇಡಿಕೆಯನ್ನು ಅರ್ಥ ಮಾಡಿಕೊಂಡಂತಿರುವ ವಿಡಿಯೋಕಾನ್, ಅದನ್ನೇ ಗ್ರಾಹಕರಿಗೆ ಒದಗಿಸುವ ಮೂಲಕ ಹೆಚ್ಚು ಗ್ರಾಹಕರನ್ನು ತನ್ನೆಡೆಗೆ ಸೆಳೆದಿರುವುದಂತೂ ದಿಟ. ಡಿಶ್ ಒಂದೇ ಅಲ್ಲದೇ, ಮನರಂಜನೆ ಉದ್ದಿಮೆಯಲ್ಲಿ ತೊಡಗಿಕೊಂಡಿರೋ ಬೇರೆ ಕಂಪನಿಗಳೂ ಕನ್ನಡಕ್ಕಿರೋ ಬೇಡಿಕೆಯನ್ನ ಅರ್ಥ ಮಾಡ್ಕೋಬೇಕಾಗಿದೆ ಗುರೂ. ಬೇರೆ ಭಾಷೆಯಲ್ಲಿ ಮನರಂಜನೆಗಿಂತಾ, ಕನ್ನಡದಲ್ಲಿ ಮನರಂಜನೆಯೇ ಕನ್ನಡಿಗರಿಗೆ ಅಚ್ಚುಮೆಚ್ಚು ಎಂಬುದನ್ನು ಕಂಡುಕೋಬೇಕಾಗಿದೆ.

ಕೃಷ್ಣಾ ಐತೀರ್ಪು, ರಾಷ್ಟ್ರೀಯ ನೀತಿ ಮತ್ತು ಒಕ್ಕೂಟದ ಒಗ್ಗಟ್ಟು



ಇತ್ತೀಚಿಗೆ ಕೃಷ್ಣಾ ನ್ಯಾಯಾಧಿಕರಣದ ಐತೀರ್ಪು ಹೊರಬಿತ್ತು. ಇದರಂತೆ 2050ರವರೆಗೆ ಈ ವಿವಾದದ ಬಗ್ಗೆ ತಕರಾರು ಎತ್ತುವಂತಿಲ್ಲ. ಈ ತೀರ್ಪನ್ನು ಕಂಡು ನಮ್ಮ ರಾಜ್ಯಸರ್ಕಾರ ಕುಣಿದಾಡುತ್ತಲೂ, ನಮ್ಮ ರಾಜಕೀಯ ಪಕ್ಷಗಳು ನಲಿದಾಡುತ್ತಲೂ, ನಮ್ಮ ಮಾಧ್ಯಮಗಳು ಕೊಂಡಾಡುತ್ತಲೂ ಇರುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲಾ ಗುರೂ!

ಕೃಷ್ಣಾ ತೀರ್ಪಿನ ಬಗ್ಗೆ...

