ಪೀಠಿಕೆ: ಒಂದು ವ್ಯಕ್ತಿಗೆ ಭಾಷೆ ಹೇಗೆ ಒಂದು ಗುರುತೋ ಹಾಗೇ ಒಂದು ದೇಶಕ್ಕೂ ರಾಷ್ಟ್ರಧ್ವಜ, ರಾಷ್ಟ್ರಭಾಷೆಗಳೂ ಪ್ರಮುಖ. ಹಾಗಾಗಿ ಭಾರತದಲ್ಲಿ ಹಿಂದೀಭಾಷೆಯು ರಾಷ್ಟ್ರಭಾಷೆಯಾಗುವ ಬಗ್ಗೆ, ಆಡಳಿತ ಭಾಷೆಯಾಗುವ ಬಗ್ಗೆ ಜನರ ನಡುವಿನ ಸಂಪರ್ಕ ಭಾಷೆಯಾಗುವ ಬಗ್ಗೆ ಬಹು ಚರ್ಚಿತವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರೂ ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಹಿಂದೀಯನ್ನು ರಾಷ್ಟ್ರೀಯ ಅಭಿಮಾನದ ಪ್ರತೀಕವನ್ನಾಗಿ ಮಾಡಿದ್ದರು. ಭಾರತವನ್ನು ಶತಮಾನಗಳ ದಾಸ್ಯಕ್ಕೆ ಗುರಿಮಾಡಿದ ಬ್ರಿಟೀಶರ ವಿರುದ್ಧ ೧೮೫೭ರಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮ ೧೯೪೭ರಲ್ಲಿ ಕೊನೆಗೊಂಡಿತು. ಈ ಅವಧಿಯೇ ರಾಷ್ಟ್ರಭಾಷಾ ಪ್ರೇಮ ಮತ್ತು ರಾಷ್ಟ್ರಪ್ರೇಮಗಳೆರಡೂ ಒಂದೆನ್ನುವಂತಹ ವಾತಾವರಣವಿದ್ದ ಕಾಲ. ಈಗಿನ ಜಾಗತೀಕರಣದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಸಾಂಸ್ಕೃತಿಕ ಮತ್ತು ಆರ್ಥಿಕ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದ್ದು ದೇಶದ ಆಡಳಿತ ಭಾಷೆಯ ಬಗೆಗಿನ ಚರ್ಚೆಯು ಸಾಂದರ್ಭಿಕವೂ ಅತ್ಯಗತ್ಯವೂ ಆದುದಾಗಿದೆ. ಭಾರತದಲ್ಲಿರುವ ಅನೇಕ ಪ್ರಾದೇಶಿಕ ನುಡಿಗಳು ತಮ್ಮವೇ ಆದ ಇತಿಹಾಸ ಮತ್ತು ಸಾಹಿತ್ಯದ ಹಿರಿಮೆಗಳನ್ನು ಹೊಂದಿವೆ. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಈ ಎಲ್ಲಾ ನುಡಿಗಳ ಹಿರಿಮೆಯನ್ನು ಕಾಯ್ದಿಟ್ಟುಕೊಳ್ಳುವ ಅಗತ್ಯವಿರುವಂತೆಯೇ ರಾಜ್ಯರಾಜ್ಯಗಳ ನಡುವಿನ ಸಂಪರ್ಕಕ್ಕಾಗಿ ಒಂದು ಭಾಷೆಯನ್ನು ಹೊಂದುವುದೂ ಅಗತ್ಯವಾಗಿದೆ. ನಮ್ಮ ದೇಶದ ಪುರಾತನ ಸಂಸ್ಕೃತಿಯನ್ನು ಅಡಗಿಸಿಕೊಂಡಿರುವ ಸಂಸ್ಕೃತವು ಎಲ್ಲಾ ಭಾರತೀಯ ಭಾಷೆಗಳಿಗೆ ಮೂಲವಾಗಿದೆ ಮತ್ತು ಹಿಂದೀ ಭಾಷೆಯು ಸಂಸ್ಕೃತಕ್ಕೆ ಬಲು ಹತ್ತಿರದ ಭಾಷೆಯಾಗಿದೆ. ಇದನ್ನು ಭಾರತದ ಬಹುತೇಕ ಭಾಗಗಳಲ್ಲಿನ ಜನರು ಓದಲು, ಬರೆಯಲು, ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಬಹುಸಂಖ್ಯಾತರ ಭಾಷೆಯಾದ ಹಿಂದಿಯು ಭಾರತದ ರಾಷ್ಟ್ರಭಾಷೆಯ ಸ್ಥಾನವನ್ನು ಅತ್ಯುತ್ತಮವಾಗಿ ತುಂಬುತ್ತದೆ.
