ಡಬ್ಬಿಂಗ್ ಬಂದ್ರೆ ಕನ್ನಡ್ದೋರು ಬೇರೆ ಬಾಶೆ ಕಲ್ಯಾಕಿಲ್ಲಾ..!


"ಇಡೀ ಕನ್ನಡ ಚಿತ್ರರಂಗವೇ ಇಂದು ದೊಡ್ಡು ಬಿಕ್ಕಟ್ಟಿನ ಅಂಚಲ್ಲಿ ಬಂದ್ನಿಂತದೆ. ಇಡೀ ಕನ್ನಡ ಕುಲ ಅಳಿದು ಹೋಯ್ತಿದೆ, ಕನ್ನಡದೋರ ಸ್ವಾಭಿಮಾನ, ಸಂಸ್ಕೃತಿ, ನುಡಿ, ಪರಂಪರೆಗಳು ವಿನಾಶದ ಅಂಚಲ್ಲಿ ಬಂದು ನಿಂತವೆ. ಇದುಕ್ಕೆಲ್ಲಾ ಕಾರಣ ನಾಳೆ ಕನ್ನಡದಲ್ಲಿ ಒಂದು ಡಬ್ಬಿಂಗ್ ಪಿಚ್ಚರ್ ರಿಲೀಜ್ ಆಯ್ತಾ ಇದೆ. ಇಂತಾ ಹೊತ್ತಲ್ಲಿ ಕನ್ನಡ ನಾಡು ನುಡಿಯನ್ನು ಉಳಿಸಕ್ಕೆ ಇಡೀ ಕನ್ನಡ ಚಿತ್ರರಂಗ ಒಂದಾಗಿ ಟೊಂಕಕಟ್ಟಿ ನಿಂತಿರುವಾಗ, ಕೆಲವು ಕನ್ನಡ ದ್ರೋಹಿಗಳು ಡಬ್ಬಿಂಗ್ ಪರವಾಗಿ ವಕಾಲತ್ತು ಮಾಡುತ್ತಾ ಹಲವಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇವರಿಗೆಲ್ಲಾ ಉತ್ತರ ನೀಡಬೇಕಾದ ಹೊಣೆಗಾರಿಕೆ ನಮಗಿದೆ" ಅಂತಾ ಕನ್ನಡ ಚಿತ್ರರಂಗದ ದೊಡ್ಡೋರೊಬ್ರು ನಮ್ಮ ಎಂಕನ್ ತಾವ ಬಾಯ್ ಬುಟ್ರಂತೆ.

ಅವರಂದಿದ್ದು ಏನ್ ಗೊತ್ರಾ?