ಕೃಷ್ಣಾ ತೀರ್ಪಿನಲ್ಲಿ ಕರ್ನಾಟಕಕ್ಕೆ ಒಳ್ಳೇದಾಗಿದೆ ಅಂತಾಯಿರೋರು ಸ್ವಲ್ಪ ಈ ವಿಷಯಗಳ ಬಗ್ಗೆ ಮಾತಾಡುದ್ರೆ ಒಳ್ಳೇದು. ನಮ್ಮ ರಾಜ್ಯಕ್ಕೆ ‘A ಸ್ಕೀಮಿನಲ್ಲಿ ಹಂಚಿಕೆಯಾಗಿದ್ದ ನೀರನ್ನು’ ಮತ್ತು ‘ಮುಂದೆ B ಸ್ಕೀಮಿನಲ್ಲಿ ಹಂಚಿಕೆಯಾಗಬಹುದಾದ ನೀರನ್ನು’ ಹಿಡಿದಿಟ್ಟುಕೊಳ್ಳಲು ಆಲಮಟ್ಟಿ ಜಲಾಶಯವನ್ನು ಒಂದು ಎತ್ತರಕ್ಕೆ ಕಟ್ಟೋಕೆ ಹೋದರೆ, ನೀರಾವರಿ ಯೋಜನೆಗಳನ್ನು ಮಾಡೋಕೆ ಹೋದ್ರೆ ಒಂದಲ್ಲಾ ಇನ್ನೊಂದು ಕಾರಣ ಬಳಸಿ, ಕೇಸು ಗೀಸು ಅಂತಾ ತಡೆ ಮಾಡಿ ಕೊನೆಗೆ "ಇಸ್ವಿ 2000 ಆಯ್ತು... ನಿಮಗೆ ಬಳಸಿಕೊಳ್ಳೋಕೆ ಆಗದ ನೀರುನ್ನ ಮರುಹಂಚಿಕೆ ಮಾಡಬೇಕು" ಅಂತಾ ಮಾಡಿದ ವಾದವನ್ನು ಐತೀರ್ಪಿನಲ್ಲಿ ತಳ್ಳಿಹಾಕುದ್ರೆ ಅದು ಗೆಲುವಾ? ನ್ಯಾಯಾಧಿಕರಣ ಅಣೆಕಟ್ಟೆಯ ಎತ್ತರ ಕಟ್ಕೊಳ್ಳೋದು ತಪ್ಪಲ್ಲಾ ಅಂದುಬುಟ್ರೆ ಅದು ಗೆಲುವಾ? ಜೂನ್ ಜುಲೈ ತಿಂಗಳಲ್ಲಿ ಪ್ರತಿವರ್ಷ 8-10 TMC ನೀರುನ್ನ ಬಿಡಕ್ಕೆ ಆಗ ನೀರೆಲ್ಲಿರುತ್ತೆ? ಅಂಥದೇ ಕಟ್ಟಳೆ ಮಹಾರಾಷ್ಟ್ರಕ್ಕೂ ಇದೆಯಾ? A ಸ್ಕೀಮಿನಂತೆ ಹೆಚ್ಚುವರಿ 448 TMCಯಲ್ಲಿ ಅರ್ಧದಷ್ಟು ಅಂದ್ರೆ 224 TMC ಸಿಗೋ ಬದ್ಲು 177 TMC ಮಾತ್ರಾ ಹಂಚಿಕೆ ಆದ್ರೆ ಅದು ಗೆಲುವಾ? ಎಲ್ಲೋ ಒಂದು ಲೀಟರ್ ಹಿಂದೆಮುಂದೆ ಆಗಿದೆ ಅನ್ನೋ ಹಾಗೆ 100 TMC ಮಾತ್ರಾ ಕಮ್ಮಿ ಆಗಿದೆ ಅಂತಾ ಸಮಾಧಾನ ಪಟ್ಕೊಳ್ಳೋದು ನ್ಯಾಯಾನಾ? 100 TMC ಅಂದ್ರೆ 6.5 ಕೋಟಿ ಜನರಿಗೆ ದಿನಬಳಕೆಗೆ ಬೇಕಾಗೋಷ್ಟು ನೀರು ಅಂತಾ ನಿಮಗೆ ಗೊತ್ತಿಲ್ವಾ? 100 TMCಯಷ್ಟು ನೀರಲ್ಲಿ 12,00,000 ಎಕರೆಗೆ ನೀರಾವರಿ ಒದಗಿಸಬಹುದು ಅಂತಾ ಗೊತ್ತಿಲ್ವಾ? ಹಾಗೇ ಕೃಷ್ಣೆಯಿಂದ ನೇರವಾಗಿ ಸವಲತ್ತು ಪಡೆಯೋ ಜಿಲ್ಲೆಗಳವರು ಚಿತ್ರದುರ್ಗ, ದಾವಣಗೆರೆ, ತುಮಕೂರು ಮುಂತಾದ ಜಿಲ್ಲೆಗಳ ಜನಗಳಿಗೆ ಸಿಗಬೇಕಾಗಿದ್ದ ನೀರು ಸಿಗದೇ ಹೋಗಿದ್ದಕ್ಕಾಗಿ ಮಿಡಿಯದೇ ವಿಜಯೋತ್ಸವ ಆಚರಿಸೋದನ್ನು ಪ್ರೋತ್ಸಾಹಿಸೋದು ಸರೀನಾ? ರಾಜ್ಯಸರ್ಕಾರ ಭ್ರಮೆಗಳಿಂದ ಹೊರಬಂದು ಸಂಪೂರ್ಣ ನ್ಯಾಯಕ್ಕಾಗಿ ಕಾನೂನು ಹೋರಾಟವನ್ನು ಮುಂದುವರೆಸಬೇಕಾಗಿದೆ ಅಲ್ವಾ ಗುರೂ?