೨. ಭಾರತದ ಭಾಷಾನೀತಿ: ಹೇರಿಕೆ ಅಳೆಯಲೊಂದು ಸಮಿತಿ!
೧. ಭಾರತದ ಭಾಷಾನೀತಿ

ವೈವಿದ್ಯತೆಯಲ್ಲಿ ಏಕತೆ ಎಂಬ ಭಗವದ್ ಗೀತೆ
ಇಂದಿನ ಭಾರತದ ಭಾಷಾನೀತಿ
ಹಿಂದೀ ಹರಡಲೊಂದು ನುಡಿ ಹಮ್ಮುಗೆ!
ಹಾಗಾದರೆ ರಾಜ್ಯಗಳನ್ನು ಒಪ್ಪಿಸುವುದು ಹೇಗೆ? ಅದಕ್ಕೆಂದೇ ಒಂದು ನುಡಿಹಮ್ಮುಗೆಯನ್ನು (language planning) ಭಾರತ ಸರ್ಕಾರ ರೂಪಿಸಿಕೊಂಡಿದೆ. ಅದಕ್ಕಾಗೆ ಒಂದು ಇಲಾಖೆಯನ್ನೂ ತೆರೆದಿದೆ. ಜೊತೆಯಲ್ಲೇ, ಆಗಿಂದಾಗ್ಗೆ ಸಂಸತ್ತಿನ ಇಪ್ಪತ್ತು ಸದಸ್ಯರ ಸಮಿತಿಯೊಂದನ್ನು ರಚಿಸಿ ಅದರ ಮೂಲಕ - ಹೇಗೆ ಹಿಂದಿಯನ್ನು ಆಡಳಿತದಲ್ಲಿ ಜಾರಿ ಮಾಡಲಾಗಿದೆ ಎನ್ನುವುದನ್ನು ಕಾಲದಿಂದ ಕಾಲಕ್ಕೆ ಸಮೀಕ್ಷೆ, ಅಧ್ಯಯನ ಮಾಡಿಸಿ, ಶಿಫಾರಸ್ಸುಗಳನ್ನು ರಾಷ್ತ್ರಪತಿಗಳಿಗೆ ಸಲ್ಲಿಸಿ, ಆ ಶಿಫಾರಸ್ಸುಗಳನ್ನು ಕಾಯ್ದೆ ಕಾನೂನುಗಳ ಮೂಲಕ ಜಾರಿ ಮಾಡುತ್ತಿದೆ. ಅಂದರೆ ಭಾರತ ಸರ್ಕಾರಕ್ಕೆ ಹಿಂದಿಯೊಂದನ್ನೇ ಭಾರತದ ಮೂಲೆಮೂಲೆಗಳಲ್ಲಿ ಜಾರಿ ಮಾಡುವ ಗುರಿಯಿರುವುದು ಅದರ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿದೆ. ಮೇಲುನೋಟಕ್ಕೆ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ರಾಜ್ಯ ರಾಜ್ಯಗಳ ನಡುವಿನ ಸಂವಹನಕ್ಕಾಗಿ ಹಿಂದಿಯನ್ನು ಉತ್ತೇಜಿಸುವಂತೆ ತೋರುವ ಈ ಬೆಳವಣಿಗೆಗಳು ನಿಜಕ್ಕೂ ಭಾರತದ ವೈವಿಧ್ಯತೆಯನ್ನು ಅಳಿಸಿಹಾಕಲು ಮುಂದಾಗಿವೆ. ನಿಮ್ಮೊಡನೆ ಭಾರತ ಸರ್ಕಾರದ ಸಂಸತ್ ಸಮಿತಿ ನಡೆಸಿರುವ ಅಧ್ಯಯನ, ಅದರ ಶಿಫಾರಸ್ಸು ಮತ್ತು ಸರ್ಕಾರದ ಉದ್ದೇಶಗಳ ಬಗ್ಗೆ “Department of Official languages”ನ ಮಿಂಬಲೆಯಿಂದ ಹೆಕ್ಕಿ ತೆಗೆದ ದಾಖಲೆಗಳನ್ನು ಆಧರಿಸಿದ ಮಾಹಿತಿಗಳನ್ನು ಹಂಚಿಕೊಳ್ಳುತ್ತೇವೆ.
(ಮುಂದುವರೆಯುತ್ತದೆ…)
ಕನ್ನಡ ಚಿತ್ರರಂಗದ ರಣಧೀರ!
ಮೈಸೂರು ರಾಜ್ಯದ ದೊರೆಯೇ ರಣಾಧೀರ ನಾಯಕನೇ
ನಿನ್ನಂಥವರಾರು ಇಲ್ವಲ್ಲೋ ಲೋಕದಾ ಮ್ಯಾಲೆ!
ನಿನ್ನಂಥೋರ್ ಯಾರೂ ಇಲ್ವಲ್ಲೋ!!
ಹಿಂದೆ ಇನ್ನೂರು ದಂಡು! ಮುಂದೆ ಮುನ್ನೂರು ದಂಡು
ನಿನ್ನಂಥೋರ್ ಯಾರೂ ಇಲ್ಲಲ್ಲೋ ಲೋಕದ ಮ್ಯಾಲೆ!!
ತಿರುಚನಾಪಳ್ಳಿಯೊಳಗೆ ಕೊಬ್ಬಿದಾ ಮಲ್ಲಜಟ್ಟಿ
ಉಟ್ಟಾ ಚಡ್ಡಿಯನ್ನು ದಿಡ್ಡಿ ಬಾಗಿಲ ಮೇಲೆ
ತೂಗಿ ಬಿಟ್ಟನಂತಾ ಕೇಳಿ ಕಿಡಿಕಿಡಿಯಾದಾ ದೊರೆಯೇ!!
ಮಲ್ಲರ ಮಾನಾ ಕಾಯುವೆನೆಂದು
ಮಲ್ಲ ವೇಷವಾ ತೊಟ್ಟುಕೊಂಡು ತಿರುಚನಾಪಳ್ಳಿಗೆ
ಹೋಗಿ ಚಡ್ಡಿ ತೆಗೆದೆಳೆದಾ ದೊರೆಯೇ!!
ಮಲ್ಲಾಯುದ್ಧದಲ್ಲಿ ಸಮನಿಲ್ಲಾ ನಮ್ಮಾ ದೊರೆಗೆ
ತೋರ್ಯಾರೋ ಕೈಯ್ಯಾಚಳಕಾ!
ನೋಟಕ್ಕೆ ಕಾಣಾದಂತೆ ಸೊಂಟಾದೊಳಗಿದ್ದ ಮಹಾ
ನರಸಿಂಹಾನೆಂಬೋ ಕತ್ತಿಯಿಂದಾ
ರುಂಡಾಬೇರೇಯಾಗದಂತೆ ಕಡಿದರೋ
ನಮ್ಮಾ ರಣಧೀರಾ ನಾಯಕಾ!!
(ಸಿ. ವೀರಣ್ಣ - ನಾಟಕ: ಹುತ್ತವ ಬಡಿದರೆ).
ಕನ್ನಡಿಗರ ಕಣ್ನಮುಂದೆ ಮಯೂರ, ಪುಲಿಕೇಶಿ, ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯರನ್ನು ತಾನೇ ಅವರಾಗಿ ತಂದಿಟ್ಟವರು ಡಾ. ರಾಜ್‍ಕುಮಾರ್. ಇವತ್ತು ನಮ್ಮ ರಾಜಣ್ಣನ ಹುಟ್ಟುಹಬ್ಬ. ಇಡೀ ನಾಡು ರಾಜಣ್ಣ ಮತ್ತೊಮ್ಮೆ ಹುಟ್ಟಿಬಾ ಎಂದು ಮನದುಂಬಿ ಹಂಬಲಿಸುತ್ತಿದೆ.
ರಾಜ್‍ರಿಂದ ಪಡೆಯಬೇಕಾದ ಪ್ರೇರಣೆ..
ಡಾ ರಾಜ್ ಬರೀ ತೆರೆಯಮೇಲಷ್ಟೇ ರಣಧೀರನಲ್ಲ. ಕನ್ನಡ ಚಿತ್ರರಂಗ ನೆಲೆಯಿಲ್ಲದೆ ಮದ್ರಾಸನ್ನು ಅವಲಂಬಿಸಿ ತಮಿಳು ತೆಲುಗು ಚಿತ್ರರಂಗದ ಆಲದ ಮರದಡಿ ಟಿಸಿಲೊಡೆಯಲು ತಡವರಿಸುತ್ತಿದ್ದಾಗ, ಅದಕ್ಕೆ ತನ್ನದೇ ಅಸ್ತಿತ್ವ ಕಟ್ಟಿಕೊಳ್ಳಲು ನೆರವಾದದ್ದು ನಮ್ಮ ರಾಜ್. ಕನ್ನಡಿಗರ ಉಳಿವು ನಮ್ಮ ಉದ್ದಿಮೆಗಾರಿಕೆಯು ಹೆಚ್ಚುವುದರಲ್ಲಿ ಮಾತ್ರವೇ ಅಡಗಿದೆ ಎನ್ನುವುದನ್ನು ಮನಗಂಡು ಬಾಲಕೃಷ್ಣ, ನರಸಿಂಹರಾಜು, ಜಿ.ವಿ.ಅಯ್ಯರ್ ಅವರೊಡನೆ ಸೇರಿ, ಊರೂರು ಅಲೆದು ನಾಟಕ ಪ್ರದರ್ಶನ ನೀಡಿ, ಹಣ ಒಟ್ಟುಮಾಡಿ ತೆಗೆದ ಚಿತ್ರವೇ ರಣಧೀರ ಕಂಠೀರವ. ನೋಡ್ರೀ.. ಆ ಮುಖದಲ್ಲಿ ಅದೇ ಸ್ವಾಭಿಮಾನ ಹೇಗೆ ತುಂಬಿ ತುಳುಕುತ್ತಿದೆ. ಆ ಕಣ್ಣಲ್ಲಿ ಜಗತ್ತನ್ನೇ ಗೆಲ್ಲುವ ಛಲ ಹೇಗೆ ಉಕ್ಕುತ್ತಿದೆ... ಇಂದು ಕನ್ನಡಿಗರಿಗೆ ಬೇಕಿರುವುದು ಇಂತಹ ಎದೆಗಾರಿಕೆಯೇ. ಹೊಸದನ್ನು ಮಾಡುವ, ಸವಾಲು ಎದುರಿಸಿ ಗೆಲ್ಲುವ ದಿಟ್ಟತನ, ನನ್ನತನ ಬಿಡೆನೆಂಬ ಛಲಗಾರಿಕೆಗಳೇ ಕನ್ನಡಿಗರನ್ನು, ಕನ್ನಡನಾಡನ್ನೂ ಉದ್ಧರಿಸಬಲ್ಲವು. ರಾಜ್ ನಮ್ಮೊಡನೆ ಇಲ್ಲದಿದ್ದರೇನಂತೆ? ರಾಜ್ ಎಂಬ ಶಕ್ತಿ ನಮಗೆ ಪ್ರೇರಣೆಯಾಗಿದೆಯಲ್ಲವಾ? ಈ ಮಾತು ಕನ್ನಡಚಿತ್ರರಂಗಕ್ಕೂ ಅನ್ವಯಿಸುತ್ತೆ ಗುರೂ...
ಡಬ್ಬಿಂಗ್ ಬಂದ್ರೆ ಕನ್ನಡ್ದೋರು ಬೇರೆ ಬಾಶೆ ಕಲ್ಯಾಕಿಲ್ಲಾ..!

"ಇಡೀ ಕನ್ನಡ ಚಿತ್ರರಂಗವೇ ಇಂದು ದೊಡ್ಡು ಬಿಕ್ಕಟ್ಟಿನ ಅಂಚಲ್ಲಿ ಬಂದ್ನಿಂತದೆ. ಇಡೀ ಕನ್ನಡ ಕುಲ ಅಳಿದು ಹೋಯ್ತಿದೆ, ಕನ್ನಡದೋರ ಸ್ವಾಭಿಮಾನ, ಸಂಸ್ಕೃತಿ, ನುಡಿ, ಪರಂಪರೆಗಳು ವಿನಾಶದ ಅಂಚಲ್ಲಿ ಬಂದು ನಿಂತವೆ. ಇದುಕ್ಕೆಲ್ಲಾ ಕಾರಣ ನಾಳೆ ಕನ್ನಡದಲ್ಲಿ ಒಂದು ಡಬ್ಬಿಂಗ್ ಪಿಚ್ಚರ್ ರಿಲೀಜ್ ಆಯ್ತಾ ಇದೆ. ಇಂತಾ ಹೊತ್ತಲ್ಲಿ ಕನ್ನಡ ನಾಡು ನುಡಿಯನ್ನು ಉಳಿಸಕ್ಕೆ ಇಡೀ ಕನ್ನಡ ಚಿತ್ರರಂಗ ಒಂದಾಗಿ ಟೊಂಕಕಟ್ಟಿ ನಿಂತಿರುವಾಗ, ಕೆಲವು ಕನ್ನಡ ದ್ರೋಹಿಗಳು ಡಬ್ಬಿಂಗ್ ಪರವಾಗಿ ವಕಾಲತ್ತು ಮಾಡುತ್ತಾ ಹಲವಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇವರಿಗೆಲ್ಲಾ ಉತ್ತರ ನೀಡಬೇಕಾದ ಹೊಣೆಗಾರಿಕೆ ನಮಗಿದೆ" ಅಂತಾ ಕನ್ನಡ ಚಿತ್ರರಂಗದ ದೊಡ್ಡೋರೊಬ್ರು ನಮ್ಮ ಎಂಕನ್ ತಾವ ಬಾಯ್ ಬುಟ್ರಂತೆ.
ನಮ್ ಕನ್ನಡ ಸಿನಿಮಾದಾಗೆ ಇವತ್ತು ಕತೆ-ಪತೇ ಎಲ್ಲಾ ಎಲ್ಲೈತೆ? ತೆಮಿಳು, ತೆಲುಗು, ಹಿಂದಿ ಸಿನಿಮಾದೋರು ತೆಗುದ್ರೆ ತಾನೇ ನಮಗೆ ಕತೆ ಸಿಗದು... ಈಗ ಅವುನ್ನೆಲ್ಲಾ ಸೀದಾ ಕನ್ನಡಕ್ಕೆ ಡಬ್ ಮಾಡ್ಬುಟ್ರೆ ನಮ್ ಒಳ್ಳೊಳ್ಳೆ ನಿರ್ದೇಶಕರು ಎಂಗ್ ಸಿನಿಮಾ ತೆಗ್ಯಕ್ ಆದೀತು? ಬೇರೆ ಬಾಸೇಲಿ ಗೆದ್ದಿರೋ ಸಿನಿಮಾ ಅಂದ್ರೆ ನಮ್ ನಿರ್ಮಾಪಕರು ಸೇಪು, ನಮ್ ತಂತ್ರಗ್ನರಿಗೂ ಕೆಲಸ ಸಿಗುತ್ತೆ. ಕನ್ನಡದ ಮುಂಡೆವುಕ್ಕೆ ಇಷ್ಟು ಸಾಲ್ದಾ? ಆ ಹಾಳು ಟೈಟಾನಿಕ್ಕು, ಅವತಾರ್, ಸೂಪರ್ ಮ್ಯಾನು, ಸ್ಪೈಡರ್ ಮ್ಯಾನು ಅಂತಾ ಕಿತ್ತೋಗಿರೋ ಇಂಗ್ಲೀಶ್ ಪಿಚ್ಚರೆಲ್ಲಾ ಯಾಕ್ ನೋಡಬೇಕು? ಇದೇ ಇಂಗ್ಲೀಸೋರು ತಾನೆ ನಮ್ಮುನ್ ಆಳಿದ್ದು? ನಾವು ಮಾಬಾರತ ಸೀರಿಲ್ಲು ತೆಗ್ಯಕ್ ಆಗಲ್ಲಾ ಅಂದ್ರೆ ಅದು ಇಡೀ ಕನ್ನಡಿಗರ ಕರ್ಮ, ನಮ್ಮೋರೆ ಸೀತೆ ಅಂತಾ ತೆಗೀತಿಲ್ವಾ? ಅದುನ್ನೇ ನೋಡಲಿ... ನಮ್ ಅಳ್ಳಿ ಐಕ್ಳು ಇಂಗ್ಲೀಸ್ ಪಿಚ್ಚರ್ ನೋಡಿ ಕಲ್ಯದಾರೂ ಏನೈತೆ? ಇನ್ನು ಆ ಅಮೀರ್ ಕಾನ್ ತೆಗ್ದಿರೋ ತಾರೆ ಜಮೀನ್ ಪರ್, ಅಮಿತಾಬನ ಪಾ ಎಲ್ಲಾ ನೋಡಿ ನಮ್ಮವು ಏನು ಸಾದುಸ್ತಾರೆ? ಸಿನಿಮಾ ಮನರಂಜನೆಗೆ ಮಾತ್ರಾ ಇರೋದು. ಅಂತಾ ಸಿನ್ಮಾದಿಂದೇನು ಸಮಾಜ ಉದ್ದಾರ ಆಗಕ್ಕಿಲ್ಲ. ಅಷ್ಟಕ್ಕೂ ಸಿನ್ಮಾ ಅನ್ನೋದು ಸಮಾಜಾನ ಬದಲಾಯಿಸೋಕಿಲ್ಲ. ಯಾವನೋ ಕೊಲೆ ಮಾಡ್ದಾ ಅಂತಾ ಸಿನಿಮಾದಲ್ಲಿ ತೋರ್ಸಿದ್ಕೆ ಅವ್ನು ಅಂಗ್ ಮಾಡ್ದಾ ಅನ್ನಕ್ ಆಯ್ತುದಾ? ಒಟ್ನಾಗೆ ಕನ್ನಡಕ್ಕೆ ಡಬ್ಬಿಂಗ್ ಪಿಚ್ಚರ್ ಬರಬಾರದು.ಇನ್ನು ತುಳುನೋರು, ಕೊಡಗಿನೋರು ಅವರವರ ಬಾಸೇಲೇ ಪಿಚ್ಚರ್ ತೆಗೀಬೇಕು, ಅವನ್ನೂ ಡಬ್ ಮಾಡಬಾರ್ದು. ಯಾಕಂದ್ರೆ ಕನ್ನಡ್ದೋರು ತುಳು, ಕೊಡವ ಬಾಸೇ ಎಲ್ಲಾ ಕಲ್ಯದ್ ಬ್ಯಾಡ್ವಾ? ಒಸಿ ಯೋಚ್ಸಿ. ಕನ್ನಡದೋರು ಬೇರೆ ಬೇರೆ ಬಾಸೆ ಪಿಚ್ಚರ್ರುಗಳ್ನ ಅವವೇ ಬಾಸೇಲಿ ನೋಡುದ್ರೆ ಯಾಪಾಟಿ ಬಾಸೆ ಕಲೀಬೌದು ಅಂತಾ. ಆಗ ಕೆಲ್ಸ ಉಡಿಕ್ಕೊಂಡು ತಮಿಳ್ನಾಡು, ಆಂದ್ರ, ಕೇರಳ, ಬಾಂಬೆ,ಉತ್ತರ ಬಾರತ ಅಂತಾ ಯಾಕಡೆ ಓದ್ರು ಬದಿಕ್ಕೋಬೋದು. ಅಂಗಾಗಿ ಡಬ್ಬಿಂಗು ಬರಬಾರ್ದು.ಅಂಗೂ ಬೇಕಾರೆ ಜಾಕಿನಾ, ಸೂಪರ್ರುನ್ನಾ ತೆಲ್ಗು ಬಾಸೆಗೆ ಡಬ್ ಮಾಡಾಯ್ತಲ್ವಾ? ಈಗ ಅವುನ್ನ ಬೇರೆ ಬೇರೆ ಬಾಸೆಗೂ ಡಬ್ ಮಾಡಿ ಬೆಂಗಳೂರೂ ಸೇರ್ದಂಗೆ ಇಡೀ ಕರ್ನಾಟಕದಲ್ಲಿ ರಿಲೀಜ್ ಮಾಡಮಾ. ಆಗ ನಮ್ಮಲ್ಲಿರೋ ಬೇರೆ ಬಾಸೆಯೋರೂ ’ಕನ್ನಡದಲ್ಲಿ ಪಸಂದಾಗಿ ಪಿಚ್ಚರ್ರು ತೆಗೀತಾರೆ, ನಾಳೆಯಿಂದ ನಾವು ಕನ್ನಡ ಕಲ್ತುಬುಡಮಾ’ ಅಂದ್ಕೊಂತಾರೆ.ಇನ್ನು ಈ ನಮ್ ಹೋರಾಟದಲ್ಲಿ ಇಡೀ ಚಿತ್ರರಂಗದ ಎಲ್ಲಾರೂ ಪಾಲ್ಗೊಳ್ತೀವಿ. ಎಲ್ರೂ ತಮ್ಮ ಸ್ವಂತ ಇಷ್ಟದಿಂದ ಬತ್ತಾಔರೆ. ಅಂಗೂ ಯಾರಾನಾ ಸ್ವಂತ ಇಷ್ಟ ಪಟ್ಟು ಬರಲಿಲ್ಲಾ ಅಂದ್ರೆ ಅವುರನ್ನ ಚಿತ್ರರಂಗದಿಂದ ಬಹಿಸ್ಕಾರ ಹಾಕ್ತೀವಿ. ಯಾವನಾರಾ ಟಾಕೀಸೋನು ಡಬ್ಬಿಂಗ್ ಪಿಚ್ಚರ್ ಹಾಕುದ್ರೆ ಆ ಟಾಕೀಸೋರುನ್ನ ಬಹಿಸ್ಕಾರ ಮಾಡ್ತೀವಿ. ಅಂಥಾ ಟಾಕೀಸಾಗೆ ಕಾನೂನು ಮೀರಿ ಏನಾರಾ ದೊಂಬಿ ಗಿಂಬಿ ಆದ್ರೆ ಮಾತ್ರಾ ನಾವು ಅದುಕ್ ಜವಾಬ್ದಾರ್ರಲ್ಲಾ... ಕರ್ನಾಟಕದಲ್ಲಿ ಚಿತ್ರರಂಗ ನಂಬ್ಕೊಂಡು ಸಾವಿರಾರು ಕುಟುಂಬಗಳು ಬದುಕ್ತಾ ಇವೆ. ಇವರೆಲ್ಲಾ ಬದುಕೋದ್ ಬ್ಯಾಡ್ವಾ? ಅದುಕ್ಕೇ ಕನ್ನಡ ಸಿನಿಮಾ ಎಂಗೇ ಇದ್ರೂ ಕನ್ನಡದೋರು ಬಂದು ನೋಡಲೇಬೇಕು. ನಿಮಗೇನಾರಾ ಬೇರೆ ಬಾಸೆ ಪಿಚ್ಚರ್ ಮೆಚ್ಚುಗೆ ಆಯ್ತಾ? ನಮಗೆ ಯೋಳಿ. ನಾಕೇ ವಾರದಲ್ಲಿ ರಿಮೇಕು ಮಾಡಿ ನಿಮ್ಮುಂದೆ ತಂದು ಮಡುಗ್ತೀವಿ. ನಮ್ ಕಯ್ಯಾಗ್ ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳ ಬಗ್ಗೆ ಮಾತಾಡ್ ಬ್ಯಾಡ್ರಿ. ನಾವು ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳನ್ನು ನೋಡಲೇ ಬ್ಯಾಡ್ರೀ.. ಅದು ಕನ್ನಡ ದ್ರೋಹ... ಆಮೇಲೆ ನೀವೇನಾರ ನಾಳೆ ಆ ಡಬ್ಬಿಂಗ್ ಪಿಚ್ಚರ್ ನೋಡಕ್ಕೆ ಟಾಕೀಸ್ ಕಡೆ ಬಂದ್ರೋ ಬುಲ್ಡೆಗೆ ಬಿಸ್ನೀರ್ ಕಾಸಿಬುಡ್ತೀವಿ. ನಮ್ ಕನ್ನಡ ನಾಡಿನ ಸಂಸ್ಕೃತಿ, ಬಾಸೆ ಉಳ್ಸಕ್ಕೆ ನಾವು ಪ್ರಾಣಾ ಕೊಡಕ್ಕೂ ರೆಡಿ..
ವಿಕ್ಷನರಿಯಲ್ಲಿ ನೂರು ಸಾವಿರ ದಾಟಿದ ಕನ್ನಡ

ಈ ಸುದ್ದಿ ಕನ್ನಡಿಗರಿಗೆ ಸಕ್ಕತ್ ಸಂತಸದ ವಿಷಯ. ವಿಕ್ಷನರಿಯಲ್ಲಿ ಕನ್ನಡ ಒಂದು ಲಕ್ಷದ ಗಡಿ ದಾಟಿದೆ. ಹೀಗೆ ದಾಟಿರುವ ಜಗತ್ತಿನ ಕೆಲವೇ ನುಡಿಗಳ ಸಾಲನ್ನು ಸೇರಿಕೊಂಡಿದೆ. ವಿಕ್ಷನರಿಯೆಂಬ ಈ ನುಡಿಕಡಲ ಬಗ್ಗೆ ಈ ಹಿಂದೆ ಬರೆದಿದ್ದೆವು. ಅದು ಜುಲೈ ೧೯, ೨೦೧0ರಂದು ಹಾಕಿದ ಸುದ್ದಿ. ವಿಕ್ಷನರಿಯೆನ್ನುವ ಅಂತರ್ಜಾಲ ನಿಘಂಟಿನಲ್ಲಿ ಕನ್ನಡ ತನ್ನ ಹೆಜ್ಜೆಯೂರಿ ಮೈಲಿಗಲ್ಲೊಂದನ್ನು ಮುಟ್ಟಿದ ಬಗ್ಗೆ ಆ ಸುದ್ದಿಯಿತ್ತು.
ಅಂದಿನ ಮಾತು...
ಅಂತರ್ಜಾಲ ಲೋಕದಲ್ಲಿ ವಿಕಿಪೀಡಿಯಾದೋರು ಕೊಡಮಾಡಿರೋ ಒಂದು ಮಾಯಾದಂಡ ಅಂದ್ರೆ ವಿಕ್ಷನರಿ. ಇದು ವಿಕಿ+ಡಿಕ್ಷನರಿ ಎಂಬ ಎರಡು ಪದಗಳ್ನ ಬೆರೆಸಿ ಮಾಡಿರೋ ಹೆಸರು. ಅಂತರ್ಜಾಲದಲ್ಲಿ ತನ್ನ ಇರುವಿಕೆಯನ್ನು ನೆಲೆ ನಿಲ್ಲಿಸಿ ತನ್ನ ಹರವನ್ನು ಹೆಚ್ಚಿಸಿಕೊಳ್ಳಬಯಸೋ ಪ್ರತಿಯೊಂದು ಭಾಷೆಗೂ ಈ ತಾಣ ಅಮೃತ ಪಾನ.
ವಿಕ್ಷನರಿಯ ಮಹತ್ವ
ಇದು ಅಂತರ್ಜಾಲ ನಿಘಂಟು ಎನ್ನುವಂತೆ ಮೇಲುನೋಟಕ್ಕೆ ತೋರಿದರೂ ಬುಡಮಟ್ಟದಲ್ಲೇ ನಿಘಂಟಿಗೂ ಕೆಲವು ವ್ಯತ್ಯಾಸಗಳಿವೆ. ಇಲ್ಲಿನ ನುಡಿಕಡಲಿಗೆ ಯಾರು ಬೇಕಾದರೂ ಪದ ಸೇರಿಸಬಹುದು. ಪ್ರತಿಯೊಂದು ಪದಕ್ಕೂ ಒಂದೊಂದು ಪುಟ ಹುಟ್ಟುಹಾಕಿ ಪದದ ಬಗ್ಗೆ ಅನೇಕ ಮಾಹಿತಿ ನೀಡಬಹುದು. ಪ್ರತಿ ಪದಕ್ಕೂ ಯಾವ ಭಾಷೆಯಲ್ಲಿ ಬೇಕಾದರೂ ಅರ್ಥ ನೀಡಬಹುದು. ಅಂದರೆ ಒಂದು ಕನ್ನಡ ಪದಕ್ಕೆ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಏನಂತಾರೆ ಅಂತ ಬರೀಬಹುದು. ಮುಂದಿನ ದಿನಗಳಲ್ಲಿ ನಮ್ಮ ಅಂತರ್ಜಾಲದ ಮೇಲಿನ ಅವಲಂಬನೆ ಹೆಚ್ಚಾಗುವ ಸಾಧ್ಯತೆಗಳೇ ಇದ್ದು ಇಂತಹ ಅಂತರ್ಜಾಲ ನಿಘಂಟಿನ/ ನುಡಿಕಡಲಿನ ಪಾತ್ರ ಮಹತ್ವದ್ದೂ ಹೆಚ್ಚಿನದ್ದೂ ಆಗಲಿದೆ. ಆ ದೃಷ್ಟಿಯಿಂದ ನೋಡಿದಾಗ ವಿಕ್ಷನರಿಯಲ್ಲಿ ಕನ್ನಡ ಪದಗಳು ಹೆಚ್ಚು ಹೆಚ್ಚು ಇರಬೇಕಾದ ಅಗತ್ಯ ಮತ್ತು ಇದ್ದರೆ ಆಗುವ ಉಪಯೋಗಗಳು ಮನದಟ್ಟಾಗುತ್ತವೆ