ನಮ್ ಕನ್ನಡ ಸಿನಿಮಾದಾಗೆ ಇವತ್ತು ಕತೆ-ಪತೇ ಎಲ್ಲಾ ಎಲ್ಲೈತೆ? ತೆಮಿಳು, ತೆಲುಗು, ಹಿಂದಿ ಸಿನಿಮಾದೋರು ತೆಗುದ್ರೆ ತಾನೇ ನಮಗೆ ಕತೆ ಸಿಗದು... ಈಗ ಅವುನ್ನೆಲ್ಲಾ ಸೀದಾ ಕನ್ನಡಕ್ಕೆ ಡಬ್ ಮಾಡ್ಬುಟ್ರೆ ನಮ್ ಒಳ್ಳೊಳ್ಳೆ ನಿರ್ದೇಶಕರು ಎಂಗ್ ಸಿನಿಮಾ ತೆಗ್ಯಕ್ ಆದೀತು? ಬೇರೆ ಬಾಸೇಲಿ ಗೆದ್ದಿರೋ ಸಿನಿಮಾ ಅಂದ್ರೆ ನಮ್ ನಿರ್ಮಾಪಕರು ಸೇಪು, ನಮ್ ತಂತ್ರಗ್ನರಿಗೂ ಕೆಲಸ ಸಿಗುತ್ತೆ. ಕನ್ನಡದ ಮುಂಡೆವುಕ್ಕೆ ಇಷ್ಟು ಸಾಲ್ದಾ? ಆ ಹಾಳು ಟೈಟಾನಿಕ್ಕು, ಅವತಾರ್, ಸೂಪರ್ ಮ್ಯಾನು, ಸ್ಪೈಡರ್ ಮ್ಯಾನು ಅಂತಾ ಕಿತ್ತೋಗಿರೋ ಇಂಗ್ಲೀಶ್ ಪಿಚ್ಚರೆಲ್ಲಾ ಯಾಕ್ ನೋಡಬೇಕು? ಇದೇ ಇಂಗ್ಲೀಸೋರು ತಾನೆ ನಮ್ಮುನ್ ಆಳಿದ್ದು? ನಾವು ಮಾಬಾರತ ಸೀರಿಲ್ಲು ತೆಗ್ಯಕ್ ಆಗಲ್ಲಾ ಅಂದ್ರೆ ಅದು ಇಡೀ ಕನ್ನಡಿಗರ ಕರ್ಮ, ನಮ್ಮೋರೆ ಸೀತೆ ಅಂತಾ ತೆಗೀತಿಲ್ವಾ? ಅದುನ್ನೇ ನೋಡಲಿ... ನಮ್ ಅಳ್ಳಿ ಐಕ್ಳು ಇಂಗ್ಲೀಸ್ ಪಿಚ್ಚರ್ ನೋಡಿ ಕಲ್ಯದಾರೂ ಏನೈತೆ? ಇನ್ನು ಆ ಅಮೀರ್ ಕಾನ್ ತೆಗ್ದಿರೋ ತಾರೆ ಜಮೀನ್ ಪರ್, ಅಮಿತಾಬನ ಪಾ ಎಲ್ಲಾ ನೋಡಿ ನಮ್ಮವು ಏನು ಸಾದುಸ್ತಾರೆ? ಸಿನಿಮಾ ಮನರಂಜನೆಗೆ ಮಾತ್ರಾ ಇರೋದು. ಅಂತಾ ಸಿನ್ಮಾದಿಂದೇನು ಸಮಾಜ ಉದ್ದಾರ ಆಗಕ್ಕಿಲ್ಲ. ಅಷ್ಟಕ್ಕೂ ಸಿನ್ಮಾ ಅನ್ನೋದು ಸಮಾಜಾನ ಬದಲಾಯಿಸೋಕಿಲ್ಲ. ಯಾವನೋ ಕೊಲೆ ಮಾಡ್ದಾ ಅಂತಾ ಸಿನಿಮಾದಲ್ಲಿ ತೋರ್ಸಿದ್ಕೆ ಅವ್ನು ಅಂಗ್ ಮಾಡ್ದಾ ಅನ್ನಕ್ ಆಯ್ತುದಾ? ಒಟ್ನಾಗೆ ಕನ್ನಡಕ್ಕೆ ಡಬ್ಬಿಂಗ್ ಪಿಚ್ಚರ್ ಬರಬಾರದು.
ಇನ್ನು ತುಳುನೋರು, ಕೊಡಗಿನೋರು ಅವರವರ ಬಾಸೇಲೇ ಪಿಚ್ಚರ್ ತೆಗೀಬೇಕು, ಅವನ್ನೂ ಡಬ್ ಮಾಡಬಾರ್ದು. ಯಾಕಂದ್ರೆ ಕನ್ನಡ್ದೋರು ತುಳು, ಕೊಡವ ಬಾಸೇ ಎಲ್ಲಾ ಕಲ್ಯದ್ ಬ್ಯಾಡ್ವಾ? ಒಸಿ ಯೋಚ್ಸಿ. ಕನ್ನಡದೋರು ಬೇರೆ ಬೇರೆ ಬಾಸೆ ಪಿಚ್ಚರ್ರುಗಳ್ನ ಅವವೇ ಬಾಸೇಲಿ ನೋಡುದ್ರೆ ಯಾಪಾಟಿ ಬಾಸೆ ಕಲೀಬೌದು ಅಂತಾ. ಆಗ ಕೆಲ್ಸ ಉಡಿಕ್ಕೊಂಡು ತಮಿಳ್ನಾಡು, ಆಂದ್ರ, ಕೇರಳ, ಬಾಂಬೆ,ಉತ್ತರ ಬಾರತ ಅಂತಾ ಯಾಕಡೆ ಓದ್ರು ಬದಿಕ್ಕೋಬೋದು. ಅಂಗಾಗಿ ಡಬ್ಬಿಂಗು ಬರಬಾರ್ದು.
ಅಂಗೂ ಬೇಕಾರೆ ಜಾಕಿನಾ, ಸೂಪರ್ರುನ್ನಾ ತೆಲ್ಗು ಬಾಸೆಗೆ ಡಬ್ ಮಾಡಾಯ್ತಲ್ವಾ? ಈಗ ಅವುನ್ನ ಬೇರೆ ಬೇರೆ ಬಾಸೆಗೂ ಡಬ್ ಮಾಡಿ ಬೆಂಗಳೂರೂ ಸೇರ್ದಂಗೆ ಇಡೀ ಕರ್ನಾಟಕದಲ್ಲಿ ರಿಲೀಜ್ ಮಾಡಮಾ. ಆಗ ನಮ್ಮಲ್ಲಿರೋ ಬೇರೆ ಬಾಸೆಯೋರೂ ’ಕನ್ನಡದಲ್ಲಿ ಪಸಂದಾಗಿ ಪಿಚ್ಚರ್ರು ತೆಗೀತಾರೆ, ನಾಳೆಯಿಂದ ನಾವು ಕನ್ನಡ ಕಲ್ತುಬುಡಮಾ’ ಅಂದ್ಕೊಂತಾರೆ.
ಇನ್ನು ಈ ನಮ್ ಹೋರಾಟದಲ್ಲಿ ಇಡೀ ಚಿತ್ರರಂಗದ ಎಲ್ಲಾರೂ ಪಾಲ್ಗೊಳ್ತೀವಿ. ಎಲ್ರೂ ತಮ್ಮ ಸ್ವಂತ ಇಷ್ಟದಿಂದ ಬತ್ತಾಔರೆ. ಅಂಗೂ ಯಾರಾನಾ ಸ್ವಂತ ಇಷ್ಟ ಪಟ್ಟು ಬರಲಿಲ್ಲಾ ಅಂದ್ರೆ ಅವುರನ್ನ ಚಿತ್ರರಂಗದಿಂದ ಬಹಿಸ್ಕಾರ ಹಾಕ್ತೀವಿ. ಯಾವನಾರಾ ಟಾಕೀಸೋನು ಡಬ್ಬಿಂಗ್ ಪಿಚ್ಚರ್ ಹಾಕುದ್ರೆ ಆ ಟಾಕೀಸೋರುನ್ನ ಬಹಿಸ್ಕಾರ ಮಾಡ್ತೀವಿ. ಅಂಥಾ ಟಾಕೀಸಾಗೆ ಕಾನೂನು ಮೀರಿ ಏನಾರಾ ದೊಂಬಿ ಗಿಂಬಿ ಆದ್ರೆ ಮಾತ್ರಾ ನಾವು ಅದುಕ್ ಜವಾಬ್ದಾರ್ರಲ್ಲಾ... ಕರ್ನಾಟಕದಲ್ಲಿ ಚಿತ್ರರಂಗ ನಂಬ್ಕೊಂಡು ಸಾವಿರಾರು ಕುಟುಂಬಗಳು ಬದುಕ್ತಾ ಇವೆ. ಇವರೆಲ್ಲಾ ಬದುಕೋದ್ ಬ್ಯಾಡ್ವಾ? ಅದುಕ್ಕೇ ಕನ್ನಡ ಸಿನಿಮಾ ಎಂಗೇ ಇದ್ರೂ ಕನ್ನಡದೋರು ಬಂದು ನೋಡಲೇಬೇಕು. ನಿಮಗೇನಾರಾ ಬೇರೆ ಬಾಸೆ ಪಿಚ್ಚರ್ ಮೆಚ್ಚುಗೆ ಆಯ್ತಾ? ನಮಗೆ ಯೋಳಿ. ನಾಕೇ ವಾರದಲ್ಲಿ ರಿಮೇಕು ಮಾಡಿ ನಿಮ್ಮುಂದೆ ತಂದು ಮಡುಗ್ತೀವಿ. ನಮ್ ಕಯ್ಯಾಗ್ ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳ ಬಗ್ಗೆ ಮಾತಾಡ್ ಬ್ಯಾಡ್ರಿ. ನಾವು ತೆಗ್ಯಕ್ ಆಗದೆ ಇರೋ ಪಿಚ್ಚರ್ರುಗಳನ್ನು ನೋಡಲೇ ಬ್ಯಾಡ್ರೀ.. ಅದು ಕನ್ನಡ ದ್ರೋಹ... ಆಮೇಲೆ ನೀವೇನಾರ ನಾಳೆ ಆ ಡಬ್ಬಿಂಗ್ ಪಿಚ್ಚರ್ ನೋಡಕ್ಕೆ ಟಾಕೀಸ್ ಕಡೆ ಬಂದ್ರೋ ಬುಲ್ಡೆಗೆ ಬಿಸ್ನೀರ್ ಕಾಸಿಬುಡ್ತೀವಿ. ನಮ್ ಕನ್ನಡ ನಾಡಿನ ಸಂಸ್ಕೃತಿ, ಬಾಸೆ ಉಳ್ಸಕ್ಕೆ ನಾವು ಪ್ರಾಣಾ ಕೊಡಕ್ಕೂ ರೆಡಿ..