ರಾಷ್ಟ್ರೀಯ ನೀತಿಗಳ ಅಗತ್ಯ

ಭಾರತದಲ್ಲಿ ಹೆಚ್ಚೂಕಮ್ಮಿ ಎಲ್ಲಾ ರಾಜ್ಯಗಳ ಪರಿಸ್ಥಿತಿ ಹೀಗೇ ಇರೋದು. ರಾಜ್ಯಗಳ ನಡುವೆ ಭಾಷೆಗಳು, ಜನಗಳು, ನದಿ ನೀರು, ಊರುಕೇರಿ... ಹೀಗೇ ಅನೇಕವು ಹಾಸುಹೊಕ್ಕು ಹಂಚಿಕೆಯಾಗಿರುತ್ತವೆ. ಇದು ಸಹಜವೂ ಹೌದು. ಇಂತಹ ಸನ್ನಿವೇಶದಲ್ಲಿ ಭಾರತದಂತಹ ನಾನಾ ಭಾಷೆಗಳ, ಜನಾಂಗಗಳ ನಾಡೊಂದು ತನ್ನಲ್ಲಿನ ಒಗ್ಗಟ್ಟನ್ನು ಕಾಪಾಡಿಕೊಳ್ಳಲು ತನ್ನೊಳಗಿನ ರಾಜ್ಯಗಳು ತಮ್ಮ ನಡುವೆ ಸೌಹಾರ್ದಯುತ ಸಂಬಂಧ ಹೊಂದಿರುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ನೀತಿ ಹೊಂದಿರಬೇಕು. ಇದು ಯಾರಿಗೂ ಅನ್ಯಾಯವಾಗದಂತಹ, ವೈಜ್ಞಾನಿಕವಾಗಿ ರೂಪಿತವಾದ, ಎಲ್ಲ ರಾಜ್ಯಗಳೂ ಒಪ್ಪಿದ ನೀತಿಯಾಗಬೇಕು. ಅದು ನದಿನೀರು ಹಂಚಿಕೆಯಿರಲೀ, ಗಡಿ ಗುರುತಿಸುವುದಾಗಲೀ, ಅಂತರರಾಜ್ಯ ವಲಸೆಯಾಗಿರಲೀ... ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾಗಿ ತೀರ್ಮಾನಿಸುವ ನೀತಿ ಅತ್ಯಗತ್ಯವಾಗಿದೆ. ಇಂಥಾ ನೀತಿಯನ್ನು ರೂಪಿಸೋ ಹೊಣೆಗಾರಿಕೆ ಕೇಂದ್ರಸರ್ಕಾರದ್ದಾಗಿದೆ. ಅದು ಬಿಟ್ಟು ಯಾವ ರಾಜ್ಯ ಹೆಚ್ಚು ರಾಜಕೀಯವಾಗಿ ಬಲಶಾಲಿಯೋ, ಯಾವ ರಾಜ್ಯದ ಸಂಸದರಿಗೆ ಬಾಯಿ ಜೋರೋ, ಯಾರಿಗೆ ಲಾಬಿ ಮಾಡೋ ತಾಕತ್ತು ಹೆಚ್ಚೋ ಅವರ ಪರವಾಗಿ ತೀರ್ಪು ಬರುತ್ತಿವೆ ಅಂತಾ ಇನ್ನೊಂದು ರಾಜ್ಯದವರಿಗೆ ಅನ್ನಿಸೋಕೆ ಅವಕಾಶ ಮಾಡಿಕೊಡೋ ಹಾಗೆ ಅಸ್ಪಷ್ಟವಾಗಿರೋ ನೀತಿಗಳನ್ನು ಹೊಂದಿದ್ರೆ ಹೇಗೇ ಗುರೂ? ಇದು ರಾಜ್ಯರಾಜ್ಯಗಳ ನಡುವಿನ ವೈಮನಸ್ಸಿಗೆ, ಭಾರತದ ಒಗ್ಗಟ್ಟನ್ನು ಮುರಿಯೋಕೇ ಕಾರಣವಾಗಲ್ವಾ? ಸಮಾನ ಗೌರವದ ಸ್ಪಷ್ಟ ರೀತಿನೀತಿಯ ಒಕ್ಕೂಟ ವ್ಯವಸ್ಥೆಯೊಂದು ಭಾರತದ ಒಗ್ಗಟ್ಟಿಗೆ ಇಂದು ಅತ್ಯಗತ್ಯವಾಗಿದೆ.
Related Posts with Thumbnails