ಒಕ್ಕೂಟ ವ್ಯವಸ್ಥೆಯ ಸುಧಾರಣೆ ಇಬ್ಬರಿಗೂ ಬೇಡ!ಮೊನ್ನೆ ದಿವಸ ಕರ್ನಾಟಕದ ರಾಜ್ಯಪಾಲರಾದ ಶ್ರೀ ಹಂಸರಾಜ್ ಭಾರಧ್ವಾಜ್ ಅವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡ್ಯೂರಪ್ಪನವರ ವಿರುದ್ಧವಾಗಿ ಕಾನೂನು ಹೋರಾಟಕ್ಕೆ ಸಮ್ಮತಿ ಕೊಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯ್ತು. ಇದನ್ನು ಪ್ರತಿಭಟಿಸಿ ಆಡಳಿತ ಮಾಡ್ತಿರೋ ಭಾರತೀಯ ಜನತಾ ಪಕ್ಷದೋರು "ಸ್ವಯಂಘೋಷಿತ ಕರ್ನಾಟಕ ಬಂದ್"ಗೆ ಕರೆ ಕೊಟ್ರು. ನಿನ್ನೆ ಬಂದ್ ನಡೆದೂ ಬಿಟ್ತು. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ನಡೆದ ಈ ಘಟನೆಗಳನ್ನು ನೋಡುದ್ರೆ ಭಾರತ ಸರಿಯಾದ ಒಕ್ಕೂಟ ಆಗ್ಬೇಕು ಅಂತ ನಮ್ಮ ನಾಡಿನ ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಯಾವತ್ತಿಗೆ ಅನ್ಸುತ್ತೋ ಅನ್ನೋ ಭಾವನೆ ಉಂಟಾಗುತ್ತೆ. ಕರ್ನಾಟಕದ ರಾಜಕೀಯ ವಿದ್ಯಮಾನಗಳನ್ನೇ ನೋಡಿ. ನಮ್ಮ ರಾಜ್ಯಸರ್ಕಾರದ ಮೇಲಿರೋ ಸುಪ್ರೀಂಪವರ್ ಕೇಂದ್ರಸರ್ಕಾರವಾಗಿದೆ. ಪ್ರತಿರಾಜ್ಯದಲ್ಲೂ ಇಲ್ಲಿನ ಜನರಿಂದಲೇ ಆಯ್ಕೆಯಾಗೋ ಶಾಸಕರು, ಸರ್ಕಾರ ಮುಖ್ಯಮಂತ್ರಿಗಳಿದ್ದಾಗ್ಲೂ ಇದು ಸ್ವತಂತ್ರವಾಗಿಲ್ಲ. ಭಾರತದ ಸಂಸತ್ತಿನಿಂದ ಚುನಾಯಿಸಲ್ಪಟ್ಟ ರಾಷ್ಟ್ರಪತಿಗಳು ನೇಮಕ ಮಾಡಿರುವ, ಪ್ರತಿಯೊಂದು ರಾಜ್ಯದಲ್ಲಿ ಠಿಕಾಣಿ ಹೂಡಿರುವ ರಾಜ್ಯಪಾಲರೇ ಇಲ್ಲಿ ಕೇಂದ್ರದ ಪ್ರತಿನಿಧಿಯಾಗಿ ಕುಳಿತು ರಾಜ್ಯಸರ್ಕಾರಗಳು ಉಸಿರಾಡಿಕೊಂಡಿರಲು ಕೃಪೆ ತೋರುತ್ತಿರಬೇಕಾದ ಪರಿಸ್ಥಿತಿ ಈ ದೇಶದ್ದು!

ಸರಿಹೋಗಬೇಕಾದ ವ್ಯವಸ್ಥೆ!

ಒಂದು ರಾಜ್ಯದ ರಾಜಕಾರಣದ, ವ್ಯವಸ್ಥೆಯ, ಆಡಳಿತದ ಅತ್ಯುನ್ನತ ಹಾಗೂ ನಿರ್ಣಾಯಕ ವ್ಯಕ್ತಿ ಆ ರಾಜ್ಯಕ್ಕೆ ಕೇಂದ್ರಸರ್ಕಾರ ನೇಮಿಸಿ ಕಳ್ಸಿರೋ ‘ರಾಜ್ಯಪಾಲ’ರು ಅನ್ನೋದು ಎಷ್ಟು ಸರಿ? ಒಂದು ರಾಜ್ಯದ ವಿಷಯವಾಗಿ ರಾಜ್ಯಪಾಲರಿಗೆ ಅಷ್ಟೊಂದು ಬಲ ತುಂಬಿರುವ ಈ ವ್ಯವಸ್ಥೆ ಸರಿಯೇ? ಈಗಿನ ವ್ಯವಸ್ಥೆಯಲ್ಲಿ ಕೇಂದ್ರಸರ್ಕಾರ ಬಲಿಷ್ಠವಾಗಿರಬೇಕಾದರೆ ರಾಜ್ಯಗಳ ಮೇಲೆ ಅದಕ್ಕೆ ಸಂಪೂರ್ಣ ಹಿಡಿತ ಇರಬೇಕು ಎನ್ನುವ ನೀತಿಯನ್ನು ನಾವು ಒಪ್ಪಿಕೊಂಡಂತಿದೆ. ರಾಜ್ಯಗಳಿಗೆ ಸಹಜವಾಗಿ ಯಾವ ಅಧಿಕಾರವೂ ಇಲ್ಲವಾಗಿದ್ದು ಇರುವ ಅಧಿಕಾರವೆಲ್ಲಾ ಕೇಂದ್ರಸರ್ಕಾರವು ಕೊಟ್ಟಿರುವುದು ಮಾತ್ರವೇ ಆಗಿದೆ. ಅಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿ ಬಂತು? ಅಧಿಕಾರ ವಿಕೇಂದ್ರೀಕರಣ ಅನ್ನೋಕೆ ಅರ್ಥವೇನು ಬಂತು?

ಹೀಗೆ ಇಂತಹ ಬದಲಾವಣೆಯನ್ನು ನಮ್ಮ ಸಂವಿಧಾನಕ್ಕೆ ಮಾಡಲು ಮುಂದಾಗಬೇಕು. ಅರವತ್ತು ವರ್ಷದ ನಂತರವಾದರೂ ಒಕ್ಕೂಟ ವ್ಯವಸ್ಥೆಯತ್ತ ಸಾಗಲು ಬೇಕಾದ ಬದಲಾವಣೆಗಳಿಗೆ ನಾವು ತೆರೆದುಕೊಳ್ಳಬೇಕು. ದುರಂತವೆಂದರೆ ಇಂತಹ ಬದಲಾವಣೆ ಮಾಡುವ ಮನಸ್ಸು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಲ್ಲ, ಸದಾಕಾಲ ರಾಜ್ಯಪಾಲರೆಂಬ ಕೇಂದ್ರಸರ್ಕಾರದ ಕೀಲಿಕೈಯ್ಯನ್ನು ರಾಜ್ಯಸರ್ಕಾರಗಳನ್ನು ಬಲಹೀನಗೊಳಿಸಲು ಇಬ್ಬರೂ ಶ್ರಮಿಸಿದವರೇ. ಈಗ ಕರ್ನಾಟಕದಲ್ಲಿ ರಾಜ್ಯಪಾಲರ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿ, ಜನರಿಂದ ಮರುಕ ಗಿಟ್ಟಿಸುವ, ರಾಜಕೀಯದಾಟ ಆಡುವ ಬದಲು ಕೇಂದ್ರದಲ್ಲಿ, ಭಾರತದಲ್ಲಿ ರಾಜ್ಯಗಳ ಮೇಲೆ ಕೇಂದ್ರ ಎಷ್ಟು ಕಡಿಮೆ ಹಿಡಿತ ಹೊಂದಬೇಕು ಅನ್ನೋದ್ರ ಬಗ್ಗೆ ವ್ಯವಸ್ಥೆ ರೂಪಿಸಲು ದನಿಯೆತ್ತಲಿ.

ಊಹೂಂ…! ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಿಜಕ್ಕೂ ರಾಜ್ಯಗಳನ್ನು ಬಲಪಡಿಸಬೇಕೆಂಬ ಕಲ್ಪನೆಯೂ ಇದ್ದಂತಿಲ್ಲ. ದೊಡ್ಡರಾಜ್ಯಗಳನ್ನು ಚಿಕ್ಕವನ್ನಾಗಿಸಿ ಅವುಗಳ ಬಲ ಕುಗ್ಗಿಸುವಂತಾದರೆ ಕೇಂದ್ರ ಬಲಿಷ್ಟವಾಗುತ್ತದೆ ಎಂದೇ ಇವೆರೆಡೂ ನಂಬಿರುವಂತೆ ಇವುಗಳ ರಾಜಕೀಯ ಇತಿಹಾಸ, ನಡವಳಿಕೆ, ನಿಲುವು ಮತ್ತು ಸಿದ್ಧಾಂತಗಳನ್ನು ಕಂಡಾಗ ಅನಿಸುತ್ತದೆ. ಅಲ್ವಾ ಗುರೂ!

1 ಅನಿಸಿಕೆ:

Badarinath Palavalli ಅಂತಾರೆ...

Shame to all politicians. Governes within a state shall be like this. I appreciate his will power and power from union government. I am not here supporting any particular party or any person over this high political drama. But, is a totally deceased govt. Shall leave more?

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails