ವೀಡಿಯೋಕಾನ್ ಗೆಲುವಿನ ಗುಟ್ಟು
9.1.11
ಇತ್ತೀಚಿಗಷ್ಟೇ ಡಿಶ್ ಮಾರುಕಟ್ಟೆಗೆ ಇಳಿದ ವಿಡಿಯೋಕಾನ್ d2h ಕಂಪನಿಯು “ಅತೀ ಹೆಚ್ಚು ಕನ್ನಡ ಚಾನಲ್ಲುಗಳನ್ನ ಕೊಡ್ತೀವಿ” ಅಂತ ಹೇಳುತ್ತಾ 13 ಕನ್ನಡ ಚಾನಲ್ಲುಗಳನ್ನು ನೀಡಿ ಗ್ರಾಹಕರನ್ನು ಸೆಳೆಯೋ ಪ್ರಯತ್ನ ಮಾಡ್ತಿರೋದರ ಬಗ್ಗೆ ಈ ಹಿಂದೆ ಏನ್ಗುರುವಿನಲ್ಲಿ ಬರೆದಿದ್ದೆವು. ಅದೇ ವಿಡಿಯೋಕಾನ್ d2h ಕಂಪನಿಯು ಈಗ ಇಪ್ಪತ್ತು ಲಕ್ಷ ಗ್ರಾಹಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆಯಂತೆ. ಈ ಮೈಲಿಗಲ್ಲು ತಲುಪಲು “ಜನರ ಭಾಷೆಯ” ಹೆಚ್ಚು ಹೆಚ್ಚು ಚಾನಲ್ಲುಗಳನ್ನು ಕೊಟ್ಟಿದ್ದೇ ಕಾರಣವಾಗಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್-ನಲ್ಲಿ ಮೂಡಿ ಬಂದ ಈ ಅಂಕಣ ಹೇಳ್ತಿದೆ ಗುರು.
ಬೇಕಾದ್ದು ಕೊಟ್ಟರೆ ಮಾತ್ರ ಗ್ರಾಹಕರನ್ನು ಗೆಲ್ಲಬಹುದು
ವಿಡಿಯೋಕಾನ್ ಕಂಪನಿಯು ಡಿಶ್ ಮಾರುಕಟ್ಟೆಗೆ ಇಳಿಯೋ ಮುನ್ನ ಮಾರುಕಟ್ಟೆಯಲ್ಲಿ ಇದ್ದ ಹಲವು ಕಂಪನಿಗಳು, ಗ್ರಾಹಕರ ಬೇಕುಗಳನ್ನು ಅರಿಯುವಲ್ಲಿ ಎಡವಿದ್ದಂತೆ ಕಾಣುತ್ತಿದ್ದವು. “ಸೌತ್ ಜಂಬೋ ಪ್ಯಾಕ್”, “ಸೌತ್ ಸಿಲ್ವರ್ ಪ್ಯಾಕ್” ಎಂಬ ತರತರದ ಹೆಸರಿನಲ್ಲಿ ಮೂರೋ ನಾಲ್ಕೋ ಕನ್ನಡ ಚಾನಲ್ಲುಗಳನ್ನು ಕೊಡುತ್ತಿದ್ದವರೇ ಹೆಚ್ಚು. ಕನ್ನಡಿಗ ಗ್ರಾಹಕರಿಗೆ ಕನ್ನಡ ಚಾನಲ್ಲುಗಳೇ ಬೇಕು ಎಂಬ ಸಾಮಾನ್ಯ ಅರಿವೂ ಮುಂಚಿನ ಕಂಪನಿಗಳ ಗಮನಕ್ಕೆ ಬಾರದೇ ಹೋದಂತಿತ್ತು.
ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡಕ್ಕಿರೋ ಬೇಡಿಕೆಯನ್ನು ಅರ್ಥ ಮಾಡಿಕೊಂಡಂತಿರುವ ವಿಡಿಯೋಕಾನ್, ಅದನ್ನೇ ಗ್ರಾಹಕರಿಗೆ ಒದಗಿಸುವ ಮೂಲಕ ಹೆಚ್ಚು ಗ್ರಾಹಕರನ್ನು ತನ್ನೆಡೆಗೆ ಸೆಳೆದಿರುವುದಂತೂ ದಿಟ. ಡಿಶ್ ಒಂದೇ ಅಲ್ಲದೇ, ಮನರಂಜನೆ ಉದ್ದಿಮೆಯಲ್ಲಿ ತೊಡಗಿಕೊಂಡಿರೋ ಬೇರೆ ಕಂಪನಿಗಳೂ ಕನ್ನಡಕ್ಕಿರೋ ಬೇಡಿಕೆಯನ್ನ ಅರ್ಥ ಮಾಡ್ಕೋಬೇಕಾಗಿದೆ ಗುರೂ. ಬೇರೆ ಭಾಷೆಯಲ್ಲಿ ಮನರಂಜನೆಗಿಂತಾ, ಕನ್ನಡದಲ್ಲಿ ಮನರಂಜನೆಯೇ ಕನ್ನಡಿಗರಿಗೆ ಅಚ್ಚುಮೆಚ್ಚು ಎಂಬುದನ್ನು ಕಂಡುಕೋಬೇಕಾಗಿದೆ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!