ಆ ವಯ್ಯನ ಮಾತು ಕೇಳಿದ್ದೆ ಎಂಕಾ ಎದ್ನೋ ಬಿದ್ನೋ ಅಂತಾ ಪೇರಿ ಕಿತ್ನಂತೆ ಗುರೂ!

5 ಅನಿಸಿಕೆಗಳು:

Anonymous ಅಂತಾರೆ...

ಇದನ್ ಓದಿದ್ ಮೇಲೆ,,, ನನ್ನ ಹಳೆ ಕಿತ್ತೋಗಿರೊ ಕೆರಗಳು ಆ ವಯ್ಯನ್ನ ಹುಡುಕ್ತಿವೆ..!!!

ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ ಅಂತಾರೆ...

ಆ ಆಸಾಮಿ ಚಿತ್ರರಂಗದವ್ನೇ? ಸಾತ್ವಾಲೂ? ನಾನ್ ಕಂಡಿರೋ ಮಟ್ಟಿಗೆ ಸಂದೇಷ್ ನಾಗ್ರಾಜ್ ತರುದವ್ರ್ ಕಲವರ್ ಬುಟ್ರೇ ಚಿತ್ರರಂಗದಲ್ಲಿ ಯಾರ್‍ಗೂ ಕನ್ನಡ ಪದಗಳ್ ಜೊಡ್ಸಿ ಒಂದ್ ವಾಕ್ಯ ಆಡೋಕ್ ಬರುದಿಲ್ಲ. ಈ ಬೊಡ್ಡೆತವ್ ಆಡೋ ಮಾತೆಲ್ಲ ಕಂಗ್ಲೀಷ್. ಕನ್ನಡ ಸಂಸ್ಕೃತಿ ಬಗ್ಗೆ ಮಾತಾಡೋ ಯೋಗ್ಯತೆ ಇದ್ದುದೇ ಇವ್ಕೆ. ಇವ್ರ್ ಪಿಕ್ಟೆರ್ ಆಡ್ಗಳಲ್ಲಿ ಆರ್ದ ಪ್ಯೂರ್ ಇಂಗ್ಲೀಶ್ ಇನ್ನರ್ದ ಕಂಗ್ಲೀಷ್. ಉಪೇಂದ್ರುನಂತವ್ರು ಡಿಫ್ಫೆರೆಂಟು. ಆರ್ದ ಪ್ಯೂರ್ ಇಂಗ್ಲೀಶ್, ಕಾಲ್ ಬಾಗ ಸ್ಪ್ಯಾನಿಶ್, ಕಾಲ್ ಬಾಗ ಕಂಗ್ಲೀಷ್. ಡಬ್ಬಿಂಗ್ ಬಂದ್ರೆ ತಾನೇ ಒಳ್ಳೇ ಚಿತ್ರನ ಸಾಮಾನ್ಯ ಕನ್ನಡಿಗ ನೋಡೋದು? ಅವನ ನಿರೀಕ್ಷೆ ಬೆಳೆಯೊದು? ಆಗಾದಾಗ ಕನ್ನಡದಲ್ಲಿ ಬರೋ ಒಳ್ಳೇ ಚಿತ್ರಗಳಿಗೂ ಕನ್ನಡಿಗ ಹೆಚ್ಚು ಬೆಲೆ ಕೊಡ್ತಾನೆ. ಇವ್ರು ವಿರೊದ ಇರೂದು ತಮಿಳ್, ತೆಲಗು ಮಾತ್ರ ಇದ್ರೂ ಎಲ್ಲಾ ಬಾಷೆ ಡಬ್ಬಿಂಗ್ ನೂ ವಿರೋದಿಸ್ತಾರೆ. ಅದೂ ನಷ್ಟ ಆಗೋದು ಸ್ವಲ್ಪಾನೂ ಬುದ್ದಿ ಇಲ್ದ, ಸೋಂಬೇರಿ ನಿರ್ಧೇಷಕರಿಗೆ ಮಾತ್ರ. ನೀವೆಳುವಂಗೆ 'ಇವತ್ ಬಂದಿರೋ ಜರುಕ್ಕೆ ನಾಳೆ ಬೀಸೊ ಚಳಿಗಾಳಿ ಕಾರ್ಣ ಅಂತಾವ್ರೆ ಇವ್ರು'. ಕನ್ನಡ ನಡೆ-ನುಡಿಗೆ ನಷ್ಟ ಆಗಿರೋದು ರೀಮೆಕ್ ಇಂದ್ಲೇ ವರ್ತು ಮುಂದೆ ಬರ್ಬೇಕಿರೋ ಡಬ್ಬಿಂಗ್ ಇಂದ ಅಲ್ಲ. ಡಬ್ಬಿಂಗ್ ಬಂದ್ರೆ ಕನ್ನಡಿಗ ಕನ್ನಡದಲ್ಲಿ 'ಅವ್ತಾರ್' ನೋಡ್ಬೋದು. ರೀಮೇಕ್ ನಿಂತು ಅದು ತರೋ ನಷ್ಟನೂ ನಿಲ್ತುದೆ. ಕನ್ನಡ ಚಿತ್ರರಂಗದವರು ಕನ್ನಡದ ಕಥೆ ಹುಡುಕ್ತಾರೆ (ಕನ್ನಡದಲ್ಲಿ ಸಾಕಷ್ಟು ಕಥೆಗಳಿವೆ, ಪುಟ್ಟಣ್ಣ ಕಣಗಾಲ್ ಅವುರ್ನ ಕೇಳ್ ನೋಡಿ). ಅನ್ಗಾದಾಗ ಕನ್ನಡ ಚಿತ್ರಗಳಲ್ಲಿ ಕನ್ನಡ ಮಣ್ಣಿನ ಗಮ್ಲ ಇರ್ತುದೆ.

Unknown ಅಂತಾರೆ...

ಸಕ್ಕತ್ತಾಗಿ ಬಂದಿದೆ ಗುರು ಈ ಬರಹ...ಮೊಕಕ್ಕೆ ವೊಡದಂಗೆ ಅಯ್ತೆ.

ಬರತ್

raj ಅಂತಾರೆ...

cci thirpu prakatisi

ಬನವಾಸಿ ಬಳಗ ಅಂತಾರೆ...

ಸಿಸಿಐ ತೀರ್ಪಿನ್ನೂ ಪ್ರಕಟವಾಗಿಲ್ಲ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails